
ಮಳೆ ಹುಯ್ಯೋ ಕಾಲಕ್ಕೆ ನೆಲ ಎಲ್ಲಾ ಒಣಗಿನಿಂತಿರುತ್ತೆ. ನೀರು ಬಿದ್ದ ಕೂಡ್ಲೇ ಘಮ್ ಅನ್ನೋ ಹಾಗೆ ಬರಡಾಗಿದ್ದ ನನ್ನ ಬದುಕಿನಲ್ಲಿ ಬಂದವಳು ಸಂಗಾತಿ ಲಕ್ಷ್ಮಿ. ಏನಪ್ಪಾ ಇದು ಮಳೆ ನೆಲ ಅಂತ ಪ್ರೀತಿ ಪ್ರೇಮ ಆಕರ್ಷಣೆಯಾ ಕಥೆ ಇವತ್ತು ಹೇಳೋಕೆ ಹೊರಟುಬಿಟ್ಟಿದ್ದೇನೆ ಅಂದುಕೊಳ್ಳಬೇಡಿ. ಯಾಕೋ ಇವತ್ತು ಇದನ್ನು ನಾ ಹೇಳಲಿಲ್ಲ ಅಂದ್ರೆ ಈ ಬರಹಗಳ ಸರಣಿ ಎಲ್ಲೋ ಅಪೂರ್ಣ ಅನ್ನಿಸಿಬಿಡುತ್ತೆ ನಂಗೆ. ಹೆಂಗೇ ಅಂದ್ರೆ ಗಡಿಗೆಯಲ್ಲಿ ಅಮ್ಲಿ ಇದ್ರೂ ಕೊಡ್ಲೋ ಬೇಡ್ವೋ ಅಂತ ಯೋಚಿಸಿಕೊಂಡು ಕೂತ ಹಾಗೆ. ಉಮಾಶ್ರೀ ಅವರ ಕಥೆ ಹೋಗಿ ಇನ್ನು ಯಾವುದೋ ಕಥೆ ತೂರಿಕೊಳ್ಳುತ್ತಿದೆ ಅಂತ ಅನ್ನಿಸಬಹುದು. ಇರಲಿ ಅಡ್ಡಿಯಿಲ್ಲ ಕೇಂದ್ರ ಮತ್ತು ಆವರಣ ಎರಡೂ ಒಂದನ್ನು ಬಿಟ್ಟು ಒಂದಿರಲ್ಲ ಹಾಗಾಗಿ ಹೇಳುವುದರಲ್ಲಿ ತಪ್ಪಿಲ್ಲ.
ಶೇತಮ್ಮನ ಮದುವೆ ಹೊತ್ತಿಗಾಗಲೇ ನನ್ನ ಮದುವೆ ಕೂಡ ಲಕ್ಷ್ಮಿಯ ಜೊತೆ ಆಗುತ್ತೆ ಅಂತ ಎಲ್ಲರಿಗೂ ಗೊತ್ತಾಗಿತ್ತು. ಅಂದ್ರೆ ನಾವಿಬ್ಬರೂ ಮದ್ವೆನೇ ಆಗದೇ ನನ್ನ ತಂಗಿಯ ಮದುವೆಯ ಶಾಸ್ತ್ರ ಪಾಸ್ತ್ರ ಬಿಟ್ಟು ಎಲ್ಲಾ ಕೆಲಸಗಳನ್ನು ಮಾಡುತಿದ್ವಿ. ಲಕ್ಷ್ಮಿಯಂತೂ ಈಗಾಗ್ಲೇ ಸಾಕಷ್ಟು ಅನುಭವ ಇರುವ ಹೆಣ್ಣಿನ ತರ ಮದುವೆಗೆ ಸಂಭಂದಿಸಿದ ಕೆಲಸಗಳನ್ನು ಮಾಡುತ್ತಿದ್ದಳು. ಹೆಣ್ಣಿನ ಕೊಠಡಿ ಪೂರ್ತಿ ಹೊಣೆ ಅವಳದ್ದೇ. ಯಾವ ಯಾವ ಯಾವ ಶಾಸ್ತ್ರಕ್ಕೆ ಏನೇನು ಬೇಕು ಅದನ್ನೆಲ್ಲಾ ತೆಗೆದು ಕೊಡೋದು, ಹೆಣ್ಣಿನ ಅಲಂಕಾರಕ್ಕೆ ಬೇಕಾದ ಪರಿಕರಗಳನ್ನೆಲ್ಲಾ ಒದಗಿಸಿಕೊಡೋದು. ಕೆಲಸ ಎಲ್ಲಾ ಆದ ಮೇಲೆ ಅದನ್ನೆಲ್ಲಾ ಎತ್ತಿಟ್ಟು ಜೋಪಾನ ಮಾಡೋದು. ನನ್ನ ಚಿಕ್ಕಮ್ಮಂದಿರ ಜೊತೆ ಎಲ್ಲಾ ಪೂರ್ತಿ ಕೆಲಸಗಳನ್ನು ಆಗಲೇ ದಿಮ್ಮನೇ ನಿಭಾಯಿಸುತ್ತಿದ್ದಳು. ಎಷ್ಟರ ಮಟ್ಟಿಗೆ ಅಂದ್ರೆ ಇಡೀ ಮದುವೆಯಲ್ಲೂ ಒಂಚೂರು ಲೋಪ ಆಗಬಾರದು ಮತ್ತು ಗೊಂದಲ ಆಗಬಾರದು ಅಂತ ಮದುವೆಯ ಪೂರ್ತಿ ಕೆಲಸ ನಾನೇ ಮಾಡಬೇಕು ಅಂತಾನೆ ಬಂದುಬಿಟ್ಟಿದ್ದಳು. ನಮ್ಮ ತಾಯಿ ಮುಗುದ ಜೀವ. ಅವರಿಗೆ ಒಂದಿಷ್ಟು ಕೆಲಸ ಮಾಡೋದು, ಪ್ರೀತಿಯಿಂದ ನಮ್ಮನ್ನ ಪೊರೆಯೋದು ಬಿಟ್ಟರೆ ಈ ವಿಷಯಗಳೆಲ್ಲಾ ಗೊತ್ತಾಗುತ್ತಲೇ ಇರಲಿಲ್ಲ. ಮಕ್ಕಳು ಚೆನ್ನಾಗಿರಲಿ ಆನ್ನೋದನ್ನು ಬಿಟ್ಟರೆ ಆ ಜೀವಕ್ಕೆ ಬೇರೆ ಎಲ್ಲಾ ಏನೂ ಗೊತ್ತಾಗುತ್ತಿರಲಿಲ್ಲ. ಹೀಗಿದ್ದಾಗ ಶೇತಮ್ಮನ ಮದುವೆಯಲ್ಲಿ ನಮ್ಮ ಅಮ್ಮ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಲಕ್ಷ್ಮಿ ನಿಭಾಯಿಸುತಿದ್ದಳು.
‘ಮದುವೆಗೆ ಬಂದವರೆಲ್ಲಾ ಇದೇನಪ್ಪಾ ಎಲ್ಲಾ ಕೆಲಸವನ್ನು ಹುಡುಗಿಯೇ ಮೇಲೆ ಬಿದ್ದು ಮಾಡುತ್ತಿದೆ. ಇವ್ಳು ಹಂಗಿದ್ರೂ ಹೆಂಗೆ ಮೆರಿತಿದ್ದಾಳೆ ನೋಡು. ಉಮಾಶ್ರೀ ನೆಂಟಸ್ತ್ಕೆ ಸಿಕ್ಕಿದೆಯಲ್ಲಾ ಅದಕ್ಕೆ ಹತ್ತಿರ ಬಂದುಬಿಟ್ಟಿದ್ದಾಳೆ’ ಅಂತ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದೇನೆ. ಅವಳಿಗೆ ಗೊತ್ತಾಯಿತೋ ಇಲ್ಲವೋ ಗೊತ್ತಿಲ್ಲ ಇವತ್ತಿನ ತನಕ ನಾನು ಹೇಳಿಲ್ಲ. ಗೊತ್ತಾಗಿದ್ರೂ ಅವಳು ನನ್ನೆದ್ರು ತೋರಿಸಿಕೊಂಡಿಲ್ಲ. ಲಕ್ಷ್ಮಿಗೆ ಒಂಚೂರು ಮೈಬಣ್ಣದಲ್ಲಿ ಬಿಳಿಯ ಬಣ್ಣ ಜಾಸ್ತಿ ಇತ್ತು ಅಷ್ಟೇ. ಅದಕ್ಕೆ ಅಂದು ಮದುವೆಯಲ್ಲಿ ನನ್ನ ಕಿವಿಗೆ ಬೀಳುವಂತೆ ಏನೇನೋ ಮಾತಾಡಿ ನನ್ನ ನೋಯಿಸಿದ ಅದೆಷ್ಟೋ ಮಂದಿ ಪುಣ್ಯಾತ್ಮರಿದ್ದಾರೆ. ನಾನು ಕೂಡ ಹಲ್ಲು ಬಿಗಿದು ಸುಮ್ಮನಿದ್ದೆ ಶೇತಮ್ಮನ ಮದುವೆ ಆಗಿ ಬಿಡಲಿ ಎಂದು. ಆದ್ರೂ ತಡೆಯೋಕೆ ಆಗಬೇಕಲ್ಲ ಅದೇ ಛತ್ರದಲ್ಲಿ ಒಂದು ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು
ದೇಹಕ್ಕೆ ಕೆಂಪು ಕಪ್ಪು ಬಿಳಿ ಗೋದುವೆಯ ಬಣ್ಣ
ರಕ್ತಕ್ಕೆ ರಕ್ತದ ಬಣ್ಣ ಮಾಂಸಕ್ಕೆ ಮಾಂಸದ ಬಣ್ಣ
ಆತ್ಮಕ್ಕೆ ಗುಣ ಭಾವಕ್ಕೆ ಕಣ್ಣಿನದ್ದೇ ಮನಸಿನದ್ದೇ ಬಣ್ಣ
ಕಟ್ಟಿಕೊಂಡವಳಿಗೆ ಕಪ್ಪು ಕಲೆಯ ಬಿಳಿಚಿಪ್ಪಿನ ಬಣ್ಣವಿದೆ ಎಂದು
ಹುಣ್ಣಿಗೆ ಬೆಣ್ಣೆ ಸವರಿ ಜಗಕೆ ಉರಿಯ ಮುಚ್ಚಿ ತಂಪೆನ್ನುವರು
ಬಣ್ಣದ ಬಲಾತ್ಕಾರ ಮಾಡಿ ಬಣ್ಣದಾಟದ ನಾಟಕ ಆಡಿ
ಲೋಕೋತ್ತಮನಾಗಲು ಹೊರಟರೆ ಮನದ ಲಾಡಿಯ ಕಿತ್ತು
ಒಳಬಣ್ಣದ ಗೋಸುಂಬೆತನವ ಜಗಕೆ ತೋರಯ್ಯ ಗುರುವೆ.
ಗುಣವಿದ್ದಡೆ ಮನವಿದ್ದಡೆ ಆತ್ಮದ ಋಣ ಜೀವದೊಳಗೆ
ಬಿತ್ತು ಬೀಜ ಬಿತ್ತಿದ ಮೇಲೆ ಯಾವ ಬಣ್ಣವಯ್ಯಾ.
ಚರ್ಮದ ಮೇಲಿನ ಆಕಾರ ವಿಕಾರಕ್ಕೆ ಚರಮ ಹಾಡಿ
ಜೀವ ಸೌಂದರ್ಯದ ನಿರಾಕಾರ ಕಾಣಿಸಯ್ಯಾ.
ಬರೀ ದೇಹದ ಮೆರುಗ ಹುಡುಕುವ ಮಂದಿಗೆ
ಗುಣದ ಲಾಭ ಬಿಟ್ಟ ಬಣ್ಣದ ಬಟವಾಡೆ ಅಂಗಡಿಯ ಗೊಂಬೆಗೆ
ಸೀರೆ ಉಡಿಸಿದಂತೆ ಎಂದು ನೀನೇ ಹೇಳಿಬಿಡಯ್ಯ.

ಅಂತ ಸರ ಸರ ಮುಯ್ಯಿನ ಕವರ್ ಮೇಲೇ ಬರೆದು, ಒಂದೆರಡು ಸಲ ದೊಡ್ಡ ಉಸಿರು ಬಿಟ್ಟೆ. ಮೊದಲೇ ಅತ್ತೂ , ನೊಂದು, ಮದುವೆಗೆ ದುಡ್ಡು ಹೊಂದಿಸಿ, ಕೆಲಸ ಮಾಡಿ ಇಮರಿಹೋಗಿದ್ದ ಹೃದಯವನ್ನು ಸಮಾಧಾನ ಮಾಡಿಕೊಂಡು ಹೊರಬಂದೆ. ಈ ರೀತಿ ಇರುವಾಗ ಎದುರಿಗೇ ಕಂಡವರಿಗೆ ನಗುವಿನಂತೆ ಮುಖ ಮಾಡಿ ಊಟ ಮಾಡಿ ಹೋಗಿ. ಫೋಟೋ ಹಿಡಿಸಿಕೊಳ್ಳಿ, ಚೆನ್ನಾಗಿದ್ದೀರಾ ಅಂತ ಕೇಳೋದು ತುಂಬಾ ಕಷ್ಟ ಆಗಿತ್ತು. ಅದ್ರಲ್ಲೂ ಕೆಲ ಗಂಡಿನ ಕಡೆಯವರೂ ‘ಈ ಹುಡ್ಗ ನೋಡಿದ್ರೆ ಇಷ್ಟ್ ಚೆನ್ನಾಗಿದ್ದಾನೆ. ಇವನಿಗೇನು ಬಂದಿತ್ತು’ ಅಂತೆಲ್ಲಾ ಮಾತಾಡುತ್ತಿದ್ದನ್ನು ಕೇಳಿ ಸಿಟ್ಟು ಬರುತ್ತಿತ್ತು. ಸಿಟ್ಟು ಬರೋ ವಯಸ್ಸೇ. ಆದ್ರೆ ತಂಗಿ ಮುಖ ನೆನಪಿಗೆ ಬರುತ್ತಿತ್ತು. ಸುಮ್ಮನಾಗಿ ಮುಂದಿನ ಕೆಲಸ ಮಾಡುತ್ತಿದ್ದೆ. ಕಟ್ಟೋಕೆ ಎಷ್ಟೆಲ್ಲಾ ಪೆಟ್ಟು ತಿನ್ನಬೇಕಲ್ವಾ ?
ಗಂಡಿನ ಕೊಠಡಿಗೆ ಯಾವುದೋ ಕೆಲಸದ ನಿಮಿತ್ತ ಹೋದೆ. ಅಮ್ಮ ಅಲ್ಲೇ ಕೂತಿದ್ದರು. ನನ್ನನ್ನು ಒಬ್ಬರು ಒಂಥರಾ ನೋಡಿದರು. ಅಷ್ಟೇ ಅಲ್ಲ ‘ಆ ಹುಡುಗಿ ಯಾರಪ್ಪಾ’ ಅಂತ ಲಕ್ಷ್ಮಿಯನ್ನು ಕುರಿತು ನಯವಾಗಿ ಕೇಳಿದರು. ನಾನೋ ನನ್ನ ಸಂಬಂಧಿ ಅಂತಷ್ಟೇ ಅಂದು ಅಮ್ಮನ ಹತ್ತಿರ ಮದುವೆಗೆ ಸಂಬಂಧಿಸಿದ ಯಾವುದೋ ಮಾಹಿತಿ ಕೇಳಲು ಹೋದೆ. ಕೇಳಿದವರು ಕಿಸಕ್ಕನೆ ನಕ್ಕು ಮಾತಾಡಿಕೊಳ್ಳುತ್ತಿದ್ದರು. ನನಗೆ ಹೇಳಲಾಗದ ಮತ್ತು ಅನುಭವಿಸಲೂ ಆಗದ ಸಂಕಟ. ಅಮ್ಮನಿಗೆ ಸೂಕ್ಷ್ಮ ಗೊತ್ತಾಯಿತು. ರಘುಗೆ ಏನೋ ಬೇಸರ ಆಗಿದೆ ಎಂದು. ಅವರು ಪಕ್ಕಕ್ಕೆ ಕೂರಿಸಿಕೊಂಡು ಹತ್ತಿರಬಂದು ಕಿವಿಯಲ್ಲಿ ಏನಾದ್ರೂ ಕಷ್ಟ ಆಗುತ್ತಿದೆಯಾ ರಘು. ಮೊದಲು ಅವರು ಇವನಿಗೇನಾದ್ರೂ ಹಣಕಾಸಿನ ತೊಂದರೆ ಇರಬೇಕು ಅಂದುಕೊಂಡಿದ್ರು ಅನ್ಸುತ್ತೆ, ನಾನು ಏನಿಲ್ಲಮ್ಮ ಅಂದು ನಮ್ಮ ಕಡೆಯವರೆಲ್ಲಾ ಹೇಳುತಿದ್ದಾರೆ ಶೇತಮ್ಮನಿಗೆ ಧಾರೆ ಮುಹೂರ್ತಕ್ಕೆ ತವರುಮನೆ ಸೀರೆಯನ್ನೇ ಉಡಿಸಬೇಕಂತೆ ಮೇಲು ಮುಸುಕನ್ನು ಕೂಡ ತವರಿನದ್ದೇ ಹಾಕಬೇಕಂತೆ ಅಂದೆ. ಅದಕ್ಕೆ ನಾನು ತಂದ ಸೀರೆಯನ್ನು ಉಡಿಸಲು ನಿಮ್ಮ ಬಳಿ ಒಂದು ಸಲ ಹೇಳಿ ಕೇಳಿಕೊಂಡು ಹೋಗೋಣ ಅಂತ ಬಂದೆ ಅಂತ ಅನ್ನುವಷ್ಟರಲ್ಲಿ ನನ್ನ ಕಣ್ಣೆಲ್ಲಾ ಹಿಂಡಿಕೊಂಡು ದುಪ್ಪೆಂದು ಹನಿ ಜಾರಿಯೇ ಬಿಡ್ತು. ಎಷ್ಟೇ ನಿಭಾಯಿಸಿದರೂ ಆಗಲೇ ಇಲ್ಲ. ಅದಕ್ಕೆ ಅಮ್ಮ ‘ಅದಕ್ಕೇನಂತೆ ನಿನ್ನ ತಂಗಿ ನೀನು ಮದುವೆ ಮಾಡುತ್ತಿರುವುದು ಕಂದಾ ಉಡಿಸಲು ಹೇಳು’ ಅಂದ್ರು. ಆಯಿತಮ್ಮ ಅಂದು ಅವರಿದ್ದ ಕೊಠಡಿಯಿಂದ ಹೊರಡಲು ಎದ್ದೆ. ಅವರು ಕೈ ಹಿಡಿದು ಮತ್ತೊಮ್ಮೆ ಕೇಳಿದ್ರು ‘ಏನಾದ್ರೂ ಸಮಸ್ಯೆನಾ’ ಅಂತ ಏನಿಲ್ಲ ಅಂದೆ. ‘ಇರಲಿ ಹೇಳಪ್ಪ’ ಅಂದ್ರು ಆಗ ಲಕ್ಷ್ಮಿ ವಿಷಯ ತಡೆಯಲಾಗದೆ ಮೇಲೆ ಬರೆದ ಪದ್ಯದ ಒಂದೆರಡು ಸಾಲು ಹೇಳಿ ಛತ್ರದಲ್ಲಿ ಕೆಲವರು ಆಡುತ್ತಿದ್ದ ಮಾತುಗಳನ್ನು ಹೇಳಿಬಿಟ್ಟ. ಒಂದೆರಡು ನಿಮಿಷ ಅಯ್ಯೋ ಕಂದಾ ಅನ್ನುವ ರೀತಿಯಲ್ಲಿ ದಿಟ್ಟಿಸಿ ನೋಡಿ ಅಪ್ಪಿಕೊಂಡರು. ಅಲ್ಲಿ ಹೆಚ್ಚು ಅವರು ಮಾತಾಡುವ ಪರಿಸ್ಥಿತಿ ಕೂಡ ಇರಲಿಲ್ಲ. ‘ಅವರಿವರಾಡುವ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಾ ಮಗ. ಶೇತಮ್ಮ ನೀನು ಅದೆಷ್ಟು ಇಷ್ಟ ಪಡ್ತೀಯ ಅಲ್ವಾ ಹಾಗೆಯೇ ಲಕ್ಷ್ಮಿ ಕೂಡ. ಅವಳ ಮೈಮೇಲಿನ ಬಣ್ಣ ಗುರುತುಗಳು ಕೂಡ ಶ್ವೇತ. ಶೇತಮ್ಮ ಕೂಡ ಶ್ವೇತ. ನೀನು ಶ್ವೇತಪ್ರಿಯ ಕಣೋ‘ ಅಂದು ಬೆನ್ನು ಸವರಿ ಕಳಿಸಿದರು. ಆಗ ತಕ್ಷಣ ಕುವೆಂಪು ನೆನಪಾಗಿ ಬಿಟ್ಟರು ನನಗೆ. ಹೌದಲ್ವಾ ಶ್ವೇತಪ್ರಿಯ ಗುರುವೆ ಅಂದು ಕೊಂಡು ನನಗೆ ಏನೂ ಆಗಿಲ್ಲ. ಆಗಿರೋದೆಲ್ಲಾ ಈ ಅಂದಾಡುವ ಮಂದಿಗೆ ಅಂದುಕೊಂಡು ಅದಮ್ಯ ಆತ್ಮ ವಿಶ್ವಾಸದಿಂದ ಮತ್ತೆ ಕೆಲಸ ಕಾರ್ಯದಕಡೆ ಗಮನಕೊಟ್ಟೇ. ಯಾರೂ ಏನೂ ಅಂದಿಲ್ಲ, ಅಂದರೂ ಅವರೆಲ್ಲಾ ನನಗೆ ಅನ್ನುತ್ತಿಲ್ಲ. ಅವರಿಗೆಲ್ಲಾ ಏನು ಮಾತಾಡ ಬೇಕೋ ಗೊತ್ತಾಗುತ್ತಿಲ್ಲ ಅದಕ್ಕೆ ಏನೇನೋ ಮಾತಾಡುತ್ತಾರೆ ಪಾಪ ಅಂತ ಅಂದುಕೊಳ್ಳೋಕೆ ಶುರು ಮಾಡಿದೆ. ನನ್ನ ನೋವುಗಳೆಲ್ಲಾ ಹೇಗಾದರೂ ಗೊತ್ತಾಗುತ್ತಿದ್ದ ಶೇತಮ್ಮ ಕೂಡ ವಧುವಾಗಿದ್ದರೂ ತನ್ನ ಅಣ್ಣ ಮಾನಸಿಕವಾಗಿ ಎಷ್ಟೊಂದು ಕಷ್ಟ ಪಡ್ತಿದ್ದಾನೆ ಕೊರುತ್ತಲೇ ಇದ್ದಳು. ಅಲ್ಲಿ ಇಲ್ಲಿ ನಾ ಓಡಾಡುತ್ತಿದ್ದಾಗ ಅವಳ ಎದುರು ಏನಾದ್ರೂ ಒಂಚೂರು ಕಂಡ್ರೆ ಸಾಕು ಅವಳು ನೋಡುತ್ತಿದ್ದ ನೋಟ ಯಾವ ತಾಯಿಯ ನೋಟಕ್ಕಿಂತ ಕಡಿಮೆ ಇರುತ್ತಿರಲಿಲ್ಲ. ಅದೊಂತರಾ ಕಾಮಧೇನುವಿನ ನೋಟ. ಇದರ ಜೊತೆ ನೋವುಗಳೆಲ್ಲಾ ಬೀಜ ಕಟ್ಟಿ ನಗುವಾಗಿ ಅರಳುತ್ತಿದ್ದ ಲಕ್ಷ್ಮಿ ಜೊತೆ ಜೊತೆಗೇ ಕಾಣುತ್ತಿದ್ದಳು.
ಈ ಮೊದಲು ಅಮ್ಮನಿಗೆ ನನ್ನ ಮತ್ತು ಲಕ್ಷ್ಮಿಯ ವಿಷಯ ಹೇಳಿದ್ದೇ. ಯಾಕಂದ್ರೆ ಯಾವುದೇ ಕಾರಣಕ್ಕೂ ಅಮ್ಮನಿಗೆ ನನ್ನ ಮೇಲೆ ತಪ್ಪು ಗ್ರಹಿಕೆ ಬರೋದು ಬೇಡ ಅಂತ. ಅದಷ್ಟೇ ಅಲ್ಲಾ ಮದುವೆಗೆ ಮುಂಚೆ ನನ್ನ ಮತ್ತು ಶೇತಮ್ಮನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಒಂದಿಷ್ಟೂ ಬಿಡದಂತೆ ಎಲ್ಲಾ ಅವರಿಗೆ ಹೇಳಿಬಿಟ್ಟಿದ್ದೆ. ಹಾಗಾಗಿ ಅವರು ಮದುವೆ ಶೇತಮ್ಮ ಮದುವೆಯ ಮುಂಚೆಯೇ ಮಗನೆಂದು ಮಡಿಲಿಗೆ ಹಾಕಿಕೊಂಡು ಪ್ರೀತಿ ತೋರುತ್ತಿದ್ದರು. ಅಷ್ಟು ಪಾರದರ್ಷಕವಾಗಿದ್ದೆ ಅಮ್ಮನ ಎದುರು. ಹಾಗಾಗಿ ನನ್ನ ಮತ್ತು ಲಕ್ಷ್ಮಿಯ ವಿಷಯ ಅವರಿಗೆ ಪೂರ್ಣ ಗೊತ್ತಿತ್ತು. ಮದುವೆಗಾಗಿ ನಾ ಪಟ್ಟ ಪಾಡುಗಳೆಲ್ಲಾ ಒಂದೊದಾಗಿ ಅವರಿಗೆ ಗೊತ್ತಾಗಿತ್ತು. ಹಾಗಾಗಿ ಅವರು ‘ಆಡುವವರ ಮಾತಿಗೆ ನಕ್ಕು ಸುಮ್ಮನಾಗು. ನನ್ನ ಬದುಕೂ ಕೂಡ ಇದೇ ರೀತಿ ಅಂದಾಡುವವರ ಆಶ್ರಯದಲ್ಲೇ ರೂಪುಗೊಂಡಿದ್ದು. ಅವರು ಅನ್ನುತ್ತಿರಲಿ. ಛಲ ಬೆಳೆಯುತ್ತೆ ಅದೊಂತರಾ ಗೊಬ್ಬರ ಆಗಬೇಕು ನಮ್ಮನ್ನು ನಾವು ಬೆಳೆಸಿಕೊಳ್ಳೋಕೆ. ತಲೆಕೆಡಿಸಿಕೊಳ್ಳಬೇಡ’ ಅಂತ ಅದೆಷ್ಟೋ ಸಲ ಹೇಳಿದ್ದಾರೆ. ಈಗಲೂ ಹೇಳುತ್ತಿರುತ್ತಾರೆ.
ಮೊನ್ನೆ ಮಾರ್ಚ್ ಒಂಭತ್ತಕ್ಕೆ ಲಕ್ಹ್ಮಿಯನ್ನು ನನ್ನ ಬಾಳಲ್ಲಿ ಬೆಳಕಾಗಿ ಬಂದು ಎಂಟು ವರ್ಷ ಆಯಿತು. ಪ್ರತೀ ವರ್ಷ ಅಮ್ಮ ಶುಭ ಕೋರಿದಾಗಲೂ ಇದೆಲ್ಲಾ ನೆನಪಾಗುತ್ತದೆ. ಈ ವರ್ಷವೂ ಕೂಡ ಇದೆಲ್ಲಾ ನೆನಪಾಯಿತು. ವರ್ಷ ವರ್ಷ ಲಕ್ಷ್ಮಿಗೆ ಕವಿತೆ ಬರೆದು ಶುಭ ಕೋರುತ್ತಿದೆ. ಬಿಡುವಿದ್ದಾಗ ಅಮ್ಮ ಕೂಡ ಕೇಳೋರು ಯಾವ ಕವಿತೆ ಬರೆದೆ ಸಂಗಾತಿಗಾಗಿ ಎಂದು. ಈ ಸಲ ಕವಿತೆ ಬರೆಯಲು ಆಗಲೇ ಇಲ್ಲ. ಅವಳ ಪೊರೆಯುವ ಗುಣದ ಎದುರು ಕವಿತೆ ಕೂಡ ಮಂಕಾಗಿ ಮೂಲೆಗೆ ಕೂತುಬಿಟ್ಟಿದೆ. ಈ ಸಲ ಇದನ್ನೆಲ್ಲಾ ನಿಮ್ಮ ಬಳಿ ಹಂಚಿಕೊಳ್ಳಬೇಕೆನಿಸಿತು ಅಷ್ಟೇ. ಹೇಳಿಕೊಳ್ಳೋದರಲ್ಲಿ ನೆಮ್ಮದಿಯಿದೆ. ಸ್ಮರಿಸುವುದರಲ್ಲಿ ಸುಖವಿದೆ ಅಂತ ನಂಬಿರುವವನು ನಾನು. ಶ್ವೇತಪ್ರಿಯ ಒಡಲಾಳದ ತಾಯಿ ಕೊಟ್ಟ ಅಂಕಿತ. ಶ್ವೇತಪ್ರಿಯ ಗುರುವೆ ಅನ್ನುವುದು ಗುರು ಕಾರುಣ್ಯ. ಸಂಬಂಧಗಳೆಲ್ಲಾ ಹೀಗೆ ಎನೆನನ್ನೋ ಕೊಡುತ್ತಿರುತ್ತವೆ ಪಡೆಯುತ್ತಿರುತ್ತವೆ ಅಲ್ವಾ. ಸಂಬಂಧಗಳು ಅರ್ಥ ಅಂದ್ರೆ ಅರ್ಥ. ಅನರ್ಥ ಅಂದ್ರೆ ಅನರ್ಥ. ಇಲ್ಲಾ ಏನೂ ಹೇಳಲಾಗದ ಮಹಾ ಮೌನದ ನಿರ್ವಾತ ಅಲ್ಲವೇ ಶ್ವೇತಪ್ರಿಯ ಗುರುವೆ ?….
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅಮ್ಮ ಶ್ವೇತಪ್ರಿಯ ಅಂದ್ರು

ಶ್ವೇತಪ್ರಿಯ ಗುರುವೇ ಹಿನ್ನೆಲೆ ತಿಳಿಯಿತು ಈಗ ಸರ್. ಬಣ್ಣ ಯಾವುದಾದರೇನು ಪ್ರೀತಿಯೊಂದೇ ಎಲ್ಲಾ ನಿಮ್ಮೀರ್ವರ ಬದುಕು ಸಂತಸದಿಂದಿರಲಿ. ಜನ ಹೇಗಿದ್ದರೂ ಮಾತನಾಡಿಕೊಳ್ಳುತ್ತಾರೆ ಯಾವುದಕ್ಕೂ ಬೇಸರಿಸದೆ ನಿಮ್ಮ ನಿಲುವನ್ನು ನಿರ್ಧರಿಸಿ ಬದುಕುತ್ತಿದ್ದೀರಿ ಸಂತಸದ ವಿಷಯ ಶುಭವಾಗಲಿ ಸರ್.
nice writing
ಒಂಭತ್ತನೆ ವರ್ಷದ ವಿವಾಹದಿನ ಶುಭಾಶಯಗಳು, ಆಡಿಕೊಳ್ಳುವವರು ಅಂದುಕೊಳ್ಳುವವರು ಚೆನ್ನಾಗಿರಲಿ, ಬೈದವರೆನ್ನ ಬಂಧುಗಳಯ್ಯಾ ಎಂದುಬಿಡಿ ರಘು. ಲೋಕದ ಬಾಯಿ ಮುಚ್ಚಿಸುವ ಗೋಂದು ಇನ್ನೂ ಬಂದಿಲ್ಲ. ಹೇಗೋ ತಂಗಿಯನ್ನು ದಡ ಸೇರಿಸಿದಿರಿ, ಲಕ್ಷ್ಮಿಯ ದೋಷವೆಂದು ಜನ ಅನ್ನುವುದರ ಕಡೆ ಕಿವಿಗೊಡದೆ ಮದುವೆಯಾಗಿ ಮಕ್ಕಳನ್ನು ಪಡೆದು ಆಡಿಕೊಂಡವರ ಎದೆ ಮೆಟ್ಟಿದಂತೆ ಯಶಸ್ವೀ ಹಾಗೂ ಸುಖಸಂಸಾರಿಗರೂ ಆಗಿದ್ದೀರಿ. ಹೆತ್ತ ಅಮ್ಮನನ್ನೂ ಸಲಹುತ್ತಿದ್ದೀರಿ. ಮತ್ತೊಬ್ಬ ಅಮ್ಮನನ್ನೂ ಪಡೆದಿದ್ದೀರಿ, ನೀವು ಪುಣ್ಯವಂತರು. ಮಿಕ್ಕಿದ್ದನ್ನು ತಳ್ಳಿಹಾಕಿ.ಲೋಕದಾ ಡೊಂಕ ನಾವು ತಿದ್ದಲಾರೆವು, ನಮ್ಮ ಮನವ ಸಮಾಧಾನವಾಗಿಟ್ಟುಕೊಳ್ಳುವ ಪ್ರಯತ್ನ ಮಾಡೋಣ.
swetvatsdhariniya anubhva chennagide……………….anubhavadalli amruthvide
gobbara aagabeku nammannu nau belisi kollokea , Bithhu BEEJA Bithhitdha male yaava BAANNAVAYYA NICE SIR MANNA MUTTUTHADHE AA LINIES
oh! super article, nice
pramanikateya odalalada barha. nannannu nane tulane mAdikolluvantayitu. balu ettaradalli kanutteeri nanage.