ರಂಗಾಯಣದಲ್ಲಿ ರಾಜಕೀಯವೇ?

ವಸಂತ ಬನ್ನಾಡಿ

ಕರ್ನಾಟಕ ಸರಕಾರ ಪ್ರಾಧಿಕಾರ, ಅಕಾಡೆಮಿ ಹಾಗೂ ರಂಗಾಯಣದ ನಿರ್ದೇಶಕರನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರ ಹಿಡಿಯುತ್ತಲೇ ಬಿಜೆಪಿ ಸರಕಾರ ಎಲ್ಲ ಪ್ರಾಧಿಕಾರ, ಅಕಾಡೆಮಿಯ ನಿರ್ದೇಶಕರನ್ನು ವಜಾ ಮಾಡಿದೆ. ಜೊತೆಗೆ ರಂಗಾಯಣದ ನಿರ್ದೇಶಕರನ್ನೂ ಎಲ್ಲ ಬರಹಗಾರರು ಹಾಗೂ ರಂಗಕಲಾವಿದರು ತೀವ್ರವಾಗಿ ಪ್ರತಿಭಟಿಸಬೇಕಾದ ವಿಚಾರ ಇದು.

ಈ ಬೆಳವಣಿಗೆ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಕಾಂಗ್ರೆಸ್ ಸರಕಾರ ಬಂದಾಗ ಹಿಂದಿನ ಪ್ರಾಧಿಕಾರ ಮತ್ತು ಅಕಾಡೆಮಿಗಳ ನಿರ್ದೇಶಕರನ್ನು ಬದಲಾಯಿಸಿದ ಕ್ರಮಕ್ಕೆ ಇದನ್ನು ಹೋಲಿಸುವಂತಿಲ್ಲ. ಒಂದು ಉದಾಹರಣೆ ಮೂಲಕ ಇದನ್ನು ಸ್ಪಷ್ಟಪಡಿಸಬಹುದು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಗೋಪಾಲ ವಾಜಪೇಯಿ ನೇತೃತ್ವದಲ್ಲಿ ಭಾರತ್ ಭವನ್ ಕಲಾಸಮುಚ್ಚಯ ನಿರ್ಮಾಣಗೊಂಡದ್ದು ನಮಗೆಲ್ಲ ಗೊತ್ತಿರುವಂತದ್ದೇ. ಚಾರ್ಲ್ಸ್ ಕೊರಿಯಾ ಅಂತಹ ವಾಸ್ತುತಜ್ಞ ಈ ಸಮುಚ್ಛಯದ ಕಲಾ ವಿಭಾಗಗಳನ್ನು ಅತ್ಯಂತ ಮುತುವರ್ಜಿಯಿಂದ ರೂಪಿಸಿಕೊಟ್ಟಿದ್ದರು. ನಾಟಕ ವಿಭಾಗವಾದ ರಂಗಮಂಡಲಕ್ಕೆ ಬಿ.ವಿ.ಕಾರಂತರು ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಮುಂದೇನಾಯಿತು?

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಇಡೀ ಸಮುಚ್ಛಯವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಎಲ್ಲರನ್ನೂ ವಜಾಗೊಳಿಸಿ ತಮಗೆ ಬೇಕಾದವರನ್ನು ನೇಮಿಸಿತು. ಉಡುಪಿಯ ಯಾರೋ ಹೆಸರಿಲ್ಲದ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಯೊಬ್ಬರನ್ನು ಭಾರತ್ ಭವನದ ಮುಖ್ಯಸ್ಥರನ್ನಾಗಿ ನೇಮಿಸಿದ ಸುದ್ದಿ ತೇಲಿಬಂತು. ಈಗ ಅಲ್ಲಿ ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಯಾರಿಗೂ ಗೊತ್ತಿರುವಂತಿಲ್ಲ. ಸ್ವಾಭಿಮಾನಿ ಕಲಾವಿದರು ಕರೆದರೂ ಇಂದು ಅಲ್ಲಿಗೆ ಹೋಗಲಿಕ್ಕಿಲ್ಲ. ಕಲಾವಿದ ತೋರಬಹುದಾದ ಕನಿಷ್ಠ ಪ್ರತಿರೋಧ ಅದು.

ಮಧ್ಯಪ್ರದೇಶದಿಂದ ಬಂದ ಬಿ.ವಿ.ಕಾರಂತರು ಕರ್ನಾಟಕ ಸರಕಾರದ ನೆರವಿನೊಂದಿಗೆ ರಂಗಾಯಣವನ್ನು ಆರಂಭಿಸುವ ಮೂಲಕ ಅದೇ ಅಚಾತುರ್ಯವನ್ನು ಮತ್ತೊಮ್ಮೆ ಎಸಗಿದರು ಎಂದು ನನಗನಿಸುತ್ತಿದೆ. ರಂಗಾಯಣ ಇತರ ಅಕಾಡೆಮಿಗಳಂತಲ್ಲ; ಯಾವುದೇ ಸರಕಾರ ಬಂದರೂ ಇಲ್ಲಿನ ರಂಗಚಟುವಟಿಕೆಗಳು ಅಭಾದಿತವಾಗಿ ನಡೆದುಕೊಂಡು ಹೋಗಲಿವೆ ಎಂಬುದು ಕಾರಂತರ ಯೋಚನೆಯಾಗಿತ್ತು. ನಿನ್ನೆಯವರೆಗೂ ಹಾಗೆಯೇ ನಡೆದುಕೊಂಡು ಹೋಗಿದೆ ಕೂಡ. ಕಾರಂತರ ಕಲ್ಪನೆಗೆ ಸರಿಯಾಗಿ ರಂಗಾಯಣವು ಒಳ್ಳೆಯ ಕೆಲಸವನ್ನು ಮಾಡಿಕೊಂಡೂ ಬಂದಿದೆ.

ಆದರೆ, ನಾವು ಹಿಂದೆಂದೂ ಊಹಿಸದ ಹೊಸ ಬೆಳವಣಿಗೆಗಳು ಇಂದು ದೇಶದಲ್ಲಿ ಘಟಿಸುತ್ತಿವೆ. ಪ್ರಚ್ಛನ್ನ ಸರ್ವಾಧಿಕಾರಿ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಮೊತ್ತ ಮೊದಲ ಬಾರಿಗೆ ರಂಗಾಯಣದ ಮೇಲೆ ಸರಕಾರದ ಕಣ್ಣು ಬಿದ್ದಿದೆ. ರಂಗಭೂಮಿಯ ವೈಶಿಷ್ಟ್ಯವೆಂದರೆ ಅದು ತನ್ನ ಚಟುವಟಿಕೆಯ ಮೂಲಕವೇ ಪ್ರಭುತ್ವದ ವಿರುದ್ದ ಗಟ್ಟಿದನಿಯ ಪ್ರತಿರೋಧ ತೋರುತ್ತದೆ. ಆದುದರಿಂದ ಮುಖ್ಯವಾಗಿ ರಂಗಕರ್ಮಿಗಳನ್ನು ಮೂಲೆಗುಂಪು ಮಾಡುವುದೇ ಇಂದಿನ ಈ ಎಲ್ಲ ಬೆಳವಣಿಗೆಗಳ ಹಿಂದಿನ ಉದ್ದೇಶವಾಗಿದೆ. ಇದು ರಂಗಕರ್ಮಿಗಳು ದನಿ ಎತ್ತಬೇಕಾದ ಸಂದರ್ಭ. ಮಾತ್ರವಲ್ಲ, ಭವಿಷ್ಯತ್ತಿನಲ್ಲಿ ಒದಗಬಹುದಾದ ಅಪಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಪಷ್ಟ ವಿಚಾರ ಪ್ರಣಾಲಿಕೆಯನ್ನು ರೂಪಿಸಿ ಅದು ಕಾರ್ಯಗತವಾಗುವಂತೆ ನೋಡಿಕೊಳ್ಳಬೇಕಾದ ಸಂದರ್ಭ ಕೂಡ ಹೌದು.

ಇಲ್ಲಿ ಇನ್ನೂ ಒಂದು ವಿಚಾರವನ್ನು ನಾನು ಹೇಳಬೇಕು. ಕರ್ನಾಟಕದಲ್ಲಿ ಸರ್ಕಾರದಿಂದ ಒಂದು ಚಿಕ್ಕಾಸನ್ನೂ ತೆಗೆದುಕೊಳ್ಳದೆ ನಿರಂತರವಾಗಿ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಅನೇಕ ರಂಗಕರ್ಮಿಗಳಿದ್ದಾರೆ. ಅವರಲ್ಲಿ ಕೆಲವರು ತಮ್ಮದೇ ರಂಗಸಂಸ್ಥೆಗಳನ್ನು ಕೂಡ ಕಟ್ಟಿಕೊಂಡಿದ್ದಾರೆ. ಇವರು ಮಾಡುತ್ತಿರುವ ಕೆಲಸ ವರ್ಷಕ್ಕೆ ಒಂದು ಕೋಟಿ ರೂಪಾಯಿ ತೆಗೆದುಕೊಳ್ಳುವ ರಂಗಾಯಣಗಳಿಗಿಂತ ಹೆಚ್ಚು ಮಹತ್ವದ್ದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ನಾಳೆ ಅಕಾಡೆಮಿ ಮತ್ತು ರಂಗಾಯಣಗಳಿಗೆ ಯೋಗ್ಯ ವ್ಯಕ್ತಿಗಳೇ ನಿರ್ದೇಶಕರಾಗಿ ನೇಮಕಗೊಂಡರೂ ಅವರು ಸರಕಾರದ ಇದಿರು ತಗ್ಗಿ ಬಗ್ಗಿ ನಡೆಯಬೇಕಾದ ಬಿಗಿ ಸನ್ನಿವೇಶ ಎದುರಾಗುವ ಸಂದರ್ಭವೇ ಹೆಚ್ಚು. ಈ ಎಲ್ಲ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಪ್ರವೃತ್ತಿಗೆ ಪರೋಕ್ಷವಾಗಿಯಾದರೂ ನಿಜವಾದ ಪ್ರತಿರೋಧ ಒಡ್ಡುವ ಶಕ್ತಿ ಇರುವುದು ಸ್ವತಂತ್ರವಾಗಿ ಕೆಲಸಮಾಡುತ್ತಿರುವ ರಂಗ ಸಂಘಟಕರು ಮತ್ತು ರಂಗ ಕಲಾವಿದರಿಗೆ ಮಾತ್ರ ಎಂದು ನನ್ನ ಅನಿಸಿಕೆ.

ಒಂದು ವೇಳೆ ಭಾರತ್ ಭವನ್‍ಗೆ ಒದಗಿದ ದುಸ್ಥಿತಿ ರಂಗಾಯಣಕ್ಕೆ ಬಂದರೂ ರಂಗಭೂಮಿಯನ್ನು ಉಳಿಸುವ, ಬೆಳೆಸುವ ಸಾಮರ್ಥ್ಯ ಕನ್ನಡದ ರಂಗಕರ್ಮಿಗಳಿಗೆ ಇದೆ. ಈ ಹಿಂದೆಯೂ ಅವರು ಆ ಕೆಲಸವನ್ನು ಮಾಡಿದ್ದರು; ಭವಿಷ್ಯದಲ್ಲೂ ಮಾಡಬಲ್ಲರು. ಅಂತಹ ಅಂತಃಸತ್ವ ಮತ್ತು ಧೃಢತೆ ಕನ್ನಡ ರಂಗಭೂಮಿಗೆ ಇದೆ. ಇದೊಂದೇ ಸದ್ಯದ ಆಶಾಕಿರಣ.

‍ಲೇಖಕರು avadhi

September 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: