ಹಾ… ನೇಪಾಳ!

ನನ್ನ ನೇಪಾಳದ ಯಾತ್ರೆ

ಟಿ ಎಸ್ ಶ್ರವಣಕುಮಾರಿ 

ನನ್ನನ್ನು ಒಂದು ಐದಾರು ವರ್ಷ ಹಿಂದೆ ನೋಡಿದ್ದವರಿಗಾಗಲೀ ಅಥವಾ ಈಗ ನೋಡುತ್ತಿರುವವರಿಗಾಗಲೀ ನನ್ನ ನೇಪಾಳದ ಯಾತ್ರೆ ಯಾವುದೇ ಉಲ್ಲೇಖನೀಯ ಸಂಗತಿ ಎನ್ನಿಸುವುದಿಲ್ಲ. ಸುಮಾರು ವರ್ಷಗಳಿಂದ ಸಂಧಿವಾತದಿಂದ ಬಳಲುತ್ತಾ, ದಿನದಿನಕ್ಕೆ ಕಡಿಮೆಯಾಗತೊಡಗಿದ ಚಲನವಲನ, ಹೆಚ್ಚುತ್ತಿದ್ದ ನೋವಿನ ತೀವ್ರತೆ ಎರಡು ವರ್ಷಗಳ ಹಿಂದೆ ಆಧಾರವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ತಳ್ಳಿದ್ದು, ವಾಕರ್‌ ಸಹಾಯದಿಂದ ಮನೆ ಮಟ್ಟಿಗೆ ಓಡಾಡುವ ಸ್ಥಿತಿ ನನ್ನದಾಗಿತ್ತು. ಕಾಲಿಗೆ ಕೃತಕ ಮಂಡಿಯನ್ನು ಅಳವಡಿಸದೇ ಹೋದಲ್ಲಿ ನಾನು ಮತ್ತೆ ಈ ಜನ್ಮದಲ್ಲಿ ನಡೆಯಲಾರೆನೆಂಬ ವೈದ್ಯರೊಬ್ಬರ ಹೇಳಿಕೆ ನನ್ನನ್ನು ಮಾನಸಿಕವಾಗಿ ಆಘಾತಗೊಳಿಸಿತ್ತು. ವಾಕರ್‌ನಿಂದ ನಾನು ಸಧ್ಯದಲ್ಲೇ ಗಾಲಿಕುರ್ಚಿಯ ಸ್ಥಿತಿಗೆ ತಲುಪುವೆನೆಂಬ ಅರಿವು ನನ್ನನ್ನು ತೀವ್ರವಾಗಿ ಚಿಂತೆಗೀಡುಮಾಡಿತ್ತು. ಈ ಪರಿಸ್ಥಿತಿಯಲ್ಲಿ ನನ್ನವರು “ನೇಪಾಳಕ್ಕೆ ಒಂದ್ಸಲ ಹೋಗಿಬರ್ಬೇಕು” ಎಂಬ ಆಸೆ ವ್ಯಕ್ತಪಡಿಸಿದಾಗ “ವಿಮಾನದಲ್ಲಾದರೆ ನಾನು ತಯಾರು” ಎಂದೆ. ಸಂಪೂರ್ಣವಾಗಿ ಗಾಲಿಕುರ್ಚಿಯ ಸ್ಥಿತಿಗೆ ತಲುಪುವ ಮೊದಲು ಈ ಪ್ರಯಾಣವನ್ನು ಮಾಡಿಬಿಡಬೇಕು ಎನ್ನುವ ಹಂಬಲ ನನ್ನದಾಗಿತ್ತು. ನನ್ನಿಂದ ಇತರರಿಗೆ ತೊಂದರೆಯಾಗುತ್ತೇನೋ ಎನ್ನುವ ಅಳುಕು ಒಂದೆಡೆ ಬಾಧಿಸುತ್ತಿದ್ದರೂ, ಹೋಗದಿದ್ದರೆ ಅವರ ಪ್ರಯಾಣದ ಅವಕಾಶವನ್ನೂ ತಪ್ಪಿಸುತ್ತೇನೆ ಎನ್ನುವ ಯೋಚನೆ ಇನ್ನೊಂದು ಕಡೆ. ಇತರರ ಅವಕಾಶವನ್ನು ತಪ್ಪಿಸಬಾರದು ಎನ್ನುವ ಭಾವವೇ ಗೆದ್ದು ಪ್ರಯಾಣದ ಸಿದ್ಧತೆಗಳು ನಡೆದವು. ಆ ಸ್ಥಿತಿಯಲ್ಲಿ ʻನಾನು ನೇಪಾಳಕ್ಕೆ ಹೋಗುತ್ತಿದ್ದೇನೆʼ ಎಂದು ಪರಿಚಿತರಲ್ಲಿ, ಸ್ನೇಹಿತರಲ್ಲಿ ಹೇಳಿದಾಗ ತಮಾಷೆ ಮಾಡುತ್ತಿದ್ದೇನೆಂದು ಭಾವಿಸಿದವರೇ ಹೆಚ್ಚು. ಹಾಗೆಯೇ ನನ್ನ ಪ್ರಯಾಣ ಸುಖಕರವಾಗಿ, ಸಂತೋಷಕರವಾಗಿ ಇರಲೆಂದು ಹಾರೈಸಿದ ಕೆಲವು ಸನ್ಮಿತ್ರರೂ ಇದ್ದರೆನ್ನಿ!

ಈ ಲೇಖನ ಪ್ರಾಯಶಃ ನೇಪಾಳದ ಸಂಪೂರ್ಣ ಪರಿಚಯವನ್ನು ಮಾಡಿಕೊಡಲಾರದು. ಸ್ವತಂತ್ರವಾಗಿ ಎದ್ದು ನಿಲ್ಲಲೂ ಸಾಧ್ಯವಿಲ್ಲದ, ಕುಳಿತಲ್ಲಿಂದ ನಿಂತುಕೊಳ್ಳಲೇ ಕನಿಷ್ಟ ಮೂರ್ನಾಲ್ಕು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದ, ಸಹಾಯವಿಲ್ಲದೆ ನಿಂತಲ್ಲಿಂದ ಒಂದು ಹೆಜ್ಜೆಯನ್ನೂ ಮುಂದಿಡಲಾಗದ, ಕೇವಲ ಮನೋಬಲವೊಂದೇ ಶಕ್ತಿಯಾಗುಳಿದ ವ್ಯಕ್ತಿಯ ಪ್ರಯಾಣ, ಅನುಭವಗಳು ಈ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿರುವ ಕೆಲವರಿಗಾದರೂ ಅಥವಾ ಅವರೊಡನೆ ಇರುವ ಕೆಲವರಿಗಾದರೂ ಒಂದು ಪರಿಚಯವನ್ನು ಮಾಡಿಕೊಡಬಲ್ಲದು ಎಂಬ ಆಸೆ, ಹಂಬಲ, ನಿರೀಕ್ಷೆ ನನಗಿದೆ.  ಈ ಲೇಖನದ ಅನುಭವ ಕತ್ತಲೆಯಲ್ಲಿರುವ ಕೆಲವರಿಗಾದರೂ ದೂರದ ನಕ್ಷತ್ರವಾಗಿ ಕಂಡರೆ ನನ್ನ ಈ ಬರವಣಿಗೆಯ ಉದ್ದೇಶ ಸಾರ್ಥಕ…

ಪ್ರಯಾಣ ಹೊರಟಿದ್ದು ನಾನು, ನನ್ನವರು, ಮಕ್ಕಳಿಬ್ಬರು; ನನ್ನ ತಾಯಿ, ಅಣ್ಣ, ಅತ್ತಿಗೆ, ಅವರ ಮಕ್ಕಳಿಬ್ಬರು. ಮೊದಲು ಬೆಂಗಳೂರಿನಿಂದ ಕಲ್ಕತ್ತೆಗೆ ಹೋಗಿ ಅಲ್ಲಿ ನನ್ನ ತಂಗಿಯ ಮನೆಯಲ್ಲಿ ಎರಡು ದಿನ ಉಳಿದು ಅವಳ ಕುಟುಂಬದವರನ್ನು ಸೇರಿಕೊಂಡು ನೇಪಾಳಕ್ಕೆ ಹೋಗುವುದೆಂದು ಪ್ರಯಾಣದ ರೂಪುರೇಷೆಗಳು ಸಿದ್ಧವಾಗಿದ್ದವು. ಇಲ್ಲಿಂದ ಕಲ್ಕತ್ತೆಗೆ ಒಂದು ಗಂಟೆ ಐವತ್ತು ನಿಮಿಷಗಳ ಪ್ರಯಾಣ. ಟಿಕೇಟನ್ನು ಖರೀದಿಸುವಾಗಲೇ ʻಗಾಲಿಕುರ್ಚಿಯ ಸಹಿತʼ ಎಂಬ ಉಲ್ಲೇಖವಿದ್ದುದರಿಂದ ನಿಲ್ದಾಣಕ್ಕೆ ಹೋದ ಕೆಲ ಸಮಯದಲ್ಲೇ ಗಾಲಿ ಕುರ್ಚಿಯು ನನ್ನ ನೆರವಿಗೆ ಸಿದ್ಧವಾಗಿತ್ತು. ಅಗತ್ಯ ನಿಯಮಗಳು ಮುಗಿದು ಎಲ್ಲರೂ ವಿಮಾನದೆಡೆಗೆ ನಡೆದರು. ನಾನು, ನನ್ನೊಂದಿಗೆ ಕುರ್ಚಿಯನ್ನು ತಳ್ಳುವವನು ಮತ್ತು ಸಹಾಯಕ್ಕೆ ನನ್ನವರು. ವಿಮಾನದ ಏಣಿಯನ್ನು ಹತ್ತುವ ತನಕ ಗಾಲಿಕುರ್ಚಿಯಲ್ಲಿ ಬಂದದ್ದಾಯಿತು. ಅಲ್ಲಿಂದ ರೈಲಿಂಗ್‌ ಆಧಾರದಿಂದ ಮೆಲ್ಲಗೆ ಹತ್ತತೊಡಗಿದೆ. ಗಗನಸಖಿ ಓಡಿ ಬಂದಳು “ಅಲ್ಲೇ ನಿಲ್ಲಿ ನಿಮ್ಮನ್ನು ಕುರ್ಚಿಯ ಸಮೇತ ಹೊತ್ತು ತರಲು ಹೇಳುತ್ತೇನೆ” ಎಂದಳು. ಅಷ್ಟರಲ್ಲಿ ಹೇಗೋ ಅರ್ಧದಷ್ಟು ಹತ್ತಿದ್ದು ಆಗಿತ್ತು. ಅವಳ ಕಾಳಜಿಗೆ ವಂದಿಸಿ ಹಾಗೆಯೇ ಮುಂದುವರೆದು ಹಿಂದಿನ ಸಾಲಿನಲ್ಲಿ ನನಗಾಗಿ ಕಾದಿರಿಸಿದ ಜಾಗದಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತೆ. ವಿಮಾನ ಪ್ರಯಾಣದ ಮೊದಲ ಅನುಭವ ಯಾರಿಗಾದರೂ ಅವಿಸ್ಮರಣೀಯ. ಎರಡು ದಿನಗಳು ರೈಲಿನಲ್ಲಿ ಕುಳಿತು ಪ್ರಯಾಣಿಸಬೇಕಾದ ದೂರವನ್ನು ಎರಡೇ ಗಂಟೆಗಳಲ್ಲಿ ಕ್ರಮಿಸುವುದು, ಮೋಡಗಳ ನಡುವೆ ತೇಲುವುದು, ಕೆಳಗಿನ ಗೆರೆ ಕೊರೆದಂತ ಭೂಮಿ, ಸಮುದ್ರಗಳ ನೋಟ… ಈ ದಿನ ನೋಡಿದಂತಿದೆ. ಸಮಯಕ್ಕೆ ಸರಿಯಾಗಿ ಕಲ್ಕತ್ತೆಗೆ ತಲುಪಿ ಅಲ್ಲಿ ತಂಗಿಯ ಮನೆಯಲ್ಲಿ ಎರಡು ದಿನವಿದ್ದು ತಂಗಿಯ ಕುಟುಂಬದವರನ್ನೂ ಸೇರಿಸಿಕೊಂಡು ಒಟ್ಟು ಹದಿಮೂರು ಜನ ಪ್ರಯಾಣವನ್ನು ಮುಂದುವರೆಸಿದೆವು.

ಕಲ್ಕತ್ತೆಯದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿನ ನೀತಿ ನಿಯಮಗಳು ಇನ್ನೂ ಹೆಚ್ಚಿನದು. ಇಷ್ಟೊಂದು ರಕ್ಷಣಾ ವ್ಯವಸ್ಥೆ ಇದ್ದರೂ, ಕಳೆದ ವರ್ಷದ ವಿಮಾನ ಅಪಹರಣದ ಘಟನೆ ನನಗೊಂದು ಸೋಜಿಗವೇ. ಕಲ್ಕತ್ತೆಯಿಂದ ನೇಪಾಳಕ್ಕೆ ಐವತ್ತು ನಿಮಿಷಗಳ ಪ್ರಯಾಣ. ಹಿಮಾಲಯ ಪರ್ವತ ಶ್ರೇಣಿಗಳ ಮೇಲಿನ ಪ್ರಯಾಣ ಒಂದು ಅದ್ಭುತ ಅನುಭವ! ಮಧ್ಯಾಹ್ನದ ಹೊತ್ತಿಗೆ ನೇಪಾಳದ ರಾಜದಾನಿ ಕಠ್‌ಮಂಡುವಿನಲ್ಲಿ ಇಳಿದೆವು. ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಲ್ಕತ್ತೆಯಷ್ಟು ಸ್ವಚ್ಛವಾದದ್ದೂ, ಸುಸಜ್ಜಿತವಾದದ್ದೂ ಅಲ್ಲ. ಮಿಕ್ಕವರೆಲ್ಲಾ ರಕ್ಷಣಾ ತಡೆಗಳ ಮೂಲಕ ಹಾದುಹೋಗುವಾಗ, ನನ್ನ ಗಾಲಿ ಕುರ್ಚಿ ವಿಶೇಷ, ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಮೀಸಲಾದ ಮಾರ್ಗದಲ್ಲಿ ಹೊರಟಿತು. ಸಿನಿಮಾದಲ್ಲಿ ಭೂಗತ ದೊರೆಗಳ ತಾಣವನ್ನು ಪ್ರವೇಶಿಸುವಾಗ ಆಗುವ ಅನುಭವ. ಗೊತ್ತಿರದ ಜಾಗ, ಭಾಷೆ ಗೊತ್ತಿಲ್ಲದ ಜನ, ನಿರ್ಮಾನುಷ ಪ್ರದೇಶ, ಲಿಫ್ಟ್‌ಗಳಲ್ಲಿ ಮೇಲೆ ಹತ್ತಿ, ಕೆಳಗೆ ಇಳಿದು ಉದ್ದುದ್ದ ಕಾರಿಡಾರುಗಳನ್ನು ಹಾದು ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ ʻಅಬ್ಭಾʼ ಅನಿಸಿತು. ಮಿಕ್ಕವರೆಲ್ಲರೂ ನೋಡಿದ ಎಷ್ಟೋ ಪ್ರವಾಸಿ ತಾಣಗಳನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ನಾನು ನೋಡಿದ ಈ ಹಾದಿಯನ್ನು ಪ್ರಪಂಚದ ಕೆಲವೇ ವಿಶಿಷ್ಟ, ಪ್ರಮುಖ ವ್ಯಕ್ತಿಗಳು ಮಾತ್ರ ನೋಡಿರಲು ಸಾಧ್ಯ!

ನಿಲ್ದಾಣದಿಂದ ಕಾದಿರಿಸಿದ್ದ ಹೋಟೆಲಿಗೆ ಹೋಗಿ ಊಟ ಮುಗಿಸಿದ್ದಾಯಿತು. ಇಲ್ಲಿ ಭಾರತೀಯ ಶೈಲಿಯ ಹೊಟೆಲ್‌ಗಳೂ ಇರುವುದರಿಂದ ಊಟಕ್ಕೆ ಹೆಚ್ಚಿನ ತೊಂದರೆಯಾಗಲಿಲ್ಲ. ಸಾಯಂಕಾಲ ಪಶುಪತಿನಾಥನ ದೇವಸ್ಥಾನಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಯಿತು. ಎರಡು ಟ್ಯಾಕ್ಸಿಗಳನ್ನು ಮಾಡಿಕೊಂಡು ದೇವಸ್ಥಾನಕ್ಕೆ ಹೊರಟೆವು. ದೇವಸ್ಥಾನಕ್ಕೆ ಸುಮಾರು ದೂರದಿಂದಲೇ ವಾಹನ ಸಂಚಾರ ನಿಷೇಧ. ಅಲ್ಲಿಂದ ಸಂದಿಗೊಂದಿಗಳಲ್ಲಿ ನಡೆದೇ ಹೋಗಬೇಕು; ಇಲ್ಲವೇ ಯಾವುದಾದರೂ ದ್ವಿಚಕ್ರ ವಾಹನದಲ್ಲಿ ಹೋಗಬಹುದು. ಅಷ್ಟು ದೂರ ನನ್ನಿಂದ ನಡೆಯಲು ಸಾಧ್ಯವೇ ಎಂಬ ಪ್ರಶ್ನೆ; ಪರ್ಯಾಯ ವ್ಯವಸ್ಥೆ ಇನ್ನೇನೂ ಇಲ್ಲವಲ್ಲ ಎಂಬ ಚಿಂತೆ.

ನಾನು ನನ್ನ ತಂಗಿಯೊಡನೆ ವಾಕರ್‌ ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಹಾಕತೊಡಗಿದೆ. ಮಿಕ್ಕವರೆಲ್ಲರೂ ಮುಂದೆ ಹೋದರು. ದೇವಾಲಯದ ಹಾದಿಯಲ್ಲೇ ಶಂಕರಾಚಾರ್ಯರ ಮಠವೊಂದಿದೆ. ಇಲ್ಲಿನ ಬೌದ್ಧ ಮತ್ತು ಹಿಂದು ಧರ್ಮದ ಸಾಮರಸ್ಯತೆಯ ಬಗ್ಗೆ ವಿಚಾರ ಮಾಡುತ್ತಾ ನಿಧಾನವಾಗಿ ಮಿಕ್ಕವರ ಹತ್ತು ಹೆಜ್ಜೆಗೆ ನಮ್ಮದೊಂದು ಹಜ್ಜೆಯಾಗಿ ಮುಂದುವರೆಯುತ್ತಿದ್ದೆವು. ಅಲ್ಲಿನ ಸಾಲು ಅಂಗಡಿಯವನೊಬ್ಬ ನಮ್ಮನ್ನು ನೋಡಿ “ದೇವಸ್ಥಾನದ ಪಕ್ಕದಲ್ಲಿರುವ ಪೋಸ್ಟ್‌ ಆಫೀಸಿನಲ್ಲಿ ಗಾಲಿ ಕುರ್ಚಿಯೊಂದಿದೆ. ನೀವು ಅದರ ಉಪಯೋಗವನ್ನು ಪಡೆದುಕೊಳ್ಳಬಹುದು” ಎಂದ. ಅಷ್ಟರಲ್ಲಿ ನನ್ನವರು “ಇನ್ನೂ ತುಂಬಾ ದೂರ ಹೋಗಬೇಕು. ನೀನು ಇಲ್ಲೇ ಎಲ್ಲಾದರೂ ಕುಳಿತುಕೊಂಡರೆ ವಾಸಿ” ಎಂದು ಹೇಳಲು ವಾಪಸ್ಸು ಬಂದವರು ಈ ವಿಷಯ ತಿಳಿಯುತ್ತಲೇ ಮತ್ತೆ ಅಲ್ಲಿಗೆ ಹೋಗಿ ಅಲ್ಲಿಯವನೊಬ್ಬನ ಸಹಾಯದಿಂದ ಗಾಲಿ ಕುರ್ಚಿಯನ್ನು ತಂದರು. ಅತ್ಯಂತ ದುಸ್ಥಿತಿಯಲ್ಲಿದ್ದ ಟೈರುಗಳೇ ಇಲ್ಲದ ಬರೀ ಗಾಲಿಗಳಿರುವ ಕುರ್ಚಿ! ಆದರೆ ಆ ಕ್ಷಣಕ್ಕೆ ಅದು ನನಗೆ ಇಂದ್ರನ ಐರಾವತ!! ಕುರ್ಚಿಯನ್ನು ತಳ್ಳುವ ಹುಡುಗ “ನಿಮ್ಮನ್ನು ದರ್ಶನ ಮಾಡಿಸಿಕೊಂಡು ಬರಲು ನನಗೆ ಇಪ್ಪತ್ತು ರೂಪಾಯಿಗಳನ್ನು ಕೊಡಬೇಕು” ಎಂದ. ನೇಪಾಳ ಬಡ ದೇಶ. ನಮ್ಮ ರೂಪಾಯಿಗೆ ಬೆಲೆ ಹೆಚ್ಚು. ಒಂದು ರೂಪಾಯಿ ಅಲ್ಲಿ ಒಂದು ರೂಪಾಯಿ, ಅರವತ್ತು ಪೈಸೆ. ಯಾವುದೋ ಒಂದು ದೇಶದಲ್ಲಾದರೂ ನಮ್ಮ ರೂಪಾಯಿನ ಬೆಲೆ ಹೆಚ್ಚಿದೆಯಲ್ಲ ಎಂದು ಸಂತೋಷವಾಯಿತು! ಗಡಗಡ ಎಂದು ತಳ್ಳಿಕೊಂಡು ಹೊರಟವನು ದೇವಸ್ಥಾನದ ಬಾಗಿಲಿಗೆ ಬಂದು ನನ್ನವರ ಸಹಾಯದಿಂದ ಕುರ್ಚಿಯನ್ನೆತ್ತಿ ಮೆಟ್ಟಲಿಳಿಸಿ ದೇವಸ್ಥಾನದ ಪ್ರಾಕಾರದ ಸಂಪೂರ್ಣ ಪ್ರದಕ್ಷಿಣೆ ಮಾಡಿಸಿದ. ಅಲ್ಲಲ್ಲಿ ಇರುವ ಸಣ್ಣ ಪುಟ್ಟ ದೇವಾಲಯಗಳನ್ನು ತೋರಿಸಿದ. ಎದುರಿಗಿದ್ದ ದೊಡ್ಡ ಕಂಚಿನ ನಂದಿಯನ್ನು, ಅದರ ವೈಭವವನ್ನೂ ವರ್ಣಿಸಿದ. ಅವನ ಭಾಷೆ ನೇಪಾಳಿ, ಹಿಂದಿ. ನನ್ನ ಭಾಷೆ ಕನ್ನಡ ಅಲ್ಪ ಸ್ವಲ್ಪ ಹಿಂದಿ. ಕೆಲವು ಸಾಮಾನ್ಯ ಪದಗಳ ಅಧಾರದ ಮೇಲೆ ಅವನು ಹೇಳಿದ್ದನ್ನು ಊಹಿಸಿಕೊಳ್ಳುತ್ತಿದ್ದೆ. ದೇವಸ್ಥಾನದ ನಾಲ್ಕೂ ದ್ವಾರಗಳಲ್ಲಿ ಕೈಮುಗಿಯೆಂದ. ಮುಖ್ಯ ದ್ವಾರದಲ್ಲಿ ಅವನ ಜೊತೆ ಇನ್ನಿಬ್ಬರು ಸೇರಿ ಕುರ್ಚಿಯನ್ನು ಗರ್ಭಗುಡಿಯ ಬಾಗಿಲಲ್ಲೇ ನಿಲ್ಲಿಸಿದರು. “ದೇವರನ್ನು ಚೆನ್ನಾಗಿ ನೋಡಿ ಬೇಡಿಕೊಳ್ಳಿ” ಎಂದರು. ಅವರ ಸಹೃದಯತೆಗೆ ಶರಣಾದೆ. ಮಂಗಳಾರತಿ ತಂದಿತ್ತರು. ಪ್ರಸಾದ ಕೈಗಿತ್ತರು. “ಇನ್ನೂ ಮೂರೂ ದ್ವಾರಗಳಲ್ಲೂ ಹೀಗೇ ತೋರಿಸೋಣವೇ” ಎಂದು ಕೇಳಿದರು. ನಾನು ತೃಪ್ತಳಾಗಿ “ಸಾಕು” ಎಂದೆ. ಮತ್ತೆ ಬಂದ ದಾರಿಯಲ್ಲಿ ವಾಪಸ್ಸು ಕರೆದುಕೊಂಡು ಬಂದವನು ಟ್ಯಾಕ್ಸಿಗೆ ಹತ್ತಿಸಿದ. ಕೆಲವೇ ಸಮಯದ ಹಿಂದೆ ʻಇದು ಸಾಧ್ಯವೇ ಇಲ್ಲʼ ಎಂದಾಗಿದ್ದದ್ದು, ಅರ್ಧ ಗಂಟೆಯಲ್ಲಿ ಆ ನೂಕುನುಗ್ಗಲಿನಲ್ಲಿ ಸ್ವಾಮಿ ಪಶುಪತಿನಾಥನ ದರ್ಶನವಾಗಿದ್ದು ಒಂದು ಕನಸಿನ ಹಾಗೆನಿಸಿತು. ಸಂತೋಷದಿಂದ ಆ ಹುಡುಗನಿಗೆ ಮೂವತ್ತು ರೂಪಾಯಿಗಳನ್ನು ಕೊಟ್ಟೆ. ಅವನೂ ಹಿಗ್ಗಿದ.

ಮರುದಿನ ಬೆಳಗ್ಗೆ ಕಠ್‌ಮಂಡುವಿನಿಂದ ಪೋಖರಾಗೆ ಹೋಗುವುದೆಂದು ನಿಶ್ಚಿತವಾಗಿತ್ತು. ಬೆಳಗ್ಗೆ ಮುಂಚೆಯೇ ಹೊರಟೆವು. ಅಲ್ಲಿಂದ ಏಳೆಂಟು ಗಂಟೆಗಳ ಪ್ರಯಾಣ. ಸುಸಜ್ಜಿತವಾದ ವ್ಯಾನು. ಒಂದು ಕಡೆ ಬೆಟ್ಟ, ಇನ್ನೊಂದು ಕಡೆ ಕಣಿವೆ, ನದಿ. ಅಲ್ಲಲ್ಲಿ ಸೇತುವೆಗಳ ನಡುವಿನ ಪಯಣ. ನಯನ ಮನೋಹರವಾದ ದೃಶ್ಯಗಳು. ಯಾವುದೋ ಅದ್ಭುತ ಲೋಕದಲ್ಲಿ ಸಾಗುತ್ತಿರುವ ಅನುಭವ. ಮಧ್ಯೆ ಮಧ್ಯೆ ಸಿಗುತ್ತಿದ್ದ ಚಿಕ್ಕ ಪುಟ್ಟ ಹಳ್ಳಿಗಳು, ಅಲ್ಲಿಯ ಜನಜೀವನ, ಸುಂದರ ಹೂಗಳು, ಪ್ರಕೃತಿಯ ಸೌಂದರ್ಯ….. ವಿಮಾನದಲ್ಲಿ ಎಷ್ಟೋ ಗಂಟೆಗಳ ದೂರವನ್ನು ಕೆಲವೇ ನಿಮಿಷಗಳಲ್ಲಿ ತಲುಪುವುದು ಒಂದು ರೀತಿಯಾದರೆ, ಕೇವಲ ಇನ್ನೂರು ಕಿಲೋಮೀಟರ್‌ಗಳನ್ನು ಆರೆಂಟು ಗಂಟೆಗಳಲ್ಲಿ ನಿಸರ್ಗದ ಚೆಲುವನ್ನು ಸವಿಯುತ್ತಾ ಸಾಗುವುದು ಇನ್ನೊಂದು ಮಧುರ ಅನುಭವ. ಜೊತೆಯಲ್ಲಿ ಹಿತವಾದವರ ಮಾತು, ಒಡನಾಟ, ನಗೆಚಾಟಿಕೆ…. ದಾರಿ ಸವೆದದ್ದೇ ತಿಳಿಯಲಿಲ್ಲ. ಪೋಖರಾಗೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಕಠ್‌ಮಂಡುವಿಗಿಂತ ತಗ್ಗಿನಲ್ಲಿರುವುದರಿಂದ ಇಲ್ಲಿ ಉಷ್ಣತೆ ಹೆಚ್ಚು. ಸಾಯಂಕಾಲ ನಗರ ಪ್ರದಕ್ಷಿಣೆಗೆ ಹೋಗುವುದೆಂದು ಅಂದುಕೊಂಡೆವು. ನೇಪಾಳದಲ್ಲಿ ಪ್ರವಾಸೋದ್ಯಮವೇ ಮುಖ್ಯ ಉದ್ಯೋಗವಾದ್ದರಿಂದ ನಾವು ಕಠ್‌ಮಂಡುವಿನಿಂದ ಬಂದಿದ್ದ ವ್ಯಾನಿನಲ್ಲಿ ಇಲ್ಲಿ ಊರೊಳಗಿನ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವುದು ಸಾಧ್ಯವಿಲ್ಲ. ಹಾಗಾಗಿ ಬೇರೆಯೇ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು. ಹೊರಡುವಾಗಲೇ ಮಳೆಹನಿ ಹಾಕಲು ಶುರುವಾದ್ದರಿಂದ ಹೆಚ್ಚಿಗೇನೂ ನೋಡಲು ಸಾಧ್ಯವಾಗಲಿಲ್ಲ. ಒಂದೆರಡು ದೇವಸ್ಥಾನಗಳನ್ನು ನೋಡಿ ಹಿಂತಿರುಗಿದೆವು. ದೇಗುಲಕ್ಕೆ ಹೋಗುವ ದಾರಿ ವಿಪರೀತ ತಗ್ಗು ದಿಣ್ಣೆಗಳಿಂದ ಕೂಡಿದ್ದರಿಂದ ಆಲಯದ ಒಳಗೆ ಹೋಗದೆ, ಮುಂದಿದ್ದ ಕರಕುಶಲ ಮಳಿಗೆಯಲ್ಲಿ ಕುಳಿತು, ಅಲ್ಲಿಯ ವಿಶಿಷ್ಟವಾದ ಕಲೆಯನ್ನು ನೋಡುತ್ತಾ, ಕೆಲವನ್ನು ಕೊಳ್ಳುತ್ತಾ ಕಾಲಕಳೆದೆ. ಮರುದಿನ ಬೆಳಗ್ಗೆ ಅಲ್ಲಿ ಪಕ್ಕದಲ್ಲಿದ್ದ ಗುಡ್ಡದ ಮೇಲಿನಿಂದ ಸೂರ್ಯೋದಯವನ್ನು ನೋಡುವ ಕಾರ್ಯಕ್ರಮವಿತ್ತು. ಐದು ಗಂಟೆಗೆ ಹೊರಟೆವು. ಅರ್ಧ ಗಂಟೆಯ ಹಾದಿ. ಅಲ್ಲಿಂದ ಕಾಲು ನಡಿಗೆಯಲ್ಲಿ ಹತ್ತಿರ ಹತ್ತಿರ ನೂರು ಅಡಿ ಮೇಲೆ ಹತ್ತಿದರೆ ಅಲ್ಲಿಂದ ಕಾಣುವ ಸೂರ್ಯೋದಯ ಒಂದು ಅಪೂರ್ವ ದೃಶ್ಯವಂತೆ! ಸೂರ್ಯನ ಮೊದಲ ಕಿರಣಗಳು ಹಿಮಾಲಯ ಶ್ರೇಣಿಯನ್ನು ಚುಂಬಿಸುವ ದೃಶ್ಯ ಒಂದು ಅದ್ಭುತ ಕನಸಿನಂತೆ ಕಾಣುವುದಂತೆ! ನಾನು ಮತ್ತು ನಮ್ಮಮ್ಮನನ್ನು ಬಿಟ್ಟು ಮಿಕ್ಕವರೆಲ್ಲರೂ ಮೇಲೇರಿದರು. ನಾವಿಬ್ಬರು ನಮ್ಮ ವ್ಯಾನನ್ನು ಆದಷ್ಟೂ ಆ ದೃಶ್ಯ ಕಾಣುವಂತೆ ತಿರುಗಿಸಿಸಿ ನಿಲ್ಲಿಸಿಕೊಂಡು ಪ್ರಕೃತಿಯ ಮಧ್ಯೆ ಕಳೆದ ಆ ಅರ್ಧ ಗಂಟೆ ಸದಾ ನೆನಪಿನಲ್ಲಿರುವಂತದು. ಹಿಮಾಲಯದ ನಾಲ್ಕು ಶಿಖರಗಳನ್ನು ಇಲ್ಲಿಂದ ನೋಡಲು ಸಾಧ್ಯ. ಅದರಲ್ಲಿ ಮೀನಿನ ಬಾಲ (Fish tail) ಎಂಬ ಶಿಖರ ಪ್ರಮುಖವಾದುದು. ಅಲ್ಲಿಂದ ಇಳಿಯುತ್ತಾ ಒಂದು ದೇವಸ್ಥಾನದ ದರ್ಶನ, ನಂತರ ಪೋಖರಾದ ಪ್ರಸಿದ್ಧ ಸರೋವರಕ್ಕೆ ಬಂದೆವು. ಬೆಟ್ಟಗಳ ಮಧ್ಯೆ ಇರುವ ವಿಶಾಲವಾದ ಸರೋವರ, ಮಧ್ಯದ ನಡುಗಡ್ಡೆಯಲ್ಲೊಂದು ದೇವಿಯ ದೇವಸ್ಥಾನ. ನಾನು, ನಮ್ಮಮ್ಮ ತೀರದಲ್ಲಿ ಉಳಿದೆವು. ಮಿಕ್ಕವರೆಲ್ಲಾ ದೋಣಿಯ ವಿಹಾರದಲ್ಲಿ ದೇಗುಲವನ್ನು ನೋಡಲು ಹೊರಟರು.

ಮತ್ತೆ ಮಧ್ಯಾಹ್ನ ಅಲ್ಲಿಂದ ಕಠ್‌ಮಂಡುವಿಗೆ ವಾಪಸ್ಸು ಹೊರೆಟೆವು. ದಾರಿಯಲ್ಲಿ ಸಿಕ್ಕಿದ್ದು ಕ್ಯಾಷು ಬ್ರಿಡ್ಜ್.‌ ಅದರ ಬಗ್ಗೆ ಡ್ರೈವರ್‌ ನೀಡಿದ ಮಾಹಿತಿ ನಮ್ಮನ್ನು ದಿಗ್ಭ್ರಮೆಗೊಳಿಸಿತು. ಭೂಕಂಪವಾದಾಗ ಅಲ್ಲಿನ ಭೂಮಿಯಲ್ಲಿ ಬಿರುಕು ಬಿಟ್ಟು ಮೂಡಿರುವ ಸುಮಾರು ನಾಲ್ಕೈದು ಅಡಿ ಅಗಲವಿರುವ ಕಂದಕ ಅದು. ಎಷ್ಟು ಸಾವಿರ ಅಡಿಗಳ ಒಳಗಿನ ತನಕ ಹೋಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದರ ಮೇಲೆ ನಿರ್ಮಾಣವಾದ ಸೇತುವೆ ಇದು. ಊರಿನಲ್ಲಿ ಗಲಾಟೆಗಳಾದರೆ, ಜಗಳಗಳಾದರೆ, ಯಾರನ್ನಾದರೂ ಅಲ್ಲಿ ಕೊಂದು ಬಿಸಾಕಿದರೆ ಪುರಾವೆಯೇ ಇಲ್ಲ! ಇನ್ನೊಮ್ಮೆ ಭೂಕಂಪವಾದರೆ ಇಡೀ ಪೋಖರಾ ಊರೇ ಭೂಕುಸಿತಕ್ಕೆ ಒಳಗಾಗಬಹುದು ಎಂಬ ಶಂಕೆ ಇದೆ ಎಂದಾಗ ಆ ಕಂದಕದ ನಿಗೂಢತೆ, ಅಲ್ಲಿ ಅಡಗಿರಬಹುದಾದ ಎಷ್ಟೋ ರಹಸ್ಯಗಳು, ಅಲ್ಲೇ ಸಮಾಧಿಯಾದ ಎಷ್ಟೋ ಜೀವಗಳು ಏನೇನೋ ಕತೆಗಳನ್ನು ಹೇಳುತ್ತಿರುವಂತೆ ಭಾಸವಾಯಿತು….

ಮರುದಿನ ಬೆಳಗ್ಗೆ ಕಠ್‌ಮಂಡು ನಗರ ಪ್ರದಕ್ಷಿಣೆಗೆ ಸಿದ್ಧರಾದೆವು. ಎರಡು ದಿನದಿಂದ ನಮ್ಮೊಡನೆ ಇದ್ದ ಅದೇ ವ್ಯಾನ್, ಅದೇ ಡ್ರೈವರ್‌. ಇಷ್ಟರೊಳಗೆ ಅವನು ನಮ್ಮೆಲ್ಲರಿಗೂ ಸ್ನೇಹಿತನಂತೆ ಆಗಿದ್ದ. ಆಗಾಗ ಅಲ್ಲಿನ ಸ್ಥಳಗಳ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡುವ ಮಾರ್ಗದರ್ಶಿಯಾಗಿದ್ದ. ʻಮನುಷ್ಯ-ಮನುಷ್ಯನ ನಡುವಿನ ಸಂವಹನಕ್ಕೆ ಭಾಷೆಯೊಂದೇ ಮಾಧ್ಯಮವಲ್ಲʼ ಎಂಬ ಅನುಭವವಾಗತೊಡಗಿತು. ಅವನದು ನೇಪಾಳಿ, ಹರಕುಪುರಕು ಹಿಂದಿ. ನನ್ನ ಭಾಷಾ ಜ್ಞಾನವೋ ಅದಕ್ಕಿಂತ ಕಡಿಮೆ. ಅವನ ಧ್ವನಿಯಲ್ಲಿದ್ದ ಕಾಳಜಿ, ಹೇಳುತ್ತಿರುವುದನ್ನು ನಮಗೆ ಅರ್ಥಮಾಡಿಸುವ ಉತ್ಸಾಹ, ಅಭಿನಯದ ಮೂಲಕ ಮತ್ತೆ ಮತ್ತೆ ತೋರಿಸಿ ಹೇಳಿ ಅರ್ಥಮಾಡಿಸುತ್ತಿದ್ದ ರೀತಿ ಅನನ್ಯ. ಬರಬರುತ್ತಾ ನಾವು ಒಂದು ಪ್ರತ್ಯೇಕ ಭಾಷೆಗೆ ಹೊಂದಿಕೊಂಡುಬಿಟ್ಟೆವು. ಅವನು ಹೇಳುತ್ತಿದ್ದುದೆಲ್ಲಾ ನಮಗೆ ಅರ್ಥವಾಗತೊಡಗಿತು. ಬಹಳಷ್ಟು ಸ್ಥಳಗಳಲ್ಲಿ ನನಗೆ ಇಳಿಯಲು ಸಾಧ್ಯವಾಗದಿದ್ದಾಗ ಅವನು ಆ ಸ್ಥಳಗಳ ಬಗ್ಗೆ ನೀಡುತ್ತಿದ್ದ ಮಾಹಿತಿ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.

ಕಠ್‌ಮಂಡುವಿನ ಪ್ರಸಿದ್ಥ ಬುದ್ಧ ಸ್ತೂಪಕ್ಕೆ ಹೋದೆವು. ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿದ್ದ ಜಾಗ. ನಾನು ಯಥಾಪ್ರಕಾರ ವ್ಯಾನಿನಲ್ಲೇ ಉಳಿದೆ. ಐದು ನಿಮಿಷದ ಬಳಿಕ ಬಂದ ಅವನು “ದೀದಿ, ಇಲ್ಲಿ ಬರೀ ಹತ್ತು ಮೆಟ್ಟಿಲನ್ನು ಹತ್ತಿ. ಮೇಲಿನ ಸ್ತೂಪದ ಮಾದರಿ ಇಲ್ಲಿದೆ. ಇದನ್ನಾದರೂ ನೀವು ನೋಡಲೇಬೇಕು. ನಾನು ನಿಮ್ಮೊಂದಿಗೆ ಬರುತ್ತೇನೆ. ಹೆದರಬೇಡಿ ಬನ್ನಿ” ಎನ್ನುತ್ತಾ ಕರೆದುಕೊಂಡು ಹೋದ. ಅಲ್ಲಿ ಮೇಲಿನ ಸ್ತೂಪದ ಮಾದರಿಯನ್ನೇ ಕಟ್ಟಿದ್ದಾರೆ. ಅಲ್ಲೊಂದು ಕೊಳ, ಬುದ್ಧನ ವಿಗ್ರಹ. “ಇಲ್ಲೇ ಸ್ವಲ್ಪ ಹೊತ್ತು ಕಟ್ಟೆಯ ಮೇಲೆ ಕುಳಿತು ಸುತ್ತಮುತ್ತಲನ್ನು ನೋಡುತ್ತಿರಿ. ನಾನು ಇಲ್ಲೇ ಇರುತ್ತೇನೆ” ಎಂದವನು ನನ್ನ ದೃಷ್ಟಿಗೆ ಬೀಳುವಷ್ಟು ದೂರದಲ್ಲೇ ಓಡಾಡುತ್ತಿದ್ದ. ಎಲ್ಲರೂ ಮೇಲಿಂದ ಇಳಿದು ಬರುವವರೆಗೆ ಅಲ್ಲಿಯೇ ಕುಳಿತು ಸುತ್ತಮುತ್ತಲಿನ ಸೊಬಗನ್ನು ಆಸ್ವಾದಿಸಿದೆ. ಮುಂದೆ ಇನ್ನೂ ಒಂದೆರಡು ದೇಗುಲಗಳ ದರ್ಶನವಾಯಿತು. ಕಠ್‌ಮಂಡು ಎಂದರೆ ಕಟ್ಟಿಗೆಯ ದೇವಸ್ಥಾನವಂತೆ. ಆ ಪ್ರಸಿದ್ಧ ದೇವಸ್ಥಾನ, ಜೀವಂತ ಕುಮಾರಿ ದೇಗುಲ, ಶಿವನ ಆಲಯ ಎಲ್ಲವೂ ಒಂದೇ ಜಾಗದಲ್ಲಿದೆ. ನನ್ನ ಸಂದರ್ಶನ ಏನಿದ್ದರೂ ಹೊರಗಿನಿಂದಲೇ. ಅತ್ಯಂತ ಸುಂದರವಾದ ವಾಸ್ತು ವಿನ್ಯಾಸ. ಅವನು ಹೇಳಿದ ಜೀವಂತ ಕುಮಾರಿ ದೇವಿಯರ ಕರುಣಾಜನಕ ಕತೆ ಮನವನ್ನು ಕಲಕಿತು. ಅಲ್ಲಿಯವರೆಗೆ ದೇವಿಯ ಸ್ಥಾನದಲ್ಲಿ ಪೂಜಿಸಿಕೊಳ್ಳುತ್ತಿದ್ದವಳು, ಋತುಮತಿಯಾದೊಡನೆ ಎದುರಿಸಬೇಕಾದ ನರಕ ದರ್ಶನ ನಿಜಕ್ಕೂ ಶೋಷಣೆಯ ಭೀಕರ ಸ್ವರೂಪ. ಅಸಹಾಯಕ ಕುಮಾರಿಯರ ನಿಜ ಜೀವನ ಕತೆ ಎಂತಹ ಕಲ್ಲುಹೃದಯವನ್ನೂ ಕರಗಿಸುವಂತದು. ಮನದಿಂದ ಆ ಭಾವ ಸ್ವಲ್ಪ ಮರೆಯಾಗಲು ಸಾಕಷ್ಟು ಸಮಯವನ್ನೇ ತೆರೆದುಕೊಂಡಿತು.

ನಮ್ಮ ಮುಂದಿನ ಪ್ರೇಕ್ಷಣೀಯ ಸ್ಥಳ ಭಕ್ತಾಪುರ. ಇದು ನೇಪಾಳದ ಸಂಸ್ಕೃತಿಯನ್ನು ಕಾಪಿಟ್ಟುಕೊಂಡಿರುವ ಒಂದು ಗ್ರಾಮ. ಇದರೊಳಗೆ ಪ್ರವೇಶಿಸಲು ಸಾರ್ಕ್‌ ದೇಶದವರಾದರೆ ಒಬ್ಬರಿಗೆ ಮೂವತ್ತು ರೂಪಾಯಿ. ಬೇರೆ ದೇಶದವರಿಗೆ ಮುನ್ನೂರು ರುಪಾಯಿ. ಒಂದು ಹಳ್ಳಿ ನೋಡಲು ಇಷ್ಟೊಂದು ಕಂದಾಯವೇ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಒಳಹೊಕ್ಕರೆ ಆ ಗ್ರಾಮದ ವಿಶಿಷ್ಟತೆ ಎಂತವರನ್ನೂ ಮುಗ್ಧಗೊಳಿಸಿಬಿಡುತ್ತದೆ. ಆ ಬೀದಿಗಳು, ಅಂಗಡಿಗಳು, ಕರಕುಶಲ ಕಲೆ, ಕಟ್ಟಡಗಳ ವಿನ್ಯಾಸ ಅಬ್ಭಾ! ಎನ್ನುವಂತಿದೆ. ಜೊತೆಗಿದ್ದ ಡ್ರೈವರ್‌ “ಸಾಮಾನ್ಯವಾಗಿ ನಾವು ಪ್ರಯಾಣಿಕರನ್ನು ಕರೆದುಕೊಂಡು ಬಂದರೆ ಇಲ್ಲಿ ಒಂದು ಅಥವಾ ಎರಡು ಜಾಗಗಳಲ್ಲಿ ನಿಲ್ಲಿಸಿ ಅವರನ್ನು ತಿರುಗಾಡಿಕೊಂಡು ಬರಲು ಬಿಡುತ್ತೇವೆ. ನಿಮಗೆ ಓಡಾಡಲು ಆಗುವುದಿಲ್ಲವಾದ್ದರಿಂದ ನಾನು ಸಾಧ್ಯವಾದಷ್ಟು ಬೀದಿಗಳನ್ನು, ಜಾಗಗಳನ್ನು ಇಲ್ಲಿ ತೋರಿಸುತ್ತೇನೆ” ಎನ್ನುತ್ತಾ ಅಲ್ಲಲ್ಲಿ ಸುತ್ತಾಡಿಸುತ್ತಾ ಅದರ ವಿಶಿಷ್ಟತೆಯನ್ನು ಹೇಳತೊಡಗಿದ. ಆದಷ್ಟು ಸುತ್ತಾಡಿಸಿ, ಒಂದು ಮುಖ್ಯವಾದ ಸ್ಥಳದಲ್ಲಿ ನಿಲ್ಲಿಸಿ ಎಲ್ಲರಿಗೂ ತಿರುಗಾಡಿಕೊಂಡು ಬರಲು ಸೂಚಿಸಿದ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊರಟರು. ಅವನು ನನ್ನನ್ನು ಬಿಡಲಿಲ್ಲ. “ನೀವು ಸ್ವಲ್ಪ ಇಳಿಯಿರಿ. ಇಲ್ಲಿ ಕಾಣುತ್ತಿರುವ ದೇವಸ್ಥಾನದವರೆಗಾದರೂ ಹೋಗೋಣ ಬನ್ನಿ. ನೀವು ನೋಡಲೇ ಬೇಕು. ನಾನಿದ್ದೇನೆ ಬನ್ನಿ” ಎನ್ನುತ್ತಾ ಬಲವಂತವಾಗಿ ಸ್ವಲ್ಪ ದೂರದಲ್ಲಿದ್ದ ದೇವಸ್ಥಾನದ ಕಡೆಗೆ ಕರೆದುಕೊಂಡು ಹೋದ. ನನ್ನ ಸಂಗಾತಿ ವಾಕರ್‌, ಜೊತೆಗೆ ಅಪರಿಚಿತ ದೇಶದ ಅಂತಃಕರಣದ ಅಭಿಮಾನಿ ಮಾರ್ಗದರ್ಶಿ ಬಂಧು! ನಿಧಾನವಾಗಿ ಹೆಜ್ಜೆಯಿಡುತ್ತಾ ಹೋದೆ. ಅವನು ನೇಪಾಳದ ದೇವಾಲಯಗಳ ವಿಶಿಷ್ಟತೆಗಳ ಬಗ್ಗೆ ಹೇಳುತ್ತಾ ಹೋದ. ನಂತರ ಪಕ್ಕದಲ್ಲಿದ್ದ ಅಂಗಡಿ ಸಾಲಿನತ್ತ ಹೋಗೋಣ ಎನ್ನುತ್ತಾ ಅಲ್ಲಿನ ಕರಕುಶಲ ಕಲೆಗಳನ್ನು, ವಸ್ತುಗಳನ್ನು ಪರಿಚಯ ಮಾಡಿಕೊಡುತ್ತಾ ನಡೆದ. ಒಂದು ಹದಿನೈದು, ಇಪ್ಪತ್ತು ನಿಮಿಷ ನಡೆದಿರಬಹುದೇನೋ… ನನ್ನ ಕಾಲು ಇನ್ನು ಮುಂದೆ ಹೋಗಲಾರೆ ಎಂದು ಮುಷ್ಕರ ಮಾಡತೊಡಗಿದವು. ಆದರೆ ಅವನ ಉತ್ಸಾಹ ನಾನು ಮುಂದಡಿಯಿಡುವಂತೆ ಮಾಡುತ್ತಿದ್ದವು. ಇನ್ನೊಂದು ಐವತ್ತು ಹೆಜ್ಜೆ ಇರುವಾಗ “ನೀವು ಬರುತ್ತಾ ಇರಿ, ಅಷ್ಟರಲ್ಲಿ ನಾನು ಈ ಮೂಲೆಗೆ ವ್ಯಾನು ತರುತ್ತೇನೆ” ಎನ್ನುತ್ತಾ ಓಡಿಹೋಗಿ ನಾನಲ್ಲಿಗೆ ತಲುಪುವಷ್ಟರಲ್ಲಿ ವ್ಯಾನನ್ನು ತಂದು ನಿಲ್ಲಿಸಿ ಬಾಗಿಲನ್ನು ತೆರೆದು ಕಾಯುತ್ತಾ ನಿಂತಿದ್ದ. “ಇಲ್ಲಿಗೆ ಬಂದು ನೀವು ಇಷ್ಟಾದರೂ ನೋಡದಿದ್ದರೆ ಹೇಗೆ?” ಎಂದ. ಅವನು ಅಷ್ಟು ಬಲವಂತ ಮಾಡದಿದ್ದರೆ ಖಂಡಿತಾ ನಾನು ಅಷ್ಟನ್ನು ನೋಡಲು ಸಾಧ್ಯವಿರಲಿಲ್ಲ. ಮಿಕ್ಕವರೆಲ್ಲರೂ ಬಂದರು. ನಮ್ಮ ಪ್ರಯಾಣ ಮುಂದುವರೆಯಿತು. ನೇಪಾಳದ ಪ್ರಮುಖ ಬೀದಿಗಳಲ್ಲಿ ತಿರುಗಾಡಿದೆವು. ಅರಮನೆ, ಕೋರ್ಟ್‌, ಕ್ಯಾಸಿನೋ ಮತ್ತು ಇತರ ಪ್ರಮುಖ ಕಟ್ಟಡಗಳನ್ನು ದಾರಿಯಲ್ಲಿ ಪರಿಚಯಿಸುತ್ತಾ ನಡೆದ. ಅಲ್ಲಿಂದ ಒಂದು ಕೃಷ್ಣನ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ನೇಪಾಳದ ದೇಗುಲಗಳ ವಾಸ್ತು ವಿನ್ಯಾಸ, ಬಣ್ಣಗಳ ಬಳಕೆ ಎಲ್ಲದರಲ್ಲೂ ಅದರದ್ದೇ ಆದ ಒಂದು ಛಾಪಿದೆ. ಎಷ್ಟೇ ವರ್ಣಿಸಿದರೂ ಅದು ನೋಡಿದಾಗ ಮಾತ್ರ ಅನುಭವಕ್ಕೆ ನಿಲುಕುವಂತದು.

ಮಧ್ಯಾಹ್ನದ ಮೇಲೆ ಎಲ್ಲರೂ ಶಾಪಿಂಗ್‌ ಎಂದು ಹೊರಟರು. ನಮ್ಮ ನೇಪಾಳದ ಯಾತ್ರೆ ಮುಕ್ತಾಯದ ಹಂತಕ್ಕೆ ಬಂದಿತ್ತು. ನಮ್ಮನ್ನು ಬೀಳ್ಕೊಡುವಾಗ ನಮ್ಮ ಡ್ರೈವರ್‌ ಮಿತ್ರ “ಮತ್ತೊಮ್ಮೆ ನೇಪಾಳಕ್ಕೆ ಬನ್ನಿ” ಎಂದು ಹಾರ್ದಿಕವಾಗಿ ಕರೆದ. “ಇದೇ ನನ್ನ ಸಾಹಸ ಯಾತ್ರೆ. ಮುಂದಿನ ಸಲ ಬರುವುದು ಪ್ರಾಯಶಃ ಇನ್ನೊಂದು ಜನ್ಮವಿದ್ದರೆ ಅದರಲ್ಲಿ” ಎಂದು ಮನದಲ್ಲಿ ಅಂದುಕೊಂಡೆ. ಆತನ ಸಹಕಾರಕ್ಕೆ, ಸಹೃದಯತೆಗೆ “ಥ್ಯಾಂಕ್ಸ್”‌ ಎನ್ನುವ ಪದ ಅರ್ಥಹೀನ ಅನ್ನಿಸಿತು. ಅವನ ಹೆಸರನ್ನೇನೋ ಹೇಳಿದ. ನೇಪಾಳಿಯಲ್ಲಿ ಬರೆದು ತೋರಿಸಿದ. ನನಗೆ ಗೊತ್ತಾಗಲಿಲ್ಲ. ವ್ಯಕ್ತಿಯೊಬ್ಬನನ್ನು ಹೃದಯದಲ್ಲಿ ಇರಿಸಿಕೊಳ್ಳಲು ಹೆಸರಿನ ಅಗತ್ಯ ಇದೆಯೇ?! ಅವನ ಸೌಹಾರ್ದತೆ, ವ್ಯಕ್ತಿತ್ವಗಳನ್ನು ನನ್ನ ನೆನಪಿನ ಕೋಶದಲ್ಲಿ ಒಂದು ಶಾಶ್ವತ ಸ್ಥಾನ ಕೊಟ್ಟು ಇರಿಸಿಕೊಂಡುಬಿಟ್ಟೆ!!

ಮರುದಿನ ಬೆಳಗ್ಗೆ ಅಲ್ಲಿಂದ ಕಲ್ಕತ್ತೆಗೆ ಹೊರಡುವುದೆಂದು ತೀರ್ಮಾನವಾಗಿತ್ತು. ಹಿಂದಿನ ದಿನ ಪ್ರತಿಕೂಲ ಹವಾಮಾನದಿಂದಾಗಿ ಭಾರತದಿಂದ ತ್ರಿಭುವನ್‌ ನಿಲ್ದಾಣಕ್ಕೆ ವಿಮಾನವೇ ಬಂದಿರಲಿಲ್ಲ. ಹಾಗಾಗಿ ಆ ದಿನ ಎರಡು ಪ್ರಯಾಣಗಳು ಆಗಬೇಕಾಗಿತ್ತು. ಬೆಳಗ್ಗೆ ಹೊರಡಬೇಕಾಗಿದ್ದ ವಿಮಾನ ಮಧ್ಯಾಹ್ನ ಹೊರಟಿತು. ಸಂಜೆಗೆ ಕಲ್ಕತ್ತೆಯಲ್ಲಿದ್ದೆವು.

ಮುಂದೆರಡು ದಿನ ಅಲ್ಲಿನ ಕೆಲವು ಜಾಗಗಳನ್ನು ನೋಡಿದೆವು. ಈ ಮೊದಲೇ ನಾನು ಎರಡು ಬಾರಿ ಈ ಊರನ್ನು ನೋಡಿದ್ದರಿಂದ ಹೆಚ್ಚಿನ ಸ್ಥಳಗಳನ್ನು ನೋಡುವ ಹಂಬಲವಿರಲಿಲ್ಲ. ಆದರೆ ನಿರಾಳವಾಗಿ ಕಲ್ಕತ್ತೆಯ ಬೀದಿಗಳಲ್ಲಿ ಸಂಚರಿಸಬೇಕೆಂಬ ಆಸೆಯಿತ್ತು. “ಅದಕ್ಕೇನಂತೆ” ಎಂದ ನನ್ನವರು ಅರ್ಧ ದಿನದ ಮಟ್ಟಿಗೆ ಒಂದು ಟ್ಯಾಕ್ಸಿಯನ್ನು ಗೊತ್ತುಮಾಡಿದರು. ಅಂದು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಸೌರವ್‌ ಗಂಗೂಲಿ ಅಮೋಘವಾಗಿ ಆಡಿದ ದಿನ. ಕಲ್ಕತ್ತೆಯ ಜನರೆಲ್ಲರೂ ಟೀವಿಯ ಮುಂದೆ. ನಾವು ಬೀದಿಬೀದಿಗಳಲ್ಲಿ… ಎಲ್ಲ ಹಾದಿಗಳೂ ನಿರ್ಜನವಾಗಿದ್ದವು. ಉಲ್ಟಾಡಂಗಾ, ಶೇಕ್‌ಸ್ಪಿಯರ್‌ ಸರಾನಿ, ಪಾರ್ಕ್‌ ಸ್ಟ್ರೀಟ್‌, ನ್ಯೂ ಮಾರ್ಕೆಟ್‌, ವಿಕ್ಟೋರಿಯಾ ಮೆಮೋರಿಯಲ್‌, ಕಾಳಿ ಘಾಟ್‌, ಹೌರಾ, ನ್ಯೂ ಬ್ರಿಡ್ಜ್‌…. ಎಲ್ಲಾ ಕಡೆಯೂ ಸುತ್ತುವುದು, ಅಲ್ಲಲ್ಲಿ ನಿಲ್ಲಿಸುವುದು – ಒಂದು ಮೋಜಿನ ವಿಹಾರವಾಗಿ ಊರನ್ನು ಸುತ್ತಿದೆವು.

ಮರುದಿನ ಸಂಜೆಗೆ ಮತ್ತೆ ಬೆಂಗಳೂರಿಗೆ ಪ್ರಯಾಣ. ವಿಮಾನ ಸುಮಾರು ಮೂರು ಗಂಟೆ ತಡವಾಗಿ ಹೊರಟಿತು. ವಿಮಾನ ನಿಲ್ದಾಣದಲ್ಲಿ ಕಾಯುವ ಬೇಸರದ ಅನುಭವ ಮತ್ತೊಮ್ಮೆ ಆಯಿತು. ರಾತ್ರಿ ಹತ್ತು ಗಂಟೆಗೆ ಬೆಂಗಳೂರನ್ನು ತಲುಪಿದೆವು. ಗಾಲಿ ಕುರ್ಚಿಯಿಂದ ನಮ್ಮ ವಾಹನವನ್ನು ಏರಿದೆ. ನಮ್ಮ ಕಟ್ಟಡಕ್ಕೆ ಬಂದು ಲಿಫ್ಟ್‌ನಲ್ಲಿ ಮೇಲೇರಿ ಮನೆಯೊಳಗೆ ಕಾಲಿರಿಸಿದಾಗ ಒಂದು ಧನ್ಯತಾ ಭಾವ, ತೃಪ್ತಿ, ಸಮಾಧಾನ. ನಾನೆಷ್ಟು ನೋಡಿದೆನೋ ಬಿಟ್ಟೆನೋ, ಆದರೆ ನನ್ನಿಂದ ಇತರರ್ಯಾರಿಗೂ ತೊಂದರೆಯಾಗದೆ, ಅಡ್ಡಿಯಾಗದೆ, ಅನಾನುಕೂಲವಾಗದೆ, ಸುರಕ್ಷಿತವಾಗಿ ನನ್ನ ಗೂಡು ಸೇರಿಕೊಂಡಂತಹ ಒಂದು ಅಪೂರ್ವ ನೆಮ್ಮದಿ, ಶಾಂತಿ!!

ಈ ದಿನ ನನ್ನ ಯಾತ್ರೆಯ ಅವಲೋಕನವನ್ನು ಮಾಡುವಾಗ ಅಂದಿನ ಮನಸ್ಥಿತಿಗೂ, ಇಂದಿನದಕ್ಕೂ, ಅಂದಿನ ಪರಿಸ್ಥಿತಿಗೂ, ಇಂದಿರುವುದಕ್ಕೂ ಇರುವ ಹೋಲಿಕೆ ನನ್ನನ್ನು ಈ ಲೇಖನ ಬರೆಯಲು ಪ್ರೇರೇಪಿಸಿದೆ. ಮನುಷ್ಯನ ಅಸಹಾಯಕತೆಯ ಉತ್ಕಟ ಅನುಭವವನ್ನು ಪಡೆದವಳು ನಾನು. ಲಿಫ್ಟ್‌ ಬಾಗಿಲಿನವರೆಗೂ ಆಟೋವನ್ನು ತಂದು ನಿಲ್ಲಿಸಿಕೊಂಡು, ಪಕ್ಕದ ಗೋಡೆಗಳ ಆಧಾರದಿಂದ ನಿಂತು, ಲಿಫ್ಟಲ್ಲಿ ಮೇಲೇರಿ ಪಕ್ಕದ ರೇಲಿಂಗ್ಸನ್ನು ಹಿಡಿದುಕೊಂಡೇ ಮನೆಯನ್ನು ತಲುಪುತ್ತಿದ್ದ ಸ್ಥಿತಿ ನನ್ನದು. ಲಿಫ್ಟ್‌ ಬಾಗಿಲಿಗೆ ಬರುವಾಗ ಕರೆಂಟು ಹೋಗಿ ಅದರ ಮುಂದಿನ ಕಟ್ಟೆಯಲ್ಲೇ ಕುಳಿತು ಕರೆಂಟು ಬರುವುದಕ್ಕೆ ಕಾದ ದಿನಗಳಿವೆ. ಯಾರಾದರೂ ಕಂಡರೆ ಅವರನ್ನೇ ಆಧಾರವಾಗಿ, ಮೆಟ್ಟಿಲಿನವರೆಗೆ ಸಾಗಲು ಅವರ ಸಹಾಯ ಪಡೆದು ರೇಲಿಂಗ್ಸ್‌ ಹಿಡಿದು ಎಳೆಯ ಮಕ್ಕಳಂತೆ ಹತ್ತಿ ಮನೆ ತಲುಪಿದ್ದಿದೆ. ಲಿಪ್ಟ್‌ನ ಬಾಗಿಲಿಂದ ಮೆಟ್ಟಿಲಿನವರೆಗೆ ಸ್ಕೂಟರ್‌ನಲ್ಲಿ ಹತ್ತಿಪ್ಪತ್ತು ಅಡಿ ತಲುಪಿಸಿದವರಿದ್ದಾರೆ. ದೇವರ ದಯೆ, ಎಷ್ಟೋ ಸಹೃದಯರ ಹಾರೈಕೆ, ಆಶೀರ್ವಾದಗಳು, ನುರಿತ ವೈದ್ಯರ ಉಪಚಾರ ಈ ದಿನ ನಾಲ್ಕು ಹೆಜ್ಜೆ ನಡೆಯುವ ಶಕ್ತಿಯನ್ನು ನೀದಿದೆ. ಆ ದಿನ ನೇಪಾಳಕ್ಕೆ ಹೋಗಿಬಂದದ್ದೇ ದೊಡ್ಡ ವಿಕ್ರಮವೆಂದೆನಿಸಿದ್ದರೆ, ಇಂದು ವಿಶ್ವಪರ್ಯಟನೆ ಮಾಡುವಷ್ಟು ಆತ್ಮವಿಶ್ವಾಸವಿದೆ. ನಾನು ಎಂತಹ ಸ್ಥಿತಿಯಲ್ಲಿದ್ದಾಗಲೂ ಧೃತಿಗೆಡದ ನನ್ನ ಕುಟುಂಬದವರು, ಮಕ್ಕಳು, ನನ್ನಲ್ಲಿ ಜೀವನೋತ್ಸಾಹವನ್ನು ತುಂಬಿದವರು, ನನ್ನ ಉದ್ಯೋಗ, ಸಹೃದಯೀ ಸ್ನೇಹಿತರು, ಇಂದಿನ ಸ್ಥಿತಿಗೆ ಕಾರಣರಾದ ವೈದ್ಯರು ಎಲ್ಲರಿಗೂ ನಾನು ಅತ್ಯಂತ ಋಣಿಯಾಗಿದ್ದೇನೆ.

ನನ್ನ ಮನೆಯವರು ನನ್ನನ್ನು ಎಂದೂ ಖಾಯಿಲೆಯವಳೆಂದು ಪರಿಗಣಿಸಿಲ್ಲ. ನನ್ನ ಅಸಹಾಯಕತೆಯನ್ನು ದೊಡ್ಡದು ಮಾಡಿಲ್ಲ. ನೆರವು ಬೇಕಿದ್ದಾಗ ಕೈಚಾಚಿದರು – ಕರುಣೆಯಿಂದಲ್ಲ – ಅದು ಸಹಜವೆನ್ನುವಂತೆ. ನನಗಾಗಿ ಕಣ್ಣೀರು ಸುರಿಸಲಿಲ್ಲ; ಯಾರೊಂದಿಗೂ ಕಷ್ಟ ಹೇಳಿಕೊಳ್ಳಲಿಲ್ಲ. “ಕೈಲಾದಷ್ಟನ್ನು ಮಾಡು, ಜೊತೆಗೆ ನಾವಿದ್ದೇವೆ” ಎನ್ನುವ ಆತ್ಮವಿಶ್ವಾಸವನ್ನು ತುಂಬಿದ್ದಾರೆ. ನನ್ನನ್ನು ಅಸಹಾಯಕತೆಯ ನೆಪದಿಂದ ಮೂಲೆಗುಂಪಾಗಿಸಲಿಲ್ಲ; ಎಲ್ಲೆಡೆಯೂ ಕರೆದುಕೊಂಡು ಹೋಗಿ ನನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿದ್ದಾರೆ. ಇದು ನನ್ನ ಮರುಹುಟ್ಟು!

ಎಲ್ಲರ ಜೀವನದಲ್ಲೂ ಎಷ್ಟೆಷ್ಟೋ ಘಟ್ಟಗಳಿರುತ್ತವೆ. ನನ್ನ ಜೀವನದಲ್ಲಿ ನಾನು ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾಗ ಮಾಡಿದ ಅಮೋಘ ಸಾಧನೆ ನನ್ನ ಈ ನೇಪಾಳದ ಯಾತ್ರೆ. ನಿಮ್ಮ ನಡುವೆ ನನ್ನಂತವರಿದ್ದರೆ ಈ ಲೇಖನ ಅವರಿಗೊಂದು ಮಾರ್ಗದರ್ಶಿಯಾಗಲಿ, ಆಶಾಕಿರಣವಾಗಲಿ. ಅಸಹಾಯ ಸ್ಥಿತಿಯಲ್ಲಿರುವ ಮನುಷ್ಯನಿಗೆ ಬೇಕಾದ್ದು ಕರುಣೆಯಲ್ಲ, ಅವಶ್ಯಕತೆಗನುಗುಣವಾದ ಸಹಾಯ. ನೈತಿಕವಾಗಿ, ಮಾನಸಿಕವಾಗಿ ಹಿಂಸಿಸುವ ಕರುಣೆಗಿಂತ, ಮನೋಬಲವನ್ನು ಹೆಚ್ಚಿಸುವಂತ ಸಹಾಯದ ಬೆಂಬಲವೇ ನಿಜವಾದ ಮನುಷ್ಯತ್ವ. ನೀವೇನಂತೀರಿ?

2002ರಲ್ಲಿ ಬರೆದ ಲೇಖನ. ಹಾಗಾಗಿ ಇಲ್ಲಿ ಇರುವ ಕೆಲವು ವಿವರಗಳು ಈಗ ಬದಲಾವಣೆಗಳಾಗಿವೆ.

ಓದುಗರು ಒಂದು ಹದಿನೈದು ವರ್ಷ ಹಿಂದಿನ ಪರಿಸ್ಥಿತಿಯನ್ನು ಮನಸ್ಸಿಗೆ ತಂದುಕೊಂಡು ಓದಿದರೆ ಹೆಚ್ಚು ಅರ್ಥಪೂರ್ಣ.

‍ಲೇಖಕರು avadhi

August 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ashalathamangaluru

    Madam, your will power is really great. Hats off to your family members.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: