ಸುನಿತಾ ಮೂರಶಿಳ್ಳಿ ಓದಿದ ‘ನಿದಿರೆ ಇರದ ಇರುಳು’

ಸುನಿತಾ ಮೂರಶಿಳ್ಳಿ

ಪ್ರೀತಿ, ಸ್ನೇಹದ ಬಾಂಧವ್ಯ, ಸುಂದರ ಕನಸುಗಳ ಗೋಪುರ, ಅದರಡಿಯಲ್ಲೇ ನುಚ್ಚುನೂರಾಗುವಿಕೆಯ ವಿಷಾದಗಳು…. ಇವೆಲ್ಲವೂ ಮನೋಲೋಕದಲ್ಲಿ ದಾಳಿಯಿಡುವ ನಿರಂತರ ಪ್ರಕ್ರಿಯೆಗಳು. ಇವು ನಿದ್ರೆಗೆ ಭಂಗ ತರುವ ಆಳವಾದ ಕಂದರಗಳು ಕೂಡ. ಇಂಥ ತುಂತುರು ಹನಿಗಳ ಸಂಗ್ರಹವೇ ನಿದಿರೆ ಇರದ ಇರುಳಿನ ತಿರುಳು. ವೃತ್ತಿಯಿಂದ ಇಂಜಿನೀಯರ್ ಆಗಿದ್ದರೂ ಪ್ರವೃತ್ತಿಯಿಂದ ಒಬ್ಬ ಸೃಜನಶೀಲ ಬರಹಗಾರರಾಗಿ, ಮಕ್ಕಳ ಸಾಹಿತ್ಯ, ಲಲಿತ ಪ್ರಬಂಧ, ಕಥೆ, ಕವನ, ಗಜಲ್ ಗಳ ಕೃಷಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಮಂಡಲಗಿರಿ ಪ್ರಸನ್ನ ಅವರ ನಿದಿರೆ ಕದ್ದ ತೊಳಲಾಟದ ಕನಸು ಈ “ನಿದಿರೆ ಇರದ ಇರುಳು”. 

“ಸುಂದರ ಮುಂಜಾವಿಗೆ ಬರೆಯಲಿಹುದು ಮುನ್ನುಡಿ
ಚೆಂಬೆಳಕಿನ ಹೊಂಗಿರಣದ ಭರವಸೆಯ ಹೊನ್ನುಡಿ”

ಈ ಜಗತ್ತನ್ನು ಕತ್ತಲೆಯಿಂದ ಮುಕ್ತ ಗೊಳಿಸುವ ಮುಂಜಾವಿನ ಬೆಳಗಿನಂತೆ ಬದುಕಿಗೆ ಭರವಸೆಯ ಬೆಳಕು ಬೇಕು ಎಂಬ ಕವಿಗಳ ಮನೋಜ್ಞವಾದ ಸಾಲುಗಳು ನಿರಾಶೆಯಿಂದ ಮುದುರಿದ ಮನಕೆ ಆಸೆಯ ಕಿಡಿಯನ್ನು ಹೊತ್ತಿಸುತ್ತವೆ. 
 
“ಮಾಡಿದಂಥ ಹೆಮ್ಮೆ ಕೆಲಸ ನಮ್ಮೆದೆಗೆ ಉಳಿಯಲಿ
ನೋಡಿಕೊಳ್ಳಲು ಮತ್ತೇತಕೆ ಬೇಕು ಬೇರೆ ಕನ್ನಡಿ “
ಎಂಬ ಸಾಲುಗಳು ‘ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು’ ಎಂಬ ಬಸವಣ್ಣನವರ ವಚನದಂತೆ ತನ್ನ ಕಾರ್ಯವನ್ನು ತಾನು ಮಾಡಿ ಬೇರೆ ಹೊಗಳಿಕೆ ತೆಗಳಿಕೆಗಳಿಗೆ ಕಿವಿಗೊಡದೆ ಮುನ್ನುಗ್ಗಬೇಕು ಎಂಬುದೇ ಗಜಲ್ಕಾರರ ಪ್ರಾಜ್ಞಮನದ ಮಾತಾಗಿದೆ.

“ಏನು ಮಾತಾಡಲಿದೆ ಮನಸು ಮುರಿದ ಮೇಲೆ
ಯಾವ ಯೋಚನೆಯಿದೆ ಕನಸು ಮುಗಿದ ಮೇಲೆ “

“ಅರಿಯದ ಕಾರಣಗಳು ನೇಪಥ್ಯದಲೆ ಉಳಿದವು ‘ಗಿರಿ’
ವಾಸ್ತವ ಅರ್ಥವಾದೀತು ನಮ್ಮ ನಾವು ತಿಳಿದ ಮೇಲೆ “

ಆಶಾಗೋಪುರವೇ ಕುಸಿದು ಶೂನ್ಯ ಆವರಿಸಿದ  ಮೇಲೆ ಅಲ್ಲಿ ಶಬ್ದಗಳಿಗೆಲ್ಲಿದೆ ನೆಲೆ, ಮೌನವೇ ಸರ್ವಸ್ವ. ತಾನಾರೆಂಬುದ ತಿಳಿದ ತನ್ನರಿವೇ ತನಗೆ ದಾರಿದೀಪವಾಗುವದು ಎಂಬ ವಿಚಾರ ಎಂಥ ಅರ್ಥಪೂರ್ಣ!

ಪ್ರತಿ ಮಳೆಗೂ ಎಲ್ಲೆಂದರಲ್ಲಿ ಮೊಳಕೆ ಒಡೆದು ಕಂಗೊಳಿಸುವ ಹಸಿರು ಸಿರಿಯಂತಿರುವ ಈ ಕನಸುಗಳು. ಮನೋಭೂಮಿಕೆಯಲ್ಲಿ ಭಾವನೆಗಳ ಸುರಿಮಳೆಯಾದಾಗ ಪುಟಿದೇಳುವವು. ಈ ಕನಸುಗಳು ಬದುಕಿಗೆ ಚೈತನ್ಯವನ್ನು ಕೊಡುವಂಥವು ಅದನ್ನೇ ಕವಿಗಳು ಹೇಳುವುದು:
 
“ಆ  ಮಳೆಗೆ ಕನಸುಗಳು ಕುಡಿಯೊಡೆಯಬಹುದೆಂದು ಕಾಯುತಿರುವೆ  ಮೊಳಕೆ ಗಿಡವಾಗಿ ಹೂವು ಹಣ್ಣು ಬಿಡಬಹುದೆಂದು ಕಾಯುತಿರುವೆ

ಬಂಜರೆದೆ ಹದಗೊಂಡು ನಾಳೆಗೆ ಅರಳಬಹುದೆಂದು ಕಾಯುತಿರುವೆ”

ಕಳೆಯೆಷ್ಟು ಇದ್ದರೇನು, ಕನಸಿರದ ಬಾಳು ಬಾಳೆ ಎಂದು ಕೆ.ಎಸ್. ನರಸಿಂಹಸ್ವಾಮಿ ಯವರು ಹೇಳುವಂತೆ ಬದುಕಿನ ಖಾಲಿತನ ನೀಗಿಸಲು ಈ ಕನಸುಗಳು ಬೇಕು ಎಂದು ಕವಿಮನ ಆಶಿಸುವದು. ಅಷ್ಟೇ ಅಲ್ಲ ಕವಿಗಳು ಈ ಕನಸುಗಳನ್ನು ಉಲ್ಲೇಖಿಸುವದು ಮುಪ್ಪಡರದ ಭರವಸೆಗಳೆಂದು.  “ಕಾಯುತಿರುವೆ ಮುಪ್ಪಡರದ ಭರವಸೆಗಳ ‘ಗಿರಿ’ ಕನಸುಗಳು ಕಣ್ಣೊಳಗೆ ಉಳಿದುಬಿಟ್ಟಿವೆ ಸಾಯದ ಹಾಗೆ” ಎದೆಯೊಳಗೆ ಬೆಚ್ಚಗೆ ಕಾಪಿಟ್ಟ ಈ ಕನಸುಗಳೆ ಭರವಸೆಯ ಕಿರಣಗಳು.

“ಸತ್ತ ದೇಹದ ಮುಂದೆ ಕೂತು ಅಳುವಲ್ಲಿ ಅರ್ಥವೇನಿದೆ
ಇರುವಾಗ ಪ್ರೀತಿ ತೋರದೆ ಕಣ್ಣೀರಿಡುವಲ್ಲಿ ಅರ್ಥವೇನಿದೆ”

“ಒಲುಮೆ ಮಾತುಗಳಿಗೆ ಭೀಕರ ಬರವೆಲ್ಲೆಡೆಯಲ್ಲಿ ‘ಗಿರಿ’
ಅಂತಿಮ ಶವಯಾತ್ರೆಯಲ್ಲಿ ಹೊಗಳುವಲ್ಲಿ ಅರ್ಥವೇನಿದೆ”
 
ಕವಿಯ ಮಾಗಿದ ಮನ ಅರ್ಥವಿಲ್ಲದ ಆಚರಣೆಗಳತ್ತ ಗಮನ ಸೆಳೆವದು. ಇಂತಹ ಸಲ್ಲದ ಆಚರಣೆಗಳಲ್ಲಿ ಕಳೆದುಹೋಗುವ ಬದುಕನ್ನು ಪ್ರಶ್ನಿಸಿ ಇದ್ದಾಗಲೇ ಅದನ್ನು ಅರ್ಥಪೂರ್ಣವಾಗಿಸುವ ನೆಲೆಯಲ್ಲಿ ಈ ಸಾಲುಗಳು ಸಶಕ್ತವಾಗಿ ಮೂಡಿಬಂದಿವೆ.

ಈ ಜಗದ ಅಮಾನವೀಯತೆಗೆ ಮಿಡಿವ ಕವಿಮನ ಹೇಳುವದು:

“ಅದೇಕೋ ಸಹನೆ ಕಟ್ಟೆ ಒಡೆಯುತಲೆ ಸಾಗಿದೆ ನಿಲ್ಲದೆ ‘ಗಿರಿ’
ಮನುಜನ ಮುಗಿಯದ ವಿಕೃತಿಗಳಿಂದ ತಳಮಳವಾಗುತ್ತಿದೆ ನನಗೆ”  ಎಂದು.

ಪ್ರೀತಿ ಎಂಬುದು ಅಪೂರ್ವವಾದ ಮಧುರಭಾವ.  ಇದು ಶಬ್ದಕ್ಕೆ ನಿಲುಕುವುದೆ, ಇದನಳೆವ ಮಾಪಕವಿದೆಯೆ? ಇದು ಅಗಾಧ ಹಾಗೂ ಅನಂತವಾಗಿದೆ. ಇದು ಹೃದಯದಿಂದ ಹೃದಯಕ್ಕೆ ಅರ್ಥವಾಗಲು ಶಬ್ದಗಳ ಸಾಂಗತ್ಯದ ಅವಶ್ಯಕತೆಯಿಲ್ಲ. ಇದೇ ಭಾವ ಈ ಗಜಲ್ ನಲ್ಲಿ  ಸುಂದರವಾಗಿ ವ್ಯಕ್ತವಾಗಿದೆ.  “ಎದೆಯ ಅಗಾಧ ಒಲವಿಗೆ ಮಾತು ಬೇಕಿಲ್ನಲಿವು ತುಂಬಿದ ಒಡಲಿಗೆ ಮಾತು ಬೇಕಿಲ್ಲ”

“ಬದುಕಲಿ ಎಲ್ಲವನು ಕಳೆದುಕೊಂಡರೂ ಪ್ರೀತಿಯೊಂದಿರಲಿ
ನೆಮ್ಮದಿಗೆ ಏನೂ ಬೇಡ ಅಂದುಕೊಂಡರೂ ಪ್ರೀತಿಯೊಂದಿರಲಿ”

“ಸುಖದ ನಿದಿರೆಯಲಿಹಳು ನಲ್ಲೆ ಹಾಡಬೇಡ ಕೋಗಿಲೆ
ಎದೆಗೆ ತಲೆಯಿಟ್ಟು ಮಲಗಿಹಳು ಕಾಡಬೇಡ ಕೋಗಿಲೆ”
ಎಂಬ ಸಾಲುಗಳು ಪ್ರೇಮದ ಭಾವತೀವ್ರತೆಯನ್ನು ಸಾರುತ್ತಲೇ “ಧೀರೆ ಧೀರೆ ಚಲನಾ ಬಾದಲ ಧೀರೆ ಮೇರಾ ಬುಲ್ ಬುಲ್ ಸೋರಹಾ ಹೈ ಶೋರ ಗುಲ್ ನ ಮಚಾ “ಎಂಬ ಹಿಂದಿ ಚಲನಚಿತ್ರದ ಹಾಡಿನ ಸಾಲುಗಳನು ನೆನಪಿಸಿದವು.
 
“ನೀನಿರದೆ ಹೇಗೆ ಬದುಕಿದ್ದು ನನ್ನ ಹೃದಯವನು ಕೇಳು 
ನಿದಿರೆ ಇರದ ಇರುಳುಗಳ ಕಳೆದುದ ರೆಪ್ಪೆಗಳನು ಕೇಳು”

ಅಬ್ಬ ಈ ಪ್ರೀತಿಗೆ ಎಷ್ಟೊಂದು ಮಗ್ಗುಲುಗಳು?  ಕವಿ ಕಾವ್ಯ ಮಾತ್ರ ಇದನು ಶಬ್ದಗಳಲಿ ಬಂಧಿಸಲು ಸಾಧ್ಯ.  ಹೀಗೆ ಈ ಭಾವ ತೀವ್ರತೆಯಲಿ ಕಳೆದು ಹೋಗುವ ಆಯುಷ್ಯದ ಪರಿಯನ್ನೂ ಕವಿಯ ಬಾಯಲ್ಲೇ ಕೇಳಬೇಕು….

“ನೆನಪುಗಳ ಸಂತೆಯಲಿ ವಸಂತಗಳು ಹರಾಜಾದವು 
ಕಗ್ಗತ್ತಲೆಗೆ ಬೆಳಕು ತೂರಿದ್ದು ಸೂರ್ಯನನು ಕೇಳು” 

ಬದುಕಿನ ಪ್ರತಿಕ್ಷಣವೂ ನೆನಪಿನೊಂದಿಗೆ ಮುಖಾಮುಖಿ ಯಾಗುತ್ತಾ ಸರಿವ ಸಮಯದ ಬಂಡಿಯಲ್ಲಿ ಆಯುಷ್ಯ ಕಳೆದದ್ದೇ ಗೊತ್ತಾಗುವದಿಲ್ಲ. 
 
“ಮುಡಿಯಲ್ಲಿನ ಮಲ್ಲಿಗೆ ಬಾಡದಂತೆ ನೋಡಿಕೊ
ಅಂತರಂಗದ ತಿಳಿಗೊಳ ಕಲಕದಂತೆ ನೋಡಿಕೊ”

“ವಿಷವಾಗದಿರಲಿ ಜೀವನೋತ್ಸಾಹದ ಸವಿಗನಸು ‘ಗಿರಿ’
ಮನದ ಆಸೆ ಕಾಡು ರೋದನ ಆಗದಂತೆ ನೋಡಿಕೊ” 

ಪರಿಶುದ್ಧವಾದ ಅಂತರಂಗದ ನೆಲೆಯೇ ಮನಕೆ ಶಾಂತತೆಯನ್ನು ಒದಗಿಸಲು ಸಾಧ್ಯ. ಯಾವತ್ತೂ ಬದುಕಿನಪ್ರತಿ ಹಸಿರಾಗಿರಿಸುವ ಆಸೆಗಳೇ ಜೀವನೋತ್ಸಾಹ ಕೊಡಲು ಸಾಧ್ಯ. ಅವನ್ನು ಬತ್ತದಂತೆ ಇರಿಸಿಕೊಳ್ಳಲು ಕವಿಮನಸು ಬಯಸುವದು.

ಕವಿತೆಯ ಜೀವಾಳವೆಂದರೆ ಕವಿಯ ಮನದ ತಲ್ಲಣ, ಬೇಗುದಿ, ಅಪ್ಯಾಯನ, ಸಂಕಟ, ತಳಮಳ, ಪ್ರೀತಿ, ಸ್ನೇಹ ಎಲ್ಲವುಗಳ ಭಾವತೀವ್ರತೆ. ಹೀಗೆ..

“ಭಾವ ತೀವ್ರತೆಯ ಕಡಲು ಕುದಿಯುತಿದೆ ಒಳಗೆ 
ಕಂಬನಿಯ ಹೃದಯ ಮಿಡಿಯುತಿದೆ ಒಳಗೆ”

“ಧರೆಯೆ ದಿಕ್ಕು ತಪ್ಪುತಿದೆ ಎಲ್ಲಿ ಹೋಗಿ ಬದುಕಲಿ
ಜಗವೇ ಹೊತ್ತಿ ಉರಿಯುತಿದೆ ಎಲ್ಲಿ ಹೋಗಿ ಬದುಕಲಿ”

ಎಂಬ ಸಾಲುಗಳು ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ’ ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಪ್ರತಿಫಲಿಸಿದಂತಿವೆ.

“ಕತ್ತಲಾಗುತಿದೆ ಮೇಲೊಂದು ಮನೆ ಇದೆ ಹೋಗಬೇಕು
ಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು”

ಹೀಗೆ ಬದುಕಿನ ಮುಸ್ಸಂಜೆಯಲ್ಲಿ ತನ್ನ ಇಹದ ಬದುಕಿನ ಸಂತೃಪ್ತಿಯ ನೆಲೆ ಕಂಡು, ಮುಂದೆ ಕಾಣುವ ಕಟು ವಾಸ್ತವ ಸತ್ಯದ ಪಯಣಕ್ಕೂ ಧೃತಿಗಡೆದೆ ಸಿದ್ದರಾಗಬೇಕು ಎನ್ನುವ  ಅರಿವೇ ಈ ಗಜಲ್ ನ ತುಂಬಾ ಭಾವಪೂರ್ಣವಾಗಿ ಧ್ವನಿಸಿದೆ.

ಬದುಕಿನ ಓಟ ವೇಗದಿಂದ ಸಾಗಿದೆ ವಂದನೆಗಳಿಗೆ ನಿಲ್ಲಲು ಕೂಡ ಸಮಯವಿಲ್ಲ ಮಾತು ಕಥೆ ಪ್ರೀತಿ ಹಂಚಿಕೊಳ್ಳಲು ಸಮಯವಿಲ್ಲ ಅದನ್ನೇ ಕವಿಗಳು ಮನದಟ್ಟು ಮಾಡಿದ್ದಾರೆ:
 
“ಕುಳಿತುಕೋ ಅಕ್ಕರೆ ಮಾತಾಡೋಣ ಒಂದಷ್ಟು ಹೊತ್ತು 
ಬೆಳ್ಳಕ್ಕಿಯಾಗಿ ಬಾನಲಿ ಹಾರಾಡೋಣ ಒಂದಷ್ಟು ಹೊತ್ತು” 

ಎಂದು ಕವಿ ಮನದ ದುಗುಡ ನೀಗಲು ತನಗಾಗಿ ಸಮಯ ಮೀಸಲಿಡಲು ಹಂಬಲಿಸುವದು.

“ನಿದಿರೆ ಇರದ ಇರುಳು ಗಜಲ್ ಬರೆಸಿತು
ನೋವನುಂಡ ಕರುಳು ಗಜಲ್ ಬರೆಸಿತು”

ಒಡಲಗರ್ಭ ಧರಿಸಿದ ಕವಿ ಭಾವಗಳು !ಪ್ರಸವವಾಗುವವರೆಗೂ ತಡಕಾಡುತ್ತಲೇ ಇರುವವು. ಅದೆ ಸಾಹಿತ್ಯಕ್ಕೆ ಮುನ್ನುಡಿ ಬರೆವದು. ನಿದ್ರೆ ಕೆಡಿಸುವ ಗಾಡವಾದ ನೋವು ಕಾವ್ಯದ ಜನನಕ್ಕೆ ಕಾರಣ ಎಂಬ ಭಾವಗಳು ಇಲ್ಲಿನ ಅನೇಕ ಗಜಲ್‌ ಗಳ ಸಾಲುಗಳಲ್ಲಿ ಒಡ ಮೂಡಿದೆ.

“ಎಷ್ಟೊಂದು ಹೂವುಗಳು ಒಂದರಂತೆ ಮತ್ತೊಂದಿಲ್ಲ 
ಅದೆಷ್ಟೋ ಮುಖಗಳು ಒಂದರಂತೆ ಮತ್ತೊಂದಿಲ್ಲ”

ಈ ಸೃಷ್ಟಿ ಅದೆಷ್ಟು ಅಗಾಧವಾಗಿದೆ! ಎಷ್ಟೊಂದು ವೈವಿಧ್ಯಮಯವಾಗಿದೆ ಒಂದರಂತೆ ಮತ್ತೊಂದಿಲ್ಲ ಪ್ರತಿಯೊಂದುಕ್ಕೂ ತನ್ನದೇ ಆದ ಅಸ್ತಿತ್ವವಿದೆ ರಾಗವಿದೆ. ಉಲಿವ ಭಾವಭಂಗಿ ಮಾತ್ರ ಭಿನ್ನವಾಗಿವೆ. ಎಲ್ಲವಕ್ಕೂ ಅವುಗಳದೇ ಆದ ಇತಿಮಿತಿಗಳಿವೆ.  ಎಲ್ಲವನ್ನು ಗೌರವಿಸುವ ಕವಿಯ ಮನ ಮಾತ್ರ ವಿಶಾಲವಾಗಿದೆ.

ಹೀಗೆ ಪ್ರೀತಿ, ಭರವಸೆ, ಯಾತನೆ, ಕನಸು, ನೆನಪು ತುಂಬಿದ ಒಡಲಿನ ಮಾಗದ ಗಾಯಗಳು ನಿದ್ರೆಯನ್ನು ಕದಿಯುವ ಸರಕುಗಳಾಗಿವೆ. ಇವೇ ನಿದಿರೆ ಇರದ ಇರುಳಿನ ಅಂತಃಸತ್ವ ಕೂಡ ಆಗಿವೆ. ಹೀಗೆ ಅತ್ಯಂತ ಆಪ್ತವಾಗಿ ಭಾವಪೂರ್ಣವಾಗಿ ವ್ಯಕ್ತವಾದ ಮಂಡಲಗಿರಿ ಪ್ರಸನ್ನ ಅವರ ಗಜಲ್ ಗಳು ಗಜಲ್ ಲೋಕವನ್ನು ಸಮೃದ್ಧಗೊಳಿಸಿವೆ.  ಹೀಗೆ ಅವರ ಗಜಲ್ ಪಯಣ ಇನ್ನಷ್ಟು ಸಶಕ್ತ ಹಾಗೂ ಸದೃಢವಾಗಿ ನೆಲೆಯೂರಿ ಸತ್ವಯುತವಾಗಿ ಹೊರಹೊಮ್ಮಲಿ ಎಂದು ಮನದಂಬಿ ಆಶಿಸುವೆ.

‍ಲೇಖಕರು avadhi

March 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: