ಪ್ರೀತಿ ಕೆ ಎ
ದಡದಾಚೆಗೆ ಕೂತು ಅವನು ಟೈಪಿಸುವ
ಸಂದೇಶದ ಸದ್ದಿಗೆ ಕಿವಿಯಾನಿಸಬೇಕಿಲ್ಲ
ಮೂಡು ಬಂದಾಗಲೊಮ್ಮೆ ಮಾಡುವ
ಫೋನು ಕರೆಗೆ ಕತ್ತುದ್ದ ಮಾಡಿ ಕಾಯಬೇಕಿಲ್ಲ
ಗುಬ್ಬಿ ಕಂಗಳು ಕಾಡಿಗೆ ತೀಡಬೇಕಿಲ್ಲ
ತುಟಿಗಳು ಗುಲಾಬಿ ರಂಗಿಗೆ ಮುತ್ತಿಡಬೇಕಿಲ್ಲ
ಮೊಬೈಲಿನ ಕ್ಯಾಮೆರಾಕ್ಕೆ ಸೆಲ್ಫಿ ಕ್ಲಿಕ್ಕಿಸುವ
ಅನಿವಾರ್ಯತೆ ಇಲ್ಲ
ನುಣುಪಾದ ಫೋನಿನ ಮೈಯು
ಪದೇ ಪದೇ ಚಾರ್ಜಿಗೆ ಸಿಲುಕಿ ಬಿಸಿಯಾಗಬೇಕಿಲ್ಲ
ಬೆರಳುಗಳು ಅದೊಂದೇ ಚಿತ್ರಕ್ಕೆ
ತಡಕಾಡಬೇಕಿಲ್ಲ

ಆ ಜಗದ ಸೂರ್ಯ ಮುಳುಗುವವರೆಗೂ
ಈ ಜಗದ ದೀಪ ಉರಿಯಬೇಕೆಂದಿಲ್ಲ
ರಾತ್ರಿಗಳು ನಿದ್ದೆ ಕದಿಯಬೇಕಿಲ್ಲ
ಅವನಾಡದ ಪದಗಳಿಗೂ
ಕಳಿಸಿದ ಇಮೋಜಿಗಳಿಗೂ
ಅರ್ಥ ಹುಡುಕಬೇಕಿಲ್ಲ
ಮಾತು ಮುಗಿಸಲೇಬೇಕೆಂದಾಗ
ದುಃಖವೊಂದು ಇನ್ನಿಲ್ಲದಂತೆ ಮಡಿಲೇರಿ
ಕೂರಬೇಕಿಲ್ಲ
ಅವನು ದೂರವಾಗಿದ್ದೇ ಒಳಿತಾಯಿತೆಂದು
ಅವಳು ಅಂದುಕೊಳ್ಳುವ ಗಳಿಗೆ
ಇನ್ನೆಂದೂ ಹುಟ್ಟಲಾರದ ಕವಿತೆಯೊಂದು
ಎದೆ ಬಿರಿದು ಅತ್ತಿತು ಒಳಗೊಳಗೆ..






ತುಂಬ ಚೆನ್ನಾಗಿದೆ