ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫಾಲ್ಗುಣ ಗೌಡ ಅಚವೆ ಹೊಸ ಕವಿತೆ: ರಂಗಸ್ಥಳ

ಫಾಲ್ಗುಣ ಗೌಡ ಅಚವೆ

ಬೆಳಗಿನಿಂದಲೇ ಊರೆಲ್ಲ ತಿರುಗಿ
ಪ್ರಚಾರ ಮಾಡಿದ ರಿಕ್ಷಾ
ಸುತ್ತೆಲ್ಲಾ ತಿರುಗಾಡುತ್ತಿದೆ.
ಮೊದಲೇ ಆಗಮಿಸಿದ ಮೇಳದ ಗಾಡಿ
ತಂಬು ಹೂಡುವುದನ್ನೇ ‘ಮಕ್ಕಳು’ ತದೇಕ ಚಿತ್ತದಿಂದ
ನೋಡುತ್ತಾ ರಾತ್ರಿ ತಾವು ಕುಳ್ಳುವ
ನೆಲದ ಜಾಗವನ್ನು ಗುರುತು ಮಾಡಿಕೊಂಡಿದ್ದಾರೆ.

ರಾತ್ರಿ ನಡೆಯುವ ಗದಾಯುದ್ಧ
ಪ್ರಸಂಗದ ಸನ್ನಿವೇಶಗಳ ಕುಣಿವ ಚಿಟ್ಟಾಣಿಯ ಕಣ್ಣನೋಟ ಜಲವಳ್ಳಿಯ ಸಿಂಹನಾದದ ಆರ್ಭಟ
ಅಂಗಡಿಯಲ್ಲಿ ಕುಳಿತವರು ಮೆಲುಕು ಹಾಕುತ್ತಿದ್ದಾರೆ.

ಮಟಮಟ ಮಧ್ಯಾಹ್ನವೇ ಕುಟಕುಟಿ ಅಂದರ್ ಬಾಹರ್ ಮಂಡದವರು ರಂಗಸ್ಥಳ ನೋಡುವ ನೆಪದಲ್ಲಿ
ರಾತ್ರಿ ಜಾಗರದ ಜಾಗ ಹುಡುಕಿದ್ದಾರೆ.

ಮೇಳದ ಕಲಾವಿದರ ಗಾಡಿ ಈಗ
ಬಂದಿದೆ
ಹಿರಿಯ ಕಲಾವಿದರ ಜೊತೆ ಫೋಟೋ ತಗೆಸಿಕೊಳ್ಳುವವರು
ಮುಗಿಬಿದ್ದಿದ್ದಾರೆ.

ನಾವುಡರ ಕಾಲದಿಂದಲೂ ಇರುವ
ಗ್ರೀನ್ ರೂಮು ಹೊಸ ರೂಪ
ಪಡೆದುಕೊಂಡಿದೆ. ಆದರೆ,
ನಿದ್ದೆಯನ್ನೆಬ್ಬಿಸಿ ಮಧ್ಯರಾತ್ರಿಯ
ಬಯಲು ಮಾಡುವ ನಾವುಡರ ಕಂಠ ಮಾತ್ರ ಇನ್ನೂ ಅಲ್ಲೇ ಇದೆ.

ಸಂಜೆ ಐದರ ವೇಳೆ ಲೌಡ್ ಸ್ಪೀಕರಿನ ಶುಕ್ಲಾಂಬರಧರಂ ಹಾಡು
ಎಲ್ಲರ ಕಿವಿಗೆ ಭಾಗವತಿಕೆಯ
ಧ್ವನಿಯಂತೆಯೇ ಕೇಳಿಸುತ್ತಿದೆ.

ಚೌಕಿಯಲ್ಲಿ ತಯಾರಾಗುವ ಪಾತ್ರಗಳು ಪುಟ್ಟ ಕನ್ನಡಿಯಲ್ಲಿ
ಬಣ್ಣ ಬಳಿದುಕೊಂಡು ರಂಗದಲ್ಲಿ ನಡೆಯುವ ಸನ್ನಿವೇಶಗಳ ಹೆಜ್ಜೆಗಳ ತಾಲೀಮು ನಡೆಸುತ್ತಿವೆ.

ಒಳಮನೆಯಲ್ಲಿ ಗಣಪತಿ ಪೂಜೆ ಮಾಡುವ ಭಾಗವತರು
ಮೇಳದ ಯಜಮಾನರು ಹೊರಗೆ ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿ
ತುಂಬಿದ ಪ್ರದರ್ಶನದ ಕನಸು ಕಾಣುತ್ತಿದ್ದಾರೆ.
ಈ ಮಧ್ಯೆ ಹೆಂಡತಿಯ ಜೊತೆ ಬಂದು ಜಗಳ ಕೊನೆಗೊಳಿಸುವ ಗಂಡಸರು
ಹಚ್ಚಿದ ಚಿತ್ರಗೀತೆಗೂ ಆಟ ಕುಣಿವ
ಗಡಂಗಿನ ಅಭಿಮಾನಿಗಳು
ಇಷ್ಟದ ಕಲಾವಿದರ ಎದುರುಗೊಳ್ಳುವ ರಸಿಕರ ಜೊತೆ
ಪರದೆ ಬಿಚ್ಚಲೆಂದು ಕಾದ ಕೆಲ ಪುಂಡ ಅಭಿಮಾನಿಗಳು
ನೆಲ ಇರುವ ಕಂಪಾರ್ಟಮೆಂಟಿಗೆ
ನುಸುಳುತ್ತಿದ್ದಾರೆ!!

‍ಲೇಖಕರು avadhi

7 April, 2020

1 Comment

  1. T S SHRAVANA KUMARI

    ಯಕ್ಷಗಾನದ ತಯಾರಿ ಕಣ್ಣೆದುರಿಗೇ ನಡೆಯುತ್ತಿರುವಂತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading