
ನಾನು ಮತ್ತು ಉಮಾಶ್ರೀ ಅವರು ಇಬ್ಬರೇ ಮಾಡಿದ ಮದುವೆ ಮಾತುಕತೆ
ಉಮಾಶ್ರೀ ಅವರು ಬಂದು ಹೋದ ಮೇಲೆ ಅವರ ಉತ್ತರಕ್ಕಾಗಿ ನಾ ರಾತ್ರಿ ತನಕ ಕಾದೆ. ಊಟ ಮಾಡಿ ಮಲಗುವ ಹೊತ್ತಿಗೆ ಉಮಾಶ್ರೀ ಅವರು ಕರೆ ಮಾಡಿ ‘ರಘು ನಿನ್ನ ತಂಗಿ, ನನಗೆ ನನ್ನ ಮಗನಿಗೆ ಪೂರ್ತಿ ಒಪ್ಪಿಗೆನಪ್ಪಾ. ನಾಳೆ ಬೆಳಿಗ್ಗೆ ಮಾತುಕತೆ ಮಾಡೋಣ?’ ಅಂದ್ರು. ನಾನು ಅದಕ್ಕೆ, ‘ನಮ್ಮಜ್ಜಿ ತಾತನಿಗೆ ಹೇಳಿ ಕರೆಸೋಣ ಅಮ್ಮಾ’ ಅಂದೆ. ಅದಕ್ಕವರು ‘ಇನ್ನೊಂದೆರಡು ದಿನ ಬಿಟ್ಟು ನಮ್ಮ ಕಡೆಯವರು ಮತ್ತು ನಿಮ್ಮ ಕಡೆಯವರಿಗೆಲ್ಲಾ ಹೇಳೋಣಾ’ ಅಂದ್ರು. ‘ಮತ್ತೆ ಯಾರು ಯಾರು ಮದುವೆ ಮಾತುಕತೆ ಮಾಡೋದು’? ಅಂತ ನಾ ಅವರನ್ನು ಕೇಳಿದೆ. ಅದಕ್ಕೆ ಉಮಾಶ್ರೀ ಅವರು ‘ನಾನೂ ನೀನು’ ಎಂದು ಪಟ್ಟಂತ ಅಂದುಬಿಟ್ಟರು. ನಾನೂ ಕೊಡಲೇ ‘ಆಯಿತು’ ಅಂದುಬಿಟ್ಟೆ. ‘ಸರಿ ಹಾಗಿದ್ರೆ, ನೀನು ನಾಳೆ ಬೆಳಿಗ್ಗೆ ನಮ್ಮ ಮನೆಗೆ ಏಳು ಗಂಟೆ ಹೊತ್ತಿಗೆ ಬಂದುಬಿಡು. ತಡ ಮಾಡಬೇಡ ನಾನು ಹತ್ತು ಗಂಟೆ ಹೊತ್ತಿಗೆ ಶೂಟಿಂಗ್ ಹೋಗಬೇಕು’ ಅಂದ್ರು.
ಉಮಾಶ್ರೀ ಅವರು ‘ನಾನು ನೀನು’ ಮದುವೆ ಮಾತುಕತೆ ಮಾಡೋಣ ಅಂದ ಕೂಡಲೇ ಇದೇನಪ್ಪಾ ಇಪ್ಪತ್ನಾಲ್ಕು ವರ್ಷದ ಹುಡುಗನ ಹತ್ತಿರ ವರನ ತಾಯೊಬ್ಬರು ಮದುವೆ ವಿಷಯವಾಗಿ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳೋಣ ಬಾ ಎಂದು ಕರೆಯುವುದು ಆಶ್ಚರ್ಯವನ್ನು ಮತ್ತು ಗಾಬರಿಯನ್ನು ಉಂಟು ಮಾಡಿತ್ತು ನನಗೆ. ಭಯವೂ ಆಯಿತು, ಅಲ್ಲಿ ಹೋಗಿ ಹೋಗಿ ಏನು ಮಾತಾಡೋದು ಅಂತ. ಏನೇನು ಮಾತಾಡಬೇಕು ಅಂತ ಯಾರನ್ನಾದರೂ ಕೇಳೋಣ… ಅದೂ ಬೇಡವೆನಿಸಿತು. ಉಮಾಶ್ರೀ ಅವರ ಅನುಭವ ದೊಡ್ಡದು. ನಾನು ಇನ್ನೂ ಚಿಕ್ಕ ಹುಡುಗ, ಅವರು ಹೇಳುತ್ತಿರುವುದು ಸರಿ ಹೋಗಿ ಮಾತಾಡೋಣ ಅವರ ಹತ್ತಿರ ಅಂದುಕೊಂಡೆ. ಯಾರನ್ನಾದರೂ ಅತೀ ಹೆಚ್ಚು ಪ್ರೀತಿಸಿದ್ರೆ ಅವರ ಬಗೆಗಿನ ಜವಾಬ್ದಾರಿಯನ್ನು ಇತರರು ಹೆಚ್ಚು ನಂಬುತ್ತಾರೆ ಅಂತ ಉಮಾಶ್ರೀ ಅವರು ನನ್ನನ್ನು ಮದುವೆ ಮಾತುಕತೆಗೆ ಕರೆದಾಗ ಮತ್ತೆ ಸ್ಪಷ್ಟ ಆಯಿತು. ಜವಾಬ್ದಾರಿ, ವಿಶ್ವಾಸ ಮತ್ತು ನಿರ್ಧಾರಗಳನ್ನು ಪೂರೈಸಲು ಯಾವ ವಯಸ್ಸು, ಯಾವ ಹಿರಿತನ ಬೇಕಿಲ್ಲಾ. ಮತ್ತೂ ಮತ್ತೂ ನಂಬುವ ಪ್ರೀತಿಯೊಂದಿದ್ದರೆ ಸಾಕು ಅಂತನಿಸಿ ನಾಳೆ ಬೆಳಿಗ್ಗೆ ಉಮಾಶ್ರೀ ಅವರ ಮನೆಗೆ ಹೋಗೋಣ ಅಂತ ಗಟ್ಟಿಯಾಗಿ ಅಂದುಕೊಂಡೆ. ಹೋಗೋದೇನೋ ಸರಿ ಏನು ಮಾತಾಡೋದು. ಅವರು ವಡವೆ ವಸ್ತ್ರ ಅದೂ ಇದೂ ಅಂತ ಜೋರಾಗಿ ಕೇಳಿದ್ರೆ ಏನ್ ಮಾಡೋದು. ಮದ್ವೇನಾ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಾಡಿಕೊಡು ಅಂದ್ರೆ ಎಲ್ಲಿಗೆ ಹೋಗೋದು. ಹಿಂಗೆ ಸಾವಿರ ಸಾವಿರ ಯೋಚನೆಗೆಳು ರಾತ್ರಿ ಪೂರಾ ನನ್ನ ಬುದ್ಧಿ ಎಚ್ಚರಿಸುತ್ತಿತ್ತು. ಆದ್ರೆ ಅದಕ್ಕೆಲ್ಲಾ ದುಮ್ಮಿಕ್ಕುವ ಭಾವನೆ ಏನಾದ್ರೂ ಒಂದು ಮಾರ್ಗ ಇದ್ದೇ ಇದೆ ಅಂತ ಸಮಾಧಾನ ಮಾಡಿ ಧೈರ್ಯ ತುಂಬುತ್ತಿತ್ತು. ಕೊನೆಗೆ ಎಷ್ಟೇ ಕಷ್ಟ ಆದರೂ ನನ್ನ ಕೈಲಾದ ಮಟ್ಟಿಗೆ ಮದ್ವೆ ಬೇಲೂರಿನಲ್ಲಿ ಮಾಡಿಕೊಡುತ್ತೇನೆ ಅಂತ ಹೇಳಿ ಬಿಡೋಣಾ ಅಂತ ಮನಸಿನಲ್ಲಿ ಗಟ್ಟಿ ಮಾತನ್ನು ಉಳಿಸಿಕೊಂಡು ಮಾತುಕತೆಗೆ ಸಿದ್ಧನಾದೆ.

ನನ್ನ ಹತ್ತಿರ ಆರು ಕಾಸು ಮೂರು ದುಡಿಯೋ ಮನೆ ಪಾಠ ಬಿಟ್ಟು ಬೇರೆ ದುಡಿಮೆಯಿಲ್ಲ, ದುಡ್ಡಿಲ್ಲ ಕಾಸಿಲ್ಲ, ಆಸ್ತಿ ಪಾಸ್ತಿನೂ ಇಲ್ಲಾ, ಮದುವೆ ಮಾಡೋ ಶಕ್ತಿ ಮೊದಲೇ ಇಲ್ಲಾ. ಮದ್ವೆ ಮಾಡೋ ವಿಷಯದಲ್ಲಿ ಇರೋದು ಬರೀ ಇಲ್ಲಗಳೆ. ಹೀಗಿರುವಾಗ ನನ್ನ ಹತ್ತಿರ ಇದ್ದವು ತಂಗಿಯ ಮೇಲಿನ ಮತ್ತೆ ಮತ್ತೆ ಬೀಜವಾಗಿ, ಮೊಗ್ಗಾಗಿ ಕಾಯಾಗಿ ಹಣ್ಣಾಗುವ ಪ್ರೀತಿ, ಅಜ್ಜಿಯ ಬೆಚ್ಚನೆಯ ಮಡಿಲು, ತಾತನ ಮಹತ್ವಾಕಾಂಕ್ಷೆ, ಸದಾ ನಮ್ಮಪ್ಪನಿಂದ ನೋವನ್ನೇ ಉಂಡು ಉಂಡೂ ಮಕ್ಕಳಿಗಾಗಿ ಕನಸು ಮಾತ್ರ ಕಾಣಬಲ್ಲ ಅಸಹಾಯಕ ತಾಯಿ, ಅಣ್ಣ, ಅಕ್ಕ ಅಂದ್ರೆ ತನ್ನೆಲ್ಲವನ್ನೂ ಕೊಟ್ಟುಬಿಡೋಣ ಅನ್ನುವ ತಮ್ಮ, ಮತ್ತೆ ತನ್ನ ಎಲ್ಲಾ ಜವಾಬ್ದಾರಿಗಳನ್ನು ಮೈಮರೆತು ಮರೆತು ಕುಡಿತ, ಹಿಂಸೆ, ಹೊಡೆತ ಬಡಿತ ಬೈಗುಳ ಇವುಗಳಲ್ಲೇ ಸದಾ ನಿರುಮ್ಮಳವಾಗಿರುತ್ತಿದ್ದ ತಂದೆ, ಜೊತೆಗೆ ಒಂದಷ್ಟು ಕನಸುಗಳು, ಬದುಕಿನ ಬಗೆಗೆ ಇದ್ದ ಮಹತ್ವಾಕಾಂಕ್ಷೆ. ನನ್ನ ತಂಗಿ ಮದುವೆ ಮಾಡೋಕೆ ಎಷ್ಟೊಂದು ಶಕ್ತಿಗಳು ನನ್ನ ಬಳಿ ಇವೆ ಅಂತ ಉಮಾಶ್ರೀ ಅವರ ಮನೆಗೆ ಬೆಳಿಗ್ಗೆ ಆರು ಮೂವತ್ತಕ್ಕೆ ಹೋದೆ. ಈ ಹಿಂದೆ ಸಿನಿಮಾದಲ್ಲೋ ನಾಟಕದಲ್ಲೋ ಯಾವುದಾದ್ರೂ ಅವಕಾಶ ಕೊಡಿಸಿ ಅಂತ ಕೇಳೋಕೆ ಅವರ ಮನೆಗೆ ಹೋಗಿದ್ದೆ. ಈಗ ಬೀಗ ಸಂಬಂಧ ಅಂತ ಹೋದೆ. ಇದೆಲ್ಲಾ ಹೀಗೆ ಆಗುತ್ತೆ ಅಂತ ಯಾವ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ದೇಶ ಕಾಲ ಕೂಡಿಬರಬೇಕು ಅನ್ನೋದ್ರಲ್ಲಿ ಕಾಲ ಅನ್ನೋದು ಇದೇನಾ ?
