ಅವರು ಗ್ರಂಥಾಲಯಗಳ ಉಸಿರು..

ಇಂದು ಗ್ರಂಥಪಾಲಕ ದಿನಾಚರಣೆ

ಜನಮೆಚ್ಚಿದ ಗ್ರಂಥಪಾಲಕ ದೇವೇಂದ್ರಪ್ಪ ಎನ್ ಡೊಳ್ಳಿನ

ಪ್ರಾಣೇಶ ಪೂಜಾರ / ಗಿಣಗೇರಾ

ಆಗಸ್ಟ ೧೨ ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಜನುಮದಿನ. ಅವರ ಜನ್ಮದಿನವನ್ನು ರಾಷ್ಟ್ರದಾದ್ಯಂತ ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಶ್ರೀಸಾಮಾನ್ಯನ ವಿಶ್ವವಿದ್ಯಾಲಯಗಳಾಗಿ ರೂಪಿಸಿ, ವಿದ್ಯಾವಂತ ಸಮುದಾಯದ ನಿರ್ಮಾಣ ಮಾಡಲು ತೆರೆಮರೆಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸಲಾಗುತ್ತದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಕೊಪ್ಪಳ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಓದುಗ ಸ್ನೇಹಿಯಾಗಿ ಬೆಳೆಸಿ, ಪುಸ್ತಕ ಪ್ರೀತಿಯನ್ನು ಜನಸಮುದಾಯದಲ್ಲಿ ಹೆಚ್ಚಿಸಲು ತಮ್ಮ ಸೇವಾವಧಿಯ ಉದ್ದಕ್ಕೂ ಶ್ರಮಿಸಿದ ಕೊಪ್ಪಳದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ಗ್ರಂಥಪಾಲಕ ದಿವಂಗತ ದೇವೇಂದ್ರಪ್ಪ ಎನ್ .ಡೊಳ್ಳಿನ ಅವರು, ಸಾರ್ವಜನಿಕ ಗ್ರಂಥಾಲಯದ ಏಳ್ಗೆಗೆ ತಮ್ಮ ಬದುಕು ಸವೆಸಿದ ಹಾದಿಯ ಒಂದು ಮೆಲುಕು ಇಲ್ಲಿದೆ.

ಸಾರ್ವಜನಿಕ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಲೇ ತಮ್ಮ ಇಲಾಖೆಯನ್ನು ಜನರೆಡೆಗೆ ಒಯ್ದ ಗ್ರಂಥಪಾಲಕರಿವರು. ತಾನು ಸೇವೆ ಸಲ್ಲಿಸಿದ ಇಲಾಖೆಗೆ ಕೊಪ್ಪಳದಲ್ಲಿ ಸ್ವಂತ ನಿವೇಶನ ದೊರಕಿಸಿ, ಕಟ್ಟಡವಾಗಲು ಶ್ರಮಿಸಿದವರು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತ, ಸದ್ದಿಲ್ಲದೆ ಓದುಗರ ದಾಹ ತೀರಿಸುತ್ತ ಸೇವೆ ಒದಗಿಸಿದವರು. ಸ್ವತಃ ಹಾಸ್ಟೇಲು ಜೀವನದ ಅನುಭವವಿದ್ದ ದೇವೆಂದ್ರಪ್ಪ ಎನ್.ಡೊಳ್ಳಿನ ಅವರು ವಿಶೇಷವಾಗಿ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳು ತಪ್ಪದೇ ಗ್ರಂಥಾಲಯಕ್ಕೆ ಬರುವುದನ್ನು ಪ್ರೋತ್ಸಾಹಿಸುತ್ತಿದ್ದರು. ಕ್ರೀಡೆ ಮತ್ತು ಗ್ರಂಥಾಲಯದ ನಿಕಟ ಸಂಪರ್ಕದಲ್ಲಿ ಇರುವ ಎಲ್ಲ ವ್ಯಕ್ತಿಗಳೂ ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಬಲ್ಲರು ಎಂಬ ನಂಬಿಕೆಯಿರಿಸಿಕೊಂಡು ಅದರಂತೆ ಬದುಕಿದವರು. ಪುಸ್ತಕ ವಿತರಣೆಯ ವೃತ್ತಿಯ ಜೊತೆಗೆ ಕೊಪ್ಪಳದಲ್ಲಿ ಕುಸ್ತಿ,ಕಬಡ್ಡಿ ಪಂದ್ಯಾವಳಿಗಳ ಆಯೋಜನೆಯಲ್ಲಿಯೂ ಅವರು ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

೧೯೮೩ ರ ಸಮಯ ಆಗಿನ್ನೂ ಕೊಪ್ಪಳ ರಾಯಚೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಒಂದು ಪುಟ್ಟ ಶಾಖೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೂ ಮುನ್ನ ಸಾರ್ವಜನಿಕ ವಾಚನಾಲಯಗಳು ನಗರ ಸ್ಥಳೀಯ ಸಂಸ್ಥೆಗಳ ಮೂಲಕವೇ ನಡೆಯುತ್ತಿದ್ದವು. ನಂತರ ಅವುಗಳನ್ನೆಲ್ಲ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ಸೇರಿಸುವ ಕಾರ್ಯ ಎಂಬತ್ತರ ದಶಕದಲ್ಲಿ ರಾಜ್ಯದಾದ್ಯಂತ ನಡೆಯಿತು.

ದೇವೇಂದ್ರಪ್ಪ ಎನ್ ಡೊಳ್ಳಿನ ಕೊಪ್ಪಳಕ್ಕೆ ಬಂದು ೧೯೮೩ ರಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭಿಸಿ, ಇಲ್ಲಿಯೇ ನೆಲೆ ನಿಂತು ಇಲ್ಲಿಯೇ ೨೦೦೬ ರಲ್ಲಿ ನಿವೃತ್ತರಾಗುವವರೆಗೆ ಸುಮಾರು ೨೬ ವರ್ಷಗಳ ಕಾಲ ಸುದೀರ್ಘ ತಮ್ಮ ಸೇವಾವಧಿಯಲ್ಲಿ ಕೊಪ್ಪಳ ಜನರ ಮನಸ್ಸಿನಲ್ಲಿ ಉಳಿಯುವಂಥ ಗ್ರಂಥಪಾಲಕರೆನಿಸಿದರು. ಕೊಪ್ಪಳದ ಅಶೋಕ ವೃತ್ತದಲ್ಲಿನ ಈಗ ಸಾಹಿತ್ಯ ಭವನ, ಲಯನ್ಸ್ ಕಣ್ಣಿನ ಆಸ್ಪತ್ರೆ ಇರುವ ಸ್ಥಳದಲ್ಲಿ ಆಗ ಹಳೆಯ ಬಸ್ ನಿಲ್ದಾಣವಿತ್ತು. ಖಾಸಗಿ ಬಸ್ಸುಗಳೇ ಅಧಿಕವಾಗಿದ್ದವು. ಪುಟ್ಟ ತಾಲೂಕು ಕೇಂದ್ರವಾಗಿದ್ದ ಕೊಪ್ಪಳದಲ್ಲಿ ಆಗ ಜನಸಂಚಾರ, ವಾಹನ ಸಂಚಾರವೂ ಅಷ್ಟೇ ವಿರಳವಾಗಿತ್ತು. ಅದರ ಆವರಣದಲ್ಲಿಯೇ ಈಗ ಸಾರ್ವಜನಿಕ ಗ್ರಂಥಾಲಯ ಇರುವ ಸ್ಥಳದಲ್ಲಿಯೇ ಇದ್ದ , ಹೈದರಾಬಾದ್ ನವಾಬರ ಕಾಲದ ಐತಿಹಾಸಿಕ ಹಂಚಿನ ಕಟ್ಟಡದಲ್ಲಿ ಗ್ರಂಥಾಲಯ ತಲೆ ಎತ್ತಿತು.

ಕೊಪ್ಪಳದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ನೀವೆಶನ ಪಡೆಯಲು ಡಿ.ಎನ್.ಡೊಳ್ಳಿನ ತಮ್ಮ ಹುದ್ದೆಯ ಇತಿಮಿತಿಗಳ ನಡುವೆಯೂ ಕೊಪ್ಪಳದ ಅಂದಿನ ಸಾಹಿತಿಗಳ, ಹೋರಾಟಗಾರರ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಗ್ರಂಥಾಲಯ ಓದುಗರ ಸಹಕಾರ ಪಡೆದು ಅಂದಿನ ಕೊಪ್ಪಳ ಪುರಸಭೆಯ ಮೂಲಕ ಗ್ರಂಥಾಲಯ ಇಲಾಖೆಗೆ ನಿವೇಶನ ಪಡೆಯಲು ಪ್ರಮುಖಪಾತ್ರವಹಿಸಿದರು ಎಂದು ಆಗ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯದ ನಿರ್ದೇಶಕರಾಗಿದ್ದ ಟಿ. ಮಲ್ಲೇಶಪ್ಪ ಈಗಲೂ ನೆನಪಿಸಿಕೊಳ್ಳುತ್ತಾರೆ.
ನಂತರ ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ತಲೆ ಎತ್ತಲೂ ಕೂಡ ಇವರು ಅಹರ್ನಿಶಿಯಾಗಿ ದುಡಿದದ್ದನ್ನು ಕೊಪ್ಪಳದ ಜನ ಸ್ಮರಿಸುತ್ತಾರೆ.

ಓರ್ವ ಗ್ರಂಥಪಾಲಕ ಉತ್ತಮ ಮಾಹಿತಿಯುಳ್ಳ ಸಂಪನ್ಮೂಲ ವ್ಯಕ್ತಿಯಾಗಿಯೂ ಇರಬೇಕು ಎಂಬಂತೆ ಡಿ.ಎನ್.ಡೊಳ್ಳಿನ ತಮ್ಮ ಕರ್ತವ್ಯವನ್ನು ಸರಸ್ವತಿ ದೇಗುಲದ ಸೇವೆ ಎಂಬ ಶ್ರದ್ಧೆಯೊಂದಿಗೆ ಪ್ರೀತಿಯಿಂದ ನಿರ್ವಹಿಸಿದರು. ಮಾಹಿತಿ ತಂತ್ರಜ್ಞಾನ ಈಗಿನಷ್ಟು ಅಭಿವೃದ್ಧಿ ಹೊಂದಿರದ ಕಾಲದಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಸರ್ಕಾರದ ಗೆಜೆಟ್ ಗಳೇ ಆಗ ಮಾಹಿತಿಯ ಏಕೈಕ ಮೂಲಗಳಾಗಿದ್ದವು. ಅವುಗಳಲ್ಲಿ ಪ್ರಕಟವಾಗುತ್ತಿದ್ದ ವಿವಿಧ ಪ್ರಕಟಣೆಗಳನ್ನು ಗುರುತಿಸಿ ತಮ್ಮ ಗ್ರಂಥಾಲಯಕ್ಕೆ ಬರುತ್ತಿದ್ದ ಅರ್ಹ ಓದುಗರಿಗೆ ಸ್ವತಃ ಒದಗಿಸಿ ಅರ್ಜಿ ಹಾಕಲು ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸಿಂಧನೂರಿನ ಗ್ರಂಥಾಲಯದಲ್ಲಿದ್ದಾಗ ಅಂದು ನನ್ನ ವಿದ್ಯಾರ್ಹತೆ ಗಮನಿಸಿ ಭಾಷಾಂತರ ಇಲಾಖೆಗೆ ಅರ್ಜಿ ಸಲ್ಲಿಸಲು ಸೂಚಿಸಿದ ಕಾರಣದಿಂದಾಗಿಯೇ ಆ ಇಲಾಖೆಯ ಅತ್ಯುನ್ನತ ಹುದ್ದೆಯಾಗಿರುವ ನಿರ್ದೇಶಕ ಹುದ್ದೆಗೆ ಏರಲು ಕಾರಣವಾಯಿತು ಎಂದು ಹೆಸರಾಂತ ಸಾಹಿತಿ, ಭಾಷಾಂತರ ಇಲಾಖೆಯ ನಿವೃತ್ತ ನಿರ್ದೇಶಕ ಈರಪ್ಪ ಎಂ. ಕಂಬಳಿ ಈಗಲೂ ಸ್ಮರಿಸುತ್ತಾರೆ. ಇವರಂತೆ ಗ್ರಂಥಾಲಯದಲ್ಲಿ ಮಾಹಿತಿ ಪಡೆದ ಅದೆಷ್ಟೊ ಯುವಕರು ಇಂದು ನ್ಯಾಯಾಧೀಶರಾಗಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಉಪನ್ಯಾಸಕ, ಕೃಷಿ ಇಲಾಖೆ, ವಿವಿಧ ಕಡೆ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಯಾವುದೇ ಉನ್ನತ ಗೆಜೆಟೆಡ್ ಹುದ್ದೆ ಅಲಂಕರಿಸದೆ, ಸಾರ್ವಜನಿಕ ಗ್ರಂಥಾಲಯದಲ್ಲಿ ತಮ್ಮ ವೃತ್ತಿ ಪ್ರೇಮದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಡಿ.ಎನ್.ಡೊಳ್ಳಿನ ಅವರು ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರು. ಹುಟ್ಟೂರು ಪಶುಪತಿಹಾಳ, ಕುಂದಗೋಳ,ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ಸಿ.ಲಿಬ್.ಸೈನ್ಸ್ ಗ್ರಂಥಾಲಯ ತರಬೇತಿ ಪಡೆದು ನಂತರ ಕೋಲಾರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ರಾಯಚೂರು, ಸಿಂಧನೂರು, ಕೊಪ್ಪಳದಲ್ಲಿ ಸೇವೆ ಸಲ್ಲಿಸಿ ೨೦೦೬ ರಲ್ಲಿ ಸೇವಾ ನಿವೃತ್ತಿ ಹೊಂದಿ ಕೊಪ್ಪಳದಲ್ಲೆ ನೆಲೆಸಿದ್ದರು. ಕಳೆದ ೨೦೧೮ ರ ಅಕ್ಟೊಬರ್ ೨೯ ರಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದರು.

‍ಲೇಖಕರು avadhi

August 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: