ಲಾವಣ್ಯ ಎನ್ ಕೆ
ಬಂಧಿಯಾಗಿದ್ದೇವೆ ಒಳಗೆ,
ಮನೆಯ ಕೋಣೆಗಳಂತೆ, ಮನವೂ
ಸಣ್ಣದಾಗುತ್ತಿದೆ..
ಯಾರು? ಯಾಕೆ? ಎಲ್ಲಿಯ ತನಕ?
ಅವರೂ ಹೇಳೂ ಇಲ್ಲ
ಕೇಳುವ ಗೋಜಿಗೆ ನಾವೂ ಹೋಗಿಲ್ಲ
ಯಾವ ದಿನವೋ, ಯಾವ ವಾರವೋ
ಬೆಳಗು, ಮಧ್ಯಾಹ್ನ, ಸಂಜೆ, ಕತ್ತಲು
ಒಂದಾದ ಮೇಲೆ ತಾ ಮುಂದು ನಾಮುಂದು
ಎನ್ನುವಂತೆ ಓಡುತ್ತಿದೆ. ಕಾಲಚಕ್ರವೇ
ಒಂದು ಬಾರಿ ನಿಲ್ಲಲೇ ಎಂದು
ಯೋಚಿಸುತ್ತಿದೆ.
ಮುಂಜಾವಿನ ಬೆಳಕು ನಗೆಯನ್ನು ಬಿತ್ತುತ್ತಿಲ್ಲ
ಅಪರಾಹ್ನದ ಕತ್ತಲೆಗೆ ಏನೂ ತೋಚುತ್ತಿಲ್ಲ
ಅಪರಾತ್ರಿಯ ಭಯಕ್ಕೆ ಬುದ್ಧಿಯ ಮಾತುಗಳು ಕೇಳುವುದಿಲ್ಲ
ಬೆಳದಿಂಗಳ ಚಂದಿರನೂ ಒಮ್ಮೆ ಸತ್ತಂತೆ ಕಾಣುತ್ತಾನೆ.
ಭೂಮಿಯೂ ಒಮ್ಮೆ ನಿಲ್ಲಲೇ ಎಂದು
ಯೋಚಿಸುತ್ತಿದೆ.

ಧರ್ಮದ ಕಲೆಗಳು ಸಾವಿಗಿಂತಲೂ ಸ್ಪಷ್ಟವಾಗಿ ಕಾಣುತ್ತಿವೆ
ಮೇಲೆ ಇದ್ದವರು, ಮಹಡಿಯ ಮೇಲೆ ನಿಂತೇ ಜಗ ನೋಡುತ್ತಿದ್ದಾರೆ.
ಕೆಳಗಿರುವ ಹಸಿವು ಕಣ್ಣಿಗೆಲ್ಲಿ ಕಾಣಬೇಕು?
ಸುಮ್ಮನೆ ಕೂರಲಿಕ್ಕಾಗದವರು, ಓಡುವವರು, ಕೂತು ತಿನ್ನುವವರು ಎಲ್ಲರನ್ನು ಕೂಡಿಹಾಕಿದ್ದಾರೆ. ಒಮ್ಮೆ
ಮನುಷ್ಯನೂ ನಿಂತು ನೋಡಿಕಳ್ಳಬೇಕೋ ಏನೋ?
ಹೊತ್ತಿಗೆ ಊಟ, ನೆಮ್ಮದಿಯ ನಿದ್ದೆಗೆ ಹದವಾದ ಹಾಸಿಗೆ
ಕೂಡಿಹಾಕಿದಾಗ ಒಳಗೆ ಕೂರಲಿಕ್ಕೊಂದು ಸೂರು, ಸತ್ತರೆ
ಎತ್ತಿ ಹಾಕಲು ಜನ ಇದ್ದಾರೆ ಎಂಬ ನಂಬಿಕೆ ಸುಳ್ಳಾಗುವುದಕ್ಕೆ
ಮೊದಲು, ಮನುಷ್ಯನೂ ಒಮ್ಮೆ ನಿಲ್ಲಲೇ ಎಂದು ಯೋಚಿಸಬೇಕು. ಇಲ್ಲದಿದ್ದರೆ ಇತಿಹಾಸದ ತಪ್ಪುಗಳು ಉಸಿರು
ನಿಲ್ಲುವ ತನಕ ನಿಲ್ಲುವುದಿಲ್ಲ.






Nammelara manada maatugala bannisi baredadakke ಧನ್ಯವಾದಗಳು.
ಆತ್ಮಾವಲೋಕನದ ಸಮಯ!!. ಒಳ್ಳೆಯ ಕವಿತೆ, ಅಭಿನಂದನೆಗಳು