ಭವ್ಯ ಗೌಡ
ಯಾವ ಚಿಂತೆಗೆ ಸಿಲುಕಿ ನೀ ಮೌನಿಯಾದೆ?
ನಿನ್ನ ಚಿಂತೆಯ ಭಾರವ ನಾ ಕೂಡ ಹೊರಬಹುದೆ?!
ಮಾತಿಲ್ಲದ ಭಾಷೆ ನಮ್ಮದು, ಮೌನದಲೆ ಸ್ಪರ್ಶ;
ಕಳೆದುಕೊಂಡತನಿಸುತಿದೆ ಯಾವುದೋ ಹರುಷ
ಸೋತಮನ ಜಾರುತಿದೆ ಏಕಾಂತದೆಡೆಗೆ;
ಬಂದೆನ್ನ ನಡೆಸು, ನೀ ಹೋಗೋ ಕಡೆಗೆ
ಹರಿಯುತಿದೆ ಮೂಕ-ಭಾವ ದಿಕ್ಕು ಕಾಣದೆಡೆಗೆ
ಇಲ್ಲದ ಪ್ರಶ್ನೆಗೆ, ಉತ್ತರವನುಡುಕುವಾ ಹಾಗೆ
ನಿನ್ನ ಮೌನವಿದು ನನ್ನ ಕೊರಳ ಕಟ್ಟುತಿದೆ;
ತುಸು ಮಾತನಾಡು ಗೆಳೆಯ ತಡಮಾಡದೆ
ನವಿಲು ಗರಿ ಬಿಚ್ಚಿದಂತೆ ಮನದ ಬಾಗಿಲು ತೆರೆದು
ಬರಲಿ ನಿನ್ನ ಮಾತುಗಳು ತೆರೆತೆರೆಯಂತೆ ಹರಿದು, ಎಲ್ಲ ತೆರೆ ಸರಿದು
ತಪ್ಪು ಒಪ್ಪುಗಳು ತಿಳಿದಿಲ್ಲ, ನಿನ್ನ ಸ್ನೇಹದ ಹೊರತು;
ಕಾಡುತಲೇ ಇರುವೆ ಆಲಿಸುವ ತನಕ ನಿನ್ನ ಮನದಾಳದ ಮಾತು
ಸುಖ-ದು:ಖಗಳು ಬಾಳ ಕಣ್ಣುಗಳಂತೆ
ಅದನಾಲಿಸಲು ನಾನಿರುವೆ ಪುಟ್ಟ ಮಗುವಿನಂತೆ
ನೋಯದಿರು ಮನದಿ, ಗುರುತಾಗುವ ಪ್ರತಿ ಹೆಜ್ಜೆಗಳು ನಮ್ಮ ಬರಹ;
ಎಲ್ಲವನು ದಾಟಿ, ಎಲ್ಲರನು ಸೆಳೆದು ಬಂಧಿಸುವುದೇ ಸ್ನೇಹ☺





0 Comments