ರೈನ್ ಕೋಟ್ ಇಲ್ಲದ ನಾಡಿನಲ್ಲಿ..

ಸದಾಶಿವ್ ಸೊರಟೂರು

ಎರಡು ಮೂರು ವರ್ಷಗಳ ಹಿಂದೆ ಸಮುದಾಯದತ್ತ ಶಾಲೆ ಕಾರ್ಯಕ್ರಮದ ನಿಮಿತ್ತ ಒಂದು ಶಾಲೆಗೆ ಭೇಟಿ ನೀಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ಇಬ್ಬರು ಹುಡುಗಿಯರು ಒಂದೇ ತಟ್ಟೆಯಲ್ಲಿ‌ ಬಿಸಿಯೂಟ ಸವಿಯುತ್ತಿದ್ದರು. ಅದನ್ನು ನೋಡಿದ ತಕ್ಷಣ ನನಗೆ ಆ ಹುಡುಗಿಯರ ಬಗ್ಗೆ ಹೆಮ್ಮೆ ಅನಿಸಿತು. ಎಂತಹ ಆತ್ಮೀಯತೆ? ಏನು ಸ್ನೇಹ? ಗೆಳೆತನವೆಂದರೆ ಹೀಗಿರಬೇಕು ಅನಿಸಿತು. ಊಟದ ಬಳಿಕ ಆ ಹುಡುಗಿಯರನ್ನು ಕರೆದು ಒಂದೇ ತಟ್ಟೆಯಲ್ಲಿ ಊಟ ಮಾಡಿರುವುದರ ಬಗ್ಗೆ ಕೇಳಿದೆ. ಅವರು ಅದನ್ನು ಖುಷಿಯಿಂದ ಹೇಳಿಕೊಳ್ಳಬಹುದು ಅಷ್ಟೇ ಅಲ್ಲ ಅದನ್ನು ಸೂಕ್ಷ್ಮವಾಗಿ ಗಮನಿಸಿದ ನನ್ನನ್ನು ಒಂದು ಗೌರವದಿಂದ ಕಾಣಬಹುದು ಅಂದುಕೊಂಡೆ. 

‘ಸರ್ ತಟ್ಟೆ ತೊಳೆಯಲು ಕೂಡ ಇಲ್ಲಿ ನೀರಿಲ್ಲ. ಒಂದೇ ತಟ್ಟೆಯಲ್ಲಿ ತಿಂದ್ರೆ ಇನ್ನೊಂದು ತಟ್ಟೆ ತೊಳೆಯುವ ನೀರನ್ನಾದರೂ ಉಳಿಸಬಹುದು. ಅದಕ್ಕಾಗಿ ಅಷ್ಟೇ!’ ಎಂದರು. 

ನಾನು ಒಂದು ಕ್ಷಣ ಬೆಚ್ಚು ಬಿದ್ದೆ! ಇಲ್ಲಿನ ನೀರಿನ ಸಮಸ್ಯೆ ನನಗೆ ಹೊಸದೇನು ಅಲ್ಲ. ಆದರೆ ತೀರಾ ಸಾಮಾನ್ಯ ಬಳಕೆಗೂ ಬರ ಬಂದದ್ದು ಆಗಲೇ ಅರಿವಾಗಿದ್ದು. ಇದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ದಾರುಣ ಕಥೆ. ಇಲ್ಲಿ ಮಳೆಯೆಂಬುದು ವರ್ಷದಲ್ಲಿ ಒಂದೆರಡು ದಿನದ ಅತಿಥಿ ಅಷ್ಟೇ. ಸೂರ್ಯ ಇಲ್ಲಿಯ ಕಾಯಂ ನೆಂಟ. ಹನಿ ನೀರಿಗೂ ತತ್ವಾರ. ಸಾವಿರ ರೂಪಾಯಿ ಕೊಟ್ಟರೆ ನಿಮಗೆ ಒಂದು ಟ್ಯಾಂಕ್ ನೀರು ಸಿಗುತ್ತದೆ. ಎರಡು ಸಾವಿರ ಅಡಿ ಬೋರು ಕೊರೆದರೆ ನೀರಿ‌ನ ಬದಲು ಬರೀ ಧೂಳು ಏಳುತ್ತದೆ. ರೈತ ಕೊಂಡ ನೀರಿನಿಂದ ಮಗುವಿಗೆ ಹಾಲು ಕುಡಿಸುವ ಕಾಳಜಿಯಂತೆ ಬೆಳೆಗಳಿಗೆ ನೀರು ಉಣಿಸುತ್ತಾನೆ. ಎತ್ತಿನ ಹೊಳೆಯೊ ಮತ್ತೊಂದು ದಶಕಗಳಿಂದಲೂ ಬರೀ ಚರ್ಚೆಯ ವಿಷಯವಷ್ಟೇ! 

ನಾನು ಮಕ್ಕಳಿಗೆ ಮಳೆಯ ನಾಡು ಹೇಗಿರುತ್ತೆ ಅನ್ನುವುದನ್ನು ಮತ್ತೆ ಮತ್ತೆ ವಿವರಿಸಿ ಸೋಲುತ್ತಿದ್ದೆ. ಹೊರಗೆ ಸದಾ ಪ್ರಖರ ಬಿಸಿಲೆ ಇರುವ ಇಲ್ಲಿ ಸದಾ ಮಳೆ ಸುರಿಯುವ ಬಗ್ಗೆ ಅದು ಕೊಡುವ ಅನುಭವದ ಬಗ್ಗೆ ಮಕ್ಕಳಿಗೆ ಅರ್ಥಮಾಡಿಸಲು ಸಾಧ್ಯವೇ ಆಗಿರಲಿಲ್ಲ. 

ಕಳೆದ ಏಪ್ರಿಲ್ ನಿಂದ ಮಳೆಯು ಮಕ್ಕಳಿಗಾದರೂ ಮಳೆನಾಡಿನ ಒಂದು ಅನುಭವ ನೀಡುವ ಮನಸ್ಸು ಮಾಡಿದಂತಿದೆ. ಏಪ್ರಿಲ್ ನಿಂದ ಇಲ್ಲಿಯವರೆಗೂ ಇಲ್ಲಿ ಮಳೆ ಚೆನ್ನಾಗಿಯೇ ಸುರಿದಿದೆ. 

ಕಳೆದ ತಿಂಗಳು ಸಮಿಫೈನಲ್ ಪ್ರವೇಶಿಸಿದ ಮಳೆ, ಕಳೆದ ವಾರದಿಂದ ಫೈನಲ್ ಗೆ ಇಳಿದಂತಿದೆ. ಹಾಲು ತರಕಾರಿ ತರಲು ಒಂದಷ್ಟು ವಿರಾಮ ಕೊಡುವಂತೆ ಒಮ್ಮೆ ನಿಂತು ಸದಾ ಸುರಿಯುತ್ತಲೇ ಇದೆ. ಯಾವಾಗಲೂ ಕ್ರಿಕೆಟ್ ಆಟಕ್ಕೆ ಬಳಕೆಯಾಗುತ್ತಿದ್ದ ಎಲ್ಲಾ ಕೆರೆಗಳು ನೀರಿನಿಂದ ತುಂಬಿ ಕೊಡಿ ಹರಿಯುತ್ತಿವೆ. ಫಾಲ್ಸ್ ಗಳು ಮಲೆನಾಡಿಗೆ ಸ್ವಂತ ಅನ್ನುವ ಸತ್ಯ ಸುಳ್ಳಾಗಿದೆ.

ರೈನ್ ಕೋಟುಗಳೆ ಇಲ್ಲದ ನಾಡು ಇದು. ರೈನ್ ಕೋಟನ್ನು ಯಾವುದು ನಾಡಿನ ಉಡುಗೆ ಎಂಬ ವಿಚಿತ್ರ ಅಪರಿಚಿತೆಯಲ್ಲಿ ನೋಡುತ್ತಿದ್ದ ಜನತೆ ಈಗ ಅಂಗಡಿಯಲ್ಲಿ ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಅಂಗಡಿಯಲ್ಲಿ ಇರುವ ಮೂರು ಮತ್ತೊಂದು ರೈನ್ ಕೋಟ್ ಖಾಲಿಯಾಗಿ ‘ಇಲ್ಲ ಸ್ವಾಮಿ’ ಅನ್ನುತ್ತಿದ್ದಾರೆ. ಬಿಸಿಲ ನಾಡಿನಲ್ಲಿ ರೈನ್ ಕೋಟಗಳ ಮೂಟೆ ಇಟ್ಟುಕೊಳ್ಳವಷ್ಟು ಮೂರ್ಖ ವ್ಯಾಪರಿಗಳಾದರೂ ಎಲ್ಲಿದ್ದಾರೆ?

ಒಗೆದು ಬಟ್ಟೆಗಳು ವಾರವಾದರೂ ಒಳಗುವುದಿಲ್ಲ ಎಂಬುದು ಮೊದಲಬಾರಿಗೆ ಅರಿವಾಗಿದೆ. ನೆನೆದರೆ ಶೀತವಾಗುತ್ತೆ ಅನ್ನುವ ಹೊಸ ಜ್ಞಾನವೊಂದು ಮೂಡಿದೆ. ಮಕ್ಕಳಿಗೆ ಪಾಠದಲ್ಲಿ ಬರುತ್ತಿದ್ದ ಮಳೆಯ ನಾಡು ಅನ್ನುವ ಪದ ಅಗತ್ಯಕ್ಕಿಂತ ಹೆಚ್ಚೆ ಅರ್ಥವಾಗಿದೆ. ರಸ್ತೆಯ ಮೇಲೆ ಬರೀ ಬಿಸಿಲುಗುದರೆ ನೋಡಿ ಬರಗೆಟ್ಟಿದ ಕಣ್ಣುಗಳು ಈಗ ಬಣ್ಣ ಬಣ್ಣದ ಹೂವಿನ ಛತ್ರಿಗಳನ್ನು ನೋಡುತ್ತಿವೆ. ಕಣ್ಣಿಗೂ ತಂಪು ಮನಸ್ಸಿಗೂ ತಂಪು ಅಷ್ಟೇ. ದೇಹವಂತೂ ಥಂಡಿಯಿಂದ ತಂಪು ತಂಪು. 

ಕೆನಡಾದಲ್ಲಿರುವ ಗೆಳೆಯನಿಗೆ ನಿನ್ನೆ ರಾತ್ರಿಯೇ ‘ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಎರಡು ದಿನ ಮಳೆಯ ರಜೆ ಗುರು’ ಅಂತ ಮಸೇಜ್ ಹಾಕಿದ್ದೆ. ಅವನು ‘ಇನ್ನೊಂದು ಜೋಕ್ ಕಳ್ಸು’ ಅಂದ. ಇಲ್ಲ ಮಾರಾಯ ಇದು ಸತ್ಯ ಅಂತ ಸರ್ಕಾರಿ ಆದೇಶ ಕಳುಹಿಸಿದೆ. ಅವನು ಆಶ್ಚರ್ಯಗೊಂಡ. ಇಲ್ಲಿಗೂ ಒಂದಿನ ಮಳೆಯ ರಜೆ ಬರುತ್ತೆ ಅನ್ನೋದು ಕನಸಿನಲ್ಲೂ ಊಹಿಸದ ಮ್ಯಾಟರ್ರು ಅಂದ. ಪ್ರಕೃತಿ ಮನಸ್ಸು ಮಾಡಿದರೆ ಏನಾದ್ರೂ ಆಗಬಹುದು ಅಂತ ವೇದಾಂತಿಯಂತೆ ಮಾತಾಡಿದೆ. 

ಹೊರಗೆ ವಾರದಿಂದ ಹಿಡಿದ ಮಳೆ ಸುರಿಯುತ್ತಿದೆ. ಟೋಪಿ ಸ್ವೆಟರ್ ಹಾಕಿಕೊಂಡ ಮಕ್ಕಳು ಗಗನಯಾನಿಗಳಂತೆ ಕಾಣುತ್ತಿದ್ದಾರೆ. ಬೆಳಗ್ಗೆ ಎಂಟಾದರೂ ಮಕ್ಕಳು ನಿದ್ದೆಯಿಂದ ಏಳುತ್ತಿಲ್ಲ. ಹಿತವಾದ ಚಳಿ ಬೆಚ್ಚನೆಯ ಹೊದಿಕೆಯೊಂದಿಗೆ ಆಪ್ತವಾಗಿದೆ. ಮೂರು ದಿನಗಳ ನಿರಂತರ ರಜೆ. ಕಿಟಕಿಯ ಬಳಿ ಕೂತು ಕಾಫಿ ಕುಡಿಯುತ್ತಾ, ಸೊಗಸಾಗಿ ಸುರಿಯುವ ಮಳೆಯನ್ನು ನೋಡುತ್ತಾ ಜಯಂತ್ ಕಾಯ್ಕಿಣಿ ಹಾಡುಗಳನ್ನು ಕೇಳುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹತ್ತುತ್ತದೆ. 

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Raghavendra Rao C R

    ಫ್ಲೋರೈಡ್ ಅಂಶ ಕಡಿಮೆಗೊಳ್ಳುವ ಗುಣವೇನಾದರೂ ಇದೆಯಾ ಈ ಬಾರಿಯ ಅಪರೂಪದ ಮಳೆಯ ಸಾಲು ಕೋ.ಚಿ. ಜಿಲ್ಲೆಗಳಲ್ಲಿ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: