ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ನಾನೇ ಸೊಳ್ಳೆ ಮಾತಾಡತಾ ಇರೋದು’..

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

3

ಮತ್ತೆ ಎತ್ತೊ ಹೊರಳಿ, ಸೂಕ್ಷ್ಮಮವಾಗಿ ಗಮನಿಸಿ “ಅಪ್ಪಾ..ಅಪ್ಪಾ…ಅದೆ ಸೌಂಡ್…. ಆ ಕಡೆ ಬರುತಿದೆ ನೋಡು ಪಕ್ಕಾ ಅದೆ ಧ್ವನಿ..ಕೇಳಿಸಿಕೊ..” ಎಂದು ಮನೆಯ ಹಿಂದೆ ತೋರಿಸಿದಳು. ಧ್ವನಿಯನ್ನು ಅನುಸರಿಸಿ ಹೋದಾಗ ಹಿಂದಿನ ಮನೆಯ ಒಳಗಿಂದ ಅಂತ ಸ್ಪಷ್ಟವಾಯಿತು. ಆಯ್ತು ಅಲ್ಲಿಯೂ ನೋಡಿ ಬಿಡೋಣ ಎಂದು ಬಾಗಿಲು ಬಡಿದು ಅಪ್ಪ ಮನೆಗಿದ್ದವರನ್ನು ಎಬ್ಬಿಸಿದರು. ಅವರು ಕೂಡಲೆ ಬಾಗಿಲು ತೆಗೆದರು. ಅವರೂ ಅದೆ ಧ್ವನಿಯ ಭಯದಿಂದ ಎದ್ದು ಕುಳಿತಿದ್ದರು. ಅಪ್ಪ ಆ ಸಪ್ಪಳದ ಬಗ್ಗೆ ವಿಚಾರಿಸಿದ. ಅವರು “ನಮಗೂ ಅದೆ ಸೌಂಡ್ ಬರುತ್ತಿದೆ ಒಂದು ತಿಂಗಳಿನಿಂದ. ಅದಕ ನಮ್ಮದು ಬೆಳತನ ಎದ್ದು ಕೂಡಾದ ಆಗ್ಯಾದ” ಎನ್ನಬೇಕೆ?
“ಅಪ್ಪ ನಾನು ಹೇಳಿದ್ದು ಕರೆಕ್ಟ ನೋಡು” ಎಂದು ಗೆಲುವಿನ ನಗೆ ಬೀರಿದಳು.

ಆ ಮನೆಯಲ್ಲಿದ್ದರೂ ಅವರು ಎಲ್ಲಿಂದ ಬರುವುದು ಎಂದು ಗಮನಿಸಿರಲಿಲ್ಲ. ಆ ಧ್ವನಿ ಬಂದತ್ತ ಹೋದಾಗ ಸ್ಪಷ್ಟವಾಗಿ ಕೇಳುತ್ತಿತ್ತು. ಮನೆಯವರು ಅಂಜಿದರು. “ಹಾಂ….ಇದು ನಮ್ಮ ಪಾಪು ಮಲಗಿದ ರೂಮ್. ಅಯ್ಯೊ! ನಮ್ಮ ಪಾಪುಗೆ ಏನಾರ ಮಾಡಿದ್ರ ಹ್ಯಾಂಗ್ರಿ?” ಅಂತ ಅಂಜಿದಳು ಆ ತಾಯಿ. “ಬನ್ನಿ, ನಾನಿದ್ದೇನೆ.. ಏನು ಹೆದರಬೇಡಿ?” ಎಂದು ಅಪ್ಪ ನಿಧಾನವಾಗಿ ಹೆಜ್ಜೆ ಹಾಕುತ್ತ ಮುನ್ನಡೆದ. ಒಳಗಿನ ರೂಮಿನಲ್ಲಿ ಮಲಗಿದ್ದ ಕೋಣೆಯನ್ನು ನೋಡಿದಾಗ ಏನೂ ಕಾಣಲಿಲ್ಲ. ಧ್ವನಿ ಮಾತ್ರ ಬರುತ್ತಿತ್ತು. ಎಲ್ಲಿಂದ ಅಂತ ಮತ್ತೆ ಕೇಳಿಸಿಕೊಂಡಾಗ ಮಗು ಮಲಗಿದ್ದ ತೊಟ್ಟಿಲಿನಿಂದ ಬರುತ್ತಿತ್ತು. ಆದರೆ ಅಲ್ಲಿ ಏನೂ ಇಲ್ಲ. ಅವರಿಬ್ಬರೂ ಅಂಜುತ್ತಿದ್ದರು. ಆ ಸೌಂಡ ಮಾತ್ರ ಅಲ್ಲಿಂದ ಬರುತಿತ್ತು. ಹುಡುಕಿ ಹುಡುಕಿ ಸಾಕಾಗಿ ತೊಟ್ಟಿಲು ನಿಲ್ಲಿಸಿದಾಗ ನಿಂತಿತು. ಕಿಡಕಿಯಿಂದ ಬೀಸುವ ಗಾಳಿಗೆ ತೊಟ್ಟಿಲು ಅಳ್ಳಾಡುತ್ತಿತ್ತು. ತೊಟ್ಟಿಲೊ ಅದು ಹೊಸ ಬಗೆಯದು. ಆ ಗೆಜ್ಜೆ ಇನ್ ಬಿಲ್ಟ ಇತ್ತು. ಸೂಕ್ಷö್ಮವಾಗಿ ಗಮನಿಸಿದಾಗ ಆ ಗೆಜ್ಜೆ ಅನ್ನುವ ರೀತಿಯಲ್ಲಿರಲಿಲ್ಲ. ಭಯ, ದುಗುಡ ಎಲ್ಲ ಹಾರಿ ಹೋಗಿ ಅದನ್ನು ನೋಡಿ ನಕ್ಕಿದ್ದೆ ನಕ್ಕಿದ್ದು. ತೊಟ್ಟಿಲಿನಲ್ಲಿಯೇ ಮಲಗಿದ್ದ ಪಾಪು ನಮ್ಮ ಗದ್ದಲಕ್ಕೆ ಎದ್ದು ಅದು ನಗಲಾರಂಭಿಸಿತು…ನಮ್ಮ ದಡ್ಡತನಕ್ಕೇನೊ ಅನ್ನುವಂತೆ.

ಅಪ್ಪ ಅಕ್ಕನ ಕಡೆ ತಿರುಗಿ “ಸರಿ ಏನಮ್ಮ, ಈಗಾದ್ರೂ ಕ್ಲೀಯರ್ ಆಯ್ತಾ?” ಅಂದಾಗ…
“ಆದರೂ ಅಪ್ಪಾ, ಅದೂ ಬೇರೆನೆ ಇತ್ತು” ಎಂದು ತನ್ನ ಅಸಮಧಾನ ಹೊರ ಹಾಕಿದ್ದಳು.
“ನಿನಗೆಲ್ಲೊ ಭ್ರಮೆ…ತಲೆಕೆಟ್ಟಿದೆ” ಎಂದು ಬಯ್ದಿದ್ದ.
“ಅಪ್ಪ ತಲೆಕೆಟ್ಟೊರನ್ನು ಅದ್ಯಾವುದೊ ಧಾರವಾಡದಲ್ಲಿ ಆಸ್ಪತ್ರೆನಲ್ಲಿ ಸೇರಸ್ತಾರಂತಲ್ಲ, ಅಲ್ಲಿ ಅಕ್ಕನ್ನು ಕಳಿಸಿಬಿಡಪ್ಪ…..ಅಲ್ಲಿರೊರೆಲ್ಲ ಮಜ ಮಜವಾಗಿ ಮಾತಾಡೋದನ್ನು ಬರೀ ಫಿಲ್ಮನಲ್ಲಿ ನೋಡಿನಿ…ಅಕ್ಕನ್ನ ಸೇರಿಸಿದ್ರ ರೀಯಲ್ ಆಗಿ ನೋಡೋಕೆ ಹೋಗಬಹುದು” ಎಂದಾಗ “ಲೇ…. ಸಮ್ಮೆ ಗುಮ್ಮೆ ಗರಗರ ಗಮ್ಯಾ” ಎಂದು ಅಟ್ಟಿಸಿಕೊಂಡು ಹೋಗಿ ನನ್ನನ್ನು ಮೆತ್ತಗ ಮಾಡಿದ್ದಳು. ಅವತ್ತು ಬಹಳ ಮಜವಾಗಿತ್ತು ಅಕ್ಕನ ರಿಯಾಕ್ಷನ್ನು, ನಾನು ಹಾಗೆಂದಾಗ.

ಏನೆಲ್ಲ ಮಾಡಿ ಅಪ್ಪ ಧರ‍್ಯ ತಂದಿದ್ದರೂ ಅಕ್ಕನಿಗೆ ಆ ಗೆಜ್ಜೆಯ ಧ್ವನಿ ಹೋಗಿರಲಿಲ್ಲ. ಅವಳು ಇದ್ರೆ ಧರ‍್ಯನಾದ್ರೂ ಇರೋದು. ಈಗ ಪಿಯುಸಿ ಓದಲು ದೂರದ ಊರಿಗೆ ಹೋಗಿದ್ದಾಳೆ. ಅವಳು “ಲೋ… ನನ್ನ ಜೊತೆ ಓದು ಬಾರೊ..ಒಬ್ಬಳಿಗೆ ಬೋರಾಗುತ್ತದ, ಭಯನೂ” ಅಂದಾಗಲೂ ನಾನು ಸೊಕ್ಕಿನಿಂದ “ನನಗ ನಿದ್ದೆಗಟ್ಟು ಓದೊ ವಯಸ್ಸಲ್ಲ, ನಾನು ಆಗಲೆ ಹೊಂವರ್ಕ್‌ ಮುಗಿಸಿನಿ.. ನಾನು ಮೆಟ್ರಿಕಿ ಬಂದಾಗಲೇ ಓದೋದು” ಅಂದಿದ್ದೆ. ಅದಕ್ಕೆ ಅಕ್ಕ ಏನು ಬೈದುಕೊಂಡಳೊ ಅಥವಾ ಏನು ಶಾಪ ಹಾಕಿದ್ದಳೊ ಗೊತ್ತಾಗಲಿಲ್ಲ ಆದರೆ ಈಗ ಇಂಗ್ಲೀಷ್ ಮೇಷ್ಟ್ರಿನಿಂದ ಅಕ್ಕನ ಹಾಗೆ ನಿದ್ದಿಗೆಟ್ಟು ಓದೊ ಪ್ರಸಂಗ ಬಂದಿತ್ತು…..ಅದರಲ್ಲಿ ಈ ಸೌಂಡ್ ಬೇರೆ ಕಾಡುತ್ತಿತ್ತು.

“ಹಲೋ…. ಸಮು…” ಅಂತ ಮತ್ತೆ ಅದೇ ಧ್ವನಿ ಕೇಳಿಬಂತು.
“ಅಮ್ಮಾ! ಅಕ್ಕಗ ಗೆಜ್ಜೆ ಸೌಂಡು ಕೇಳುತ್ತಿದ್ರೆ ನನಗೆ ಹೆಸರಿಟ್ಟೆ ಕರಿತಿದೆ….? ‘ಅಪ್ಪಾ…. ಅಮ್ಮಾ…’” ಎಂದು ಕೂಗಿದೆ. ಅವರು ನಿದ್ದೆ ಜೋರಾಗಿ ಹತ್ತಿದ್ದರಿಂದ ಎದ್ದೇಳುವ ಯಾವ ಲಕ್ಷಣಗಳು ಕಾಣಲಿಲ್ಲ. ದೆವ್ವ ಬೇಕಂತಲೆ ಅವರಿಗೆ ಎಚ್ಚರ ಆಗದಿರುವ ಹಾಗೆ ಏನಾದರೂ ಮಾಡಿದೆಯೊ? ಏನೋ? ಎನ್ನುವ ಸಂಶಯವೂ ಬಂತು. ‘ಏನು ಮಾಡಲಿ? ಏನು ಮಾಡಲಿ?’ ಅಕ್ಕಾ ಏನು ಬೈಕೊಂಡು ಶಾಪ ಹಾಕಿದ್ದೀಯೆ…?” ಎಂದು ‘ಆಸ್ತಿಕಾಸ್ತಿ ಕಾಳಭೈರವಿ..ರಕ್ಷಮಾಂ ರಕ್ಷಮಾಂ’ ಎಂದು ಅಜ್ಜಿ ಹೇಳಿಕೊಟ್ಟಿದ್ದ ಮಂತ್ರದ ಜೊತೆ ‘ಬುದ್ಧರ‍್ಬಲಂ ಯಶೋಧರ‍್ಯಂ’ ಅಂತ ಹನುಮಂತನ ಮಂತ್ರ ಪ್ರರ‍್ಥಿಸಿ ‘ಜೈ ಭಜರಂಗಬಲಿ’ ಎಂದೆಲ್ಲ ಏನೇನೊ ಅಂದುಕೊಂಡು ಸಮಾಧಾನ ಪಡತಿದ್ದೆ.

“ಸಮ್ಮು…. ಸಮ್ಮು….ಇಲ್ಲಿ ನೋಡು ಸಮು…ಸಮ್ಮು…ಸಮ್ಮುಊಊಊಊಊಊ…” ಅಂತ ಮತ್ತೆ ಮತ್ತೆ ಧ್ವನಿ ಬಂತು. ಈಗ ಮತ್ತಿಷ್ಟು ಧರ‍್ಯ ಉಡುಗಿ ಓಡಿ ಹೋಗಿ ಅಪ್ಪ ಅಮ್ಮನ ಮಧ್ಯೆ ಹೋಗಿ ಹೊದ್ದುಕೊಂಡು ಮಲಗಿಕೊಂಡೆ. ಸ್ವಲ್ಪ ಸಮಯ ನಂತರ ‘ಸಮ್ಮು ..ಸಮ್ಮು… ಏಳು ಸಮ್ಮು ?”ಎಂದು ಮತ್ತೆ ಹೊದಿಕಿ ಒಳಗೆ ಮತ್ತೆ ಅದೆ ಸೌಂಡ್ ಬಂತು. ಅಪ್ಪ ಅಮ್ಮನ ಮಧ್ಯೆ ಮಲಗಿದರೂ ಬಿಡದ ಧ್ವನಿ ಕೇಳಿ ಥರಥರ ದೇಹ ನಡುಗಿದರೂ “ಯಾರೊ ಅದು ಎದುರಿಗೆ ಬಂದು ಮಾತಾಡು?” ಎಂದೆ, ಜೊತೆಗೆ ಕಚ್ಚಲು ಬಂದ ಎರಡು ಮೂರು ಸೊಳ್ಳೆನ್ನ ಹೊಡೆದೆ. “ಹಲೊ…ಇಲ್ಲಿ…ನಿನ್ನ ಕಣ್ಣಮುಂದೆ ನೋಡು, ನಾನೇ ಮಾತಾಡತಾ ಇರೋದು…”
“ಯಾರು? ಎಲ್ಲಿ? ಕಾಣುತ್ತಿಲ್ಲ!”
“ಒಂದು ಕಣ್ಣುಮುಚ್ಚಿ ನೋಡು” ಎಂದು ಹೇಳಿದಂಗಾತು ಅದೆ ಸಣ್ಣ ಧ್ವನಿ.
ಒಂದು ಕಣ್ಣು ಮುಚ್ಚಿ ನೋಡಿದೆ. ಏನೂ ಕಾಣಲಿಲ್ಲ.
“ನಿನ್ನ ಮೂಗಿನ ಮೇಲೆ ನೋಡು”
ಅದು ಹೇಳಿದಂತೆ ನೋಡಿದೆ. ಸೊಳ್ಳೆ ಒಂದು ಬಂದು ಮೂಗಿನ ಮೇಲೆ ಕುಳಿತಿತ್ತು. ಕಣ್ಣಿನ ನೇರಕ್ಕೆ ಬಂತು ಪುಟ್ಟ ಕೊಂಡಿಯಿಂದ ತಾನೆ ಮಾತಾಡಿದ್ದು ಎಂದು ಅಲ್ಲಾಡಿಸಿ ತೋರಿಸುತ್ತಿತ್ತು.
“ಎಲ್ಲಿ ಎಲ್ಲಿ ಎಲ್ಲಿ?” ಎಂದೆ.
“ಅದೆ ಈಗ ಕಣ್ಣು ಮುಚ್ಚಿ ನನ್ನ ನೋಡ್ದೆಲ್ಲ ಹಾಂಗ ನೋಡು ಇನ್ನೊಮ್ಮೆ, ನಾನೆ ಮಾತಾಡಿದ್ದು”
“ಅಂದ್ರೆ..”
“ನಾನೇ ಸೊಳ್ಳೆ ಮಾತಾಡತಾ ಇರೋದು”
ನನಗೇನೂ ತೋಚದೆ ಹೊಡೆಯಲು ಮುಂದಾದೆ.
“ವೇಟ್…. ವೇಟ್…. ಯಾಕ ಅವಸರ ಮಾಡ್ತಿ? ನಿನ್ನನ್ನೇನು ಕಚ್ಚಲ್ಲ” ಎಂದು ಹಾರಿ ಕುಳಿತು ಮಾತಾಡುತ್ತಿರುವುದು ನಾನೇ ಎಂದು ಖಾತ್ರಿ ಪಡಿಸಿತು. ಆ ಸೊಳ್ಳೆ ಸಾಮಾನ್ಯ ಸೊಳ್ಳೆಯಂತಿರದೆ ಸ್ವಲ್ಪ ದೊಡ್ಡದಾಗಿತ್ತು, ದಷ್ಟಪುಷ್ಟವಾಗಿತ್ತು. ಅಂಗಾಂಗಗಳೆಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು. ಮಾತಾಡುವಾಗ ಅದರ ಕೊಂಡಿ ಮನುಷ್ಯರ ತುಟಿಯಂತೆ ಅಲ್ಲಾಡುತ್ತಿತ್ತು.
“ನೀನಾ?”
“ಎಸ್..ಎಸ್…ನಾನೆ ಸೊಳ್ಳೆ” ಅಂತು
“ಸೊಳ್ಳೆ ಎಲ್ಲಾದರೂ ಮಾತಾಡತಾವಾ. ನನಗೆ ಎಲ್ಲೊ ಭ್ರಮೆ..”
“ಎಲ್ಲೊ ಎಲ್ಲೊ ರ‍್ಟಿ ಫೆಲ್ಲೊ….ಭ್ರಮೆಯಲ್ಲೊ…ಭ್ರಮೆಯಲ್ಲೊ..ರಿಯಲ್ಲೊ..ರಿಯಲ್ಲೊ… ಖರೆಲೊ…ನೋಡಿಲ್ಲೊ…ಯಲ್ಲೊ ಯಲ್ಲೊ ರ‍್ಟಿ ಫೆಲ್ಲೊ” ಎಂದು ರಾಗವಾಗಿ ಹಾಡಲು ಆರಂಭಿಸಿತು.
“ನಮ್ಮ ಹಾಗೆ ಹಾಡನ್ನ ಹಾಡತಿದೆ ವಿಚಿತ್ರವಾಗಿದೆಯಲ್ಲ….! ನಿಜನಾ?”
“ಅಯ್ಯೊ…! ರ‍್ಮವೆ?…ನಿಜ..ನಿಜ…ನಿಜ…ನಿಜ” ಎಂದು ಮತ್ತೆ ಕುಣಿದು ಕುಣಿದು ಮೂಗಿನ ಮೇಲೆ ಕುಳಿತು ಖಾತ್ರಿಪಡಿಸಿತು.

ಊಹಿಸಿಕೊಳ್ಳಲಾಗಲಿಲ್ಲ ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳು ಮಾತಾಡೋ ವಿಷಯವನ್ನ ಪಂಚತಂತ್ರ ಕಥೆಗಳಲ್ಲಿ ಕೇಳಿದ್ದೆ, ಓದಿದ್ದೆ, ಚಿಂಟೂ ಟಿವಿಯಲ್ಲಿ ನೋಡಿದ್ದೆ. ಕನಸೆ ಚೂಟಿಕೊಂಡು ಖಾತ್ರಿ ಪಡಿಸಿಕೊಂಡೆ.
“ಏನು ಯೋಚಿಸತಾ ಇದ್ದಿ.. ಎಲ್ಲ ನನಸೆ ನನಸೆ, ಕನಸಲ್ಲ ಕನಸಲ್ಲ, ಇಟ್ಸ್ ರಿಯಲ್…ನಿನ್ನ ಜೊತೆ ಮಾತಾಡಲು ಬಂದಿನಿ”
ಸಡನ್ ಆಗಿ ನನಗ್ಯಾಕೊ ಆ ಸೊಳ್ಳೆ ಬಗ್ಗೆ ವಿಶೇಷ ಒಲವು ಮೂಡಿತು. “ಹಾಂ! ನನ್ನ ಜೊತೆನಾ? ಅದು ಹೇಗೆ ಸಾಧ್ಯ..?”
“ನೀನು ‘ಈಗ’ ಫಿಲ್ಮ ನೋಡಿಲ್ಲೇನು?”
“ಯಾವುದು…!”
“ಅದೆ ಕಿಚ್ಚ ಸುದೀಪನದು?”
“ಯಾವುದು?”
“ಬುದ್ಧು… ಬರೀ ಓದಿದ್ರ ಉಪಯೋಗವಿಲ್ಲ. ಸ್ವಲ್ಪ ಬುದ್ಧಿನಾದ್ರೂ ಬೇಡವೆ? ಸಮಾನ್ಯ ಜ್ಞಾನ ಇರಬೇಕಪ, ಈಗ ಅಂದ್ರೆ ಯಾವುದು ಅಂತ ಕೇಳ್ತಿಯಲ್ಲ ಪರಮ ಹುಚ್ಚ”
“ಅಯ್ಯೊ ಗೊತ್ತಿಲ್ಲ ನನಗೆ”
“ತೆಲುಗು ಪಿಚ್ಚರ್ ಬಂದಿತ್ತಲ್ಲ!”
“ನಾನು ಟಾಕೀಜ್‌ಗೆ ಹೋಗಲ್ಲ”
“ಟಿವಿಯಲ್ಲಿ ಹಾಕಿದ್ರಲ್ಲ”

“ಟಿವಿನೂ ನಾನು ಹೆಚ್ಚಾಗಿ ನೋಡಲ್ಲ”
“ಅಯ್ಯೊ…ರ‍್ಮ, ಹೀಗೆ ಆದರೆ ಫಸ್ಟ ರ‍್ಯಾಂಕ್ ರಾಜುನ ತರಹ ಆಗತಿ”
“ಅವನು ಯಾರು?”
“ಅಯ್ಯೋ ಮೂಢಪ್ಪ …ಶತದಡ್ಡ ಕಣಪ್ಪ ನೀನು”
“ಹಾಗೆ ಅಂದುಕೊ, ನಮ್ಮಪ್ಪ ಟಿವಿ ನೋಡಕ ಬಿಡಲ್ಲ, ಟಾಕೀಜ್‌ಗೆ ಕಳಸಲ್ಲ ಹಾಂ! ನೆನಪು ಬಂತು ಅಪ್ಪನ ತೋರಿಸಿದಂಗ ಇತ್ತು… ನೋಣದ್ದು ಒಂದು ಫಿಲ್ಮ!”
“ಅಮ್ಮಾ….? ಟ್ಯೂಬ್ ಲೈಟು ಹತ್ತಿತು”
“ಹೇ… ಆಗನ್ನಬೇಡ ನನಗೆ ಯಾವುದಾದರೂ ಪ್ರಶ್ನೆ ಕೇಳು ಹೇಳುವೆ…”
“ಇರಲಿ ‘ಈಗ’ ದ ಫಿಲ್ಮ ಗೊತ್ತಾಯ್ತಲ್ಲ ಆ ಪಿಚ್ಚರಿನಲ್ಲಿಯ ನೋಣದ ಹಾಗೆ ನಾನು”
“ಅಂದ್ರೆ….ಅಂದ್ರೆ… ನೀನು ದೆವ್ವನಾ!”
“ಅಲ್ಲ”
“ಮತ್ತೆ ಅವ ಸತ್ತು ನೋಣದ ರೂಪದಾಗ ಬಂದು ಸೇಡು ತೀರಿಸಿಕೊಳ್ಳತಾನ! ನಾನ್ಯಾರಿಗೂ ಮೋಸ ಮಾಡಿಲ್ಲ..ತೊಂದರೆ ಕೊಟ್ಟಿಲ್ಲ, ನೀನು ಯಾರು?”
“ನೀನು ಭಯಪಡಬೇಡ, ನಾನು ನಾನೇ”
“ಅಂದ್ರೆ?”
“ಅದೆ, ಸೊಳ್ಳೆ”
“ನಿನಗೆ ಹೇಗೆ ಮಾತಾಡಲು ಬರುತ್ತದೆ”
“ನೀವು ಮಾತಾಡಲ್ಲೇನು? ಹಾಗೆ”
“ನಿಮ್ಮವೆಲ್ಲಾ ಸನ್ನೆಯ ಭಾಷೆ ಅಂತ ಕೇಳಿದ್ದೆ, ನಮ್ಮ ಹಾಗೆ ಮಾತಾಡತಾ ಇದ್ದೀಯಾ?”
“ನೀವು ಅಂದುಕೊಳ್ಳುವುದೆಲ್ಲ ಸತ್ಯವೆ.. ಅದಕ್ಕಾಗಿಯೆ ಬಂದಿರುವೆ..”
“ಯಾವುದಕ್ಕಾಗಿ?”
“ನಿಮ್ಮ ಜೊತೆ ಮಾತಾಡುವುದಕ್ಕಾಗಿ”
“ನನ್ನ ಜೊತೆ ಮಾತಾಡೋದಾ! ನಾನೇನು ದೊಡ್ಡ ಮನುಷ್ಯನಾ?”
“ಇಲ್ಲ… ಎಲ್ಲರ ಹತ್ತರ ಹೋಗಿದ್ದೆ.. ಮಾತಾಡಿದೆ, ಕಾಡಿದೆ, ವಿಷಯ ಹೇಳಕ ಟ್ರೈ ಮಾಡಿದೆ. ಯಾರೂ ನನ್ನನ್ನ ಕೇರ್ ಮಾಡಲಿಲ್ಲ. ನೀನು ಗುರುತಿಸಿದಿ ನೋಡು” ಎಂದಿತು ಖುಷಿಯಿಂದ ಮೆಲುಧ್ವನಿಯಲ್ಲಿ.
ಅದು ಹಾಗೆಲ್ಲಾ ಆಪ್ತವಾಗಿ ಮಾತಾಡೊದು ನೋಡಿ ನನಗ ಮಾತಾ ಬರಲಿಲ್ಲ.
“ಯಾಕೆ ಸಮು ಹಂಗ್ಯಾಕ ಕೂತಿ…. ಕೆಲ ಸತ್ಯ ವಿಷಯಗಳನ್ನು ತಿಳಿಸೋಣ ಅಂತಾನ ಬಂದಿನಿ” ಅಂತು ಮೃದುವಾಗಿ.
ನನಗೇನಾಯ್ತೊ ಗೊತ್ತಿಲ್ಲ, ಸೊಳ್ಳೆಯಿಂದ ಅದುವರೆಗೆ ಅಲ್ಲದೆ ನಿತ್ಯ ಕಡಿಸಿಕೊಂಡ ನೋವಿನಿಂದ ಬೇಸತ್ತಿದ್ದ ನಾನು ಅದರ ಮಾತಿನ ಮೋಡಿಗೆ ಬೀಳದೆ “ನೀವೆಲ್ಲಾ ನಮ್ಮನ್ನೆಲ್ಲಾ ಕಾಡುವವರು, ಕಟು ನಿಷ್ಕರುಣಿಗಳು. ನೀನು ಏನು ಹೇಳಲಿಕ್ಕೆ ಬಂದಿ ?ನಮಗ”

“ನೀವೇನು ಭಾರಿ ಸಾಚಾಗಳು, ಮನುಷ್ಯರು” ಎಂದು ನರ‍್ಭೀತಿಯಿಂದ ಪ್ರತ್ಯುತ್ತರಿಸಿತು. ಅಲ್ಲಿವರೆಗೂ ಆತ್ಮೀಯವಾಗಿ ಗೆಳೆಯನಂತೆ ಮಾತನಾಡಿ ಸಡನ್ ಆಗಿ ಉತ್ತರ ಕೊಟ್ಟಿದ್ದು ತಡಿದುಕೊಳ್ಳಲಾಗಲಿಲ್ಲ. “ಏನು? ಚೋಟಿದ್ದಿ ಅಂತ ಸುಮ್ಮನೆ ಬಿಟ್ರೆ ನಮ್ಮನ್ನೆಲ್ಲ ಬೈತಾ ಇದ್ದಿ? ಯಾಕೆ? ಕ್ವಾಯಿಲ್ ಹಚ್ಚಿ ಮಟಾಶ ಮಾಡಲೇನು ” ಎಂದೆ
“ಯಾಕ ಕಚ್ಚಲಾ? ನನ್ನ ಸಾಯಸಾಕ ನೋಡ್ತಿಯಾ…? ಅಲ್ಲಿ ಉರಿತಿಲ್ಲೇನು! ನಿಮ್ಮ ಹತ್ರ ಅಂತಹ ಪವರ್ ಫುಲ್ ಔಷದಿ ಇದ್ದಿದ್ರ ನಿತ್ಯ ಯಾಕೆ ಮೈ ತೂರಿಸಿಕೊಂಡ ಒದ್ದಾಡತಿದ್ರಿ” ಎಂದು ಕಪಾಳಕೆ ಕೊಟ್ಟಾಂಗ ಮಾತಾಡಿತು.
ಬೆಪ್ಪತನ ತೋರುಗೊಡದೆ “ಉರಿತಿರೋದು ಗೊತ್ತು… ಕರೆಂಟ್ ಬರಲಿ ತಡಿ, ಮಾಸ್ಕಿಟೊ ಲಿಕ್ವೀಡ್ ಹಚ್ಚತಿನಿ” ಎಂದೆ.

“ಹೌದಾ ಸೊಳ್ಳೆ ಕ್ವಾಯಿಲು, ಮಲಾಮು, ಸ್ಫ್ರೇ, ಅಲಟ್ರಾ ಸಾನಿಕ್ ಉಪಕರಣ, ಸೊಳ್ಳೆ ಬ್ಯಾಟು, ಸೊಳ್ಳೆ ಕಡಗ, ಪ್ಯೂಮಿ ಮೀಟರ್, ಪೈರಫಟೆಕ್ನಿಕ್ ಸುರುಳಿಗಳು, ಎಲೆಕ್ಟಾçನಿಕ್ ಮಾಸ್ಕಿಟೊ ಕಿಲ್ಲರ್, ಆಂಟಿ ಮಾಸ್ಕಿಟೊ ಲೆಡ್ ಲ್ಯಾಂಪ್, ಫಾಗಿಂಗ್ ಸ್ಮೋಕರ್, ಹೊರಾಂಗಣ ಬಲೆ, ಸೊಳ್ಳೆ ಪರದೆ….ಅಮ್ಮಾ ಹೇಳೋಕೆ ದಮ್ಮು ಹತ್ತಿ ಹೋಯ್ತು. ಇಷ್ಟೆಲ್ಲ ನಮ್ಮನ್ನ ಕೊಲ್ಲಕ್ಕ, ನಮ್ಮಿಂದ ತಪ್ಪಿಸಿಕೊಳ್ಳಾಕ ಬಳಸ್ತೀರಿ…..ನಾವು ಸತ್ತು ಹೋದ್ವಾ?” ಎಂದು ನಗುತ್ತಾ “ಏನು ಕಿಸದ್ರೂ ನಮ್ಮ ಸಾಯಿಸಾಕ ಸಾಧ್ಯನ! ಒಬ್ಬರು ಸತ್ತರ ರಕ್ತಬೀಜಾಸುರರಂಗ ಸಾವಿರಾರು ನಮ್ಮ ಮಂದಿ ರೆಡಿಯಾಗಿರತಿವಿ. ಅಂತಹ ಸ್ಪೇಷಲ್ ಶಕ್ತಿ ಹೊಂದಿವಿ” ಎಂತು.
“ಸ್ಪೇಶಲ್ ಶಕ್ತಿ! ಅದು ಹೇಗೆ ? ಬಹಳ ಆಸಕ್ತಿ ದಾಯಕವಾಗಿದೆಯಲ್ಲ” ಎಂದೆ.
ಅಷ್ಟರಲ್ಲಿ ಅಪ್ಪ ಎದ್ದ
“ಏ… ಸಮು…ರಾತ್ರಿ ಹನ್ನೆರಡು ಆಯ್ತು…..ಯಾರೊಂದಿಗೆ ಮಾತಾಡತಾ ಇದ್ದೀ…ಕಾಮನ ಸುಡಾಕ ಗೆಳೆಯರು ಕರಿಯಾಕ ಬಂದಾರನೂ? ಇಲ್ಲ ಫೊನ್ ಹಿಡಕೊಂಡು ಕುಳಿತಿಯೇನು? ಮಲಗತಿಯೊ ಇಲ್ಲ ನಾಳೆ ನಿಮ್ಮ ಇಂಗ್ಲೀಷ್ ಸರ್ ಹೇಳಲೊ?” ಅಂದ ಕೂಡಲೆ….ಸೊಳ್ಳೆ ಜೊತೆ ಮಾತಾಡಲು ಇಚ್ಛೆ ಇತ್ತಾದರೂ…ಅಪ್ಪನ ಭಯಕ್ಕಿಂತ ಇಂಗ್ಲೀಷ್ ಸರ್ ಭಯ ಕಾಡಿ.. “ಪ್ಲೀಜ್ ಸೊಳ್ಳೆ, ನಾಳೆ ಮಾತಾಡೋಣ..ಈಗ ಮಾತಾಡಿದ್ರೆ ಅಪ್ಪ ಸುಮ್ಮನೆ ಬಿಡೊಲ್ಲ” ಎಂದು ಮೆಲ್ಲಗೆ ಹೇಳಿ ಸನ್ನೆ ಮಾಡಿದಾಗ
“ಆಯ್ತು..ಗುಡ್ ನೈಟ್” ಎಂದು ಟಾಟಾ ಮಾಡಿತು..

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: