'ಅಪ್ಪ ಇದು ನಿನಗಾಗಿ…’ – ಪೂರ್ಣಿಮಾ ಗಿರೀಶ್

ಪೂರ್ಣಿಮಾ ಗಿರೀಶ್

ನಾನು ಅಪ್ಪ, ಅಮ್ಮನಿಂದ ದೂರ ಇದ್ದು ಕಾಲೇಜು ಓದುತ್ತಿದ್ದ ದಿನಗಳು. “ಪರೀಕ್ಷೆ ಮುಗ್ಸಿ ಊರಿಗ್ ಬಂದ್ಬಿಡು ಪುಟ್ಟಿ, ನಿನ್ನ ನೋಡೋಕ್ ಆಗ್ತಿಲ್ಲ, ಎಷ್ಟು ತೆಳ್ಳಗೆ ಆಗಿದೀಯಾ?, ನೀನು ಹೊತ್ತೊತ್ತಿಗೆ ಊಟ, ತಿಂಡಿ ಮಾಡೋ ತರ ಕಾಣಿಸ್ತಾ ಇಲ್ಲ, ಕರುಳು ಚುರುಕ್ ಅನ್ನತ್ತೆ, ಪರೀಕ್ಷೆ ಮುಗಿದ ದಿನಾನೆ ಬಂದ್ಬಿಡು, ಅಮ್ಮನಿಗೂ ಖುಷಿಯಾಗತ್ತೆ” ತೊಡೆಯ ಮೇಲೆ ತಲೆ ಇರಿಸಿ ಮಲಗಿದ್ದ ನನ್ನ ತಲೆ ಸವರುತ್ತಾ ಹೇಳಿದ ಅಪ್ಪನ ಕಡೆಯ ಮಾತುಗಳು. ೨೧ ವರ್ಷಗಳ ಹಿಂದೆ ಅಪ್ಪ ಆಡಿದ ಈ ಮಾತುಗಳು ನನ್ನ ಕಿವಿಯಲ್ಲಿ ಇಂದಿಗೂ ಝೇಂಕರಿಸುತ್ತವೆ, ಅಣಕಿಸುತ್ತವೆ. ಅದೇ ಕೊನೆಯ ಭೇಟಿ, ಅದಾದ ಎರಡೇ ದಿನಕ್ಕೆ brain hammerage ಆಗಿ ಕೋಮದಲ್ಲಿ ಕೆಲವು ದಿನ ಇದ್ದು, ನಮ್ಮನ್ನೆಲ್ಲ ಅಗಲಿದ ಅಪ್ಪನ ನೆನಪು ಸದಾ ಕಾಡ್ತಾ ಇರತ್ತೆ. ನಾಳೆಗೆ ಅಪ್ಪ ನನ್ನನಗಲಿ ೨೧ ವರ್ಷ, (ನಾನು ಅಪ್ಪನ ವಿಷಯದಲ್ಲಿ ಸ್ವಾರ್ಥಿ, ಅದಕ್ಕೆ ನನ್ನನಗಲಿ ಅಂತ ಹೇಳ್ತಾ ಇದೀನಿ) ಸಾವಿರ ದಿನಗಳು ಉರುಳಿವೆ, ನೆನಪು ಅಚ್ಚಳಿಯದೆ ಉಳಿದಿದೆ.

ಕೆಲವು ನೆನಪುಗಳು ನನ್ನ ನೆನಪಿನ ಪುಟದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಾನು ಚಿಕ್ಕವಳಿದ್ದಾಗ, ಅಪ್ಪ ಕಛೇರಿ ಕೆಲಸ ಮುಗಿಸಿ ಬಂದ ಕೂಡಲೆ ನನ್ನ ಎರಡು ಪುಟ್ಟ ಕೈಗಳನ್ನು ಚಾಚಿ ನಿಲ್ಲುತ್ತಿದ್ದೆ, ಅಪ್ಪ ತನ್ನ ಕಿಸೆಯಿಂದ ತೆಗೆದು ಎಲ್ಲ ಚಿಲ್ಲರೆ ಕಾಸನ್ನು ಅ ಕೈಗಳಲ್ಲಿ ಹಾಕಿ, “ಹೋಗು, ನಿನ್ನ ಗೋಲಕ ತುಂಬಿಸು” ಎನ್ನುತ್ತಿದ್ದ ನೆನಪು, ಅ ಚಿಲ್ಲರೆ ಕಾಸಿನಲ್ಲಿ ಸಿಗುತ್ತಿದ್ದ ಖುಷಿ ಈವತ್ತು ಸಾವಿರ ರೂಪಾಯಿ ಕೊಟ್ಟರೂ ಸಿಗದು. ದುಡ್ದಿಗಿಂತ ಹೆಚ್ಚಾಗಿ ಬಹುಶ: ನನಗೆ ಅಣ್ಣಂದಿರು, ಅಕ್ಕನನ್ನು ಬಿಟ್ಟು ನನಗೆ ಮಾತ್ರ ದುಡ್ದು ಕೊಡುತ್ತಿದ್ದರು ಅಂತ ಜಂಭ ಇರಬಹುದೇನೋ!!!, ಅಪ್ಪನ ಕೈಗೆ ಕಾಫಿ ಲೋಟ ಇತ್ತು, ಅವರು ಕುಡಿಯುವವರೆಗೂ ಅಲ್ಲೇ ನಿಂತು ಕೊನೆ ಗುಟುಕು ನನಗೆ ಎಂದು ಕಾಯುತ್ತಿದ್ದ ಆ ಮುಗ್ಧ ನೆನಪು, ಕೊನೆ ಮಗಳೆಂದು ಹೆಚ್ಚು ಪ್ರೀತಿ ತೋರಿದಾಗ ಅಣ್ಣಂದಿರ ಮುಖದಲ್ಲಿ ಕಾಣುತ್ತಿದ್ದ ಕೋಪದ ನೆನಪು, ಏನೇ ತರಲೆ ಮಾಡಿದರೂ ಅಪ್ಪನ ಸಪೋರ್ಟ್ ನನಗೇನೆ ಅಂತ ಆಣ್ಣಂದಿರೊಡನೆ ಜಗಳಕ್ಕೆ ಇಳಿಯುತ್ತಿದ್ದ ನೆನಪು, ಅಪ್ಪ ಎರಡು-ಮೂರು ದಿನ ಕೆಲಸಕ್ಕೆಂದು ಹೊರಟರೆ, ಅವರ ಬರುವಿಕೆಗೆ ಕಾಯುತ್ತಾ ಅಮ್ಮನಿಗೆ “ನನಗೇಕೊ ಜ್ವರ ಬಂದ ಹಾಗೆ ಆಗಿದೆ, ಅಪ್ಪ ಬಂದ್ರೆ ಜ್ವರ ಹೆದರಿ ಓಡಿ ಹೋಗತ್ತೆ” ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ನೆನಪು. ಪೆಟ್ಟದಾಗ ಸಾಮಾನ್ಯವಾಗಿ ಎಲ್ಲರೂ “ಅಮ್ಮ” ಅಂತ ಉಲಿದರೆ, ನನಗೆ ಪೆಟ್ಟದಾಗ ನನ್ನ ಬಾಯಲ್ಲಿ ಬರುತ್ತಿದ್ದ ಮೊದಲ ಪದ “ಅಪ್ಪ”.. ಒಂದೇ ಎರಡೆ, ಇದನ್ನೆಲ್ಲ ನೆನಪಿಸ್ಕೊಳ್ಳುವಾಗ ಮತ್ತೊಮ್ಮೆ ಬಾಲ್ಯ ಬರಬಾರದೇ ಅನ್ನಿಸುತ್ತದೆ.

ಸವಿಜೇನು ಸಕ್ಕರೆ ಉಣಿಸಿದ
ಮಡಿಲಲ್ಲಿ ಆಸರೆ ನೀಡಿದ
ಅಳುವಾಗ ಪ್ರೀತಿಯಿ೦ದ ಓಲೈಸಿದ
ನಗುವಾಗ ನಗೆಗೆ ಜೊತೆಯಾದ
ದೇವರ ಪ್ರತಿರೂಪವಾದ
ಜನಕ ಜನನಿಗೆ ನನ್ನ ನಮನ
ಹಸಿದಾಗ ಹೊಟ್ಟೆಗೆ ತುತ್ತಿಟ್ಟು
ಮುನಿದಾಗ ಹಣೆಗೆ ಮುತ್ತಿಟ್ಟು
ಬದುಕನ್ನೇ ನಮಗೆ ಮುಡುಪಾಗಿಟ್ಟು
ಮಕ್ಕಳಿಗೆ ಹರ್ಷೋಲ್ಲಾಸ ನೀಡಿದ
ಜನಕ ಜನನಿಗೆ ನನ್ನ ನಮನ
ಬಿದ್ದು ಪೆಟ್ಟಾದಾಗ ನೋವು೦ಡವರು ನೀವು
ಕಣ್ಣ ತು೦ಬ ಕ೦ಬನಿ ಮಿಡಿದವರು ನೀವು
ಮಕ್ಕಳೇ ಪ್ರಾಣವೆ೦ದು ಜೀವ ತೆತ್ತವರು ನೀವು
ಸ೦ತಾನಕ್ಕೆ ಸದಾ ಸುಖ ಬಯಸಿದವರು ನೀವು
ಅರೆಹೊಟ್ಟೆ ತಿ೦ದು ನಮ್ಮ ಹೊಟ್ಟೆ ತು೦ಬಿಸಿದಿರಿ
ಪ್ರೀತಿ, ಸ೦ಬ೦ಧಗಳ ಹಿರಿಮೆ ತಿಳಿಸಿದಿರಿ
ಒಡಹುಟ್ಟಲ್ಲಿ ಮಮತೆಯ ಸ೦ಕೋಲೆ ಗಟ್ಟಿಗೊಳಿಸಿದಿರಿ,
ಗುಣ, ನಡತೆಗಳ ಸಮಾನವಾಗಿ ಧಾರೆಯೆರೆದಿರಿ
ಗುರುವಾಗಿ ನಮಗೆ ನೀಡಿದ ಮಾರ್ಗದರ್ಶನ
ನಿಮ್ಮ ಜೀವನವೇ ಎಲ್ಲರಿಗು ಒ೦ದು ನಿದರ್ಶನ
ನಿಮ್ಮ ಸ್ಮರಣೆಯೆ ನಮಗೆಲ್ಲ ದಾರಿದೀಪ
ನಿಮ್ಮ ನೆನಪೇ ಈ ಬಾಳ ನ೦ದಾದೀಪ
 

‍ಲೇಖಕರು avadhi

July 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಹೌದು ಕಣ್ರೀ ಅಪ್ಪ ಅನ್ನೋ ಪದದ ವ್ಯಾಖ್ಯಾನವೇ ಅದ್ಬುತ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: