ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದಾಗದ ಚಪ್ಪಲಿಗಳು…

ಬಿದಲೋಟಿ ರಂಗನಾಥ್

ಆ ಅನಾಥೆಯ ಸವಕಲು
ಮೈಯ ದಾರಿಯ ಮೇಲೆ ಗುಂಡಿಗಳು ಬಿದ್ದಿವೆ
ಸವೆದವು ಒಂದು ಎರಡು ಮೂರುದಿನಗಳು
ಬದಲಾಗಲಿಲ್ಲ ಅವಳ ಚಲನೆ ಶಕ್ತಿ
ಒಂದಾಗಾಲಿಲ್ಲ ಚಲ್ಲಾಪಿಲ್ಲಿ ಬಿದ್ದ ಚಪ್ಪಲಿಗಳು
ನಿಡಿದಾದ ನಿಟ್ಟುಸಿರಿಡಲಿಲ್ಲ
ಬರಿದಾದ ಸಿಲ್ವಾರ ಬಟ್ಟಲು

ದೀಪಗಳು ಬೆಳಗಲಿಲ್ಲ
ನೋಡುವ ಕಣ್ಣುಗಳಲ್ಲಿ
ಚೆಲ್ಲಲಿಲ್ಲ ನಾಚಿಕೆ ಅವಳ ಮೈಯಕಚ್ಚಿದ
ಮುರಕಲು ಸೀರೆ !

ಮಳೆ ಮೋಡ ಕತ್ತಲು
ಅವಳ ನೋಡಿ ಹಿತ್ತಲ ಸೇರಿದವು
ನಾಯಿನರಿ ಹಾವು ಚೇಳು
ಕಚ್ಚದೆ ತಲೆ ಒದರಿದವು

ಕತ್ತಲು ಬರಿದಾದರು
ಬೆಳಕು ಅವಳ ಕಣ್ಣು ತುಂಬಲಿಲ್ಲ
ಆದರೂ ಅವಳು ನಡೆಯುತ್ತಲೇ ಇದ್ದಳು
ಬದುಕು ಕಾಡಿದ ಹಾದಿಯ ಮೇಲೆ.

ಸಾಂತ್ವಾನಕೆ
ನನ್ನ ಹೆಗಲ ಹಕ್ಕಿಯ ಕೈಯ ಬೆರಳು ತಾಕಿದರೂ
ಬೆಚ್ಚಿ ಬಿದ್ದ ಕಣ್ಣಲ್ಲಿ ಭಾವದ ಬೇಲಿ ತೆರುವಾಗಲಿಲ್ಲ

ನಾನು ನೋಡುತ್ತಲೇ ಇದ್ದರು
ಅವಳಿಗೆ ನಾನು ಕಾಣಲಿಲ್ಲ
ಅವಳು ನೋಡುವಾಗ
ನನ್ನ ಕಣ್ಣುಗಳಲ್ಲಿ
ಚಲನೆಯಿಲ್ಲದ ಮಂದ ಬೆಳಕು !

ಈಗ,
ಭೌತಿಕವಾಗಿ ಅವಳಿಲ್ಲ ಅಲ್ಲಿ
ಆದರೆ ನೇತು ಬಿದ್ದಿದ್ದಾಳೆ ನನ್ನ ಕಣ್ಣಲ್ಲಿ
ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಲೇ ಇದ್ದೇನೆ
ಆ ಜಾಗದ ಮೇಲೆ ಪಾದವೂರಲು
ಈಗಲೂ ಭಯ !

‍ಲೇಖಕರು Admin

20 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading