ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಬೀಳಗಿ ಕವಿತೆ- ನನ್ನೂರಿನ ಗೋರಿ…

ಬಸವರಾಜ ಬೀಳಗಿ

ನನ್ನೂರಿನ ಗೋರಿಗಳಿಗೂ ಗಾಯದ ಗುರುತುಗಳಿವೆ.
ಸುಣ್ಣ ಬಳಿದ ಗೋಡೆಗಳ ಮೇಲೆ ಹಸಿ ರಕ್ತದ ಕಲೆಗಳಿವೆ.

ಅದೋ ಅವನು;
ಗರಿಗರಿ ಪಿತಾಂಬರ ತೊಟ್ಟು ಮೀಸೆ ತಿರುವಿ
ನ್ಯಾಯ ಹೇಳಿದ ಕಚ್ಚೆ ಹರುಕನೊಬ್ಬ
ಗೋರಿಯೊಳಗಿನಿಂದ ಇಣುಕುತ್ತಿದ್ದಾನೆ.

ಇಲ್ಲೊಬ್ಬಳು ಕನ್ಯೆ;
ಯಾರದೋ ತೊಡೆಯ ಸಂಧಿಯ
ವಾಂಛೆಗೆ ಸವೆದು
ತನ್ನ ಸೌಂದರ್ಯ ಶಪಿಸುತ್ತಾ
ರಕ್ತದ ಕಲೆಗಳನು ಮಣ್ಣಿನಲಿ ತೊಳೆಯುತ್ತಿದ್ದಾಳೆ.

ಅದೋ ನನ್ನೂರಿನ ರಾಜ;
ನೂರು ಯುದ್ಧಗಳ ಗೆದ್ದು ಬಿಗಿದವ
ಸಾವಿರ ಶತ್ರುಗಳ ಹೊಡೆದುರುಳಿಸಿ
ಅವರ ಮಡದಿಯ ಹೊತ್ತು ತಂದವ
ನಿದ್ರೆ ಬಾರದೆ ಮಗ್ಗಲು ಬದಲಿಸುತ್ತಿದ್ದಾನೆ.

ಅದೋ ಹಸುಳೆ;
ಜಗವ ಕಾಣುವ ಮೊದಲೇ ಹೆಣ್ಣೆಂದು
ಚಿವುಟಿದ ಸಮಾಜವನು ಕಂಡು ನಗುತ್ತಾ
ತನ್ನ ಪುಟ್ಟ ಗೋರಿಯ ಮೇಲೆ ಬೆಳೆದ ಹುಲ್ಲುಗರಿಕೆಗಳು
ಹೆಣ್ಣೋ ಗಂಡೋ ಎಂದು ಎಣಿಕೆ ಹಾಕುತ್ತಿದ್ದಾಳೆ.

ಅದೋ ಅಲ್ಲೊಬ್ಬ;
ಬಿಸಿ ರಕ್ತದ ಯುವಕ ಯಾರದೋ ಹುಸಿ ಮಾತುಗಳಿಗೆ
ಮಾರುಹೋಗಿ ರಣರಂಗದಲ್ಲಿ ನೆತ್ತರುಹರಿಸಿ
ಅರಿಶಿಣ ಆರದ ವಿಧವೆ ಮಡದಿಯ ಕಣ್ಣೀರು ಒರೆಸುತ್ತಿದ್ದಾನೆ.

‍ಲೇಖಕರು Admin

22 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading