ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಹಿರಿಯರನ್ನು ಕಂಡರೆ ಮಮ್ಮಲ ಮರುಗುವ ಸಾಕವ್ವ

ವಯಸ್ಸಾದ ಹಿರೀ ಜೀವಗಳನ್ನು ಗೌರವಿಸುವುದೆಂದರೆ ನಾವು ನಾವು ನಂಬಿರುವ ದೇವರುಗಳನ್ನು ಗೌರವಿಸಿದಂತೆ. ಇನ್ನು ಅವರ ಕೆಲಸಗಳನ್ನು ಮಾಡುವುದು ಮತ್ತು ಅವರನ್ನು ಕಾಳಜಿ ಮಾಡಿ ನಿಗಾವಹಿಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವೇ ಸರಿ. ಅನುಭವಗಳು ಮುಪ್ಪುರಿಗೊಂದು ಇಡೀ ಬದುಕನ್ನು ಸವೆಸಿ ಹಿಡಿಯಾಗಿರುವ ಜೀವಗಳ ನಿರೀಕ್ಷೆಗಳು ತುಂಬಾ ಚಿಕ್ಕವಿರುತ್ತವೆ. ಅವರುಗಳು ಬಯಸುವುದು ಹಿಡಿ ಪ್ರೀತಿಯನ್ನು ಮತ್ತು ಕಾಳಜಿಯನ್ನು ಅಷ್ಟೇ. ತನ್ನ ಸುತ್ತಮುತ್ತಲಿನ ಜೀವಗಳಿಗೆ ಉಪಯೋಗವಾಗುವ ಏನಾದ್ರೂ ಮಾಡಬೇಕು ಅನ್ನುವುದು ಹಿರಿಯರ ಬಯಕೆ ಆಗಿರುತ್ತದೆ. ಅದನ್ನೂ ತನ್ನ ಕಡೇ ಉಸಿರು ಇರುವ ತನಕ ಕಾಯ್ದುಕೊಳ್ಳುತ್ತಾರೆ ಕೂಡ.
ಪ್ರತಿಯೊಬ್ಬರ ಮನೆಗಳಲ್ಲೂ ವಯಸ್ಸಾದ ತಂದೆ ತಾಯಂದಿರು, ಅಜ್ಜ ಅಜ್ಜಿಯಂದಿರು ಇದ್ದೇ ಇರುತ್ತಾರೆ. ವಿಪರ್ಯಾಸ ಅಂದ್ರೆ ಅನೇಕರು ಅವರನೆಲ್ಲಾ ಅನಾಥಾಲಯಗಳಿಗೆ ದೂಡುತ್ತಿರುವ ಉದಾಹರಣೆಗಳಿಗೇನು ನಮ್ಮಲ್ಲಿ ಕಡಿಮೆ ಇಲ್ಲ. ತನ್ನನ್ನು ಪೊರೆದ ಸಾಕಿ ಸಲಹಿದ ಹಿರಿಜೀವಗಳನ್ನ ವಯಸ್ಸಾದ ಮೇಲೆ ತನ್ನ ಮಕ್ಕಳು ಎಂಬಂತೆ ನೋಡಿಕೊಂಡುಬಿಟ್ಟರೆ ಅದೆಷ್ಟೋ ಹಿರೀ ಜೀವಗಳು ನೆಮ್ಮದಿಯಾಗಿ ತನ್ನ ಕೊನೇ ದಿನಗಳನ್ನು ಕಾಣುತ್ತವೆ.

****

ಬಾಗಲ ಕೋಟೆಯ ಜಿಲ್ಲೆಯ ನಂದಗಾವ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ನೂರಾ ಐದು ವಯಸ್ಸಿನ ಆಶಮ್ಮ ಚಾಂದ್ ಸಾಬ್ ಮುಲ್ಲಾ ಎನ್ನುವ ವಯೋವೃದ್ಧೆ ವಯಸ್ಸಿನ ಕಾರಣದ ಆರೋಗ್ಯದ ಸಮಸ್ಯೆಗಳಲ್ಲಿ ಬಳಲುತ್ತಾ ಹಾಸಿಗೆ ಹಿಡಿದಿದ್ದರಂತೆ. ಆ ಅಜ್ಜಿಯು ಉಮಾಶ್ರೀ ಅವರನ್ನು ಕರೆಸಿ ನಾನು ನೋಡಬೇಕು ಅಂತ ಒಂದೇ ಸಮನೇ ಹಠ ಹಿಡಿದಿತ್ತಂತೆ. ಅಮ್ಮ ಅನೇಕ ಕೆಲಸದ ಒತ್ತಡದಿಂದ ತಕ್ಷಣಕ್ಕೆ ಆ ಅಜ್ಜಿಯನ್ನು ನೋಡಲು ಹೋಗಲಾಗಲಿಲ್ಲವಂತೆ. ಹೀಗೆ ಅಜ್ಜಿ ನನ್ನನ್ನು ನೋಡಬೇಕು ಅನ್ನುತ್ತಿರುವುದನ್ನು ತಿಳಿದು ಅಮ್ಮ ಕ್ಷೇತ್ರಕ್ಕೆ ಹೋದ ತಕ್ಷಣ ಮೊದಲು ಸೀದಾ ನಂದಗಾವಕ್ಕೆ ಹೋದರಂತೆ. ಅಮ್ಮ ಹೇಳುವ ಪ್ರಕಾರ ಆ ಅಜ್ಜಿ ನಿತ್ರಾಣವಾಗಿ ಮಲಗಿತ್ತಂತೆ. ಅಮ್ಮ ಹೋದ ಮೇಲೆ ಅಜ್ಜಿಗೆ ಎಲ್ಲರೂ ಉಮಾಶ್ರೀ ಬಂದಿದ್ದಾರೆ ಅಂತ ಜೋರಾಗಿ ಗೊತ್ತಾಗುವ ಹಾಗೆ ಹೇಳಿದರಂತೆ. ಆದರೂ ಅಜ್ಜಿ ಮಲಗಿಯೇ ಇತ್ತಂತೆ. ಆ ಮನೆಯವರು ಕಿವಿಯ ಹತ್ತಿರ ಹೋಗಿ ಉಮಾಶ್ರೀ ಬಂದಿದ್ದಾರೆ ಅಂತ ಹೇಳಿದ ಮೇಲೆ ನಿಧಾನಕ್ಕೆ ಎದ್ದು ಕೂರಿಸಿ ಅಂತಂತೆ. ಎಬ್ಬಿಸಿದ ಮೇಲೆ ಆ ಅಜ್ಜಿ ಅಮ್ಮನನ್ನೇ ದಿಟ್ಟಿಸಿ ನೋಡಿ ಕೈ ಹಿಡಿದುಕೊಂಡಿತಂತೆ. ಮುಖ ಸವರಿ ಸಣ್ಣ ನಗೆಯನ್ನು ಬೀರಿತಂತೆ. ಅಮ್ಮ ಬಿಸಿನೀರು ಮತ್ತು ಹಾಲನ್ನು ಗುಟುಕು ಗುಟುಕು ಕುಡಿಸಿದರಂತೆ. ’ಹಾಲು, ಗಂಜಿ ಮತ್ತು ಊಟ ತಗೋಬೇಕು. ತೆಲೀಗೆ ಏನು ಹಚ್ಕೊಬ್ಯಾಡ. ಆರಾಮ್ ಇರು. ಮೈಯಾಗ ಏನ್ ಆಗತೇತ್ತಿ ಅದನ್ನ ಮನೆಯಾಗ ಹೇಳು’ ಅಂತೇಳಿ ಹೊರಟರಂತೆ. ಅಜ್ಜಿಯ ಮುಖದಲ್ಲಿ ಆದ ಸಂತೋಷವನ್ನು ಕಂಡು ಅಮ್ಮ ಪ್ರೀತಿಗೆ ವಿಶ್ವಾಸಕ್ಕೆ ಎಲ್ಲೆಗಳಿಲ್ಲ ಅಂದುಕೊಂಡರಂತೆ.
ಗ್ರಾಮಸ್ಥರು ಹೇಳಿದ ಘಟನೆಯನ್ನು ಕೇಳಿ ಆ ನೂರಾ ಐದರ ಅಜ್ಜಿಯ ಪ್ರಸ್ತಾಪ ಮಾಡಿದ್ದಕ್ಕೆ ಅಮ್ಮ “ಅಜ್ಜಿಯನ್ನು ಪ್ರೀತಿಯಿಂದ ಮಾತಾಡಿಸಿ ಬಂದೆ. ಪ್ರೀತಿಗೆ ಎಷ್ಟು ದೊಡ್ಡ ಸೆಳೆತ ಇದೆ ನೋಡು. ಕೊಡಬೇಕಷ್ಟೇ ನಾವು. ಇದೆಲ್ಲಾ ಆಗಿ ಈಗಾಗಲೇ ಸುಮಾರು ಎರಡು ತಿಂಗಳುಗಳು ಕಳೆದಿವೆ. ಈಗಲೂ ಆಗಾಗ್ಗ ಆ ಅಜ್ಜಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುತ್ತೇನೆ. ಅಜ್ಜಿ ಒಂಚೂರು ಸುಧಾರಿಸಿದೆಯಂತೆ. ‘ತೆಳ್ಳನೆಯ ಆಹಾರ ಕೊಡ್ರಿ ಉಮಾಶ್ರೀ ಹೇಳ್ಯಾಳ’ ಅಂತ ಸಣ್ಣ ದನಿಯಲ್ಲಿ ಕೇಳುತ್ತಂತೆ. ಈ ವಿಚಾರ ಹಂಚಿಕೊಳ್ಳುವಾಗ ಅಮ್ಮನ ಕಣ್ಣಲ್ಲಿ ತೇವವಿತ್ತು. ನಮಗೂ ವಯಸ್ಸಾದ ಮೇಲೆ ಏನೇನು ಅನ್ನಿಸುತ್ತೋ ಗೊತ್ತಿಲ್ಲ. ಅನ್ನಿಸಿದ್ದನ್ನೆಲ್ಲಾ ಹೇಳೋಕೆ ಆಗುತ್ತೋ ಇಲ್ವೋ ಅದೂ ಗೊತ್ತಿಲ್ಲ. ಒಟ್ಟಾರೆ ಹಿರೀ ಜೀವಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಭಾವುಕರಾದರು. ತನ್ನ ಸಾಕು ತಂದೆಗೆ ಮಾಡಿದ ಸೇವೆಯನ್ನು ನೆನಪಿಸಿಕೊಂಡು ನಾನೇ ಭಾಗ್ಯಶಾಲಿ ಅವರ ಸೇವೆ ಮಾಡುವ ಮತ್ತು ಯೋಗಕ್ಷೇಮ ವಿಚಾರಿಸುವ ಅವಕಾಶ ಸಿಕ್ಕಿತು” ಎಂದು ಹೇಳಿ ಭಾವನೆ ತೀವ್ರ ಆಗುವುದಕ್ಕಿಂತ ಮೊದಲೇ ಪಟ್ಟನೆ ಮಾತು ಮುಗಿಸಿ ರಘು ಹೊಸದೇನು ಬರೆದೆ ಎಂದು ಮಾತು ಹೊರಳಿಸಿದರು. ನಾನೂ ಸುಮ್ಮನಾದೆ…

