ಕಿರಣ ಭಟ್
ಮುಗ್ಧ ಮುಖದ, ಗಾಜು ಕಣ್ಣಿನ ಗಣೇಶ, ಕಲಾವಿದ ಸುರೇಶ ಪೂಜಾರಿಯ ಎದುರು ಅಂಗಿಯ ಮೇಲಿನ ಎರಡು ಬಟನ್ ಬಿಚ್ಕೊಂಡು ಕೂತಾಗ ಇಂಥ ಮುಗ್ಧ ಮುಖವೊಂದು ಕರಾಳ ‘ಬೇಡ’ ನಾಗಿ ಪರಿವರ್ತನೆಯಾಗುವದು ನನ್ನ ಊಹೆಗೂ ನಿಲುಕದ್ದಾಗಿತ್ತು. ತಲೆಗೊಂದು ಕೆಂಪು ಬಟ್ಟೆ ಕಟ್ಟಿ ಮುಖದ ಮೇಲೆ ಬ್ರಷ್ ಗಳು ಹರಿದಾಡ್ತಿದ್ದ ಹಾಗೆ ನಿಧಾನಕ್ಕೆ ಗಣೇಶ ನ ವೇಷವೇ ಬದಲಾಗೋಕೆ ಶುರುವಾಯ್ತು. ಮೊದಲೊಂದಿಷ್ಟು ಬಿಳಿಯ ಬಣ್ಣದ ಕಣ್ಣಿನ ಔಟಲೈನ್, ಅದಕೊಂದು ಆಕಾರ, ಕಪ್ಪನೆಯ ಶೇಡ್ ಗಳು ಹೊಸ ಆಕಾರ ಕೊಡತೊಡಗಿದ್ವು. ಸುತ್ತ ಕೆಂಪು ಬಣ್ಣ ಮೆತ್ತುತ್ತಿದ್ದ ಹಾಗೆ ಮುಖದ ಸ್ವಭಾವವೂ ಬದಲಾಗೋಕೆ ಶುರುವಾಯ್ತು. ನಿಧಾನಕ್ಕೆ ಬ್ರಷ್ ಗೆ ಹತ್ತಿಕೊಂಡ ತೆಳು ನೀಲಿ, ಹಳದಿ ಬಣ್ಣಗಳ ಹರಿವ ಗೆರೆಗಳು ಮುಖಕ್ಕೊಂದು ಬೇರೆಯದೇ ಆಕಾರ ತಂದುಬಿಟ್ಟವು. ಮುಂದೆ ಬಂದದ್ದೇ ಹುರಿ ಮೀಸೆೆ, ದಪ್ಪನೆಯ ಕಪ್ಪನೆಯ ಸೈಡ್ ಲಾಕ್ ಗಳು.
ನಿಧಾನಕ್ಕೆ ‘ಬೇಡ’ ಮುಖದಲ್ಲಿ ಆವಾಹಿತನಾಗುತ್ತಿದ್ದ. ಕಥಕಳಿ, ಯಕ್ಷಗಾನದ ಬಣ್ಣದ ವೇಷದ ರೀತಿಯ ಹತ್ತಿಯುಂಡೆಯೊಂದು ಮೂಗಿಗೇರಿತು. ಅದು, ಮುಖದ ಕಪ್ಪು, ಕೆಂಪು ಬಣ್ಣಗಳಿಗೆ ಕಾಂಟ್ರಾಸ್ಟ್ ಆಗಿ ಎದ್ದು ಕಾಣುತ್ತ ಇನ್ನೊಂದು ಆಯಾಮ ಕೊಡತೊಡಗಿತು.
ಮುಂದೆ ಹೆಡ್ ಗೇರ್ ಸರದಿ. ಶಿರಸಿ ಮಾರಿಗುಡಿಯ ಕೋಣವನ್ನು ನೆನಪಿಸುವಂಥ ಕೋಡು, ನವಿಲುಗರಿಯ ಕಿರೀಟ ತಲೆಗೇರಿ, ರೌರ್ದ್ರತೆಯನ್ನು ಮತ್ತಷ್ಟು ಹೆಚ್ಚುಮಾಡಿದವು. ಕೆಂಪು ಅಂಗಿ ಚಡ್ಡಿ, ಸಾಕ್ಸು, ಬೂಟುಗಳು, ಕೊರಳಿಗೆ ನೋಟಿನ ಮಾಲೆ, ಹಿಂದೆ ನವಿಲು ಗರಿ ಕಟ್ಟಿಕೊಂಡು, ಕೈಯಲ್ಲಿ ಕತ್ತಿ, ಢಾಲು ಹಿಡಿದ ಮುಗ್ಧ ಗಣೇಶ ರುದ್ರ ‘ಬೇಡ’ ನಾಗಿ ನಿಂತಿದ್ದ.
ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ಬೇಡರ ವೇಷ’ ಜಾನಪದ ಕಲಾಪ್ರಕಾರದ ಮುಖವರ್ಣಿಕೆಯೇ ವಿಶಿಷ್ಟವಾದದ್ದು. ಹೋಳಿಯ ಮುಂಚಿನ ಐದು ರಾತ್ರಿಗಳಲ್ಲಿ, ಓಣಿ ಓಣಿಗಳಲ್ಲಿ ಬೆಳಗಿನ ತನಕವೂ ಹುಚ್ಚೆದ್ದು ಕುಣಿಯುವ ಈ ಬೇಡರು ಓಂದು ರೀತಿಯಲ್ಲಿ ಶಿರಸಿಗೊಂದು ಲಯ ಕೊಟ್ಟವರು. ಇಲ್ಲಿ ಬಾರಿಸುವ ಹಲಗೆಗಳ ‘ಢಂಕನಕ್ಕ’ ದ ಆವಾಜು ಹೇಗಿದೆಯೆಂದರೆ ಆ ತಾಳಕ್ಕೆ ಕುಣಿಯದ ಒಂದೇ ಒಂದು ಮಗುವೂ ಶಿರಸಿಯಲ್ಲಿಲ್ಲ.
ಇಂಥ ಬೇಡರ ವೇಷದ ಮುಖವರ್ಣಿಕೆಯ ಕೆಲವು ಹಂತಗಳ ಚಿತ್ರಗಳು ಇಲ್ಲಿವೆ.
ಧನ್ಯವಾದಗಳು.
Chennagi baredhidderi
Wonderful Video with Very pretty pictures!
Nice Article.. Remembering my visit to Event about 8 years back
Namma Shirsi is the Best!
Khushyaaythu Odhi