ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಿಸಿಲ ಎದೆಗೆ ಸುರಿದಂಥ ಬೆಂಕಿ ಅಪ್ಪ ಮಳೆಯ ಕೊಡ ಹೊತ್ತ ಅವ್ವ…' – ಕೆ ನೀಲಾ ಕವಿತೆ


ಈಗ ಅವ್ವನೆಂದರೆ
ಎಂದೂ ಮರೆಯದ
ಒಂದು ನೆನಪು
ಆರದ ಕಣ್ಣ ಹನಿ.
ಕರುಳು ಬಿಕ್ಕುವ ದನಿ
ಎಂದೂ ಮುಗಿಯದ
ಎದೆಯೊಳಗಿನ
ನೆನಪ ಮೆರವಣಿಗೆ
 
ಅವ್ವನೆಂದರೆ ಈಗ
ಮಳೆ ನಿಂತ ಮೇಲೂ
ಹುಲ್ಲ ಗರಿಕೆ ತುದಿಗೆ
ಹೊಳೆಯುವ ಇಬ್ಬನಿ
ಮತ್ತ್ಯಾವತ್ತೂ ಅಳಿಯದ
ಮನದ ಹಾಳೆಯಲು
ಕೆತ್ತಿದ ಚಿತ್ತಾರದ ಹಾಲ ಹನಿ.
ಹಿತ್ತಲಿನ ನೆಲದ ತುಂಬ
ಹರವಿದ ಬಿಸಿ ಬಿಸಿ ಬೂದಿ
ಅವಳ ಬೆಚ್ಚನೆಯ ತೋಳುಗಳ
ನೆನಪಿಸುವ ಹುಡುಕಾಟದ ಹಾದಿ.
ಒಂದರ ಮೇಲೊಂದು ಆಶ್ರಯಿಸಿದ
ಸಾಲುಸಾಲು ಕುಳ್ಳುಗಳು
ಬಿಡದ ನಂಟಿನಂಥ ಬಂಧಗಳು
ಪ್ರತಿ ಕುಳ್ಳೂ ಅಪ್ಪಿಕೊಂಡ
ಅವ್ವನ ಅಂಗೈಯ ಗೆರೆಗಳು.
ಇನ್ನೂ ಆರಲಿಲ್ಲವಲ್ಲ ಹಸಿ ಹೆಂಡಿಯ ಘಮ
ಯಾಕೆಂದರೆ ಅದರಲ್ಲಿ ಬೆರೆತು
ಬೇರಿಲ್ಲದಂತೆ ಹನಿ ಹನಿ
ಅವಳ ಬೆವರ ಘಮ
ಮತ್ತು ತೊಟ್ಟಿಕ್ಕಿದ ಕಣ್ಣೀರು
ಎಲ್ಲವೂ ಅವ್ವನ ನೆನಪು.

ಎಲ್ಲಿ ಬಿಚ್ಚಿದರೂ ನೆನಪ ಬುತ್ತಿ

ಸಿಂಗಾರಗೊಂಡ ಸಂಸಾರ ರಥದ ಕಾಲು ಚಕ್ರ.

ಸವೆದು ಸವೆದು ಚಕ್ರದ ತಳ

ಫಳ ಫಳ ಹೊಳೆದಂತೆ ಭಾಸ.

ಚಕ್ರವ್ಯೂಹ ಭೇದಿಸುವ ಬತ್ತದ ಸಾಹಸ.

ಹನಿದಷ್ಟು ನೆಲಕೆ ಬೆವರು

ಮತ್ತೆ ಮತ್ತೆ ಬಾಯಾರುವ ಭುವಿ

ಎಷ್ಟು ನಾಲಿಗೆಗಳು ಇಳೆಯ ಗಂಟಲಿಗೆ?

ದಣಿದಳೇನು ಅವ್ವ?

ಕಸುವುಳ್ಳ ತೋಳುಗಳು
ಸಮುದ್ರದಂಥ ಹೃದಯ
ಅವಳ ಬತ್ತಳಿಕೆಯ ಬರಿದಾಗಿಸದ ಅಸ್ತ್ರಗಳು.
 
ಬಿಸಿಲ ಎದೆಗೆ ಸುರಿದಂಥ ಬೆಂಕಿ ಅಪ್ಪ
ಮಳೆಯ ಕೊಡ ಹೊತ್ತ ಅವ್ವ
ಆತಾಳ-ಪಾತಾಳದಿಂದಲೇ
ಹೆಡೆಯೆತ್ತಿದರೂ ಹಾವು ಹರಿತಗೊಂಡ ಹಲ್ಲು
ತುಂಬಿ ತುಳುಕಿದರೂ ವಿಷದ ಚೀಲ
ಒಡಲ ಕಿಡಿಯಿಂದಲೇ ಹುಟ್ಟಿಸಿದಳು
ಅಮೃತಧಾರೆ
 
 

‍ಲೇಖಕರು avadhi

2 July, 2013

5 Comments

  1. G Venkatesha

    ಒಡಲ ಕಿಡಿಯಿಂದಲೇ ಹುಟ್ಟಿಸಿದಳು ಅಮೃತಧಾರೆ
    Thumba Ishta Aaytu Madam

    • Anonymous

      matte matte kaaduva AVVA… yaavattu berpadale illa…
      manada moneya koneya mele kulitu matte matte haaduva karula danige midida,
      nimage dhanyavaadagalu…
      neela

  2. nagraj harapanahalli

    ಹನಿದಷ್ಟು ನೆಲಕೆ ಬೆವರು
    ಮತ್ತೆ ಮತ್ತೆ ಬಾಯಾರುವ ಭುವಿ
    ಎಷ್ಟು ನಾಲಿಗೆಗಳು ಇಳೆಯ ಗಂಟಲಿಗೆ?
    ದಣಿದಳೇನು ಅವ್ವ?
    ಸೊಗಸಾದ ಸಾಲುಗಳು…..ಥ್ಯಾಂಕ್ಸ
    ಲಂಕೇಶರ ಅವ್ವನ ನಂತರ .. ,.ಮತ್ತೊಮ್ಮೆ ಅವ್ವನ ಕುರಿತು ಬಂದ ಒಳ್ಳೆಯ ಪದ್ಯ

  3. yash

    ಸೊಗಸಾದ ಪದ್ಯ

  4. shashikant banna

    nenapina meravanige .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading