ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಕೈಲಾಸಂ ನಾಟಕದ ಸಂಭಾಷಣೆಯನ್ನು ನೆನಪಿಸಿಕೊಂಡ ಉಮಾಶ್ರೀ


ಭಾರತ ರತ್ನ ಪ್ರಶಸ್ತಿ ಬಂದಿದ್ದಕ್ಕಾಗಿ ಕರ್ನಾಟಕ ಸರ್ಕಾರವು ವಿಜ್ಞಾನಿ ಸಿ.ಎನ್.ಆರ್. ರಾವ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಡಿ.ಎಚ್. ಶಂಕರಮೂರ್ತಿ, ರೋಶನ್ ಬೇಗ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್ ಹೀಗೆ ಅನೇಕ ಮಂದಿ ಸಚಿವರುಗಳು ಮತ್ತು ಗಣ್ಯರು ಅಂದು ವಿಧಾನ ಸೌಧದ ಬ್ವಾಂಕೆಟ್ ಹಾಲ್ ನಲ್ಲಿ ಸೇರಿದ್ದರು. ಇಡೀ ಆ ಸಭಾಂಗಣ ತುಂಬಿ ಹೋಗಿತ್ತು. ಇದೇ ಕಾರ್ಯಕ್ರಮದ ಉಸ್ತುವಾರಿಯನ್ನು ಅಮ್ಮ ವಹಿಸಿಕೊಂಡಿದ್ದರು. ಅಂದ್ರೆ ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮದ ನೇಪಥ್ಯದಲ್ಲಿತ್ತು.
ಕನ್ನಡದ ಮಣ್ಣಿನಿಂದ ವಿಶ್ವವನ್ನೇ ಸೆಳೆದ ಭಾರತ ರತ್ನ ಸಿ.ಎನ್. ಆರ್. ರಾವ್ ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿಯೇ ಸರ್ಕಾರ ಒಂದೊಳ್ಳೆ ಕಾರ್ಯಕ್ರಮವನ್ನು ರೂಪಿಸಿತ್ತು. ಅದರ ಪೂರ್ತಿ ಉಸ್ತುವಾರಿಯನ್ನು ಅಮ್ಮ ತೆಗೆದುಕೊಂಡಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ, ಯಾವ ಯಾವಾಗ ಏನೇನು ಜರುಗಬೇಕು ಅಂತ ಮುಂಚೆನೇ ಸಾಕಷ್ಟು ತಿಳುವಳಿಕೆ ಕೊಟ್ಟ ಹಾಗೆ ಕಾರ್ಯಕ್ರಮ ರೂಪುಗೊಂಡಿತ್ತು. ಅಂದಿನ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ನಿರ್ದೇಶಕರಾದ ದಯಾನಂದ್ ಅವರುಗಳು ಕೂಡ ಒಟ್ಟು ಕಾರ್ಯಕ್ರಮದಲ್ಲಿ ಒಂದಿಷ್ಟೂ ಲೋಪವಾಗದಂತೆ ನಿಗಾವಹಿಸುತ್ತಿದ್ದರು. ಇಡೀ ಕಾರ್ಯಕ್ರಮದಲ್ಲಿ ಅಮ್ಮನ ಕಾರ್ಯಕ್ಷಮತೆ ಮತ್ತು ಒಂದು ಕಾರ್ಯಕ್ರಮದಲ್ಲಿ ಇರಬೇಕಾದ ಅಚ್ಚುಕಟ್ಟುತನ ಎಂದಿನಂತೆ ಅಂದೂ ಕೂಡ ನನಗೆ ದಿಗ್ಗನೆ ಕಾಣುತಿತ್ತು.
ಅನೇಕ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಅಮ್ಮ ಸೂಕ್ಷ್ಮ ಸೂಕ್ಷ್ಮ ಅಂಶಗಳನ್ನೂ ಗಮನಿಸಿ ಅಲ್ಲೆಲ್ಲಾ ಹೀಗೆ ಆಗಬೇಕು ಅಂತ ಮಾಡಿದ್ದು, ಮಾಡಿಸಿದ್ದು ಉಂಟು. ಒಂದು ಕೆಲಸವೋ ಅಥವಾ ಕಾರ್ಯಕ್ರಮವೋ ಅದು ಬೇಡುವ ಮತ್ತು ಅದರ ಪೂರ್ಣತೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಅಮ್ಮ ಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಒಂದು ಕ್ಷಣವೂ ಸುಮ್ಮನೇ ಕೂರದೇ ಸದಾ ಪೂರ್ಣತೆಗೆ ಹಾತೊರೆಯುತ್ತಿರುತ್ತಾರೆ ಅಮ್ಮ. ಮನೆಯ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೇ ಇಷ್ಟೊಂದು ಜವಾಬ್ದಾರಿಯುತವಾಗಿ ನಿಗಾವಹಿಸುವ ಅಮ್ಮ ಸಾರ್ವಜನಿಕ ಕಾರ್ಯಕ್ರಮಗಳನ್ನು ಹೇಗೆ ರೂಪಿಸಿರುತ್ತಾರೆ ಅಂತ ನೋಡಬೇಕು ಅಂತಲೇ ಅನೇಕ ಕಾರ್ಯಕ್ರಮಗಳಿಗೆ ನಾನು ಹೋಗಿದ್ದುಂಟು.
ಮನೆಯ ಹಂತದಲ್ಲೇ ರೂಢಿಸಿಕೊಂಡು ಬಂದ ಈ ಶಿಸ್ತು ಸಾರ್ವಜನಿಕ ಜೀವನಕ್ಕೆ ಬಂದಕೂಡಲೇ ಏನಾದ್ರೂ ಬದಲಾಗುತ್ತಾ ಅಂತ ನಾನೂ ಕಾಯುತ್ತಿದ್ದೆ. ಯಾಕಂದ್ರೆ ಕುಟುಂಬದೊಳಗೆ ಹಿರೀಕರಾಗಿ ಸಂಘಟಿಸುವುದು ಅಂತಾ ಕಷ್ಟವೇನಲ್ಲಾ. ಅಲ್ಲಿ ಸಂಬಂದಗಳ ಹೆಣಿಗೆಯೇ ಕೇಳುವ ಮತ್ತು ಹೇಳುವ, ಹೇಳುವ ಮತ್ತು ಕೇಳುವ ನೆಲೆಯಲ್ಲಿ ನಿರ್ಮಾಣಗೊಂಡಿರುತ್ತದೆ. ಅಲ್ಲಿ ಪ್ರೀತಿ, ಭಯ, ಗೌರವ ಮತ್ತು ವಿಶ್ವಾಸಗಳು ಕೆಲಸ ಮಾಡುತ್ತಿರುತ್ತವೆ. ಆದ್ರೆ ಸಾರ್ವಜನಿಕವಾಗಿ ಯಾವುದೇ ಒಂದು ಕಾರ್ಯಕ್ರಮವನ್ನ ನಾಯಕತ್ವದ ನೆಲೆಯಲ್ಲಿ ನಿಂತು ಕೆಲಸ ಮಾಡಿಸಬೇಕಾದರೆ ಅವು ಅದೆಷ್ಟೋ ಮಿತಿಗಳನ್ನು ಹೊಂದಿರುತ್ತೆ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ. ಅದೂ ಸಾರ್ವಜನಿಕ ಹಂತಗಳಲ್ಲಿ ಯಾವುದೇ ಕಾರ್ಯಕ್ರಮಗಳು ಅಥವಾ ಯೋಜನೆಗಳು ಏಕ ಕಾಲಕ್ಕೆ ಮೊಳೆತು, ಹುಟ್ಟಿ, ಬೆಳೆದು, ಫಲಿಸಿ ಮಾಯ ಆಗುವುದೇ ಹೆಚ್ಚು. ಹೀಗಿರುವಾಗ , ಹೇಳಿದವರ ಮಾತು ಕೇಳಬೇಕ ? ಯಾಕೆ ಕೇಳಬೇಕು ? ಹೇಗೆ ಕೇಳಬೇಕು ?ಅಂತೆಲ್ಲಾ ಪ್ರೆಶ್ನೆಗಳು ಬರೋದ್ರಿಂದ ಮನೆಯಲ್ಲಿ ಯಶಸ್ಸನ್ನು ಪಡೆದಂತೆ ಹೊರಗೆ ಪಡೆಯೋದು ತುಸು ಕಷ್ಟವೇ.
ಹಾಗಾಗಿ ವ್ಯಷ್ಠಿಯೊಳಗೆ ಇದ್ದಂತೆ ಸಮಷ್ಠಿ ನೆಲೆಯ ಕಾರ್ಯಕ್ರಮಗಳನ್ನು ರೂಪಿಸುವಾಗ ಅದರ ಹಿಂದೆ ಕೂಡ ಒಂದು ಗಟ್ಟಿಯಾದ ಸಂಘಟನಾ ಶಕ್ತಿ ಕೆಲಸ ಮಾಡಲೇ ಬೇಕಾಗುತ್ತದೆ. ಅಮ್ಮ ಇಲ್ಲೆಲ್ಲಾ ಹೇಗೆ ನಿಭಾಯಿಸುತ್ತಾರೆ ಅನ್ನೋ ಕುತೂಹಲ ಬಹಳ ಇತ್ತು ನನಗೆ. ಇದೆಲ್ಲಾ ಯೋಚಿಸಿಕೊಂಡು ಸಿ.ಎನ್. ಆರ್ ಅವರ ಕಾರ್ಯಕ್ರಮ ನೋಡಿ, ಅಲ್ಲಿನ ಸೂಕ್ಷತೆಗಳನ್ನು ಗಮನಿಸಿದಾಗ ಅಲ್ಲೆಲ್ಲಾ ಅವರ ಕಾಯಕ ಪ್ರಜ್ಞೆ, ಯೋಜನೆ ಅದರ ಪಾಲನೆ ಎದ್ದು ಕಾಣುತಿತ್ತು. ಮನೆಯಲ್ಲಿ ಮೈಗೂಡಿಸಿಕೊಂಡಿದ್ದು ಮತ್ತೆಲ್ಲಾ ಕಡೆ ಹರಡಿಬಿಡುತ್ತೆ ಅಲ್ವಾ. ಅಷ್ಟಿಲ್ಲದೇ ಹೇಳಿದ್ದಾರ ‘ಮನೆಯೇ ಮೊದಲ ಪಾಠಶಾಲೆ’ ಅಂತ. ಅಮ್ಮಾ ಮನೆಯಲ್ಲಿ ಮಾತ್ರವಲ್ಲ ಸಾರ್ವಜನಿಕವಾಗಿಯೂ ತನ್ನ ತನವನ್ನು ಸ್ಪಷ್ಟವಾದ ಪರಿಧಿಯೊಳಗೆ ಕೆಲಸ ಮಾಡಿದ್ದನು ಗಮನಿಸಿದ್ದೇನೆ. ಒಮ್ಮೊಮ್ಮೆ ಅದೇ ಪರಿಧಿಯನ್ನು ಮೀರಿದ್ದಾರೆ ಕೂಡ.
ಮೊನ್ನೆ ಮೊನ್ನೆ ನಡೆದ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲೂ ಆಯೋಜಕರಿಗೆ ಮೊದಲು ಹೂ ತನ್ನಿ, ಹಣ್ಣು ಆಮೇಲೆ ಕೊಡಿ, ಆಮೇಲೆ ಫಲಕ ಮತ್ತು ಹಣದ ಚೆಕ್ ಕೊಡಿ ಅಂತ ಸೂಚನೆ ಕೊಡುತ್ತಿದ್ದನ್ನು ಅನೇಕರು ಗಮನಿಸಿರಬಹುದು. ಅಷ್ಟೇ ಅಲ್ಲ ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯ್ರಮದಲ್ಲಿ ಸಾಧನೆ ಮಾಡಿದ ಮಕ್ಕಳಿಗೆಲ್ಲಾ ಪ್ರಶಸ್ತಿ ಕೊಡುವ ಕಾರ್ಯಕ್ರಮ ಏರ್ಪಾಟಾಗಿತ್ತು. ಅವತ್ತು ಘನತೆವೆತ್ತ ರಾಜ್ಯಪಾಲರಾದ ವಜುಬಾಯಿ ವಾಲಾ ಅವರು ಪ್ರಶಸ್ತಿ ಕೊಡಲು ಬಂದಿದ್ದರು. ಆ ಕಾರ್ಯಕಮದಲ್ಲಿ ಒಂದಷ್ಟು ಜನರಿಗೆ ರಾಜ್ಯಪಾಲರು ಪ್ರಶಸ್ತಿ ಕೊಟ್ಟು ಮತ್ತೆ ಕೂತುಬಿಟ್ಟರು. ಇನ್ನುಳಿದ ಪ್ರಶಸ್ತಿ ಕೊಡುವಾಗ, ಪುರಸ್ಕೃತರು ರಾಜ್ಯಪಾಲರ ಮುಂದೆ ಅಡ್ಡ ಹೋಗುತ್ತಿದ್ದರು. ಒಂದಿಬ್ಬರಿಗೆ ಪ್ರಶಸ್ತಿ ಕೊಟ್ಟ ಅಮ್ಮ ಅಲ್ಲಿ ರಾಜ್ಯಪಾಲರಿಗೆ ಅಡ್ಡಲಾಗಿ ಹೋಗುವುದು ಘನತೆಯಲ್ಲ. ಅದು ಅವರಿಗೆ ಸೂಚಿಸುವ ಅಗೌರವ ಅಂತ ತಕ್ಷಣ ಅಮ್ಮಾ ಅಧಿಕಾರಿಗಳಿಗೆ ರಾಜ್ಯಪಾಲರಿಗೆ ಅಡ್ಡಲಾಗಿ ಹೋಗುವ ಬದಲು ಹಿಂಬದಿಯಿಂದ ಹೋಗುವಂತೆ ಸೂಚನೆ ಕೊಟ್ಟಿದ್ದು ಅಲ್ಲಿ ನೆರೆದಿದ್ದವರಿಗೆಲ್ಲಾ ಕಾಣುತಿತ್ತು.

ಆದರೂ ಆ ಸಮಸ್ಯೆ ನಿಭಾಯಿಸಲು ಅಧಿಕಾರಿಗಳೂ ಕೂಡ ಕಸಿವಿಸಿಗೊಂಡರು. ಪ್ರಶಸ್ತಿ ಪಡೆದವರೆಲ್ಲಾ ವೇದಿಕೆಯಲ್ಲೇ ಇದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬಂದು ಪ್ರಶಸ್ತಿ ಸ್ವೀಕರಿಸಿ ಹೋಗಬೇಕಾದ ಕಾರಣ ಈ ಗೊಂದಲ ಉಂಟಾಗಿತ್ತು. ಇದನ್ನು ನೋಡಿ ಅಮ್ಮನಿಗೆ ಸಿಟ್ಟು ಬಂದಿದ್ದು ತಕ್ಷಣ ಗೊತ್ತಯಿತು ನನಗೆ. ಅವರೂ ತಕ್ಷಣ ಪ್ರಶಸ್ತಿ ಪಡೆಯಲು ವೇದಿಕೆ ಹತ್ತಿದವರನ್ನು ತಾನೇ ಕೈ ಹಿಡಿದು ವೇದಿಕೆಯ ಮಧ್ಯಕ್ಕೆ ಕರೆತಂದು ತಾನೇ ರಾಜ್ಯಪಾಲರ ಗೌರವ ಉಪಸ್ಥಿತಿಗೆ ದಕ್ಕೆಯಾಗದಂತೆ ತಾನೇ ವೇದಿಕೆಯಿಂದ ಕೆಳಗೆ ಇಳಿಯುವಂತೆ ವೇದಿಕೆಯಲ್ಲೇ ಒಂದು ಮ್ಯಾಪ್ ಹಾಕಿಕೊಟ್ಟುಬಿಟ್ಟರು. ಗಲಿಬಿಲಿಗೊಂಡ ಅಧಿಕಾರಿಗಳ ಮುಖ ಪೆಚ್ಚಾಗಿ ಹೋಗಿತ್ತು. ಆಮೇಲೆ ಅಧಿಕಾರಿಗಳು ಅದನ್ನೇ ಅನುಸರಿಸಿದರು. ಈ ತರಹದ ಅನೇಕ ಸೂಕ್ಷ್ಮಗಳನ್ನು ನಾನು ಗಮನಿಸಿದ್ದೇನೆ. ಇದನ್ನೆಲ್ಲಾ ನಿಮ್ಮಲ್ಲೂ ಕೆಲವರು ನೋಡಿರಬಹುದು. ಅವರನ್ನು ತುಂಬಾ ಹತ್ತಿರದಿಂದ ಕಂಡಾಗ ಅವರ ಈ ಅಚ್ಚುಕಟ್ಟುತನ ಅರ್ಥ ಆಗುತ್ತೆ. ಇಲ್ಲವೇ ಇದೇನಪ್ಪ ಇವರು ಅಂತ ಗೊಣಗುವಂತಾಗುತ್ತದೆ. ರಂಗಭೂಮಿಯಿಂದ ದಕ್ಕಿದ ಜೀವನಾನುಭವಕ್ಕೆ ಎಷ್ಟು ಶಕ್ತಿ ಇದೇ ಅಲ್ವಾ ? ಅಮ್ಮನ ಈ ಹೊತ್ತಿನ ಸಾಧನೆಗೆ ಈ ಅಂಶ ಕೂಡ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದೆ ಅಂತ ನನ್ನ ವಿಶ್ವಾಸ.
ಇರಲಿ ಮತ್ತೆ ಸಿ.ಎನ್. ಆರ್ ಕಾರ್ಯಮಕ್ಕೆ ವಾಪಸ್ ಬರುತ್ತೇನೆ. ಭಾರತ ರತ್ನ ಸಿ.ಎನ್. ಆರ್. ರಾವ್ ಅವರನ್ನು ಅಭಿನಂದನಾ ಕಾರ್ಯಕ್ರಮಕ್ಕೆ ಕರೆಯಲು ಹೋದಾಗ ತಮ್ಮ ಕಾಲೇಜು ದಿನಗಳಲ್ಲಿ ಅಭಿನಯಿಸಿದ ಟಿ.ಪಿ. ಕೈಲಾಸಂ ಅವರ ನಾಟಕದ ಡೈಲಾಗ್ಗಳನ್ನು ನೆನಪಿಸಿ ಕೊಂಡು ಹೇಳಿದನ್ನು ಉಲ್ಲೇಖಿಸಿ ಹೆಮ್ಮೆಯಿಂದ ಕನ್ನಡದ ಗೌರವವನ್ನು ಸಭೆಗೆ ಪರಿಚಯಿಸಿದ ರಂಗನಾಯಕಿಯ ಮಾತನ್ನು ಕೇಳಿದ ಇಡೀ ಸಭಾಂಗಣ ಚಪ್ಪಾಳೆ ತಟ್ಟಿತು. ಈ ರಂಗಭೂಮಿಯ ಜೀವ ನಿಂತಿರೋದೆ ಹೀಗೆ ನೋಡಿ. ಯಾವತ್ತೂ ಯಾವಾಗಲೂ ತನ್ನ ತಾನು ಕಾಪಾಡಿಕೊಳ್ಳುತ್ತದೆ ಮತ್ತು ಪೊರೆಯುತ್ತದೆ. ಆ ಕಾರಣಕ್ಕೆ ವಿಜ್ಞಾನಿಯ ರಂಗ ಪ್ರೀತಿ ಸಾಕವ್ವನಿಗೆ ಸೆಳೆದು ಕಾರ್ಯಕ್ರಮ ಹೊಳೆಯುವಂತೆ ಮಾಡಿದ್ದು ಅನ್ನಿಸುತ್ತೆ. ಅವತ್ತು ಸಿ.ಎನ್.ಆರ್ ಮಾತಾಡಬೇಕಾದರೆ ಅಮ್ಮಾ ಆ ಭಾರತರತ್ನವನ್ನೇ ನೋಡುತ್ತಿದ್ದರು. ಒಬ್ಬ ವಿದ್ಯಾರ್ಥಿಯಂತೆ. ಅವರ ದೃಷ್ಟಿ ಒಂಚೂರು ಅತ್ಲಾಗೆ ಇತ್ಲಾಗೆ ಹೋಗಲೇ ಇಲ್ಲ. ಅವರ ಮುಖಭಾವವನ್ನು ಗಮನಿಸುತ್ತಿದ್ದರೆ ಸಾಕವ್ವನ ಮುಖದಲ್ಲಿನ ಹೆಮ್ಮೆ, ಮುಗ್ಧತೆ, ಗೌರವ, ಭಕ್ತಿ ಭಾವಗಳೇ ಕಾಣುತಿದ್ದವು. ಸಿ.ಎನ್.ಆರ್ ಅವರು ಕನ್ನಡ ಪ್ರೀತಿಯನ್ನು ಕುರಿತು ಮಾತಾಡಬೇಕಾದರೆ ಅಮ್ಮನ ಮುಖದಲ್ಲಿ ಆಗುತಿದ್ದ ಬದಲಾವಣೆ ನಾನು ನೋಡಿದ್ದು ರಂಗದ ಮೇಲೆ, ಒಟ್ಟು ಸಿ.ಎನ್.ಅರ್ ಅವರ ಮಾತು ಮುಗಿಯುವ ತನಕ ಅಮ್ಮನ ಮುಖದಲ್ಲಿದ್ದ ಹೆಮ್ಮೆ ಕನ್ನಡದ ಹೆಮ್ಮೆಯೇ ಆಗಿತ್ತು.
ಆ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರನ್ನು ಸಂಸ್ಕೃತಿ ಇಲಾಖೆಯವರು ಆತ್ಮೀಯವಾಗಿ ಕರೆದು ಮುಂಚೆಯೇ ನಿಗಧಿ ಮಾಡಿದ್ದ ಆಸನ ವ್ಯವಸ್ತೆಯಲ್ಲಿ ಕೂರಿಸುತ್ತಿದ್ದರು. ನಾನೂ ಕೂಡ ಕಾರ್ಯಕ್ರಮಕ್ಕೆ ಎಲ್ಲರಂತೆ ಹೋದೆ. ಇಡೀ ಸಭಾಂಗಣ ತುಂಬಿತ್ತು. ಎಲ್ಲೂ ಜಾಗ ಇರಲಿಲ್ಲ. ಒಂಚೂರು ಮುಂದೆ ವೇದಿಕೆಯ ಹತ್ತಿರ ಹೋದೆ. ಅಲ್ಲಿ ಶಾಸಕರಿಗೆ ಅಂತ ಮೀಸಲಿರಿಸಿದ್ದ ಆಸನದ ವ್ಯವಸ್ತೆ ಖಾಲಿ ಇತ್ತು. ಹೇಳದೆ ಕೇಳದೇ ಕೂತುಬಿಟ್ಟೆ. ಅಲ್ಲೇ ಒಂದಷ್ಟು ಜನ ಪೊಲೀಸರು ಮತ್ತೆ ಇಲಾಖೆಯ ಸಿಬ್ಬಂದಿ ಇದ್ದರು. ನನ್ನನ್ನು ಅಲ್ಲಿಂದ ಎಬ್ಬಿಸಿ ಕಳಿಸುತ್ತಾರೆ ಅಂದುಕೊಂಡೆ. ಸದ್ಯ ಯಾರೂ ಹಾಗೆ ಮಾಡಲಿಲ್ಲ. ಸೀಟ್ ಕಳೆದು ಕೊಳ್ಳಬೇಕಾಗುತ್ತೆ ಅನ್ನುವ ಆತಂಕದಲ್ಲೇ ಕಾರ್ಯಕ್ರಮ ನೋಡುತ್ತಾ ಕೂತಿದ್ದೆ. ಆದರೆ ಹಾಗೇನು ಆಗಲಿಲ್ಲ. ಸಿ.ಎನ್ ಆರ್ ಮಾತಡುತ್ತಾ ಇರಬೇಕಾದರೆ ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪಡೆಯಲು ಹೋಗಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಸಿ.ಎನ್. ಆರ್ ಅವರಿಗೆ ಗೌರವ ಡಾಕ್ಟರೇಟ್ ವಿಶ್ವವಿದ್ಯಾಲಯ ಕೊಡಮಾಡಿತ್ತು. ಆಗ ನಾನು ಮೂರು ಚಿನ್ನದ ಪದಕಗಳನ್ನು ತೆಗೆದುಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದೆ. ಅದನ್ನು ಅಭಿನಂದನಾ ಕಾರ್ಯಕ್ರಮ ಮುಗಿದ ಮೇಲೆ ಆ ವಿಜ್ಞಾನಿಗೆ ಹೇಳಬೇಕಂದುಕೊಂಡೆ ಎಂದಿನಂತೆ ನನ್ನ ಮುಜುಗರ ಅಡ್ಡಿ ಬಂದು ಸುಮ್ಮನಾದೆ. ಅಮ್ಮ ಆದ್ರೂ ನನ್ನ ಅವರಿಗೆ ಪರಿಚಯಿಸುತ್ತಾರೆನೋ ಅಂದುಕೊಂಡೆ. ಎಂದೂ ಆ ರೀತಿ ನಾವಿಬ್ಬರು ವಯಕ್ತಿಕ ಮುಲಾಜುಗಳಿಗೆ ಒಳಗಾಗದ ಕಾರಣ ಅದೂ ಕೂಡ ಆಗಲಿಲ್ಲ. ಆಗಲೂ ಬಾರದು ಬಿಡಿ. ಪ್ರತಿಭೆ ಅಧಿಕಾರದ ಪರಿಚಯದೊಳಗೆ ಎಂದಿಗೂ ಮೊಳೆಯಬಾರದು ಅನ್ನುವ ತಿಳುವಳಿಕೆಯಲ್ಲಿ ಎಂದಿಗೂ ವಿಶ್ವಾಸ ನನಗೂ ಇದೆ ಅವರಿಗೂ ಇದೆ. ಆ ಕಾರಣಕ್ಕಾಗಿಯೇ ಅಮ್ಮ ಅಧಿಕಾರದ ಸೋಂಕು ಎಂದೂ ತಾಗದಂತೆ ಮಡಿಲೊಳಗೆ ಇಟ್ಟುಕೊಂಡು ಕಾಪಾಡಿದ್ದಾರೆ.
ಭಾರತ ರತ್ನ ಸಿ.ಎನ್ .ಆರ್ ಅವ್ರ ಅಭಿನಂದನಾ ಕಾರ್ಯಕ್ರಮ ಮುಗಿಸಿಕೊಂಡು ಒಬ್ಬ ಉಮಾಶ್ರೀ ಅನ್ನುವ ಸೂರ್ಯನೋ, ಸಿ.ಎನ್. ಆರ್ . ರಾವ್ ಅನ್ನುವ ಗ್ಯಾಲಕ್ಸಿಯೋ ಆಗಲಾಗದಿದ್ದರೂ ಅವರ ಬೆಳಕ ಹೀರಿ ಬೆಳಗುವ ಚಂದ್ರನಂತೂ ಆಗಬಾರದು ಅಂದುಕೊಂಡೆ. ಕಡೇಪಕ್ಷ ಅವರಂತೆಯೇ ಒಂದು ಪುಟ್ಟ ಗರಿಕೆಯೋ ಅಥವಾ ಪುಟ್ಟ ಚುಕ್ಕಿಯೋ ಬದುಕ್ಕಿದ್ದಕ್ಕಾಗಿ ಆಗಬೇಕು ಅಂದುಕೊಂಡು ವಿಧಾನಸೌಧದಿಂದ ಹೊರಬಂದೆ. ಅಲ್ಲಿ ಹೊಸದಾಗಿ ನನ್ನ ಬದುಕೇ ಆದರ್ಶ ಅಂತ ಬರೆದಿದ್ದ ಗಾಂಧೀ ಪ್ರತಿಮೆ ನನ್ನನೇ ದಿಟ್ಟಿಸುತಿತ್ತು ಅಂತ ಅನ್ನಿಸಿ ನಾನೂ ತದೇಕದಿಂದ ಒಂದರ್ಧ ಗಂಟೆ ಗಾಂಧಿಯನ್ನು ನೋಡಿ ಸ್ಕೂಟರ್ ಹತ್ತಿ ಮನೆಗೆ ಬಂದೆ. ಮನೆಗೆ ಬಂದ ಕೊಡಲೇ ನನ್ನ ಮಗ ಸಹೃದಯ ಎಲ್ಲಿಗೆ ಹೋಗಿದ್ದಪ್ಪ ಅಂದ. ಕಾರ್ಯಕ್ರಮದಿಂದ ತಂದಿದ್ದ ಸಿ.ಎನ್.ಆರ್ ಅವರ ಪುಸ್ತಕ ತೋರಿಸಿ ಇವ್ರು ಕುವೆಂಪು ತಾತನ ತರ ರಾವ್ ತಾತ ಅಂತ ಅವರ ಪರಿಚಯವನ್ನು ಕಥೆ ಕಟ್ಟಿ ಹೇಳಿದೆ.
ಮಾರ್ಚ್ ಮೂರನೇ ತಾರೀಖು ಕ್ಯಾನ್ ಬೆರಾದಲ್ಲಿರುವ ಆಸ್ಟ್ರೇಲಿಯನ್ ನ್ಯಾಷನಲ್ ವಿಶ್ವ ವಿದ್ಯಾಲಯದ ‘ಡಿಗ್ರೀ ಆಫ್ ಡಾಕ್ಟರ್ ಆಫ್ ಸೈನ್ಸ್ ಆನರಿಸ್ ಕಾಸ’ ಗೌರವ ಪಡೆದ ಕನ್ನಡದ ಹೆಮ್ಮೆ ಭಾರತರತ್ನ ಸಿ.ಎನ್.ಆರ್. ರಾವ್ ಅವರಿಗೆ ಅನೇಕ ಅಭಿನಂದನೆಗಳು.
 

‍ಲೇಖಕರು G

8 March, 2015

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. ಲಲಿತಾ ಸಿದ್ಧಬಸವಯ್ಯ

    ಹೌದು, ಉಮಕ್ಕ ಮಂತ್ರಿಗಿರಿಯನ್ನು ತಲೆಗೆ ಮೆತ್ತಿಕೊಂಡಿಲ್ಲ, ಅವರ ನಯವಿನಯಗಳನ್ನು ಬಿಟ್ಟೂ ಕೊಟ್ಟಿಲ್ಲ. ಈ ಸರ್ತಿ ಸಾಹಿತ್ಯ ಅಕಾಡೆಮಿ ಬಾಕಿ ಇದ್ದ ಎರಡು ವರ್ಷದ ಪ್ರಶಸ್ತಿಗಳನ್ನು ಕೊಟ್ಟಿತು. ಒಟ್ಟು ೫೭ ಮಂದಿ ಪುರಸ್ಕೃತರು, ಎಲ್ಲರಿಗೂ ಮಂತ್ರಿಣಿಯೇ ಗೌರವಿಸಲಾರರು, ಗೌರವ ಪುರಸ್ಕೃತರ ಸರದಿ ನಂತರ ಕೂಡುತ್ತಾರೆಂದು ನಾನು ಭಾವಿಸಿದ್ದೆ. ಜೊತೆಗೆ ದೂರಪ್ರಯಾಣ ಮಾಡಿ ಅದೇ ಆಗ ಅವರು ಬಂದಿದ್ದರು. ಅಂಥದ್ದೇನೂ ಇಲ್ಲದೆ ಅಷ್ಟೂ ೫೭ ಮಂದಿಯ ಸಾಂಗೋಪಾಂಗ ಸತ್ಕಾರದ ತನಕ ಅವರು ನಿಂತೇ ಕಳೆದರು. ಈ ಎಲ್ಲ ಒಳಗಿನಂದ ಬರಬೇಕಾದ ಸನ್ನಡತೆ. ಕಟ್ಟಿಕೊಟ್ಟ ಬುತ್ತಿ ಹೇಳಿಕೊಟ್ಟ ಮಾತು ಎಷ್ಟು ದಿನ ನಿಂತೀತು?

  2. ಮಮತ

    ಯಾಕೋ ಸ್ವಲ್ಪ ಗಡಿಬಿಡಿಯಲ್ಲಿದ್ದಂತೆ ಕಂಡು ಹದ ತಪ್ಪಿರುವಂತಿದೆ.
    ಇರಲಿ ಸಂಘಟನೆಯ ಆಯೋಜನೆಯಲ್ಲಿ ಅಮ್ಮನವರ ಕಾರ್ಯಕ್ಷಮತೆಯನ್ನು ಪರಿಚಯಿಸಿದ್ದೀರಿ. ವೈಯಕ್ತಿಕ ಮುಲಾಜಿಗೆ ಈಡಾಗದ ನಿಷ್ಠೂರತೆಯನ್ನೂ ಸಹ… ವಿಜ್ಞಾನಿಯವರಿಗೊಂದು ಸಲಾಂ

  3. ಲಕ್ಷ್ಮೀಕಾಂತ ಇಟ್ನಾಳ

    ರಘುನಂದನ್ ಜಿ, ಉಮಾಶ್ರೀ ಎಂಬ ಮಹಿಳಾ ಶಕ್ತಿಯ ಕುರಿತು ಮಹಿಳಾ ದಿನದಂದು ನೆನಪಿನ ಕಾಣಿಕೆ, ತುಂಬ ಸಾಂದರ್ಭಿಕವಾಗಿಯೂ ಒಡಮೂಡಿದೆ, ಅವರಲ್ಲಿರುವ ಕರ್ತೃತ್ವ ಶಕ್ತಿಗೆ ಸಲಾಮ್.. ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಭಾರತ ರತ್ನ ಸಿ ಎನ್ ಆರ್ ರಾವ್ ರವರಿಗೆ ಈ ಮೂಲಕ ನನ್ನ ನಮನಗಳು…ಬರಹ ಚನ್ನಾಗಿದೆ….

  4. ರಮೇಶ್ ನೆಲ್ಲಿಸರ

    Very interesting …as always

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading