ಫಾತಿಮಾ ರಲಿಯಾ ಅವರ ಹೊಸ ಕಥಾ ಸಂಕಲನ ಹೊರ ಬರುತ್ತಿದೆ.
‘ಒಡೆಯಲಾರದ ಒಡಪು’ ಸಂಕಲನವನ್ನು ಮಂಡ್ಯದ ‘ಸಂಕಥನ’ ಪ್ರಕಟಿಸಿದೆ.
ಈ ಕೃತಿಗೆ ಫಾತಿಮಾ ಬರೆದಿರುವ ಮಾತು ಇಲ್ಲಿದೆ-
—-
ಕವಿತೆಯಿಂದ ಕಥೆಗಳೆಡೆಗಿನ ಪಯಣ…
ಒಂದು ಪ್ರಬಂಧ ಸಂಕಲನವಷ್ಟೇ ಪ್ರಕಟವಾಗಿರುವ ನನಗೆ ಈ ಕಥಾ ಸಂಕಲನಕ್ಕೆ ಒಂದು ‘ಪ್ರವೇಶಿಕೆ’ ಬರೆಯಬೇಕು ಎನ್ನುವುದೇ ಒಂದು ದೊಡ್ಡ ಟಾಸ್ಕ್ ಥರ ಅನ್ನಿಸುತ್ತಿದೆ. ನನ್ನ ಕಥೆಗಳ ಬಗ್ಗೆ, ಕಥಾ ಪ್ರಪಂಚದ ಬಗ್ಗೆ ನಾನೇ ಮಾತಾಡುವುದು, ಬರೆಯುವುದು ಅತ್ಯಂತ ಮುಜುಗರದ ಸಂಗತಿ. ಆದರೆ ಕವಿತೆಗಳೊಂದಿಗೆ ಬರೆಯಲು ಶುರುಮಾಡಿ ಆಮೇಲೆ ಲಲಿತ ಪ್ರಬಂಧಗಳತ್ತ ಹೊರಳಿದ, ನನ್ನ ಮೊದಲ ಕಥಾ ಸಂಕಲನವಾಗಿ ‘ಒಡೆಯಲಾರದ ಒಡಪು’ ಪ್ರಕಟ ಆಗ್ತಿರುವಾಗ, ಕಥೆಗಳನ್ನು ಓದುವ ಸಲುವಾಗಿ, ಓದಿದ ಸಲುವಾಗಿ ಶಾಲೆಯಲ್ಲಿ, ಮದ್ರಸಾದಲ್ಲಿ ಪೆಟ್ಟು ತಿಂದ ಹುಡುಗಿಯೊಬ್ಬಳ ಕಥಾ ಸಂಕಲನ ಪ್ರಕಟ ಆಗುತ್ತಿದೆ ಎಂಬುವುದೇ ಒಂದು ದೊಡ್ಡ ಸಂಭ್ರಮ ಮತ್ತು ಬೆರಗಾಗಿರುವಾಗ, ನಾನು ಕಥೆಗಳ ಬಗ್ಗೆ ಮಾತಾಡುವುದೇ ಹೆಚ್ಚು ಸಮಂಜಸವೇನೋ?
ನನಗೆ ಮೊದಲಿನಿಂದಲೂ ಕಥೆಗಳನ್ನು ಓದುವ ಹುಚ್ಚು. ಅವುಗಳನ್ನು ಓದುತ್ತಾ ಓದುತ್ತಲೇ ಬರೆಯುವುದಕ್ಕೆ ಶುರು ಮಾಡಿದೆ. ಆದರೆ ಯಾವುದು ನನ್ನನ್ನು ಬರೆಯಿಸುತ್ತದೆ ಮತ್ತು ನಾನು ಯಾಕೆ ಬರೆಯುತ್ತೇನೆ ಎನ್ನುವ ಪ್ರಶ್ನೆಗೆ ನನಗೆ ಇದುವರೆಗೂ ಸಮರ್ಪಕ ಉತ್ತರ ಕಂಡುಕೊಳ್ಳಲಾಗಿಲ್ಲ, ಹಾಗೆಂದೇ ನಾನು ‘ನನಗೆ ಬರೆಯೋದೊಂದು ಬಿಟ್ಟು ಬೇರೇನೂ ಬರಲ್ಲ’, ‘ನನ್ನೊಳಗನ್ನು ಬರಿದು ಮಾಡಲು ಬರೆಯುತ್ತೇನೆ’ ಎಂದು ಮೂರೋ-ನಾಲ್ಕೋ ಪದಗಳ ಉತ್ತರ ಹೇಳಿ ಪಲಾಯನ ಮಾಡುವುದು.
ನನ್ನ ಬಹುತೇಕ ಕಥೆಯ ಪಾತ್ರಗಳು ನನ್ನ ಮನೆ, ಮನೆಗೆ ಸಂಬಂಧ ಪಟ್ಟವರು, ಅವರ ಬದುಕು, ಭಾವನೆ, ಸಂಘರ್ಷ ಇವೆಲ್ಲವುಗಳ ನಡುವೆಯೇ ಸುತ್ತುತ್ತಿರುತ್ತದೆ. ಒಂದು ರೀತಿಯಲ್ಲಿ ನನ್ನ ಪ್ರಪಂಚವನ್ನು ಸಮೃದ್ಧಗೊಳಿಸಿರುವುದೇ ನಮ್ಮ ಮನೆಗೆ ಸಂಬಂಧಪಟ್ಟ ಆದರೆ ಮನೆಯವರಲ್ಲದ ಆಪ್ತ ಜೀವಗಳು. ಒಂದು ‘ಸೆಕ್ಯೂರ್ಡ್’ ಅಂತ ಕರೆಸಿಕೊಳ್ಳುವ ಬದುಕನ್ನಷ್ಟೇ ಕಂಡಿರುವ, ಅನುಭವಿಸಿರುವ ನನಗೆ ಇನ್ಯಾರದೋ ಬದುಕಲ್ಲಿ ಯಾವುದೋ ಘಟನೆ ನಡೆದಾಗ ‘ನನ್ನಿಂದ ಏನೂ ಮಾಡಲಾಗುತ್ತಿಲ್ಲ’ ಎನ್ನುವ ಅಸಹಾಯಕತೆ ಕಾಡಿದಾಗ, ನಾನು ಯಾರ ನೋವಿಗೂ ಮುಲಾಮು ಹಚ್ಚುತ್ತಿಲ್ಲ ಎನ್ನುವ ಪಾಪಪ್ರಜ್ಞೆ ಕಾಡಿದಾಗ ಕಥೆ ಬರೆಯುತ್ತೇನೆ. ಕಥೆಯೊಂದು ಹುಟ್ಟಲು, ಬೆಳೆಯಲು ಕಾರಣವೇ ಬೇಕಿಲ್ಲ ಎನ್ನುವುದೆಲ್ಲಾ ನಿಜವೇ ಆದರೂ ಒಂದು ‘ಕಥೆ’ ಬರೆಸಿಕೊಳ್ಳಬೇಕಾದರೆ ಅದು ತಾಕಬೇಕು, ಆಳದಲ್ಲೊಂದು ಗಾಯ ಮಾಡಬೇಕು, ಬರೆಯದೆ ಆ ಗಾಯ ಮಾಗದು ಅಂತೆಲ್ಲಾ ತೀವ್ರವಾಗಿ ಅನ್ನಿಸಲೇಬೇಕಾಗುತ್ತದೆ.
ಬೆಚ್ಚಗಿನ ಬದುಕೊಂದು ಕೈಯಳತೆಯಲ್ಲಿರಬೇಕಾದರೆ ನಮ್ಮ ಪಕ್ಕದ ಮನೆಯ ಅಜ್ಜಿಯ ಅನಿಶ್ಚಿತ ಬದುಕು, ಹತ್ತಾರು ಮನೆಯ ಕೆಲಸಗಳನ್ನು ಮಾಡುತ್ತಾ ಏದುಸಿರಿಂದಲೇ ಬದುಕನ್ನು ಎದುರಿಸುವ ಮನೆ ಸಹಾಯಕಿ ಅಕ್ಕ, ಎಲ್ಲವೂ ಸರಿ ಇದೆಯೆಂದು ತೋರುವ ಆದರೆ ಯಾವುದೂ ಸರಿಯಿಲ್ಲದ ‘ಮೌನ ಗೌರಿ’ಯರಂತಹ ಗೆಳತಿಯರ ಬದುಕು, ನನ್ನದೇ ಬದುಕಿನ ಬಿರುಕುಗಳು, ಕಾಲದ ಹರಿವಿನಲ್ಲಿ ಮುರಿದು ಬಿದ್ದ ಬಂಧಗಳು, ತಣ್ಣಗೆ ಎರಗಿದ ಸಾವಿನ ಕ್ರೌರ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ನೆಲದೊಂದಿಗೆ ಹಾಸುಹೊಕ್ಕಿರುವ ಸಂಘರ್ಷಗಳು ಹಾಗೂ ಇಲ್ಲಿ ಮೊದಲು ಹೀಗೆಲ್ಲಾ ಇರಲಿಲ್ಲವಲ್ಲಾ ಎನ್ನುವ ವಿಷಾದ, ಈ ನೆಲದ ಸೌಹಾರ್ದದ ಬೇರುಗಳು ಮುಂದೆಂದಾರೊಂದು ದಿನ ಮತ್ತೆ ಗಟ್ಟಿಗೊಳ್ಳಬಹುದು ಎನ್ನುವ ಆಶಾವಾದ ಪದೇ ಪದೇ ಕುಸಿದಾಗ ಹೊಮ್ಮುವ ನಿಟ್ಟುಸಿರು ಎಲ್ಲವೂ ಕಥೆಯಾಗಿ ಕಾಡಿಸಿ ಬರೆಸಿವೆ.
ನೋವಿಗೆ, ಸಂಕಟಗಳಿಗೆ ಪ್ರತಿಕ್ರಿಯೆಯಾಗಿ ಕಥೆ ಹರಳುಗಟ್ಟುವ, ಅರಳುವ ಪರಿಯೇ ಒಂದು ಚಂದ. ಆದರೆ ತಣ್ಣನೆಯ ಅಸಾಹಯಕತೆಯೊಂದೇ ಕಥೆಯ ಸ್ಥಾಯಿ ಭಾವವಾಗುತ್ತಿದೆಯಾ? ಬದುಕು ಹಲವು ಖುಶಿ, ಸಂಭ್ರಮದ ಗಳಿಗೆಗಳನ್ನೂ ನೀಡಿರುವಾಗ ಆ ಅಸಂಗತತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅವನ್ನು ಕಥೆಗಳಲ್ಲಿ ತರುವುದರಲ್ಲಿ ನಾನು ಸೋತುಹೋಗಿದ್ದೇನಾ? ಎನ್ನುವ ಭಾವ, ಪ್ರಶ್ನೆಯೂ ಆಗಾಗ ಮೂಡುತ್ತದೆ. ಅವೆಲ್ಲಕ್ಕಿಂತ ಮುಖ್ಯವಾಗಿ ನನ್ನ ಸುತ್ತ ಸೂಕ್ಷ್ಮ ಮತ್ತಷ್ಟೇ ತೀಕ್ಷ್ಣ ಪರಿಣಾಮಗಳನ್ನು ಹೊಂದಿರುವ ಘಟನೆಗಳು ನಡೆದಾಗ ನನ್ನೊಳಗಿನ ಮನುಷ್ಯ ಬರಿ ಕಥೆ ಕವನ ಬರೆದು ‘ಪಾಪಪ್ರಜ್ಞೆ’ಯಿಂದ ನೀಗಿಕೊಳ್ಳುವ, ಹೊಣೆಗಾರಿಕೆಯಿಂದ ಕಳಚಿಕೊಳ್ಳುವ ಅತ್ಯಂತ ಸುಲಭದ ಮಾರ್ಗ ಕಂಡುಕೊಳ್ಳುತ್ತಿದ್ದಾನೇನೋ ಎನ್ನುವ ಹಳಹಳಿಕೆಗೆ ಬಿದ್ದು ದಿನಗಟ್ಟಲೆ ತಲೆಕೆಡಿಸಿಕೊಂಡದ್ದೂ ಇದೆ. ಇವನ್ನು ಮೀರಿ ಬರಹಗಾರ ಇನ್ನೇನು ಮಾಡಬಹುದು ಎನ್ನುವ ಪ್ರಶ್ನೆಗೆ ನನಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಬರೆಯುವುದೆಂದರೆ ನನ್ನನ್ನು ನಾನು ಕಂಡುಕೊಳ್ಳುವುದು ಮತ್ತು ಕೆಲವೊಮ್ಮೆ ಕಳೆದುಕೊಳ್ಳುವುದು ಕೂಡಾ. ಯಾಕೆಂದರೆ ಬರೆಯುತ್ತಿರುವ ಅಷ್ಟೂ ಹೊತ್ತು ಒಳಗೊದು ಶೋಧ ಮತ್ತು ಕಟ್ಟುವಿಕೆ ಸದ್ದಿಲ್ಲದೆ ನಡೆಯುತ್ತಿರುತ್ತದೆ. ಹೊಸತನ್ನು ಹುಡುಕುವುದು, ಕಟ್ಟವುದೆಂದರೆ ಹಳತನ್ನು ಕಳೆದುಕೊಳ್ಳುವುದೇ ಅಲ್ಲವೇ? ಹಾಗೆಂದು ಯಾವುದೋ ಒಂದು ಉದ್ದೇಶವನ್ನಿಟ್ಟುಕೊಂಡೇ ಬರೆಯುತ್ತೇನೆ ಅಂತಲ್ಲ. ನಾನು ಏನನ್ನಾದರೂ ಬರೆದು ಯಾರನ್ನೋ ಬದಲಾಯಿಸುತ್ತೇನೆ ಎನ್ನುವ ಯಾವ ಭ್ರಮೆಗಳೂ ನನಗಿಲ್ಲ. ನಾಜೂಕಾಗಿ ಸನ್ನಿವೇಶ, ಘಟನೆಗಳನ್ನು ಪೋಣಿಸಿ ಕಥೆಗೊಂದು ರೋಚಕತೆ ಕಲ್ಪಿಸಬೇಕು ಎನ್ನುವ ಗುರಿಯೂ ಇರುವುದಿಲ್ಲ. ಬಂದಂತೆ ಬರೆದುಕೊಂಡು ಹೋಗುವ, ‘ಇಷ್ಟು ಸಾಕೇನೋ’ ಅನ್ನಿಸಿದಾಗ ನಿಲ್ಲಿಸಿಬಿಡುವ ಸ್ವಾತಂತ್ರ್ಯ ನನ್ನ ಕಥೆಗಳಿಗೆ ಇದ್ದೇ ಇವೆ.
ಆದರೆ ಸಹ ಬರಹಗಾರರ, ಲೇಖಕರ ಮೆಚ್ಚುಗೆ, ಟೀಕೆ, ವಿಮರ್ಶೆ ಎಲ್ಲವುಗಳನ್ನು ಮೀರಿ ಓದುಗರ ಮನಸ್ಸಲ್ಲಿ ಈ ಕಥೆ ನಿಲ್ಲುತ್ತಾ ಎನ್ನುವ ಪ್ರಶ್ನೆ ಮಾತ್ರ ಆಗಾಗ ನನ್ನೊಳಗೆ ಮೂಡುತ್ತಿರುತ್ತದೆ. ಬರಹವೊಂದನ್ನು ಬರೆದ ಮೇಲೆ ಅದರ ಪಾಡಿಗದನ್ನು ಬಿಟ್ಟು ಬಿಡಬೇಕು, ಅದು ತನ್ನ ತಾವನ್ನು ತಾನೇ ಕಂಡುಕೊಳ್ಳುತ್ತದೆ ಎನ್ನುವುದೆಲ್ಲಾ ಪ್ರಾಕ್ಟಿಕಲೀ ಎಷ್ಟು ಪಾಸಿಬಲ್ ಅನ್ನೋದು ನನಗೊತ್ತಿಲ್ಲ. ಹಾಗೆಂದು ಓದುಗರಿಗೆ ಇಷ್ಟವಾಗಲಿ ಅಂತ ಮಾತ್ರ ನಾನು ಬರೆಯೋದಲ್ಲ, ಬರೆದದ್ದು ಇಷ್ಟವಾಗಲಿ ಅನ್ನೋ ಆಸೆ ಮಾತ್ರ ಖಂಡಿತಾ ನನಗಿದೆ.
ಕಥೆಯೊಂದು ಬರೆಯುವಲ್ಲಿಂದ ತೊಡಗಿ ಅದು ಕಥಾಸಂಕಲನವಾಗಿ ಪ್ರಕಟವಾಗುವವರೆಗೆ ಭಾಗಿಯಾದ ಪ್ರತಿಯೊಬ್ಬರ ಶ್ರಮ ಮತ್ತು ಪ್ರೀತಿ ಅಗಣಿತ. ಮುಖ್ಯವಾಹಿನಿಯಲ್ಲಿ ಬರಿ ಪ್ರಬಂಧಗಳನ್ನಷ್ಟೇ ಬರೆಯುತ್ತಿದ್ದ ನನ್ನನ್ನು ‘ನೀನೇಕೆ ಕಥೆ ಬರೆಯಬಾರದು?’ ಎಂದು ಕೇಳಿ ಕಥೆ ಬರೆಸಿದ ಬಿ.ಎಂ.ಹನೀಫ್, ‘ಇದು ಪ್ರಕಟ ಆಗುವುದಿಲ್ಲ’ ಎಂಬ ನನ್ನ ಅತೀವ ಆತ್ಮವಿಶ್ವಾಸವನ್ನು ಮೀರಿ ಅದನ್ನು ಪ್ರಕಟಿಸಿದ ‘ಸುಧಾ’ ವಾರಪತ್ರಿಕೆ ಕಥೆ ಬರೆಯುವಲ್ಲಿ ನನಗೆ ಕೊಟ್ಟ ಆತ್ಮವಿಶ್ವಾಸ ದೊಡ್ಡದು. ಪ್ರತಿ ಬಾರಿ ಕಥೆ ಬರೆದಾಗಲೂ ಅದನ್ನು ಮತ್ತಷ್ಟು ಅಂದಗಾಣಿಸಲು ಒಂದಿಷ್ಟು ಚಂದದ ಸಲಹೆ ನೀಡುವ ಅಬ್ದುಲ್ ರಶೀದ್, ಕೇಶವ ಮಳಗಿ, ಬೊಳುವಾರ್ ಮಹಮದ್ ಕುಞಿ ಇವರ ಪ್ರೀತಿಯೂ ದೊಡ್ಡದೇ. ಆ ಪ್ರೀತಿಗೂ ನಾನು ವಂದಿಸುತ್ತೇನೆ. ಮತ್ತು ಸಂಕಷ್ಟದ ಕಾಲದಲ್ಲೆಲ್ಲಾ ನನ್ನ ಬೆನ್ನಿಗೆ ನಿಲ್ಲುವ ಎಲ್ಲಾ ಹಿರಿ-ಕಿರಿ ಸ್ನೇಹಿತರಿಗೆ, ನನ್ನ ಮೊದಲ ಪುಸ್ತಕ ಪ್ರಕಟಿಸಿ ಓದುಗರ ಅಪಾರ ಪ್ರೀತಿ ದೊರೆಯುವಂತೆ ಮಾಡಿದ ಅಕ್ಷತಾ ಹುಂಚದಕಟ್ಟೆಯವರಿಗೂ ನಾನು ಋಣಿಯಾಗಿರುತ್ತೇನೆ.
ಬರೆಯುವಾಗೆಲ್ಲಾ ನನಗೆ ಅಪಾರ ಪ್ರೋತ್ಸಾಹ ನೀಡುವ ಮನೆಯವರ, ನನ್ನ ಪ್ರತಿ ಗೆಲುವನ್ನೂ ‘ತನ್ನದೇ’ ಎಂಬಂತೆ ಸಂಭ್ರಮಿಸುವ ಪತಿ ಅಬ್ದುಲ್ ಅಝೀಝ್ , ಪ್ರತಿ ದಿನದ ಬದುಕಿಗೆ ಹೊಸತನವನ್ನು ನೀಡುತ್ತಿರುವ ಮಗಳು ಹಿಬಾ ಪ್ರೀತಿಗೆ ಸರಿಸಾಟಿಯೇ ಇಲ್ಲ, ಕವಿತೆಯೊಂದಿಗೆ ಶುರುವಾಗಿ ಕಥೆಗಳೊಂದಿಗೆ ಸಾಗುತ್ತಿರುವ ಈ ಪಯಣದಲ್ಲಿ ಅವರೆಲ್ಲರ ಭೂಮಿಕೆ ಇಷ್ಟು ಮಹತ್ವಪೂರ್ಣವಾಗಿರದೇ ಇದ್ದರೆ ಬಹುಶಃ ನಾನು ಯಾವುದನ್ನೂ ಬರೆಯಲು ಸಾಧ್ಯವೇ ಆಗುತ್ತಿರಲಿಲ್ಲವೇನೋ. ಅವರೆಲ್ಲರನ್ನು ನಾನು ಈ ಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದ ನೆನೆಯುತ್ತೇನೆ. ಹಾಗೆಯೇ ‘ನಿನ್ನನ್ನು ಪ್ರೀತಿಸುವ, ಆ ಪ್ರೀತಿಯ ಕಾಳಜಿಯಿಂದಲೇ ನಿನ್ನ ಕಥೆಗಳ ಬಗ್ಗೆ ನಿಷ್ಠುರವಾಗಿ ಮಾತಾಡಬಲ್ಲ ಒಂದಿಬ್ಬರನ್ನು ಯಾವಾಗಲೂ ನಿನ್ನ ಆಪ್ತಬಳಗದಲ್ಲಿ ಇರಿಸಿಕೋ’ ಎಂಬ ವಾಸ್ತವವಾದಿ ಸಲಹೆಯನ್ನು ಕಥೆಗಳಿಗೆ ಬಹುಮಾನ ಬಂದಾಗೆಲ್ಲಾ ನೀಡುವ ಪದ್ಮನಾಭ ಭಟ್ ಶೇವ್ಕಾರ್ ಅವರನ್ನೂ ನಾನು ನೆನೆಯುತ್ತೇನೆ.
ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡ ನಿಮಗೆ ರಾಶಿ ಪ್ರೀತಿ…
0 ಪ್ರತಿಕ್ರಿಯೆಗಳು