****

ಬಾಗಲಕೋಟೆಯ ಬನಹಟ್ಟಿ ಮತ್ತು ರಬಕವಿ ನಗರಸಭೆ 1995 – 1996 ರಲ್ಲಿ ನಗರ ಸಭಾ ಪ್ರಾಧಿಕಾರ ಆದಾಗಿನಿಂದಲೂ ಆಸಂಗಿ ಗ್ರಾಮವು ನಗರ ಸಭೆಯ ಹಿಡಿತದಲ್ಲೇ ಇತ್ತು. ನಗರ ಸಭೆ ಆಗುವ ಸಲುವಾಗಿ ಪ್ರದೇಶ ಇಂತಿಷ್ಟೇ ಇರಬೇಕು ಅನ್ನುವ ಸಲುವಾಗಿ ರಬಕವಿ ಮತ್ತು ಬನಹಟ್ಟಿ ನಗರಸಭಾ ವ್ಯಾಪ್ತಿಗೆ ಆಸಂಗಿ ಗ್ರಾಮವನ್ನು ಸೇರಿಸಿಕೊಂಡು ಬಿಟ್ಟರು. ಗೆಜೆಟ್ ನಲ್ಲೂ ಆಸಂಗಿ ಗ್ರಾಮ ನಗರ ಸಭೆಯ ವ್ಯಾಪ್ತಿಗೆ ಸೇರಿದ್ದು ದಾಖಲಾಯಿತು. ಆದರೆ ಇದು ಗ್ರಾಮಸ್ಥರಿಗೆ ಸುತಾರಾಂ ಇಷ್ಟವಿರಲಿಲ್ಲ. ನಮಗೆ ಮೊದಲಿದ್ದ ಗ್ರಾಮ ಪಂಚಾಯಿತಿಯನ್ನೇ ವಾಪಸ್ ತಂದುಕೊಡಿ ಅನ್ನುವುದು ಈ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ನಗರ ಸಭೆಯ ಯಾವುದೇ ಚುನಾವಣೆಗಳಿಗೆ ಈ ಗ್ರಾಮದ ಗ್ರಾಮಸ್ಥರು ಮತ ಚಲಾಯಿಸುತ್ತಲೇ ಇರಲಿಲ್ಲವಂತೆ. ನಗರ ಸಭೆಯ ಯಾವ ಸೌಕರ್ಯಗಳನ್ನು ಅವರು ಬಳಸಿಕೊಳ್ಳುತ್ತಿರಲಿಲ್ಲವಂತೆ. ನಮ್ಮ ಹಳ್ಳಿ ನಗರ ಆಗೋದುಬೇಡ ಅದು ಗ್ರಾಮವೇ ಆಗಿರಲಿ ಅನ್ನುವುದು ಇಡೀ ಗ್ರಾಮಸ್ಥರ ಒಕ್ಕೊರಲಿನ ಅಭಿಪ್ರಾಯ ಆಗಿತ್ತು.
ಒಂದು ಸಲ ಬಿದ್ದು ಮತ್ತೆ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಆಸಂಗಿ ಗ್ರಾಮಕ್ಕೆ ಹೋದಾಗ ಆ ಗ್ರಾಮದ ಹಿರಿಯ ನಾಗರೀಕರಾದ ಎಂಭತ್ತು ವರ್ಷದ ಬಂಗಾರವ್ವ ಸಣ್ಣತಮ್ಮಪ್ಪ ತೇಲಿ ಎಂಬ ಅಜ್ಜಿಯು “ನೋಡವ್ವ ನಮಗೆ ನಮ್ಮ ಗ್ರಾಮವನ್ನು ಗ್ರಾಮ ಪಂಚಾಯಿತಿ ಒಳ್ಳಿ ತಂದುಕೊಟ್ರೆ ಓಟು ಹಾಕ್ತೀವಿ. ನೀನು ಆಸಂಗಿ ಗ್ರಾಮವನ್ನು ಗ್ರಾಮಪಂಚಾಯಿತಿ ಮಾಡಿಕೊಡಲೇ ಬೇಕು. ನಮ್ಮ ಕೆಲಸ ಮಾಡುತ್ತೇನೆ ಅಂತ ಮಾತು ಕೊಡವ್ವ” ಎಂದು ತಾಕೀತು ಮಾಡಿತ್ತಂತೆ ಆ ಅಜ್ಜಿ. ಅಮ್ಮ ಪ್ರಯತ್ನಿಸುತ್ತೇನೆ ಅಂತ ಹೇಳಿ ಅಜ್ಜಿಯ ಒತ್ತಾಯಕ್ಕೆ ಮಣಿದು ಪ್ರಮಾಣ ಮಾಡಿದ್ದರಂತೆ.
“ಬಂಗಾರವ್ವನ ಮಾತುಗಳನ್ನು ಮನಸಿನಲ್ಲಿ ಇಟ್ಟುಕೊಂಡು ಅಮ್ಮ ಅಧಿಕಾರಕ್ಕೆ ಬಂದಮೇಲೆ ನಗರಾಡಳಿತ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳಿಗೆ ಒತ್ತಡ ಹೇರಿ ಆಸಂಗಿ ಗ್ರಾಮವನ್ನು ನಗರ ಸಭೆಯಿಂದ ಬಿಡಿಸಿ ಸ್ವತಂತ್ರ ಪಂಚಾಯಿತಿ ಮಾಡಿಯೇ ಬಿಟ್ಟರು. ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಆಸಂಗಿ ಗ್ರಾಮ ಚುನಾವಣೆಯಲ್ಲಿ ಎದುರಿಸಿತು. ಗ್ರಾಮಸ್ಥೆರಲ್ಲಾ ಬಹುದಿನದ ಅವರ ಬೇಡಿಕೆ ನೆರವೇರಿತು ಅನ್ನುವ ಭಾವದಿಂದ ಸಂತಸಪಟ್ಟಿದ್ದೇವೆ. ಇಡೀ ಆಸಂಗಿ ಗ್ರಾಮದವರ ಪರವಾಗಿ ಬಂಗಾರವ್ವ ಅಂದು ದನಿಯೆತ್ತಿ ಮಾತಾಡಿ ನಗರ ಸಭೆಗೆ ಸೇರಿದ ಹಳ್ಳಿಯನ್ನು ಗ್ರಾಮಪಂಚಾಯಿತಿಗೆ ಸೇರಿಸಿದ್ದಕ್ಕಾಗಿ ಹೆಮ್ಮೆ ಪಡುತ್ತಾ ‘ಮಾತು ಉಳಿಸಿಕೊಂಡು ಬಿಟ್ಟೆ’ ಎಂದು ಅಜ್ಜಿ ಕೂಡ ಪ್ರೀತಿಯ ಆಶೀರ್ವಾದಮಾಡಿತು. ಹಿರಿಯರ ಮಾತಿಗೆ ಬೆಲೆ ಕೊಟ್ಟು ಬೆನ್ನಿಗೆ ಬಿದ್ದು ಕೆಲಸ ಮಾಡಿಸುವ ತಮ್ಮ ಸಚಿವೆಯ ಬಗ್ಗೆ ಆಸಂಗಿ ಗ್ರಾಮಸ್ಥರು ತಮ್ಮ ಸಂತಸ ಹಂಚಿಕೊಂಡರು.

****

ಹೀಗೊಂದು ದಿನ ಕಳೆದ ಲೋಕ ಸಭಾ ಚುನಾವಣೆಯ ಬಿರುಸಿನ ಪ್ರಚಾರದ ಸಮಯ. ಅಮ್ಮ ಎಂದಿನಂತೆ ಮುಂಜಾನೆ ಬೇಗನೆ ಎದ್ದು ಚುನಾವಣಾ ಪ್ರಚಾರಕ್ಕೆ ಹೊರಡಲು ಗಡಿಬಿಡಿಯಲ್ಲಿ ತಯಾರಾಗುತ್ತಿದ್ದರು. ಆಗ ಒಬ್ಬ ವಯಸ್ಸಾದ ತಾಯೊಬ್ಬಳು ತನ್ನ ಮಗಳು ಸುರೇಖಾ ಕುಬರಟ್ಟಿ ಹೊತ್ತಿಗೆ ಮುಂಚೆ ರಬಕವಿಯ ಅಮ್ಮ ವಾಸವಿದ್ದ ಮನೆಗೆ ಬಂದಿದ್ದರು. ಸುರೇಖಾ ತುಂಬು ಗರ್ಭಿಣಿ. ದಿನಗಳು ತುಂಬಿ ಹೊಟ್ಟೆ ನೋವು ತಾಳಲಾರದೇ ಚೀರಾಡುತ್ತಿದ್ದರು. ರಬಕವಿಯ ವೈದ್ಯರುಗಳೆಲ್ಲಾ ತರಬೇತಿಗೆಂದು ಹೋಗಿದ್ದರು. ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇಲ್ಲದೆ ಗರ್ಭಿಣಿ ನೋವು ತಾಳಲಾರದೇ ಸೀದಾ ಸಚಿವರ ಮನೆಗೆ ಬಂದುಬಿಟ್ಟರು. ಮಗಳನ್ನು ಉಳಿಸಿಕೊಡವ್ವ ಎನ್ನುವ ವಯಸ್ಸಾದ ಜೀವದ ತಳಮಳ ಅರಿತ ಅಮ್ಮ ಚುನಾವಣಾ ಪ್ರಚಾರವನ್ನು ಅಲ್ಲಿಗೇ ಕೈ ಬಿಟ್ಟು ತನ್ನ ಕಾರಲ್ಲಿ ತುಂಬು ಬಸುರಿಯನ್ನು ಕೂರಿಸಿಕೊಂಡು ಮಹಾಲಿಂಗಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಅಲ್ಲಿನ ವೈದ್ಯರಾದ ಡಾ.ಶ್ರೀಶೈಲ ದಡೂತಿ ಅವರಿಗೆ ತಕ್ಷಣ ಹೆರಿಗೆ ಮಾಡಿಸುವಂತೆ ಸೂಚಿಸಿದರು. ವೈದ್ಯರ ಪರೀಕ್ಷೆಯ ನಂತರ ಮಗು ಹೊಟ್ಟೆಯಲ್ಲಿ ಅಡ್ಡ ಸಿಕ್ಕಿ ಹಾಕಿಕೊಂಡು ಮಲ ವಿಸರ್ಜನೆಯನ್ನು ಮಾಡಿಕೊಂಡಿತ್ತು. ಇದನ್ನು ತಿಳಿದ ವೈದ್ಯರು ತಕ್ಷಣ ಸಿಸೇರಿಯನ್ ಹೆರಿಗೆಯ ಮೂಲಕ ತಾಯಿ ಮಗುವಿನ ಜೀವ ಉಳಿಸಿದರು. ಸುರೇಖಾ ಅವರಿಗೆ ಗಂಡು ಮಗುವಿಗೆ ಜನ್ಮವಿತ್ತರು. ಇನ್ನು ಅರ್ಧಗಂಟೆ ಕಳೆದಿದ್ದರೂ ಮಗು ಬದುಕುತ್ತಿರಲಿಲ್ಲ ಎಂದು ಶ್ರೀ ಶೈಲ ಅವರು ತಿಳಿಸಿ ಅಮ್ಮನ ಸಮಯ ಪ್ರಜ್ಞೆಯನ್ನು ಗೌರವದಿಂದ ಸ್ಮರಿಸಿದರು.

“ನೋವು ತಾಳಲಾಗದೇ ಸೀದಾ ಉಮಾಶ್ರೀ ಅವರ ಮನೆಗೆ ಹೋದೆವು. ರಬಕವಿಯಲ್ಲಿ ಯಾವ ಡಾಕ್ಟ್ರು ಇರಲಿಲ್ಲ. ಖರ್ಚು ಮಾಡಿ ಖಾಸಗಿ ಆಸ್ಪತ್ರೆಗೆ ಹೋಗಲು ಶಕ್ತಿ ಇರಲಿಲ್ಲ. ಹೀಗಿದ್ದಾಗ ಅಮ್ಮಾವ್ರು ನನ್ನ ನೋವು ಕಂಡು ತನ್ನ ಮಗಳಂತೆ ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಅಷ್ಟೇ ಅಲ್ಲ ಕಾರು ಓಡಿಸುವಾಗ ಡ್ರೈವರ್ ಅಣ್ಣನಿಗೆ ನಿಧಾನಕ್ಕೆ ಓಡಿಸು, ಗುಂಡಿಗಳಲ್ಲಿ ನಿಧಾನಕ್ಕೆ ಇಳಿಸು ಅಂತೆಲ್ಲಾ ಹೇಳುತ್ತಿದ್ದರು. ನನ್ನ ನೋವು ಅವರದ್ದೇ ನೋವು ಅನ್ನುವ ಹಾಗೇ ಭಯ ಪಡುತ್ತಿದ್ದರು. ಹೆರಿಗೆ ಆಗುವ ತನಕ ಆಸ್ಪತ್ರೆಯಲ್ಲೇ ಇದ್ದು ನನ್ನ ಯೋಗಕ್ಷೇಮ ವಿಚಾರಿಸಿದರು. ಅವರು ಒಬ್ಬ ನಿಜವಾದ ತಾಯಿ. ಅವರ ಸಹಾಯವನ್ನು ಜೀವನ ಪೂರ್ತಿ ಮರೆಯುವುದಿಲ್ಲ. ನನಗೆ ಮಗಳು ಹುಟ್ಟಿದ್ದರೆ ಅಮ್ಮಾವ್ರ ಹೆಸರು ಉಮಾಶ್ರೀ ಅಂತಲೇ ಇಡುತ್ತಿದ್ದೆ. ಆದ್ರೆ ಮಗ ಹುಟ್ಟಿದ್ದಾನೆ ಆದರೂ ಅವರ ಹೆಸರು ಉಳ್ಳ ಉಮೇಶ್ ಎಂದು ನನ್ನ ಕೂಸಿಗೆ ಹೆಸರಿಟ್ಟಿದ್ದೇನೆ. ಅವತ್ತು ಉಮಾಶ್ರೀ ಅಮ್ಮಾವ್ರು ಇಲ್ಲ ಅಂದಿದ್ರೆ ಇಂದು ನಾನು ನಮ್ಮ ಕುಟುಂಬ ಸಂತೋಷವಾಗಿ ಇರಲು ಸಾಧ್ಯವಿರಲಿಲ್ಲ. ಉಮಾಶ್ರೀ ಅವರಂತೆ ನನ್ನ ಮಗ ಎತ್ತರಕ್ಕೆ ಬೆಳೆಯಲಿ ಎಂದು ಆಸೆಪಡುತ್ತೇನೆ” ಎಂದು ಸುರೇಖಾ ಹೇಳುತ್ತಾ ಭಾವುಕರಾದರು.
ಅಮ್ಮಾ ಕೂಡ ತಾನು ಗರ್ಭಿಣಿಯಾಗಿದ್ದಾಗ ಅನುಭವಿಸಿದ ಸಂಕಟಗಳನ್ನು ಹೇಳಿಕೊಂಡ ದಿನಗಳೂ ಉಂಟು. ಅದರ ಆ ಸಂಬಂಧ ಟಿ.ವಿ. ಸಂದರ್ಶನಗಲ್ಲಿ ಮತ್ತು ಬೆಂಕಿ ಬೆಡಗು ಪುಸ್ತಕದಲ್ಲಿಯೂ ಕಾಣಬಹದು. ಅಮ್ಮ ತನ್ನ ಮಗನ ಹೆರಿಗೆಗೆ ಮುಂಚೆ ಎರಡು ಬಕೆಟ್ ಬಟ್ಟೆ ಒಗೆದು ನೋವು ತಾಳಲಾರದೇ ತಾನೇ ಆಸ್ಪತ್ರೆಗೆ ನಡೆದು ಹೋಗುವಾಗ ಅಪರಿಚಿತರೊಬ್ಬರು ನನ್ನೊಡನೆ ಬಂದು ಹೆರಿಗೆ ಮಾಡಿಸಿದ ಘಳಿಗೆಯನ್ನು ಹೇಳಿಕೊಂಡದ್ದನ್ನು ನೆನಸಿಕೊಂಡರೆ ಕಣ್ಣು ತೇವ ಆಗದೇ ಇರದು.

****

ಅನುಭವ ಜನ್ಯ ಸಾಹಿತ್ಯ ಹೇಗೆ ಯಾವ ಕಾಲಕ್ಕೂ ಸಾರ್ವಕಾಲಿಕವಾಗಿರುತ್ತದೋ ಹಾಗೆಯೇ ಅನುಭವ ತುಂಬಿದ ಬದುಕು ಸದಾ ಸಂವೇದನಾ ಶೀಲವಾಗಿರುತ್ತದೆ. ಮಿಡಿಯುವ ಗುಣ ಅದಕ್ಕೆ ಇರುತ್ತದೆ. ದೇವನೂರರ ಸಾಕವ್ವನ್ನನ್ನು ಅಭಿನಿಯಿಸಿದ ಮತ್ತು ತನ್ನ ವಯಸ್ಸಾದ ತಂದೆಯನ್ನು ವಯಸ್ಸಾದ ಕಾಲದಲ್ಲಿ ಸಲಹಿದ್ದು ಮತ್ತು ಆ ಹಿನ್ನೆಲೆಯಲ್ಲಿ ಅನೇಕ ಹಿರೀಜೀವಗಳನ್ನು ಕಂಡದ್ದು ಅಮ್ಮನಿಗೆ ಬಹುದೊಡ್ಡ ಜೀವನಾನುಭವನ್ನು ಕಟ್ಟಿಕೊಟ್ಟಿದೆ. ಅದರ ಫಲವಾಗಿ ಈ ಹೊತ್ತು ತಾನು ಆಧಿಕಾರದಲ್ಲಿದ್ದು ತನ್ನ ಕೈಲಾದಷ್ಟು ಹಿರಿಯ ನಾಗರೀಕರ ಮತ್ತು ಹೆಣ್ಣುಮಕ್ಕಳ ಸೇವೆ ಮಾಡಲು ಅವಕಾಶ ಆಗಿದೆ. ಪ್ರಶಸ್ತಿಗಳ ಸಮಯದಲ್ಲಿ ಅಕಾಡೆಮಿಗಳ ನೇಮಿಸುವ ಸಮಯದಲ್ಲಿ ಹಾಗೂ ಸರ್ಕಾರದ ಇನ್ನಿತರ ನಾಮ ನಿರ್ದೇಶನ ಮಾಡುವಾಗ ಮೊದಲು ಹಿರಿಯರಿಗೆ ಅನುಭಿಗಳಿಗೆ ಮೊದಲ ಆಧ್ಯತೆ ಕೊಟ್ಟಿರುವುದು ಪಾರದರ್ಶಕವಾಗಿ ಕಾಣುತ್ತದೆ. ವಯಸ್ಸಾದ ಮೇಲೆ ಅವರಿಗೆ ಕೆಲಸ ಮಾಡಲುಕಷ್ಟ ಆಗುತ್ತದೆ. ಯುವಕರಿಗೆ ಹೆಚ್ಚು ಮಾನ್ಯತೆ ಕೊಡಿ ಎಂದು ಎಷ್ಟೋ ಸಲ ಹೇಳಿದ್ದೇನೆ ಕೂಡ. ಅದಕ್ಕೆ ಅವರು ಅನುಭವ ಇಲ್ಲದ ರಕ್ತ ಬಿರುಸಾಗಿ ಕೆಲಸ ಮಾಡುತ್ತದೆ. ಆದ್ರೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಭವ ಬೇಕು. ಹಿರಿಯ ಕೊಂಡಿಗಳ ಜೊತೆ ಕಿರಿಯ ಕೊಂಡಿಗಳು ಜೊತೆ ಆಗುವ ಕೆಲಸ ಆಗಬೇಕು ಎಂದು ಎಷ್ಟೋ ಸಲ ಹೇಳಿದ್ದಾರೆ. ಅವರು ಹೇಳಿದ್ದೂ ಸರಿ ಅಂತ ಕೂಡ ಕೆಲವು ಸಲ ಅನ್ನಿಸಿದೆ.
 

‍ಲೇಖಕರು G

19 July, 2015

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Harishbabu Tanegar

    ಉಮಾಶ್ರೀಯವರ ವಿಶಾಲ ಮನೊಭಾವ ಹಾಗೂ ಕಷ್ಟಗಳಿಗೆ ಸ್ಪಂದಿಸಿರುವ ರೀತಿ ನಿಜಕ್ಕೂ ಶ್ಲಾಘನೀಯ..
    ಕಷ್ಟಗಳನ್ನು ಯಾರು ಅನುಭವಿಸಿರುತ್ತಾರೊ ಅವರು ಮಾತ್ರವೇ ಪ್ರಾಮಾಣಿಕವಾಗಿ ಇನ್ನೊಬ್ಬರ ನೋವುಗಳ ಅರ್ಥ ಮಾಡಿಕೊಳ್ಳಬಲ್ಲರು. ಇಂತಹ ವಿಶೇಷ ವ್ಯಕ್ತಿತ್ವದಿಂದ ಉಮಾಶ್ರೀಯವರು ಉಳಿದೆಲ್ಲ ರಾಜಕಾರಣಿಗಳಿಗಿಂತ ಎತ್ತರದಲ್ಲಿ ನಿಲ್ಲುತ್ತಾರೆ.
    Nice article raghu sir..

  2. Tajusab H Kolur

    Sir ega tane ratri download ad what’s up video nodtaidde adaralli tayiy annu igin samajad jana ashram galige bittu baravadannu matte a tayiya priti manasannu moun vagisitu adar jote nimma ankan odi hiriyar meli gouravadind kanabeku matte nimma baravanige umashri amma ravar matugalu manasannu kalkive nimma baravanigeyu channagide
    ….

  3. Praveen Gejji

    nice sir tuba chenagide Amman Saralathe mathu manviya guna tilisutade e artical

  4. Harisha K P Belur

    All the comumns are very nice. Short and sweet too. Nothing more it less. Good to read one by one story. I understand it takes lot of effort to collect all the information like that. Thumbs up for the beautiful articles though i personally feel it’s little exaggerated in times. Otherwise nice to know about this famous artist converted politician.

  5. Shridhar Banvasi

    ಕವಿಗೆ ಕವಿ ಮಣಿವಮ್ ಅನ್ನುವಂತೆ, ಒಬ್ಬ ಬಡವನ ನೋವನ್ನು ಇನ್ನೊಬ್ಬ ಬಡವ ಮಾತ್ರ ಅರ್ಥಮಾಡಿಕೊಳ್ಳಬಲ್ಲ…ಉಮಾಶ್ರೀಯವರು ಬಡತನ ಮತ್ತು ಕಷ್ಟಗಳ ಎಲ್ಲ ಮಜಲುಗಳನ್ನು ಅನುಭವಿಸಿ ಬಂದದ್ದರಿಂದಲೇ ಅವರು ಬೇರೆಯವರ ಕಷ್ಟಗಳಿಗೆ ಸ್ಪಂದಿಸಲಿಕ್ಕೆ ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಅವರ ಸೇವೆ ಮೆಚ್ಚುವಂತಹದ್ದು.

  6. k nirmala Nadhan

    Sir enu helbeku gotthagthilla adhutha vyakthithva ammandhu she s very nice nd namage avra bagge est helidhru saalolla annisutthe really love u amma

  7. suresh rajamane, rannabelagali

    ಹೃದಯ ತಟ್ಟುವ ಎರಡು ಅದ್ಭುತ ಕ್ಷಣಗಳನ್ಬು ನಮ್ಮ ಮುಂದಿಟ್ಟಿದ್ದಿರಿ ಸರ್ ನಿಜವಾಗ್ಲೂ ಉಮಾಶ್ರಿಯವರು ನನ್ನನ್ನು ಒಳಗೊಂಡು ಹೀಗೆಲ್ಲ ಇದ್ದರಾ ಅಂತ ಅನಿಸುವಂತೆ ಮಾಡಿದೆ ನಿಮ್ನ ಲೇಖನ ಮನಸಿಗೆ ತುಂಬಾ ಹತ್ತಿರದಿಂದಮಾತನಾಡಿಸಿದಂತೆ ಭಾಸವಾಗುತ್ತಿದೆ ನಮ್ಮನ್ನು.
    ಎರಡು ಭಾವಚಿತ್ರಗಳು ಸತ್ಯವನ್ನು ಜಗದ ಮುಂದಿಡುತ್ತವೆ.
    ಒಳ್ಳೆ ಮನಸಿರೋರಿಗೆ ಎಂದಿಗೂ ಒಳ್ಳೆಯದೆಆಗುತ್ತದೆ ಎನ್ನುವದಕ್ಕೆ ಮೆಡಮ್ ಸಾಕ್ಷಿಯಾಗಿ ನಿಲ್ಲುತ್ತಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading