‘ಶರ್ಮಿಷ್ಠೆ ನನ್ನ ಬಹು ದಿನದ ಇಷ್ಟದ ಪಾತ್ರ. ನನ್ನ ಜೀವಿತದ್ದಲ್ಲಿ ಶರ್ಮಿಷ್ಠೆ ಪ್ರಧಾನ ಪಾತ್ರವಾಗಿರುವ ನಾಟಕದಲ್ಲಿ ಅಭಿನಯಿಸಲೇ ಬೇಕು’ ಎಂದರು ಅಮ್ಮ
ಹೀಗೆ ಹಿಂದೊಮ್ಮೆ ನಾನೂ ಅಮ್ಮ ಇಬ್ಬರೂ ಮೈಸೂರಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಹೊರೆಟವು. ಅದು ನನ್ನ ವಿದ್ಯಾಗುರುಗಳಾದ ಡಾ. ಮಳಲಿ ವಸಂತ್ ಕುಮಾರ್ ಅವರ ‘ಶರ್ಮಿಷ್ಠೆ’ ನಾಟಕದ ಬಿಡುಗಡೆ. ಅಮ್ಮ ಪುಸ್ತಕ ಬಿಡುಗಡೆ ಮಾಡುವುದಿತ್ತು. ದೇಜಗೌ ಅಧ್ಯಕ್ಷತೆ ವಹಿಸಿದ್ದರು. ನಾನು ಕೃತಿ ಕುರಿತು ಮಾತಾಡುವುದಿತ್ತು. ಸರಿ ಅಮ್ಮ ನನಗೆ ಇಬ್ಬರೂ ಒಟ್ಟಿಗೆ ಹೋಗೋಣ ಅಂದ್ರು. ಅದು ಅಮ್ಮ ಮಂತ್ರಿಯಾದ ಚೊಚ್ಚಲ ದಿನಗಳು. ನನಗೋ ಅವರು ಕೂತಿದ್ದ ಗೂಟದ ಕಾರಿನಲ್ಲಿ ಕೂರಲು ಇರುಸು ಮುರುಸು. ಅದು ಸೇರುವುದು ಕಷ್ಟವೇ ನನಗೆ. ಒಂದೊಮ್ಮೆ ನನ್ನ ತಂಗಿ ಶೇತಮ್ಮ “ ಅದೆಷ್ಟೋ ಬಡವರ ಮತ್ತು ಈ ರಾಜ್ಯದ ಜನರ ಪೈಸ ಪೈಸ ಸೇರಿ ಆಗಿರುವುದು ಈ ಕಾರು. ಜನರು ಕೊಟ್ಟಿರೋ ಕಾರಲ್ಲಿ ನಾ ಏಕೆ ಕೂರಬೇಕು ಅಂತ ಕೇಳಿದ್ದಳು” ಎಂದು ನನ್ನ ಬಳಿ ಹೇಳಿದ್ದಳು. ನನ್ನ ತಂಗಿಯ ಮಾತುಗಳನ್ನು ಕೇಳಿ ಅವಳ ಬಗ್ಗೆ ಆದ ಹೆಮ್ಮೆಯ ಬಗ್ಗೆ ನನ್ನಲ್ಲಿ ಮಾತುಗಳಿಲ್ಲ. ನನ್ನ ಮನಸೂ ಇದನ್ನೇ ಹೇಳುವಾಗ ಆ ಕಾರಿನಲ್ಲಿ ಹೋಗೋದು ಕಷ್ಟವೇ ಆಗಿತ್ತು. ಇದೂವರೆಗೂ ಮೂರ್ನಾಲ್ಕು ಸಲ ಅಮ್ಮನ ಜೊತೆ ಸಹ ಪ್ರಯಾಣ ಮಾಡಿದ್ದೇನೆ. ಅದೂ ಸಾಹಿತ್ಯ ಮತ್ತು ಸಮಾಜದ ಚರ್ಚೆಗಳ ದಕ್ಕಿಸಿಕೊಳ್ಳಲು. ಪರಸ್ಪರ ಸಂವಾದ ಸುಖ ಅನುಭವಿಸಲು. ಸರಿ ಇವೆಲ್ಲಾ ಹಿನ್ನೆಲೆ ಮುನ್ನೆಲೆಯ ನಿಮಿತ್ತ ಮಾಡಿಕೊಂಡು ಶರ್ಮಿಷ್ಠೆ ಕೃತಿಯ ಬಿಡುಗಡೆಗಾಗಿ ಮೈಸೂರಿಗೆ ಇಬ್ಬರೂ ದಾರಿ ಬೆಳೆಸಿದ್ವಿ.
ಬೆಂಗಳೂರು ಬಿಟ್ಟ ಕೂಡಲೇ ಭಾರತದ ಬಾವುಟ ಕಾರಿಗೆ ಹಾಕಲಾಯಿತು. ಎಸ್ಕಾರ್ಟ್ ಜೊತೆ ಸೇರಿಕೊಂಡಿತು. ಕೆಂಪು ದೀಪದ ಲೈಟು ಸದ್ದು ಮಾಡಲು ಶುರು ಮಾಡಿತು. ಇವೆಲ್ಲಾ ಹೊಸತು ನನಗೆ. ಮೈ ಮನಸುಗಳು ಮುದುರಿಹೋಯಿತು. ಈ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ನಾವು ಪ್ರಜೆಗಳು ಇಷ್ಟೆಲ್ಲಾ ಕೊಡಬೇಕಾ ಅನ್ನಿಸ್ತು. ಜೀವದಾಯಿನಿ ಅಮ್ಮ ಇದನ್ನೆಲ್ಲಾ ಅನುಭವಿಸಬೇಕಾ ಅನ್ನಿಸ್ತು ಕೂಡ. ಸಾವಿರ ಸಾವಿಕ ಕೋಟಿ ಕೋಟಿ ಸಾರ್ವಜನಿಕ ಹಣ ವೆಚ್ಚ ಮಾಡಿ ವಯಕ್ತಿಕ ಸುತ್ತಾಟಕ್ಕೆ ಬಂದೋಬಸ್ತ್ ಏರೋಪ್ಲೇನ್ ಮಾಡಿಸಿಕೊಳ್ಳುವ ಪ್ರಜಾರಕ್ಷಕ ನಕಲೀ ತನ. ಮುಂದಿನ ಅರ್ಧ ಗಂಟೆಯಲ್ಲೇ ತಾನು ತಲುಪಬೇಕಾದ ಜಾಗಕ್ಕೆ ಪ್ಲೈಟ್ ಇದ್ದರೂ ವಿಶೇಷ ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನುವ ಉಮೇದು ಇರುವವರ ನಡುವೆ ಅಮ್ಮ ನನಗೆ ಇಂದಿಗೂ ತುಂಬಾ ಭಿನ್ನರಾಗಿಯೇ ಕಾಣುತ್ತಾರೆ. ಹಿಂದುಳಿದ ವರ್ಗಗಳಿಂದ ಬಂದ ಹೆಣ್ಣು ಮಗಳೊಬ್ಬಳು ಗೂಟದ ಕಾರಲ್ಲಿ ಓಡಾಡುವುದು ತಪ್ಪಲ್ಲ ಅನ್ನಿಸುತ್ತದೆ. ಗೆದ್ದು ಗದ್ದುಗೆ ಏರಿದ್ದೇವೆ ಅನ್ನುವ ಕಾರಣಕ್ಕೆ ಅಗತ್ಯಕ್ಕಿಂತ ಮೀರಿ ಐಶಾರಾಮಿ ಅನುಕೂಲಗಳನ್ನು ತಿಂದು ತೇಗಿ ಹಾಸಿ ಹೊದೆಯುತ್ತಿರುವವರ ನಡುವೆ ಅಮ್ಮಾ ತೀರಾ ಭಿನ್ನರು. ಅಮ್ಮ ಸರ್ಕಾರದ ಬಂಗಲೇ ವಾಸಕ್ಕೆಂದು ತೆಗೆದುಕೊಂಡಿಲ್ಲ. ಅಡುಗೆಭಟ್ಟನಿಂದ ಹಿಡಿದೂ ತರಕಾರಿ ತರುವವರ ತನಕ ಎಲ್ಲದಕ್ಕೂ ಆಳುಕಾಳುಗಳನ್ನೂ ಕ್ಲೇಮ್ ಮಾಡಿ ಮನೆಗೆ ಕರೆಸಿಕೊಂಡಿಲ್ಲ. ತಾನು ಓಡಾಡುವ ಕಾರೊಂದೆ ತನ್ನ ಬಳಕೆಗೆ. ತಾನಿರುವ ಮನೆಯಲ್ಲೇ ಈಗಲೂ ವಾಸ. ಅಧಿಕಾರ ಬರುವ ಮುನ್ನವೂ ಅಮ್ಮನ ಆರೈಕೆ ಶೇತಮ್ಮನದ್ದೆ ಈಗಲೂ ಅವಳದ್ದೇ. ಎಂದಿನಂತೇ ಮನೆಯ ಕೆಲಸಕ್ಕೆ ಒಬ್ಬರೇ. ಯಾರದೇ ದುಡ್ಡಾಗಲೀ ಅದನ್ನು ಪುಕ್ಸಟ್ಟೆ ತಿಂದು ತೇಗುತ್ತಿರುವರ ನಡುವೆ ನಮ್ಮ ಅಮ್ಮ ತುಂಬಾ ಭಿನ್ನರಾಗಿ ನಿಲ್ಲುತ್ತಾರೆ. ಅವರ ನಡವಳಿಕೆಗಳು ಹುಸಿ ಆದರ್ಶ ಅಂತ ಎಂದೂ ಅನ್ನಿಸುವುದಿಲ್ಲ. ತಾನು ನಡೆದು ಬಂದ ತಾಪದ ಹಾದಿಯನ್ನು ಮಂತ್ರಿಯಾದ ಮೇಲೂ ಅಮ್ಮ ಮರೆತಿಲ್ಲ. ಅಗತ್ಯ ಮೀರಿ ಅವಶ್ಯಕತೆಗಳನ್ನು ಬಳಿಸಿ ಕೊಳ್ಳುವ ಮನಸ್ಥಿತಿ ಅವರಿಗೆ ಇಲ್ಲವೇ ಇಲ್ಲ ಅನ್ನೋದು ಎಷ್ಟೋ ಸಲ ನನ್ನ ಅರಿವಿಗೆ ಬಂದಿದೆ. ಅದು ನಾನೇ ಹೇಳಬೇಕಿಂದಿಲ್ಲ ಜಗತ್ತಿಗೂ ಕಾಣುತ್ತಿದೆ ಕೂಡ. ಅವತ್ತು ಮೊದ ಮೊದಲು ಅಮ್ಮ ಗೂಟದ ಕಾರಲ್ಲಿ ಮೈಸೂರಿಗೆ ಕರೆದುಕೊಂಡು ಹೋದಾಗ ಅನ್ನಿಸಿದ್ದು ಈಗ ಅನ್ನಿಸುತ್ತಿಲ್ಲ. ಆದ್ರೆ ನನಗೆ ಅದು ವರ್ಜ್ಯವೇ. ಯಾಕೆಂದರೆ ಅದೆಲ್ಲಾ ಅವರ ಶ್ರಮ ಮತ್ತು ಬದ್ಧತೆಗೆ ಜನ ಕೊಟ್ಟಿರುವುದು ಶಕ್ತಿ.
ಅಮ್ಮ ಗೂಟದ ಕಾರಲ್ಲಿ ಕೂತಿದ್ದನ್ನು ಈಗಲೂ ಕಂಡಾಗ ಈ ದೇಶದ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಚರಿತ್ರೆಗಳು ಕಣ್ಣ ಮುಂದೆ ಬಂದು ದುತ್ತೆಂದು ಬಂದುಬಿಡತ್ತೆ. ಅದರಲ್ಲೂ ಮಹಿಳೆಯರ ದಾರಿ ಗಮನಿಸಿದಾಗ ಅಮ್ಮ ಹೆಮ್ಮೆಯ ಪ್ರತಿನಿಧಿಯಾಗಿ ಕಾಣುತ್ತಾರೆ. ನೊಂದವರೇ ಹೀಗೆ ಸದಾ ನೋವಿನ ನೆನಪಿನಲ್ಲಿ ಇರ್ತಾರೆ ಅನ್ನೋದು ನಿಜ. ಅದರಲ್ಲೂ ಸಂವೇದನೆಗಳು ಇರುವವರು ಬೀಗುವುದಿಲ್ಲ. ಎದೆ ಸೆಟೆದು ನಡೆಯುವುದಿಲ್ಲ. ನೋವಿನ ಅರ್ಥ ಮತ್ತು ಅದರ ಒಟ್ಟು ಫಲವನ್ನು ಶಕ್ತಿಯನ್ನು ಸಾದ್ರೀಕರಿಸಿಕೊಂಡು ಮತ್ತೆ ನೊಂದವರ ಕಡೆಗೆ ಮುಖ ಮಾಡುತ್ತಾರೆ. ಇಂಥಹವರು ಎಲ್ಲೂ ತನ್ನ ಸೌಧವನ್ನು ತಾವೇ ಕಟ್ಟಿಕೊಳ್ಳುವುದಿಲ್ಲ. ಬಯಲಿನ ಗರಿಕೆಯಾಗುತ್ತಾರೆ. ಅಮ್ಮ ಕೂಡ ಹೀಗೆ.

ಸರಿ ಮತ್ತೆ ಕಾರಿನೊಳಗಿನ ಚರ್ಚೆಗೆ ಬರುತ್ತೇನೆ. ನಾನೂ ಅಮ್ಮ ಇಬ್ಬರೂ ಒಟ್ಟಿಗೆ ಶರ್ಮಿಷ್ಠೆ ನಾಟಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗುಲು ಕಾರು ಹತ್ತಿದಾಗಲಿಂದ ಕಾರು ಇಳಿಯುವ ತನಕ ಯಯಾತಿ, ದೇವಯಾನಿ, ಶರ್ಮಿಷ್ಠೆ, ಪುರು ಮತ್ತು ಶುಕ್ರಾಚಾರ್ಯರ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು. ಬಾಲ್ಯ, ಯೌವನ ಮತ್ತು ವೃದ್ದಾಪ್ಯ ಇವುಗಳ ಮನಸುಗಳನ್ನು ಕುರಿತು ಪ್ರಾಯೋಗಿಕ ವಿಮರ್ಶೆ ಮಾಡಿದ್ದು ಅಮ್ಮನೊಳಗಿನ ಬೌದ್ಧಿಕ ಶಕ್ತಿ ಅನಾವರಣ ಆಯಿತು. ಅನುಭವಗಳೇ ಹೀಗೆ ಎಲ್ಲವನ್ನು ದಕ್ಕಿಸಿಕೊಟ್ಟುಬಿಡತ್ತೆ ಅನ್ನೋದು ಕೂಡ ಸರೀನೇ. ಮಾತಾಡ್ತಾ ಮಾತಾಡ್ತಾ ಅಮ್ಮ ‘ ಎಲ್ಲಾ ವಯೋಮಾನಗಳಲ್ಲೂ ಎಲ್ಲರಿಗೂ ಬಾಲ್ಯ, ಯೌವನ ಮತ್ತು ವೃದ್ಧಾಪ್ಯದ ಗುಣಗಳು ಇದ್ದೇ ಇರುತ್ತವೆ. ಆದ್ರೆ ಅವು ಇರೋದು ಗೊತ್ತಾಗಲ್ಲ’ ಅಂದಿದ್ರು. ಈ ಮಾತು ಎಷ್ಟು ಸತ್ಯ ತಾನೆ. ‘ಮಳಲಿಯವರಿಗೆ ಬೇರೆ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ ಶರ್ಮಿಷ್ಠೆಯನ್ನು ಬರೆಯಿರಿ ಅಂದಿದ್ದೆ. ಅದಕ್ಕೆ ನಿನ್ನ ಮೇಷ್ಟ್ರು ಆರು ತಿಂಗಳಲ್ಲಿ ಶರ್ಮಿಷ್ಠೆಯನ್ನು ಬರೆದುಬಿಟ್ಟಿದ್ದಾರೆ ನೋಡು. ಎಷ್ಟು ಬೇಗ ಒಂದು ನಾಟಕ ರಚನೆ ಮಾಡಿದ್ದಾರೆ. ನೀ ಯಾವಾಗ ನಾಟಕ ಬರೆಯೋದು’ ಅಂತ ಕೇಳಿದ್ದು ಮೊನ್ನೆ ಮೊನ್ನೆ ನಾನು ‘ರಕ್ತವರ್ಣೆ’ ನಾಟಕ ಬರೆದು ಮುಗಿಸಿದಾಗ ನೆನಪಾಯಿತು.
ಈ ಹಿಂದೆ ಯಯಾತಿ ನಾಟಕದಲ್ಲಿ ಅಮ್ಮ ಶರ್ಮಿಷ್ಠೆ ಪಾತ್ರ ಮಾಡಿದಾಗಿನಿಂದ ತನ್ನನ್ನು ಹೆಚ್ಚು ಕಾಡಿರುವ ಪಾತ್ರ ಶರ್ಮಿಷ್ಠೆ ಅಂತ ಎಷ್ಟೋ ಸಲ ಹೇಳಿದ್ದಾರೆ. ಅವರು ಶರ್ಮಿಷ್ಠೆಯನ್ನೇ ಪ್ರಧಾನ ಪಾತ್ರವಾಗಿ ಬಿಂಬಿಸುವ ನಾಟಕದಲ್ಲಿ ಅಭಿನಯಿಸಬೇಕು ಅಂತಾ ಕೂಡ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ. ನಾಟಕ ಮತ್ತು ಅಭಿನಯದ ವಿಷ್ಯ ಬಂದಾಗ ಶರ್ಮಿಷ್ಠೆ ಮಾತಿನಿಂದ ಎಂದೂ ಜಾರಿ ಹೋಗುವುದೇ ಇಲ್ಲ.
‘ದೇವಕುಲದೊಳಗಿರುವ ಅಸುರತನ, ಅಸುರರಲ್ಲಿ ಇರುವ ದೈವತ್ವ ಇವುಗಳು ಸಾಮಾನ್ಯರಿಗೆ ಗೊತ್ತಾಗೋದೇ ಇಲ್ಲ. ನೀವು ಸಾಹಿತಿಗಳು ರಚಿಸುವ ಸಾಹಿತ್ಯದಲ್ಲಿ ಓದುಗ ವಲಯ ಅಥವಾ ಸಾಂಸ್ಕೃತಿಕ ಲೋಕಕ್ಕೆ ಮಾತ್ರ ಗೊತ್ತಾಗುತ್ತೆ. ಈ ನೆಲದ ಕಟ್ಟ ಕಡೆಯ ಸಾಮಾನ್ಯನಿಗೆ ಗೊತ್ತಾಗೋಕೆ ಎಷ್ಟು ಸಮಯಬೇಕೋ ಗೊತ್ತಿಲ್ಲ. ಯಾಕಂದ್ರೆ ಎಷ್ಟೇ ಜನಪ್ರಿಯವಾದ ಕೃತಿ ನಾಟಕ ಆದ್ರೂ ಕೂಡ ಸಮಾಜಕ್ಕೆ ದಕ್ಕುವುದು ಶೇಕಡಾ ಐದಾರು ಇರಬಹುದು. ಹಾಗೂ ಹೀಗೂ ಶರ್ಮಿಷ್ಠೆ ಮತ್ತು ದೇವಯಾನಿಯರ ಮತ್ತು ಇಂಥದ್ದೇ ಅದೆಷ್ಟೋ ಕಥೆಗಳು ಗೊತ್ತಾಗೋದು ಮತ್ತು ಅರ್ಥ ಆಗುವುದು ಕೆಲ ಮಂದಿಗೆ ಮಾತ್ರ. ಇದರಾಚೆಗೆ ಇರುವ ಬಹುದೊಡ್ಡ ಸಂಖ್ಯೆಯ ಜನ ಸಮುದಾಯಕ್ಕೆ ಸತ್ಯಗಳನ್ನು ಹೇಳುವುದಾದರೂ ಹೇಗೆ. ಅರ್ಥ ಮಾಡಿಸುವುದಾರೂ ಹೇಗೆ ಅನ್ನುವ ಪ್ರೆಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ’ ಎಂದರು. ಸತ್ಯ ಅಕ್ಷರಗಳಾಗಿ ಮತ್ತು ಕಲಾಕೃತಿಗಳಾಗಿ ದಾಖಲಾಗುವ ಎಲ್ಲವುಗಳ ಬಹುದೊಡ್ಡ ಮಿತಿಯ ಬಗ್ಗೆ ಅಮ್ಮ ಮಾತಾಡಿದ್ದನ್ನು ಕೇಳಿ ಅವರ ಸಮಾಜ ಪರಕಾಳಜಿ ಮತ್ತು ಆಸ್ಥೆ ಏನು ಎಂಬುದು ಇನ್ನಷ್ಟು ಆ ಹೊತ್ತಿನ ಪ್ರಯಾಣದಲ್ಲಿ ಅರ್ಥವಾಯಿತು. ಸರಿ ಕಾರ್ಯಕ್ರಮದ ಸ್ಥಳಕ್ಕೆ ಹೋದ್ವಿ. ಕಾರು ಇಳಿಯುವ ಮುನ್ನ ಅಮ್ಮ ‘ಶರ್ಮಿಷ್ಠೆ ನನ್ನ ಬಹು ದಿನದ ಇಷ್ಟದ ಪಾತ್ರ ರಘು. ನನ್ನ ಜೀವಿತದ್ದಲ್ಲಿ ಶರ್ಮಿಷ್ಠೆ ಪ್ರಧಾನ ಪಾತ್ರವಾಗಿರುವ ನಾಟಕದಲ್ಲಿ ಅಭಿನಯಿಸಲೇ ಬೇಕು’ ಎಂದು ಕಾರಿಳಿದರು. ಕಾರ್ಯಕ್ರಮದಲ್ಲೂ ಅದನ್ನೇ ಹೇಳುದರು. ಆ ಹೊತ್ತಿನ ಪ್ರಯಾಣ ಹೀಗೆ ಕಟ್ಟಿಕೊಟ್ಟಿದ್ದು ಮತ್ತು ಬಿಚ್ಚಿಕೊಟ್ಟಿದ್ದು ಅನೇಕ…..


chennagide lekhana raghu avare
ಎಲ್ಲಾ ವಯೋಮಾನಗಳಲ್ಲೂ ಎಲ್ಲರಿಗೂ ಬಾಲ್ಯ, ಯೌವನ ಮತ್ತು ವೃದ್ಧಾಪ್ಯದ ಗುಣಗಳು ಇದ್ದೇ ಇರುತ್ತವೆ. – valuable thought.ಎಂಥೆಂಥಾ ಘನ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅನುಭವಾಮೃತ