ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಗಸೆಯಲ್ಲಿ ಕಾಪಿಟ್ಟು ಸೋರಿ ಹೋಗದಂತೆ..

ಸರೋಜಿನಿ ಪಡಸಲಗಿ

ಈ ಅಂಚಿನಿಂದ  ಆ ಅಂಚಿನವರೆಗೂ
ನೋಟ ಹರಿದು ಹಾರಾಡಿದರೂ
ಉದ್ದಕೂ ಬಟಾ ಬಯಲು ಖಾಲೀ
ಹಾಳೆಯಂತೆ  ಅಲ್ಲಲ್ಲಿ ಹರಿದು ಹೋಗಿ
ವಿಕಾರ ಮೊಗದ  ಅಷ್ಟಾವಕ್ರನಂತೆ
ಉಂಡು ಬಿಟ್ಟೆದ್ದ ಎಲೆಯ ಸುತ್ತ
ಹಾರುವ ನೊಣ ರಸ ಹೀರ ಬರುವ
ಹಿಂಡು ಹಿಂಡು ಕೀಟಗಳನೋಡಿಸಲು
ಎತ್ತಲಾಗದ ಕೈ ಮೊಗದಿರುವಲಾಗದ
ಜಡತೆ ನಿಸ್ಸತ್ವ ನಿಸ್ಸಾರ ಬಟಾ ಬಯಲು
ಹರಿದು ಹೋದ ಖಾಲಿ ಹಾಳೆಯ ಮೇಲೂ
ಅಲ್ಲಲ್ಲಿ  ಕಾಣುವ ದಿಕ್ಕು ಗಾಣದ  ಬೆದರಿ
ಮುದುರಿ ಹೋದ ಚಿತ್ತಾರ ಚಿತ್ರಗಳ ಗುಂಪು

ಅರಿಯದ  ಅಸಹಾಯಕ  ಕಳವಳದ ಕಣ್ಣೀರು
ಜೀವವೇ ಬೆಂದು ಹೋಗುವಂಥ ಬಿಸಿಯುಸಿರು
ಅಟ್ಟಿಸಿಕೊಂಡು ಬರುತಿಹ  ಅಂತಕನದೂತ
ವಿಕೃತ ದೈತ್ಯ ಹೆಮ್ಮಾರಿಯ ಅಟ್ಟಹಾಸದ
ಕೂಗೂ ಕೇಳದ ಕಿವುಡು ಕ್ರೌರ್ಯ ಕಾಣದ
ಕುರುಡು
ದಿಗಿಲು ತಲ್ಲಣ ಹರಡಿ ಹಾಸಿದ ಆ ಹರಿದು ಹೋದ  ಖಾಲಿ ಹಾಳೆಯ ಬಟಾಬಯಲು
ಅದರೊಡಲಲಿ  ಮುದುರಿ ಹುದುಗಿರುವ
ಆ ಚಿತ್ತಾರ ಚಿತ್ರಗಳ ಗುಂಪು ಕಂಡು


ಯಾಕೋ ಏನೋ ಎದೆ ಝಲ್ಲೆನ್ನುತಿದೆ
ಆ ಖಾಲಿ ಹರಿದು ಹೋದ ಹಾಳೆಯ
ಆ ಮುದುರಿದ ಚಿತ್ರಗಳ ಹೂ ಗುಂಪು
ಹೊಸಕಿ ಹೋಗಿಯಾವೇ ದೈತ್ಯ ಕುರುಡು
ಕಿವುಡು  ಹೆಮ್ಮಾರಿಯ ಕಾಲಡಿ ಸಿಕ್ಕಿ
ನುಜ್ಜುಗುಜ್ಜಾಗಿ ನೂರು ಚಿಂದಿಯಾಗಿ
ಅವುಗಳ ನರುಗಂಪಿನ ರಂಗಿನ ಸುಳಿವೇ
ಸಿಗದಂತೆ ಗುರುತೇ ಮರೆಯುವಂತೆ

ಶಬರಿ  ಅಟ್ಟಡವಿಯಲಿ ರಾಮನಿಗೆ ಕಾದಂತೆ
ದೇವಕಿ ಸರಳುಗಳ ಹಿಂದೆ ಕೃಷ್ಣ ಜನನಕೆ ಕಾದಂತೆ
ಕಾಯಬೇಕಿದೆ ಈ ತಾಂಡವ ನೃತ್ಯ ನಿಲ್ಲೋತನಕ
ಈ ಮಹಾ ಪ್ರಳಯದಲೆ ಹಿಮ್ಮೆಟ್ಟೋತನಕ
ಉಳಿದ  ಜೀವ ಜಲವ ಬೊಗಸೆಯಲ್ಲಿ
ಜತನವಾಗಿ ಕಾಪಿಟ್ಟು ಸೋರಿ

‍ಲೇಖಕರು avadhi

1 April, 2020

2 Comments

  1. Shrivatsa Desai

    ಝಲ್ಲೆನಿಸುವ ಎದೆಯಿಂದ ಬಂದ ಮನದಾಳದ ಭಾವನೆಗಳು! ಉತ್ಕೃಷ್ಟ ಬರವಣಿಗೆ.

  2. Sarojini Padasalgi

    ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.
    ಧನ್ಯವಾದಗಳು ಅವಧಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading