ಮನುಷ್ಯ ಮಾನವೀಯನಾಗಿದ್ದಾಗ ಮಾತ್ರ ಮನುಷ್ಯರ ಅಭ್ಯುದಯಕ್ಕೆ ದುಡಿಯಲು ಸಾಧ್ಯ. ಸ್ವಕೇಂದ್ರಿತ ನೆಲೆಯಲ್ಲಿ ನಿಂತು ತನ್ನ ಉದ್ಧಾರ ಆದರೆ ಜಗದ ಉದ್ಧಾರ ಅಂದುಕೊಂಡು ಸಮಾಜದ ಮುಖ್ಯವಾಹಿನಿ ಬಂದರೆ ಆಗುವ ಅನಾಹುತಗಳಿಗೆ ನಮ್ಮ ಪರಂಪರೆಯೊಳಗೆ ಬೇಕಾದಷ್ಟು ಉದಾಹರಣೆಗಳು ಇವೆ. ಇಷ್ಟರ ನಡುವೆ ತನ್ನ ಏಳ್ಗೆ ಸಮಾಜದ ಏಳ್ಗೆ ಅನ್ನುವ ಮನಸ್ಥಿತಿಗಳು ಸಮಷ್ಠಿಯನ್ನು ಪ್ರತಿನಿಧಿಸುವ ಜಾಗದಲ್ಲಿ ಇದ್ದರೆ ಅದರಿಂದ ಒಟ್ಟು ಲಾಭ ಸಮಾಜಕ್ಕೆ. ಅಂತಃಕರಣ ಬದ್ಧತೆಯಾದಾಗ ಮನುಷ್ಯ ತನ್ನ ಕೈಯ್ಯಲ್ಲಿ ಸಾಧ್ಯವಾದುದ್ದನ್ನು ತನ್ನ ಮಿತಿಯಲ್ಲಿ ಎಷ್ಟು ಸಾಧ್ಯವೋ ಅದೆಲ್ಲಾ ಮಾಡುತ್ತಾನೆ ಅನ್ನುವುದಕ್ಕೆ ಕೆಲ ರಾಜಕಾರಣಿಗಳು ಜನ ಪ್ರತಿನಿಧಿಗಳು ನಮ್ಮ ನಡುವೆಯೇ ಇದ್ದಾರೆ. ಈ ಹಿಂದೆ ಇದ್ದರೂ ಕೂಡ ಮುಂದೆಯೂ ಇರುತ್ತಾರೆ ಅನ್ನುವ ಭರವಸೆ ಕೂಡ ಇದ್ದೇ ಇರುತ್ತದೆ. ಯಾಕೆಂದರೆ ನಾವೆಲ್ಲಾ ಮನುಷ್ಯರು. ಮನುಷ್ಯತ್ವ ಉಳಿಯಲೇ ಬೇಕು ಅನ್ನುವುದರಲ್ಲಿ ಮನುಷ್ಯರಿಗೂ ಕೂಡ ವಿಶ್ವಾಸವಿದೆ ಅನ್ನುವ ಮಾತನ್ನು ತೆಗೆದುಹಾಕುವಂತಿಲ್ಲ.
ಈ ಹಿನ್ನೆಲೆಯಲ್ಲಿ ಉಮಾಶ್ರೀ ಅವರ ವ್ಯಕ್ತಿತ್ವ ಅನನ್ಯವಾದುದ್ದು. ಸದಾ ಜೀವನ ಪ್ರೀತಿಯನ್ನು ಹೊಂದಿರುವ ಅವರು ಜನರ ಬಗೆಗೆ ತೋರುವ ಕಾಳಜಿ ಮತ್ತು ವಿಶ್ವಾಸವನ್ನು ಕುರಿತ ಎರಡು ಪುಟ್ಟ ಪುಟ್ಟ ಕಥಾನಕಗಳು ಇಲ್ಲಿವೆ.
****
ಮಹಾಲಿಂಗಪುರದ ಮುಖ್ಯ ರಸ್ತೆಯಲ್ಲಿ ಇಡ್ಲಿ ಶಂಕರ್ ಅನ್ನುವ ಇಡ್ಲಿ ವ್ಯಾಪಾರಿ ಒಬ್ಬರಿದ್ದಾರೆ . ಕೆಲ ವರ್ಷಗಳಿಂದ ಪೆಟ್ಟಿಗೆ ಅಂಗಡಿಯಲ್ಲಿ ಇಡ್ಲಿ ಮಾರುವ ಕಾಯಕ ಅವರದ್ದು. ಪ್ರತಿನಿತ್ಯ ಬೆಳಗ್ಗೆ ಕಿಕ್ಕಿರಿದು ಜನ ಇವರ ಪುಟಾಣಿ ಹೋಟೆಲ್ ನಲ್ಲಿ ಇಡ್ಲಿ ತಿನ್ನಲು ಬರುತ್ತಾರೆ. ಮೆದುವಾದ ಮಲ್ಲೆಗೆಯಂಥಹ ಇಡ್ಲಿ ಮತ್ತು ಹಸಿರು, ಕೆಂಪು ಚಟ್ನಿಗಳ ಮೂಲಕ ರುಚಿ ರುಚಿಯಾದ ಬೆಳಗಿನ ತಿಂಡಿಗೆ ಇಡೀ ಮಹಾಲಿಂಗಪುರವೇ ಮನಸೋತಿದೆ. ಕಡಿಮೆ ದರಕ್ಕೆ ರುಚಿಯಾದ ಇಡ್ಲಿ ಕೊಡುವ ಮೂಲಕ ಈ ವಿನಾಯಕ ಇಡ್ಲಿ ಸೆಂಟರ್ ಎಲ್ಲ ವರ್ಗಗಳ ಜನರ ಮೆಚ್ಚುಗೆಯನ್ನು ಪಡೆದಿದೆ.
ಇಡ್ಲಿ ಶಂಕರ್ ಅವರು ಹೇಳುವಂತೆ ‘ಅಮ್ಮ ಬೆಂಗಳೂರಿನ ಮನೆ ಬಿಟ್ಟು ರಬಕವಿಯಲ್ಲಿ ತನ್ನ ವಾಸ್ತವ್ಯವನ್ನು ಹೂಡಿದಾಗ ಊಟ ತಿಂಡಿಗಳನ್ನ ಒಮೊಮ್ಮೆ ತಾವೇ ಮಾಡಿಕೊಳ್ಳುತ್ತಿದ್ದರು ಎಂದು ಅಮ್ಮನ ಜೊತೆ ಇದ್ದವರು ಹೇಳುತ್ತಿದ್ದರು. ಇನ್ನೂ ಕೆಲವೊಮ್ಮೆ ಸಮಯ ಸಾಧ್ಯ ಆಗದೇ ಇದ್ದಾಗ ಬೆಳಗಿನ ತಿಂಡಿಗೆ ನೇರ ನನ್ನ ಹೋಟೆಲ್ ಬಂದು ನಾಷ್ಟಾ ಮಾಡುತ್ತಿದ್ದರು. ನಾನು ಇಡ್ಲಿ ಮಾರುವ ಜಾಗ ರಸ್ತೆ ಬದಿಯ ಪೆಟ್ಟಿಗೆ ಅಂಗಡಿ. ಇಂತಲ್ಲಿಗೆ ಬಂದು ರಸ್ತೆ ಬದಿಯಲ್ಲೇ ನಿಂತು ಎಷ್ಟೋ ಸಲ ಬೆಳಗಿನ ಉಪಹಾರವನ್ನು ಮಾಡುತ್ತಿದ್ದಾರೆ ಅಮ್ಮಾವ್ರು. ಮಧ್ಯಾನ್ಹ ಹೊತ್ತು ಕ್ಷೇತ್ರ ಸುತ್ತುವಾಗ ಸಿಕ್ಕಲ್ಲಿ ಶಿವಾ ಎಂದು ಊಟ ಮಾಡುತ್ತಿದ್ದರು, ಇಲ್ಲವೇ ಹಣ್ಣು ತರಕಾರಿ ತಿಂದು ಜೈ ಅಂದು ಬಿಡೋರು ಅಂತ ಅವರ ಜೊತೆ ಇರುವ ವಾಹನ ಚಾಲಕ ವಿಠಲ್ ಅವರು ಹೇಳಿದ್ದಾರೆ.

ಒಮ್ಮೆ ಚುನಾವಣೆಯಲ್ಲಿ ಸೋತ ಮೇಲೆ ಬೆನ್ನು ಮಾಡಿ ಬೆಂಗಳೂರಿಗೆ ಬರದೇ ಅಲ್ಲೇ ಟಿಕಾಣಿ ಹೂಡಿ ಪಕ್ಷ ಸಂಘಟನೆ ಮಾಡುವಾಗ ಅದೆಷ್ಟೋ ದಿನಗಳು ಅವರ ಬೆಳಗಿನ ಹೊಟ್ಟೆ ಹೊರೆದದ್ದು ನನ್ನ ಇಡ್ಲಿ ಪೆಟ್ಟಿಗೆ ಹೋಟೆಲ್ ಅನ್ನುವ ಹೆಮ್ಮೆ ಮತ್ತು ಗೌರವ ನನಗಿದೆ. ಸೋತಾಗ ಐದು ವರ್ಷ ಮಾತ್ರವಲ್ಲ ಗೆದ್ದ ಮೇಲೂ ಅಮ್ಮ ಇಲ್ಲಿಗೆ ಹೋಟೆಲ್ ಮುಂದೆ ಗೂಟದ ಕಾರು ನಿಲ್ಲಿಸಿ ಇಡ್ಲಿ ತಿನ್ನುತ್ತಾರೆ. ಎಷ್ಟೋ ಸಲ ಮುಜುಗರ ಆಗುತ್ತೆ. ಯಾಕಂದ್ರೆ ಸಚಿವರು ಕಾರು ನಿಲ್ಲಿಸಿ ರಸ್ತೆ ಬದಿಯಲ್ಲಿ ಇಡ್ಲಿ ತಿನ್ನುವಾಗ ಜನರೆಲ್ಲಾ ನನ್ನ ಹೋಟೆಲನ್ನು ನೋಡುತ್ತಿರುತ್ತಾರೆ. ಇದರಿಂದ ಜನರೆಲ್ಲಾ ಹೆಚ್ಚು ಗೌರವದಿಂದ ಕಾಣುತ್ತಿದ್ದರೆ. ಅದೇನೇ ಇದ್ದರೂ ನಮ್ಮ ಅಮ್ಮಾವ್ರು ಮೊದಲು ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಈಗಲೂ ನನ್ನ ಪುಟ್ಟ ಪುಟ್ ಬಾತ್ ಹೋಟೆಲ್ ನಲ್ಲಿ ಇಡ್ಲಿ ತಿನ್ನುತ್ತಾರೆ. ಟಿ.ವಿ. ಯಲ್ಲಿ ಒಮ್ಮೆ ಅಮಾವ್ರು ಮೊದಲು ಇಡ್ಲಿ ಮಾರುತ್ತಿದ್ದರು ಅಂತ ಸಂದರ್ಶನದಲ್ಲಿ ತೋರಿಸಿದ್ದರು. ಆಗ ತುಂಬಾ ಭಾವುಕನಾಗಿದ್ದೆ. ಆಗ ಅವರು ಬಳಸುತ್ತಿದ್ದ ಇಡ್ಲಿ ತಪ್ಪಲೆಯನ್ನು ಕೂಡ ತೋರಿಸಿದ್ದರು. ಇಡ್ಲಿ ಮಾರಿ ತನ್ನ ಬದುಕನ್ನು ಕಟ್ಟಿಕೊಂಡು ಈಗ ನಮ್ಮ ಸಚಿವೆ ಆಗಿರುವ ಅವರು ನಮಗೆ ಆದರ್ಶ. ಅವರು ಅಷ್ಟೆಲ್ಲಾ ಕಷ್ಟ ಪಟ್ಟಿರುವುದರಿಂದ ನಮ್ಮಂಥಹ ಸಾಮಾನ್ಯನನ್ನು ಗೌರವಿಸುತ್ತಾರೆ. ಮತ್ತು ನಮ್ಮ ಕೆಲ್ಸಕ್ಕೆ ಬೆನ್ನು ತಟ್ಟುತ್ತಾರೆ. ಹಮ್ಮು ಬಿಮ್ಮುಗಳಿಲ್ಲದೆ ಸರಳವಾಗಿ ಇಲ್ಲಿ ಬಂದು ಇಡ್ಲಿ ತಿಂದು ರುಚಿಯ ಬಗೆಗೆ ಮಾತಾಡಿ ಹೋಗುತ್ತಾರೆ. ನಮ್ಮಂಥಹ ಶ್ರಮ ಜೀವಿಗಳಿಗೆ ಇಷ್ಟು ಸಾಕು. ಮಾಡಿದ ಕೆಲಸವನ್ನು ಮೆಚ್ಚಿಕೊಂಡರೆ ಇನ್ನೂ ಹತ್ತು ಪಟ್ಟು ಕೆಲಸ ಹೆಚ್ಚು ಮಾಡುತ್ತೇವೆ.
ಅಮ್ಮಾವ್ರು ಬರುತ್ತಾರೆ ಅಂತೇನು ಮೊದಲೇನು ತಿಳಿಸುವುದಿಲ್ಲ. ತಮಗೆ ಬೇಕನಿಸಿದಾಗ ಬಂದು ಎಲ್ಲರಂತೆ, ಎಲ್ಲರೊಟ್ಟಿಗೆ ಇಡ್ಲಿ ತಿಂದು ಹೋಗುವ ಅಮ್ಮಾವ್ರು ನಮಗೆಲ್ಲಾ ಹೆಮ್ಮೆ. ಅವರ ಸರಳತೆ ನಮ್ಮನ್ನು ಇನ್ನಷ್ಟು ಮನುಷ್ಯರನ್ನಾಗಿ ಮಾಡುತ್ತದೆ. ಯಾವುದೋ ಒಂದು ದಿನ ಬಂದು ಹೋದರೆ ಅದು ಶೋಕಿಗೋ ಅಥ್ವಾ ಪ್ರಚಾರಕ್ಕೋ ಬರುತ್ತಾರೆ ಅನ್ನಬಹುದು ಆದ್ರೆ ಅಮ್ಮಾವ್ರು ಕಳೆದ ಐದಾರು ವರ್ಷಗಳಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಇಡ್ಲಿ ತಿನ್ನಲು ಇಲ್ಲಿಗೇ ಬರುತ್ತಾರೆ. ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳಲ್ಲಿ ತಿಂಡಿ ಊಟ ಮಾಡಿದ್ದರೂ ನನ್ನ ಪುಟ್ಟ ವಿನಾಯಕ ಇಡ್ಲಿ ಸೆಂಟರ್ ಮೇಲೆ ಅಮ್ಮಾವ್ರು ಇಟ್ಟಿರುವ ಗೌರವ ನಾವು ಜೀವನ ಪೂರ್ತಿ ಮರೆಯಲಾಗುವುದಿಲ್ಲ. ಅವರ ಇಡ್ಲಿ ತಪ್ಪಲೆಯಂತೆ ನನ್ನ ಇಡ್ಲಿ ತಪ್ಪಲೆಯೂ ನನ್ನ ಬದುಕನ್ನು ಹಸನು ಮಾಡುತ್ತದೆ ಅನ್ನುವ ಕನಸು ನನಗೆ ಖಂಡಿತಾ ಇದೆ’ ಎಂದು ಮಹಾಲಿಂಗ ಪುರದ ಇಡ್ಲಿ ಶಂಕರ್ ನೆನಪಿಸಿಕೊಳ್ಳುತ್ತಾರೆ.
