ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ – ಚಿತ್ರದ ಚಲನೆಯ ಕರುಳು…

ಬಿದಲೋಟಿ ರಂಗನಾಥ್

ಅಜ್ಜಿ ಬಿಟ್ಟು ಹೋದ ಹೆಜ್ಜೆ ಮುಟ್ಟಿದೆ
ಕೈ ತುಂಬಿದ ಬೆಳಕಿನ ಮಣಿಗಳು
ಅವಳು ಕುಟ್ಟಿದ ಬೆತ್ತವನು ನೋಡಿದೆ
ಚಲನೆಯ ಕೈಗಳು ಮೂಡಿ ನಕ್ಕಂತಾಯಿತು

ಅಜ್ಜಿ ಕುಂತು ಎದ್ದು ಆಡಿ
ಮನೆಯ ತುಂಬಿದ ಹೆಜ್ಜೆಗಳು
ಅವಳು ಬೇಯಿಸಿದ ಹಿಟ್ಟಿನ ಘಮಲು
ಕಾಡಿಗೂ ಹಬ್ಬಿ ಮೂಗರಳಿಸಿದ ಹಕ್ಕಿ ಪಕ್ಷಿಗಳು
ನಾಯಿ ನಿಂತ ನೆಲದ ಮೇಲೂ
ಚಲ್ಲಿದ ಬೆಳಕು

ಬದುಕಿನ ಬಂಡಿಗೆ ಚಕ್ರವಾದ ಅಜ್ಜಿ
ಪೊರೆ ಬಂದು ನೆಲ ತಡಕುವಾಗ
ಗುಡಾಣದಲಿ ತುಂಬಿದ್ದ ಸೇರು ರಾಗಿ
ನೆಲವ ಅಪ್ಪಿದ ಕನಸು

ಅಪ್ಪನಿಟ್ಟ ನೇಗಿಲ ಕುಳ
ಮಗನ ಕೈಯ ಮಚ್ಚಾಗಿದೆ
ಅಜ್ಜಿ ಕಟ್ಟಿದ್ದ ನೆಲುವಿನ ಮೇಲೆ
ಬೆಕ್ಕೊಂದು ಉಚ್ಚೆ ಹೊಯ್ಯುತ್ತಿದೆ

ಅಜ್ಜಿ ಗುಡಿಸಿ ಸಾರಿಸಿ
ರಂಗೋಲಿ ಬಿಟ್ಟು
ಬಾಳಿ ಬದುಕಿದ ನಿಟ್ಟುಸಿರ ಹಟ್ಟಿಯ ಮೇಲೆ
ಅಪ್ಪ ಕಾವಲು ನಾಯಿ ಕಟ್ಟಿದ್ದಾನೆ.!

ಕುಂಚವಿಡಿದ ಮೊಮ್ಮೊಗಳು
ಖಾಲಿ ಮನೆಯ ಚಿತ್ರದ ಗೆರೆಯ ಮೇಲೆ
ಅವಳೇ ನಡೆಯುತ್ತಿರುವ ಚಿತ್ರ ಬಿಡಿಸಿ
ಬಣ್ಣ ತುಂಬುತ್ತಿದ್ದಾಳೆ
ಚಿತ್ರದ ತಲೆಯ ಮೇಲೆ ಹೆಣ್ಣುನವಿಲು ರೆಕ್ಕೆ ಬಿಚ್ಚಿದೆ.!

‍ಲೇಖಕರು Admin

22 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading