
ಬೇಲೂರಿನಲ್ಲಿದ್ದಾಗ ರೋಟರಾಕ್ಟ್ ನಲ್ಲಿ ನಾನು ಹೆಚ್ಚು ತೊಡಗಿಸಿಕೊಂಡಿದ್ದೆ. ರೋಟರಾಕ್ಟ್ ಯುವಕರನ್ನು ಸಮಾಜ ಮುಖಿಯಾಗಿ ತೊಡಗಿಸುವ ಆಶಯಗಳುಳ್ಳ ಒಂದು ಅಂತರ ರಾಷ್ಟ್ರೀಯ ಸಂಸ್ಥೆ ಅದು. ರೋಟರಿಯ ಅಂಗ ಸಂಸ್ಥೆ ಕೂಡ. ನಾನೂ ಕೂಡ ಇದೇ ಸಂಸ್ಥೆಯಲ್ಲಿ ಬೇಲೂರಿನ ಅಧ್ಯಕ್ಷನಾಗಿ ಎರಡು ವರ್ಷ ಕೆಲಸ ಮಾಡಿದ್ದೆ. ಆಮೇಲೆ ಒಂದು ವರ್ಷ ರೋಟರಿ ಜಿಲ್ಲೆ 3180ರಲ್ಲಿ ಮಲೆನಾಡು ವಲಯದ ವಲಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದೆ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ ಉಡುಪಿಯಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ರೋಟರಾಕ್ಟ್ ಕಾರ್ಯಕ್ರಮವೊಂದಕ್ಕೆ ಮಲೆನಾಡು ವಲಯವನ್ನು ಪ್ರತಿನಿಧಿಸಿ ಅಲ್ಲಿಗೆ ನಾನು ಹೋಗಬೇಕಾಗಿತ್ತು. ಜೇಬಲ್ಲಿ ಚಿಲ್ಲರೆ ಕಾಸಿಲ್ಲದಿದ್ದರೂ ಅಧ್ಯಕ್ಷ. ವಲಯ ಪ್ರತಿನಿಧಿ ಈ ಜವಾಬ್ದಾರಿಗಳು ಕಷ್ಟ ಅನ್ನಿಸುತ್ತಿದ್ದವು. ಆದ್ರೂ ಅವರಿವರ ಹತ್ತಿರ ದಾನ ದೇಣಿಗೆ ಪಡೆದು ಕಾರ್ಯಕ್ರಮಗಳನ್ನು ನಡೆಸುತ್ತಿದ್ದುದು ಒಂಥರಾ ಆನಂದವನ್ನು ಕೊಡುತ್ತಿತ್ತು. ಅದೇನೇ ಇದ್ರೂ ಸಂಘಟನೆ ಕಥೆ ಹೇಳ್ತಾ ಹೋದ್ರೆ ತೀರಲ್ಲ ಆರಲ್ಲ ಬಿಡಿ.
ಹೀಗಿರುವ ಸಂದರ್ಭದಲ್ಲಿ ನಾನು ಉಡುಪಿಗೆ ಹೋಗಿದ್ದಾಗ ಗುಲಾಬಿ ಟಾಕೀಸ್ ಶೂಟಿಂಗ್, ಉಡುಪಿ ಹತ್ರ ಇರೋ ಕೋಡಿಬೇಂಗ್ರೆಯಲ್ಲಿ ನಡೀತಿತ್ತು. ಅಷ್ಟೊತ್ತಿಗೆ ಉಮಾಶ್ರೀ ಅವರ ಮಗನಿಗೆ ನನ್ನ ತಂಗಿ ಕೊಟ್ಟು ಮದುವೆ ಮಾಡಿ ಆಗಿತ್ತು. ಆದ್ರೆ ನಾನು ಇನ್ನೂ ಬೇಲೂರಿನಲ್ಲೇ ಇದ್ದೆ. ಸ್ವಾಮಿ ಕಾರ್ಯ ಸ್ವಕಾರ್ಯ ಅನ್ನೋಹಾಗೆ, ಕಾರ್ಯಕ್ರಮ ಮತ್ತು ಶೂಟಿಂಗ್ ಎರಡನ್ನು ಮುಗಿಸಿಕೊಂಡು ಬರೋಣಾ ಅಂತ ಯೋಜನೆ ಹಾಕಿಕೊಂಡು ದಕ್ಷಿಣ ಕನ್ನಡಕ್ಕೆ ಹೊರಟೆ. ಹೀಗಾಗಿ ಮೂರ್ನಾಲ್ಕು ದಿನ ಅಮ್ಮನ ಜೊತೆಲೇ ಇದ್ದೆ. ಸಿನೆಮಾ, ಶೂಟಿಂಗು ಎಲ್ಲಾ ಆರಂಭಕ್ಕೆ ನನ್ನಂತೋನಿಗೆ ಅಬುಜುಬ ನೋಡಿ. ಆ ಕಾರಣಕ್ಕೂ ನಾ ಅಮ್ಮನ ಜೊತೆ ಇದ್ದು ಕಾಲ ಕಳೀಬಹುದು ಮತ್ತು ಒಂದಷ್ಟು ಕಲೀಬಹುದು ಅಂತ ಬೇಲೂರಿನಲ್ಲಿ ಎಲ್ಲಾ ಬಿಟ್ಟಿದ್ದು ಬಿಟ್ಟ ಹಾಗೇ ಬಿಟ್ಟು ಹೊರಟುಬಿಟ್ಟೆ ಗುಲಾಬಿಯನ್ನು ನೋಡಲು.
ಕೋಡಿಬೇಂಗ್ರೆ ಒಂದು ಪುಟ್ಟ ಗ್ರಾಮ. ಒಂದೈವತ್ತು ನೂರು ಮನೆಗಳಿರಬಹುದೇನೋ ಅಲ್ಲಿ. ಸುತ್ತ ಸಮುದ್ರದ ನೀರು ಆವರಿಸಿರುವ ಸುಂದರವಾದ ಜಾಗ. ಅಲ್ಲಿ ಗುಲಾಬಿ ನಮ್ಮ ಉಮಾಶ್ರೀ ಅವರು. ತಿಳಿ ಹಳದಿ ಬಣ್ಣದ ಸಣ್ಣ ಹೂವ ಇರೋ ಮಾಸಿದ ಸೀರೆ ಉಟ್ಟುಕೊಂಡು, ಕಿವಿ ತುಂಬಾ ಆಲಿಖತ್ತು ಹಾಕ್ಕೊಂಡು, ತುಂಬು ತೋಳಿನ ರವಿಕೆ ತೊಟ್ಕೊಂಡು, ಸೀರೆ ಮೇಲೊಂದು ಸೊಂಟದ ಪಟ್ಟಿ ಹಾಕ್ಕೊಂಡು, ಬಣ್ಣ ಬಣ್ಣದ ಬಳೆ, ಕಣ್ಕಪ್ಪು, ಎಲೆ ಅಡಿಕೆ ಇವೆಲ್ಲದರ ಜೊತೆ ಸದಾ ಪಾತ್ರದಲ್ಲಿ ಮುಳುಗಿ ಹೋಗಿರುತಿದ್ರು ಅಮ್ಮ. ಹೇಗಂದ್ರೆ ಕಡಲ ಅಲೆಗಳು ಮೇಲೆ ಬಂದರೂ ಮತ್ತೆ ಮತ್ತೆ ಒಳ ಸೆಳೆದುಕೊಳ್ಳುವ ಹಾಗೆ. ಇವರೂ ಕೂಡ ಥೇಟ್ ಕಡಲೇ ತಮ್ಮ ಶಾಟ್ ಬಂದಾಗ ಅಲೆಯಂತೆ ಅಭಿನಯಿಸಿ ಬಿಡುವಾದ ಕೂಡ್ಲೇ ಮತ್ತೆ ತಮ್ಮೊಳಗೆ ತಾವೇ ಒಳ ಸೆಳೆದುಕೊಂಡು ಅಂತರ್ಮುಖಿಯಾಗಿ ಬಿಡುತ್ತಿದ್ದರು. ಒಮ್ಮೊಮ್ಮೆ ಮಹಾ ಮೌನಿ ಬಣ್ಣ ಹಚ್ಚಿದಾಗ. ಬಣ್ಣ ಬಿಚ್ಚಿದಾಗ ಅನುಭವೀ ಬಯಲು. ಹೀಗೆ ಅವರು ಶೂಟಿಂಗ್ ವೇಳೆಯಲ್ಲಿ ತಮ್ಮ ಕಲಾ ಕಲಿಕೆಯ ಗಂಟನ್ನು ಬಿಚ್ಚುತ್ತಾ ಮತ್ತೆ ಸಿಕ್ಕ ಹೊಸ ಹೊಸ ಸಾಧನಗಳನ್ನು ತಮ್ಮ ಗಂಟಿಗೆ ಹಾಕಿಕೊಳ್ಳುತ್ತಾ ಇರೋದನ್ನು ನೋಡೋದೇ ನನ್ನಂತೋನಿಗೆ ಒಂದು ಸೋಜಿಗ. ಆದ್ರೆ ಅವರು ಬೆಳಗಿನಿಂದ ಸಂಜೆ ತನಕ ಜೋತೆಲಿದ್ರೂ ಕೆಲಸದಲ್ಲಿ ಮಗ್ನರಾಗಿರ್ತಿದ್ರು. ನನಗೋ ಅವರು ಮಾತಾಡಿಸುತ್ತಿಲ್ಲವಲ್ಲ ಅನ್ನೋ ಸಂಕಟ. ನನ್ನ ಕಡೆಗಣಿಸುತ್ತಿದ್ದಾರೆ, ಜಂಭ ಮಾಡುತ್ತಿದ್ದಾರೆ ಅನ್ನುವ ಮಿಣುಕುಗಳು ಆ ಕಾಲಕ್ಕೆ ಬಂದು ಹೋಗುತಿದ್ವು. ಯಾಕಂದ್ರೆ ಅವರ ಜೊತೆಗಿನ ಹತ್ತಿರದ ಒಡನಾಟ ತಿಂಗಳುಗಳ ಅಂತರದ್ದು ಅಷ್ಟೇ. ನಂಗೆ ಹಾಗೆ ಅನ್ನಿಸಿದ್ದು ಸರಿಯೇ ಆಗ. ಅವರು ಮಾಡುತ್ತಿದ್ದುದು ಸರಿಯೇ. ಕೆಲಸ ಕಾರ್ಯ ಬಿಟ್ಟು ಮಾತಾಡಿಸಿಕೊಂಡು ಕೂತ್ಕೋ ಅನ್ನುವ ನನ್ನ ನಿರೀಕ್ಷೆಗಳಿಗೆ ಅವತ್ತು ಉಮಾಶ್ರೀ ಅವರು ಕಲಿಸಿಕೊಟ್ಟ ಕಾಯಕ ನಿಷ್ಠೆ ಮಾತ್ರ ಬಹು ದೊಡ್ಡದು.
ಸಂಜೆ ಶೂಟಿಂಗ್ ಪ್ಯಾಕ್ ಅಪ್ ಆದ ತಕ್ಷಣ ಅವರು ನನ್ನೊಟ್ಟಿಗೆ ಮಾತಾಡುತ್ತಿದ್ದ ಪರಿ ಬೆಳಗ್ಗೆ ಏನೇನು ಅನ್ಕೊಂಡಿರ್ತಿದ್ನೋ ಅದನ್ನೆಲ್ಲಾ ಪೂರ್ತಾ ಬದಲಾಗುವ ಹಾಗೆ ಮಾಡಿಬಿಡುತಿದ್ವು. ಹೇಗಂದ್ರೆ ಒಮ್ಮೊಮ್ಮೆ ಅವರಾಡುತ್ತಿದ್ದ ಮಾತುಗಳ ಆಳಕ್ಕೆ ಇಳಿಯಲಾಗುತ್ತಿರಲಿಲ್ಲ, ಎತ್ತರಕ್ಕೂ ಎರಲಾಗುತ್ತಿರಲಿಲ್ಲ. ಪಾತ್ರ, ಅಭಿನಯ, ಉಡುಗೆ ತೊಡುಗೆ, ಬದುಕು ಹೀಗೆ ಏನೇನೋ. ಇಷ್ಟರ ನಡುವೆ ಅವರು ಅವರ ಮಗನ ಬದುಕಿನ ಬಗ್ಗೆ ನಾನು ನನ್ನ ತಂಗಿಯ ಬದುಕಿನ ಬಗ್ಗೆ ಕಾಣುತ್ತಿದ್ದ ಕನಸುಗಳು ಮತ್ತು ನಾವಿಬ್ಬರೂ ಸೇರಿ ಅವರ ಬದುಕನ್ನು ಹೇಗೆ ಕಟ್ಟುವುದು ಅಂತ ಹಾಕಿಕೊಳ್ಳುತ್ತಿದ್ದ ಯೋಜನೆಗಳು ಮಾತ್ರ ಜೀವನದುದ್ದಕ್ಕೂ ಮರೆಯಲಾಗುವುದಿಲ್ಲ. ಕೌಟುಂಬಿಕ ಬದುಕು ಹೇಗಿರಬೇಕು ಅನ್ನೋದನ್ನು ನಾನೂ ಸಾಕಷ್ಟು ಕಲಿತದ್ದು ಅವರಿಂದಲೇ. ಕುಟುಂಬದೊಳಗೆ ಅನುಭವಿಸಿದ ಸಂಕಷ್ಟಗಳು, ಅವಮಾನಗಳು, ಅಸಹಾಯಕತೆಗಳು ತಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಅಂತ ಕಾಪಿಡುವ ಜೀವಗಳು ಎಷ್ಟೆಷ್ಟೋ ಜನ ಇದ್ದಾರೆ ನಮ್ಮ ನಡುವೆ. ಹೀಗೆ ನಾನೂ ಮತ್ತು ಅಮ್ಮ ಇಬ್ಬರೂ ಅವರ ಮಗ ಮತ್ತು ನನ್ನ ತಂಗಿಯ ಬದುಕನ್ನು ಕಾಯುತ್ತಿದ್ದ ರೀತಿಯೂ ಇದೇ ತರ ಅನ್ನಿಸುತ್ತೆ. ಅಥವಾ ಬೇರೇನೂ ಇರಬಹುದು.ಇದೆಲ್ಲಾ ಮೊದ ಮೊದಲು ಈಗ ಅವರಿಬ್ಬರೇ ನಮ್ಮನ್ನು ಕಾಯುತ್ತಿದ್ದಾರೆ, ಕಾಪಿಡುತ್ತಿದ್ದಾರೆ ಬಿಡಿ. ತಿನ್ನಲಾರದ ಹಣ್ಣುಗಳು ಬಲು ರುಚಿ ಆದ್ರೆ ಅವನ್ನು ಕೊಳೆಯದಂತೆ, ಕಳೆ ಬೆಳೆಯದಂತೆ ಕಾಪಾಡೋದು ಉತ್ತು ಬಿತ್ತೊನ ಕಾಯಕ ಅಲ್ವಾ? ಅದೇನೇ ಇರಲಿ ಕುಟುಂಬ ಅನ್ನೋದು ಒಂದು ವಿಶ್ವವಿದ್ಯಾಲಯ. ಎಷ್ಟೊಂದು ಜ್ಞಾನಶಿಸ್ತುಗಳು, ಕಲಿಕೆ ಗಳಿಕೆಗಳು ಅಲ್ಲಿ ಅಲ್ವಾ.

ನಾನು ಶೂಟಿಂಗ್ ನೋಡಲು ಹೋದ ಎರಡನೇ ದಿನಕ್ಕೆ ಬಾಣಂತಿಗೆ ಹೆರಿಗೆ ಮಾಡಿಸೋ ಶಾಟ್ ತಗೋತಿದ್ರು. ಕಾಸರವಳ್ಳಿಯವರು ಆ ದೃಶ್ಯವನ್ನು ಹೆಣೆಯೋದರಲ್ಲಿ ತಲ್ಲೀನರಾಗಿದ್ರೆ, ಉಮಾಶ್ರೀ ಅವರು ಬಂದೋಬಸ್ತ್ ಹೆರಿಗೆ ಮಾಡಿಸೋ ಬೂಬಮ್ಮ ಆಗಿಬಿಟ್ಟಿದ್ರು. ಇನ್ನೂ ಕ್ಯಾಮರಾ ಮೆನ್ ಆ ದೃಶ್ಯವನ್ನು ಎಷ್ಟು ಸಂಕೇತಾರ್ಥಗಳಲ್ಲಿ ತೋರಿಸೋಕೆ ಸಾಧ್ಯ ಅನ್ನೋದನ್ನು ಲೆಖ್ಖಾಚಾರ ಹಾಕ್ತಿದ್ರು. ಒಂಥರಾ ತ್ರಿಶಕ್ತಿಗಳು ಒಂದೆಡೆ ಸೇರಿಬಿಟ್ಟಿದ್ದವು ಅನ್ನಿಸುತ್ತಿತ್ತು ಅಲ್ಲಿ. ನಂಗೋ ಸಿನೆಮಾ ನೋಡಿ ಗೊತ್ತಿತ್ತು. ಆದ್ರೆ ಮಾಡೋದು ಹೇಗೆ ಅಂತಾ ಗೊತ್ತಾಗಿದ್ದು ಮೊದಲು ಗುಲಾಬಿ ಟಾಕೀಸ್ ಶೂಟಿಂಗ್ ಸಂದರ್ಭದಲ್ಲೇ. ಮೊದ ಮೊದಲು ಆಸಕ್ತಿ ಹೆಚ್ಚಿತ್ತು ಆದ್ರೆ ಕೊನೆ ಕೊನೆಗೆ ನೋಡಿದ್ದೇ ನೋಡಿ ನೋಡಿ ಸಾಕಾಗಿ ಅಮ್ಮ ಬಿಡುವಾದ್ರೆ ಸಾಕು ಅವರೊಟ್ಟಿಗೆ ಒಂದಿಷ್ಟು ಮಾತಾಡಬಹುದು ಅನ್ಕೊತಿದ್ದೆ. ಎರಡನೇ ದಿನಕ್ಕೆ ಸಿನಿಮಾದ ಪರಿಭಾಷೆಗಳೆಲ್ಲಾ ಅರ್ಥ ಆಗೋಕೆ ಶುರು ಆಗಿ ತುಂಬಾ ಖುಷಿ ಅನ್ನಿಸ್ತಿತ್ತು.
ಹಿಂಗೇ ಶೂಟ್ ನಡೆಯುವ ಸಂದರ್ಭದಲ್ಲಿ ಅಮ್ಮಾ ಕಾಸರವಳ್ಳಿ ಅವರ ಬಳಿ ಸರ್ ಹೀಗೆ ಇಂಪ್ರೂವ್ ಮಾಡಿಕೊಂಡು ಅಭಿನಯಿಸಲಾ ಅಂತಾ ಅಮ್ಮ ಕೇಳ್ತಿದ್ರು. ಅದಕ್ಕೆ ಕಾಸರವಳ್ಳಿಯವರು ಒಮ್ಮೊಮ್ಮೆ ಸಣ್ಣ ನಗು ಕೊಡೋರು ಇನ್ನೂ ಕೆಲವೊಮ್ಮೆ ಹೇಳಿದಷ್ಟು ಮಾಡಬಾರದ ಅನ್ನೋ ತರ ನೋಡುತಿದ್ರು. ಆ ನೋಟಗಳಲ್ಲೇ ಪರಸ್ಪರ ಇಬ್ಬರೂ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದುದನ್ನು ನಾನು ಗಮನಿಸುತ್ತಿದ್ದೆ. ಅಮ್ಮಾನ್ಮೋ ತೆರೆದ ಅಭಿನಯ, ಖುಲ್ಲಾ ಅಭಿನಯ, ರಂಗಭೂಮಿಯಿಂದ ಕಲಿತಿದ್ರು. ಅದೆಲ್ಲಾ ಇಲ್ಲಿ ಕೆಲಸಕ್ಕೆ ಬರ್ತಿರಲಿಲ್ಲ. ಒಂಥರಾ ಸಂಕೀರ್ಣ ಅಭಿನಯ. ಇಷ್ಟಿಷ್ಟೇ ಅಂತ ತೂಗಿಟ್ಟ ಅಭಿನಯ ದಾರಿಗಳು. ಉಮಾಶ್ರೀ ಅಂಥವರಿಗೆ ಇದು ತುಸು ಕಷ್ಟ ಅಂತ ನಾನು ಅನ್ಕೋತಿದ್ದೆ ಆದ್ರೆ ಅದು ಅವರಿಗೇನು ಕಷ್ಟ ಅನ್ನಿಸದೇ ಸಲೀಸಾಗಿ ಕಾಸರವಳ್ಳಿಯವರ ನಿರ್ದೇಶನಕ್ಕೆ ತೆರೆದುಕೊಳ್ಳುತಿದ್ರು.
ಶೂಟಿಂಗ್ ಪ್ಯಾಕ್ ಅಪ್ ಆಯಿತು. ಇಬ್ಬರೂ ರೂಮಿನ ಕಡೆ ಹೊರಟ್ವಿ. ಅವತ್ತು ದಾರಿ ಉದ್ದಕ್ಕೂ ವೈದೇಹಿ ಅವರ ಗುಲಾಬಿ ಕಥೆಯನ್ನು ಮಾತಾಡಿಕೊಂಡು ಜೊತೆಗೆ ಕಾಸರವಳ್ಳಿಯವರ ಚಿತ್ರಕತೆಯನ್ನು ಮಾತಾಡಿಕೊಂಡು ದಾರಿ ಸಾಗಿಸುತ್ತಿದ್ವಿ. ಇಬ್ಬರಿಗೂ ಕಲಿಕೆಯೇ. ಗುಲಾಬಿ ಬಗ್ಗೆ ಮಾತಾಡ್ತಾ ಮಾತಾಡ್ತಾ ವೈದೇಹಿಯವರ ಅಕ್ಕುವಿನ ಬಗ್ಗೆ ನಾನು ಪ್ರಸ್ತಾಪಿಸಿದೆ. ತಕ್ಷಣ ಅಮ್ಮಾ ಅಕ್ಕುವನ್ನು ಆವಾಹಿಸಿಕೊಂಡು, ಆ ಅಕ್ಕು ನಂಗೆ ಹೇಳಿ ಮಾಡಿಸಿದ ಪಾತ್ರ ಅಲ್ವಾ ಅಂದ್ರು. ಮತ್ತೆ ಅಕ್ಕುವಿನ ಬಗೆಗೆ ಮತ್ತೆ ಮತ್ತೆ ಅವತ್ತಿಡೀ ಚರ್ಚೆ ಮಾಡುತ್ತಲೇ ಇದ್ವಿ. ಗುಲಾಬಿ ಮತ್ತು ಅಕ್ಕು ಎರಡೂ ಪರಸ್ಪರ ಎದ್ರಾ ಬದ್ರಾ ನಿಂತಿರೋ ಪಾತ್ರಗಳು. ಆದ್ರೆ ಎರಡೂ ಪಾತ್ರಗಳೂ ಸಮಾಜದಲ್ಲಿ ಹೆಣ್ಣು ಹೇಗೆ ಬೇರೆ ಬೇರೆ ಸ್ಥರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಲೇ ಇಡೀ ಸಮಾಜದ ಶಕ್ತಿಯಾಗಿದ್ದಾರೆ ಅನ್ನೋದನ್ನು ಇಬ್ಬರೂ ಮಾತಾಡುತ್ತಿದ್ದೆವು. ಸಾಕವ್ವ, ಪುಟ್ಮಲ್ಲಿ , ಗುಲಾಬಿ ಪಾತ್ರಗಳನ್ನು ಮಾಡಿದ ಅಮ್ಮನಿಗೆ ವೈದೇಹಿ ಅವರ ಅಕ್ಕು ಕೂಡ ಸೆಳೆದುಬಿಟ್ಟಳು. ಅಕ್ಕು ಟುವಾಲು ಹಿಡಿದುಕೊಂಡು ಊರೆಲ್ಲಾ ಸುತ್ತವ, ಅವಳನ್ನು ಒಂದು ಕತ್ತಲು ಕೋಣೆಗೆ ಹಾಕಿಕೊಂಡು ಹೊಡೆಯುವ ಮತ್ತು ಯಾರನ್ನೋ ಗಂಡ ಅಂದಾಗ ಅವಳು ಪ್ರತಿಕ್ರಿಯಿಸುವ, ಹಾಗೂ ಸುಮ್ಮ ಸುಮ್ಮನೇ ಮಗು ಹಡದಿದ್ದೇನೆ ಅನ್ನುವ ಅಕ್ಕುವಿನ ದೃಶ್ಯಗಳನ್ನು ತುಂಬಾ ಇಷ್ಟ ಪಟ್ಟು ಅಮ್ಮ ರೂಮಿನಲ್ಲೇ ಅಭಿನಯಿಸಿ ತೋರಿಸಿದರು. ಅದಕ್ಕೆ ಬೇಕಾಗೋ ಸಂಭಾಷಣೆ ನಾ ಹೇಳಿಕೊಟ್ಟೆ. ಅಯ್ಯೋ, ಅವತ್ತು ಇಬ್ರೂ ಸಿನಿಮಾ ಆಟ ಆಡಿದ್ವಿ ನೋಡಿ. ಕಲಾವಿದೆ, ಪಾತ್ರ, ಸಂಭಾಷಣೆ, ನಿರ್ದೇಶನ, ಎಲ್ಲಾ ಪರಿಕರಗಳು ಜೊತೇಲಿ. ನಾವಿದ್ದ ರೂಮು ಅಭಿನಯ ಮತ್ತು ಸಿನೆಮಾ ವಿಶ್ವವಿದ್ಯಾಲಯದ ಕೊಠಡಿಯಂತೆ ನಂಗೆ ಅನ್ನಿಸುತಿತ್ತು. ಯಾಕಂದ್ರೆ ಅಲ್ಲಿ ಪಾಠ, ಪ್ರಾತ್ಯಕ್ಷಿಕೆಗಳೆರಡೂ ಇದ್ವೂ. ಕಲಿಯೋ ಕಲಿಸೋ ಜೀವಗಳು ಆಪ್ತವಾಗಿದ್ದವು. ಅಲ್ಲಿ ಇಬ್ಬರೂ ಕಲಿತದ್ದು ಅದೆಷ್ಟೋ. ಇದನ್ನೆಲ್ಲಾ ನೋಡಿದ ನನಗೆ ಉಮಾಶ್ರೀ ಹುಟ್ಟು ಕಲಾವಿದೆ ಮಾತ್ರ ಅಲ್ಲ ಆಕೆ ಒಬ್ಬ ಜೀವದ ಕಲಾವಿದೆ ಅನ್ನಿಸಿಬಿಡ್ತು. ಇದೆಲ್ಲಾ ಆದ ಮೇಲೆ ಇಬ್ಬರೂ ಮೀನು ತಿನ್ನೋಕೆ ಹೋದ್ವಿ. ಅಲ್ಲಿ ಅವರು ಮೀನು ತಿನ್ನುತ್ತಾ ತಿನ್ನುತ್ತಾ ಗುಲಾಬಿ ಟಾಕೀಸ್ ಸಿನೆಮಾದಲ್ಲಿ ಮೀನು ತಿನ್ನುವ ದೃಶ್ಯಕ್ಕೆ ಹೀಗೆ ತಿನ್ನಲಾ ಹೀಗೆ ತಿನ್ನಲಾ ಅಂತ ತೋರಿಸುತ್ತಾ ತೋರಿಸುತ್ತಾ ಒಂದಷ್ಟು ಕಲೀತಿದ್ರು. ರೂಮಿಗೆ ವಾಪಸ್ ಹೋದ ಮೇಲೆ ಕುಂದಾಪುರ ಕನ್ನಡ ಮಾತಾಡೋ ಸ್ನೇಹಿತರನ್ನು ಕರೆಸಿ ಮಾತಾಡಿ ಮಾತಾಡಿ ಭಾಷೆಯ ಬಳಕೆ ಮತ್ತು ಉಚ್ಛಾರಣೆಯನ್ನು ಕಲೀತಿದ್ರು. ಮುಸಲ್ಮಾನ ಸ್ನೇಹಿತರಿಂದ ನಮಾಜ್ ಮಾಡುವುದನ್ನು ಕಲಿಯೋದನ್ನು ಮರೆಯಲಿಲ್ಲ ಕೂಡ. ಒಟ್ಟು ಈ ಕಲಾ ಗುಲಾಬಿಗೆ ಆಗ ಗುಲಾಬಿ ಟಾಕೀಸ್ ಮೈ ಮನ ಮೆದುಳುಗಳಲ್ಲಿ ತುಂಬಿ ಹೋಗಿತ್ತು.
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಮತ್ತು ಗುಲಾಬಿ ಟಾಕೀಸ್

adbhutha………………………
ಆತ್ಮೀಯವಾದ ನಿರೂಪಣೆ ಮತ್ತು ಅನುಭವ…
ರಘುನಂದನ್, ಅದೆಂಥ ತನ್ಮಯತೆ ಮತ್ತು ಆರ್ದ್ರತೆಯಿಂದ ನೀವು ಉಮಕ್ಕನ ವ್ಯಕ್ತಿತ್ವ ಕಟ್ಟಿಕೊಡುತ್ತಿದ್ದೀರೆಂದರೆ ಮೊದಲಸಾಲು ಓದಿದ ಮೇಲೆ ಮುಗಿಸದೆ ಇರಲಾಗದು.
ಬಣ್ಣ ಹಚ್ಚಿದಾಗ ಮೌನಿ, ಬಿಚ್ಚಿದಾಗ ಅನುಭವೀ ಬಯಲು – ಈ ಸಾಲು ಒಳ್ಳೆ ರೂಪಕ.
Umashree yavaru,namma kaalda utkrustha nati, parichayavu channagide!
Gulabi Talkies, except political over tone in the end, is a fine movie… Umashree is brilliant!
ಮತ್ತೆ ಮತ್ತೆ ನಮ್ಮನ್ನೂ ಒಳಗೊಳ್ಳುವ , ಕಣ್ಣೆಗೆ ಕಟ್ಟುವಂತೆ ವರ್ಣಿಸುವ ಆತ್ಮೀಯ ಬರಹ.
Superb explanation of the character.when it comes to acting umashri is just great
No words for her talent
Even you as a writer have done a fantastic job I rarely find time to read something like this
I liked it very much
Umashri is
SIR GULAABI TAKIES SHOOTING OLAAGE OOGI BANDEYU ADHARALLU 2 WORDS NALLI NEU HELIDHA “”””MAAHA MOWNI & “””AANUBHAVI BAAYALUU””” ADHARALLI UMASHREE MA’M AVARA PRAABUDAHTHE HELIRODHU ADBHUTHA NAVATHU NEXT AVAADIGE WAITING SIR
Cinemagalali nodi evaru hige anta namge nave nirdarshi bidtivi
Jeevanda anubavagala pratap kalisikoduva avara sisthu, kayaka niste vodhi kushiyagtide kutuhalavagide
Munde vkdhoke