****
ಹೇಳಿ ಕೇಳಿ ಉತ್ತರ ಕರ್ನಾಟಕದವರು ಪಾನ್ ಪ್ರಿಯರು. ಸದಾ ಎಲೆ ಅಡಿಕೆ ಜಗಿಯಲ್ಲಿಲ್ಲ ಅಂದ್ರೆ ಬದುಕೇ ಅಪೂರ್ಣ ಅವರಿಗೆ. ಹುಮಾಯುನ್ ಐನುದ್ದೀನ್ ಮುಲ್ಲಾ ಇವರು ಬನಹಟ್ಟಿಯ ಮುಖ್ಯರಸ್ತೆಯಲ್ಲಿ ಪುಟ್ಟ ಗೂಡಂಗಡಿಯಲ್ಲಿ ಬೀಡಾ ಮಾರುವ ಬೀಡಾ ವ್ಯಾಪಾರಿ. ಎಲೆ ಅಡಿಕೆ ಇವರ ಸಂಗಾತಿ. ಇವರ ಬಳಿ ಅನೇಕರು ಬಂದು ಪ್ರತಿನಿತ್ಯ ಬೀಡಾ ಹಾಕುತ್ತಾರೆ. ಇವರ ಬಳಿ ಬೀಡಾ ತಿನ್ನುವುದೆಂದರೆ ಬನಹಟ್ಟಿಯ ಜನತೆಗೆ ಹೆಮ್ಮೆಯ ವಿಷ್ಯ. ಎಷ್ಟರ ಮಟ್ಟಿಗೆ ಇವರ ಬೀಡಾ ಅಂಗಡಿ ಇರುವ ದಾರಿಯನ್ನು ಸುಮ್ಮನೇ ಹಾದು ಹೋದರೂ ಕೂಡ ಒಂದು ಸಲ ರುಚಿ ನೋಡಿದವರು ಮತ್ತೊಮ್ಮೆ ಒಂದು ಬೀಡಾ ತಿಂದೇ ಬಿಡಬೇಕು ಅನ್ನುವಷ್ಟು ಆಸೆಯಾಗುವುದಂತೂ ಖಂಡಿತ. ಇವರ ಕೈ ರುಚಿಗೆ ಮನಸೋಲದವರು ಇಲ್ಲಾ ಎಂಬುದು ಬನಹಟ್ಟಿಯಲ್ಲಿ ಹಲವರ ಅಭಿಪ್ರಾಯ.
ಹುಮಾಯೂನ್ ಅವರು ಹೇಳುವಂತೆ ‘ಅಮ್ಮಾವ್ರು ಮಧ್ಯಾನ್ಹ ಅಥವಾ ರಾತ್ರಿ ಊಟ ಸಮಯ ಆದಮೇಲೆ ಏನಾದ್ರೂ ನನ್ನ ಅಂಗಡಿಯ ಎದುರು ಹಾದು ಹೋದರೆ ಗಾಡಿ ನಿಲ್ಲಿಸಿಯೇ ಬಿಡುತ್ತಾರೆ. ಎಸ್ಕಾರ್ಟ್ ಮುಂದೆ ಹೋಗಿ ಬಿಟ್ಟಿರುತ್ತದೆ. ಇವರು ಆರಾಮಾಗಿ ಬೀಡಾ ಹಾಕಿಸಿಕೊಂಡು ತಿಂದು ಯೋಗ ಕ್ಷೇಮ ವಿಚಾರಿಸಿ ಮತ್ತೆ ಮುಂದೆ ಹೋಗುತ್ತಾರೆ. ಅಷ್ಟೇ ಅಲ್ಲಾ ಬೀಡಾ ಹಾಕಲು ಬರುವ ಜನರ ಮನಸ್ಥಿತಿಯ ಬಗ್ಗೆ ಕೇಳುತ್ತಾರೆ. ಸಾಮಾನ್ಯನ ಅಗತ್ಯಗಳು ಏನು ಎಂಬುದು ಅಂಗಡಿಯಲ್ಲಿ ಮಾತಾಡಿಕೊಳ್ಳುತ್ತಾರೆ ಅನ್ನುವುದರ ಬಗ್ಗೆ ಕೂಡಾ ಚರ್ಚೆ ಮಾಡುತ್ತಾರೆ. ಒಬ್ಬ ಸಚಿವೆಯಾಗಿ ನನ್ನ ಪುಟ್ಟ ಬೀಡಾ ಅಂಗಡಿಯಲ್ಲಿ ಬೀಡಾ ತಿಂದು ಮತ್ತೆ ಅಂಗಡಿಗೆ ಬರುವ ಜನರ ಅಭಿಪ್ರಾಯಗಳನ್ನೂ ಕಲೆ ಹಾಕಿ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿ ಬಳಸಿಕೊಳ್ಳುವುದು ಮರೆಯಲಾಗದ ವಿಷಯ ನನಗೆ. ಅಷ್ಟೇ ಅಲ್ಲ ನಾವೂ ಕೂಡ ಸಂಘಟಿತರಾಗಿ ಹೇಗೆ ಕೆಲಸ ಮಾಡಬೇಕು. ಯೋಜನೆಗಳನ್ನು ಬಳಸಿಕೊಳ್ಳಬೇಕು ಅನ್ನುವುದರ ಬಗೆಗೆ ಮಾಹಿತಿ ಕೊಡುತ್ತಾರೆ. ತಾವು ಎಷ್ಟೇ ಎತ್ತರದಲ್ಲಿದ್ದರೂ ನಡೆದು ಬಂದ ಹಾದಿಯನ್ನು ಮರೆತೇ ಇಲ್ಲ. ಎಷ್ಟೋ ಸಲ ಯೋಜನೆಗಳು ಮತ್ತು ಸರ್ಕಾರದ ಸವಲತ್ತುಗಳನ್ನು ಸಾಮಾನ್ಯನು ಹೇಗೆಲ್ಲಾ ಬಳಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಿದಂತೆ ಹೇಳುತ್ತಾರೆ.
ಮಂತ್ರಿ ಆದ್ರೂ ಉಮಾಶ್ರೀ ಅಮ್ಮ ಸರಳ. ಸಾಮಾನ್ಯನಲ್ಲಿ ಸಾಮಾನ್ಯನಂತೆ ನಡೆದು ಕೊಳ್ಳುವುದು ನಮಗೆಲ್ಲಾ ದಾರಿ ದೀಪ. ನನ್ನ ಒಳಗಿನ ಸಂಘಟನಾ ಶಕ್ತಿಯನ್ನು ಗಮನಿಸಿದ ಸಮಾಜ ಸೇವೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುಲು ಮಾರ್ಗದರ್ಶನ ಮಾಡಿದ್ದಾರೆ. ಇನ್ನೂ ಕೆಲವೊಮ್ಮೆ ತಿದ್ದಿ ಬುದ್ಧಿ ಹೇಳಿದ್ದಾರೆ. ಒಟ್ಟಾರೆ ಉಮಾಶ್ರೀ ಅಮ್ಮ ನಮ್ಮ ತೇರದಾಳಕ್ಕೆ ಬಂದಿದ್ದು ನಮ್ಮಲ್ಲೆರ ಶಕ್ತಿ ಅಂತಲೇ ನಾವು ಭಾವಿಸಿದ್ದೇವೆ. ಒಬ್ಬ ಮಂತ್ರಿಗೆ ರಸ್ತೆ ಬದಿಯ ಬೀಡಾ ಅಂಗಡಿಯೊಂದು ಮುಖ್ಯ ಅನ್ನಿಸಿದ್ದು ಖುಷಿ ಕೊಡುವ ವಿಷಯ’ ಎಂದು ಹುಮಾಯೂನ್ ಸಂತಸ ಪಡುತ್ತಾರೆ.
****
ಮಹತ್ವಾಕಾಂಕ್ಷೆ ಉಳ್ಳವರು ತಾನು ತಲುಪಬೇಕಾಗಿರುವ ಗುರಿ ಯಾವುದು ಮತ್ತು ಕ್ರಮಿಸಬೇಕಾಗಿರುವ ದಾರಿ ಯಾವುದು ಎಂದು ಅರಿತುಬಿಟ್ಟರೆ ಮಾಡಲು ಹೊರಟಿರುವ ಕೆಲಸಗಳು ಯಶಸ್ಸಾಗುತ್ತವೆ. ಗುರಿ ಮತ್ತು ಉದ್ದೇಶಗಳು ಅಸ್ತಿತ್ವಕ್ಕೆ ಬರಬೇಕಾದರೆ ಮಾನವೀಯತೆ, ಪ್ರೀತಿ, ಕಾಳಜಿ ಮತ್ತು ಸಹಕಾರ ಬಹಳ ಮುಖ್ಯ. ಯಾವಾಗ ಮನುಷ್ಯ ತನಗೆ ಸಿಗದ ಪ್ರೀತಿಯನ್ನು ಇತರಿಗೆ ಹಂಚಲು ಸಾದ್ಯವಾಗುತ್ತದೆ ಅಂದ್ರೆ ತನ್ನಲ್ಲಿ ಹಂಚುವ ಶಕ್ತಿ ಇದ್ದಾಗ ಮಾತ್ರ. ಪ್ರೀತಿಯನ್ನೋ ಅಥವಾ ಕಾಳಜಿಯನ್ನು ಒಬ್ಬ ಜನ ಪ್ರತಿನಿಧಿಯಾಗಿ ವಿತರಿಸಲು ಹೊರಟಾಗ ಅದು ಬರಿಯ ಬಾಯಿ ಮಾತಿನದ್ದಾಗಿದ್ದರೆ ಹೆಚ್ಚು ಕಾಲ ನಿಲ್ಲುವುದಿಲ್ಲ. ಹಾಗೂ ಬೇರು ಬಿಡಲು ಕೂಡ ಸಾಧ್ಯ ಆಗುವುದಿಲ್ಲ. ಹಾಗಾಗಿ ಉಮಾಶ್ರೀ ಅಂಥಹ ಹೆಣ್ಣುಮಗಳು ತನ್ನನ್ನು ಆರಿಸಿದ ಜನರ ಮನ್ನಣೆ ಪಡೆಯುವುದು ಭಾವನಾತ್ಮಕ ಮತ್ತು ಕ್ರಿಯಾತ್ಮಕ ಎರಡೂ ನೆಲೆಯಲ್ಲಿ ಎಂಬುದು ಯಾರಿಗಾದರೂ ಕ್ಷೇತ್ರ ವೀಕ್ಷಣೆ ಕೈಗೊಂಡಾಗ ತಿಳಿಯುತ್ತದೆ. ಬಹುಶಃ ಜನಾನುರಾಗ ಅಂದ್ರೆ ಇದೇ. ಪ್ರೀತಿಯ ಮಾತುಗಳು, ಸಾಲು ಸಾಲು ಸವಲತ್ತುಗಳು ಮತ್ತು ಸೌಲಭ್ಯಗಳ ಬಗೆಗೆ ಮಾಹಿತಿಯನ್ನು ತನ್ನ ಜನಕ್ಕೆ ಕೊಟ್ಟರೆ ನಮ್ಮ ದೇಶದ ಆರಿಸುವ ಮತ್ತು ಅಧಿಕಾರ ನೀಡುವ ಆ ಮೂಲಕ ಅಭಿವೃದ್ಧಿಯನ್ನು ಹೊಂದುವ ಆಶಯಗಳು ಅರ್ಥ ಪಡೆಯಬಹುದು. ಜೊತೆಗೆ ಉಮಾಶ್ರೀ ಅವರಂಥಹ ಜನಪ್ರತಿನಿಧಿಗಳು ಸದಾ ಜನರ ಮತ್ತು ಸರ್ಕಾರದ ಸಂಪರ್ಕ ಆಗುವ ಸೇತುವೆ ಆಗಿದ್ದರೆ ಸವಕಲಾಗಿರುವ “ದೇಶ ನಮಗೆಲ್ಲಾ ಏನು ಕೊಟ್ಟಿತು. ನಾವು ದೇಶಕ್ಕೆ ಸಮಾಜಕ್ಕೆ ಏನು ಕೊಟ್ಟೆವು” ಅನ್ನುವ ಮಾತು ಇನ್ನಷ್ಟು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬಹುದು. ಉಮಾಶ್ರೀ ಅವರ ವಿಷಯದಲ್ಲಿ ಈ ದಾರಿ ಸ್ಪಷ್ಟವಾಗಿದೆ ಎಂದು ನನ್ನ ಅಧ್ಯಯನದ ಸಮಯದಲ್ಲಿ ಅನ್ನಿಸಿತು. ಆದ್ರೆ ದಾರಿ ಎಂದ ಕೂಡಲೇ ಅದು ಮುಗಿಯುವುದಿಲ್ಲ. ನಡೆದಷ್ಟೂ ಹೆಜ್ಜೆ ಊರಲು ಅವಕಾಶಗಳಿವೆ. ಎಡವಿ ಬೀಳುವ ಸಾಧ್ಯತೆಗಳೂ ಇವೆ. ತಲುಪಬೇಕಾಗಿರುವ ಸ್ಥಳ ಸಿಕ್ಕುವ ತನಕ ಕೆಲಸ ಶ್ರಮ ಮತ್ತು ಅನುಭವಗಳೇ ಕೈ ಹಿಡಿಯುತ್ತಾ ಹೋಗುತ್ತದೆ ಏನಂತೀರಿ ?


ಜನರನಾಡಿಮಿಡಿತವನ್ನರಿತವರೇ ಜನರಿಗಾಗುವರು
ಅವರ ಕಾರ್ಯವೈಖರಿ ತುಂಬಾ ಚುರುಕುತನದಿಂದ ಕೂಡಿದ್ದು
ಇಡಿ ಸರಕಾರದಲ್ಲಿ ನಮ್ಮ ಕ್ಷೇತ್ರದ ಮಹಿಳಾ ಪ್ರತಿನಿದಿಯಾಗಿ ನಿಂತು ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರೆ ಎಂಬುದು ನಮ್ಮ ಹೆಮ್ಮೆ
ಈವತ್ತಿನ ದಿನಗಳ್ಲಿ ಜಿಲ್ಲ ತಾಲೂಕು ಪಂಚಾಯತ್ ಗಳ್ಲಿ ಬರಿ ಮಹಿಳಾ ಅಧ್ಯಕ್ಷರುಗಳೆ ಕಾಣ್ತಿದಾರೆ ಅಂತಹ ಮಹಿಳೆಯರೆಲ್ಲರೂ ಉಮಾಶ್ರಿಯವರನ್ನು ಆದರ್ಶವಾಗಿಟ್ಟುಕೊಂಡರೆ ಭವಿಷತ್ತಿನಲ್ಲಿ ಮತ್ತಷ್ಟು ಮಹಿಳೆಯರು
ಸಾರ್ವಜನಿಕ ಕ್ಷೇತ್ರವನ್ನು ಉಮಾಶ್ರಿ ಮೆಡಮ್ ಅವರ್ ತರ ಬೆಳೆಸಬಲ್ಲರು.
ಉಮಾಶ್ರೀಯವರ ಸೀದಾ ಸಾದಾ, ಜನಮುಖಿ ವ್ಯಕ್ತಿತ್ವವನ್ನು ಸರಳ ಸುಂದರವಾಗಿ,ನೈಜ ಘಟನೆಗಳೊಂದಿಗೆ ವರ್ಣಿಸಿದ ಚೆಂದದ ಬರಹ.
Great Amma.
ಸಮಾಜಮುಖಿ ಚಿಂತನೆ ಸರಳ ಸಜ್ಜನಿಕೆಯ ಉಮಾಶ್ರಿ ಅಮ್ಮ ನಿಜವಾಗಿಯು ರಾಜಕಾರಣದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ …..
ಕಷ್ಟ ಪಟ್ಟರೆ ಪ್ರತಿಫಲ ಇದ್ದೇ ಇರುತ್ತೆ ಎನ್ನುವುದಕ್ಕೆ ಸಾಕ್ಷಿ
Umashree avara saralate illi sukshmavaagi kanabohdu.