ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೋಲೇನಹಳ್ಳಿ ರಮೇಶ್ ಹೊಸ ಕವಿತೆ – ಆ ತೇರು…

ಪೋಲೇನಹಳ್ಳಿ ರಮೇಶ್

ಮಣ್ಣಿನಲಿ ಚಕ್ರಗಳ ಹೂತು ಆ ದೊಡ್ಡ ತೇರು ನಿಂತಲ್ಲೇ ನಿಂತಿತ್ತು.
ಗೆದ್ದಲು ಹಿಡಿದಿರಲಿಲ್ಲ: ಬಳ್ಳಿ, ಗುಬ್ಬಚ್ಚಿಗಳಿಗೆ ಆಸರೆ, ನೆರಳಲ್ಲಿ ಹಸು ಮಲಗಿತ್ತು
ಶ್ರೀಗಂಧ, ತೇಗ, ಕರಿಮರ, ಬಳಸಿರಬಹುದು
ಗೀತೆ ರಾಮಾಯಣ ಚಿತ್ರಗಳ ಪ್ರತಿ‌ ಮಜಲುಗಳಲಿ
ಕೆತ್ತಿದವರಾರೆಂದು ಕೇಳಿದರೆ ಓಬೀರಾಯನಕಾಲದ್ದು ಎನ್ನುತ್ತಾರೆ

ತೆಪ್ಪಗಿದ್ದ ತೇರಿಗೆ ಮೊನ್ನೆ ಒಮ್ಮೆಲೇ ಜೀವಬಂದಿದೆ
ಚೆಂಡು, ಮಲ್ಲಿಗೆ, ಮರುಗ, ಸೇವಂತಿಕೆ ದಂಡೆ ದಂಡೆ ನೇತಾಡಿವೆ
ಕೇಸರಿವಸ್ತ್ರ ಇಕ್ಕೆಲ ಹಾರಾಡಿವೆ
ಜಾಗಟೆ, ಕೊಂಬು, ಕಹಳೆ ಮೊಳಗಿವೆ
ಗೆಜ್ಜೆ ಕಟ್ಟಿದ ಮೇಲೆ ಹೆಜ್ಜೆ ಹಾಕದಿರೆ ಹೇಗೆ; ಹೊಸದೇ ನೃತ್ಯ ಮೈತಾಳಿದೆ
ಮಸುಕು ಉತ್ಸವಮೂರ್ತಿ ಚಹರೆ ಎಸೆದ ಹಣ್ಣು-ಹೂವುಗಳಿಂದ ಮರೆಯಾಗಿದೆ

ತಿಳಿಯದು, ಯಾರು ಮೊದಲೆಳೆದವರು ಎಂದು
ಹಗ್ಗಕ್ಕೆ ಸಾವಿರ ಕೈ ಸೇರಿವೆ
ಹಗ್ಗ ಹನುಮನ ಬಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಬಟ್ಟೆ ಸುತ್ತುವುದೊಂದು ಬಾಕೀಯಿದೆ
ಎಡ ಬಲವಾಲುತ್ತ ಸಾಗಿದೆ

ಜಾತ್ರೆಯಲಿ ತೇರನೆಳೆಯುವುದು ಸುಲಭ ಹಗ್ಗ ಮುಟ್ಟಿದರಾಯಿತು, ಧನ್ಯ!
ಮತ್ಯಾರೋ ಎಳೆಯುತ್ತಾರೆ; ಆಯತಪ್ಪಿದವರು ಕಾಲಡಿ ಮಖಾಡೆ ಮಲಗುತ್ತಾರೆ.

ಆ ದೊಡ್ಡ ತೇರ ಎಳೆದಾಗಿದೆ
ಎಲ್ಲಿಯವರೆಗೆ?
ಯಾರಿಗೂ ತಿಳಿಯದಾಗಿದೆ

‍ಲೇಖಕರು Admin

11 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading