ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಅಮ್ಮನನ್ನು ಕುರಿತು ಪಿಎಚ್‌ಡಿ ಅಧ್ಯಯನ


ಈ ಹೊತ್ತು ಅಧ್ಯಯನಕ್ಕೆ ತೊಡಗುವ ಸಂದರ್ಭಗಳಲ್ಲಿ ಅನೇಕ ಹೊಸ ಹೊಸ ಸಾಧ್ಯತೆಗಳೊಂದಿಗೆ ಎದುರುಗೊಳ್ಳಬಹುದು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಅಧ್ಯಯನದ ಮಾದರಿಗಳು ಬಹಳ ಮುಖ್ಯವಾಗಿ ಕಾಣಬರುತ್ತಿದೆ. ಈ ಮೂಲಕವಾಗಿ ಸಾಮಾಜಿಕವಾಗಿ, ಸಾಮುದಾಯಿಕವಾಗಿ, ಸಾಹಿತ್ಯಿಕವಾಗಿ ಹಾಗೂ ಇತರ ಜ್ಞಾನ ಶಿಸ್ತುಗಳು ಒಂದು ಸೂರಿನ ಅಡಿಯಲ್ಲಿ ಚರ್ಚೆಗೆ ಒಳಗೊಳ್ಳುತ್ತಿದೆ. ಒಂದರ್ಥಕ್ಕೆ ಬಹುಶಿಸ್ತೀಯ ಅಧ್ಯಯನದ ಮಾದರಿ ಅಂತ ಕರೆಯಬಹುದಾದರು ಸಂಸ್ಕೃತಿ ಅಧ್ಯಯನದ ನಡುವೆ ಖಂಡಿತ ಒಂದು ತೆಳುವಾದ ಅಂತರವಿದೆ.
ಎಲ್ಲ ಸಂಸ್ಕೃತಿಗಳು ತನ್ನ ಪರಿಸರದ ಎಲ್ಲ ಸಾಮಾಜಿಕ ಮತ್ತು ಸಾಮುದಾಯಿಕ ಅಂಶಗಳನ್ನು ಒಳಗೊಂಡಿರುವ ಕಾರಣ ಸಂಸ್ಕೃತಿ ಅನ್ನುವುದು ಸಮಾಜ ಅಂತಲೇ ಕರೆಯಲು ಇಲ್ಲಿ ಚರ್ಚಿತವಾಗುತ್ತಿರುವ ವಿಷಯಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತೇನೆ. ಇದರಾಚೆಗೂ ಸಂಸ್ಕೃತಿಯನ್ನು ಕುರಿತಂತೆ ಅನೇಕ ವ್ಯಾಖ್ಯಾನಗಳಿವೆ. ಇವೆಲ್ಲವುಗಳ ಫಲಿತವೆಂಬಂತೆ ಸಂಸ್ಕೃತಿ ಚಿಂತನೆ ಅನ್ನುವುದೇ ಈ ಹೊತ್ತಿನ ಜೀವನ ಕ್ರಮವನ್ನ ಬಿಡಿ ಬಿಡಿಯಗಿ ವಿಘಟಿಸಿಕೊಂಡು ಹಿಡಿಯಾಗಿ ಪರಿಭಾವಿಸುವ ಮಾದರಿಗಳು ಸಾಹಿತ್ಯಿಕ ಮತ್ತು ಸಾಮಾಜ ಶಾಸ್ತ್ರೀಯ ಅಧ್ಯಯನಗಳ ಒಳಗೆ ತಣ್ಣಗೆ ಸುಳಿಯುತ್ತಿರುವುದನ್ನು ನಾವು ಗಮನಿಸಬಹುದು.
ಅಭಿನಯ ಅನ್ನುವುದು ಪ್ರತಿಯೊಬ್ಬರ ಬದುಕಿನ ಕ್ರಮದೊಳಗೆ ಸೇರಿಹೊಗಿರುತ್ತದೆ. ಕಲಾವಿದ ಅಭಿನಯವನ್ನು ತನ್ನ ಜೀವನವನ್ನಾಗಿಸಿಕೊಂಡಿದ್ದರೆ, ಒಬ್ಬ ನೋಡುಗ ಅಭಿನಯವನ್ನು ತನಗೆ ಬೇಕಾದ ಖುಷಿಯನ್ನೋ, ಜ್ಞಾನವನ್ನೋ ಅಥವಾ ತನ್ನ ಮನಸು ಏನನ್ನು ಅಭಿನಯದ ಮೂಲಕವಾಗಿ ಪಡೆಯಲು ಬಯಸುತ್ತಿರುತ್ತದೋ ಅದನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಒಮ್ಮೊಮ್ಮೆ ಇದು ನೋಡುಗನ ಡಿಮ್ಯಾಂಡ್ ಆಗಿ ಕಲಾವಿದನ ಪೂರೈಸಲೇ ಬೇಕಾದ ಕರ್ತವ್ಯದ ಹಂತಕ್ಕೂ ಹೋಗುವ ಸಾಧ್ಯತೆಗಳಿವೆ. ಹೀಗಿರುವ ಒಂದು ಕಲಾ ಶಿಸ್ತನ್ನು ಒಂದು ಅಧ್ಯಯನಕ್ಕೆ ಒಳಪಡಿಸುವುದರಿಂದ ಸಾಂಸ್ಕೃತಿಕ ಗ್ರಹಿಕೆಗಳು ತೆರೆದು ಕೊಳ್ಳುವ ಅಂಶ ಕಂಡು ಬರುತ್ತದೆ. ಈ ತೆರನಾದ ಓದು ಮತ್ತು ಅಭ್ಯಾಸ ಒಬ್ಬ ಕಲಾವಿದನ ಬದುಕಿಗೆ ಇರುವ ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಹಾಗೂ ಅದಕ್ಕೆ ಒಗ್ಗಿಕೊಂಡ ಇನ್ನಿತರ ಟೆಕ್ಸ್ಟ್ ಗಳನ್ನು ನಮ್ಮ ಮುಂದಿಡುತ್ತವೆ. ಜೊತೆಗೆ ಕಲಾಭಿವ್ಯಕಿಯಲ್ಲೂ ಕಲಾವಿದನ ಅನುಭವದ ಹಿನ್ನೆಲೆ ಮತ್ತು ಪ್ರತಿಭೆ ಇವುಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಲೇ ಹೊಳಹುಗಳನ್ನು ಹಿಡಿಯಲು ಸಾಧ್ಯಮಾಡಿಕೊಡುತ್ತದೆ.
ಅಭಿನಯ ಅಥವಾ ಕಲೆ ಯಾವುದೇ ಪ್ರದರ್ಶನದ ಪ್ರಕಾರಗಳನ್ನು ತೆಗೆದುಕೊಂಡರೂ ಕೊಡುವ ಮತ್ತು ಸ್ವೀಕರಿಸುವ ( ಕಲಾವಿದ ಮತ್ತು ನೋಡುಗ )ಎರಡು ಆಶಯಗಳು ಪರಸ್ಪರ ಮುಖಾಮುಖಿ ಆಗುತ್ತಲೇ ಇರುತ್ತದೆ. ಹೀಗಿರುವಾಗ ಸ್ವೀಕರಿಸುವ ಮನಸುಗಳ ನಿರೀಕ್ಷೆ ಮತ್ತು ಅಭಿವ್ಯಕ್ತಿಯ ಮನಸು ಹೇಗೆ ಸೃಜನಗೊಂಡು ಗಟ್ಟಿಯಾದುದನ್ನು ಕೊಡುತ್ತದೆ ಅನ್ನುವುದೇ ಮುಖ್ಯವಾಗುತ್ತದೆ. ಹಾಗೂ ಈ ಗಟ್ಟಿತನಗಳ ಮೇಲೆಯೇ ಪ್ರತಿಭೆಯನ್ನು ದುಡಿಸಿಕೊಂಡ ಕಲೆ ನಿಂತಿರುತ್ತದೆ. ಆಗ ಕಲಾ ಪ್ರಯೋಜನ ಕೂಡ ಆಗುತ್ತದೆ. ಇಲ್ಲವೇ ಆಶಯಗಳನ್ನು ಕಳೆದುಕೊಂಡ ಅಭಿವ್ಯಕ್ತಿ ಸೋಲುತ್ತದೆ. ಹಾಗಾಗಿ ಕಲಾವಿದನೊಬ್ಬನ ಆಸಕ್ತಿ, ಜೀವನಕ್ರಮ, ಅನುಭವ, ಅವನು ಬದುಕಿದ ಸಾಮಾಜಿಕ ಸಂದರ್ಭ, ಕುಟುಂಬ, ಸಮುದಾಯ ಹೀಗೆ ಅವನನ್ನು ಒಳಗೊಂಡ ಏನೆಲ್ಲಾ ಅಂಶಗಳು ಇರುತ್ತವೆಯೇ ಅವೆಲ್ಲಾ ಒಬ್ಬ ಕಲಾವಿದ ಪ್ರಕಟ ಪಡಿಸುವ ಅಭಿನಯವನ್ನು ಕುರಿತು ಚರ್ಚಿಸುವಾಗ ಪರಿಕರಗಳಂತೆ ನಿಲ್ಲುತ್ತವೆ. ಈ ಕ್ರಮದಲ್ಲೇ ಕಲೆಯನ್ನೋ ಕಲಾವಿದನನ್ನೋ ಅಥವಾ ಅಭಿನಯವನ್ನೋ ಸಾಂಸ್ಕೃತಿಕ ಅಧ್ಯಯನದಲ್ಲಿ ಗಮನಿಸುವುದು ಸರಿಯಾದ ಕ್ರಮ.