ಅವತ್ತು ಶಿವರಾತ್ರಿ ಹಬ್ಬ. ತೋರಣ ಕಟ್ಟಿತ್ತು. ಹಬ್ಬದ ವಾತಾವರಣ. ಮನೆ ಪೂರ್ತಿ ಸ್ವಚ್ಚವಾಗಿತ್ತು. ಅವರ ಮನೆ ಕಲ್ಲಿನ ಮೆಟ್ಟಿಲುಗಳು ಪಳ ಪಳ ಕನ್ನಡಿ ತರ ಹೊಳಿತಿತ್ತು. ಬೆರಳಲ್ಲಿ ಸವರಿದರೆ ಜುಯಿಕ್ ಅಂತ ಜಾರಿ ಹೋಗುವಷ್ಟು ನೆಲ,ಗೋಡೆ ಮತ್ತು ಮೆಟ್ಟಿಲುಗಳು ಸ್ವಚವಾಗಿದ್ದವು. ಅದೆಷ್ಟೋ ಸಿನಿಮಾಗಳಲ್ಲಿ ಡಬ್ಬಲ್ ಮೀನೀಂಗ್ ಡೈಲಾಗ್ ಮಾತಾಡಿ, ರಂಗದ ಮೇಲೆ ಹಗಲೂ ರಾತ್ರಿ ಬಣ್ಣ ಹಚ್ಚಿದ ಪಾತ್ರಗಳ ಬೆವರು, ನಾಟಕಕ್ಕಾಗಿ ಊರೂರು ಸುತ್ತಿದ ಶ್ರಮ, ಅವರ ಮನೆಯ ಸ್ವಚ್ಚತೆ ಮತ್ತು ಕಾಳಜಿಯಲ್ಲಿ ಸುಂದರವಾಗಿ ಕಾಣುತಿತ್ತು. ಇಷ್ಟೊಂದು ಅಚ್ಚುಕಟ್ಟಾದ ಮನೆಯನ್ನು, ‘ನಮ್ಮಮ್ಮ’ ಅನ್ನುವ ಹೆಸರಿಟ್ಟು ಪ್ರೀತಿ ತೋರಿದ ಮನೆಯನ್ನು ನೋಡಿದ್ದು ನಾನು ಅದೇ ಮೊದಲು.
ಸರಿ ನಾನು ಅವರ ಮನೆ ಒಳಗೆ ಹೋದೆ. ಉಮಾಶ್ರೀ ಅವರು ಪೂಜಾ ಸಾಮಗ್ರಿಗಳನ್ನು ತೊಳಿತಿದ್ರು. ನನ್ನನ್ನು ನೋಡಿದ ಕೂಡ್ಲೇ ಒಳಗೆ ಕರೆದು ಕೂರಿಸಿ ಅರ್ಧಗಂಟೆ ಕೂತ್ಕೋ ಅಂತೇಳಿ ಮತ್ತೆ ಅವರು ದೇವರು ತೊಳೆಯುತ್ತಿದ್ದ ಸಿಂಕ್ ಹತ್ತಿರ ಹೋದರು. ಅವರು ಹೇಳಿದ್ದು ಏಳು ಗಂಟೆಗೆ ನಾನು ಆತ್ರ ಗೆಟ್ಟ ಆಂಜನೇಯನ ತರ ಆರೂವರೆ ಬಂದಿದ್ದೇನೆ ಅಂತ ನನ್ನ ಕಾಲ ಪ್ರಜ್ಞೆಯನ್ನು ನಿಂದಿಸಿಕೊಳ್ಳುತ್ತಾ ಕೂತುಕೊಂಡೆ. ಅವರ ಮನೆ, ಅವರ ಫೋಟೋಗಳು, ಇತ್ಯಾದಿಗಳನ್ನು ಕಣ್ಣಿಗೆ ಕಾಣುವಷ್ಟು ನೋಡುತ್ತಾ, ಕಾಣದಿದ್ದನ್ನು ಕಲ್ಪಿಸಿಕೊಳ್ಳುತ್ತಾ, ಮತ್ತೊಮ್ಮೆ ನೋಡಲು ಹಾಗೂ ಹುಡುಗ ಏನಾದರೂ ಬರುತ್ತಾರಾ ಅಂತ ಕಾಯುತ್ತಾ ಕಣ್ ಕಣ್ ಬಿಡುತ್ತಿದ್ದೆ ಮನಸು ತೆರೆದುಕೊಂಡು.
ಉಮಾಶ್ರೀ ಅವರ ಮನೆಯ ತೆರೆದ ಅಡುಗೆಕೋಣೆ ನಾ ಕೂತ ಜಾಗದಿಂದ ಚೆನ್ನಾಗಿ ಕಾಣುತ್ತಿತ್ತು. ಅವರ ಅರ್ಧಗಂಟೆ ಹೇಳಿದ ಸಮಯವಷ್ಟೂ ಅವರನ್ನೇ ನೋಡುತ್ತಿದ್ದೆ. ಅರ್ಧ ತೊಳೆದು ಇಟ್ಟಿದ್ದ ದೇವರು ಮತ್ತು ಸಾಮಗ್ರಿಗಳನ್ನು ಪಟ ಪಟ ತೊಳೆದು ದೇವರ ಮನೆಯಲ್ಲಿ ಇಟ್ಟು ಹೂ ಮುಡಿಸಿ ದೀಪ ಹಚ್ಚಿದರು. ಆಮೇಲೆ ಒಂದು ಒಲೆಯಲ್ಲಿ ಉಪ್ಪಿಟ್ಟು ಇನ್ನೊಂದು ಕಡೆ ತಂಬಿಟ್ಟಿಗೆ ಪಾಕ ಇಟ್ಟರು ಅನ್ನಿಸುತ್ತೆ. ಒಂದು ವೋವನ್ ಎರಡು ಬಾಯಿಯ ಗ್ಯಾಸ್ ಬಳಸಿ ಹದಿನೈದು ನಿಮಿಷಕ್ಕೆ ಶಿವ ರಾತ್ರಿಯ ಖಾದ್ಯಗಳನ್ನು ತಯಾರಿಸಿ, ಒಂದು ಕೈಯಲ್ಲಿ ತಂಟ ಇನ್ನೊಂದು ಕೈಯಲ್ಲಿ ರವೆ ಉಂಡೆ ಉಂಡೆ ಕಟ್ಟುವ ಅವರ ಲಯವನ್ನು ನೋಡಿದ್ರೆ ಸಿನೆಮಾದಲ್ಲಿ ಅವರನ್ನು ನಾನು ಕಂಡ ಒಟ್ಟು ಚಿತ್ರಣವೇ ಬದಲಾಗಿ ಹೋಗಿತ್ತು. ಎಲ್ಲಾ ಆಗಿ ಕೊನೆಗೆ ಹಣ್ಣುಗಳನ್ನೆಲ್ಲಾ ಕತ್ತರಿಸಿ ಎಲ್ಲಾ ದೇವರಮನೆಗೆ ತೆಗೆದುಕೊಂಡು ಹೋಗಿ ಇಟ್ಟು ಪೂಜೆ ಮಾಡಿ, ಅಡುಗೆ ಮನೆಯಲ್ಲಿ ಅಡುಗೆ ಮಾಡೇ ಇಲ್ಲವೇನೋ ಅನ್ನುವ ಹಾಗೆ ಎಲ್ಲಾ ಸ್ವಚಗೊಳಿಸಿ ಎರಡು ತಟ್ಟೆಯಲ್ಲಿ ಉಪ್ಪಿಟ್ಟು ರವೆ ಉಂಡೆ ತಂಟ ಮತ್ತು ಹಣ್ಣುಗಳನ್ನು ಇಟ್ಟುಕೊಂಡು ನನ್ನ ಬಳಿಗೆ ಬಂದರು. ಇಷ್ಟೆಲ್ಲಾ ಆಗಿದ್ದು ಅರ್ಧಗಂಟೆ ಒಳಗೆ. ನನಗೂ ಇಂದಿಗೂ ನಂಬಲೂ ತುಸು ಕಷ್ಟವೇ. ಆದ್ರೂ ನಿಜಾನೇ, ಅವರು ಹೇಳಿದಂತೆ ಏಳು ಗಂಟೆಗೆ ಉಪ್ಪಿಟ್ಟು ತಿನ್ನುತ್ತಾ ಮಾತು ಶುರು ಮಾಡಿದೆವು.
ಮಾತು ಶುರು ಮಾಡಿದ್ದೇ ಮೊದಲು ‘ರಘು ಮದುವೆ ಮಾಡಿಕೊಡಲು ತಯಾರಿ ಮಾಡಿಕೊಂಡಿದಿಯಾ ?’ ತಯಾರಿ ಅಂದ ಹುಡುಗ ಹುಡುಗಿ ಒಪ್ಪಿದ್ದಾರೆ ಮುಂದಿನ ತಯಾರಿ ಇನ್ನು ಮಾಡಬೇಕಮ್ಮ ಅಂದೆ. ಅದಕ್ಕವರು ‘ನೋಡಪ್ಪಾ ನಾ ವಡವೆ ವಸ್ತ್ರ ಅಂತೇನು ಕೇಳಲ್ಲ. ಮದುವೆ ಒಂದನ್ನು ಬೆಂಗಳೂರಿನಲ್ಲಿ ಮಾಡಿಕೊಡು. ನಾನೇ ಮದುವೆ ಮಾಡಿಕೋ ಬಹುದು ಆದ್ರೆ ಕೊನೆಯ ತನಕ ನಿನಗೆ ಮತ್ತು ನಿನ್ನ ತಂಗಿಗೆ ಸ್ವಾಭಿಮಾನದ ಕೊರಗು ಉಳಿದುಬಿಡುತ್ತೆ. ಅಷ್ಟೇ ಅಲ್ಲ ನೋಡೋವರ ಕಣ್ಣಿಗೆ ನೀನು ನಿನ್ನ ತಂಗಿ ಹಗುರವಾಗಿ ಕಾಣಬಾರದು ಅದಕ್ಕಾಗಿ, ಕಷ್ಟ ಆದರೂ ಪರಾವಾಗಿಲ್ಲ ಮದುವೆ ಮಾಡಿಕೊಟ್ಟು ಬಿಡಪ್ಪ’ ಅಂದ್ರು. ನಾನು, ‘ಬೆಂಗಳೂರಿನಲ್ಲಿ ನಿಮಗೆ ಅನುಕೂಲ ಆಗುವ ಹಾಗೆ ಮದುವೆ ಮಾಡಲು ನನಗೆ ಕಷ್ಟ ಆಗಬಹುದು ಅಮ್ಮಾ’ ಅಂದಿದ್ದಕ್ಕೆ ‘ಕಷ್ಟ ಏನಾಗಲ್ಲ ರಘು ನಿನ್ನ ಮಹತ್ವಾಕಾಂಕ್ಷೆಗಳು, ದಿಟ್ಟತೆ ಶಕ್ತಿ ಎಲ್ಲ ನನ್ನ ಕಣ್ಣಿಗೆ ಮತ್ತು ಮನಸಿಗೆ ಗೊತ್ತಾಗುತ್ತಿದೆ. ನಿನ್ನ ಕೈಲಿ ಎಲ್ಲವೂ ಸಾಧ್ಯವಿದೆ ಅಂತ ಹೇಳಿ ನನ್ನಲ್ಲಿ ಧೈರ್ಯ ತುಂಬಿ ಅವರ ಕೋಣೆಯೊಳಗೆ ಹೋಗಿ ತೆಳು ಈರುಳ್ಳಿ ಬಣ್ಣದ ಸೀರೆಯೊಂದನ್ನು ತಂದು ಕೈಗಿತ್ತು ಇದು ನಿಶ್ಚಿತಾರ್ಥಕ್ಕೆ ಅಂತ ಹೇಳಿಬಿಟ್ಟು ನಾ ಶೂಟಿಂಗ್ ತಯಾರಿಬರುತ್ತೇನೆ ಎಂದು ಒಳ ಹೋದರು. ಆ ಸೀರೆಯನ್ನು ನೋಡಿ ನನ್ನ ಕಣ್ಣು ಮತ್ತು ಮನಸು ಆದ್ರವಾಗಿಬಿಟ್ಟವು. ಅವರು ಹೊರ ಬರುವ ಹೊತ್ತಿಗೆ ಒಂದು ರೌಂಡ್ ಅತ್ತು ಮುಗಿಸಿ ಆ ಸೀರೆಯನ್ನು ನನ್ನ ಜೀವ ಅನ್ನುವಂತೆ ನೋಡುತ್ತಾ ಕೂತಿದ್ದೆ. ಉಮಾಶ್ರೀ ಅವರು ಒಳಗಿನಿಂದ ಬಂದರು. ಶೂಟಿಂಗ್ ಕಾರ್ ತಯಾರಾಗಿ ನಿಂತಿತ್ತು. ಹೊರಡುವ ಮುನ್ನ ‘ನಾಡಿದ್ದು ಇಬ್ಬರ ಕಡೆಯ ಹಿರಿಯರಿಗೂ ಹುಡುಗ ಹುಡುಗಿಯನ್ನು ತೋರಿಸಿಬಿಡೋಣ ಅಂದು, ನಾ ಕೊಟ್ಟ ಸೀರೆಗೆ ಶೇತಮ್ಮಳಿಗೆ ರವಿಕೆಯನ್ನು ಸರಿಯಾಗಿ ಹೊಲಿಸು’ ಅಂತೇಳಿ ಕಲ್ಲಂಗಡಿ ಹಣ್ಣು ತಿನ್ನುತ್ತಾ ಶೂಟಿಂಗ್ ಕಾರ್ ಹತ್ತಿದರು.
ಇದಾದ ಮೇಲೆ ಎರಡು ದಿನಕ್ಕೆ ಇಬ್ಬರ ಕಡೆಯವರು ಮತ್ತೆ ಚೂಡತ್ತಿಗೆ ಮನೆಯಲ್ಲಿ ಸೇರಿದೆವು. ಅಂದು ಊರಿಂದ ನಮ್ಮಜ್ಜಿ, ತಾತ, ತಾಯಿ, ತಮ್ಮ, ನಮ್ಮ ಕೋರಮಂಗಲದ ಅತ್ತೆ, ನಮ್ಮ ತಾಯಿ ಅಣ್ಣಂದಿರು ಮತ್ತು ಅಕ್ಕದಿಂದರನ್ನು ಕರೆಸಿದೆ. ಅವರೂ ತಮ್ಮ ಪತಿ, ಮಗಳು, ಅಳಿಯ ಬೀಗರು ಮತ್ತು ಅವರ ಗಂಡನ ಮನೆಯ ಕಡೆಯವರನ್ನು ಬಹಳ ಪ್ರೀತಿಯಿಂದ ಕರೆಸಿದ್ದರು. ಉಮಾಶ್ರೀ ಅವರು ವಿಚ್ಚೇದನ ಕೊಟ್ಟಿದ್ದರೂ ತಮ್ಮ ಗಂಡನ ಮನೆಯವರನ್ನು ಗೌರವಿಸುವುದನ್ನು ಕಂಡು ಮತ್ತು ಅವರಿಗಿರುವ ಜೀವನ ಪ್ರೇಮವನ್ನು ಕಂಡೂ ನನ್ನ ತಂಗಿ ತುಂಬಾ ಶಕ್ತವಾದ ಜಾಗಕ್ಕೆ ಹೋಗುತ್ತಿದ್ದಾಳೆ ಅಂತ ಖುಷಿ ಮತ್ತು ಸಮಾಧಾನವಾಯಿತು. ಎಲ್ಲರೂ ನನ್ನ ತಂಗಿಯನ್ನು ಮನಸು ಪೂರ್ತಿಯಾಗಿ ಒಪ್ಪಿದರು, ನಮ್ಮ ಕಡೆಯವರೂ ಕೂಡ ಉಮಾಶ್ರೀ ಅವರ ಮಗನನ್ನು ಒಪ್ಪಿದರು. ಇದಾದ ಮೂರು ದಿನಕ್ಕೆ ನಿಶ್ಚಿತಾರ್ಥ ಗೊತ್ತಾಯಿತು. ನೆಮ್ಮದಿ ಸಂಭ್ರಮ ಎಲ್ಲವೂ ಹೇಳಲಾರದ ಸಂತಸವನ್ನು ಉಂಟು ಮಾಡುತ್ತಿದ್ದರೂ ಜೇಬಲ್ಲಿದ್ದ ಐದುನೂರು ರೂಗಳು ಮಾತ್ರ ಅವ್ಯಕ್ತವಾದ ನೋವನ್ನು ಪಡುತ್ತಿತ್ತು.
ಬೇಲೂರು ರಘುನಂದನ್ ಕಾಲಂ : ನಾನು, ಉಮಾಶ್ರೀ ಇಬ್ಬರೇ ಮಾಡಿದ ಮದುವೆ ಮಾತುಕತೆ

Please don’t take it offensively, but I kept wondering how these sequence of events are relevant to society?. Please consider social impact/relevance while composing articles or write-ups.
Lovely writing. I fail to understand why this column named after Umashree. You could write and you do write well. Please name this column as ‘ನನ್ನ ತಂಗಿಯ ಮದುವೆ’ ಅಥವಾ ಅಣ್ಣ-ತಂಗಿ ಅಥವಾ something else. Dont mistake me I am diehard fan Umashree madam, I dont like you misusing it. May be she is your related, but she is more related to Karnataka. Anyway good prose writing.
Ananya preeti ya Anna
ಯಾರನ್ನಾದರೂ ಅತೀ ಹೆಚ್ಚು ಪ್ರೀತಿಸಿದ್ರೆ ಅವರ ಬಗೆಗಿನ ಜವಾಬ್ದಾರಿಯನ್ನು ಇತರರು ಹೆಚ್ಚು ನಂಬುತ್ತಾರೆ (Y). ಆ ವಯಸ್ಸಿನಲ್ಲಿ ನೀವು ಹೊತ್ತಿರಬಹುದಾದ ಜವಾಬ್ದಾರಿಯ ಬಗ್ಗೆ ಯೊಚಿಸುತ್ತಿದ್ದೆ
“ಜೇಬಲ್ಲಿದ್ದ ಐನೂರು ರೂ ನೋಟುಗಳು ಅವ್ಯಕ್ತವಾದ ನೋವನ್ನು ಪಡುತ್ತಿತ್ತು(ನೀಡುತ್ತಿತ್ತು)…24ರ ಹರೆಯಕ್ಕೇ,ಇನ್ನೂ ಸ್ವಂತ ಕಾಲ ಮೇಲಿನ್ನೂ ಸರಿಯಾಗಿ ನಿಲ್ಲದ ವಯಸ್ಸಿನಲ್ಲಿ ಎಂಥಾ ಜವಾಬ್ದಾರಿ….!?
Only a brother can …
Nice sir
ವಯಸ್ಸಿಗೆ ಮೀರಿದ ಜವಾಬ್ದಾರಿ ನಿಮ್ಮದಾಗಿತ್ತು. ಎಲ್ಲ ಹೆಣ್ಣುಮಕ್ಕಳಿಗೂ ನಿಮ್ಮಂಥಹ ಅಣ್ಣನೇ ಸಿಗಲಿ (y). ಬರಬರುತ್ತಾ ಲೇಖನ ತುಂಬಾ ಸ್ವಾರಸ್ಯಕವಾಗುತ್ತಿದೆ.
ಅಜ್ಜಿಯ ಬೆಚ್ಚನೆಯ ಮಡಿಲು, ತಾತನ ಮಹತ್ವಾಕಾಂಕ್ಷೆ, ಸದಾ ನಮ್ಮಪ್ಪನಿಂದ ನೋವನ್ನೇ ಉಂಡು ಉಂಡೂ ಮಕ್ಕಳಿಗಾಗಿ ಕನಸು ಮಾತ್ರ ಕಾಣಬಲ್ಲ ಅಸಹಾಯಕ ತಾಯಿ, ಅಣ್ಣ, ಅಕ್ಕ ಅಂದ್ರೆ ತನ್ನೆಲ್ಲವನ್ನೂ ಕೊಟ್ಟುಬಿಡೋಣ ಅನ್ನುವ ತಮ್ಮ, ಮತ್ತೆ ತನ್ನ ಎಲ್ಲಾ ಜವಾಬ್ದಾರಿಗಳನ್ನು ಮೈಮರೆತು ಮರೆತು ಕುಡಿತ, ಹಿಂಸೆ, ಹೊಡೆತ ಬಡಿತ ಬೈಗುಳ ಇವುಗಳಲ್ಲೇ ಸದಾ ನಿರುಮ್ಮಳವಾಗಿರುತ್ತಿದ್ದ ತಂದೆ, ಜೊತೆಗೆ ಒಂದಷ್ಟು ಕನಸುಗಳು, ಬದುಕಿನ ಬಗೆಗೆ ಇದ್ದ ಮಹತ್ವಾಕಾಂಕ್ಷೆ. ನನ್ನ ತಂಗಿ ಮದುವೆ ಮಾಡೋಕೆ ಎಷ್ಟೊಂದು ಶಕ್ತಿಗಳು ನನ್ನ ಬಳಿ ಇವೆ……ಸರ್ ಇ ಸಾಲುಗಳು ತುಂಬಾ ಭಾವನಾತ್ಮಕ ವಾಗಿವೆ…
ಮತ್ತೆ ಮುಂದಿನ ಭಾಗದ ನಿರೀಕ್ಷೆ ಯಲ್ಲಿ…….
ವಯಸ್ಸಿಗೆ ಮೀರಿದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ..ತುಂಬ ಆಪ್ತವಾಗುತ್ತಿದೆ ಬರಹ.