ಅಂದ ಹಾಗೆ ಸ್ನೇಹಿತರೇ ಮದುವೆಯಲ್ಲಿ ನಡೆದ ಕೆಲ ಸ್ವಾರಸ್ಯಕರ ವಿಷ್ಯ ಹೇಳೋದು ಮರೆತಿದ್ದೆ. ಈಗ ಹೇಳ್ತೀನಿ ಕೇಳಿ. ಮದುವೆ ಛತ್ರದ ತುಂಬಾ ಉಮಾಶ್ರೀ ಅವರನ್ನೇ ನೋಡ್ತಿದ್ರು, ನೆಂಟ್ರು ಇಷ್ಟ್ರು ಎಲ್ಲಾ. ಎಲ್ಲಾ ಮದುವೆಗಳಲ್ಲಿ ಗಂಡು ಹೆಣ್ಣು ಮದುವೆಯ ಪ್ರಧಾನ ಕೇಂದ್ರವಾದರೆ ನಮ್ಮನೆ ಮದುವೆಯಲ್ಲಿ ಉಮಾಶ್ರೀ ಅವರೇ ಕೇಂದ್ರ ಪರಿಧಿ ಎಲ್ಲಾ. ಅವರ ವಡವೆ, ಅವರ ಸೀರೆ, ಅವರ ತುರುಬಿನ ಶೃಂಗಾರ, ಮಾತು ನಡೆ ನುಡಿ, ಎಲ್ಲಾ ಒಂಥರಾ ಅಬುಜುಬ ಮದುವೆಗೆ ಬಂದ ಜನಕ್ಕೆ. ನಾವು ‘ಓ ಲಕ್ಷ್ಮಣ ಒಲೆಗೆ ಸೌದೆ ಇಲ್ಲ’ ಅಂತ ಮದ್ವೆ ಕೆಲ್ಸ ನೋಡ್ತಿದ್ರೆ, ಬಂದೋರು ಅವರನ್ನ ಮಾತಾಡಿಸಿಸಿ ಒಂದು ಫೋಟೋ ಹಿಡಿಸು ಅಂತ ಗಂಟು ಬೀಳ್ತಿದ್ರು. ಅಷ್ಟೇ ಅಲ್ಲಾ ನಿನಗೆ ನಾನು ತುಂಬಾ ಹತ್ತಿರದವರು ಅಂತೆಲ್ಲಾ ಉಮಾಶ್ರೀ ಅವರ ಹತ್ರ ಹೇಳಿಸಿಕೊಂಡು ಪರಿಚಯ ಮಾಡಿಕೊಳ್ಳಲು ಇಷ್ಟ ಪಡ್ತಿದ್ರು. ಮದ್ವೆ ಕೆಲಸ ಒಂದು ಕಡೆ ಆದ್ರೆ, ಬಂದೋರಿಗೆ ಬೇಸರ ಮಾಡಿಸಬಾರದು ಅಂತ ಅವರವರ ಇಷ್ಟಕ್ಕೆ ಅನುಗುಣವಾಗಿ ಪರಿಚಯಿಸಿ ಫೋಟೋ ಹಿಡಿಸಿ ಕಳಿಸುತ್ತಿದ್ದೆ. ಇಷ್ಟಾದರೂ ಉಮಾಶ್ರೀ ಅವರು ಹೌದಾ, ಸಂತೋಷ, ಊಟ ಮಾಡಿದ್ರಾ, ಅಂತೇಳಿ ಬಂದವರನ್ನೆಲ್ಲಾ ಪ್ರೀತಿಯಿಂದ ಮಾತಾಡಿ ಕಳಿಸೋರು.
ಇಡೀ ಮದುವೆ ತುಂಬಾ ಉಮಾಶ್ರೀ ಅವರು ಲಕ ಲಕ ಅಂತ ಓಡಾಡಿಕೊಂಡು ಎಲ್ಲರನ್ನು ಮಾತಾಡಿಸುತಿದ್ರೆ ಅದೊಂದು ಕಳೆ ಮದುವೆಗೆ ಅನ್ನೋ ತರ ಇತ್ತು, ಪಟ ಪಟ ಎಲ್ಲ ಶಾಸ್ತ್ರಗಳನ್ನು ಮಾಡಿಸಲು ಶಾಸ್ತ್ರಕ್ಕೆ ಅಂತ ಮೀಸಲು ನಿಂತಿದ್ದ ಹೆಣ್ಣು ಮಕ್ಕಳನ್ನು ಕೂತ ಕಡೆಯಿಂದಾನೆ ‘ಶಾಸ್ತ್ರಗಳನ್ನು ಮಾಡ್ರೆ ಬೇಗೆ ಬೇಗ ಆ ಹುಡುಗ್ರುನಾ ಗೋಳು ಹುಯ್ಕೊಬೇಡ್ರಿ’ ಅಂತ ಎಲ್ಲರ ಹತ್ತಿರ ಸಲುಗೆ ಮತ್ತು ಪ್ರೀತಿಯಿಂದ ನಡ್ಕೋತಿದ್ರು. ಮಾತು ಮಾತಿಗೂ ನನ್ ಹತ್ತಿರ ಬಂದು ಬಳೆ ಶಾಸ್ತ್ರಕ್ಕೆ ತಯಾರೆನಪ್ಪಾ, ನೀರ್ ತರೋ ಶಾಸ್ತ್ರ ಮಾಡೋಣ, ಅರಿಶಿನ ಕುಟ್ಟಿಸೋಣ, ತಾಂಬೂಲ ಬದಲಾಯಿಸಿಕೊಳ್ಳಲು ಯಾರನ್ನಾದರು ಸೋದರ ಮಾವನ್ನೋ ಅತ್ವ ಯಾರಾದ್ರೂ ಹಿರಿಯರನ್ನ ಕರೆಯಪ್ಪ, ಅರಿವೆಗಳನ್ನು ಪೂಜೆ ಮಾಡೋ ಅರಿಣಿ ಶಾಸ್ತ್ರ ಮುಗಿತಲ್ವಾ, ಬೆಳಗ್ಗೆ ಬೇಗ ನಾಂದಿ ಮುಗಿಸಿ ಕಾಶಿಯಾತ್ರೆಗೆ ಗಂಡು ಕಳಿಸಿಬಿಡಪ್ಪ, ತಿರುಗಂಚು ಮರುಗಂಚು, ಗೌರಿ ಪೂಜೆ ಅಯ್ಯೋ ಒಂದಾ ಎರಡಾ ನಂಗೆ ಇವೆಲ್ಲಾ ಗೊತ್ತಾಗಿದ್ದು ಮದುವೆಯಲ್ಲೇ. ಆಮೇಲೆ ರಾತ್ರಿಯಿಡೀ ಹೆಣ್ಣು ಗಂಡಿಗೆ ಹರಳೆಣ್ಣೆಯಲ್ಲಿ ಕಲೆಸಿದ ಅರಿಶಿಣ ಹಚ್ಚುವಾಗ ಅವರ ತಮಾಷೆಯ ಮಾತುಗಳಂತೂ ಎಲ್ಲರಿಗೂ ಶಾಸ್ತ್ರ ಮಾಡಲು ಹುಮ್ಮಸ್ಸು ತರುವಂತಿತ್ತು. ಆದ್ರೆ ಹುಡುಗಾ ಹುಡುಗಿಗೆ ನಾಚಿಕೆ ಜೊತೆಗೆ ಪ್ರಾಣ ಸಂಕಟ. ತವರು ಮನೆಯಿಂದ ಹೆಣ್ಣಿನ ಜೊತೆ ಕಳಿಸುವ ಬಂಗಾರದ ಗೂಡೆಯಲ್ಲಿ ತಂಗಿಗೆ ಏನೇನು ಇಟ್ಟಿದ್ದೀಯಪ್ಪ ಅಂತ ತಮಾಷೆ ಮಾಡೋರು. ಅದಕ್ಕೆ, ನಾನು ಬಂಗಾರನೇ ನಿಮಗೆ ಕೊಟ್ಟುಬಿಟ್ಟಿದ್ದೇನೆ ನಾ ಇನ್ನೇನು ಇಡಲಮ್ಮಾ ಅಂದಿದ್ದಕ್ಕೆ ಇಬ್ಬರೂ ಗೊಳ್ ಎಂದು ನಕ್ಕಿದ್ದೆವು. ಮದುವೆ ಮುಗಿದ ಮೇಲೆ ಗಂಡು ಹೆಣ್ಣಿನ ಹತ್ತಿರ ಮಡಕೆಯಲ್ಲಿ ಚಿನ್ನದ ಉಂಗುರ ಮತ್ತು ಬೆಳ್ಳಿಯ ಉಂಗುರ ತೆಗಿಸೋದು, ಮಧ್ಯ ಸೌತೆಕಾಯನ್ನು ಮಗು ಅಂತಇಬ್ಬರ ನಡುವೆ ಇಡೋದು, ಹೆಸರು ಕೇಳಿ ಸತಾಯಿಸೋದು ಇಲ್ಲೆಲ್ಲಾ ಉಮಾಶ್ರೀ ಅವರು ವಧು ವರರನ್ನು ಗೋಳು ಹುಯ್ಕೊಂಡಿದ್ದು ಇದೇ. ಬೆಳ ಬೆಳಗ್ಗೆ ನೇ ನಕ್ಷತ್ರ ತೋರಿಸೋ ಶಾಸ್ತ್ರಕ್ಕೆ ನಕ್ಕು ಪುರೋಹಿತನಿಗೆ ಛೇಡಿಸಿ, ಆಯಿತಾಯಿತು ಮಾಡಿಸಿ ಈ ಆಂಗಲ್ಲು ಫೋಟೋಗೆ ಚೆನ್ನಾಗಿ ಬರುತ್ತೆ ಅಂತ ಆ ಶಾಸ್ತ್ರ ಮಾಡಿಸಿದ್ದು ಚೆನ್ನಾಗಿತ್ತು. ಪ್ರತಿ ಶಾಸ್ತ್ರ ಆದಮೇಲೂ ಗೊಂಬೆಯಂತೆ ಅಲಂಕಾರ ಆಗುತ್ತಿದ್ದ ಶೆತಮ್ಮನ್ನ ನೋಡಿ ಶಿಲಾಬಾಲಿಕೆ ಶಿಲಾಬಾಲಿಕೆ ಅಂದೂ ಅಂದೂ ಏನಾದ್ರೂ ಮೇಕಪ್ಪು ಹೆಚ್ಚು ಕಮ್ಮಿ ಆಗಿದ್ರೆ ತಾನೂ ಸೇರಿಕೊಂಡು ಸುನಂದತ್ತಿಗೆ ಜೊತೆ ಹುಡುಗಿ ಅಲಂಕಾರಕ್ಕೆ ಸಹಕರಿಸುತಿದ್ರು. ಒಟ್ಟು ಇಡೀ ಮದುವೆಯಲ್ಲಿ ಉಮಾಶ್ರೀ ಅವರು ಎಲ್ಲಿರುತ್ತಿದ್ರೋ ಅಲ್ಲಿ ಜನ ಜುಯ್ ಅನ್ನೋರು. ಅವರ ಮಾತು ಕೇಳಲು ಮತ್ತು ಅವರು ಶಾಸ್ತ್ರಗಳನ್ನು ಮಾಡಿಸುವಾಗ ಮಾತಾಡುತ್ತಿದ್ದ ನಗೆ ಚಟಾಕಿಗಳನ್ನು ಕೇಳಿ ನಗಲು. ಒಮ್ಮೊಮ್ಮೆ ಏನಾದ್ರೂ ಶಾಸ್ತ್ರ ಅದು ಇದೂ ಅಂತಾ ತಡ ಆದ್ರೆ ಗರಂ ಆಗಿ ಮತ್ತೆ ತಣ್ಣಗಾಗಿ ಬಿಡೋರು. ಉಮಾಶ್ರೀ ಅವರಿಂದ ಇಡೀ ಮದುವೇ ಮನೆ ಲವ ಲವಿಕೆಯಿಂದ ತುಂಬಿತ್ತು. ಎಲ್ಲೂ ತಾ ಗಂಡಿನ ತಾಯಿ ಅನ್ನುವ ಬಿಂಕ ಬಿಗುಮಾನ ಕಾಣಲೇ ಇಲ್ಲ.
ಮದುವೆಗೆ ಬಂದ ಉಮಾಶ್ರೀ ಅವರ ಕಡೆಯವರಿಗೆ ನನ್ನನ್ನು ಬೀಗ ಬೀಗ ಅಂತ ಪರಿಚಯಿಸುತ್ತಿದ್ದರು. ಹಿರಿಯ ಚಿತ್ರನಟ ಲೋಕನಾಥ್ ಅವರು ಬಂದಾಗ ‘ಇವನು ನನ್ನ ಬೀಗ ಅಂದು ಬಿಟ್ರು’. ಅದಕ್ಕವರು ‘ಏನಮ್ಮಾ ಎಷ್ಟು ಚಿಕ್ಕ ಬೀಗ ಪಡೆದುಕೊಂಡುಬಿಟ್ಟಿದ್ದೀಯ, ಅಂತೇಳಿ ಭದ್ರವಾಗಿರುತ್ತೇನಮ್ಮ ?’ ಅಂತ ಕೇಳುದ್ರು. ಅದಕ್ಕೆ ಉಮಾಶ್ರೀ ಅವರು ‘ಬೀಗಾನು ಗಟ್ಟಿ ಬೀಗದ ಕೈ ಕೂಡ ಗಟ್ಟಿ, ಅವನದ್ದು ನಂದೂ ಸ್ವಲ್ಪ ಸ್ವಲ್ಪ ಒಂದೇ ಕಥೆ ಸಾರ್’ ಅಂದು ನನ್ನ ಪ್ರವರನೆಲ್ಲಾ ಲೋಕನಾಥ್ ಅವರ ಹತ್ತಿರ ಬಡ ಬಡ ಹೇಳಿಬಿಟ್ರು. ಅದಷ್ಟೇ ಅಲ್ಲ ಮದುವೆಗೆ ಬಂದ ಅನೇಕ ಸೆಲೆಬ್ರೆಟಿಗಳಿಗೆ, ನೆಂಟರಿಗೆ, ಸ್ನೇಹಿತರಿಗೆ, ಎಲ್ಲರಿಗೂ ನನ್ನ ‘ಬೀಗ ಬೀಗ’ ಅಂತಲೇ ಪರಿಚಯಿಸುತ್ತಾ ಅವರಿಗೆ ನಾ ಸಿಕ್ಕಿದ್ದು ಹೆಮ್ಮೆ ಅನ್ನುವಂತೆ ನನಗೆ ಅವರು ಸಿಕ್ಕಿದ್ದು ಹೆಮ್ಮೆ ಅನ್ನುವಂತೆ ಪರಿಚಯದ ಮಾತುಗಳನ್ನು ಬಂದವರ ಮುಂದೆ ಪರಸ್ಪರ ಮಾತಾಡುತ್ತಿದ್ದೆವು. ಆಗೆಲ್ಲಾ ನಾ ಮುಜುಗರದಿಂದ ಮುದುಡಿ ಹೋಗುತ್ತಿದ್ದೆ. ಏನೂ ಅಲ್ಲದ ನನಗೆ ಅವರು ಕೊಟ್ಟ ಸ್ಥಾನ ಮಾನಗಳು ನನ್ನಲ್ಲಿಯೇ ನನ್ನ ವಿಶ್ವಾಸವನ್ನು ಹೆಚ್ಚಿಸುತ್ತಿದ್ದವು. ಅಲ್ಲಿಂದಲೇ ನೋಡಿ, ಮಣ್ಣು ಮತ್ತು ಬೇರು ಪರಸ್ಪರ ಪ್ರೀತಿಸಿಕೊಳ್ಳೋ ತರ ನಾನೂ ಅವರು ತಾಯಿ ಮಗನಂತೆ ಒಬ್ಬರನ್ನೊಬ್ಬರು ಗೌರವಿಸಿಕೊಳ್ಳೋಕೆ ಶುರು ಆಗಿದ್ದು.

ಮದುವೆ ಹಿಂದಿನ ದಿನ ಹರಿಶಿನ ಹಚ್ಚುವ ಶಾಸ್ತ್ರಕ್ಕೆ ಎಲ್ಲರೂ ಸಿದ್ಧ ಮಾಡ್ಕೋತಿದ್ರು. ಹಸೆ ಹಚ್ಚುತಿದ್ರು, ಅರುಷ್ಣ ಕಲ್ಸುತಿದ್ರು, ಹಾಡು ಹೇಳೋಕೆ ಅಜ್ಜಿರೆಲ್ಲಾ ಟಿಪ್ ಟಾಪಾಗಿ ತಯಾರಾಗಿ ಕೂತಿದ್ರು. ಒಳ್ಳೇ ಹೋಳಿಗೆ ಊಟಾನು ಆಗಿತ್ತು. ನಮ್ಮ ಸಂಭಂದಿಕರೊಬ್ಬರು ಒಂದತ್ತು ಬೀಡಾಗಳನ್ನು ತಂದು ಅಲ್ಲಿ ಶಾಸ್ತ್ರ ಮಾಡುತ್ತಿದ್ದ ಹೆಣ್ಣು ಮಕ್ಕಳಿಗೆ ಕೊಟ್ರು. ಅಲ್ಲಿದ್ದೋರೆಲ್ಲಾ ಒಂದೊಂದು ಬೀಡ ಹಾಕಿಕೊಂಡು ಶಾಸ್ತ್ರ ಮಾಡಲು ತಯಾರಾದ್ರು. ನೋಡಬೇಕು ಆ ಸುಖಾನ. ಸರಿ, ಉಮಾಶ್ರೀ ಅವರು ಕೂಡ ಒಂದು ಬೀಡ ತೆಗೆದುಕೊಂಡು ಹಾಕಿಕೊಂಡ್ರು. ಬೀಡ ಹಾಕೊಂಡಿದ್ದೇ ತಡ ಒಂದಿಬ್ಬರು ತೇಲಾಡೋಕೆ ಶುರು ಮಾಡಿದ್ರು. ಏನೇನೋ ಮಾತಾಡೋಕೆ ಆರಂಭಿಸಿದ್ರು. ಅಲ್ಲಿ ಕೂತೋರಿಗೆ ಒಂಥರಾ ಮಜಾ ತರಿಸುತ್ತಿದ್ದ ಸನ್ನಿವೇಶ ಆಗಿತ್ತು. ಯಾಕೇ ಇವರೆಲ್ಲಾ ಹಿಂಗಾಡುತ್ತಿದ್ದಾರೆ ಅಂತ ನೋಡಿದ್ರೆ ಅವರು ತಿಂದಾ ಬೀಡಗಳೆಲ್ಲಾ ಸ್ಟ್ರಾಂಗ್ ಜರದಾ ಬೀಡಗಳು. ಉಮಾಶ್ರೀ ಅವರು ತಿಂದ ಬೀಡ ಕೂಡ ಜರದಾನೇ ಆಗಿತ್ತು. ‘ಅಯ್ಯಯಪ್ಪಾ ಬೇಗೆ ಬೇಗ ಶಾಸ್ತ್ರಗಳನ್ನೆಲ್ಲಾ ಮಾಡ್ರೆ ಅಂತ’ ಒಂದು ಗುಟುರು ಹಾಕಿದ್ರು. ಅಲ್ಲಿದ್ದೋರೆಲ್ಲಾ ಗೊಳ್ ಎಂದು ನಕ್ಕರು. ಅರಿಶಿನ ಹಚ್ಚುವ ಶಾಸ್ತ್ರ ಬುಗ್ಗೆ ಬುಗ್ಗೆ ನಗೆಯಿಂದ ಕೂಡಿತ್ತು. ಇಡೀ ಮದುವೆಯಲ್ಲಿ ಯಾರೂ ಮರೆಯಲಾರದ ಘಟನೆ ಯಾವುದು ಅಂತ ಕೇಳಿದ್ರೆ, ಈ ಸನ್ನಿವೇಶ ನೋಡಿ. ಸದ್ಯ, ಎಲ್ಲರ ಮತ್ತು ಒಂದತ್ತು ನಿಮಿಷದಿಂದ ಕಾಲುಗಂಟೆ ಮಾತ್ರ ಇತ್ತು ಅಷ್ಟೇ. ಇತ್ತ ಮುದುಕೇರೆಲ್ಲಾ ಹಸೆ ಹಾಡು ಹಾಡುತಿದ್ರೆ ಆ ಕಡೆ ಯುವಕರು ಗಂಡು ಹೆಣ್ಣನ್ನು ಚೇಡಿಸೋ ಹಾಡನ್ನು ಹಾಡುತಿದ್ರು. ಆ ಅರಿಶಿನದ ರಾತ್ರಿ ರಂಗಾಗಿತ್ತು.
ಮದುವೆ ಆದ ಮೇಲೆ ಶಾಸ್ತ್ರ ಮಾಡಿದ ಹೆಣ್ಣುಮಕ್ಕಳಿಗೆ ಹರಿಶಿನ ಕುಂಕುಮ ಕೊಡುವ ಮತ್ತು ಅವರನ್ನು ಸತ್ಕರಿಸುವ ಒಂದು ಶಾಸ್ತ್ರ ಇದೆ. ಜೊತೆಗೆ ಹೆಣ್ಣು ಗಂಡಿನ ತಾಯಂದಿರಿಗೂ. ಈ ಸಂದರ್ಭದಲ್ಲಿ ನನ್ನ ತಂಗಿ ಉಮಾಶ್ರೀ ಅವರಿಗೆ ಶಾಸ್ತ್ರದ ನಿಯಮದ ಪ್ರಕಾರ ಕೊಡೋದನ್ನೆಲ್ಲಾ ಕೊಟ್ಟು ಕಾಲಿಗೆ ನಮಸ್ಕಾರ ಹಾಕಿದ ಮೇಲೆ ಗಂಡನ ಹೆಸರು ಕೇಳಮ್ಮಾ ಅಂತ ಅಲ್ಲಿದ್ದ ಶಾಸ್ತ್ರದಲ್ಲಿ ಪ್ರಾವೀಣ್ಯರಾಗಿದ್ದ ಹೆಂಗಸರು ಹೇಳಿಕೊಟ್ಟರು. ನನ್ನ ತಂಗಿ ಅವರು ಹೇಳಿಕೊಟ್ಟಂತೆ ಕೇಳಿದಳು. ಅದಕ್ಕೆ ಉಮಾಶ್ರೀ ಅವರು ‘ಸಿದ್ಧ ಸಿದ್ಧ ಸಿದ್ಧರಾಜು’ ಅಂದು ಜೋರಾಗಿ ನಕ್ಕುಬಿಟ್ಟರು. ಅಲ್ಲಿದ್ದೋರು ಕೂಡ ಎಲ್ಲರೂ ಕಿಲಕಿಲನೆ ನಕ್ಕರು. ನಂಗೆ ಮಾತ್ರ ಆ ನಗುವಿಗೆ ಇದ್ದ ಅನೇಕ ಅರ್ಥಗಳು ಕಾಣುತ್ತಿದ್ದವು. ಅದೆಲ್ಲಾ ಆದ ಮೇಲೆ ಉಮಾಶ್ರೀ ಅವರು ನನ್ನ ತಂಗಿಯ ಹತ್ತಿರ ‘ನಿಮ್ಮನೆಯವ ಹೆಸರೇನಮ್ಮಾ’? ಅಂದ್ರು. ಇವಳು ಕೇಳಿಯೂ ಕೇಳದಂತೆ ವಿಜಯಕುಮಾರ್ ಅಂದು ಕಿರುನಗೆ ನಕ್ಕಳು.
ಆಮೇಲೆ ಉಮಾಶ್ರೀ ಒಬ್ಬಂಟಿ ಹೆಂಗಸು. ಅವರು ಮದುವೆ ಹೇಗೆ ಮಾಡುತ್ತಾರೆ ಅನ್ನುವ ಮದುವೆ ಮನೆಯಲ್ಲಿದ್ದ ಹಲವರ ಕುತೂಹಲಕ್ಕೆ ಇಡೀ ಮದುವೆಯಲ್ಲಿ ಉಮಾಶ್ರೀ ಅವರು ತಮ್ಮ ಪತಿಯ ಜೊತೆ ಇದ್ದುಕೊಂಡೇ ಎಲ್ಲಾ ಮದುವೆಯ ಶಾಸ್ತ್ರಗಳಲ್ಲಿ ಭಾಗಿಯಾದರು. ಅವರೂ ಕೂಡಾ ಅಷ್ಟೇ. ಗಂಡನ ಮನೆಯವರು ಕೂಡಾ ಮದುವೆ ಮನೆಯಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಗಳಲ್ಲೂ ಬದ್ಧತೆಯಿಂದ ಭಾಗಿಯಾದರು. ಅಷ್ಟೇ ಅಲ್ಲ ತನ್ನ ಅಕ್ಕ ತಂಗಿಯರಿಗೆ, ತೀರಾ ಹತ್ತಿರದ ರಕ್ತ ಸಂಭಂದಗಳಿಗೆ ಅವರು ಕೊಡುತ್ತಿದ್ದ ಗೌರವ ಮತ್ತು ಕಾಳಜಿ ನಿಜಕ್ಕೂ ಅವರ ವ್ಯಕ್ತಿತ್ವದ ಗರಿಯಾಗಿ ಕಾಣುತ್ತಿತ್ತು. ಎಲ್ಲಾ ಸಂಬಂಧಗಳಿಗೂ ದಕ್ಕಬೇಕಾದ ಪ್ರಾಶಸ್ತ್ಯ ಅದರಲ್ಲೂ ವಿಚ್ಛೇದನವೇ ಆಗಿಲ್ಲವೇನೋ ಅನ್ನುವಂತೆ ತನ್ನ ಗಂಡನ ಮನೆಯವರಿಗೆ ಕೊಡುತ್ತಿದ್ದ ಪ್ರೀತಿಯನ್ನು ಕಂಡ ನನಗೆ ಉಮಾಶ್ರೀ ಅವರು ಬಹುದೊಡ್ಡ ಮಾನವತಾವಾದಿಯಾಗಿ ಕಂಡರು. ಅವರ ಈ ಗುಣ ಇಂದಿಗೂ ಒಂಚೂರು ಕದಲಿಲ್ಲ ಕೂಡ.
ಬೇಲೂರು ರಘುನಂದನ್ ಕಾಲಂ : ಜರದಾಬೀಡ ತಿಂದ ಉಮಾಶ್ರೀ

What a fantastic episode by Ragunandan… Three salute to you sir… Good use of language… Excellent writing… looking forward for next episode…. cant’ wait for sunday
Nimma tangiya maduve sadagarada baraha aapthavagide .nanna tangiya maduve nenapayitu .but umaashree anta celebrity irlilla aste .munduvaresi