ಕನ್ನಡ ಜನಪದ ಕಲಾ ಪ್ರಕಾರಗಳಿರಬಹುದು, ಕನ್ನಡ ರಂಗಭೂಮಿಯಿರಬಹುದು ಅಥವಾ ಕನ್ನಡ ಚಿತ್ರರಂಗ ಇರಬಹುದು ಇವೆಲ್ಲವೂ ಕನ್ನಡ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಅಲ್ಲಿನ ಜೀವದ್ರವ್ಯ ಆಗಿರುವ ಅಭಿನಯವನ್ನು ಈ ಮೇಲೆ ಹೇಳಿದ ಅಧ್ಯಯನದ ಕ್ರಮಗಳ ಹಿನ್ನೆಲೆಯಲ್ಲಿ ಚರ್ಚಿಸಲು ಅನೇಕ ಸಾಧ್ಯತೆಗಳಿವೆ. ಅಭಿನಯವನ್ನು ಸಾಹಿತ್ಯ ಅಧ್ಯಯನದ ವ್ಯಾಪ್ತಿಯಲ್ಲಿ ತರಲು ಸಾಧ್ಯವಿಲ್ಲ ಅನ್ನುವ ಸಂಶೋಧನೆಯಲ್ಲಿ ಶುದ್ಧತೆಯ ದಾರಿ ತಪ್ಪುತ್ತದೆ ಅನ್ನುವುದು ಕೆಲವರ ವಾದ. ಹಾಗೂ ಮುದ್ರಿತ ಟೆಕ್ಸ್ಟ್ ಗಳನ್ನು ಮಾತ್ರ ಸಾಹಿತ್ಯ ಅಧ್ಯಯನದೊಳಗೆ ಮಾಡಬೇಕೆಂಬುದು ಒಂದಷ್ಟು ಜನರ ಅಭಿಪ್ರಾಯ. ಇನ್ನೂ ಅಭಿನಯ ಅನ್ನುವುದು ಈ ಸ್ಕೇಲ್ ಒಳಗೆ ಬರುವುದಿಲ್ಲ ಅನ್ನುವವರು ಅನೇಕರಿದ್ದಾರೆ. ಆದರೆ ಸಾಹಿತ್ಯ ಸಂಸ್ಕೃತಿ ಸಮಾಜದ ಭಾಗವೇ ಆಗಿರುವುದರಿಂದ ಅಭಿನಯವನ್ನು ಕುರಿತು ಸಂಸ್ಕೃತಿ ಅಧ್ಯಯನ ಮಾಡುವುದು ಈ ಹೊತ್ತಿನ ಅಗತ್ಯ ಮತ್ತು ತುರ್ತು ಕೂಡ. ಮೇಲ್ನೋಟಕ್ಕೆ ಇದು ಒಂದು ಸಾಮಾಜಿಕ ಸಂಶೋಧನೆಯಂತೆ ಕಂಡರೂ ಮೂಲದಲ್ಲಿ ನಮ್ಮ ಸಂಸ್ಕೃತಿಯನ್ನು ಬಲಪಡಿಸುತ್ತಿರುತ್ತದೆ. ಉದಾಹರಣೆಗೆ ಬೆಟ್ಟವೊಂದಕ್ಕೆ ಕ್ಯಾಮೆರಾ ಫೋಕಸ್ ಮಾಡಿ ಅದರಲ್ಲಿನ ಮರವೊಂದಕ್ಕೆ ಜೂಮ್ ಮಾಡುತ್ತಾ ಮಾಡುತ್ತಾ ಕೊಂಬೆ ಅದರ ಮೇಲಿನ ಗಿಳಿಯೊಂದಕ್ಕೆ ಕ್ಲೋಸ್ ಜೂಮ್ ಮಾಡಿದಂತೆ. ಸಂಸ್ಕೃತಿಯೂ ಹೀಗೆ ಪ್ರಧಾನದಿಂದ ಹಲವು ಸೂಕ್ಷ್ಮ ಮೂಲಕ್ಕೆ ಹೊರಳುತ್ತಲೇ ಮತ್ತೆ ಅದೇ ಮೂಲದಿಂದ ಪ್ರಧಾನ ನೆಲೆಯನ್ನು ಕಟ್ಟಿಕೊಳ್ಳುತ್ತದೆ.
ಯಾವುದೇ ಕಲಾವಿದನೊಬ್ಬನ ಮಾತನಾಡುವ ಭಾಷೆ, ಜೀವನ ವಿಧಾನ, ಕೌಟುಂಬಿಕ ಹಿನ್ನೆಲೆ ಮತ್ತು ಸಾಮುದಾಯಿಕ ಹಿನ್ನೆಲೆಗಳು ಆ ಕಲಾವಿದನ ಅಭಿನಯದ ಅಂತಸತ್ವದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸೇರಿಕೊಂಡಿರುತ್ತದೆ. ಸಿನೆಮಾ ಅಥವಾ ರಂಗಭೂಮಿಯಾ ಹಿನ್ನೆಲೆಯಲ್ಲಿ ನಿರ್ದೇಶಕನೊಬ್ಬನ ದೃಷ್ಟಿ ಅಥವಾ ಕಥಾವಸ್ತುವಿನ ದರ್ಶನಕ್ಕೆ ಅನುಗುಣವಾಗಿ ಕಲಾವಿದ ಅಭಿನಯಿಸುವುದು ಸರಿಯಾದ ಕ್ರಮವಾದರೂ ಕಲಾವಿದ ತನ್ನ ವೃತ್ತಿಪರ ಅನುಭವ ಮತ್ತು ಜೀವನಾನುಭವದ ನೆಲೆಯಲ್ಲಿ ತನ್ನ ಕಾಣ್ಕೆಯನ್ನು ಕೊಡಲು ನಿಜವಾದ ಕಲಾವಿದ ಪ್ರಯತ್ನಿಸುತ್ತಲೇ ಇರುತ್ತಾನೆ. ಇದು ತಾಂತ್ರಿಕವಾಗಿ ಅಭಿನಯಿಸುವುದನ್ನು ತಪ್ಪಿಸುತ್ತದೆ. ಹೀಗಾದಾಗ ಹೇಳಬೇಕಾದ ಅಥವಾ ತೋರಬೇಕಾದ ಕಲಾಕೃತಿ ಉಪಯೋಗಗೊಳ್ಳುತ್ತದೆ ಇಲ್ಲವೇ ಪಕ್ಕಕ್ಕೆ ಸರಿದುಬಿಡುತ್ತದೆ.
ಈ ಹಿನ್ನೆಲೆಯಲ್ಲಿ ಕನ್ನಡ ರಂಗಭೂಮಿ ಮತ್ತು ಸಿನಿಮಾದ ಹಿನ್ನೆಲೆಯಿಂದ ಬಂದ ಅನೇಕ ಮಂದಿ ಕಲಾವಿದರನ್ನು ನಾವು ಗಮನಿಸಬಹುದು. ಅವರುಗಳಲ್ಲಿ ಎಚ್.ಎಲ್.ನಾಗರತ್ನಮ್ಮ, ಉಮಾಶ್ರೀ, ಗಿರಿಜಾ ಲೋಕೇಶ್, ಚಿಂದೋಡಿ ಲೀಲ, ಬಿರಾದಾರ್, ವಾಸುದೇವರಾವ್, ಡಾ. ರಾಜ್ ಕುಮಾರ್ ಹೀಗೆ. ಇವರೆಲ್ಲರೂ ಕನ್ನಡ ರಂಗಭೂಮಿ ಮತ್ತು ಸಿನಿಮಾದ ಭಾಗವಾಗಿ ಒಟ್ಟು ಕನ್ನಡ ಸಂಸ್ಕೃತಿಯ ಭಾಗವೂ ಆಗಿಬಿಡುತ್ತಾರೆ. ಇವರುಗಳ ಅಭಿವ್ಯಕ್ತಿ ಮಾಧ್ಯಮವನ್ನು ವ್ಯಕ್ತಿ ನೆಲೆಯಲ್ಲಿ ನಾವು ಗಮನಿಸದೇ ಹೋದರೆ ಸಂಸ್ಕೃತಿ ಚಿಂತನೆ ಅನ್ನುತ್ತಿರುವ ಪರಿಕಲ್ಪನೆಗಳು ಅಪೂರ್ಣವಾಗಿ ಉಳಿದುಬಿಡುತ್ತದೆ.
ಹಾಗಾಗಿ ಇಂದು ಅಧ್ಯಯನಕ್ಕೆ ಯಾವುದೇ ವಿಷಯವನ್ನು ಆರಿಸಿಕೊಳ್ಳುವಾಗ ಅದು ಏಕದಾರಿಯ ಅಧ್ಯಯನದ ಮಾದರಿಗಗಳಾಗಿರುವುದಿಲ್ಲ. ಯಾಕೆಂದರೆ ಸಂಶೋಧನೆ ಅನ್ನುವುದೇ ಒಂದು ವಸ್ತು ವಿಷಯಕ್ಕಿರುವ ಅನೇಕ ಸಾಧ್ಯತೆಗಳನ್ನ ಮತ್ತು ಹಲವು ಸಾಧ್ಯತೆಗಳು ಒಂದು ಕೇಂದ್ರಕ್ಕೆ ಬಂದು ಸೇರುವ ಬಹು ಆಯಾಮಗಳನ್ನು ಒಳಗೊಂಡಿರುತ್ತದೆ. ಇದು ಎಲ್ಲ ಅಧ್ಯಯನ ಶಿಸ್ತುಗಳಲ್ಲೂ ಇರುವ ಸಾಮಾನ್ಯ ಅಂಶವೇ. ಇದು ಸಾಹಿತ್ಯವನ್ನು ಹೊರತುಪಡಿಸಿ ಇಲ್ಲ. ಹಾಗಾಗಿ ಸಾಹಿತ್ಯ ಮತ್ತು ಸಮಾಜ ಒಳಗೊಳ್ಳುವ ಎಲ್ಲ ಅಧ್ಯಯನ ಪರಿಕರಗಳು ಅಂತರಶಿಸ್ತೀಯ ಗ್ರಹಿಕೆಗಳಲ್ಲಿ ಚರ್ಚೆಯಾಗಬೇಕಗುತ್ತದೆ.ಇದು ಒಂದು ಪ್ರಕಾರಕ್ಕೋ ಅಥವಾ ಅಧ್ಯಯನ ಶಿಸ್ತಿಗೆ ಒಳಪಟ್ಟ ಸಾಂಸ್ಕೃತಿಕ ಯಜಮಾನಿಕೆಯನ್ನು ಒಡೆಯುತ್ತದೆ. ಹಾಗಾಗಿ ಪ್ರಸ್ತುತ ಅದ್ಯಯನ ಸಿನಿಮಾ ಮತ್ತು ರಂಗಭೂಮಿಯನ್ನು ವ್ಯಕ್ತಿನೆಲೆಯಲ್ಲಿ ಇಟ್ಟು ಗ್ರಹಿಸುವ ಹಿಂದೆ ಅನೇಕ ಸಾಂಸ್ಕೃತಿಕ ಸಂಕಥನಗಳು ಅನಾವರಣಗೊಳ್ಳುತ್ತದೆ.
ಇದುವರೆಗೂ ಸಿನಿಮಾ ಮತ್ತು ರಂಗಭೂಮಿಯಂತ ಪ್ರದರ್ಶನ ಮಾಧ್ಯಮಗಳನ್ನು ಕೇವಲ ಪ್ರದರ್ಶನ ಕಲೆಯಾಗಿ ಮಾತ್ರ ನೋಡಿದ ಅಥವಾ ಏಕತ್ರವಾಗಿ ಒಂದೇ ಪ್ರಕಾರಾಕ್ಕೆ ಒಳಪಡಿಸಿ ಗ್ರಹಿಸಿ ಗಮನಿಸಿದ ಸಾಧ್ಯತೆಗಳೇ ನಮ್ಮ ನಡುವೆ ಹಚ್ಚಿವೆ. ಇತ್ತೀಚಿಗೆ ಬಹು ಮಾಧ್ಯಮಗಳ ಹಿನ್ನೆಲೆಯಲ್ಲಿ ಒಂದಷ್ಟು ಅಧ್ಯಯನಗಳು ನಡೆದಿವೆ ಆದರೆ ಈ ಎರಡು ಮುಖ್ಯ ಮಾಧ್ಯಮಗಳನ್ನು ಮತ್ತು ಅದರ ಒಳಗಿನ ಅಭಿನಯ ಮತ್ತು ಅದರ ಪ್ರಕಟಣೆ ಪ್ರಭಾವಿಸಿದ ಸಮಾಜೋ ಸಾಂಸ್ಕೃತಿಕ ಅಧ್ಯಯನ ಸಾಹಿತ್ಯದ ಶಿಸ್ತಿನ ಅಡಿಯಲ್ಲಿ ನೋಡುವ ಪ್ರಯತ್ನಗಳು ತೀರಾ ವಿರಳ. ಕನ್ನಡ ಸಾಹಿತ್ಯ ಸಂಶೋಧನೆ ಅಂದೊಡನೆ ಲಿಖಿತವಾದ ಸೃಜನಶೀಲಕೃತಿಗಳು ಮಾತ್ರ ಅನ್ನುವ ಕ್ರಮವಿದೆ. ಈ ಮಾದರಿಯನ್ನು ಇನ್ನೂ ಹಿಗ್ಗಿಸಿ ವ್ಯಕ್ತಿಯನ್ನು ಕೇಂದ್ರವಾಗಿಸಿಕೊಂಡು ಆ ಮೂಲಕ ಸಿನಿಮಾ ಮತ್ತು ರಂಗಭೂಮಿಯನ್ನುನೋಡುವ ಕ್ರಮ ಸೂಕ್ಷ್ಮದರ್ಶೀಯ ಗ್ರಹಿಕೆಗಳನ್ನು ಕಟ್ಟಿಕೊಡುತ್ತದೆ. ಜೊತೆಗೆ ಈ ಬಗೆಯ ಅಧ್ಯಯನ ಕೇವಲ ವ್ಯಕ್ತಿ ಕೇಂದ್ರಿತ ಅಧ್ಯಯನಗಳಾಗಿ ಮಾತ್ರ ನಿಲ್ಲದೆ ಒಂದು ತಾತ್ವಿಕತೆಯನ್ನು ಕಟ್ಟಿ ಕೊಡುವ ಅಧ್ಯಯನವಾಗುತ್ತವೆ. ರಾಜ್ ಕುಮಾರ್ ,ಗುಬ್ಬಿ ವೀರಣ್ಣ ,ನಾಗರತ್ನಮ್ಮ ,ಚಿಂದೋಡಿ ಲೀಲಾ, ಉಮಾಶ್ರೀ ಇಂತಹವರು ಕೇವಲ ಕಲಾವಿದರಾಗಿ ಮಾತ್ರ ನಮ್ಮೆದುರಿಗೆ ಕಂಡರೂ ಅವರ ಮೂಲಕ ಒಂದು ಸಂಸ್ಕೃತಿ ಸಮಾಜವನ್ನು ಗ್ರಹಿಸಲು ಎಲ್ಲ ಸಾಧ್ಯತೆಗಳಿವೆ. ಇದೇ ನಿಟ್ಟಿನಲ್ಲಿ ಕನ್ನಡ ರಂಗಭೂಮಿ ಮತ್ತು ಸಿನಿಮಾ ಎರಡೂ ಹಿನ್ನಲೆಯಲ್ಲಿ ಚರ್ಚೆಗೆ ಒಳಪಡಬಹುದಾದ ಕಲಾವಿದರು ಅನೇಕರಿದ್ದಾರೆ. ಅವರುಗಳಲ್ಲಿ ಒಬ್ಬ ಕಲಾವಿದನನ್ನು ಆರಿಸಿಕೊಂಡು ಹೇಗೆ ಒಂದು ಅಧ್ಯಯನಕ್ಕೆ ಸಾಹಿತ್ಯ ಅಧ್ಯಯನದ ಒಳಗೆ ಮುಖಾಮುಖಿಯಾಗುವುದೇ ಒಂದು ಸವಾಲಿನ ಕೆಲಸ. ಯಾಕೆಂದರೆ ಸಾಹಿತ್ಯ ರಚಿಸಿಲ್ಲ. ಇನ್ನೂ ಯಾವುದೇ ಬರಹ ರೂಪದ ಅಧ್ಯಯನ ಸಾಮಗ್ರಿಗಳು ಇರುವುದಿಲ್ಲ. ಹೀಗಿರುವಾಗ ಅಭಿನಯ ಮಾತ್ರ ಗಮನಿಸಲು ಸಾಧ್ಯವಿಲ್ಲ ಅನ್ನುವುದು ಹೊರನೋಟಕ್ಕೆ ಕಾಣುವ ಅಂಶ. ಆದರೆ ಇಲ್ಲಿ ಆಂಗಿಕ, ಸಾಮುದಾಯಿಕ ಭಾಷೆ ಮತ್ತು ಸಂಸ್ಕೃತಿ, ಸಿನಿಮಾದ ಅಭಿನಯ ,ರಂಗಭೂಮಿಯ ಅಭಿನಯ,ಅವರ ಭಾಷಣಗಳು ಇತ್ಯಾದಿ ಇತ್ಯಾದಿಗಳು ಒಬ್ಬ ಕಲಾವಿದನನ್ನು ಆ ಮೂಲಕ ಅವರು ಕಟ್ಟಿಕೊಡುತ್ತಿರುವ ಸಾಧ್ಯತೆಗಳನ್ನು ಪ್ರಶ್ನಿಸುತ್ತಲೇ ಚರ್ಚೆಗೆ ಎತ್ತಿ ಕೊಳ್ಳಬಹುದು. ಒಬ್ಬ ಕಲಾವಿದನ ಮೂಲಕ ಮೈಕ್ರೋಸ್ಕೋಪಿಕ್ ಆದಂತಹ ವಿಮರ್ಶೆಗೋ ಅಥವಾ ಸಂಶೋಧನೆಗೋ ತೊಡಗಬಹುದು.
ಇದಿಷ್ಟೂ ಯಾಕೆ ಹೇಳುತ್ತಿದ್ದೇನೆಂದರೆ ಉಮಾಶ್ರೀ ಅಮ್ಮನನ್ನು ಕುರಿತು ಈಗ ಪಿಎಚ್.ಡಿ. ಮಾಡುತ್ತಿದ್ದೇನೆ. ಈ ವಿಷಯ ಎತ್ತಿಕೊಂಡಾಗ ಅನೇಕರು ಅವಳದ್ದು ಏನಿದೆ ಸಂಶೋಧನೆ ಮಾಡಲು. ಅವರೇನಾದ್ರೂ ಸಾಹಿತ್ಯ ಬರೆದಿದ್ದಾರ. ಸಾಹಿತ್ಯದೊಳಗೆ ಗಮನಿಸಲು ಆಗಲ್ಲ. ಅದೂ ಇದೂ ಅಂತ ಹೀಗಳೆದು ಮಾತಾಡಿದವರು ಅನೇಕರಿದ್ದಾರೆ. ತನ್ನ ಬಂಧುವಿನ ಬಗ್ಗೆ ಬರೆಯುತ್ತಿದ್ದಾನೆ ಅಂದವರು ಉಂಟು. ಹಾಗೆ ನೋಡಿದ್ರೆ ಅಮಿತಾಬ್ ತನ್ನ ಮಗನ ಬಗ್ಗೆ ಮಾತಾಡಬಾರದ ? ರಾಜ್ ಕುಮಾರ್ ಅವರ ಮಕ್ಕಳು ತನ್ನ ತಂದೆಯ ಅಭಿನಯದ ಬಗ್ಗೆ ಮಾತಾಡಬಾರದ? ಅಜಗಣ್ಣ ಮತ್ತು ದುಗ್ಗಳೆಯ ವಚನ ಕಾಲದ ಸಂದರ್ಭವನ್ನು ಏನು ಮಾಡುವುದು. ಇರಲಿ ನಿಂದೆಗಳಿಗೆ ಕುಗ್ಗಿ ಕರಕಲಾಗುವುದಿಲ್ಲ. ನಂದಿಹೋಗುವುದಿಲ್ಲ ಕೂಡ. ಇಂದು ಸಂಸ್ಕೃತಿ ಅಧ್ಯಯನದ ಸಾಧ್ಯತೆಗಳು ಅನೇಕ ರೀತಿಯಲ್ಲಿ ನಮ್ಮಲ್ಲಿ ವಿಸ್ತರಿಸಿಕೊಂಡಿರುವ ಈ ದಿನಮಾನಗಳಲ್ಲಿ ಹತ್ತು ಪಿಎಚ್. ಡಿ ಸಂಶೋಧನೆಗೆ ಅಥವಾ ಇನ್ನೂ ಹೆಚ್ಚು ಅಧ್ಯಯನಕ್ಕೆ ಸಾಧ್ಯತೆಗಳಿರುವ ಅಮ್ಮನ ಬಗ್ಗೆ ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನೆ ಮಾಡುತ್ತಿದ್ದೇನೆ. ಡಾ. ವಸು ಮಳಲಿಯವರ ಕನಸು ಇದು. ಅವರೇ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇನೆ. ವಸು ಮೇಡಂ ಅಂದು ಹೇಳಿದ್ದರು ‘ಉಮಾಶ್ರೀ ಅನ್ನುವ ಸಂಪನ್ಮೂಲವನ್ನು ಕುರಿತು ನಿನ್ನನ್ನು ಬಿಟ್ಟು ಮತ್ತ್ಯಾರು ಅಧ್ಯಯನ ಸಾಧ್ಯ. ಹತ್ತಿರವಿದ್ದಷ್ಟೂ ಸಂಶೋಧನೆ ಗಟ್ಟಿಯಾಗುತ್ತದೆ. ಪೂಜಕ ಗುಣವನ್ನು ಬಿಡುವುದೊಂದೇ ಅಗತ್ಯವಾಗಿ ಮಾಡಬೇಕಾದ ಕೆಲಸ. ಅದನ್ನು ನೀನು ಮಾಡೇ ಮಾಡುತ್ತೀಯ. ಬೇರೆ ವಿಷಯದ ಬಗ್ಗೆ ಕನಸಿನಲ್ಲೂ ಯೋಚಿಸಬೇಡ. ಉಮಾಶ್ರೀಯವರೇ ನಿನ್ನ ಪಿಎಚ್.ಡಿ ವಸ್ತು ವಿಷಯ’ ಅಂತ ನನ್ನ ಹೈಪೋಥೀಸಿಸ್ ವಿಸ್ತರಿಸಿದ್ದರು. ಅಭಿನಯ, ರಾಜಕೀಯ, ನಾಟ್ಕ, ಸಿನಿಮಾ, ಬದುಕು, ಸಂಘಟನೆ, ರಂಗಭೂಮಿಯ , ಮಹಿಳೆ ಹೀಗೆ ಯಾವ ದಿಕ್ಕಿನಿಂದ ಪ್ರವೇಶ ತೆಗೆದುಕೊಂಡರೂ ಬಗೆ ಬಗೆಯಲ್ಲಿ ದಕ್ಕುವ ಅಮನ್ನನ್ನು ಕುರಿತು ಸಂಶೋಧನೆ ಮಾಡುವುದು ಕೂಡ, ನಾ ಮಾಡಬೇಕಾದ ನನ್ನ ಬದುಕಿನ ಬಹುದೊಡ್ಡ ಕೆಲಸವೇ ತಾನೇ ? ಅಂದ ಹಾಗೆ ಇದು ಅನೇಕ ಪ್ರೆಶ್ನೆಗಳನ್ನು ಇಟ್ಟುಕೊಂಡು ನಡೆಸುವ ಹುಡುಕಾಟವೇ ಹೊರತು ವ್ಯಕ್ತಿ ವೈಭವೀಕರಣ ಖಂಡಿತಾ ಅಲ್ಲ.
 

‍ಲೇಖಕರು G

12 April, 2015

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. ಮಮತ

    ಪೂಜಕ ಗುಣ ಹಾಗೂ ವ್ಯಕ್ತಿ ವೈಭವೀಕರಣ ಆಗಲೂ ಬಾರದು. ಕೆಲವೊಮ್ಮೆ ಅತಿ ಭಾವುಕತೆಯಲ್ಲಿ ಖಚಿತ ಖಂಡಿತ ನಿಲುವು ಮರೆಯಾಗುವ ಸಾಧ್ಯತೆಯಿರುತ್ತೆ. ಪ್ರಜ್ಞಾಪೂರಕವಾಗಿ ಆ ಎಚ್ಚರಿಕೆ ತೆಗೆದುಕೊಂಡಲ್ಲಿ ವಸ್ತುನಿಷ್ಠ ಅಧ್ಯಯನ ಸಾಧ್ಯವಾಗುತ್ತೆ

  2. Sunil Gurannavar

    ಒಳ್ಳೆ ಆಯ್ಕೆ ಸರ್. ಉಮಾಶ್ರೀ ಮೇಡಮ್ ಅದ್ಭುತ ನಟಿ, ಅವರ ವ್ಯಕ್ತಿತ್ವಕ್ಕೂ ಹಲವಾರು ಆಯಾಮಗಳಿದ್ದು ಅವರನ್ನು ವಿಷಯವಸ್ತುವಾಗಿಟ್ಟಉಕೊಂಡು ಅಧ್ಯಯನ ಮಾಡಲು ಸಾಕಷ್ಟು ಸಾಧ್ಯತೆಗಳಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading