ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಉಮಾಶ್ರೀ ಮೊಬೈಲ್ ನಿಂದ ನನಗೆ ಕರೆ ಬಂತು


ತಂಗಿ ಬೆಳದಿದ್ದೇ ಗೊತ್ತಾಗಲಿಲ್ಲ. ನಮ್ಮಜ್ಜಿ ಯಾವಾಗ್ಲೂ ಅವಳಿಗೊಂದು ಮದ್ವೆ ಮಾಡೋ ಅಂತ ಹೇಳ್ತಾನೇ ಇತ್ತು. ಮದ್ವೆ ಅಂದ್ರೆ ಹುಡುಗಾಟನಾ? ಏನೋ, ಕಷ್ಟದ ದಿನಗಳೆಲ್ಲಾ ಸರಿದು ಮೂರೊತ್ತು ಒಳ್ಳೇ ಊಟ, ಪರವಾಗಿಲ್ಲಾ ಅನ್ನೋ ತರ ಬಟ್ಟೆ ಬರೆ ಹಾಕ್ಕೋಬಹುದು ಅನ್ನುವಷ್ಟರ ಮಟ್ಟಿಗೆ ಬದುಕು ಸುಧಾರಿಸಿತ್ತು. ಆದ್ರೆ ಮದ್ವೆ ಮಾಡೋ ಅಷ್ಟು ಶಕ್ತಿ ಆಗಲಿ, ಹಣ ಆಗಲಿ ನನ್ನತ್ರ ಇರಲಿಲ್ಲ. ಆದ್ರೆ ನಮ್ಮ ಅಜ್ಜಿ ಮಾತ್ರ ಮದ್ವೆ ಮಾಡಲೇ ಬೇಕು ಅಂತ ನಿತ್ಯ ಹಠ ಮಾಡ್ತಿತ್ತು. ತಂಗಿ ದೂರ ಆಗಿಬಿಟ್ರೆ ನಾ ಒಬ್ಬನೇ ಆಗಿಬಿಡ್ತೇನೆ ಅನ್ನುವ ಆತಂಕ. ಅದಕ್ಕಿಂತ ಹೆಚ್ಚಾಗಿ ಮದ್ವೆ ಮಾಡೋಕೆ ಕನಿಷ್ಟ ಪಕ್ಷ ಒಂದೆರಡು ಲಕ್ಷನಾದ್ರೂ ಹೊಂದಿಸಿಕೊಳ್ಳಬೇಕು. ಕಡೇ ಪಕ್ಷ ಒಂದಿಪ್ಪತು ಗ್ರಾಂ ಚಿನ್ನ ಅವಳಿಗೆ ಕೊಡಿಸಬೇಕು. ಅದಕ್ಕೆಲ್ಲಾ ಶಕ್ತಿ ಇಲ್ಲದೆ ನಮ್ಮಜ್ಜಿ ಮದ್ವೆ ಅಂದ್ರೆ ಭಯ ಶುರು ಆಗ್ತಿತ್ತು. ಯಾಕಂದ್ರೆ ನಂಗೆ ಬರುತ್ತಿದ್ದ ನಾಲ್ಕು ಸಾವಿರ ಹಣ ಜೀವನಕ್ಕೆ ಸರಿ ಹೋಗುತಿತ್ತು. ಹೀಗಿದ್ದಾಗ ಮದ್ವೆ ಮಾಡೋದು ಹೇಗೆ ? ಇದನ್ನೆಲ್ಲಾ ನಮ್ಮಜ್ಜಿ ಹತ್ರ ಹೇಳಿದ್ರೆ ‘ಮದ್ವೆ ಹೊಂದುದ್ರೆ ಎಲ್ಲಾ ಅದಕ್ಕದೇ ಆಗುತ್ತೆ’ ಅನ್ನುತ್ತಿತ್ತು. ಆದ್ರೆ ನನಗೆ ಆ ಮಾತಿನಲ್ಲಿ ಹೆಚ್ಚು ವಿಶ್ವಾಸ ಇರಲಿಲ್ಲ. ಇಷ್ಟರ ನಡುವೆ ನಮ್ಮಜ್ಜಿ ಹೇಳೋ ಮಾತು ಸರಿ ಅನಿಸಿ ತಂಗಿ ಮದುವೆಗೆಂದು ಬರೋ ಮನೆಪಾಠದ ಹಣದಲ್ಲೇ ದುಡ್ಡನ್ನು ಕೂಡಿಸೋಕೆ ಶುರು ಮಾಡಿದೆ.
ವಡವೆ ಕೊಡಿಸೋಣ ಅಂತ, ಮನೆ ಪಾಠಕ್ಕೆ ಬರ್ತಿದ್ದ ವಡವೆ ಅಂಗಡಿಯ ಮನೆಯ ಮಕ್ಕಳ ಹತ್ತಿರ ಫೀಸನ್ನು ತಿಂಗಳು ತಿಂಗಳು ತಗೊಳ್ಳದೇ, ಅಲ್ಲೇ ಬಿಡುತ್ತಿದ್ದೆ. ನಾನು ಬಟ್ಟೆ, ಪುಸ್ತಕ ಕೊಂಡುಕೊಳ್ಳುವುದನ್ನು ಪೂರ್ತಾ ನಿಲ್ಲಿಸಿಬಿಟ್ಟೆ. ಹೀಗೆ ಏನೇನೋ ಯೋಜನೆ ಹಾಕಿಕೊಂಡರೂ ಮದ್ವೆ ಅನ್ನೋ ಆನೆಗೆ ಆರು ಕಾಸಿನ ಮಜ್ಜಿಗೆ ಎಲ್ಲಿ ಸಾಲುತ್ತೆ ಹೇಳಿ. ಏನೇ ಇರಲಿ ಒಟ್ಟು ಇರೋದ್ರಲ್ಲೇ ಮದುವೆ ತಯಾರಿಗೆ ಹಣ ಕೂಡಿಡೋಕೆ ಆರಂಭಿಸಿದೆ.
ಪಾಪ ನಮ್ಮ ಅಮ್ಮ ಬೆಂಗಳೂರಿನ ಒಂದು ಗಾರ್ಮೆಂಟ್ಸ್ ನಲ್ಲಿ ದುಡೀತಿತದ್ರು. ಅವರು ಸುಖ ಅನ್ನೊದನ್ನೇ ನೋಡಲಿಲ್ಲ ಜೀವನ ಪೂರ್ತಿ. ನಮ್ಮ ಅಪ್ಪ ನಾನು ಬುದ್ಧಿ ಬಂದಾಗಿನಿಂದ ಕುಡಿದು ಹೆಂಡ್ತಿ ಮಕ್ಕಳಿಗೆ ಹೊಡೆಯೋದು ಬಡಿಯೋದು ಬಿಟ್ಟು ಬೇರೇನೂ ಮಾಡಲಿಲ್ಲ. ಮೂರು ಕಾಸು ದುಡೀಲಿಲ್ಲ. ಜೀವನ ಪೂರ್ತಿ ನಮ್ಮಪ್ಪನನ್ನ ಸಾಕಿದ್ದು ನಮ್ಮಮ್ಮನೇ. ಜೊತೆಗೆ ನನ್ನ ತಮ್ಮ ಸಂತು. ಪಾಪ ಚಿಕ್ಕ ಹುಡ್ಗ ಇದ್ದಾಗಿನಿಂದ ಅಮ್ಮನ ಜೊತೇನೇ ಇದ್ದುಬಿಟ್ಟ. ನಮ್ಮ ಅಮ್ಮನಿಗೆ ಸಹಾಯ ಆಗಲಿ ಎಂದು ಶಾಲೆಗೂ ಹೋಗದೆ ಮಗ್ಗದ ಕಣ್ಕೆ ಹಾಕಿ, ನೇಯ್ದು ಆಮೇಲಾಮೇಲೆ ಡ್ರೈವಿಂಗ್ ಕಲಿತು ಒಟ್ಟು ದುಡಿಮೆಯನ್ನ ರೂಪಿಸಿಕೊಂಡ. ಅಣ್ಣ ಅಂದ್ರೆ, ಅಕ್ಕ ಅಂದ್ರೆ ಜೀವ ಬಿಡೋ ಅಷ್ಟು ಪ್ರೀತಿ ಆ ಹುಡುಗನಿಗೆ. ಎಷ್ಟರ ಮಟ್ಟಿಗೆ ಅಂದ್ರೆ ತಾನು ದುಡಿಯೋ ಅಲ್ಪ ಸ್ವಲ್ಪ ಹಣ ಅಕ್ಕನ ಮದುವೆಗೆ ಆಗಬೇಕು ಅಂತ ಬಾಲ್ಯ, ಯವ್ವನದ ದಿನಗಳ್ನೆಲ್ಲಾ ದುಡ್ಡು ಕೂಡಿಸೂಕೇ ಮುಡಿಪಾಗಿಟ್ಟ. ಇನ್ನು ನಮ್ಮ ಅಮ್ಮ ಗಾರ್ಮೆಂಟ್ಸ್ ನಲ್ಲಿ ಒಂದು ವರ್ಷ ಪೂರ್ತಿ ಕೆಲಸಕ್ಕೆ ಒಂದಿನಾನು ತಪ್ಪಿಸಿಕೊಳ್ಳದೆ ಹೋದ್ರೆ ಮೂರು ಗ್ರಾಂ ಚಿನ್ನದ ಕಾಯಿನ್ ಕೊಡುತ್ತಾರೆ ಅಂತ ಮೂರು ವರ್ಷ ಒಂದಿನಾನು ತಪ್ಪಿಸಿಕೊಳ್ಳದೇ ಕೆಲಸಕ್ಕೆ ಹೋಗಿ ಒಂಬತ್ತು ಗ್ರಾಂ ಚಿನ್ನವನ್ನು ಗುಡ್ಡೆ ಹಾಕಿದ್ರು. ಆಮೇಲೆ ದೀಪಾವಳಿ ಬೋನಸ್ ಬಂದ ಹಣ ಎಲ್ಲಾ ಸೇರಿಸಿ ಒಂದು ಬೆಳ್ಳಿ ಮೋಡ ವಾಲೆ ಜುಮುಕಿಯನ್ನು ನನ್ನ ತಂಗಿಗಾಗಿ ಮಾಡಿಸಿಕೊಟ್ರು. ನನ್ನ ತಮ್ಮ ಕೂಡ ಹತ್ತದಿನೈದು ಸಾವಿರ ಹಣ ಕೂಡಿಸಿಟ್ಟಿದ್ದ. ಈವತ್ತೂ ಅನೇಕ ಮಕ್ಕಳಿಗೆ ಪಾಠ ಹೇಳಿದ್ದೇನೆ,ಹೇಳುತ್ತಿದ್ದೇನೆ. ಆದ್ರೆ ನನ್ನ ತಮ್ಮನಿಗೆ ಓದಿಸಲಾಗದ ಪರಿಸ್ಥಿತಿ ಒದಗಿಬಿಡ್ತಲ್ಲಾ ಅನ್ನೋ ನೋವು ಮಾತ್ರ ಹಾಗೇ ಇದೆ. ನಾ ಸಾಯೊ ತನಕ ಅದು ಇದ್ದೇ ಇರತ್ತೆ ಬಿಡಿ.

ಮದುವೆಗೆ ಅಂತ ನನ್ನ ಸಹಾಯಕ್ಕೆ ಇರೋವರು ನನ್ನ ತಮ್ಮ ಮತ್ತು ಅಮ್ಮನ ಓಲೆ ಜುಮುಕಿ ಜೊತೆಗೆ ಒಂದಿಷ್ಟು ನಾ ಕೂಡಿಸಿಟ್ಟ ಹಣ ಅಷ್ಟೇ. ಆದ್ರೆ ಇದನ್ನೆಲ್ಲಾ ಇಟ್ಟುಕೊಂಡು ಒಬ್ಬ ಒಳ್ಳೇ ಹುಡುಗನಿಗೆ ಹೇಗೆ ಅವಳನ್ನು ಮದುವೆ ಮಾಡುವುದು ಅನ್ನುವ ಕೊರಗು ಇದ್ದೇ ಇತ್ತು. ಇಷ್ಟರ ನಡುವೆ ಅವಳನ್ನು ಚೆನ್ನಾಗಿ ಓದಿಸಬೇಕು ಅನ್ನುವ ಛಲ ಮಾತ್ರ ಬಿಟ್ಟಿರಲಿಲ್ಲ. ಕನ್ನಡದಲ್ಲಿ ಡಿಗ್ರೀ ಮಾಡಿಸುತ್ತಿದ್ದೆ. ಮುಂದೆ ಕನ್ನಡದಲ್ಲಿ ಎಮ್.ಎ ಮುಗಿಸಿ ಒಂದು ಕೆಲಸ ಕೂಡ ಕೊಡಿಸಬೇಕು ಅಂತಾನು ಯೋಜನೆ ಹಾಕಿಕೊಂಡಿದ್ದೆ. ನನ್ನ ತಂಗಿ ಮಾತ್ರ ‘ಮದುವೆ ಬಗ್ಗೆ ಯಾವತ್ತೂ ಹೆಚ್ಚು ಗಮನ ಕೊಡಬೇಡ. ನಮಗೆ ಅಂದಾಡಿವರ ಮುಂದೆ ವಿದ್ಯಾವಂತರಾಗಿ ಒಂದೊಳ್ಳೆ ಜೀವನ ರೂಪಿಸಿಕೊಳ್ಳೋಣ’ ಅಂತಿದ್ಲು. ಕುಟುಂಬದೊಳಗೆ ಸದಾ ಅವಮಾನ ನೋವುಗಳನ್ನೇ ಹಾಸು ಹೊದ್ದಿದ್ದ ನನಗೆ ಅವಳ ಮಾತುಗಳು ತುಂಬಾ ಭರವಸೆಯನ್ನು ಮೂಡಿಸುತ್ತಿದ್ದವು. ಅವಳು ಹೇಳೋದು ಸರಿ ಅನ್ನಿಸಿ ನಮ್ಮ ಸಾಧನೆಗಳ ಕಡೆ ಗಮನ ಕೊಡುತ್ತಿದ್ದೆ. ಆದರೆ ನಮ್ಮ ಅಜ್ಜಿ ಮಾತ್ರ ಮತ್ತೆ ಮತ್ತೆ ಮದುವೆ ಪ್ರಸ್ತಾಪ ಮಾಡುತ್ತಲೇ ಇತ್ತು. ನಂಗೆ ಮತ್ತು ನನ್ನ ತಂಗಿಗೆ ನಮ್ಮಜ್ಜಿ, ಜೀವಕ್ಕಿಂತ ಹೆಚ್ಚು ಪ್ರೀತಿ. ಹಾಗಾಗಿ ಅವರಿಗೆ ಎದುರು ಮಾತಾಡುತ್ತಿರಲಿಲ್ಲ. ನಮ್ಮಜ್ಜಿ ಹೇಳಿದಾಗ ಹೌದು ಅನ್ನುತ್ತಾ ಸುಮ್ಮನಾಗುತ್ತಿದ್ದೆ. ಆದ್ರೆ ನನ್ನ ತಂಗಿ ಅಂತಿಮ ವರ್ಷ ಬಿ.ಎ. ಮುಗಿಸುವ ಹೊತ್ತಿಗ್ಗೆ ನಮ್ಮ ಅಜ್ಜಿ ಮದುವೆ ಮಾಡೇ ತೀರಬೇಕು ಇಲ್ಲಾ ಅಂದ್ರೆ ನನ್ನ ,ಮಾತಾಡಿಸಬೇಡಿ ಅಂತೆಲ್ಲಾ ಹೇಳಿ ಮುನಿಸಿಕೊಳ್ಳೋಕೆ ಶುರು ಮಾಡಿತು. ನಾನು ನಮ್ಮಜ್ಜಿ ಮಾತನ್ನು ಇನ್ನು ತೆಗೆದು ಹಾಕಲು ಆಗಲ್ಲ ಅಂತ ಹುಡುಗನನ್ನ ನೋಡೋಕೆ ಶುರು ಮಾಡಿದೆ.
ನನ್ನ ತಂಗಿ ತುಂಬಾ ಸುಂದರವಾಗಿದ್ದಳು. ಗುಣವಂತೆ ಕೂಡ. ಗಂಡುಗಳು ಬರೋಕೆ ಶುರು ಆದವು. ಬಿಸಿನೆಸ್ ಮೆನ್ ಗಳು ಅನೇಕರು ಬಂದ್ರು. ನಂಗೆ ಬಿಸಿನೆಸ್ ಮಾಡೋವರಿಗೆ ಕೊಡೋಕೆ ಇಷ್ಟ ಇರಲಿಲ್ಲ. ಒಂದು ಕೆಲಸ ಅಂತಿದ್ರೆ ಇಬ್ಬರೂ ದುಡ್ಕೊಂಡು ಹೇಗೂ ಜೀವನ ಮಾಡುತ್ತಾರೆ ಅಂತೆಲ್ಲಾ ಯೋಚಿಸಿ ಕೆಲಸದಲ್ಲಿರೋ ಗಂಡುಗಳನ್ನು ಮಾತ್ರ ಹುಡುಕೋಕೆ ಆರಂಭಿಸಿದೆ. ನಮ್ಮ ಅಜ್ಜಿ ತಾಕೀತು ಬೇರೆ ಇತ್ತು. ಬೇರೆ ಜಾತಿಯ ಹುಡುಗನಿಗೆ ಕೊಡೊ ಹಾಗಿಲ್ಲ ಅಂತ. ಅಷ್ಟಕ್ಕೂ ಅವಳನ್ನು ಮದುವೆ ಮಾಡೋ ಕಾಲಕ್ಕೆ ನನ್ನ ಯೋಚನೆಗಳು ಈ ಹೊತ್ತಿನಷ್ಟು ಗಟ್ಟಿ ಗೊಂಡಿರಲಿಲ್ಲ. ಹಾಗಾಗಿ ದೆವಾಂಗರ ಪೈಕಿ ಹುಡುಗನನ್ನು ಹುಡುಕಲು ಬೆಂಗಳೂರಿನ ಕೆಲ ಮಧ್ಯವರ್ತಿಗಳಿಗೆ ಹೇಳಿದೆ. ಕಬ್ಬನ್ ಪೇಟೆಯ ಬನಶಂಕರಿ ಮಹಿಳಾ ಸಂಘದಲ್ಲಿ (ವಧು ವರಾನ್ವೇಷಣ ಕೇಂದ್ರ )ಇವಳ ಹೆಸರನ್ನು ನೊಂದಾಯಿಸಿದೆ. ಜೊತೆಗೆ ಬೆಂಗಳೂರಿನಲ್ಲಿದ್ದ ನನ್ನ ಅಜ್ಜಿ ಮನೆಯವರಿಗೆಲ್ಲಾ ಹುಡುಗನನ್ನು ಹುಡುಕಲು ಹೇಳಿದೆ. ಆಮೇಲೆ ನನ್ನ ತಾತನ ತಮ್ಮನ ಮಡದಿ ನನಗೆ ಸಂಭಂದದಲ್ಲಿ ಬಾಡಿಗೆ ಅಜ್ಜಿ ಆಗೋ ಚೂಡತ್ಗೆ ಹತ್ತಿರ ವರನನ್ನು ನೋಡಲು ಕೇಳಿಕೊಂಡೆ. ಹೀಗೆ ಒಬ್ಬ ಒಳ್ಳೇ ಹುಡುಗನನ್ನು ಹುಡುಕಲು ನಾ ಪಟ್ಟ ಪಾಡು ಒಂದಲ್ಲಾ ಎರಡಲ್ಲ.
ನಾನು ಮಾತ್ರ ಗಟ್ಟಿಯಾಗಿ ನಿರ್ಧರಿಸಿದ್ದೆ. ನನ್ನ ತಂಗಿಯನ್ನು ಮದುವೆ ಮಾಡಿಕೊಟ್ಟರೆ ಒಳ್ಳೇ ಕೆಲಸದಲ್ಲಿರೋ ಹುಡುಗನಿಗೆ ಕೊಡಬೇಕು ಅಂತ. ಅದಕ್ಕಾಗಿ ನಾನೆಷ್ಟು ಕಷ್ಟ ಬೇಕಾದ್ರೂ ಎದುರಿಸಲು ಸಿದ್ಧನಿದ್ದೆ. ನಮ್ಮ ಅಮ್ಮನ ಕಷ್ಟಗಳನ್ನು ನೋಡಿದ ನನಗೆ ಅಂತಿಂತಾ ಹುಡುಗನಿಗೆ ಕೋಡೋಕೆ ಸುತಾರಾಂ ಒಪ್ಪಿಗೆ ಇರಲಿಲ್ಲ. ಹೀಗಿರುವಾಗ ತುಂಬಾ ಜನ ಹುಡುಗನ ಕಡೆಯವರು ವಧುವನ್ನು ಕೇಳಿಕೊಂಡು ಬಂದರು. ಕೆಲವರು ತುಂಬಾ ಶ್ರೀಮಂತರು ನಾವೇ ಮದುವೆ ಮಾಡಿಕೊಳ್ಳುತ್ತೇವೆ ಅಂದರು, ನಾ ಒಪ್ಪಲಿಲ್ಲ. ಇನ್ನೂ ಕೆಲವರು ಬೆಂಗಳೂರಿನ ಕಡೆಯವರು ಹುಡುಗಿಗೆ ಇಂಗ್ಲಿಶ್ ಚೆನ್ನಾಗಿ ಬರುತ್ತಾ ? ಫೋರ್ ವೀಲರ್ ಓಡಿಸಲು ಬರುತ್ತಾ? ಅಂತ ಕೇಳಿದರು, ಉಗಿದು ಕಳಿಸಿದೆ. ಇನ್ನೊಬ್ಬ ಪುಣ್ಯಾತ್ಮ ಹುಡುಗಿ ತುಂಬಾ ಸುಂದರವಾಗಿದ್ದಾಳೆ ಅಂತ, ತಾನು ಆಗರ್ಭ ಶ್ರೀಮಂತ ಅಂತ ಎರಡನೇ ಮದುವೆಗೆ ಕೇಳಿಕೊಂಡು ಬಂದಿದ್ದ. ಹತ್ತಿರ ಹತ್ತಿರ ನಲವತ್ತೈದು ವರ್ಷದವನು. ನಾನು ಉಪ್ಪು ಸೊಪ್ಪು ಹಾಕಲಿಲ್ಲ. ಹೀಗೆ ಅನೇಕರು ಹುಡುಗಿಯ ಆಕಾಂಕ್ಷಿಗಳಾಗಿ ಬಂದಿದ್ದರು. ಯಾವುದೂ ನಂಗೆ ಒಪ್ಪಿಗೆಯಾಗುತ್ತಿರಲಿಲ್ಲ. ಕೆಲವರು ಹುಡುಗಿ ಚೆನ್ನಾಗಿದ್ದಾಳೆ ಅಂತ ಬಂದರೆ ಇನ್ನು ಕೆಲವರು ಬಡವರು ಇವರು ಕೇಳಿದ ತಕ್ಷಣ ಹುಡುಗಿಯನ್ನು ಕೊಟ್ಟು ಬಿಡುತ್ತಾರೆ ಅಂತ ಬಂದಿದ್ದರು.
ಕೆಲ ಒಳ್ಳೇ ಬಿಸಿನೆಸ್ಸ್ ಮಾಡುವ, ಒಳ್ಳೇ ದುಡಿಮೆ ಇರುವ, ಮನೆ ಕಡೆ ಚೆನ್ನಾಗಿ ಇರುವ ಕೆಲ ಸಂಭದಂಗಳು ಬಂದಿದ್ದರೂ ನಂಗೆ ವ್ಯಾಪಾರಗಾರರಿಗೆ ಕೊಡಲು ಇಷ್ಟವಿರಲಿಲ್ಲ. ಇದನ್ನೆಲ್ಲಾ ತಂಗಿ ತನಕ ತೆಗೆದುಕೊಂಡು ಹೋಗುತ್ತಿರಲಿಲ್ಲ. ಅವಳಿಗೆ ಮದುವೆಯ ಬಗ್ಗೆ ಏನೇನ್ ನಡೀತಿದೆ ಅಂತ ಏನೂ ಹೇಳುತ್ತಿರಲಿಲ್ಲ. ಅವಳ ಮದುವೆ ಮಾಡುವ ಹೊತ್ತಿಗೆ ಅವಳಿಗೆ ತೋರಿಸಿದ್ದು ಕೇವಲ ಎರಡು ಗಂಡುಗಳನ್ನು ಮಾತ್ರ. ಎರಡರಲ್ಲಿ ಒಂದು ಸಂಬಂಧ ನೀನು ಇಪ್ಪತ್ಮೂರು ವರ್ಷದ ಚಿಕ್ಕ ಹುಡುಗ ಹೇಗೆ ಮದುವೆಯ ಜವಾಬ್ದಾರಿ ತಗೋತೀಯ. ಹಾಗಾಗಿ ನಿಮ್ಮ ಸಂಬಂಧ ಬೇಡವೆಂದರು. ಪಾಪ ಅವರಿಗೆ ನಾ ಮದುವೆ ಮಾಡುತ್ತೇನೋ ಇಲ್ಲವೋ ಅನ್ನುವ ವಿಶ್ವಾಸ ಇರಲಿಲ್ಲ ಅಂತ ಕಾಣುತ್ತೆ. ಇನ್ನೊಂದು ಸಂಬಂಧ ಯಾಕೋ ನನಗೆ ಇಷ್ಟವಿಲ್ಲದೆ ಕೈ ಚೆಲ್ಲಿದೆ. ಇದರ ಜೊತೆಗೆ ನಮ್ಮ ಅಜ್ಜಿಯ ಬೈಗುಳ ಬೇರೆ ಬಂದ ಸಂಬಂಧವನ್ನೆಲ್ಲಾ ಕೈ ಬಿಡುತ್ತಿದ್ದಾನಲ್ಲ. ಇಷ್ಟರ ನಡುವೆ ನಮ್ಮ ತಾಯಿ ಮಗಳ ಮದುವೆಯಾ ವಿಷಯವಾಗಿ ಯಾವಾಗಲೂ ಫೋನ್ ಮಾಡುತಿದ್ರು. ಇನ್ನೂ ನನ್ನ ತಮ್ಮ ಸಿಕ್ಕಾಗ ಏನೇನೋ ಮಾತದ್ಕೊತಿದ್ವಿ ಶೇತಮ್ಮನ ಮದುವೆ ಹಾಗೆ ಮಾಡಬೇಕು ಹೀಗೆ ಮಾಡಬೇಕು. ಅದಕ್ಕಾಗಿ ನಾವಿಬ್ರೂ ತುಂಬಾ ಕಷ್ಟ ಪಡಬೇಕು ಅಂತೆಲ್ಲಾ. ಆಗೆಲ್ಲಾ ಅವನ ಕಣ್ಣುಗಳಲ್ಲಿ ಕನಸುಗಳು ಹನಿಯಾಡುತ್ತಿದ್ದವು. ಕೊನೆ ಕೊನೆಗೆ ನಮ್ಮಿಬ್ಬರ ಓದನ್ನು ಬೆಂಬಲಿಸುತ್ತಿದ್ದ, ಚೆನ್ನಾಗಿ ದುಡ್ಡು ಕಾಸು ಇಟ್ಕೊಂಡು ಬದುಕಿ ಬಾಳಿದ ನಮ್ಮ ತಾತ ಮದುವೆ ಮದುವೆ ಅನ್ನೋಕೆ ಶುರು ಮಾಡಿಬಿಟ್ಟಿತು. ನಮ್ಮ ತಾತ ಒಳ್ಳೇ ಬಿಸಿನೆಸ್ ಮ್ಯಾನ್. ಆದ್ರೆ ಕೊನೆಗಾಲದಲ್ಲಿ ಏನೂ ಇಲ್ಲದೇ ತಾನು ಮಾಡಿದ ಆಸ್ತಿಯನ್ನು ಅನುಭವಿಸಲಾಗದೇ ಕಷ್ಟ ಪಡುತ್ತಿತ್ತು. ನನ್ನ ತಂಗಿ ಅಂದ್ರೆ ಪ್ರಾಣ ನಮ್ಮ ತಾತನಿಗೆ. ನಮ್ಮ ತಾತ ಕೂಡ ತನ್ನ ಕಾರಣಕ್ಕೆ ವ್ಯಾಪಾರಸ್ಥರಿಗೆ ನನ್ನ ತಂಗಿಯನ್ನು ಕೊಡೋದು ಬೇಡ ಅಂತ ಹೇಳುತಿತ್ತು.
ಹೀಗೆಲ್ಲಾ ಮದುವೆಯ ಪ್ರಯತ್ನಗಳು ನಡೆಯುವ ಸಂದರ್ಭದಲ್ಲಿ ಬೆಂಗಳೂರಿನ ದೇವಾಂಗ ಬನಶಂಕರಿ ಮಹಿಳಾ ಸಂಘದಿಂದ ನನಗೊಂದು ಫೋನ್ ಬಂತು. ಉಮಾಶ್ರೀ ಅವರು ನಿಮ್ಮ ತಂಗಿಯ ಫೋಟೋ ನೋಡಿಕೊಂಡು ಡೀಟೈಲ್ಸ್ ತೆಗೆದುಕೊಂಡು ಹೋಗಿದ್ದಾರೆ ಅಂತ. ಒಂದು ಕ್ಷಣ ಖುಷಿ ಆಯಿತು. ಜೊತೆಗೆ ಅವರೆಲ್ಲಿ ನನ್ನ ತಂಗಿಯನ್ನು ಒಪ್ಪುತ್ತಾರೆ. ಅವರೆಲ್ಲಿ ನಾ ಎಲ್ಲಿ ಅಂದುಕೊಂಡೆ. ನಾನೂ ಕೂಡ ಅದೇ ಮಹಿಳಾ ಸಂಘದಲ್ಲಿ ಉಮಾಶ್ರೀ ಅವರ ಮಗನ ಫೋಟೋ ನೋಡಿದ್ದೇ. ಇಷ್ಟ ಆಗಿತ್ತು. ಆದ್ರೆ ಅವ್ರು ಸಿರಿವಂತಿಕೆ ನೋಡುತ್ತಾರೆನೋ ಅಂತ ನನ್ನ ಪ್ರಪೋಸಲ್ ಅಲ್ಲಿ ವ್ಯಕ್ತ ಪಡಿಸಿರಲಿಲ್ಲ. ಆದ್ರೆ ಸಣ್ಣ ಆಸೆಯೊಂದು ಖಂಡಿತಾ ಇತ್ತು. ಉಮಾಶ್ರೀ ಅವರು ಒಪ್ಪಿದರೆ, ಅವರ ಮಗ ಒಪ್ಪಿದರೆ, ನನ್ನ ತಂಗಿಯೂ ಒಪ್ಪಿಕೊಂಡರೆ, ಕೊನೆಗೆ ಋಣ ಇದ್ದರೆ ಯಾಕೆ ನಾನು ನನ್ನ ತಂಗಿಯನ್ನು ಕೊಡಬಾರದು ಅಂತ ಅನ್ಕೊಂಡೆ. ಇದಾದ ತಿಂಗಳಿಗೆ ಉಮಾಶ್ರೀ ಅವರ ಮೊಬೈಲ್ ನಿಂದ ನನಗೆ ಕರೆ ಬಂತು.

‍ಲೇಖಕರು G

16 November, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. Gopaala Wajapeyi

    ಕುತೂಹಲಕರವಾಗಿದೆ ಕೊನೆಯ ಸಾಲು… ಮುಂದಿನ ಕಂತಿಗಾಗಿ ಕಾಯುವೆ… 🙂

  2. sangeetha raviraj

    Interesting..

  3. ಗವಿಸಿದ್ಧ ಹೊಸಮನಿ

    ತಂಗಿ, ಅವಳ ಬಗೆಗಿನ ಮಮತೆ, ಅವಳ ನಾಳಿನ ಬಾಳು ಚೆನ್ನಾಗಿರಲೆನ್ನುವ ಮನಸೊಂದು ಎದುರಿಸಿದ ಸಂಕಟ ಇಲ್ಲಿ ಎಳೆಎಳೆಯಾಗಿ ಮೂಡಿಬಂದಿದೆ. “ಒಳ್ಳೇ ಮನಸು ಇದ್ದರೇನೆ ಕಷ್ಟವಂತೆ..” ಅನ್ನೋ ಹಾಡೊಂದರಸಾಲುಗಳುವ ನೆನಪಾದವು ನನಗೆ. ನನ್ನ ಸುತ್ತಲಿನವರ ಬಾಳೂ ಚೆನ್ನಾಗಿರಲೆಂದು ನಿತ್ಯ ಆ ಬಗ್ಗೆ ಆಲೋಚಿಸುವ, ಅದಕ್ಕಾಗಿ ಏನೆಲ್ಲಾ ತ್ಯಾಗಕ್ಕೆ ಸಿದ್ಧರಾಗುವ ಮನಸುಗಳಿಗೆ ಈ ಬರೆಹ ಕಾಡುತ್ತದೆ.
    -ಗವಿಸಿದ್ಧ ಹೊಸಮನಿ

  4. M.S.Prasad

    Well Penned !

  5. Anonymous

    MUNDENAITHU SIR

  6. Anonymous

    Navu hoysala collegenalli hodutiddaga ninu histondu samasyegalanna face madodu nange gottiralilla Raghunandan, thumba bejaraytu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading