ಮನುಷ್ಯನ ನಾಲ್ಕು ವಯೋಮಾನಗಳು
ಇಂಗ್ಲಿಷ್ ಮೂಲ: ಡಬ್ಲು ಬಿ ಯೇಟ್ಸ್
ಯುದ್ಧ ಹೂಡಿದ ಅವನು ದೇಹದ ವಿರುದ್ಧ
ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು.
ಆ ಬಳಿಕ ಹೋರಾಡಿದ ಹೃದಯದ ವಿರುದ್ಧ
ಬಿಟ್ಟುಹೊರಟವು ಅವನ ಮುಗ್ಧತೆ, ಶಾಂತಿ

ಅನಂತರ ಹೋರಾಡಿದ ತನ್ನ ಮನಸಿನ ವಿರುದ್ಧ
ಹಿಂದೆ ಬಿಟ್ಟುನಡೆದ ತನ್ನ ಹೆಮ್ಮೆಯ ಹೃದಯ
ಈಗ ಶುರು ಅವನ ಯುದ್ಧ ದೇವರ ವಿರುದ್ಧ
ಮಧ್ಯರಾತ್ರಿ ದೇವರು ಗೆಲ್ಲುವುದು ಶತಸ್ಸಿದ್ಧ

ಸಾರೋಟು
ಇಂಗ್ಲಿಷ್ ಮೂಲ: ಎಮಿಲಿ ಡಿಕಿನ್ಸನ್
ನಿಲ್ಲಲಾಗಲಿಲ್ಲವೆಂದು ನಾನು ಅವನಿಗಾಗಿ,
ತಾನೇ ನನಗಾಗಿ ನಿಂತ, ಮೃತ್ಯು ಕರುಣೆಯಿಂದ.
ಸಾರೋಟಿನಲ್ಲಿ ಇದ್ದವರು ನಾವಿಬ್ಬರೇ,
ಜೊತೆಗೆ ಅಮರತೆ.
ನಿಧಾನವಾಗಿ ಸಾಗಿತ್ತು ನಮ್ಮ ಪ್ರಯಾಣ:
ಇರಲಿಲ್ಲ ಅವನಿಗಾತುರ.
ನಾನೂ ಬದಿಗಿರಿಸಿದ್ದೆ ನನ್ನ ದುಡಿಮೆ, ಬಿಡುವು,
ಅವನ ಸಜ್ಜನಿಕೆಗೆ ಸೋತು.
ಹಾದುಹೋದೆವು ನಾವು ಊರಶಾಲೆಯನ್ನು,
ನೋಡುತ್ತ ಮಕ್ಕಳ ಆಟೋಟ.
ಹಾದೆವು ತೆನೆ ತೂಗಿದ ಹೊಲಗಳನ್ನು, ಹಾಗೂ
ಮುಳುಗು-ಸೂರ್ಯನನ್ನು.
ಸಂಜೆಯ ಕಾವಳದೊಡನೆ ಇಬ್ಬನಿ ಸುರಿದು
ಗಡಗಡ ನಡುಗಿಸುವ ಚಳಿ!
ನನ್ನ ಗೌನೋ ಜೇಡರಬಲೆಯಂತೆ ತೆಳು:
ಅಷ್ಟೇ ತೆಳು ಹೆಗಲ ಶಾಲು.

ನಾವು ನಿಂತದ್ದೊಂದು ಮನೆಯ ಮುಂದೆ:
ಅದೊ ನೆಲದ ಒಂದು ಉಬ್ಬು.
ಅದರ ತಾರಸಿಯಿತ್ತು ನೆಲಮಟ್ಟದಲ್ಲಿ:
ಅಸ್ಪಷ್ಟ ಅದರ ಸೂರು.
ಇದಾಗಿ ಶತಮಾನಗಳೇ ಕಳೆದಿದ್ದರೂ
ನಡೆದಂತಿದೆ ನಿನ್ನೆಯಷ್ಟೇ.
ನಾ ಮೊದಲಂದುಕೊಂಡಿದ್ದೆ ಕುದುರೆಗಳ ಕಂಡು
ನಮ್ಮ ನಡೆ ಅನಂತದೆಡೆಗೆ.

ಗೋಡೆ ರಿಪೇರಿ
ಇಂಗ್ಲಿಷ್ ಮೂಲ: ರಾಬರ್ಟ್ ಫ್ರಾಸ್ಟ್
ಗೋಡೆಯನ್ನು ಇಷ್ಟಪಡದ ಏನೋ ಒಂದಿದೆ. ಅದು
ಹಿಮಗಟ್ಟಿದ ನೆಲದಿಂದುಬ್ಬಿ, ಗೋಡೆಯ ಮೇಲಕ್ಕೆಬ್ಬಿ,
ಒಂದರ ಮೇಲೊಂದು ಪೇರಿಸಿಟ್ಟ ಕಲ್ಲುಗುಂಡುಗಳನ್ನು
ಉರುಳಿಸುತ್ತೆ ಚೆಲ್ಲಾಪಿಲ್ಲಿ ಹಗಲ ಬಿಸಿಲಿಗೆ. ಹೀಗೆ
ಇಬ್ಬರು ಆರಾಮವಾಗಿ ಹಾದುಹೋಗಬಹುದಾದಂಥ
ಬಿರುಕುಗಳು ಮೂಡುತ್ತವೆ ಗೋಡೆಯಲ್ಲಿ ಅಲ್ಲಲ್ಲಿ. ಇನ್ನು
ಬೇಟೆಗಾರರದ್ದೋ ಅದು ಬೇರೆ ಸಂಗತಿ. ಅವರು
ಕೆಡವಿಹೋದ ಕಲ್ಲುಗಳನ್ನು ನಾನೇ ಜೋಡಿಸಿದ್ದೇನೆ
ಈ ಕಡೆ ಬಂದಾಗ. ಅವರು ಗೋಡೆಯ ಸಂದಿಗಳಲ್ಲಿ
ಅವಿತುಕೂತ ಮೊಲಗಳನ್ನು ಬೆದರಿಸಿ ಹೊರಗಟ್ಟುತ್ತಾರೆ
ಬೊಗಳುತ್ತ ಬೆನ್ನಟ್ಟುವ ತಮ್ಮ ನಾಯಿಗಳ ಖುಷಿಗೆ.
ಇಷ್ಟಾಗಿ ಈ ಬಿರುಕು ಹೇಗಾದವು ಎಂಬುದನ್ನು
ಕಂಡುಕೇಳಿದವರಿಲ್ಲ ಯಾರೂ ಈ ತನಕ. ನಾವು
ಕಾಣುವುದು ಅವನ್ನು ವಸಂತದ ರಿಪೇರಿ ವೇಳೆಗೆ.

ಹೇಳಿಕಳಿಸುತ್ತೇನೆ ನಾನು ಬೆಟ್ಟದಾಚೆಗಿರುವ ನನ್ನ
ನೆರೆಯಾತನಿಗೆ. ಹೀಗೆ ನಿಗದಿಯಾದ ಒಂದು ದಿನ
ನಾವು ಭೇಟಿಯಾಗುತ್ತೇವೆ, ಸರಹದ್ದಿನ ಉದ್ದಕ್ಕೂ
ಹೆಜ್ಜೆಹಾಕಲು, ಹಾಗೂ ಗೋಡೆಯ ನೇರ್ಪಡಿಸಲು.
ನಡೆಯುತ್ತೇವೆ ನಮ್ಮ ನಡುವೆ ಗೋಡೆ ಇರಿಸಿಕೊಂಡು.
ಎತ್ತಿಡುತ್ತೇವೆ ಉರುಳಿಬಿದ್ದ ಕಲ್ಲುಗುಂಡುಗಳನು ಮತ್ತೆ
ಅವುಗಳ ಸ್ವಸ್ಥಾನದಲ್ಲಿ. ಆ ಕಲ್ಲುಗಳೋ ಕೆಲವು
ಉರುಟುರುಟು, ಕೆಲವು ವಕ್ರ, ಕೆಲವು ಚಪ್ಪಟೆ.
ಅವುಗಳ ಸಮತೋಲದಲ್ಲಿ ನಿಲ್ಲಿಸಲು ಛೂಮಂತ್ರ ಬೇಕು:
“ಹೀಗೇ ನಿಂತಿರಿ ನಾವು ಹಿಂತಿರುಗುವ ವರೆಗೂ, ಛೂ!”
ದರಗಾಗಿವೆ ಕೈಬೆರಳು ಅವುಗಳ ಹಿಡಿದೆತ್ತಿ. ಓ
ಇದೊಂದು ಬಗೆಯ ಹೊರಾಂಗಣ ಕ್ರೀಡೆಯಂತೆ ನಮಗೆ.
ಒಬ್ಬೊಬ್ಬರು ಒಂದು ಬದಿಗೆ. ಇಲ್ಲ, ಇನ್ನೂ ಹೆಚ್ಚಿನದಿದೆ:
ಗೋಡೆಯಿರುವ ಇಲ್ಲಿ ನಮಗೆ ಅದರ ಅಗತ್ಯವೇ ಇಲ್ಲ,
ಅವನದ್ದೋ ಪೈನ್‍ತೋಪು, ನನ್ನದು ಸೇಬಿನ ತೋಟ.
ಈ ಸೇಬಿನ ಮರಗಳು ಗಡಿರೇಖೆಯನ್ನು ದಾಟಿಹೋಗಿ
ತಿನ್ನಲಾರವು ಅವನ ಪೈನ್‍ಮರದ ಕೋನ್‌ಗಳನ್ನು.
ಹೀಗೆಂದರೆ ನಾನು ನನ್ನ ನೆರೆಯಾತನದೊಂದೇ ಮಾತು:
“ಒಳ್ಳೆ ಬೇಲಿ ಇದ್ದರೆ ಅದು ಒಳ್ಳೆ ನೆರೆಹೊರೆ”
ವಸಂತದ ಕುಚೇಷ್ಟೆ ನನಗೆ, ಅವನ ಮಿದುಳಿಗೆ ಒಂದು
ಹುಳ ಬಿಟ್ಟರೆ ಹೇಗೆ, ಅನಿಸಿ ಹೀಗೆ ಹೇಳುತ್ತೇನೆ:
“ಹೇಗೆ ತಾನೆ ಮಾಡೀತು ಅದು ಒಳ್ಳೆ ನೆರೆಹೊರೆ?
ಇಲ್ಲಿ ಹಸುಗಳಿದ್ದರೆ ಅದು ಸರಿ, ಹಸುಗಳಿಲ್ಲವಲ್ಲ?
ತಿಳಿಯಬೇಕಿದೆ ನನಗೆ ನಾ ಗೋಡೆ ಕಟ್ಟುವ ಮೊದಲು,
ಯಾಕೆ ಗೋಡೆ? ಯಾವುದನ್ನು ಒಳಗಡೆಗಿಡಲು?
ಯಾವುದ ಹೊರಗೆ? ಯಾರಿಗೆ ತೊಂದರೆ ನನ್ನಿಂದ?”
ಗೋಡೆಯನ್ನು ಇಷ್ಟಪಡದ ಏನೋ ಒಂದಿದೆ. ಅದು
ಬಯಸುತ್ತೆ ಗೋಡೆಯನ್ನು ಕೆಡವಿಹಾಕಲು.
“ಭೂತಚೇಷ್ಟೆ” ಎನ್ನಲೆ ಅವನಿಗೆ? ಅದು ಖಚಿತವಲ್ಲ.
ಅಂದುಕೊಳ್ಳಲಿ ಹಾಗೆ ಅವನೇ ಬೇಕಿದ್ದರೆ.
ಈಗ ಅವನು ತರುತ್ತಿದ್ದಾನೆ ತನ್ನ ಎರಡೂ ಕೈಗಳಲ್ಲಿ
ಎರಡು ಕಲ್ಲುಬಂಡೆ, ಹಿಡಿದು ತುದಿಗಳನ್ನು ಭದ್ರವಾಗಿ,
ಶಿಲಾಯುಗದ ಸಶಸ್ತ್ರ ಅನಾಗರಿಕ ಮನುಷ್ಯನಂತೆ.
ಕತ್ತಲಲ್ಲಿ ಚಲಿಸುತ್ತಿರುವ ಹಾಗೆ ತೋರುತ್ತಿದ್ದಾನೆ.
ಅದು ಕೇವಲ ಕಾಡಿನ ಅಥವಾ ದಟ್ಟ ಮರಗಿಡಗಳ
ನೆರಳಿನ ಕತ್ತಲೆಯಲ್ಲ. ದ್ರೋಹ ಬಗೆಯಲಾರ ಅವನು
ತಂದೆಯ ಮಾತಿಗೆ, ಜೊತೆಗೆ ಮನದಟ್ಟಾಗಿದೆ ಸ್ವಂತ
ಚಿಂತನೆಯಿಂದ. ಹೀಗಾಗಿ ಮತ್ತೆ ಅದೇ ಹೇಳುತ್ತಾನೆ:
“ಒಳ್ಳೆ ಬೇಲಿ ಇದ್ದರೆ ಅದು ಒಳ್ಳೆ ನೆರೆಹೊರೆ”






ಕವಿತೆಯನ್ನು ಅನುವಾದಿಸುವವನು ಕವಿಯೇ ಆದಾಗ ಸಿಗುವ ಸೊಗಸೇ ಬೇರೆ. ಮೂಲಕವಿಯ ಪ್ರತಿಭೆ ಮತ್ತು ಊಹೆಯ ಜೊತೆಗೆ ಅನುವಾದಿಸುವ ಕವಿಯ ಪ್ರಜ್ಞೆ, ಪರಿಸರ, ಭಾಷೆ, ಲಾಲಿತ್ಯ, ಅಕ್ಕರೆ ಮತ್ತು ಕಲ್ಪನೆ ಸೇರಿಕೊಂಡು ಮೂಲ ಕವಿತೆಯನ್ನು ಆಪ್ತವಾಗಿಸುತ್ತದೆ ; Tulle ಶಾಲು ಆಗುವಂತೆ.ಇದನ್ನೇ ನಾನು ಸ್ನೋಬಾಲ್ ಪರಿಣಾಮ ಎಂದು ಕರೆಯುತ್ತೇನೆ. ಒಂದು ಸರಳವಾದ ಪದ್ಯ ಕೂಡ ಕ್ರಮೇಣ ಬೇರೆ ಬೇರೆ ಕವಿಗಳ ಸ್ಪರ್ಶದಿಂದ ಮಹಾಕಾವ್ಯ ಆಗುತ್ತದೆಯಲ್ಲವೇ? ಮಹಾಭಾರತವೇ ಅದಕ್ಕೆ ಉದಾಹರಣೆ ಅಲ್ಲವೇ.
ಈ ಅನುವಾದಗಳು ನನಗಿಷ್ಟವಾದವು. ನಿಮ್ಮ ಕೈಯಲ್ಲಿ ಭಾಷೆ ನಲುಗಿಲ್ಲ, ಪಳಗಿದೆ. ಮೂಲವನ್ನು ಬಿಟ್ಟು ಕೆಲವರು ಹೊಸದನ್ನೇ ಕಟ್ಟಲು ಹೋಗುತ್ತಾರೆ. ಆದರೆ ನೀವು ಹಾಗೆ ಮಾಡಿಲ್ಲ. ಹಾಗಂತ ಮೂಲ ಕವಿತೆಯಲ್ಲಿ ಬರುವ ಅಪರಿಚಿತ ಪ್ರತಿಮೆಗಳನ್ನು ಕೊಂಚ ಮುಟ್ಟಿ ತಡವಿ ನಮಗೆ ಪರಿಚಿತವಾದ ರೂಪು ಕೊಟ್ಟಿದ್ದೀರಿ.
ಸೊಗಸಾಗಿದೆ.