ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಹಂಪನಾ ಮತ್ತು ಹಳೆಯ ಪುಸ್ತಕದ ಬಾಕ್ಸ್ !

ಹಿರಿಯ ಸಾಹಿತಿ, ಖ್ಯಾತ ಸಂಶೋಧಕ, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ… ಹಂಪ ನಾಗರಾಜಯ್ಯ ಅವರನ್ನು ಹೀಗೆಲ್ಲಾ ಗುರ್ತಿಸುವುದುಂಟು.

“ಜೈನ ಸಾಹಿತ್ಯದ ನಡೆದಾಡುವ ವಿಶ್ವಕೋಶ” ಎಂಬುದು ಅವರ ಹೆಗ್ಗಳಿಕೆ. ‘ಹಂಪನಾ ‘ ಎಂಬ ಮೂರಕ್ಷರದಿಂದಲೇ ಹೆಸರಾಗಿರುವ ಅವರೊಂದಿಗಿನ ಸವಿನೆನಪುಗಳ ಗುಚ್ಛ ಇಲ್ಲಿದೆ…

ಒಂದು ದಿನ ಹಂಪನಾ ಸರ್ ನನ್ನ ಕಛೇರಿಗೆ ಬಂದು ಎರಡನೇ ವಿಶ್ವ ಕನ್ನಡ ಸಮ್ಮೇಳನ ದ ಸಂದರ್ಭ ಸಂಚಿಕೆಯನ್ನು ನಾನು ಹಾಗೂ ಜಿ.ಎನ್.ಮೋಹನ್ ಸೇರಿ ಸಂಪಾದನೆ ಮಾಡುತ್ತಿದ್ದೇವೆ….. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇದರ ಮುದ್ರಣಕ್ಕೆ ಕೊಟೇಶನ್ ಕರೆದಿದ್ದಾರೆ. ನೀನು ಅದರ ಮುದ್ರಣಕ್ಕೆ ಮನವಿ ಮಾಡಿ, ನಿರ್ದೇಶಕರಿಗೆ ಒಂದು ಕೊಟೇಶನ್ ಕೊಡು ಎಂದು ಸಂಚಿಕೆಯ ವಿವರ ಕೊಟ್ಟು ಹೋದರು. ನಾವು ಅದರಂತೆ ಸಂಚಿಕೆಯ ಮುದ್ರಣಕ್ಕೆ ದರ ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟೆವು.

ಒಂದೆರಡು ವಾರ ಆದಮೇಲೆ ಹಂಪನಾ ಅವರು ಕರೆಮಾಡಿ – “ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರ ಕಛೇರಿಗೆ ತಕ್ಷಣ ಬಾ “ಎಂದರು…
ನಾನು ನಿರ್ದೇಶಕರ ಕಚೇರಿಗೆ ಹೋದೆ. ಅಲ್ಲಿ ನಿರ್ದೇಶಕರಾಗಿದ್ದ ಡಾ॥ ಮನು ಬಳಿಗಾರ್, ವಿಶ್ವ ಕನ್ನಡ ಸಮ್ಮೇಳನದ ವಿಶೇಷ ಅಧಿಕಾರಿ ಐ. ಎಂ. ವಿಠ್ಠಲಮೂರ್ತಿ, ಹಂಪನಾ ಸರ್, ಜಿ.ಎನ್. ಮೋಹನ್ ಸರ್, ಎಲ್ಲರ ಸಮ್ಮುಖದಲ್ಲಿ ಸಂದರ್ಭ ಗ್ರಂಥದ ಮುದ್ರಣ ಸಭೆ ನಡೆಯುತ್ತಿತ್ತು. ಅಲ್ಲಿ ನನಗೊಂದು ಸಿಹಿಸುದ್ದಿ ಕಾದಿತ್ತು! ಸಂದರ್ಭ ಸಂಚಿಕೆ ಮುದ್ರಣಕ್ಕೆ ಬಂದಿದ್ದ ದರಪಟ್ಟಿ ಗಳಲ್ಲಿ ನಮ್ಮದೇ ಎಲ್ಲರಿಗಿಂತ ಕಮ್ಮಿಯಿದ್ದು , ನಮಗೆ ಮುದ್ರಣ ಆದೇಶ ನೀಡಲು ಚರ್ಚೆ ನಡೆಯುತ್ತಿತ್ತು .

ಆಗಿನ್ನೂ ನಾವು ಮುದ್ರಣಾಲಯ ಶುರುಮಾಡಿದ ಪ್ರಾರಂಭದ ವರ್ಷಗಳು.ಇದನ್ನು ಗಮನಿಸಿದ ಐ.ಎಂ.ವಿಠ್ಠಲಮೂರ್ತಿ ಅವರು, ಇವರ ಕೈಯಲ್ಲಿ ಈ ದೊಡ್ಡ ಕೆಲಸ ಮಾಡಿಸಲು ಸಾಧ್ಯವೇ..? ಎಂದು ಅನುಮಾನಿಸಿದರು. ಆಗ ಹಂಪನಾ ಸರ್ , ಮೋಹನ್ ಸರ್, ಮರಿಶಾಮಾಚಾರ್ ಸರ್, ಎಲ್ಲರೂ ನನ್ನ ಪರ ನಿಂತು ವಿಠ್ಠಲ್ ಮೂರ್ತಿ ಅವರ ಮನಸ್ಸು ಒಲಿಸಿ ನಮಗೆ ಮುದ್ರಣದ ಆದೇಶ ಕೊಡಿಸಿದರು.

ಖ್ಯಾತ ಕಲಾವಿದ ಪ.ಸ. ಕುಮಾರ್ ಅವರಿಂದ ಪ್ರತಿ ಲೇಖನಕ್ಕೂ ಒಂದೊಂದು ಲೈನ್ ಆರ್ಟ್ ಬರೆಸಿ ಸಂದರ್ಭ ಸಂಚಿಕೆಯನ್ನು ಜಿ.ಎನ್.ಮೋಹನ್ ಸರ್ ಅವರೇ ಕೂತು ವಿಶೇಷವಾಗಿ ವಿನ್ಯಾಸ ಮಾಡಿಸಿದರು. ಅಂತಿಮವಾಗಿ ಪ್ರೂಫ್ ವಿನ್ಯಾಸವನ್ನೆಲ್ಲಾ ಮತ್ತೊಮ್ಮೆ ನೋಡಿ ಮುದ್ರಣಕ್ಕೆ ಕೊಟ್ಟ ಹಂಪನಾ ಸರ್ ಅವರು , ” ನೋಡಪ್ಪ ಕಿಟ್ಟಿ, ಕಾರ್ಯಕ್ರಮ ಇನ್ನು ನಾಲ್ಕು ದಿನ ಇದೆ, ಅದು ನಡೆಯುವುದು ದೂರದ ಬೆಳಗಾವಿಯಲ್ಲಿ. ನನಗೆ ಒಂದೇ ದಿನ ಅಷ್ಟು ದೂರ ಪ್ರಯಾಣ ಮಾಡಲು ಆಗುವುದಿಲ್ಲ, ನಾನು ಎರಡು ದಿನ ಮುಂಚೆ ಪುಸ್ತಕ ತೆಗೆದುಕೊಂಡೇ ಹೋಗುತ್ತೇನೆ . ನೀನು ಪುಸ್ತಕ ಬಿಡುಗಡೆಗೆ ಐವತ್ತು ಪ್ರತಿಗಳನ್ನು ಸಿದ್ಧಮಾಡಿ, ನಾಡಿದ್ದು ಮಧ್ಯಾಹ್ನ 1 ಗಂಟೆ ಒಳಗೆ ನನ್ನ ಮನೆಗೆ ತಂದುಕೊಟ್ಬಿಡು..”. ಎಂದು ಹೇಳಿ ಹೊರಟುಬಿಟ್ಟರು.

ನಾವು ಹಗಲು ರಾತ್ರಿ ಕೆಲಸ ಮಾಡಿದರೂ, ಹಂಪನಾ ಸರ್ ಹೊರಡುವ ಸಮಯಕ್ಕೆ ಪುಸ್ತಕ ಕೊಡಲು ಸಾಧ್ಯವಾಗಲೇ ಇಲ್ಲ . ಸರ್ ಗೆ ಕರೆ ಮಾಡಿ ನೀವು ಹೊರಡಿ ಸರ್, ರಾತ್ರಿ ನಮ್ಮ ಹುಡುಗ ಬೆಳಗಾವಿಗೆ ಪುಸ್ತಕಗಳನ್ನು ತರುತ್ತಾನೆ ಅಂದರೆ, ಸರ್ ಅದಕ್ಕೆ ಒಪ್ಪಲೇ ಇಲ್ಲ. ಪುಸ್ತಕ ಕೊಟ್ಟರೆನೇ ನಾನು ಹೋಗುವುದು ಎಂದು ಖಡಾಖಂಡಿತವಾಗಿ ಸ್ವಲ್ಪ ಸಿಟ್ಟಿನಿಂದ ಹೇಳಿಬಿಟ್ಟರು .! ಏನು ಮಾಡುವುದು ಎಂದು ಗೊತ್ತಾಗ್ಲಿಲ್ಲ .ಒತ್ತಡಕ್ಕೆ ತಲೆಯೂ ಓಡುತ್ತಿಲ್ಲ..! ಆಗಲೇ ಒಂದು ಉಪಾಯ ಹೊಳೆಯಿತು .

“ನಾವು ಮುದ್ರಣ ಮಾಡುತ್ತಿರುವ ಕಾಗದದಲ್ಲೇ, ಲೇಸರ್ ಪ್ರಿಂಟರ್ ನಲ್ಲಿ ಹಿಂದೆ ಮುಂದೆ ಬರುವ ಹಾಗೆ ಎಲ್ಲಾ ಪುಟಗಳನ್ನು ಪ್ರಿಂಟ್ ತೆಗೆದು, ಒಂದು ಪುಸ್ತಕ ರೆಡಿ ಮಾಡಿ ಬೈಂಡ್ ಮಾಡಿದೆವು. ನಂತರ, ನಮ್ಮ ಬಳಿ ಇದ್ದ ವೇಸ್ಟ್ ಪುಸ್ತಕಗಳನ್ನೆಲ್ಲಾ ಒಂದು ಬಾಕ್ಸ್ ಗೆ ತುಂಬಿ, ಸ್ವಲ್ಪವೂ ಕಾಣದ ಹಾಗೆ ಪ್ಯಾಕ್ ಮಾಡಿ ತೆಗೆದುಕೊಂಡು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಹಂಪನಾ ಸರ್ ಮನೆಗೆ ಹೋದೆವು . ಸರ್ ಕೈಗೆ ಲೇಸರ್ ಪ್ರಿಂಟರ್ ನಲ್ಲಿ ಪ್ರಿಂಟ್ ಮಾಡಿದ ಒಂದು ಪುಸ್ತಕ ಕೊಟ್ಟು ಬಾಕಿ 50 ಪುಸ್ತಕಗಳು ಬಾಕ್ಸ್ ನಲ್ಲಿ ಇವೆ, ” ಎಂದು ಸುಳ್ಳು ಹೇಳಿ ಬಾಕ್ಸ್ ಅನ್ನು ಅವರ ಲಗೇಜ್ ಜೊತೆ ಕಾರ್ ನಲ್ಲಿ ಇಟ್ಟುಬಿಟ್ಟೆವು. ನಂತರ ಕಾರ್ ಡ್ರೈವರ್ ಮೊಬೈಲ್ ನಂಬರ್ ತೆಗೆದುಕೊಂಡು ಅವರನ್ನು ಕಳಿಸಿಕೊಟ್ಟೆವು .

ಹಂಪನಾ ಅವರು ಹೊರಡುವಾಗ – “ಇಂದು ರಾತ್ರಿ ಚಿತ್ರದುರ್ಗದಲ್ಲಿ ತಂಗಿದ್ದು , ನಾಳೆ ಬೆಳಗ್ಗೆ ಹೊರಟು, ಹುಬ್ಬಳ್ಳಿಯ ಶಿಷ್ಯನ ಮನೆಯಲ್ಲಿ ಮಧ್ಯಾಹ್ನ ಊಟ, ವಿಶ್ರಾಂತಿ ಮಾಡಿ ಸಂಜೆ ಹೊತ್ತಿಗೆ ಬೆಳಗಾವಿ ಸೇರುತ್ತೇವೆ ” ಎಂದು ಹೇಳಿದರು. ನಮ್ಮ ಪ್ರೆಸ್ ನಲ್ಲಿ ಶರವೇಗದಿಂದ ಕೆಲಸ ಮುಂದುವರೆಯಿತು. ಕಡೆಗೆ ರಾತ್ರಿ 2 ಗಂಟೆ ವೇಳೆಗೆ 50 ಪುಸ್ತಕಗಳು ರೆಡಿ ಆದವು. ನಮ್ಮ ಹುಡುಗ ಸುಜನ್ ಪುಸ್ತಕದ ಬಾಕ್ಸ್ ಜೊತೆ ಹೋಗಿ, ಬೆಳಗ್ಗೆ ಮಾರ್ಗ ಮಧ್ಯದಲ್ಲಿ ಡ್ರೈವರ್ ಗೆ ಕರೆ ಮಾಡಿ ಎಲ್ಲಿದ್ದಾರೆ ಎಂದು ತಿಳಿದು ಕೊಂಡು, ಪುಸ್ತಕ ಗಳ ಬಾಕ್ಸ್ ಅನ್ನು ಅವರ ಕಾರಿನಲ್ಲಿ ಇಟ್ಟು ,ಮೊದಲು ಕೊಟ್ಟ ಬಾಕ್ಸ್ ಅನ್ನು ವಾಪಸ್ ತಂದ ! ನಡೆದದ್ದು ಏನೆಂದು ಗೊತ್ತಾದ ಮೇಲೆ ಹಂಪನಾ ಸರ್ ತುಸು ಗಾಬರಿಯಾಗಿ – ” ಅರೆ ಏನಪ್ಪ ..ಹಿಂಗೆ ಸುಳ್ಳು ಹೇಳಿ ಬಿಟ್ಟಿದ್ದೀಯ…! ಹೋಗಲಿ ಬಿಡು , ಸಮಯಕ್ಕೆ ಸರಿಯಾಗಿ ಪುಸ್ತಕಗಳು ಬಂದು ತಲುಪಿದವು…. ಎಂದರು.

ಈಗಲೂ ಅವರಿಗೆ ಪುಸ್ತಕದ ಬಾಕ್ಸ್ ಕೊಟ್ಟರೆ – ” ಒಳಗೆ ನನ್ನ ಪುಸ್ತಕಗಳೇ ಇವೆ ಏನಪ್ಪಾ ” ಎಂದು ತಮಾಷೆ ಮಾಡುತ್ತಿರುತ್ತಾರೆ . ಈ ಬಾಕ್ಸ್ ಪ್ರಸಂಗ ಆದಮೇಲೆ ಹಂಪನಾ ಸರ್ ಸಂಪಾದಕತ್ವದ, ಪೂಜ್ಯ ವೀರೇಂದ್ರ ಹೆಗಡೆ ಅವರ ತಮ್ಮ ಸುರೇಂದ್ರನಾಥ್ ಅವರ ಅಭಿನಂದನಾ ಗ್ರಂಥದ ಮುದ್ರಣವೂ ಸೇರಿದಂತೆ ಅನೇಕ ದೊಡ್ಡ ಪುಸ್ತಕಗಳನ್ನು ಮುದ್ರಿಸುವ ಅವಕಾಶಗಳು ಸಿಕ್ಕಿದವು.

– ಸ್ವ್ಯಾನ್ ಕೃಷ್ಣ ಮೂರ್ತಿ

‍ಲೇಖಕರು avadhi

May 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. M.PRAKASHAMURTHY

    ಕೃಷ್ಣಮೂರ್ತಿಯವರೇ ನಿಮ್ಮ ಕಾರ್ಯಕ್ಷಮತೆ,ಬದ್ಧತೆಗಳು ನಿಮ್ಮ ಹಾಗೂ ನಿಮ್ಮ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿವೆ…..
    ಸದಾ ಶುಭವಾಗಲಿ….
    ಸದಾ ಒಳಿತಾಗಲಿ….

    ಪ್ರತಿಕ್ರಿಯೆ
  2. Sumathi BK

    ಅಶ್ವತ್ಥಾಮೋ ಹತಃ ಕುಂಜರಃ ತರಹ ಸುಳ್ಳು.
    ಅಬ್ಬಾ.. ಕೃಷ್ಣಮೂರ್ತಿಗಳೇ..

    ಪ್ರತಿಕ್ರಿಯೆ
  3. hanumakshi gogi

    ಹಂಪನಾ ಸರ್ ಅವರಿಗೇ ಸುಳ್ಳು ಹೇಳಿ ದಕ್ಕಿಸಿಕೊಂಡಿದ್ದೀರಿ. ಆದರೂ ಅವರು ಬೆಳಗಾವಿಗೆ ತಲುಪುವುದಕ್ಕಿಂತ ಮುಂಚೆ ತಲುಪಿಸಿದ್ದೀರಿ. ವಾವ್ ಖುಷಿಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: