ಎಂ.ಜಿ.ಕೃಷ್ಣಮೂರ್ತಿ ಹೇಳ್ತಾರೆ: ದೀವಟಿಗೆಯಲ್ಲಿ ನಮ್ಮಿಂದಲೇ ಬದಲಾವಣೆ ಅನ್ನೋ ಹುಚ್ಚು ನಿರೀಕ್ಷೆಯಿಲ್ಲ

-ಎಂ.ಜಿ.ಕೃಷ್ಣಮೂರ್ತಿ

 

ಯುವಜನರೆಂದರೆ ತಟ್ಟನೆ ಕಣ್ಣ ಮುಂದೆ ಬರುವುದು ಮೊಬೈಲ್, ಸಿನಿಮಾ, ಪಾರ್ಕ್, ಕಾಲೇಜು, ಕ್ಯಾಂಟೀನ್, ಸಿಲಬಸ್, ದೊಡ್ಡ-ದೊಡ್ಡ ಪುಸ್ತಕ ಇತ್ಯಾದಿ. ಇವುಗಳ ಮಧ್ಯೆ ಓದು ಮುಗಿಸಿ ತಮ್ಮ ನವ ಬದುಕನ್ನು ಭದ್ರಗೊಳಿಸಿಕೊಳ್ಳುವ ಬಯಕೆ. ವೃತ್ತಿಗೆ ಬೇಕಾದ ಓದಿನ ಜಾಡು ಹಿಡಿದು ಪ್ರವೃತ್ತಿಗಳನ್ನು ಮರೆತವರೇ ಹೆಚ್ಚು. ಇದರೊಂದಿಗೆ ವೈಯಕ್ತಿಕ ಕನಸುಗಳನ್ನು ಸಮಾಜದೊಟ್ಟಿಗೆ ಸಮ್ಮಿಲನಗೊಳಿಸಿ, ಅದರೆಡೆಗೆ ತುಡಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಅಂಥವರ ಗುಂಪುಗಳಲ್ಲಿ ದೀವಟಿಗೆಯೂ ಒಂದು.

ದೀವಟಿಗೆ ಒಂದು ಚಿಕ್ಕ ಯುವಜನರ ಗುಂಪು. ನಮ್ಮ ಕಾಲದ ಸಾಮಾಜಿಕ ಚಳುವಳಿಗಳಲ್ಲಿ ನಮ್ಮ ಇರುವಿಕೆಯ ಅಗತ್ಯವೇನು ಎಂದು ಮನಗಂಡಿರುವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಳೆದ ಎರಡು ವರ್ಷಗಳಿಂದ ತಾವೇ ರಚಿಸಿಕೊಂಡ ಚಿಕ್ಕ ತಂಡ, ತಮ್ಮ ವಿಭಿನ್ನ ಪ್ರಯತ್ನಗಳಿಂದ ಇಂದು ಸಮಾಜದ ಅನೇಕ ಗಣ್ಯರಲ್ಲಿ ಮಂದಹಾಸ ಮೂಡಿಸಿದೆ. ಅವನತಿಯ ಹಾದಿಯಲ್ಲಿರುವ ಸಾಮಾಜಿಕ ವ್ಯವಸ್ಥೆ, ಚೇತರಿಕೆ ಕಂಡು ಪ್ರಗತಿಯ ದಿಕ್ಕಿನಲ್ಲಿ ಸಾಗಬೇಕು ಎಂಬ ಕನಸಿನ ದಾರಿದಲ್ಲಿ ಸಾಗುತ್ತಿರುವ ಈ ಗುಂಪಿಗೆ ನಮ್ಮಿಂದಲೇ ಸಮಾಜ ಬದಲಾವಣೆಯಾಗುತ್ತದೆ ಎಂಬ ಹುಚ್ಚು ನಿರೀಕ್ಷೆಯಿಲ್ಲ.

 

 

ಭರಪೂರ ಭರವಸೆಯೊಟ್ಟಿಗೆ ದೀವಟಿಗೆಯನ್ನು ಮುನ್ನಡೆಸುವ ಜೊತೆಗೆ ತಮ್ಮ ಬದುಕಿನ ಭದ್ರತೆಯತ್ತಲೂ ದೃಷ್ಟಿ ಬೀರಿರುವ ಈ ಯುವಜನರಲ್ಲಿ ಕೆಲವರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಜನ ಸಮಾಜ ಸೇವಾ ಸಂಸ್ಥೆಗಳು, ಇನ್ನಿತರೆ ಸಮಾಜಮುಖಿ ವಲಯಗಳಲ್ಲಿ ದುಡಿಯುತ್ತಿದ್ದಾರೆ.

ಸುಮಾರು ಮೂವತ್ತು ಜನ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ರಾತ್ರಿಯಿಡೀ ಕೂತು ಚರ್ಚೆ ನಡೆಸಿ, ಕಣ್ಣೊಳಗಿರುವ ಕನಸುಗಳನ್ನು ನನಸಾಗಿಸುವ ಹಾದಿಯಲ್ಲಿ ಹುಟ್ಟಿಹಾಕೊಂಡ ತಂಡವಿದು. ಈ ತಂಡಕ್ಕೆ ‘ದೀವಟಿಗೆ’ ಎಂಬ ಹೆಸರನ್ನು ಸೂಚಿಸಿದ್ದು ತಮ್ಮ ವಿಭಿನ್ನ ನೆಲೆಗಟ್ಟಿಗೆ ಹಾಡುಗಳಿಂದ ರಾಜ್ಯದೆಲ್ಲೆಡೆ ಪ್ರಚುರತೆ ಪಡೆದಿರುವ ಜನಾರ್ಧನ ಕೆಸರುಗದ್ದೆ. ಈ ಹೆಸರಿನ ಹುಡಕಾಟಕ್ಕಾಗಿಯೇ ತಂಡ ಸುಮಾರು ಮೂರು ತಿಂಗಳ ಅವಧಿಯನ್ನು ಸವೆಸಿತ್ತು.

 

 

“ನಮ್ಮ ಸಮಾಜ ಹಲವಾರು ಓರೆಕೋರೆಗಳಿಂದ ತುಂಬಿದೆ. ಹಲವಾರು ಸಿದ್ಧಾಂತಗಳು ಯುವಜನರೊಳಗೆ ಗೊಂದಲವನ್ನು ಹುಟ್ಟಿಹಾಕಿವೆ. ಯಾವುದು ಸರಿ ಎನ್ನುವ ನಿರ್ಧಾರಕ್ಕೆ ಬರುವುದರೊಳಗೆಯೇ ಯುವಜನರು ವಿದ್ಯಾಭ್ಯಾಸವನ್ನು ಮುಗಿಸಿ, ಬದುಕಿನಲ್ಲಿ ಬ್ಯುಸಿ ಆಗಿಬಿಡುತ್ತಾರೆ. ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿಯೆ ಅವರೊಳಗೆ ಸಾಕಷ್ಟು ಯೋಚನೆಗಳು ಉದಯಿಸಿರುತ್ತವೆ. ಹಲವಾರು ಚಿಂತನೆಗಳು ಕಾಡತೊಡಗುತ್ತವೆ.

ಆದರೆ ಯೋಚನೆಗಳನ್ನು ಅಭಿವ್ಯಕ್ತಿಸಲು ದಾರಿ ಸಿಗದೇ ಅವನ್ನು ತಮ್ಮೊಳಗೆ ಕೊಂದು ಕೊಳ್ಳುವ ಅದೆಷ್ಟೋ ಯುವಜನರು ನಮ್ಮ ಮಧ್ಯೆ ಇದ್ದಾರೆ. ಅಂತಹವರಿಗೆ ವೇದಿಕೆಯಾಗೋ ಕನಸನ್ನು ಪೂರ್ತಿಯಾಗಿ ದೀವಟಿಗೆ ಒದಗಿಸುತ್ತದೆ ಎನ್ನಲಾಗದು. ಆದರೆ, ಅವರಲ್ಲಿ ಕೆಲವರಾದರೂ ಅಭಿವ್ಯಕ್ತಿಸಲು ದಾರಿಯಾದೀತು ಎಂಬುದು ನಮ್ಮ ಸದ್ಯದ ಸಮಾಧಾನ,” ಎನ್ನುತ್ತಾರೆ ದೀವಟಿಗೆ ಸಂಗಾತಿಗಳು.

ಬೆಂಗಳೂರು ನಗರದ ಕಾಲೇಜು ಯುವಜನರ ಅಭಿವ್ಯಕ್ತಿಗೆ ಮಾಧ್ಯಮವಾಗಿ, ಕಾಲೇಜು ಸಮಸ್ಯೆಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹುಟ್ಟು ಪಡೆದ ದೀವಟಿಗೆ ಹಲವಾರು ಕಾಲೇಜುಗಳಲ್ಲಿ ಕಾರ್ಯಕ್ರಮಕ್ಕೆಂದು ಅಲೆದಾಡಿ, ಅವಕಾಶ ಸಿಗದೆ ಬೇಸತ್ತು, ಕೆಲಕಾಲ ಸುಮ್ಮನಾಗಿದ್ದೂ ಇದೆ. ತಾವು ಹೊತ್ತ ಕನಸು ತಮ್ಮ ಬೆನ್ನಿಗೇ ಭಾರವೆನಿಸಿ, ಕೆಲವು ಕಾರ್ಯಕ್ರಮಗಳನ್ನಷ್ಟೇ ಮಾಡುವತ್ತ ದೀವಟಿಗೆ ನಡೆದಿತ್ತು. ಸಂಘಟನೆಯ ಹೆಸರಿನಲ್ಲಿ ರೂಪು ತಳೆದಿತ್ತಾದರೂ, ಮುಂಬರುತ್ತಾ ಕಲಾ ವೇದಿಕೆಯಾಗಿ ಬದಲಾಯಿತು. ಸಮಕಾಲೀನ ಹೋರಾಟಗಳಲ್ಲೂ ದೀವಟಿಗೆ ತಮ್ಮ ಅಸ್ಮಿತೆಯನ್ನು ಬೆಳೆಸಿಕೊಂಡಿದೆ.

 

 

ತಮ್ಮೊಳಗಿನ ವಿಚಾರಧಾರೆಗಳನ್ನು ಸಮಾಜದ ಮುಂದಿಡಲು ದೀವಟಿಗೆ ಯುವಜನರು ತಮ್ಮದೇ ಆದ ದಾರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವುಗಳಲ್ಲಿ ಮೊದಲನೆಯದು ಕಲಾಯಾನ ಎಂಬ ಚಿತ್ರ ಪ್ರದರ್ಶನ. ‘ಚೌಕಟ್ಟಿಲ್ಲದ ಚಿತ್ರಗಳು’ ಎಂಬ ಉಪ ಶೀರ್ಷಿಕೆ ಅಡಿಯಲ್ಲಿ ಯುವಜನರೇ ಬರೆದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಗೆರೆಗಳ ಮುಖಾಂತರವೇ ಸಮಾಜದೊಳಗಿನ ಸಮಸ್ಯೆಗಳನ್ನು ತೋರಿಸಬಲ್ಲ ಮತ್ತು ಅದಕ್ಕೆ ಪರಿಹಾರವನ್ನೂ ಸೂಚಿಸಬಲ್ಲ ತಾಕತ್ತುಳ್ಳ ಚಿತ್ರಗಳನ್ನು ಕಲಾಯಾನದ ಮೂಲಕ ಜನರ ಮುಂದಿಡುತ್ತಿರುವ ದೀವಟಿಗೆ ಇದುವರೆಗೂ ನಾಲ್ಕು ಪ್ರದರ್ಶನಗಳನ್ನು ನಡೆಸಿದೆ. ಇಂದಿಗೂ ಸಹ ಆ ಚಿತ್ರಗಳು ದೀವಟಿಗೆ ಹೆಸರನ್ನು ಬೆಳಸುತ್ತಲೇ ಇವೆ.

ಉದಯೋನ್ಮುಖ ಬರಹಗಾರರಿಗೆ ಸಮಾಜದ ಮೈನ್ ಸ್ಟ್ರೀಮ್ ನ ಪತ್ರಿಕೆಗಳಲ್ಲೋ, ಇನ್ನಿತರ ಪ್ರಚಾರ ಮಾಧ್ಯಮಗಳಲ್ಲೋ ಅವಕಾಶ ಸಿಗುವುದು ವಿರಳ. ಅದಕ್ಕಾಗಿ ದೀವಟಿಗೆ ಹುಡುಕಿಕೊಂಡ ಮತ್ತೊಂದು ಮಾಧ್ಯಮ ಕೈಬರಹ ಪತ್ರಿಕೆ. ಎಲ್ಲವೂ ಯಾಂತ್ರೀಕರಣಗಳ್ಳೊತ್ತಿರುವ ದಿನಗಳಲ್ಲಿ ಸ್ವಂತ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಪ್ರಯತ್ನವಿದು. ಮುದ್ರಾ ರಾಕ್ಷಸನು ಅಚ್ಚೊತ್ತಿದ ಪತ್ರಿಕೆಗಳನ್ನೇ ಓದುವವರು ಇಲ್ಲದಿರುವಾಗ ಇನ್ನು ನಿಮ್ಮ ಈ ಕೈಬರಹದ ಪತ್ರಿಕೆಗೆ ಯಾರು ಮನ್ನಣೆ ಕೊಟ್ಟಾರು ಎಂಬ ನಿರಾಶಾದಾಯಕ ಪ್ರತಿಕ್ರಿಯೆಗಳು ಅದೆಷ್ಟೋ ಬಂದರೂ, ಅವುಗಳೆಡೆಗೆ ಗಮನ ಹರಿಸದೆ, ಬದಲಾವಣೆಗಾಗಿ ಬರವಣಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಮುಂದುವರಿದು ಒಟ್ಟು 11 ಸಂಚಿಕೆಗಳನ್ನು ದೀವಟಿಗೆ ತಂದಿದೆ.

 

 

ವಿದ್ಯಾಭ್ಯಾಸದ ಜೊತೆಗೆ 20-30 ಪುಟದ ಪತ್ರಿಕೆಯನ್ನು ಕೈಯಲ್ಲೇ ಬರೆದು ಜೆರಾಕ್ಸ್ ಮಾಡಿ, ಹೋದಡೆಯೆಲ್ಲಾ ಮಾರಿ, ಒಂದಷ್ಟನ್ನು ಉಚಿತವಾಗಿ ಕೊಟ್ಟು, ಬಂದ ಹಣವನ್ನೇ ಮುಂದಿನ ಸಂಚಿಕೆಯ ಬಂಡವಾಳವನ್ನಾಗಿಸಿಕೊಂಡು ಬರುತ್ತಿರುವ ಈ ಪತ್ರಿಕೆ ಇಂದು ಹಲವಾರು ಜನ ಸಾಹಿತಿಗಳು, ಬರಹಗಾರರು ಚಿಂತಕರು, ಉಪನ್ಯಾಸಕರು, ಯುವಜನರ ಕಣ್ಣುಗಳಲ್ಲಿ ಹೊಸದೊಂದು ಆಶಾಭಾವನೆಯನ್ನ ಹುಟ್ಟುಹಾಕಿವೆ. ಇವರಿಂದಲೂ ಏನೋ ಸಾಧ್ಯ ಎಂಬುದನ್ನು ತಿಳಿಸುತ್ತಿವೆ. ಸಾಹಿತ್ಯವನ್ನು ಬದಲಾವಣೆಯ ಅಸ್ತ್ರವನ್ನಾಗಿಸಿಕೊಂಡಿರುವ ಅನೇಕರಿಗೆ ದೀವಟಿಗೆ ಪ್ಲಾಟ್‌ಫಾರ್ಮ್. ರಾಜ್ಯದ ನಾನಾ ಭಾಗಗಳಲ್ಲಿರುವ ಯುವ ಬರಹಗಾರರು, ಕವಿಗಳು ಇಂದು ದೀವಟಿಗೆಯೊಂದಿಗೆ ಜೊತೆಯಾಗಿದ್ದಾರೆ.

“ಈ ಪತ್ರಿಕೆ ನಾಡಿನುದ್ದಗಲಕ್ಕೆ ಎಲ್ಲರನ್ನೂ ತಲುಪಿ, ಮುಖ್ಯವಾಹಿನಿಯ ಪತ್ರಿಕೆಗಳ ಸಾಲಿನಲ್ಲಿ ನಿಂತು ದೊಡ್ಡ ಹೆಸರನ್ನು ಮಾಡಬೇಕು ಎಂಬ ಕನಸಿನಿಂದೇನೂ ಆರಂಭವಾದದ್ದಲ್ಲ. ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂಬುದೂ ಗೊತ್ತಿಲ್ಲ. ಆದರೆ ಒಂದಷ್ಟು ಜನರಿಗೆ ದಾರಿಯಾಗಬಲ್ಲದು, ಬರವಣಿಗೆಯೆಡೆಗೆ ಪ್ರೇರೇಪಿಸಬಲ್ಲದು, ವಿಚಾರಗಳನ್ನು ಬದಲಿಸಬಲ್ಲದು ಎಂಬುದಷ್ಟೇ ನಮ್ಮ ನಂಬಿಕೆ” ಎನ್ನುತ್ತಾರೆ ಪತ್ರಿಕೆಯ ಸಂಪಾದಕ ಚಾಂದ್ ಪಾಷಾ.

ಕರ್ನಾಟಕದ ಖ್ಯಾತ ವಿಮರ್ಶಕರಾದ ಕೆ.ವೈ.ನಾರಾಯಣಸ್ವಾಮಿ ದೀವಟಿಗೆ ಕುರಿತಾಗಿ ಅಭಿಪ್ರಾಯವನ್ನು ತಿಳಿಸಿ, ”ಹೊಸ ತಲೆಮಾರಿನ ಸಂವೇದನಾಶೀಲ ಯುವಜನರ ನವಪ್ರಯತ್ನ. ಸಂಬಂಧ ವಿಘಟನೆಯ ಈ ಸಂದರ್ಭದಲ್ಲಿ ದೀವಟಿಗೆ ಸಂಬಂಧವನ್ನು ಬೆಸೆಯುವ ಕೆಲಸ ಮಾಡಲಿ,” ಎಂದು ಆಶಿಸಿದ್ದಾರೆ.

 

 

ಈ ತಲೆಮಾರಿನ ನಾಟಕಕಾರರಾದ ಬೇಲೂರು ರಘುನಂದನ್, ”ಸಾಹಿತ್ಯ ಲೋಕಕ್ಕೆ ಭರವಸೆಯ ದೊಂದಿ ಹಿಡಿದು ಸಾಗುತ್ತಿರುವ ಮಿಂಚುಹುಳು ‘ದೀವಟಿಗೆ’. ಹೊಸಾ ಹೆಜ್ಜೆಗಳಿಗೆ ನಂಬುಗೆಯನ್ನು, ವಿಶ್ವಾಸವನ್ನು ಮೂಡಿಸುವ ಜೀವಪರತೆಯಂತೆ ದೀವಟಿಗೆ ಮಿಡಿಯುತ್ತಿದೆ,” ಎಂದು ತಂಡದ ಕುರಿತಾದ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ದೀವಟಿಗೆ ಕನಸಿಗೆ ಮೊದಲು ಜೊತೆಯಾಗಿ ನಿಂತದ್ದು ಸಂವಾದ ಎಂಬ ಸರ್ಕಾರೇತರ ಸಂಸ್ಥೆ. ನಂತರದ ದಿನಗಳಲ್ಲಿ ದೀವಟಿಗೆಗೆ ಹಲವಾರು ಸಂಘಟನೆಗಳು, ಸಾಹಿತ್ಯಿಕ ಸಂಸ್ಥೆಗಳು ಶಕ್ತಿ ತುಂಬಿವೆ.

ಇದೆಲ್ಲಾ ಭರವಸೆಯೊಂದಿಗೆ ದೀವಟಿಗೆ ಈಗ ‘ವೀಕೆಂಡ್ ಟಾಕ್’ ಹೆಸರಿನ ಕಾರ್ಯಕ್ರಮವೊಂದನ್ನು ನಡೆಸಲು ಮುಂದಾಗಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಯಾವುದಾದರೂ ಸ್ಥಳದಲ್ಲಿ ಸೇರಿ ಯಾವುದಾದರೂ ವಿಚಾರದ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ. ವರ್ತಮಾನದ ವಿಷಯಗಳ ಜೊತೆಗೆ ಹಳೆ ತಲೆಮಾರಿನ ಅದ್ಭುತ ಬರಹಗಳನ್ನು ಕೂಡ ಚರ್ಚಿಸಿ, ಅದರೊಳಗಿನ ಇಂಗಿತವನ್ನು ಅರ್ಥೈಸುವುದಕ್ಕಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆಸಕ್ತರೆಲ್ಲರೂ ಈ ಕಾರ್ಯಕ್ರಮದ ಭಾಗವಾಗಬಹುದು.

ಸದ್ಯ ತನ್ನದೇ ನೆಲೆ ಇಲ್ಲದ ದೀವಟಿಗೆಗೆ ನಿಂತ ಜಾಗವೆಲ್ಲವೂ ಮೀಟಿಂಗ್‌ ಹಾಲ್‍ಗಳೇ. ಆಡುವ ಮಾತುಗಳೆಲ್ಲಾ ಗುಂಪಿನ ಕುರಿತಾದದ್ದೇ. ಅವಕಾಶಗಳೇ ಇಲ್ಲ ಎಂದು ಕೊರಗುತ್ತಿರುವ ಜನರ ಮಧ್ಯೆ ಅತೀ ಕಡಿಮೆ ಬಂಡವಾಳ ಬಳಸಿ, ತಮ್ಮದೇ ದಾರಿಗಳಲ್ಲಿ ಸಮುದಾಯವನ್ನು ತಲುಪುತ್ತಿರುವ ದೀವಟಿಗೆ ಇದೇ ಕನಸಿನ ಇತರರಿಗೆ ಪ್ರೇರಣೆಯಾಗಿದೆ.

‍ಲೇಖಕರು avadhi

September 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Sarayu

    ಸಾಹಿತ್ಯ ಹಾಗೂ ಸಾಮಾಜಿಕ ಕಳಕಳಿಯ ಉದ್ದೇಶ ಹೊಂದಿರುವ ಮತ್ತು ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ದೀವಟಿಗೆಯ ಎಲ್ಲ ಯುವ ಚೇತನಗಳಿಗೂ ನನ್ನ ಹಾರ್ದಿಕ ಅಭಿನಂದನೆಗಳು.ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ..

    ಪ್ರತಿಕ್ರಿಯೆ
  2. ಹನುಮಂತ ಹಾಲಿಗೇರಿ

    ಗುಡ್… ಸ್ಮಾಲ್ ಇಸ್ ಬ್ಯೂಟಿಫುಲ್ ಎನ್ನುವಂತೆ ಇಂಥ ಸಣ್ಣ ಸಣ್ಣ ಗುಂಪುಗಳೆ ಪ್ರಜಾಪ್ರಭುತ್ವವನ್ನು ಚಂದಗೊಳಿಸ್ತಿವೆ.

    ಪ್ರತಿಕ್ರಿಯೆ
  3. Venkatesh Murthy

    Good to see the initiative for the development of youth in the right direction. Need of the hour Move. Wish all the best.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: