ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲಾಕ್ ಕಾಫಿ ಕುಡಿದು..

ದಾದಾಪೀರ್ ಜೈಮನ್ 

ಪೇಟೆಯ ಚಾಯಿ ಪಾಯಿಂಟುಗಳಲ್ಲಿ
ಬ್ಲಾಕ್ ಟೀ ಎಂದು  ಜನರು ಗತ್ತಿನಲ್ಲಿ
ಕುಡಿಯುವ
ಈ ಹೊತ್ತಿನಲ್ಲಿ ಅಜ್ಜನಿದ್ದಿದ್ದರೆ..
ಹಾಲಿಲ್ಲದ ಡಿಕಾಕ್ಷನ್ ಕುಡಿಯುತ್ತಿದ್ದ
ಅವನು ತನ್ನ ಬಡತನಕ್ಕೆ ಬಾಗುತ್ತಿರಲಿಲ್ಲ…

ದುಡ್ಡಿದ್ದವರು ದುಬಾರಿ ಬೆಲೆ ತೆತ್ತು
ಅಲ್ಲಲ್ಲಿ ಹರಿದ ರಿಪ್ಪ್ಡ್  ಜೀನ್ಸ್ ತೊಟ್ಟು
ತಿರುಗುವ ಈ ಕಾಲದಲ್ಲಿ ನಾನು ಹುಟ್ಟಿದ್ದರೆ..
ಪ್ರಮಾಣ ಮಾಡಿ ಹೇಳುತ್ತೇನೆ
ನನಗವರ ಮೇಲೆ ಅಸೂಯೆ ಹುಟ್ಟುತ್ತಿರಲಿಲ್ಲ
ಬಡತನದ ಮೇಲೆ ಸಿಟ್ಟಾಗುತ್ತಿರಲಿಲ್ಲ

ಬಡತನ ಭಸ್ಮವಾಗಬೇಕಾದರೆ ಓದು
ಕೈ ಹಿಡಿಯಬೇಕು
ಬೆವರಂಟಿದ ನೋಟು ಜೇಬು ಸೇರಬೇಕು
ಹುರಿದುಂಬಿಸುತ್ತಿದ್ದ ಅಮ್ಮನಿಗೆ
ಪಟ್ಟಣದ ಕಡ್ಡಿ ಪೊಟ್ಟಣದೊಳಗೆ
ಬಡತನ ಹಿಂಬಾಗಿಲಿನಿಂದ ಬೆನ್ನಪ್ಪಿದೆಯೆಂದು
ಹೇಳಿದರೆ ಅವಳು ನಂಬಲಿಕ್ಕಿಲ್ಲ
ಬಹುಷಃ ಅವುಗಳನ್ನು ಹೇಳಲಾಗಲಿಕ್ಕಿಲ್ಲ

ಹವಾನಿಯಂತ್ರಿತ ಕಾಫಿ ಶಾಪುಗಳಲ್ಲಿ
ಬ್ಲಾಕ್ ಕಾಫಿ ಕುಡಿದು
ಶಾಪಿಂಗ್ ಸಂಕೀರ್ಣದಲ್ಲಿ ರಿಪ್ಪ್ಡ್ ಜೀನ್ಸ್ ಕೊಂಡು
ರೊಕ್ಕವಾಡುವ ಹೊತ್ತಿನಲ್ಲೂ
ಡಿಜಿಟಲ್ ಪೇ ಮಾಡಿ ಅವರೊಳಗೊಂದಾದೆನೆಂದು
ಬೀಗುವ ಹೊತ್ತಿಗೆ
ಈಗ ಅದಾವುದು ಬದಲಾಗಿದೆ ತಿಳಿಯುವುದಿಲ್ಲ

ಅನಾಮಿಕತೆ ಮತ್ತು ಅನಾಥಭಾವಗಳ ಪುಕ್ಕಟೆಯಾಗಿ ಕೊಡುವ ಈ ಪಟ್ಟಣಗಳು
ಗಾಯದ ಗುರುತುಗಳಾಗಿ ಅಂಟಿರುವ
ಬಡತನವನ್ನುಮತ್ತೆ ಮತ್ತೆ ತೋರಿಸಿ
ಅಣಕಿಸುತ್ತಿರುತ್ತವೆ..
ನಾವು ಬದಲಾದಷ್ಟು ಅದೂ ಬದಲಾಗಿ
ಶುರು ಮಾಡಿದಲ್ಲೆ ತಂದಿಳಿಸುತ್ತಿರುತ್ತವೆ..
ಹಣ ಸುರಿದು ಭೂತದ ಬಡತನವ
ಸಂಭ್ರಮಿಸುವಂತೆ ಮಾಡುತ್ತಿರುತ್ತದೆ.
ಪೇಟೆಯ ಬೇಟೆಯ ಆಟದಲ್ಲಿ
ಬಡತನ ಸದಾ ಬದುಕುಳಿಯುತ್ತದೆ…

‍ಲೇಖಕರು avadhi

18 September, 2019

2 Comments

  1. premalatha B

    Very meaningful. Life is a big circle !

  2. T S SHRAVANA KUMARI

    ಒಳ್ಳೆಯ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading