ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಕ್ಕುಗಳು ಎಂದಿಗೂ ಬಟವಾಡೆಯಾಗುವುದೇ ಇಲ್ಲ!..

ಬಟವಾಡೆಯಾಗದ ಬಿಕ್ಕುಗಳು
chaitrika hegade    ಚೈತ್ರಿಕಾ ಶ್ರೀಧರ್ ಹೆಗಡೆ
         ಕಂಚೀಮನೆ

cd3e72dd89bcacbcd353fdfc5f220bc8ಬಿಸಿಲುಮಚ್ಚಿನೆದೆ ಪೂರ
ಪಾಚಿಕಟ್ಟಿ ಪುಳಕವಿಡೊ ಮಳೆಗೆ,
ಮುಂಗುರಳ ಕಂತೆಯನೊಡ್ಡಿ
ಬಟವಾಡೆಯಾಗದ ಬಿಕ್ಕುಗಳನೆಣಿಸೆಂದೆ,

ಲೆಕ್ಕ ಗೊತ್ತಿಲ್ಲದ ಮಳೆ
ಹನಿ ಹನಿ ಸಾಲುಗಳ ಗೀಚಿತಷ್ಟೆ!

ಗೆದ್ದಲ ಗೋರಿಯಲಿ
ಎಕ್ಕದೆಲೆಗಳು ಆಡಿ ಓಡಿದವು,
ಮುಗಿಲ ನೀಲಿ ದೋಚಿ
ಬರೆದ ಪತ್ರವೆಲ್ಲ ನೆಂದವು,
ಅಲ್ಲಿ ಏದುಸಿರು-ಇಲ್ಲಿ ನೀರೊಸರು;

ಕಡಕ್ಕೆ ತಂದ ಮೋಡ ಕಡೆಗೂ
ಕರಗಿ ಖರ್ಚಾಗುವಾಗ,
ಬಾಕಿ ಉಳಿದ ನನ್ನ ವಸೂಲಿ
ಮಾಡು ಬಾ…

ಈ ನೋವುಗಳ ಹರಾಜು ಕೂಗಿ
ಕನಸ ಮಾರಿಕೊಳುವಾಗ,
ಮಳೆಯೂ, ಬಿಸಿಲುಮಚ್ಚಿನ ಪಾಚಿಯೂ,
ಮುಗಿಲ ದುಖಾನಲ್ಲಿ
ಶಾಯಿ ಕೊಳ್ಳುತ್ತಿವೆ,
ಎಕ್ಕದೆಲೆಗಳೇ ಹಾಳೆಯಾಗುತ್ತಿವೆ…
ಪತ್ರಬರೆಯೋಣ ಎಂದರೆ
ನೀ ಗುಳೆ ಹೋದ ಊರಿನ
ವಿಳಾಸ ಗೊತ್ತಿಲ್ಲ;

ಹೀಗೆ ನಿನ್ನ ನೆನಪಲ್ಲಿ
ಜಿಮುರಿ,ಕಮರಿ ಕಂತೆಯಾಗುವ
ಬಿಕ್ಕುಗಳು ಎಂದಿಗೂ
ಬಟವಾಡೆಯಾಗುವುದೇ ಇಲ್ಲ!                            

‍ಲೇಖಕರು Admin

2 May, 2016

4 Comments

  1. smitha

    Chennagide

  2. ಮಹೇಶ್ವರಿ.ಯು

    ಭಾವ,ಭಾಷೆ ಹಾಗೂ ಕಲ್ಪನೆಯ ಸೊಗಸು ಮೇಳೈಸಿದ ಸುಂದರ ಕವಿತೆ. ಅಭಿನಂದನೆಗಳು

  3. ಆನಂದ್ ಋಗ್ವೇದಿ

    ಒಳ್ಳೆಯ ಕವಿತೆ

  4. Mmshaik

    Very very nice poem mam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading