ಎಲ್ಲಾ ಅಮ್ಮಂದಿರ ಹಾಡು-ಪಾಡು
ಡಾ. ಪಲ್ಲವಿ ಹೆಗಡೆ
ಪುಸ್ತಕ: ಬಾಳಂತಿ ಪುರಾಣ
ಲೇಖಕಿ: ಶ್ರೀಕಲಾ ಡಿ ಎಸ್
ಪ್ರಕಾಶನ: ಬಹುರೂಪಿ
ಸರಳವಲ್ಲದ ಬಾಳಂತನದ ಅನುಭವಗಳು, ಅಮ್ಮನ ತುಡಿತಗಳು, ಕೌತುಕಗಳು, ಕೆಲವು ವೈದ್ಯಕೀಯ ನೋಟಗಳು ಶ್ರೀಕಲಾ ಅವರ ಲೇಖನಿಯಲ್ಲಿ ಮೊದಲ ಸಂಕಲನದಲ್ಲೇ ಬಾಳಂತನದ ಕಥನಗಳಾಗಿ ಅರಳಿವೆ. ಇವುಗಳು ಕೃತಕಲೇಪವಿಲ್ಲದೆ ಯಾರನ್ನಾದರೂ ಓದಲು ಪ್ರೇರೇಪಿಸುತ್ತವೆ.
ಸಾಗರಸೀಮೆಯ ಪಾರಂಪರಿಕ ಬಾಳಂತನದ ಆರೈಕೆಯನ್ನು, ಹಿರಿಯರ ನುಡಿ-ನೋಟಗಳನ್ನು ದಾಖಲಿಸುತ್ತಾ ತಮ್ಮ ತುಂಟತನ, ಚುರುಕುತನ, ಸಂಶಯಗಳಿಂದ ಅವುಗಳನ್ನು ಪ್ರಶ್ನಿಸುತ್ತಾ, ಉತ್ತರ ಪಡೆಯಲೆತ್ನಿಸುತ್ತಾ, ಅಮ್ಮನ ಜವಾಬ್ದಾರಿ, ಬಾಧ್ಯತೆಗಳ ಜೊತೆಗೆ ಇಪ್ಪತ್ತು ಬರೆಹಗಳು ಸರಾಗವಾಗಿ ಬಿಚ್ಚಿಕೊಳ್ಳುತ್ತವೆ.
ತೊಂಬತ್ತು ಪುಟಗಳ ಸಂಕಲನವನ್ನು ಬಿಡದೆ ಓದಿ ಮುಗಿಸಿಬಿಡಬಹುದು. ವಿಷಯದ ನಿರೂಪಣೆಯ ಲಾಲಿತ್ಯ ಮತ್ತು ವಿನ್ಯಾಸ ಅಷ್ಟು ಸುಲಭವಾಗಿ ಗ್ರಹಿಕೆಗೆ ಸಿಗುತ್ತದೆ. ಹಾಗಾಗಿ ಈ ಪುಸ್ತಕ ಎಲ್ಲರನ್ನೂ ಓದಲು ಸೆಳೆಯುತ್ತದೆ.
ಪ್ರಸವದ ಹಿನ್ನೆಲೆಯಿಂದ ಶುರುವಾಗುವ ಅನುಭವಕಥನ ಕೊನೆಗೊಳ್ಳುವುದು, ಮರೆಯಾಗುತ್ತಿರುವ ಪರಂಪರೆ, ಅಜ್ಜಿಯ ಆರೈಕೆ ಮತ್ತು ಮಾತುಗಳ ಸಂಗ್ರಹದಲ್ಲಿ.
ಅನುಭವಕಥನವೆಂಬ ಕಾರಣಕ್ಕೆ ಹಲವು ಬರೆಹಗಳು ಆಪ್ತವಾಗಬಹುದು ಅಥವಾ ಏಕತಾನವೂ ಎನಿಸಬಹುದು. ಈ ಮಿತಿಯಾಚೆ ನಿಂತಿದೆ ಈ ಬರೆಹಗಳು.
ಸಂಕಲನದ ಕಥನಗಳಲ್ಲಿ ಪ್ರಾದೇಶಿಕ ಪರಂಪರೆಯೊಂದರ, ಜನಜೀವನದ, ವಿಶಿಷ್ಟ ದಿನಚರಿಯ ಮಾಹಿತಿಯಿದೆ. ಹಾಗಾಗಿ ಇಲ್ಲಿನ ಬಾಣಂತನದ ಕಥನಗಳಿಗೆ ಸಾಂಸ್ಕೃತಿಕ ಮಹತ್ವವಿದೆ.
ಈ ಬರೆಹಗಳ ಇನ್ನೊಂದು ಅನನ್ಯತೆಯೆಂದರೆ ಬಾಣಂತನದ ಆರೈಕೆಗಳ, ಹಂತಗಳ ನೋಟವನ್ನು ತಮ್ಮದೇ ಅರಿವಿನಲ್ಲಿ ವಿವರಿಸಿರುವುದು. ಅಪ್ಪಟ ಮಲೆನಾಡಿನ ಸಾಗರಸೀಮೆಯ ವಿಶಿಷ್ಟ ತಿನಿಸು, ಲೇಹ್ಯ, ಕಷಾಯ, ಅಭ್ಯಂಜನ, ಸ್ನಾನ, ಬೆವರು ತರಿಸುವ ವಿಧಾನ, ಆಹಾರ, ವಿಹಾರಗಳ ವರ್ಣನೆ ಓದುಗರಿಗೆ ಮಾಹಿತಿಯನ್ನೂ ಒದಗಿಸುತ್ತವೆ. ಸಾಗರದ ಸುತ್ತಮುತ್ತಲಿನ ಸ್ತ್ರೀಯರಿಗೆ, ಅವರ ಜೊತೆಗೆ ನಿಂತ ಪುರಷರಿಗೂ. ಬೇರೆ ಪ್ರದೇಶದವರಿಗೆ ಇಲ್ಲಿನ ಬರೆಹಗಳು ಪ್ರೇರಕವಾದೀತು. ಒಬ್ಬ ಅಮ್ಮನ ಲವಲವಿಕೆಯ, ಧನಾತ್ಮಕ ಅನುಭವದ ಮಾತುಗಳನ್ನು ಆಲಿಸುವಂತಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ಪ್ರದೇಶದ ಜನಸಮೂಹದಲ್ಲಿ, ಪ್ರಸವದ ನಂತರದ ಆರೈಕೆಯು ಬೇರೆ. ಮತ್ತು ಈ ಭಿನ್ನತೆಗೆ ಹಲವು ಆಯಾಮಗಳ ವೈದ್ಯಕೀಯ ಕಾರಣಗಳೂ ಗೋಚರಿಸುತ್ತವೆ.
‘ಸೂತಿಕೋಪಚಾರ’ವು ಮಲ್ಟಿಟಾಸ್ಕಿಂಗ್. ಬಾಳಂತಿಯ ಆರೈಕೆ ಗರ್ಭಾಶಯದ ಶುದ್ಧಿ, ಗರ್ಭಿಣಿಯಾಗಿದ್ದಾಗ ದೇಹದಲ್ಲಾದ ಬದಲಾವಣೆಯನ್ನು ಮತ್ತೆ ಸ್ವಸ್ಥಿತಿಗೆ ತರುವುದು, ಎದೆಹಾಲಿನ ಗುಣ-ಪ್ರಮಾಣ ಕಾಪಾಡುವುದು ಎಲ್ಲವನ್ನೂ ಏಕಕಾಲಕ್ಕೆ ಸರಿತೂಗಿಸುವಂತೆ ಇರಬೇಕಾಗುತ್ತದೆ. ಮೊದಲ ೪೫ ದಿನಗಳು ಒಂದು ಹಂತ. ನಂತರ ಮಗುವಿಗೆ ಹಲ್ಲುಮೂಡುವವರೆಗೆ ಮತ್ತೊಂದು ಹಂತ. ಮೊದಲ ಒಂದೂವರೆ ತಿಂಗಳು ಹದಿನೈದು ದಿನಗಳಿಗೊಮ್ಮೆ ಸೂತಿಕಾಚರ್ಯೆ ಬದಲಾಗುತ್ತದೆ. ವೈವಿಧ್ಯಮಯ ಆರೈಕೆಗಳ ಒಟ್ಟು ಫಲಿತಾಂಶ ಸ್ತ್ರೀಯ ಮರುಹುಟ್ಟು ಮತ್ತು ಸದ್ಯೋಜಾತ ಶಿಶುವಿನ ದೈಹಿಕ, ಮಾನಸಿಕ, ಐಂದ್ರಿಕ ಬೆಳವಣಿಗೆ. ತಾಯಿ-ಶಿಶುವಿನ ಮುಂಬರುವ ದಿನಗಳ ಸ್ವಾಸ್ಥ್ಯ ಈ ದಿನಗಳ ಆರೈಕೆಯಿಂದಲೇ ನಿರ್ಧಾರವಾಗುತ್ತದೆ. ಹಾಗಾಗಿ ಪ್ರಸವದ ನಂತರದ ದಿನಗಳು ಹಲವು ದೃಷ್ಟಿಯಿಂದ ಸೂಕ್ಷ್ಮ.
ಭಾರತಕ್ಕೆ ಅಲೋಪತಿ ವೈದ್ಯಕೀಯ ಕಾಲಿಟ್ಟ ನಂತರ ಪಾರಂಪರಿಕ ಆರೈಕೆಗಳು ಕಾಲಕ್ರಮೇಣ ನಶಿಸುತ್ತಿರುವುದು ವಿದಿತ. ಇದಕ್ಕೂ ಮೊದಲು ನಾಟೀ, ಆಯುರ್ವೇದದ ಗ್ರಂಥಾಧ್ಯಯನವುಳ್ಳ ವೈದ್ಯರು, ಸೂಲಗಿತ್ತಿ, ಮನೆಯ ಹಿರಿಯರು, ಅನುಭವಿ ಸ್ತ್ರೀಯರ ಮಾರ್ಗದರ್ಶನದಲ್ಲಿ ನಡೆಯುತ್ತಿತ್ತು. ಕೆಲವು ಆರೈಕೆಗಳು ಆಯುರ್ವೇದದ ಗ್ರಂಥಗಳು ಹೇಳುವಂತೆ ಇವೆ ಮತ್ತೂ ಕೆಲವು ಜನಜೀವನವು ತಾವೇ ಕಂಡುಕೊಂಡ ತತ್ ಕ್ಷಣದ ಸುಲಭ ವಿಧಾನ. ಆದ್ದರಿಂದ ಒಂದೇ ತೆರನಾದ ವಿಧಾನಗಳು ಎಲ್ಲರಿಗೂ ಅನ್ವಯಿಸಲು ಹೊರಟಾಗ ಆರೈಕೆಗಳ ನೆಪದಲ್ಲಿ ತೊಂದರೆದಾಯಕವೂ ಆಗಬಹುದು.
ಉದಾಹರಣೆಗೆ ಇಲ್ಲಿ ಬೆವರು ತರಿಸುವ ಒಂದು ವಿಧಾನವನ್ನು ವಿವರಿಸಿದ್ದಾರೆ. ಮಲೆನಾಡಿನಲ್ಲಿ ವ್ಯಾಪಾಕವಾಗಿ ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಸಮುದ್ರತೀರದಲ್ಲಿ, ಉಷ್ಣವಲಯದಲ್ಲಿ ಬಾಣಂತಿ ಸ್ತ್ರೀಯರಿಗೆ ಈ ವಿಧಾನ ಹೊಂದುವುದಿಲ್ಲ. ಮುಂದೆ ಸಂಕಲನದಲ್ಲಿ ತಾವು ಅನುಭವಿಸಿದ ಏನಲ್ ಫಿಶರ್ ತೊಂದರೆಯನ್ನು ವಿವರಿಸಿದ್ದಾರೆ. ವಾಸ್ತವದಲ್ಲಿ ಬೆವರಿಸುವ ವಿಧಾನಕ್ಕೂ, ಸಮಯಕ್ಕೂ, ಪ್ರಮಾಣಕ್ಕೂ ಗುದದ ಬಾವು, ಗಾಯ, ಹುಣ್ಣು, ಮಲಬದ್ಧತೆಗೆ ನೇರವಾಗಿ ಸಂಬಂಧವಿದೆ. ಈ ಸಂಕಲನ ಓದುತ್ತಾ ಆಯುರ್ವೇದ ವೈದ್ಯಳಾಗಿ ನಾನು ಈ ಎಲ್ಲಾ ವಿಷಯಗಳನ್ನು ಸಮನ್ವಯಿಸಿದಾಗ ಇದು ಮನವರಿಕೆಯಾಯಿತು. ಬೆವರು ತರಿಸುವ ವಿಧಾನ, ‘ಮೆಣಸಿ’ನ ವಿಧಾನ, ಬಳಸುತ್ತಿದ್ದ ಔಷಧಗಳ ಸ್ವರೂಪ ಬದಲಾಯಿಸಬೇಕಿತ್ತು. ಏನಲ್ ಫಿಶರ್ ಆಗಿತ್ತು ಎಂಬುದೇ ಆಹಾರ ಮತ್ತು ಬೇರೆ ಆರೈಕೆಯ ಅಸಮತೋಲನವಾಗಿದೆ ಎಂಬುದರ ಸೂಚಕ. ಬೆವರಿಸುವುದನ್ನು ‘ಸ್ವೇದನ’ ಎನ್ನಲಾಗುತ್ತದೆ. ಇದನ್ನು ಎರಡು ಬಗೆಯಲ್ಲಿ ಮಾಡಬಹುದು. ಅಗ್ನಿಸ್ವೇದ, ಅನಗ್ನಿ ಸ್ವೇದ. ಈ ಸಂಕಲನದಲ್ಲಿ ಅಗ್ನಿಸ್ವೇದದ ವಿಧಾನವನ್ನು ಬಳಸಲಾಗಿದೆ. ಅನಗ್ನಿ ಸ್ವೇದದ ಪ್ರಯೋಗದಿಂದ ತೊಂದರೆಯನ್ನು ತಪ್ಪಿಸಬಹುದಿತ್ತೇನೊ.
‘ಕರ್ಣಭೇದನ’ ಪದವನ್ನು ಕಿವಿಚುಚ್ಚುವುದಕ್ಕೆ ಬಳಸಲಾಗಿದೆ. ಭೇದನ ಪದಕ್ಕೆ ಒಡೆಯುವುದು, ಹರಿಯುವುದು ಅರ್ಥ. ‘ಕರ್ಣವ್ಯಧನ’ ಪದವನ್ನು ಆಯುರ್ವೇದ ಗ್ರಂಥಗಳು ಬಳಸುತ್ತವೆ. ಚುಚ್ಚುವುದಕ್ಕೆ ಸಂಸ್ಕೃತದಲ್ಲಿ ‘ವ್ಯಧನ’ ಎನ್ನಲಾಗುತ್ತದೆ. ಅದರ ಮಹತ್ವ, ಎಲ್ಲಿ, ಹೇಗೆ, ಯಾವುದರಲ್ಲಿ, ಯಾವಾಗ ಚುಚ್ಚಬೇಕು, ತಪ್ಪಿದರೆ ಅನಾಹುತವೇನು, ಅಂತಹ ತೊಂದರೆಗಳಿಗೆ ಚಿಕಿತ್ಸೆಯೇನು ಹೀಗೆ ಅಧ್ಯಾಯವೊಂದನ್ನು ‘ಕರ್ಣವ್ಯಧನ’ಕ್ಕಾಗಿ ಆಚಾರ್ಯ ಸುಶ್ರುತರು ಮೀಸಲಾಗಿಟ್ಟಿದ್ದಾರೆ. ಆದರೆ, ಸಂಕಲನದಲ್ಲಿ ಇಂತಹ ವಿವರಗಳಿಲ್ಲದಿದ್ದರೂ, ಈ ಬಗ್ಗೆ ಸಣ್ಣ ಮಾಹಿತಿಯನ್ನು ನೀಡಿದ್ದಾರೆ. ಈ ಚಿಕ್ಕ ಚಿಕ್ಕ ವಿವರಗಳ ಅಧ್ಯಾಯಗಳು ಟಿಪ್ಪಣಿಯಂತೆ ಓದಲು ಅನುಕೂಲಕರವಾಗಿವೆ.
ಬೇರು, ಎಲೆ, ರಸ, ಲೇಹ್ಯ, ಕಷಾಯಗಳನ್ನು ದಾಖಲಿಸಿದ್ದರಿಂದ ಆಯುರ್ವೇದದ ಬಾಳಂತನ ಎಂಬ ಹಣೆಪಟ್ಟಿ ಹಚ್ಚುವಂತೆಯೂ ಇಲ್ಲ. ಈ ಮಟ್ಟಿಗೆ ಸಂಕಲನ ಎಲ್ಲೂ ನಿರ್ಧಾರಿತ ದನಿಯಲ್ಲಿ, ಇದೆಲ್ಲವೂ ಎಲ್ಲರಿಗೂ ಹೀಗೇ ಒಳ್ಳೆಯದು, ಸರಿ, ಹೊಂದುತ್ತದೆ ಎಂದೂ ಹೇಳಿಲ್ಲ. ಪಾರದರ್ಶಕ ಬರೆಹಗಳು ಅನುಭವವನ್ನು ಮಾತ್ರ ದಾಖಲಿಸಿ ಕೆಲವೆಡೆ ಪಟ್ಟ ಪಾಡು, ವಹಿಸಬೇಕಾದ ಎಚ್ಚರಿಕೆಗಳನ್ನೂ ತಮ್ಮದೇ ಮಿತಿಯಲ್ಲಿ ಶ್ರೀಕಲಾ ಅವರು ವಿವರಿಸಿದ್ದಾರೆ.
ವೈದ್ಯಕೀಯ ಲೇಖನಗಳಿವೆ. ಅಂಕಣಗಳೂ ಸಹ ಬಂದಿವೆ. ಆದರೆ, ಕನ್ನಡಸಾಹಿತ್ಯದಲ್ಲಿ ಪ್ರಸವದ ನಂತರದ ಅನುಭವವನ್ನು ಪುಸ್ತಕದ ರೂಪದಲ್ಲಿ ದಾಖಲಿಸಿದ ಮೊದಲ ಅಮ್ಮ ಶ್ರೀಕಲಾರೇ ಇರಬಹುದು.
ಹೀಗೆ ಒಂದು ಅಪರೂಪದ ಕೃತಿಯಿದು.
ಧನ್ಯವಾದ ಶ್ರೀಕಲಾ ಡಿ. ಎಸ್ ಮತ್ತು “ಬಹುರೂಪಿ”.
ವಿಶೇಷವಾಗಿ ಜಿ. ಎನ್. ಮೋಹನ್ ಸರ್ ನಿಮಗೆ ಕೃತಜ್ಞತೆ.
ಪುಸ್ತಕ ಕೊಳ್ಳಲು-
https://bahuroopi.in/product/baalanti-purana-%e0%b2%ac%e0%b2%be%e0%b2%b3%e0%b2%82%e0%b2%a4%e0%b2%bf-%e0%b2%aa%e0%b3%81%e0%b2%b0%e0%b2%be%e0%b2%a3/
0 ಪ್ರತಿಕ್ರಿಯೆಗಳು