ಪೋರ್ಚುಗೀಸ್ ಕವಿ ಫನಾಂಡೊ ಪೆಸೊವನ ನಾಲ್ಕು ಕವನಗಳು

ಮೂಲ: ಫನಾಂಡೊ ಪೆಸೊವ

ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್

ಫನಾಂಡೊ ಪೆಸೊವ-ರವರು (13 ಜೂನ್ 1880 – 30 ನೊವೆಂಬರ್ 1935) ಪೊರ್ಚುಗೀಸ್ ಸಾಹಿತ್ಯದ ಅತಿ ಶ್ರೇಷ್ಠ ಕವಿಯೆಂದು ಹೆಸರು ಗಳಿಸಿದವರು. ಕವಿಯಾಗಿರುವುದರ ಜತೆಗೆ ಅವರು ಲೇಖಕರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಚಿಂತಕರಾಗಿ ಹಲವು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ಫನಾಂಡೊ ಪೆಸೊವ ಸುಮಾರು 70 ಬೇರೆ ಬೇರೆ ಹೆಸರುಗಳಡಿಯಲ್ಲಿ ಕವನಗಳನ್ನು ಬರೆದರು. 

ಈ ಹೆಸರುಗಳನ್ನು ಅವರು ‘ಸೂಡೊನಿಮ್’ (pseudonym), ಅಂದರೆ ‘ಕಾವ್ಯನಾಮ’-ಗಳೆಂದು ಕರೆಯದೇ ‘ಹೆಟೆರೊನಿಮ್’-ಗಳೆಂದು (heteronym)ಕರೆದನು. ಬರೀ ಹೆಸರುಗಳಾಗಿರದೇ, ಪ್ರತಿ ‘ಹೆಟೆರೊನಿಮ್’ಗೆ ಪೆಸೊವ ಒಂದು ನಿರ್ದಿಷ್ಟ ವ್ಯಕ್ತಿತ್ವ, ಜೀವನ ಚರಿತ್ರೆ, ಬರೆಯುವ ಶೈಲಿ, ತಾತ್ವಿಕ ದೃಷ್ಟಿಕೋನಗಳನ್ನುಸೃಷ್ಟಿಸಿದರು.

ಪೆಸೊವ ತನ್ನ ಬಹುಪಾಲು ಕವಿತೆಗಳನ್ನುಮೂರು ‘ಹೆಟೆರೊನಿಮ್’ಗಳಡಿಯಲ್ಲಿ ಬರೆದರು – ಅಲ್ಬರ್ತೊ ಕಯಿರೊ (Alberto Caeiro), ರಿಕಾರ್ಡೊ ರೆಯಿಶ್ (Ricardo Reis) ಹಾಗೂ ಅಲ್ವರೊ ಡಿ ಕಾಂಪೊಶ್ (Álvaro De Campos). ಫನಾಂಡೊ ಪೆಸೊವ ತನ್ನದೇ ಹೆಸರಿನಲ್ಲಿಯೂ ಕವನಗಳನ್ನು ಬರೆದರು. ಈ ಮೂರು ‘ಹೆಟೆರೊನಿಮ್’ಗಳಡಿಯಲ್ಲಿ ಹಾಗೂ ತನ್ನದೇ ಹೆಸರಿನಲ್ಲಿ ಪೆಸೊವ ರಚಿಸಿದ ಒಂದೊಂದು ಕವನವನ್ನು ಆಯ್ದು, ಒಟ್ಟು ನಾಲ್ಕು ಕವನಗಳ ಕನ್ನಡ ಅನುವಾದ ಇಲ್ಲಿವೆ.

ನಾನು ಪ್ರಾಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ

( ಮೂಲ: ಅಲ್ಬರ್ತೊ ಕಯಿರೊ)

ನಾನು ಪ್ರಾಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎರಡು ಮರಗಳು,
ಒಂದರ ಪಕ್ಕಇನ್ನೊಂದು, ಒಂದನ್ನೊಂದು ಹೋಲುವುದು ವಿರಳ.
ನನ್ನ ಯೋಚನೆ, ಬರಹ, ಹೂಗಳಲ್ಲಿ ಬಣ್ಣವಿದ್ದ ಹಾಗೆ,
ಆದರೆ ನಾನು ನನ್ನನ್ನು ಅಭಿವ್ಯಕ್ತಿಸುವ ಪರಿ ಉತ್ತಮಕ್ಕಿಂತ ಕಡಿಮೆಯೇ,
ಯಾಕೆಂದರೆ, ನನ್ನ ಹೊರ ರೂಪವಾಗಿ ಮಾತ್ರ ನಾನು
ಇರುವಂತಹ ದಿವ್ಯ ಸರಳತೆ ನನ್ನಲ್ಲಿಲ್ಲ.

ನಾನು ನೋಡುತ್ತೇನೆ, ಮನ ಕರಗುತ್ತದೆ,
ನೆಲದ ಇಳಿಜಾರಿನಲ್ಲಿ ನೀರು ಹರಿಯುವ ಹಾಗೆ ಮನಕರಗುತ್ತದೆ,
ನನ್ನ ಕಾವ್ಯವು ಗಾಳಿಯ ಕದಲಾಟದಂತೆಯೇ ಸಹಜ.

ಎಲೆಯು ತಾನು ಬಿಟ್ಟರೆಂಬೆಗೆ ಮತ್ತೆ ಮರಳುವುದಿಲ್ಲ

(ಮೂಲ: ರಿಕಾರ್ಡೊ ರೆಯಿಶ್)

ಎಲೆಯು ತಾನು ಬಿಟ್ಟ ರೆಂಬೆಗೆ ಮತ್ತೆ ಮರಳುವುದಿಲ್ಲ
ಅದೇ ತೊಟ್ಟಿನಿಂದ ಹೊಸ ಎಲೆಯನ್ನೂ ಸೃಷ್ಟಿಸುವುದಿಲ್ಲ.
ಈ ಕ್ಷಣ ಆರಂಭವಾಗುತ್ತಲೇ, ಮುಗಿಯುವ ಆ ಕ್ಷಣ,
ಎಂದೆಂದಿಗೂ ಮಡಿದ ಹಾಗೆಯೇ.

ಈ ನಿರರ್ಥಕ ಅನಿಶ್ಚಿತ ಭವಿಷ್ಯವು ವಸ್ತುಗಳ
ಹಾಗೂ ನನ್ನ ನಿಮಿತ್ತಗಳ
ಹಣೆಬರಹ ಹಾಗೂ ಕಳೆದು ಹೋದ ಸ್ಥಿತಿಗಳ
ಈ ಮರು ಅನುಭವಗಳ
ಹೊರತು ಬೇರಾವ ಆಶ್ವಾಸನೆ ಕೊಡುವುದಿಲ್ಲ.

ಎಂದೇ, ಇದೋ ಈ ಸರ್ವ ಮಾನ್ಯ ನದಿಯಲ್ಲಿ
ನಾನು ಅಲೆಯಾಗಿ, ಅಲ್ಲ, ಅಲೆಗಳಾಗಿ,
ಹಾಯಾಗಿ ಹರಿಯುವೆ,
ಯಾವ ಕೋರಿಕೆಗಳೂ ಇಲ್ಲದೇ
ಅವನ್ನು ಕೇಳಿಸಿಕೊಳ್ಳಲು
ಯಾವ ದೇವರುಗಳೂ ಇಲ್ಲದೇ.

ನಾನು ಮುಖವಾಡವ ಕಳಚಿ ಕನ್ನಡಿಯಲ್ಲಿ ನೋಡಿದೆ

(ಮೂಲ: ಅಲ್ವರೊ ಡಿ ಕಾಂಪೊಶ್)

ನಾನು ಮುಖವಾಡವ ಕಳಚಿ ಕನ್ನಡಿಯಲ್ಲಿ ನೋಡಿದೆ.
ವರುಷಗಳ ಹಿಂದಿನ ಅದೇ ಚಿಕ್ಕ ಹುಡುಗನಾಗಿದ್ದೆ.
ನಾನು ಏನೇನೂ ಬದಲಾಗಿಲ್ಲ …

ಮುಖವಾಡವ ತೆಗೆಯುವುದು ಹೇಗೆಂದು ತಿಳಿಯುವುದರ ಪ್ರಯೋಜನವಿದು.
ನೀನಿನ್ನೂ ಅದೇ ಚಿಕ್ಕ ಹುಡುಗ,
ಗತವು ನಿನ್ನಲ್ಲಿ ಜೀವಂತವಾಗಿರುವ,
ಆ ಚಿಕ್ಕ ಹುಡುಗ.

ನಾನು ಮುಖವಾಡವ ಕಳಚಿದೆ, ಮತ್ತೆ ಧರಿಸಿದೆ.
ಹೀಗಿರುವುದೇ ಮೇಲು.
ಈ ತರಹ, ನಾನೇ ಮುಖವಾಡ.

ಮತ್ತೆ ನಾನು ಯಥಾಸ್ಥಿತಿಗೆ ಮರಳುವೆ, ಬಸ್ಸು ಕೊನೇ ನಿಲ್ದಾಣಕ್ಕೆ ಮರಳಿದಂತೆ.

ನಾನು ಖುಷಿಯಾಗಿದ್ದೇನಾ ಖಿನ್ನನಾಗಿದ್ದೇನಾ? …

(ಮೂಲ: ಫ಼ನಾಂಡೊ ಪೆಸೊವ)

ನಾನು ಖುಷಿಯಾಗಿದ್ದೇನಾ ಖಿನ್ನನಾಗಿದ್ದೇನಾ? …
ಸತ್ಯವಾಗಲೂ ನನಗೆ ಗೊತ್ತಿಲ್ಲ.
ಖಿನ್ನನಾಗಿರುವುದೆಂದರೆ ಏನದು?
ಖುಷಿಯಿಂದ ಏನುಪಯೋಗ?

ನಾನು ಖುಷಿಯಾಗಿಯೂ ಇಲ್ಲ ಖಿನ್ನನಾಗಿಯೂ ಇಲ್ಲ.
ನಾನೇನೆಂದು ನನಗೇ ನಿಜವಾಗಿಯೂ ಗೊತ್ತಿಲ್ಲ.
ಜೀವಿಸುತ್ತಿರುವ ಮತ್ತೊಂದು ಆತ್ಮವಷ್ಟೇ ನಾನು,
ದೇವರು ವಿಧಿಸಿದ್ದನ್ನು ಅನುಭವಿಸುವವನಾನು.

ಹಾಗಾದರೆ, ನಾನು ಖುಷಿಯಾಗಿದ್ದೇನೋ ಖಿನ್ನನಾಗಿದ್ದೇನೊ?
ಯೋಚನೆಗೆ ಎಂದೂ ಚಂದದ ಮುಕ್ತಾಯವಿಲ್ಲ…
ನನ್ನ ಮಟ್ಟಿಗೆ ಖಿನ್ನತೆಯೆಂದರೆ
ನನ್ನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದೇ ಇರುವುದು…

ಆದರೆ, ಖುಷಿಯೆಂದರೆ ಅದೇ ತಾನೆ…

‍ಲೇಖಕರು Avadhi

June 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. kamalakar bhat

    These poems have come into Kannada so well. I like the lyricism in these poems. Excellent work.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: