
ಕಲೆ ಅನ್ನೋದು ಮರಿಗೆ ಮರಿ. ಕುಟುಂಬದ ಹಿರಿಯರ ಕೆಲ ಗುಣಗಳು ರಕ್ತದಲ್ಲೇ ಬಂದಿರುತ್ತೆ ಅಂತಾರಲ್ಲ ಆ ಮಾತು ಒಮ್ಮೊಮ್ಮೆ ಸರಿ. ಅದರಲ್ಲೂ ಕಲೆ ಸಾಹಿತ್ಯ ಈ ತೆರನಾದ ಕೆಲ ಅಭಿವ್ಯಕ್ತಿಗಳು ತನ್ನ ಹಿರೀಕ ಜೀವದಿಂದ ಬಳುವಳಿಯಾಗಿ ಬಂದಿರುತ್ತೆ. ಜೊತೆಗೆ ಕೌಟುಂಬಿಕ ಪರಿಸರ ಮತ್ತು ಸಂಸ್ಕಾರ ಎಳೆಯ ಜೀವಗಳ ಮೇಲೆ ದಟ್ಟವಾಗಿ ಪ್ರಭಾವಿಸುತ್ತವೆ. ಒಮ್ಮೊಮ್ಮೆ ಮಕ್ಕಳಿಗೆ ಸಂಸ್ಕಾರ ಕೊಟ್ಟು, ತರಬೇತಿ ಕೊಟ್ಟು ಕಲಾ ಜಗತ್ತಿನ ಮಡಿಲಿಗೆ ಹಾಕಿದರೆ ಇನ್ನೂ ಕೆಲ ಸಂದರ್ಭಗಳಲ್ಲಿ ಯಾವುದೇ ಒತ್ತಡವಿಲ್ಲದೇ ಕಲಾ ತಾಯಿಯ ಒಡಲಲ್ಲಿ ಆಟ ಆಡಿದಷ್ಟು ಸುಲಭವಾಗಿ ತನ್ನ ಅಭಿವ್ಯಕ್ತಿಯನ್ನು ತೋರುತ್ತಿರುತ್ತಾರೆ ಎಳೆಯ ಮಕ್ಕಳು. ಕಲೆಯೇ ಹೀಗೆ ಪಡೆದದ್ದೇ ಬಣ್ಣ. ಒಲಿದದ್ದೇ ಆಕಾರ. ಇನ್ನೂ ರಂಗಭೂಮಿ ಕೇಳಬೇಕೇ ಅದು ಲಂಕೇಶರ ಬನದ ಕರಡಿಯ ಹಾಗೆ. ತಾಯ ಪ್ರೀತಿ ತೋರಿದ್ದೇ ತೋರಿದ್ದು. ಜೀವ ಹರಿಸಿ ಬದುಕು ಕಟ್ಟಿ ಕೊಟ್ಟಿದ್ದೇ ಕೊಟ್ಟಿದ್ದು.
ಇದೆಲ್ಲಾ ಯಾಕೆ ಹೇಳುತಿದ್ದೇನೆ ಅಂದ್ರೆ, ಇತ್ತೀಚಿಗೆ ಪುಟ್ಟ ಶೇತಮ್ಮನನ್ನು ಅಂದ್ರೆ ಉಮಾಶ್ರೀ ಅಮ್ಮನ ಮೊಮ್ಮಗಳು ಪುಟ್ಟ ಸಾಕವ್ವನನ್ನು ಮತ್ತು ನನ್ನ ಕೂಸು ಸಹೃದಯನನ್ನು ವಿಜಯನಗರ ಬಿಂಬಕ್ಕೆ ರಂಗ ಶಿಬಿರಕ್ಕೆ ಸೇರಿಸಿದ್ದೆವು, ಐದು ವರ್ಷದ ಒಳಗಿನ ಮಕ್ಕಳಿಗೆ ರಂಗಪಾಠಗಳನ್ನು ಹೇಳಿಕೊಡುತ್ತಾ, ಹಾಡು, ಕ್ರಾಫ್ಟ್, ಮೈಮ್ ಹೀಗೆ ಮಕ್ಕಳನ್ನು ಕ್ರಿಯಾಶೀಲವಾಗಿಡುವ ಹತ್ತು ದಿನಗಳ ಶಿಬಿರ ಅದು. ಶಿಬಿರದ ಕೊನೆಯದಿನ ಮಕ್ಕಳಿಗಾಗಿಯೇ ಒಂದು ನಾಟಕವನ್ನು ರಚಿಸಿ ರಂಗಕ್ಕೆ ತರುವ ಮಹತ್ವಪೂರ್ಣ ಶಿಬಿರ ಕೂಡ, ಕಳೆದ ಇಪ್ಪತ್ತು ವರ್ಷಗಳಿಂದ ರಂಗಕರ್ಮಿ ಶೋಭಾ ವೆಂಕಟೇಶ್ ಅವರು ವಿಜಯನಗರದಲ್ಲಿ ಈ ರಂಗ ತರಬೇತಿ, ರಂಗ ಡಿಪ್ಲಮೋ ನಡೆಸಿಕೊಂಡು ಬರುತ್ತಿದ್ದಾರಂತೆ. ಪ್ರತೀ ವರ್ಷದಂತೆ ಈ ವರ್ಷ ಕೂಡ ವಿಜಯನಗರ ಬಿಂಬ ‘ಚಿಣ್ಣರ ಚಿತ್ತಾರ’ ಅನ್ನೋ ಹೆಸರಿನಲ್ಲಿ ಪುಟಾಣಿ ಚೋಟಾಣಿ ಮಕ್ಕಳಿಗೆ ರಂಗ ಶಿಬಿರ ಏರ್ಪಡಿಸಿತ್ತು. ಈ ಶಿಬಿರದಲ್ಲಿ ಒಟ್ಟು ನಲವತ್ತು ಪುಟಾಣಿಗಳಿದ್ದವು
ಈ ಚಿಣ್ಣರ ಚಿತ್ತಾರಕ್ಕೆ ಛೋಟಾ ಉಮಾಶ್ರೀ ಮತ್ತು ಜೂನಿಯರ್ ಬೇಲೂರು ಇಬ್ಬರೂ ತರಾತುರಿ ಮಾಡಿಕೊಂಡು ಹೋಗೋದು ನೋಡೋಕೆ ಒಂದು ಖುಷಿ. ನಾಲ್ಕಕ್ಕೆ ಇರುವ ಶಿಬಿರಕ್ಕೆ ಮಧ್ಯಾನ್ಹ ಒಂದರಿಂದಲೇ ಜಪ. ಬೇಗ ಊಟ ಮಾಡಿಸಿ ಕರ್ಕೊಂಡು ಹೋಗಿ ಅಂತ. ನಮ್ಮ ಮನೆ ಇರುವುದು ಆರ್.ಟಿ.ನಗರ ಇನ್ನೂ ಶೇತಮ್ಮನ ಮನೆ ಜಯನಗರ. ಶಿಬಿರ ನಡೆಯುತ್ತಿರುವುದು ವಿಜಯನಗರದ ಚಿತ್ರಕೂಟದಲ್ಲಿ. ಮೂರು ಮೂರು ದಿಕ್ಕು. ರಂಗ ಶಿಬಿರಕ್ಕೆ ಸೇರಿಸೋದೇನೋ ಸೇರಿಸಿಬಿಟ್ಟು ಕರ್ಕೊಂಡು ಹೋಗಿ ಕರ್ಕೊಂಡು ಬರೋದು ಹೇಗಪ್ಪ ಅಂತ ತಲೆ ಚಿಟ್ಟು ಹಿಡಿದೊಯ್ತು. ನಾಲ್ಕು ಗಂಟೆಗೆ ಸರಿಯಾಗಿ ಕರ್ಕೊಂಡು ಹೋಗಬೇಕು ಸಮಯ ಶಿಸ್ತು ರಂಗಭೂಮಿಯ ಜೀವಾಳ. ಸರಿಯಾದ ಸಮಯಕ್ಕೆ ಮಕ್ಕಳನ್ನು ಅಲ್ಲಿಗೆ ಕರ್ಕೊಂಡು ಹೋಗಬೇಕೆಂದರೆ ಕನಿಷ್ಠ ಪಕ್ಷ ಎರಡುಗಂಟೆಗೆ ಮನೆ ಬಿಟ್ಟು ಜಯನಗರಕ್ಕೆ ಹೋಗಿ ಅಲ್ಲಿಂದ ನಿಸರ್ಗಳನ್ನು ಕರ್ಕೊಂಡು ಬರೋ ಹೊತ್ತಿಗೆ ಗಂಟೆ ನಾಲ್ಕು ಟಣ್ ಅಂತ ಹೊಡೆದಿರುತ್ತಿತ್ತು. ಶಿಬಿರ ಶುರುವಿನಿಂದ ಕೊನೆ ತನಕ ಶೇತಮ್ಮ ಮತ್ತು ನಮ್ಮ ತಾಯಿ ತಪಸ್ಸಿನ ರೀತಿ ಶ್ರದ್ದೆಯಿಂದ ಕರ್ಕೊಂಡು ಹೋಗಿ ವಾಪಸ್ ಮನೆ ಸೇರುತ್ತಾ ಇದ್ದುದು ರಾತ್ರಿ ಎಂಟೂವರೆಗೆ. ಮೊದಲನೇ ದಿನ ಬೇಸರ ಆದರೂ ಕೂಡ ಕೊನೆ ಹೊತ್ಗೆ ಬಂದಾಗ ನಮ್ಮ ತಾಯಿ ಮತ್ತು ಶೇತಮ್ಮ ಇಬ್ರೂ ಮಕ್ಕಳ ಉತ್ಸಾಹವನ್ನು ಕಂಡು ಕೊನೆ ದಿನ ಬಂದುಬಿಡ್ತಲ್ಲಾ ಅಂತ ಚಡಪಡಿಸುತ್ತಿದ್ದರು.
ಸರಿ ಹೆಂಗೋ ಕೊನೆ ದಿನ ಬಂದೇ ಬಿಡ್ತು. ಮಕ್ಕಳೆಲ್ಲಾ ‘ನೀರು ನವಿಲು’ ನಾಟಕ ಮಾಡುವ ಮತ್ತು ನಾವೆಲ್ಲಾ ನೋಡುವ ದಿನ ಕೂಡ ಸನ್ನಿಹಿತ ಆಗಿಯೇಬಿಟ್ಟಿತು. ನಮ್ಮ ನಿಸರ್ಗ ಮತ್ತು ಸಹೃದಯ ಇಬ್ಬರ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ನಮಗೂ ಕೂಡ ಮೊದಲ ಸಲ ನಮ್ಮ ಮನೆ ಮಕ್ಕಳು ಬಣ್ಣ ಹಚ್ಚಿ ರಂಗ ಪ್ರವೇಶ ಮಾಡುತ್ತಿದ್ದಾರೆ ಅನ್ನುವ ಹೆಮ್ಮೆ ಮತ್ತು ನಾಟ್ಕ ಹೇಗೆ ಮಾಡುತ್ತಾರೆ ಅನ್ನುವ ಕುತೂಹಲ. ಅದು ಬೇರೆ ಎನ್ ಮಾಡ್ತಿದ್ದೀರಿ ಮಕ್ಕಳೇ ಅಂದ್ರೆ ಕೊನೆ ದಿನದ ತನಕ ಅವರುಗಳು ಏನೂ ಇಲ್ಲ ಅಂತ ಮನೆಯಲ್ಲಿ ನಾಟ್ಕವನ್ನೋ ಸಂಭಾಷನೆಯನ್ನೋ ತೋರಿಸಿದ್ದರೆ ಸರಿ. ಅದಕ್ಕಾಗಿ ನಾವೆಲ್ಲಾ ಕೊನೆ ದಿನದ ತನಕ ಇರೋ ಬರೋ ಆಸೆನೆಲ್ಲಾ ಒಂದು ಕಡೆ ಕೂಡಿಟ್ಟುಕೊಂಡು ಕಾದ ಖುಷಿ ಕೂಡ ದೊಡ್ಡದೇ.
ನಾಟಕದ ದಿನ ನಮ್ಮ ನಿಸರ್ಗ ನನಗೆ ಬೆಳ್ಳಂಬೆಳಗ್ಗೆ ಫೋನ್ ಮಾಡಿ ‘ರಘು ಮಾಮ ಬೇಗೆ ಬಂದುಬಿಡು. ಲೇಟಾಗಿ ಬರಬೇಡ. ನಾಟ್ಕ ಶುರು ಆಗ್ಬಿಟ್ರೆ ನೀನ್ ನನ್ನ ನೋಡೋಕೆ ಆಗಲ್ಲ. ಯಾಕಂದ್ರೆ ನನ್ನ ಪಾತ್ರ ಮೊದಲೇ ಇರೋದು’ ಅಂದಿದ್ಲು. ನಾನು ಆಯ್ತು ಮಗಳೇ ಅಂದಿದ್ದೆ. ಅದೇ ತರ ಹಿಂದಿನ ದಿನ ಅವಳು ಅವಳಜ್ಜಿಗೆ ಫೋನ್ ಮಾಡಿ ‘ಉಮಾಶ್ರೀ ಅಮ್ಮಮ್ಮ ನೀನು ನಾಟಕ ನೋಡಲು ನೀನು ಬರಲೇ ಬೇಕು’ ಕರೆದಿದ್ದಳಂತೆ. ಅವರೂ ಕೂಡ ಎಲ್ಲಿಲ್ಲದ ಒತ್ತಡದ ನಡುವೆ ಕ್ಷೇತ್ರದಿಂದ ಎಲ್ಲವನ್ನು ಬಿಟ್ಟಿದ್ದ ಬಿಟ್ಟಂತೆ ಬಿಟ್ಟು ಬಂದಿದ್ದರು. ಸಂಜೆ ಆಯಿತು ನಾನೂ ನಾಲ್ಕು ಗಂಟೆಗೆ ಹೋಗಿದ್ದೆ. ನಿಸರ್ಗಳಿಗೆ ಸರ ಬಳೆ ಎಲ್ಲಾ ಅಂಗಡಿಗೆ ಹೋಗಿ ಕೊಡಿಸಿ. ಅವಳನ್ನು ರಂಗದ ಮೇಲೆ ಎಷ್ಟು ಹೊತ್ತಿಗೆ ನೋಡುತ್ತೇನೋ ಅಂತ ಜೀವ ಕೈಲಿ ಹಿಡ್ಕೊಂಡು ಕಾಯುತ್ತಿದ್ದೆ. ಅಷ್ಟೇ ಅಲ್ಲಾ ನನ್ನ ಮಗ ಸಹೃದಯ ಕೂಡ ಮೊದಲು ಬಣ್ಣ ಹಚ್ಚಿ ಹೇಗೆ ಪಾತ್ರ ಮಾಡುತ್ತಾನೆ ಅನ್ನೋದನ್ನು ನೋಡಲು ನಾನು ನಮ್ಮನೆಯರೆಲ್ಲಾ ಕಾದು ಕೂತಿದ್ವಿ.
ಸರಿ ಸಂಜೆ ಮಕ್ಕಳ ನಾಟಕದ ಹೊತ್ತಿಗೆ ಅಮ್ಮ ಬಂದ್ರು. ಮಕ್ಕಳು ಮಾಡಿದ ಎಲ್ಲಾ ಚಿತ್ರಕಲೆ, ಕ್ರಾಫ್ಟ್ ಎಲ್ಲಾ ವೀಕ್ಷಿಸಿ ರಂಗದ ಬಳಿ ಹೋಗಿ ಮುಂದೆ ಕಾದಿರಿಸಿದ ಸೀಟ್ ನಲ್ಲಿ ನಾನು ಅಮ್ಮ ಕೂತೆವು. ನಾಟಕ ಶುರು ಆಗೋಕಿಂತ ಮುಂಚೆ ‘ನಾವಿಬ್ರೂ ಮುಂದೆ ಕೂರೋದು ಬೇಡ. ನಮ್ಮನ್ನ ಮಕ್ಕಳು ನೋಡಿದ್ರೆ ಇಬ್ಬರದ್ದು ಗಮನ ಬೇರೆಡೆಗೆ ಹೋಗತ್ತೆ. ಅದಕ್ಕೆ ಹಿಂದೆ ಎಲ್ಲಾದ್ರು ಸೀಟ್ ಹಿಡ್ಕೊಂಡು ಕೂತ್ಕೊಳ್ಳೋಣ ನಡೀ’ ಅಂದ್ರು ಅಮ್ಮ . ಸರಿ ಅಂತ ನಾವಿಬ್ಬರೂ ಹಿಂದಿನ ಸೀಟುಗಳಿಗೆ ಹೋದ್ವಿ. ನೀರು ನವಿಲು ನಾಟಕ ಶುರು ಆಯಿತು. ಮೊದಲ ಎಂಟ್ರಿಯಲ್ಲೇ ಲಂಗ ಜಾಕಿಟ್ಟು ತೊಟ್ಟು, ಬಳೆ ಸರ ಹಾಕ್ಕೊಂಡು ನಮ್ಮ ನಿಸರ್ಗ ಮತ್ತು ಇನ್ನೊಂದಷ್ಟು ಮಕ್ಕಳು ಬಂದರು. ನನಗೂ ಅಮ್ಮನಿಗೆ ಮತ್ತು ಮನೆ ಮಂದಿಗೆಲ್ಲಾ ಎಲ್ಲಿಲ್ಲದ ಖುಷಿ. ಶೇತಮ್ಮ ಮತ್ತು ನಮ್ಮ ಭಾವನವರ ಮುಖದಲ್ಲಿ ಒಟ್ಟಿಗೆ ಸಾವಿರ ಸಾವಿರ ನಕ್ಷತ್ರಗಳು ಹೊಳೆಯುತ್ತಿದ್ದವು. ಮೊಮ್ಮಗಳ ಮೇಕಪ್, ಕಾಸ್ಟ್ಯೂಮ್, ಭಾವ, ಆಂಗಿಕ, ಇತ್ಯಾದಿಗಳ ಬಗ್ಗೆ ನಾನೂ ಅಮ್ಮ ಹೆಮ್ಮೆಯಿಂದ ಮಾತಾಡಿಕೊಂಡೆವು. ಅವಳು ಡೈಲಾಗ್ ಹೊಡೆದ ತಕ್ಷಣ ಸಾಕವ್ವನ್ನ ಕಣ್ಣುಗಳು ಅರಳಿ ಜೀವಕ್ಕೆ ಜೀವ ಬಂದಂತ ಮುಖಭಾವನ್ನು ಪಕ್ಕದಲ್ಲಿದ್ದ ನಾನು ಗಮನಿಸಿದೆ. ನನಗೂ, ಶೇತಮ್ಮ ಬೇಲೂರಿನಲ್ಲಿದ್ದಾಗ ಒಬ್ಬ ಒಳ್ಳೇ ಗಾಯಕಿ ಆಗಬೇಕು. ರಂಗದ ಮೇಲೆ ಹಾಡುಗಳನ್ನು ಹಾಡಬೇಕು ಅನ್ನುವ ಹೆಬ್ಬಯಕೆ ಇತ್ತು. ಆ ಕನಸು ಹಾಗೆ ಉಳಿದಿತ್ತು. ಅದನ್ನೆಲ್ಲಾ ನಮ್ಮ ನಿಸರ್ಗ ಪೂರೈಸಿದಳು ಇನ್ನು ಮುಂದೆಯೂ ಪೂರೈಸುತ್ತಾಳೆ ಅನ್ನುವ ಸಂತೋಷಕ್ಕೆ ನನ್ನೊಳಗಿನ ಆಸೆ ಗರಿಬಿಚ್ಚಿ ಹಾರತೊಡಗಿತು.
ಇದಾದ ಮೇಲೆ ಮುಂದಿನ ಸೀನಲ್ಲಿ ನನ್ನ ಮಗ ಸಹೃದಯ ಕಾಗೆಯ ವೇಷದಲ್ಲಿ ರಂಗದ ಮೇಲೆ ಬಂದ. ಮತ್ತೆ ಎಲ್ಲರೂ ಖುಷಿ ಪಡುತ್ತಾ ಅಮ್ಮ ಅವನ ವೇಷವನ್ನು ಕುರಿತು ಮಾತಾಡುತ್ತಾ ಮೈದುಂಬಿ ನಾಟಕ ನೋಡುತ್ತಿದ್ದರು. ಸಹೃದಯನನ್ನು ನೋಡುತ್ತಾ ನೋಡುತ್ತಾ ನಾನು ಕುವೆಂಪು ಅವರ ‘ನನ್ನ ಗೋಪಾಲ’ ಮತ್ತು ‘ಕಿಂದರಿ ಜೋಗಿ’ ನೆನಾಪಾಗಿ ನನ್ನ ಭಾವದ ಆವರಣವನ್ನು ಮತ್ತಷ್ಟು ವಿಸ್ತರಿಸಿತು. ಉಳಿದ ಎಲ್ಲಾ ಮಕ್ಕಳ ಅಭಿನಯವನ್ನು ಮಾತಾಡುತ್ತಲೇ ಅಮ್ಮ ವಿಜಯ ನಗರ ಬಿಂಬದ ರಂಗ ಪರಿಚಾರಿಕೆಯನ್ನು ಶ್ಲಾಘಿಸಿದರು. ಮಕ್ಕಳಲ್ಲಿ ಮಗುವಾಗಿ ನಾಟಕ ಬಾಯ್ ಬಾಯ್ ಬಿಟ್ಕೊಂಡು, ಹುಬ್ಬೇರಿಸಿ, ಆಶ್ಚರ್ಯ, ಕುತೂಹಲದಿಂದ ನಗರಕ್ಕೆ ಬಂದ ನವಿಲು ನೀರು ಹುಡುಕುವ ಕಥಾವಸ್ತುವುಳ್ಳ ನಾಟಕವನ್ನು ಮನದಣಿಯೇ ನೋಡಿದರು ಅಮ್ಮ. ನೆರದಿದ್ದ ಎಲ್ಲಾ ಪೋಷಕರು ಉಮಾಶ್ರೀಯಂತಹ ರಂಗ ಜೀವದ ಎದುರು ತಮ್ಮ ತಮ್ಮ ಮಕ್ಕಳು ನಾಟ್ಕ ಮಾಡುತ್ತಿದ್ದಾರೆ ಎಂಭ ಧನ್ಯತಾ ಭಾವದಿಂದ ನಾಟಕದೊಳಗೆ ಲೀನವಾದರು.
ನಾಟಕ ಮುಗಿದ ಕೂಡಲೇ ಚಿಣ್ಣರ ಚಿತ್ತಾರದಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲಾ ಪ್ರಶಂಸಾ ಪತ್ರ ವಿತರಿಸುವುದಿತ್ತು. ಅಮ್ಮ ಹೊರಡುವ ಭರದಲ್ಲಿದ್ದರು. ಆಯೋಜಕರು ಒಂದಿಬ್ಬರು ಮಕ್ಕಳಿಗೆ ಪ್ರಶಂಸಾ ಪತ್ರ ವಿತರಿಸಿ ಹೋಗಿ ಅಂದ್ರು. ಆಯಿತು ಅಂದು ಒಂದಿಬ್ಬರಿಗೆ ಪ್ರಶಸ್ತಿ ವಿತರಿಸಿದರು. ಸಚಿವರು ಹೊರಡುತ್ತಾರೆ ಅನ್ನುವಷ್ಟರಲ್ಲಿ ಅಮ್ಮ ‘ಇಲ್ಲಾ ಎಲ್ಲಾ ಮಕ್ಕಳಿಗೆ ಪ್ರಶಂಸಾ ಪತ್ರ ವಿತರಿಸಿ ಹೋಗುತ್ತೇನೆ’ ಅಂದ್ರು. ಪತ್ರ ಕೊಡುವಾಗ ಎಲ್ಲಾ ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಬಾಲ ಕಲಾವಿದರಿಗೆ ಚೇರ್ ಹಾಕಿ ಕೂರಿಸಿ ಮುತ್ತಿಟ್ಟು ಮುದ್ದಾಡುತ್ತಾ, ನಾಟಕದಲ್ಲಿ ಆ ಮಕ್ಕಳು ಮಾಡಿದ ಪಾತ್ರದ ಆಂಗಿಕವನ್ನೇ ಮತ್ತೆ ರೀಪೀಟ್ ಮಾಡಿ ಮಕ್ಕಳಂತೆ ಅಭಿನಯಿಸಿ ಇಡೀ ಕಾರ್ಯಕ್ರಮವನ್ನು ಲವಲವಿಕೆಯಿಂದ ಇರುವಂತೆ ಮಾಡಿದರು.
ಸಹೃದಯ ಪ್ರಶಂಸಾ ಪತ್ರ ಪಡೆಯುವ ಸರದಿ ಬಂತು. ಅವನ ಹೆಸರು ಕರೆದ ಕೂಡಲೇ ಉಮಾಶ್ರೀ ಅಮ್ಮಮ್ಮಾ ಅಂತ ಓಡಿ ಬಂದು ಯಾರು ಹೇಳಿಕೊಡದೇ ಅಮ್ಮನ ಕಾಲಿಗೆರಗಿ ನಮಸ್ಕರಿಸಿದ. ಇಡೀ ನನ್ನ ಕುಟುಂಬದ ಎಲ್ಲರ ಕಣ್ಣುಗಳು ತೇವ ಆಗಿಬಿಟ್ಟಿದ್ದವು. ಪ್ರತೀ ವರ್ಷ ಏಪ್ರಿಲ್ ಹತ್ತು ಶಾಲೆಗಳೆಲ್ಲಾ ರಜಾ ಇರುವ ಕಾರಣ ಅವನ ಜನುಮದಿನಕ್ಕೆ ಶಾಲೆಯಲ್ಲಿ ಸಿಹಿ ಹಂಚುವ ಪ್ರಮೇಯವೇ ಬಂದಿರಲಿಲ್ಲ. ಯಾವಾಗ್ಲೂ ಕೇಳೋನು ನಾನೂ ಚಾಕಲೇಟ್ ಕೊಡುತ್ತೇನೆ ಸ್ಕೂಲಲ್ಲಿ ಅಂತ. ಈ ಸಲದ ಜನುಮದಿನವನ್ನು ಬಿಂಬದಲ್ಲಿ ಆಚರಿಸಿಕೊಂಡಿದ್ದನ್ನು ಅಲ್ಲೇ ಅಮ್ಮನ ಎದುರು ಮೆಲುಕು ಹಾಕಲಾಯಿತು. ಇದೆಲ್ಲಾ ಸಂದರ್ಭದಲ್ಲೂ ಸಚಿವೆ ಅನ್ನುವ ಯಾವ ಬಿಗುಮಾನ, ಪ್ರೋಟೋಕಾಲ್ ಎಲ್ಲವನ್ನು ಮೂಟೆ ಕಟ್ಟಿಟ್ಟು ಇಡೀ ಬಿಂಬದ ಮಕ್ಕಳ ನಾಟಕವನ್ನು ಮತ್ತು ಮಕ್ಕಳ ಕಾರ್ಯಕ್ರಮವನ್ನು ಸವಿದರು ಅಮ್ಮ . ನಿಸರ್ಗ ಕೂಡ ತನ್ನ ಅಜ್ಜಿ ಸಾಕವ್ವನಿಂದಲೇ ಪ್ರಶಂಸಾ ಪತ್ರ ಪಡೆದಳು.
ಅಮ್ಮನಿಗೆ ಮಾತಾಡಲು ಹೇಳಿದರು. ಬೀದರಕ್ಕೆ ಹೋಗುವ ತುರ್ತಿತ್ತು. ಅದರ ನಡುವೆಯೂ ಪೋಷಕರನ್ನು ಕುರಿತು ಮಾತಾಡುತ್ತಾ ‘ನಮ್ಮ ಸಮಯವನ್ನು ಮಕ್ಕಳಿಗೆ ಕೊಡಲೇ ಬೇಕು. ಹೌದು ಎಲ್ಲರೂ ಒತ್ತಡದಲ್ಲೇ ಬದುಕು ಮಾಡುತ್ತಿದ್ದೀರಿ ಆದರೆ ಮಕ್ಕಳಿಗೆ ಸಮಯ ಕೊಡಲಿಲ್ಲವಾದರೆ ನಮ್ಮ ಮಗುವಿನ ಭವಿಷ್ಯಕ್ಕೆ ನಾವೇ ಮುಳುವಾಗುತ್ತೇವೆ. ನಾಟಕ ನೃತ್ಯ ಸಂಗೀತ ತರಗತಿಗೆ ಶೋಕಿಗಾಗಿ , ಮನೆಯಲ್ಲಿ ಮಕ್ಕಳ ಕಾಟ ತಡೆಯೋದು ಹೇಗೆ ಅಂತ ಸೇರಿಸಬೇಡಿ. ಅಥವಾ ರಿಯಾಲಿಟಿ ಶೋಗಳ ಅಥವಾ ಪ್ರಚಾರದ ಬೆನ್ನಿಗೆ ಬಿದ್ದು ರಂಗ ಶಿಬಿರವೋ ಅಥವಾ ಇನ್ನಾವುದೇ ಬೇಸಿಗೆ ಶಿಬಿರಕ್ಕೋ ಸೇರಿಸಬಿಡೋಣಾ ಅಂತ ಯೋಚಿಸಬೇಡಿ. ಪ್ರೀತಿಯಿಂದ ಮಕ್ಕಳ ಆಸಕ್ತಿಗೆ ಅನುಗುಣವಾಗಿ, ಮಕ್ಕಳನ್ನು ರಂಗಭೂಮಿಯ ಕಡೆ ಕರೆತನ್ನಿ. ಅದು ಅವರನ್ನು ಮನುಷ್ಯರನ್ನಾಗಿ ಮಾಡುತ್ತಾ ಬದುಕನ್ನು ಬಹುಮುಖವಾಗಿ ನಿರ್ಮಿಸಿಬಿಡುತ್ತದೆ’ ಅಂತ ಹೇಳುತ್ತಾ ‘ನನ್ನ ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುವಾಗ ನಾಟ್ಕ ಸಿನೆಮಾ ಅಂತ ನಾನು ಸಮಯ ಕೊಡಲು ಆಗುತ್ತಿರಲಿಲ್ಲ. ಹೀಗಿರುವಾಗ ಬೇಸಿಗೆ ರಜೆಯಲ್ಲಿ, ದಸರಾ ರಜೆಯಲ್ಲಿ ನಾಟಕ ಸಿನೆಮಾ ಎಲ್ಲಾ ಬಿಟ್ಟು ಮಕ್ಕಳ ಜೊತೆ ಇರುತ್ತಿದ್ದೆ. ಅವರನ್ನು ಸುತ್ತಾಡಿಸುತ್ತಿದೆ. ಒಮ್ಮೊಮ್ಮೆ ನಾಟ್ಕ ಅಥವಾ ಸಿನೆಮಾ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಎಷ್ಟು ಸಾಧ್ಯವೋ ಅಷ್ಟು ರಜಾ ದಿನಗಳಲ್ಲಿ ಮಕ್ಕಳ ಜೊತೆ ಇರುತ್ತಿದ್ದೆ’ ಅಂತ ತನ್ನ ಬದುಕಿನ ನೆನಪಿನ ಬುತ್ತಿಯನ್ನು ಪ್ರೇಕ್ಷಕರ ಎದುರು ತೆರೆದಿಟ್ಟರು. ಕೊನೆಯದಾಗಿ ಚಿಣ್ಣರ ಚಿತ್ತಾರದ ನೀರು ನವಿಲು ನಾಟ್ಕ ನಡೆಯವಾಗ ಪರದೆ ಎಳೆಯುವ ಮತ್ತು ಮಕ್ಕಳನ್ನು ಸೈಡ್ ವಿಂಗ್ ನಿಂದ ಸರಿಯಾಗಿ ಕಳಿಸಲು ಸಹಕರಿಸುವ ರಂಗದ ಹಿಂದೆ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಸ್ಕಂದ ಅನ್ನುವ ವಾಲೆಂಟಿಯರ್ ಪುಟಾಣಿಯನ್ನು ಕರೆದು ರಂಗಭೂಮಿ ನಾಯಕತ್ವ ಕಲಿಸಿಕೊಡುತ್ತದೆ ಅಂತ ಅವನನ್ನು ಬಿಗಿದಪ್ಪಿ ಮುದ್ದಾಡಿದರು. ಜೊತೆಗೆ ‘ಸೆಟ್ ಕೆಲಸ ಎಲ್ಲಾ ಮಾಡಿದಿಯಾ ಪುಟ್ಟಾ ? ಮೊಳೆ ಹೊಡೆಯೋಕೆ ಬರುತ್ತಾ ಕಂದಾ ? ಈ ನಾಟಕದ ಸೆಟ್ ನಲ್ಲೂ ಕೆಲಸ ಮಾಡಿದ್ದೀಯಾ ಅಂತ ಕೇಳಿದರು ? ಅದಕ್ಕೆ ಸ್ಕಂದ ಹೌದು ಅನ್ನುವಂತೆ ತಲೆಯಾಡಿಸಿದ.
ಮಕ್ಕಳ ಜೊತೆ ಕೆಲಸ ಮಾಡಲು ತುಂಬಾ ತಾಳ್ಮೆ ಇರಬೇಕಾಗುತ್ತೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳನ್ನು ರಂಗದ ಮೇಲೆ ತರುವುದು ಹುಡುಗಾಟವಲ್ಲ ಅಂತ ಮನ ತುಂಬಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಅಷ್ಟೇ ಅಲ್ಲ ಕ್ರಾಫ್ಟ್ ಹೇಳಿಕೊಟ್ಟ ಲತಾ ನಾರಯಣ್, ಚಿತ್ರಕಲೆ ಹೇಳಿಕೊಟ್ಟ ವಿಶ್ವನಾಥ್ ಮಂಡಿ, ಕಥೆ ಹೇಳಿದ ಅನಘಾ, ಅಭಿನಯ ಮತ್ತು ಮೈಮ್ ಹೇಳಿಕೊಟ್ಟು ನೀರು ನವಿಲು ನಾಟ್ಕ ರಚಿಸಿ ನಿರ್ದೇಶಿಸಿದ ಡಾ ಕಶ್ಯಪ್, ಮಕ್ಕಳನ್ನು ತುಂಬಾ ಒಲುಮೆಯಿಂದ ಕಾಣುತ್ತಲೇ ನಾಟ್ಕ ಹೇಳಿಕೊಟ್ಟ ಸುಷ್ಮಾ, ನಾಟಕಕ್ಕೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಮಾಲ, ಬೃಂದಾ ಫೋಟೋ ಹಿಡಿಯುತ್ತಿದ್ದ ಸಾತ್ವಿಕ್ ಮತ್ತು ಬಿಂಬದ ಒಟ್ಟು ಶಕ್ತಿಯಾದ ಶೋಭಾ ವೆಂಕಟೇಶ್ ಅವರನ್ನು ಅಭಿನಂದಿಸಿ ಹೊರಟರು. ಹೊರಡುವ ಮುನ್ನ ನಾನು ಸಚಿವೆಯಾಗಿ, ನಟಿಯಾಗಿ ಬಂದಿಲ್ಲ ಈ ಕಾರ್ಯಕ್ರಮಕ್ಕೆ ಒಬ್ಬ ಅಜ್ಜಿಯಾಗಿ ಬಂದಿದ್ದೇನೆ ಎಂದು ನೆರೆದಿದ್ದ ಎಲ್ಲರಿಗೂ ನಮಸ್ಕಾರ ಹೇಳಿ ದಡಬಡ ವೇದಿಕೆ ಇಳಿಯುವ ಹೊತ್ತಿಗೆ ಸುತ್ತಲೂ ಕಾಯುತ್ತಿದ್ದ ಮಕ್ಕಳು ಹುರ್ರೇ ಹುರ್ರೇ… ಐಸಾ ಐಸಾ…. ಹೇಳುತ್ತಾ ಗ್ರೂಫ್ ಫೋಟೋಗಾಗಿ ಸಾಕವ್ವನ ಸುತ್ತ ಬಂದರು. ಸಾಕವ್ವನ ಕಣ್ಣುಗಳಲ್ಲಿ ಧನ್ಯತಾ ಭಾವ ಇತ್ತು. ಮಕ್ಕಳೆಲ್ಲಾ ಚೀಸ್ ಹೇಳುವ ಬದಲು ಇಡ್ಲೀ ……..ರೊಟ್ಟೀ ……ಚಟ್ನೀ…….ಪೂರೀ ……ಅಂತ ಹಲ್ಲುಬಿಟ್ಟು ನಕ್ಕರು. ಫೋಟೋ ಕ್ಲಿಕ್ ಆಯಿತು. ಕೆಲವೇ ನಿಮಿಷಗಳಲ್ಲಿ ಅಮ್ಮ ಪ್ರಯಾಣ ಮಾಡುವುದಿತ್ತು. ರಿಸರ್ವ್ ಆಗಿದ್ದ ಟ್ರೈನ್ ಹಿಡಿಯುವ ವೇಗದಲ್ಲಿ ಪಟ ಪಟ ನೋಡು ನೋಡುತ್ತಿದ್ದಂತೆ ಸಭಾಂಗಣದಿಂದ ಮಂಗ ಮಾಯಾ ಆಗಿಬಿಟ್ಟರು.
ನಿಸರ್ಗಳ ತಂದೆ ಮತ್ತು ಶೇತಮ್ಮ ಮತ್ತು ನಿಸರ್ಗ ತೇರದಾಳಕ್ಕೆ ಹೋಗುವುದಿತ್ತು. ಎಲ್ಲರೂ ದಡ ಬಡ ಕಾರ್ ಹತ್ತಿದರು. ಹೊರಡುವ ಮುನ್ನ ಸಾಕವ್ವನ ಮಗ ‘ಇಷ್ಟು ದಿನ ಅಮ್ಮನ ನಾಟಕ ಮುಗಿಸಿ ಬಸ್ಸೋ ರೈಲೋ ಹಿಡಿಯಬೇಕಿತ್ತು. ಈಗ ಮಗಳ ನಾಟ್ಕ ಮುಗಿಸಿಕೊಂಡು ಬಸ್ಸು ಹಿಡಿಯಬೇಕು ಅನ್ನುವ ಖುಷಿಯನ್ನು ರಂಗಭೂಮಿಯ ಮೇಲಿನ ಪ್ರೇಮವನ್ನು ಪ್ರಕಟಪಡಿಸುತ್ತಲೇ ತುಸು ಭಾವುಕರಾದರು. ಅಮ್ಮನನ್ನು ಕಳಿಸಿಕೊಟ್ಟ ವಿಜಯನಗರ ಬಿಂಬದವರು ಉಮಾಶ್ರೀ ಅವರನ್ನು ಕರೆಯದೇ, ಆಹ್ವಾನ ಪತ್ರಿಕೆ ಮುದ್ರಿಸದೇ ಕನ್ನಡದ ಸಾಕವ್ವ ಅದರಲ್ಲೂ ಸಚಿವೆ ಕಾರ್ಯಕಮಕ್ಕೆ ಬಂದು ಇಡೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಮಗುವಾಗಿದ್ದುದನ್ನು ಕಂಡು ‘ನಮ್ಮ ರಂಗಭೂಮಿಯ ಕಲಾವಿದೆ, ನಮ್ಮ ಕಲಾವಿದೆ ‘ ಅಂತ ಒಲುಮೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಇದೆಲ್ಲಾ ಸಾಧ್ಯ ಆಗೋದೇ ರಂಗಭೂಮಿಯಿಂದ ಅಂತ ಪ್ರೀತಿಯ ಮಾತುಗಳನ್ನು ಬಂದಿದ್ದ ಎಲ್ಲಾ ಪೋಷಕರಿಗೆ ಹೇಳುತ್ತಿದ್ದರು. ಪೋಷಕರೆಲ್ಲಾ ಅಮ್ಮನ ಸರಳತೆ ಕಂಡು ಹೆಮ್ಮೆಯ ಮಾತುಗಳನ್ನಾಡಿದರು.



hey sooooo fine
Very nice
Thumba chennagide .
shubhodaya thumbha arta poornavada lekana odi kusi aithu………………….. danyavada sir
very nice
nimma anubhavada nudigalu thumba chennagi moodi bandide raghunanadan avare….thumba vanadnegalu….makkalu thumba muddagi abhinayisidaru…certificate koduvaga makkalannu kurchiyalli koorisi kotta shretshata kalavide umashree avarige hats off…avadhi thandakku thanks