ಉಮಾಶ್ರೀ ಗೂಟದ ಕಾರ್ ಹತ್ತಿದ್ರು, ಮಿನಿಸ್ಟರ್ ಆದ್ರು
ಅವತ್ತು ಮೇ ಹತ್ತು. ಶೇತಮ್ಮನ ಮನೆ ತುಂಬಾ ಸಂಭ್ರಮ ತುಂಬಿತ್ತು. ಯಾಕಂದ್ರೆ ಅವತ್ತು ಅವಳ ಮಗಳು ನಿಸರ್ಗಳ ಹುಟ್ಟಿದ ಹಬ್ಬ. ಅಷ್ಟೇ ಅಲ್ಲ ಉಮಾಶ್ರೀ ಅವರ ಜನ್ಮದಿನ ಕೂಡ ಅವತ್ತೆ. ಮೇ ಒಂಭತ್ತನೇ ತಾರೀಖು ಅಮ್ಮ ತೇರದಾಳ ಮತಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದರು ಅನ್ನುವ ಸುದ್ಧಿ ನಾಡಿನಾದ್ಯಂತ ಗೊತ್ತಾಯ್ತು. ಅವತ್ತು ಅಲ್ಲೇ ಇದ್ದು ಕ್ಷೇತ್ರದಲ್ಲಿ ಸಂಭ್ರಮ ಆಚರಿಸಿ ಮೇ ಹತ್ತನೇ ತಾರೀಖು ಬೆಂಗಳೂರಿನ ಮನೆಗೆ ಬರುವುದಾಗಿ ತಿಳಿಸಿದರು. ಅಷ್ಟೊತ್ತಿಗಾಗಲೇ ನಾನೂ ನನ್ನ ತಂಗಿ ಹತ್ತಿರದ ನೆಂಟರಿಗೆಲ್ಲಾ ಫೋನ್ ಮಾಡಿ ಬರಲು ಹೇಳಿದೆವು. ನನ್ನ ತಂಗಿ ಮತ್ತು ನಾವೆಲ್ಲಾ ನಮ್ಮ ಭಾವನವರನ್ನ ಮತ್ತು ಅಮ್ಮನ್ನ ನೋಡಿ ಸುಮಾರು ಎರಡು ತಿಂಗಳುಗಳೇ ಕಳೆದುಹೋಗಿತ್ತು. ದಿನನಿತ್ಯ ಚುನಾವಣೆಯ ಯೋಚನೆಯಲ್ಲೇ ಇದ್ದ ನಮಗೆ ಅಂದು ಗೆದ್ದು ಬರುತ್ತಿರುವ ಅಮ್ಮನನ್ನು ನೋಡಲು ಮತ್ತು ಅಮ್ಮನ ಯಶಸ್ಸಿನ ಹಿಂದೆ ಗಟ್ಟಿಯಾಗಿದ್ದ ಅವರ ಮಗನ ಮುಖದಲ್ಲಿ ಕಾಣುವ ಗೆಲುವನ್ನು ನೋಡಲು ನಾನೂ ಶೇತಮ್ಮ ಇಬ್ಬರೂ ಕಾತರಾಗಿದ್ದೆವು. ಸೂರ್ಯನ ವಿಜಯಕ್ಕೆ ಸೂರ್ಯಕಾಂತಿ ತಿರುಗಿರುತ್ತಲ್ಲ ಹಾಗೆ ಇಡೀ ಬದುಕು ಸವೆಸಿದ ಅಮ್ಮನ್ನ ಮುಖ ನೋಡಲು, ದುಮ್ಮೆಂದು ನುಗ್ಗುವ ಅವ್ರ ಆತ್ಮವಿಶ್ವಾಸದ ಶಕ್ತಿಯನ್ನು ಕಾಣಲು ನಾನಂತೂ ತುದಿಗಾಲಲ್ಲಿ ನಿಂತಿದ್ದೆ.
ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ ಅಮ್ಮನ ಗೆಲುವು ಅದರ ಹಿಂದಿನ ಶ್ರಮ ನಾನು ಕಂಡಂತೆ ಹೇಳಬೇಕು ಅಂತ ಮನಸು ತುಡಿಯುತ್ತಿದೆ. ಆದ್ರೆ ನಾ ಎನ್ ಹೇಳಿದ್ರೂ ಅಮ್ಮನ ಬದುಕು ಎಲ್ಲರಿಗೂ ಗೊತ್ತಿರುವ ತೆರೆದ ಪುಸ್ತಕ. ಆದರೂ ನನಗೆ ಅನುಭವದ ವಿವರಗಳ ಎಳೆಗಳ ತೆರೆದಿಟ್ಟರೆ ನನ್ನ ದೃಷ್ಟಿಕೋನದಿಂದ ಪೂರ್ಣತೆಯ ಅನ್ಕೊಬಹುದೇನೋ. ಇಲ್ಲಿಲ್ಲ ಅದೆಲ್ಲಾ ಆಗಲ್ಲ ಬಿಡಿ. ಅದೇನೇ ಇರಲಿ, ಈ ಹಿಂದಿನ ಚುನಾವಣೆಯಲ್ಲಿ ಅಮ್ಮ ಸೋತಿದ್ದರು. ಆ ಚುನಾವಣೆಯ ಸಂದರ್ಭದಲ್ಲಿ ನಾನೂ ಕೂಡ ಅಲ್ಲಿಗೆ ಹೋಗಿ ಅವರ ಪರವಾಗಿ ಪ್ರಚಾರದಲ್ಲಿ ಒಂಚೂರು ತೊಡಗಿಸಿಕೊಂಡಿದ್ದೆ. ಯಾಕಂದ್ರೆ ಆಗಿನ್ನೂ ನನಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಆದ್ರೆ 2008 ರ ಚುನಾವಣೆಯ ಹೊತ್ತಿಗೆ ನನಗೆ ಸರ್ಕಾರಿ ಕೆಲಸ ಸಿಕ್ಕಿತ್ತು ಅದಕ್ಕಾಗಿ ನಾನು ಎರಡನೇ ಸಲ ತೇರದಾಳದ ಕಡೆ ತಲೆ ಹಾಕಿರಲಿಲ್ಲ. ಮನಸು ಮಾತ್ರ ಅಲ್ಲೇ ಗಿರಗಿಟ್ಲೆ ಹೊಡಿತಿತ್ತು. ಅವರ ಜೊತೆ ಇರಬೇಕ್ತಿತ್ತು. ಅವರಿಗೆ ಸಹಾಯ ಮಾಡಬೇಕಿತ್ತು. ಕಡೇ ಪಕ್ಷ ಏನೂ ಮಾಡೋಕೆ ಆಗದಿದ್ದರೂ ಅವರ ಊಟ ಉಪಚಾರ ನೀರು ನೀಡಿ ನಿಗಾ ಮಾಡಬೇಕಿತ್ತು ಅಂತೆಲ್ಲಾ ಜೇವ ಪದರುಗುಡುತಿತ್ತು. ಅದೆಲ್ಲಾ ಆಗೋ ಮಾತಲ್ಲ ಬಿಡಿ. ಸರ್ಕಾರಿ ನಿಯಮ ತಪ್ಪಿಸಿ ತೇರದಾಳ ಹೋಗಿಬಿಡೋಣ ಅಂತ ಮನಸು ಸಡಿಲಿಸಿಕೊಂಡು ತಯಾರಾಗಿಬಿಟ್ಟಿದ್ದೆ. ಇದು ಗೊತ್ತಾದ ಅಮ್ಮ ಫೋನ್ ಮಾಡಿ “ನೀನೇನ್ ಬರೋದು ಬೇಡ. ನೀತಿ ನಿಯಮ ತಪ್ಪೋ ನೀನೆಂತಾ ಮೇಷ್ಟ್ರೋ. ಅದೆಲ್ಲಾ ಬೇಡ ಕಂದ ಅಚ್ಚುಕಟ್ಟಾಗಿ ಕಾಲೇಜಿಗೆ ಹೋಗಿ ಪಾಠ ಮಾಡಿಕೊಂಡು ಮನೆ ಶೇತಮ್ಮನ್ನ, ನಿಸರ್ಗಳನ್ನ ನೋಡಿಕೊಂಡಿರು” ಅಂತ ಕಡ್ಡಿ ತುಂಡಾದ ಹಾಗೆ ಹೇಳಿಬಿಟ್ರು. ನಾನು ಇಷ್ಟರ ನಡುವೆಯೂ ಹೋಗೋ ಪ್ರಯತ್ನ ಮಾಡೋಣ ಅನ್ಕೊಂಡೆ. ಆದ್ರೆ ಅವರ ಹೇಳಿದ ಮಾತಿಗೆ ತಪ್ಪಿದ್ರೆ ಅವರ ಕೋಪದ ಸ್ವರೂಪ ಗೊತ್ತಿದ್ದ ಕಾರಣ ತೆಪ್ಪಗಾದೆ. ಹಾಗಾಗಿ ಇಲ್ಲಿ ತಂಗಿಮನೆಯಲ್ಲಿ ನನ್ನ ತಂಗಿ ಮತ್ತು ಅವಳ ಮಗುವನ್ನು ನಿಗಾ ವಹಿಸುವ ಪೂರ್ತಿ ಜವಾಬ್ದಾರಿಯನ್ನು ನಾನು ನನ್ನ ತಮ್ಮ ಮಾಡುತ್ತಿದ್ದೆವು. ಅಮ್ಮ ನಮ್ಮ ಭಾವ ಕ್ಷೇತ್ರದಲ್ಲಿ ಚುನಾವಣಾ ಕೆಲಸಗಳಿಗೆ ಯಾವ ತೊಂದರೆ ಆಗದಂತೆ ನಾವೆಲ್ಲಾ ಆ ಕಡೆ ಗಮನ ಕೊಡುತ್ತ ಇಲ್ಲಿನ ಯಾವ ಉಸಾಬರಿಗಳು ಅವರಿಗೆ ಗಮನಕ್ಕೆ ಬಾರದಂತೆ ಅವರ ಕೆಲಸ ಅಲ್ಲಿ ಮಾಡಿಕೊಳ್ಳಲು ಅನುವಾಗುವಂತೆ ಎಚ್ಚರವಹಿಸುತ್ತಿದ್ದೆವು.

ಅಮ್ಮ ಯಾವತ್ತೂ ಕೂತವರಲ್ಲ. ಒಟ್ಟಾ ಓಡಾಟ. ನನ್ನ ತಂಗಿಯನ್ನು ಕೂಡ ಅದೇ ರೀತಿ ಸದಾ ಶ್ರಮದ ಶಿಶುವಾಗಿರಬೇಕು ಅನ್ನುವ ಹಾಗೆ ಬಯಸುತ್ತಿದ್ದರು. ಅವಳೂ ಕೂಡ ಹಾಗೆ ಒಂದಿನವೂ ಕೂತವ ಳಲ್ಲ. ಇಲ್ಲಿ ಮನೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಪೂರ್ತಿ ವಹಿಸಿಕೊಂಡು ಘಳಿಗೆ ಕೂರುತ್ತಿರಲಿಲ್ಲ. ಮೊದಲ ಸಲ ಅಮ್ಮ ಸೋತ ಮೇಲೆ ಅವರು ಬೆಂಗಳೂರು ತೇರದಾಳ ಅಂತ ಓಡಾಡಿದ್ದು ಅದೆಷ್ಟೋ. ಶೇತಮ್ಮ ಇಲ್ಲಿದ್ದುಕೊಂಡೇ ನಮ್ಮ ಭಾವನವರನ್ನ ಕಾಳಜಿ ಮಾಡಿ ಕಾಪಾಡಿದ್ದು ಎಷ್ಟೋ. ಅಮ್ಮ ಸತತವಾಗಿ ಅದೆಷ್ಟೋ ರಾತ್ರಿಗಳನ್ನು ರೈಲಿನಲ್ಲೇ ಕಳೆದಿದ್ದಾರೆ. ಈ ಬಗೆಗೆ ಹಿಂದಿನ ಬರಹಗಳಲ್ಲೂ ಪ್ರಸ್ತಾಪಿಸಿದ್ದೇನೆ ಕೂಡ. ಹೀಗೆ ಹೇಳಲಾರದಷ್ಟು ಶ್ರಮದ ಮೊತ್ತವಾಗಿ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಬುಡಮಟ್ಟದಲ್ಲಿ ಪಕ್ಷ ಸಂಘಟಿಸಿ ತೇರದಾಳದ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಅಮ್ಮನ ರೈಲಿನ ಓಡಾಟಕ್ಕೆ ಸಂಭಂದಿಸಿದಂತೆ ಒಂದು ಪುಟಾಣಿ ಘಟನೆ ಹೇಳ್ತೀನಿ ಕೇಳಿ. ಮೊನ್ನೆ ಮೊನ್ನೆ ಅಮ್ಮ ರೈಲಿನಲ್ಲಿ ಪ್ರಯಾಣಕ್ಕೆ ಹೊರಟ್ರು. ನಾನೂ ರೈಲು ಹತ್ತಿಸೋಕೆ ಹೋಗಿದ್ದೆ. ರೈಲಿನಲ್ಲೂ ಒಂದಷ್ಟು ಫೈಲುಗಳನ್ನು ನೋಡೋಕೆ ಅಂತ ಗುಡ್ಡೆ ಹಾಕ್ಕೊಂಡು ಬಂದಿದ್ರು. ನಾನು ಇಲ್ಲಾದ್ರೂ ಸ್ವಲ್ಪ ಹೊತ್ತು ಸುಮ್ಮನಿರಬಾರದ. ಒಂಚೂರು ವಿಶ್ರಾಂತಿ ತಗೋಬಾರದ ಅಂದಿದ್ದಕ್ಕೆ “ಅಜ್ಜಿ ಆಗ್ಬಿಡ್ತೀನಿ, ಆಮೇಲೆ ಏನೂ ಮಾಡೋಕೆ ಆಗಲ್ಲ. ಎನ್ ಮಾಡ್ಬೇಕು ಅನ್ಕೊಂಡಿದಿವೋ ಅದನ್ನ ಉಸಿರಾಟ ಗಟ್ಟಿ ಇದ್ದಾಗಲೇ ಮಾಡಿ ಮುಗಿಸಿಬಿಡಬೇಕು ಅಂದ್ರು. ನೀನೂ ಅಷ್ಟೇ ಹೊಟ್ಟೆ ಬರುಸ್ಕೊಂಡು ಸೋಮಾರಿ ಆಗ್ಬಿದ್ಬೇಡ. ದಿನಾ ದಿನ ಮುದುಕ್ರಾಗ್ತಿರ್ತೀವಿ. ಹಾಗಾಗಿ ಮಾಡೋ ಕೆಲಾಸಾನ ಆಗಾಗಲೇ ಮಾಡಿ ಮುಗಿಸು” ಅಂದ್ರು. ಮತ್ತೆ ಅವರು ಫೈಲ್ಗಳನ್ನು ನೋಡಲು ಕೂತ್ರು. ಆ ಬೋಗಿಯ ರೈಲಿನ ಉದ್ಯೋಗಿ ಅಮ್ಮ ಬಂದಿದ್ದಾರೆ ಅಂತ ಗೊತ್ತಾಗಿ ಇವರಿಗೆ ಬೆಡ್ ಮಾಡಿ ಕೊಡಲೆಂದು ಓಡಿ ಬಂದ. ಅವನು ಅಮ್ಮನನ್ನು ನೋಡಿ ಮೂರು ವರ್ಷ ಆಗಿತ್ತಂತೆ. ಇವರು ಅವನನ್ನು ನೋಡಿದ ಕೂಡಲೇ ಅವನಿಗೆ “ಲವ್ ಮಾಡ್ತಿದ್ದಲ್ಲೋ, ಏನಾಯ್ತು ಮದುವೆ ಮಾಡಿಕೊಂಡ, ಚನ್ನಾಗಿದಿಯಾ, ಮಕ್ಕಳು ಮರಿ ಆದ್ವಾ ?” ಹೀಗೆ ಯೋಗಕ್ಷೇಮ ವಿಚಾರಿಸುದ್ರು. ಅವನಿಗೆ ಅಮ್ಮ ಅದೆಂದೋ ಮಾತಾಡಿದ್ದನ್ನು ನೆನಪಿಟ್ಟು ಕಾಳಜಿ ಮಾಡುತ್ತಿದ್ದೀರಲ್ಲ ಅಂತ ಖುಷಿಗೆ ಕಣ್ಣು ಒದ್ದೆಯಾಗಿ ಹನಿ ಜಾರಿತು. ಅಷ್ಟರಲ್ಲೇ ಟ್ರೈನ್ ಹೊರಟಿತು. ನಾನು ಅಮ್ಮ ಚಲಿಸುತ್ತಿದ್ದ ರೈಲಿಗೆ ಲಗೇಜ್ ಒಳಗೆ ಎಸೆದು ಓಡೋಗಿ ಹತ್ತುತ್ತಿದ್ದುದನ್ನು ನೆನಪಿಸಿಕೊಂಡು ದಡಬಡ ರೈಲಿನಿಂದ ಇಳಿದೆ.
ಅಮ್ಮ ಚುನಾವಣೆಯಲ್ಲಿ ಗೆಲ್ಲಲ್ಲಿ ನನ್ನ ತಂಗಿ ಬನಶಂಕರಿಯ ಬನಶಂಕರಿಗೆ ವಾರ ವಾರ ನಿಂಬೇಹಣ್ಣು ದೀಪ ಹಚ್ಚಿ ಅದೆಷ್ಟೋ ವ್ರತ ಮಾಡಿದ್ದಳು. ಟಿ.ವಿ.ಯಲ್ಲಿ ಹಗಲು ರಾತ್ರಿ ಎನ್ ಸುದ್ಧಿ ಎನ್ ಕಥೆ ಅಂತ ರಿಮೋಟ್ ಇಟ್ಕೊಂಡೇ ಕೂತು ಕೂತು ತಲೆ ಚಿಟ್ ಹಿಡಿದುಹೋಗಿತ್ತು. ಇದ್ರ ನಡುವೆ ಮಾಧ್ಯಮದ ಸುದ್ಧಿಗಳು, ಅವರ ಒತ್ತಡದ ನಡುವೆ ಫೋನ್ ಮಾಡಲು ಆಗದೆ ಬಿಡದೇ ನಾನೂ ಶೇತಮ್ಮ ಇಬ್ಬರೂ ಒದ್ದಾಡುತ್ತಿದ್ದ ಸಂಕಟ ಹೇಳಲಾಗದು ಬಿಡಿ. ಇಷ್ಟರ ನಡುವೆ ನನ್ನ ತಂಗಿ ದೇವರು ಪೂಜೆ ಅಂತೆಲ್ಲಾ ಸಮಯ ಕಳೀತಾ ತಂತಾನೇ ಸಮಾಧಾನ ಮಾಡ್ಕೊತಿದ್ಲು. ಅದು ಎಷ್ಟರ ಮಟ್ಟಿಗೆ ನನ್ನ ಮೇಲೂ ಪ್ರಭಾವ ಬೀರಿತೆಂದರೆ ನಾನೂ ನಾ ನಂಬಿದ ವಿಶ್ವಾಸಕ್ಕೆ ಬೇಡಿಕೊಳ್ಳೋಕೆ ಶುರು ಮಾಡಿಬಿಟ್ಟೆ. ಆ ಆತಂಕ ಒತ್ತಡ ಉಫ್ ಹೇಳೋಕೆ ಆಗಲ್ಲ ಬಿಡಿ. ಹೀಗಿರುವಾಗ ನಾನು ಸೂಲಿಬೆಲೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ನನ್ನ ಆತ್ಮೀಯ ಗೆಳೆಯರಾದ ವರ್ಷ ಸರ್ ದೇವಿಯ ವಿಜಯಕ್ಕೆ ಸಂಬಂಧಿಸಿದಂತೆ ಪಠಣ ಮಂತ್ರವೊಂದನ್ನು ತಂದುಕೊಟ್ಟು ಓದಿ ಅಂದರು ಅಮ್ಮ ಗೆದ್ದೇ ಗೆಲ್ತಾರೆ ಅಂದ್ರು. ನಾನೂ ಕೂಡ ಆ ಸಮಯಕ್ಕೆ ಯಾರು ಎನ್ ಹೇಳಿದ್ರು ಮಾಡ್ಬೇಕು ಅನ್ನಿಸುತ್ತಿದ್ದ ಸಂದರ್ಭ. ಹಾಗಾಗಿ ದಿನಾಗ್ಲೂ ಅದನ್ನ ಓದುತ್ತಿದ್ದೆ. ಹೇಗೆಲ್ಲಾ ಅಧೀರರಾಗಿಬಿಡ್ತೀವಿ ಅಲ್ವಾ. ಚೂರ್ ಸಮಾಧಾನ ಯಾವುದು ಕೊಟ್ರು ಅದೆಷ್ಟೋ ನಿರುಮ್ಳ. ಇದೆಲ್ಲಾ ಇರಲಿ ಬಿಡಿ ಅಮ್ಮ ಗೆದ್ರು ಅಂತ ಗೊತ್ತಾದ ಕೂಡ್ಲೇ ಕುಣಿದು ಕುಪ್ಪಳಿಸಿದ್ದಕ್ಕೆ ನನ್ನ ಬಲಗಾಲಿನ ಗೇಣು ಉಳುಕಿ ಯಾತನೆ ಅನುಭವಿಸಿದ್ದೆ. ಇದನ್ನೆಲ್ಲಾ ನೆನಪಿಸಿಕೊಂಡರೆ ಮೈ ಜುಮ್ ಅನ್ನುತ್ತೆ.
ಗೆದ್ದ ಸುದ್ಧಿ ತಿಳಿದ ತಕ್ಷಣ ಎಲ್ಲ ನೆಂಟ್ರು ಇಷ್ಟ್ರುನೆಲ್ಲಾ ಫೋನ್ ಮಾಡಿ ಕರೆದು ಬರ್ಥಡೇ ಮಾಡೋಕೆ ಎಲ್ಲಾ ಸಿದ್ಧತೆ ಶುರು ಹಚ್ಚಿದ್ವಿ. ಕೇಕ್ ತಂದ್ವಿ. ನಾನು ಶೇತಮ್ಮ ಹೋಗಿ ಒಂದು ತಿಳಿ ಹಸುರು ಬಣ್ಣದ ರೇಶಿಮೆ ಸೀರೆ ತಂದ್ವಿ. ಸ್ನೇಹಿತರೇ ಆ ಸೀರೆ ಯಾವುದು ಗೊತ್ತಾ? ಉಮಾಸಿರಿ ಅಂಕಣದ ಪೋಸ್ಟರ್ ನಲ್ಲಿದೆಯಲ್ಲಾ ಅದೇ ಸೀರೆ. ಫೋಟೋ ಕೂಡ ಅವತ್ತು ಅಮ್ಮ ಗೆದ್ದು ಮನೆಗೆ ಬಂದ ಮೊದಲ ದಿನ. ಇನ್ನೊಂದ್ ವಿಷಯ ಅಮ್ಮನಿಗೆ ನಾ ಆರಿಸಿ ತರುವ ಸೀರೆಗಳೆಂದರೆ ಬಲು ಪ್ರೀತಿ ಕೂಡ.
ಅಂದಹಾಗೆ ಅಮ್ಮಂದು ನಿಸರ್ಗಳದ್ದು ಇಬ್ಬರದ್ದು ಒಂದೇ ದಿನ ಜನ್ಮದಿನ ಅಂತ ಹೇಳಿದ್ನಲ್ಲ ಆ ವಿಷಯಕ್ಕೆ ಮತ್ತೆ ಬರ್ತೀನಿ. ಎಲ್ಲಾ ತಯಾರಿಗಳನ್ನು ಮಾಡಿಕೊಂಡ ಮೇಲೆ ಅಮ್ಮ ಬೆಳಿಗ್ಗೆ
ತೇರದಾಳದಿಂದ ಬಂದ್ರು. ನಾವೆಲ್ಲಾ ಸೇರಿ ಅಜ್ಜಿ ಮೊಮ್ಮೊಗಳ ಹುಟ್ಟಿದ ಹಬ್ಬವನ್ನು ಆಚರಿಸಿದೆವು. ಅವರ ಕ್ಷೇತ್ರದಿಂದ ಅನೇಕ ರಾಜಕೀಯ ನಾಯಕರು ಅಭಿಮಾನಿಗಳು ಬಂದಿದ್ದರು. ಎಲ್ಲವೂ ಚೆನ್ನಾಗಿ ಆಯಿತು. ಇಷ್ಟರ ನಡುವೆ ಸಚಿವ ಸಂಪುಟದಲ್ಲಿ ಯಾರ್ ಯಾರಿಗೆ ಯಾವ ಸ್ಥಾನ ಸಿಕ್ಕುತ್ತೆ ಅನ್ನುವ ಚರ್ಚೆಗಳು ಟಿ.ವಿ ಯಲ್ಲಿ ನಡೀತಿದ್ವು. ಇವರು ಮಾತ್ರ ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದಂತೆ ಕೊಟ್ಟ ಕೆಲಸವನ್ನು ದಿಟ್ಟವಾಗಿ ಮಾಡುವೆನೆಂಬ ಮನಸಿಂದ ಇದ್ರು.
ಅಮ್ಮ ಬೆಂಗಳೂರಿಗೆ ಬರುವ ಮುನ್ನ ನನಗೊಂದು ಫೋನ್ ಮಾಡಿದ್ರು. ಅವರಿಗೆ ಶುಭಾಶಯ ಹೇಳಿದೆ. ಅವರ ದನಿಯಲ್ಲಿ ಶ್ರಮ ಪಟ್ಟು ಪಡೆದ ಗೆಲುವನ್ನು ಆಪ್ತರಿಗೆ ಹೇಳುವಾಗ ಉಂಟಾಗುವ ವೈಬ್ರೇಶನ್ಸ್ ನನಗೆ ಗೊತ್ತಾಗಿ ಎದೆಯೊಳಗೆಲ್ಲ ಪುಳಕ ಮತ್ತು ಗೆಲುವಿನ ಹಿಂದಣ ಶ್ರಮವೇ ಕಣ್ಣಿಗೆ ಕಾಣುತ್ತಿತ್ತು. ನಾನು ನನ್ನ ಸ್ವಗತದಲ್ಲಿ ‘ಅಮ್ಮ ಯು ಆರ್ ಗ್ರೇಟ್’ ಅಂತ ಮತ್ತೆ ಮತ್ತೆ ಹೇಳಿಕೊಳ್ತಾನೇ ಇದ್ದೆ. ಸರಿ ಫೋನ್ನಲ್ಲಿ ಮಾತು ಮುಂದುವರೆಸಿ, ರಘು ಒಂದಷ್ಟು ಸಿಹಿ ತಂದಿಟ್ಟು ನನ್ನ ಗೆಲುವು ಮತ್ತು ಮೊಮ್ಮಗಳ ಜೊತೆಗೆ ಹುಟ್ಟಿದ ಹಬ್ಬ ಆಚರಿಸ್ಕೊತಾ ಇದ್ದೀನಿ ಎಲ್ಲಾ ಮಾಧ್ಯಮದವರಿಗೆ ಹೇಳಿಬಿಡಪ್ಪಾ ಅಂದ್ರು. ನಾನು ಆಯಿತೆಂದು ಎಲ್ಲರಿಗೂ ವಿಷಯ ತಿಳಿಸಿದೆ. ನನಗೆ ಚೆನ್ನಾಗಿ ನೆನಪಿದೆ ಸುಗುಣ ಆಗ ರಾಜ್ ಟಿ. ವಿ. ಯಲ್ಲಿದ್ರು. ಅವರು ಬಂದು ಇಡೀ ಅವರ ಕಲಾ ಬದುಕಿನ ಹಿನ್ನೆಲೆಯಲ್ಲಿ ರಾಜಕೀಯದ ಆವರಣ ತೆರೆದುಕೊಂಡ ಬಗೆ ಮತ್ತು ಆ ಹೊತ್ತಿನ ಗೆಲುವನ್ನು ಕುರಿತು ಒಂದು ಸ್ಟೋರಿ ಮಾಡಿದ್ದರು. ಅದು ಬಿಟ್ರೆ ಇನ್ನಾವ ಮಾಧ್ಯಮದ ಮಿತ್ರರು ಬಂದಿರಲಿಲ್ಲ. ಅವರಿಗೆ ಮೊಮ್ಮೊಗಳ ಜನ್ಮದಿನದಂದು ಗೆಲುವಿನ ಸಂಭ್ರಮ ಆಚರಿಸಿಕೊಳ್ಳೋದು ಬಹು ವಿಶೇಷ ಆಗಿತ್ತು. ಇನ್ನುಳಿದಂತೆ ಅವರು ಸಚಿವೆ ಅಂತ ಗೊತ್ತಾದ ಮೇಲೆ ಅವರ ಬಗೆಗೆ ಕಾರ್ಯಕ್ರಮಗಳನ್ನು ಆಗೊಂದು ಈಗೊಂದು ಬೇರೆ ಬೇರೆ ಮಾಧ್ಯಮದ ಮಿತ್ರರು ರೂಪಿಸಿದರು.
ತಂಡೋಪ ತಂಡವಾಗಿ ರಂಗಭೂಮಿಯ ಗೆಳೆಯರು, ಸಿನಿಮಾದ ಸ್ನೇಹಿತರು ಮತ್ತು ರಾಜಕೀಯದ ಹಿತೈಶಿಗಳೆಲ್ಲಾ ಅಮ್ಮನ್ನನ್ನು ಹರಸಿ ಶುಭಾಶಯ ಕೋರಲು ಬಂದರು. ಎಲ್ಲಾ ಸೇರಿ ಅವರ ಈ ಸಲದ ಹುಟ್ಟಿದ ಹಬ್ಬವನ್ನು ಅರ್ಥಪೂರ್ಣವಾನ್ನಗಿಸಿದೆವು. ಇಷ್ಟರ ನಡುವೆ ನಮ್ಮನ್ನೆಲ್ಲಾ ಕಾಡುತಿದ್ದುದು ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತಾ ಅಂತ. ಮಹಿಳೆ ಇವರನ್ನು ಬೀಟ್ಟರೆ ಶಕುಂತಲಾ ಶೆಟ್ಟಿ ಗೆದ್ದವರ ಪೈಕಿ ಒಂದಷ್ಟು ಕೆಲಸ ಮಾಡಬಲ್ಲವರು ಅಂತ ಏನೇನೋ ಅನ್ಕೊತಿದ್ವಿ. ಮಾಧ್ಯಮಗಳು ಕೂಡ ಅವನ್ನೇ ಹೇಳುತ್ತಿದ್ದವು. ಇಷ್ಟೆಲ್ಲಾ ಆಗುತ್ತಿದ್ದರೆ ಅಮ್ಮ ಮಾತ್ರ ಹೆಚ್ಚು ಈ ವಿಷಯವಾಗಿ ಆಯಾಸ ಮಾಡಿಕೊಳ್ಳುತ್ತಿರಲಿಲ್ಲ. ನಾವೇನಾದ್ರೂ ಹೇಳಿದ್ರೆ ‘ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡ್ತೀನಿ ಸುಮ್ನಿರ್ರೋ’ ಅನ್ನೋವ್ರು. ಏನೇ ಆದ್ರೂ ಟೆನ್ಶನ್ ಮಾತ್ರ ಭೂತದ ತರ ನಮ್ಮನ್ನೆಲ್ಲಾ ಕಾಡುತ್ತಲೇ ಇತ್ತು.
ಇದೆಲ್ಲಾ ಆಗಿ ಒಂದು ದಿನ ಕಳೆದ ಮೇಲೆ ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಂತ ವಿಷಯ ಗೊತ್ತಾದ ಕೂಡ್ಲೇ ಮತ್ತೆ ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಆದ್ರೆ ಅಮ್ಮ ಮಾತ್ರ ಹರ ಇಲ್ಲ ಶಿವ ಇಲ್ಲ ಸುಮ್ಮನೇ ಹಾಗೆ ಇರ್ತಿದ್ರು. ಯಾವ ಕಾರಣಕ್ಕೂ ಅವರು ಒತ್ತಡ ಮಾಡಿಕೊಳ್ಳುತ್ತಿರಲಿಲ್ಲ, ಹೆಚ್ಚು ಸಂಭ್ರಮಿಸುತ್ತಿರಲಿಲ್ಲ. ಸರಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಅಂತಾಯ್ತು. ಅಮ್ಮ ಬಿಳೀ ಒಡಲು ಕುಂಕುಮ ಬಣ್ಣದ ಅಂಚಿನ ಸೀರೆ ಉಟ್ಕೊಂಡು ಮಿರಿ ಮಿರಿ ಮಿಂಚ್ತಿದ್ರು. ಆದ್ರೆ ಎರಡು ತಿಂಗಳು ಉತ್ತರ ಕರ್ನಾಟಕದ ಬಿಸಿಲಿನ ಝಳಕ್ಕೆ ಬೆಂದ ಮುಖ ಮಾತ್ರ ಇನ್ನೂ ಸರಿ ಹೋಗಿರಲಿಲ್ಲ. ಅವರ ಮುಖದ ಮೇಲ್ಪದರ ಸುಲಿದುಕೊಂಡು ಬರುತ್ತಿತ್ತು. ಹೇಗಂದ್ರೆ ಇಡೀ ಅವರ ಬದುಕಿನ ಕತ್ತಲೆಯ ಪೊರೆ ಕಳಚಿದಂತೆ. ಆದ್ರೆ ಹಚ್ಚಿಟ್ಟ ಕಲಾದೀಪ ಮಾತ್ರ ಅವರ ಮೊಗದಲ್ಲಿ ಹೊಳೀತಿತ್ತು. ಪೊರೆ ಕಳಚಿದ್ರು ಆತ್ಮ ಬೆಳಗುತ್ತಲ್ಲ ಹಾಗೆ. ಇಡೀ ಅವರ ಬದುಕು ಸುಲಿ ಸುಲಿದುಕೊಂಡು ಬೆಳಗುತ್ತಿದ್ದುದನ್ನ ಕಂಡ ನನ್ನಂತ ಎಳೆಯ ವಯಸ್ಸಿಗೆ ಅದೆಷ್ಟೋ ಬದುಕಿನ ಪಾಠಗಳನ್ನು ಕಲಿಸುತ್ತಲೇ ಇತ್ತು.
ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರ ಮಗಳು ಅಳಿಯ ಮೊಮ್ಮಕ್ಕಳು, ಮಗ ಸೊಸೆ ಮತ್ತು ಮೊಮ್ಮಗಳು ಎಲ್ಲರೂ ಹೊರಟರು. ಅಲ್ಲಿಗೆ ಹೆಚ್ಚಿಗೆ ಜನ ಬೇರೆ ಹೋಗೋ ತರ ಇರಲಿಲ್ಲ. ಕೆಲವೇ ಕೆಲವು ಪಾಸುಗಳು. ನನಗೆ ಅಮ್ಮ ಅಧಿಕಾರ ವಹಿಸಿಕೊಳ್ಳೋದು ನೋಡಬೇಕೆಂಬ ದೈಯದಂತಾ ಆಸೆ ನನಗೆ. ಅಲ್ಲಿ ಅವರ ಕುಟುಂಬ ಮಾತ್ರ ಹೋದ್ರೆ ಅವರು ಕೊಟ್ಟ ಮುಖ್ಯವಾದ ಪಾಸ್ಗಳು ಮುಗಿದು ಹೋಗುತ್ತವೆ. ಮುಗಿದು ಹೋಗಿತ್ತು ಕೂಡ. ನಾ ಹೇಗೆ ಅವರನ್ನು ಕೇಳೋದು ಅಂತ ಆತಂಕದಲ್ಲಿದ್ದೆ. ಆಗ ಅಮ್ಮ ನನಗೂ ಒಂದು ಪಾಸ್ ನನ್ನ ಭಾವನವರ ಬಳಿ ಇರಿಸಿದ್ದರು. ಆಗ ಅವರ ಕಾಳಜಿ ಕಂಡು ತಾಯಿತನಕ್ಕೆ ಎಲ್ಲವನ್ನೂ ಅರಿಯುವ ಶಕ್ತಿಯನ್ನು ಕೊಟ್ಟ ಪ್ರಕೃತಿಗೆ ನನ್ನೊಳಗೆ ನಾನೇ ನಮಿಸಿದೆ. ಪ್ರಮಾಣ ವಚನ ಓದಿದ್ದು, ಸಹಿ ಹಾಕಿದ್ದು, ಗ್ರೂಪ್ ಫೋಟೋ ತೆಗೆಸಿಕೊಂಡಿದ್ದು ಎಲ್ಲಾ ಒಂಥರಾ ಸಿನೆಮಾ ಅಂತ ಅನ್ನಿಸುತ್ತಿತ್ತು. ಹೇಗೆ ಅಂದ್ರೆ ಕೆಲವು ಸಿನೆಮಾಗಳಲ್ಲಿ ನೊಂದ ಹೆಣ್ಣು ಮಕ್ಕಳು ಅಧಿಕಾರಿಗಳಾಗಿ ಕಾರ್ ಇಳಿಯುವ, ಯಾರದ್ರೂ ಒಬ್ರು ಕಾರ್ ಡೋರ್ ತೆಗೆಯುವ ಸೀನ್ ನೆನಪಿಗೆ ಬಂತು. ಬರೀ ನೆನಪಿಗೆ ಬಂದಿದ್ದಲ್ಲ ಉಮಾಶ್ರೀ ಅವರು ಸಚಿವೆ ಆಗುವ ತನಕ ನಡೆದು ಬಂದ, ಬಿದ್ದುಬಂದ, ಎದ್ದು ಬಂದ ದಾರಿಗಳನ್ನು ನಂಗೆ ಗೊತ್ತಿರೋ ಹಂಗೆ ಅರ್ಥ ಮಾಡಿಕೊಂಡು ಕಣ್ಣೆಲ್ಲಾ ಒದ್ದೆ ಆಗಿ ರಾಜಭವನದ ಇರೋ ಭೂಮಿಗೆ ನನ್ನ ಕಣ್ಣ ಹನಿ ದಡಕ್ಕಂತ ಬಿದ್ದೆ ಬಿಡ್ತು. ಮುಖದ ಒಳಗಿನ ನರಗಳ ಕುಣಿತಕ್ಕೆ ನಾಲಿಗೆ ಅದುರೋಕೆ ಶುರು ಆಯಿತು. ಹುಬ್ಬುಗಳು ತನ್ನಷ್ಟಕ್ಕೇ ತಾನೇ ಅಲ್ಲಾಡ್ತಿದ್ವು. ಕೈ ಕಾಲು ಸ್ವಾದೀನ ಕಳಕೊಂಡಂತೆ ಆಯ್ತು. ಇನ್ನೂ ಹೃದಯದ ಕಥೆ ಕೇಳಬೇಕೇ ಅದಕ್ಕೆ ಫುಲ್ ಹಬ್ಬ ಅವತ್ತು.
ಅಧಿಕಾರ ವಹಿಸಿಕೊಂಡ ಮೇಲೆ ಅಮ್ಮನಿಗಾಗಿ ಗೂಟದ ಕಾರ್ ರೆಡಿ ಆಗಿ ನಿಂತಿತ್ತು. ಹಾಗೆಯೇ ಇತರ ಸಚಿವರಿಗೂ ಕೂಡ. ಅಮ್ಮ ಕಾರ್ ಹತ್ತಿದ್ದನ್ನು ಮನದಣಿಯೆ ನೋಡಿದೆ. ನಂಗೆ ನಿಜಕ್ಕೂ ಅದೊಂದು ಐತಿಹಾಸಿಕ ಕ್ಷಣ. ದಾಸಿಮಯ್ಯ ಮತ್ತು ದುಗ್ಗಳೆಯ ಕಾಲದಿಂದಲೂ ನೆಯ್ಗೆಯಲ್ಲೇ ಎಲ್ಲಾ ಸುಖಗಳನ್ನು ಕಂಡಿದ್ದ ನೇಕಾರ ಸಮುದಾಯಕ್ಕೆ ಕರ್ನಾಟಕದಲ್ಲಿ ಮಂತ್ರಿ ಅಂತ ಅಧಿಕಾರ ಸಿಕ್ಕಿದ್ದು ಈಗಲೇ ನೋಡಿ. ಅಮ್ಮ ಗೂಟದ ಕಾರ್ ಹತ್ತಿ ಕೈ ಬೀಸಿ ಜನರನ್ನು ಮಾತಾಡಿಸ್ತಿದ್ರೆ ಗರಿಕೆಯೊಂದು ಗದ್ದುಗೆಯ ಮೇಲೆ ಕೂತು ತಂಪು ತರುವಂತೆ ನನಗೆ ಅನ್ನಿಸುತಿತ್ತು. ಇನ್ನೂ ಈ ವಿಷಯವನ್ನು ಹೆಚ್ಚು ಹೇಳಲ್ಲ ಬಿಡಿ. ಅಮ್ಮ ಗೂಟದ ಕಾರ್ ಹತ್ತಿದ್ರು… ಮಿನಿಸ್ಟರ್ ಆದ್ರೂ…..



ella sadhaneya hinde bahala parishramaviruthe idanna nivu bahala adbhuthavagi bimbisiddira..uma sri ammana bahumukaha prathibegallali ondu avara athmavishwasa hagu thalme…nijavagiyu avru obba dhimantha mahile..inthahavaru nama karnatakada sachivaru annode hemme…..sada santhoshadindirali amma hagu avara kutumba (nangy nivu kuda avara kutumbadavary)
thumba chanagide sir
”BADUIKINA KAATHALEYA POORE KALACHIDANTHE ”THUMBA MEANING FUL WORDS & ”GAARIKEYONDU GAADUUGEYA MALE KOOTHU THAMPU THAARUVATHE” ENTHA WORDS BELUR SIR MAATHRAANE BAREYAALU SAADHYA NICE KALAM SIR
ರಘು , ನಿಮ್ಮ ಲೇಖನ ನಾನು ಕುತೂಹಲಿಸಿದ್ದ ಕೆಲವು ವಿಷಯಗಳ ಬಗ್ಗೆ ಸ್ವಲ್ಪವಾದರೂ ಮಾಹಿತಿ ಕೊಟ್ಟಿತು, ಅಂಕಣದಲ್ಲಿ ವಿವರವಾಗಿ ಬರೆಯುವುದು ಸಾಧುವೂ ಅಲ್ಲ.
ಉಮಕ್ಕನ ರಾಜಕೀಯ ಗೆಲುವು ಅದಕ್ಕಾಗಿ ಅವರು ಪಟ್ಟ ಶ್ರಮ, ಅವರಿಗೆ ಲಭ್ಯವಾದ ಸಚಿವ ಸ್ಥಾನ ಇತ್ಯಾದಿಗಳ ಬಗ್ಗೆ ನನಗಂತು ಆಸಕ್ತಿ ಕುತೂಹಲ ಎರಡೂ ಉಂಟು. ಲೇಖನ ಆ ಬಗ್ಗೆ ಕ್ರೋಢೀಕರಿಸಿದ ಮಾಹಿತಿ ಹೊಂದಿದೆ. ಅಜ್ಜಿ ಮೊಮ್ಮಗಳ ಹುಟ್ಟಿದ ದಿನ ಒಂದೇ ಆಗೋದು ಅಪರೂಪದಲ್ಲೊಂದು ಅಪರೂಪ. ಆ ಮಗು ಕೂಡಾ ಅಜ್ಜಿಯ ಹಾಗೆ ದಿಟ್ಟೆಯೂ,ಪ್ರತಿಭಾ ಸಂಪನ್ನೆಯೂ, ಮುಖ್ಯವಾಗಿ ಬದುಕನ್ನು ಗೌರವಿಸಿ ಪ್ರೀತಿಸುವವಳೂ ಆಗುತ್ತಾಳೆಂದು ಅನ್ನಿಸುತ್ತೆ.
Raghu avare nimma baraha chennagide. nivu pade pade heluva varsha english meshtra? yalahankadinda baruttara?
ಉಮಾಶ್ರೀಯವರ ಬದುಕಿನ ಬವಣೆಗಳನ್ನು, ಅದನ್ನು ಅವರು ಜೈಸಿದ ರೀತಿಯನ್ನು ಯಾವುದೋ ಸಿನಿಮಾ ಪತ್ರಿಕೆಯಲ್ಲಿ ಓದಿದ್ದೆ. ಆದರಿಂದು ಅವರು ಮುಟ್ಟಿದ ಗುರಿ ಮಾತ್ರ ಅನನ್ಯವಾದುದು. ಅವರು ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರು.ಸಂದರ್ಭಕ್ಕನುಗುಣವಾಗಿ ನಿರೂಪಿಸಿದ ನಿಮ್ಮ ಲೇಖನ ಸೊಗಸಾಗಿದೆ.
ಸತತ ಪರಿಶ್ರಮ,ಕ್ರಿಯಾಶೀಲತೆ
ಉಮಾಶ್ರೀ ಮೇಡಮ್ ನಿಜಕ್ಕೂ ಇತರರಿಗೆ ಆದರ್ಶ..
ಉತ್ತಮ ಅಂಕಣ
ಅಮ್ಮನ ಬಗ್ಗೆ ಅಭಿಮಾನ ಪೂರ್ವಕವಾಗಿ ಬರೆದಿದ್ದೀರಿ ಧನ್ಯವಾದಗಳು
Its really very impressive sir… Ur writing picturises everything in front of our eyes…
Raghunandanji…umashrijiyavarannu nanu amma anthene tilidukondavanu…karana bhahala varshada ammana bagge ondu newspapernalli serial roopadalli articles bartiddo.(I forgot newspaper name sorry)…ha articles nanna mele eshtu influences agiddo Andre adanna padagalalli helokkagalla…yakandre naanu bandiro daari kuda ashte khatinavaagittu…ivattigu nannalli enadru atmastairya ide andre adu amma beledu bandiro,anubhavisiro kashtagalu,ellavannu meeri ivattu beledu nintiro reethiye karana….idu yavude athishayoktiyalla….yakandre nannanna prabhavisiroru buddha,ambedkar mattu umashri amma….ittichege Zee TV nalli banda weekend with Ramesh programmenalli matte minister ammanannu nodidaga nanagada santhosha ashtishtalla….innu hareyadalle eradu makkalannu kattikondu kettaddu anno kshetradalli tanna tana kaledu kollade ivattu ellaru mechhovanta makkalannu samajakke needi….taanu kooda ella abhaleyarigu model. Agiro amma minister ammanagi Namma mundirodu nijakku ashcharya adaru ashte satya……avarannu kurita nimma abhiprayagalalle yaavudu vaastavathe viruddavaagilla.Sota gaagadalle gellabekemba ammana nirdhaara ellarigu anukaraniya……ha excellent personality bagge nannanthavanu eshtu hogalidru adu kadimene……..
ಉಮಾಶ್ರೀ ಅಮ್ಮ ನಾನು ಚಿಕ್ಕಂದಿನಿಂದ ಪ್ರೀತಿಸಿದ, ಗೌರವಿಸಿದ ಕಲಾವಿದೆ. ಆವರ ಅಭಿನಯವನ್ನು ಬೆರಗುಗಣ್ಣುಗಳಿಂದ ನೋಡಿದ್ದೇನೆ. ಭಾವುಕ ಸನ್ನಿವೇಶಗಳ ಅಭಿನಯಕ್ಕೆ ಹೃದಯ ತುಂಬಿ ಅತ್ತಿದ್ದೇನೆ. ಅವರ ಬದುಕಿನ ಹಾದಿಯನ್ನು ಬಿಚ್ಚಿಡುತ್ತಿರುವುದಕ್ಕೆ ಮೊದಲು ನಮ್ಮ ಮೇಷ್ಟ್ರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಒಂದು ಮಾದರಿ ಹೆಣ್ಣು ಜಗದ ಆಗು ಹೋಗುಗಳಿಗೆ ಹೇಗೆ ಗಟ್ಟಿಯಾಗಿ ನಿಂತು ಪ್ರತಿಕ್ರಿಯಿಸಬಹುದು. ಏನೇ ಬಂದರು ಮುನ್ನುಗ್ಗುವ ಮನಸ್ಥಿತಿಯನ್ನು ಉಮಾಶ್ರೀಯವರ ಕುರಿತಾದ ಈ ಬರಹದಲ್ಲಿ ಗಮನಿಸಿದ್ದೇನೆ. ಅವರ ದಿಟ್ಟತನ ಎಲ್ಲರಿಗೂ ಮಾದರಿಯಾದದ್ದು. ಅವರ ನೇರ ನುಡಿ, ಮನಸ್ಸು ತುಂಬಿ ಪ್ರೀತಿಸುವ ಗುಣ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅವರು ಹೀಗೇ ನಗುತ್ತಿರಲಿ, ಇನ್ನೂ ಎತ್ತರಕ್ಕೇರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು..