ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ ಆರಂಭ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

1

ತೀರದ ದಾಹಿ, ಕಡುಮೋಹಿ

ಬೆಟ್ಟದ ತಿರುವಿನಲ್ಲಿ ಕಾರು ಹಾವಿನ ಹಾಗೆ ಹೊರಳಿತು. ಮುಂದಿನ ಸೀಟಿನಲ್ಲಿ ಕೂತು ಸಾಲಿಟ್ಟ ಬೆಟ್ಟಗಳನ್ನು ನೋಡುತ್ತಾ, ‘ಪ್ರಕೃತಿ ಥೇಟ್ ಹೆಣ್ಣಿನ ಹಾಗೆ, ಒಂದಿಷ್ಟು ಉಬ್ಬುಗಳು ಒಂದಿಷ್ಟು ತಗ್ಗುಗಳು. ಕಾಣದ ಪಾತಾಳದ ಆಳ ಎಲ್ಲವೂ ನಿಗೂಢ. ಎಷ್ಟು ಅರಿಯಲು ಪ್ರಯತ್ನ ಪಟ್ಟರೆ ಮತ್ತಷ್ಟು ಅಗೋಚರ. ಎಂಥಾ ಅದ್ಭುತ! ಇಲ್ಲೇ ನೆಮ್ಮದಿಯಾಗಿ ಇದ್ದು ಬಿಡಬೇಕು ಅನ್ನಿಸ್ತಾ ಇದೆ’ ಎಂದ ಸಹದೇವರ ಕಡೆಗೆ ಸರ‍್ರನೆ ನೋಡಿದೆ. ಮುಖದಲ್ಲಿ ಎಂಥದೋ ಪ್ರಶಾಂತತೆ. ಕಲ್ಪನೆಯಿಂದಲೇ ಇಂಥಾ ಸುಖವನ್ನು ಪಡೆಯಲು ಸಾಧ್ಯವಾಗುವ ಇವರಿಗೆ, ನಿಜವಾಗಿಯೂ ಹೆಣ್ಣಿನ ಸಂಪರ್ಕ ಎಂಥಾ ಸುಖವನ್ನು ಕೊಡುತ್ತದೋ?!. ಎಷ್ಟೋ ಸಲ ಅನ್ನಿಸುತ್ತೆ, ಸಾಹಚರ್ಯ ಎಂದು ಇಟ್ಟುಕೊಂಡ ನಾನೂ ಕೂಡಾ ಇವರಿಗೆ ಸಾಕಾಗಿಲ್ಲ. ಒಂದು ಇನ್ನೊಂದು ಮತ್ತೊಂದು ಸಂಬ೦ಧಗಳು… ಕಠಿಣ ಅರಗಿಸಿಕೊಳ್ಳುವುದು. ಇಷ್ಟಾಗಿಯೂ ಜಗತ್ತು ಇವರನ್ನು ಹೊಗಳುವುದನ್ನು ಮಾತ್ರ ನಿಲ್ಲಿಸಿಲ್ಲ.

ಜಗತ್ತು ಹೊಗಳಲಿ ಎನ್ನುವ ಆಸೆ ಒಳಗೆ ಇದ್ದರೂ, ತೋರಗೊಡದ ಡಂಭತನ ನನಗೆ ಮಾತ್ರ ಗೊತ್ತು. ಹಾಗೆಂದುಕೊ೦ಡೇ ಸಹಾರ ಮುಖವನ್ನು ನಿರುಕಿಸಿದೆ. ಪ್ರಕೃತಿಯನ್ನು ಸವಿಯುತ್ತಾ ಕುಳಿತ ಇವರ ಮುಖದಲ್ಲಿ ನೆನ್ನಿನ ನಮ್ಮಿಬ್ಬರ ಮಧ್ಯೆ ನಡೆದ ಜಗಳ ಕಾಣಲಿಲ್ಲ. ನನ್ನ ಭಾವನೆಗಳ ಜೊತೆ ಆಟ ಆಡುವಷ್ಟು ಕಠಿಣತೆ ಈ ಮನುಷ್ಯನಿಗೆ ಎಲ್ಲಿಂದ ಬಂತು? ಆ ಹಕ್ಕನ್ನು ಯಾರು ಕೊಟ್ಟರು? ಹೊರ ಜಗತ್ತಿಗೆ ಎಷ್ಟು ಮೃದು, ಎಂಥಾ ಶಾಂತ. ಸಮಾಜದ ಬಗ್ಗೆ ಮಾತಾಡುವಾಗ ಎಂಥಾ ಸಮಾಧಾನ. ಆದರೆ ವೈಯಕ್ತಿಕವಾಗಿ ಒಳಗೆ ಕುದಿವ ಲಾವಾರಸ. ಕೆಂಡದ೦ಥದ್ದೇ ಮಾತು. ಕೆಲವೊಮ್ಮೆ ಕೊಳಕಾಗುವ ಆ ಮಾತುಗಳು ಎದುರಿಗಿರುವವರಿಗೆ ಎಷ್ಟು ನೋವು ಕೊಡಬಹುದು ಎನ್ನುವ ಊಹೆ ಕೂಡಾ ಈ ಮನುಷ್ಯನಿಗಿರುವುದಿಲ್ಲ.

‘ನೀವು ಅಂದುಕೊ೦ಡ೦ತೆ ಅವನಿಲ್ಲ. ಇರಬೇಕು ಎಂದು ನೀವಂದುಕೊ೦ಡರೆ ತಪ್ಪು ನಿಮ್ಮದೇ ಹೊರತು ಅವನದ್ದಲ್ಲ’ ಎಂದು ಮತ್ತೆ ಮತ್ತೆ ವಿಷ್ಣು ಕೇಳಿದ ಮಾತು ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇತ್ತು. ಒಳಗೇ ಬಿಕ್ಕುತ್ತಾ, ಇಲ್ಲ ಇವತ್ತು ಇತ್ಯರ್ಥ ಆಗಲೇ ಬೇಕು. ನನ್ನ ಗಂಡ ಹೇಳಿಕೊಟ್ಟ ನೈತಿಕತೆಯ ಪಾಠವನ್ನು ಗಾಳಿಗೆ ತೂರಿ ಈ ಮನುಷ್ಯನ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಲಿ? ಇಲ್ಲ… ನಾನಾ ನೀವಾ? ನೋಡೆ ಬಿಡುವ’ ಎಂದು ಹಟಕ್ಕೆ ಬಿದ್ದವಳಂತೆ ಎದುರು ನಿಲ್ಲಬೇಕು ಎಂದುಕೊಳ್ಳುವಾಗಲೇ, ಸಾರ್ ಮುಂದೆ ಟೀ ಅಂಗಡಿ ಇದೆ ನಿಲ್ಲಿಸಲೇ’ ಎಂದ ಡ್ರೈವರ್ ನನ್ನ ಎಲ್ಲ ಪ್ರಶ್ನೆಗಳನ್ನೂ ನುಂಗಿ ಬಿಟ್ಟಿದ್ದ. ಬೇಸರ ಆಯ್ತಾ?’ ಎಂದು ನನ್ನ ಕಡೆಗೆ ನೋಡಿ ನಕ್ಕ ಸಹಾರ ಕಡೆ ತೀಕ್ಷ್ಣವಾಗಿ ನೋಡುತ್ತಾ, ಯಾಕೆ?’ ಎಂದೆ. ‘ಚೈತನ್ಯ ನಿಮ್ಮನ್ನ ಇವತ್ತು ನೆನ್ನೆ ನೋಡಿಲ್ಲ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿದ್ದಕ್ಕೆ ಕೋಪ ಬಂದಿದೆ ಎಂತಲೂ ಗೊತ್ತು’ ಎಂದರು. ನೀವು ಯಾವುದನ್ನು ಯಾವುದಕ್ಕೆ ಹೋಲಿಸಿದರೂ ಪ್ರಪಂಚ ನಿಮ್ಮನ್ನು ರಸಿಕ ಎನ್ನುತ್ತದೆ. ಇಷ್ಟಕ್ಕೂ ನಿಮಗೆ ಹಾಗೆ ಕಂಡರೆ ನಾನೇನು ಮಾಡಲಿಕ್ಕಾಗುತ್ತದೆ?’ ಎಂದೆ.

ಪ್ರಪಂಚವೆಲ್ಲಾ ಹಗುರವಾಗಿದೆ ಎನ್ನುವಂಥಾ ದಿವ್ಯ ನಗೆಯನ್ನು ನಗುತ್ತಾ, ನನ್ನ ಕಡೆ ನೋಡಿ, ಇಷ್ಟು ವರ್ಷಗಳಾದರೂ ನೀವು ಇನ್ನೂ ನಿಗೂಢವೇ’ ಎಂದರು. ನಾನು ಅವರನ್ನು ದಿಟ್ಟಿಸಿದೆ. ಅಂಥಾ ನಗುವನ್ನು ಬಹಳಷ್ಟು ಸಾರಿ ತುಂಬಾ ಹತ್ತಿರದಿಂದ ಕಂಡಿದ್ದ ನನಗೆ ಅದರಲ್ಲಿ ಅಡಗಿದ್ದ ಪೋಕರಿತನ ಅರಿವಿಗೆ ಬಂತು. ಏರು ತಗ್ಗುಗಳು ಎಂದ ಮಾತುಗಳ ಒಳಗಿನ ಗೂಢಾರ್ಥ… ಇಂಥಾ ಮಾತುಗಳಲ್ಲಿ ಆಸಕ್ತಿ ಕಳೆದುಕೊಂಡು ತುಂಬಾ ಸಮಯವಾಗಿದೆ. ಪ್ರತಿಕ್ರಿಯಿಸಬೇಕು ಅನ್ನಿಸದೆ ಸುಮ್ಮನೆ ಕಿಟಕಿಯ ಕಡೆ ನೋಡುತ್ತಾ ಕುಳಿತೆ. ನನ್ನ ಮೌನ ಅವರನ್ನು ಡಿಸ್ಟರ್ಬ್ ಮಾಡಿರಬೇಕು. ಕೈಲಿದ್ದ ಸಿಗರೇಟನ್ನು ಬುಸ ಬುಸ ಎಳೆಯ ತೊಡಗಿದರು. ಹೌದು ಯಾರೊಬ್ಬರು ಅವರಿಗೆ ಎದುರಾಡಿದರೂ ಹೀಗೆ, ಸೇದುತ್ತಿದ್ದ ಸಿಗರೇಟಿನ ಬೂದಿ ಮೈಲೇಲೆ ಬೀಳುವುದೂ ಅರಿವಿಗೆ ಬಾರದೆ ಹೋಗುವುದು. ಎಷ್ಟು ಸಲ ಹೇಳಿದ್ದೇನೆ ಹೀಗೆ ಮಾಡಬೇಡಿ ಎಂದು. ಆದರೆ ಅಭ್ಯಾಸ ಬಿಡಲಿಕ್ಕೆ ಅವರಿಗೆ ಕಷ್ಟ. ನನಗೆ ಕಿರಿಕಿರಿ.

ಆ ಕಣ್ಣನ್ನ ಒಮ್ಮೆ ನೋಡು ಅದರಲ್ಲಿ ತೀರದ ಅಭೀಪ್ಸೆ ಇದೆ, ಅದು ಅವನು ಬಯಸಿದ್ದು ಬೇಕೆ ಬೇಕು ಎನ್ನುವ ಹಠಮಾರಿ, ಲಂಪಟತನ, ನನಗೆ ಗೊತ್ತು ಇದನ್ನ ಹೇಳಿದರೆ ನೀನು ನಂಬಲ್ಲ. ಜಗತ್ತು ಹೇಳುವ ಅವನ ಚಿತ್ರಗಳಿಗೆ ನೀನು ಮಾತ್ರ ಅಲ್ಲ ಎಷ್ಟೋ ಜನ ಹೆಣ್ಣುಗಳು ಮರುಳಾಗಿದ್ದಿದೆ. ಅಂತಹವರ ನೋವಿನ ಕಥೆಗಳನ್ನು ಕೇಳಿದ್ದೇನೆ, ಕಂಡಿದ್ದೇನೆ, ಎಲ್ಲಾ ಗೊತ್ತಿದ್ದೂ ನೀನು ಅವನನ್ನು… ನಿನಗೆ ದೊಡ್ಡ ಹುಚ್ಚು, ನೀನು ಈಗ ನೋಡ್ತಾ ಇದ್ದೀಯ: ಅವನು ದೊಡ್ಡವನಾದ ಮೇಲೆ, ದೊಡ್ಡ ಹೆಸರನ್ನು ತಗೊಂಡ ಮೇಲೆ ನನಗೆ ಅವನು ಕಾಲೇಜು ದಿನಗಳಿಂದಲೂ ಗೊತ್ತು. ಅವನೆಂದರೆ ನನಗೂ ಮಹಾನ್ ಆಕರ್ಷಣೆ, ಮಾಡುವ ಕೆಲಸಗಳನ್ನೆಲ್ಲಾ ಮಾಡಿ, ತನಗೇನೂ ಗೊತ್ತೇ ಇಲ್ಲ ಎನ್ನುವ ಹಾಗೆ ಇದ್ದು ಬಿಡುತ್ತಿದ್ದ. ಅವನ ಆ ನಿರ್ಲಿಪ್ತತೆಯೂ ನನ್ನ ಕಾಡುತ್ತಿತ್ತು, ಅವನ ಆ ಚೇಷ್ಟೆಗಳು ತುಂಟತನದ್ದೋ, ಕಾಮದ್ದೋ ಅಂತ ನಿರ್ಧಾರಮಾಡಲಾಗದೆ ತುಂಬಾ ಒದ್ದಾಡಿದ್ದೇನೆ. ಇವನೇನಾ ಪ್ರಗತಿಯ ಬಗ್ಗೆ ಮಾತಾಡುವವನು? ಎನ್ನುವ ಹಾಗೇ ತಳಮಳಿಸಿದ್ದೇನೆ. ಒತ್ತಿದರೆ ಬೆಳಕು ಹೊತ್ತಿಕೊಳ್ಳುವ ಬೆತ್ತಲೆ ಹೆಣ್ಣಿನ ಚಿತ್ರವಿರುವ ಪೆನ್ನನ್ನು ತಂದು ಅದನ್ನು ಎಲ್ಲರಿಗೂ ತೋರಿಸುತ್ತಿದ್ದ. ಆ ಬೆತ್ತಲೆಯ ಬಗ್ಗೆ ಕಾವ್ಯಾತ್ಮಕವಾಗಿ ಮಾತಾಡುತ್ತಿದ್ದ, ಆ ಬೆತ್ತಲೆಯನ್ನು ನೋಡಬೇಕೋ ಅವನ ಮಾತುಗಳನ್ನು ಕೇಳಬೇಕೋ ಅರ್ಥವಾಗದೆ ಹೋಗುತ್ತಿತ್ತು. ಒಂದು ಥರ ಚಾಣಾಕ್ಷ. ಇದೇ ಅವನ ವೀಕ್‌ನೆಸ್ ಎಂದು ಭಾವಿಸಿ ನಾವು ಮಾತಾಡಿದ್ರೆ ಮುಜುಗರಕ್ಕೊಳಗಾಗುತ್ತಿದ್ದ. ಅದು ತನಗಲ್ಲ ಎನ್ನುವ ದಿವ್ಯ ನಿರ್ಲಕ್ಷ್ಯವನ್ನು ಆತುಕೊಂಡು ದೊಡ್ಡ ಮಾತುಗಳಿಗೆ ಬೀಳುತ್ತಿದ್ದ. ತಾನು ಏನೇ ಮಾಡಿದರೂ, ಕೊನೆಗೆ ತನ್ನ ಕಾಮವನ್ನು ಕೂಡಾ ಜಗತ್ತು ಗಂಭೀರವಾಗೇ ತೆಗೆದುಕೊಳ್ಳಬೇಕು ಎನ್ನುವುದು ಅವನ ಹೆಬ್ಬಯಕೆ.

ಕಾಲೇಜು ದಿನಗಳಲ್ಲೇ ಸಂಘಟನೆ, ಹೋರಾಟ ಎಂದೆಲ್ಲಾ ಮಾತಾಡುತ್ತಿದ್ದ. ಎಂಥಾ ಚಂದದ ಕರಪತ್ರ ಬರೆಯುತ್ತಿದ್ದ ಗೊತ್ತಾ? ಕೊನೆಗೆ ಅದಕ್ಕೆ ಅವನು ಬರೆಯುತ್ತಿದ್ದ ಚಿತ್ರ ಕೂಡಾ ಅವನಷ್ಟೇ ಪೊಯೆಟಿಕ್ ಆಗಿರುತ್ತಿತ್ತು. ಪದ್ಯ ಬರೆಯುವ ಮುನ್ನ ನನಗೆ ಎಲ್ಲವನ್ನೂ ವಿವರಿಸುತ್ತಿದ್ದ, ಹಸಿವು ಹೇಗಿರುತ್ತೆ ಎನ್ನುವುದನ್ನು ಅವನು ಹೇಳುತ್ತಿದ್ದ ರೀತಿ ಕೇಳಿದ್ರೆ ನಮಗೆಲ್ಲಾ ಗಾಬರಿಯಾಗುತ್ತಿತ್ತು, ಹಸಿವಿಂದ ಕೂಗಿದ ಕೂಗು ಪ್ರಪಂಚವೆಲ್ಲ ಸುತ್ತಿ, ಮತ್ತೆ ಭೂಮಿಗೆ ಬರುತ್ತದೆ ಎಂದು ಚಿತ್ರ ಬರೆದು ತೋರಿಸುತ್ತಿದ್ದ, ಆದ್ರೆ ಬರೆದ ಪದ್ಯದಲ್ಲಿ ಅದು ಇರುತ್ತಿರಲಿಲ್ಲ, ಬದಲಿಗೆ ಬೇರೆಯದೇ ಇಮೇಜಿನ ಮೂಲಕ ಕಟ್ಟಿಕೊಟ್ಟುಬಿಡುತ್ತಿದ್ದ, ಹೋರಾಟದ ಕಾವು ಏರುತ್ತಿದ್ದ ಹಾಗೆ ಜಗತ್ತನ್ನು ಬದಲಿಸಿಬಿಡುವೆ ಎನ್ನುವ ಹಠಕ್ಕೆ ಬೀಳುತ್ತಿದ್ದ ನನಗೋ ದೊಡ್ಡ ಗೊಂದಲ. ಅವನ ಪ್ರತಿಭೆಗೆ ಬೆರಗಾಗಲೋ, ಅವನ ಚೇಷ್ಟೆಗಳಿಗೋ? ಒಮ್ಮೆ ಮಾನವೀಯತೆಯ ಅಂತಃಕರಣ ಅನ್ನಿಸಿದರೆ ಇನ್ನೊಮ್ಮೆ ಕಾಠಿಣ್ಯದ ಪರಮಾವಧಿ ಅನ್ನಿಸುತ್ತಿತ್ತು.

ಪ್ರೇಮದ ಪ್ರತಿಮೂರ್ತಿ ಅನ್ನಿಸಿದರೆ, ಇನ್ನೊಮ್ಮೆ ತೀರದ ದಾಹಿ, ಕಡುಮೋಹಿ ಅನ್ನಿಸ್ತಾ ಇತ್ತು. ಒಂದು ಮಾತ್ರ ಹೇಳಬಲ್ಲೆ ಮೇಲು ನೋಟಕ್ಕೆ ಕಾಣುವ ಸರಳತೆ ಮಾತ್ರಾ ಅವನ ವ್ಯಕ್ತಿತ್ವ ಅಲ್ಲ’ ಎಂದಿದ್ದರು ವಿಷ್ಣು ಖಚಿತವಾಗಿ. ಅವರ ಮಾತುಗಳಿಂದ ನನಗೆ ಆಘಾತವಾಗಿತ್ತು. ವಿಷ್ಣು ನನ್ನ ತಳಮಳವನ್ನು ಗಮನಿಸುತ್ತಾ, ಯಾಕೆ ಅರಗಿಸಿಕೊಳ್ಳಲು ಆಗುತ್ತಿಲ್ಲವೇ? ಅಂತರ೦ಗ ಬಹಿರಂಗಗಳನ್ನು ಒಂದು ಗೂಡಿಸುವುದು ಅಷ್ಟು ಸುಲಭ ಅಲ್ಲ. ಅವನು ಹೇಳದೆ ಅವನ ಬದುಕು ನಿನಗೆ ಸಿಗೋದಾದ್ರೂ ಹೇಗೆ? ಎಲ್ಲವನ್ನೂ ಮಾಡಿದವನು ಆ ಎಲ್ಲವನ್ನೂ ಹೇಗೆ ತೆರೆದಿಡೋಕ್ಕೆ ಸಾಧ್ಯ? ಸೋಗು ಹಾಕುವುದು ಹೇಗೆ ಎನ್ನುವುದನ್ನು ತಿಳಿದೇ ಕೆಲಸಗಳನ್ನು ಮಾಡಿರುತ್ತಾನೆ. ಏನು ಹೇಳಿದರೂ ಎಲ್ಲಾ ಲೆಕ್ಕಾಚಾರದ ಮಾತುಗಳೇ. ಆದರೆ ಒಂದು ಮಾತ್ರ ನಿಜ ಯಾವುದರಲ್ಲಿ ಅವನು ವಿರಮಿಸುತ್ತಾನೋ ಅದರಲ್ಲಿ ಹಂಡ್ರಡ್ ಪರ್ಸೆಂಟ್ ಜೀವಿಸುತ್ತಾನೆ. ಪೂರ್ತಿಯಾಗಿ ಅನುಭವಿಸುತ್ತಾನೆ. ಚರಮಸ್ಥಿತಿಯನ್ನು ಪಡೆಯುತ್ತಾನೆ. ಅದಕ್ಕೆ ಅವನ ಕೈಲಿ ಮಾತೂ, ಗೆರೆ ಎಲ್ಲವೂ ಮಾತಾಡುತ್ತದೆ. ಅವನೊಬ್ಬ ಜಾದೂಗಾರ’ ಎನ್ನುವ ಮಾತುಗಳನ್ನಾಡಿದ್ದರು. ಸ್ನೇಹಿತ ಏರಿದ ಎತ್ತರ, ಅವತ್ತಿನ ಅವರ ಕಾಂಪಿಟೇಷನ್ ಈ ಮಾತುಗಳಿಗೆ ಅದರೊಳಗಿನ ಸಂಕಟಕ್ಕೆ ಕಾರಣವಿರಬಹುದೆ? ಎನ್ನುವ ಗುಮಾನಿ ನನ್ನ ಕಾಡಿತ್ತು. ಗಕ್ಕೆಂದು ಕಾರು ನಿಂತಾಗ ಎಲ್ಲಿದ್ದೇನೆ? ಎಂದು ತಿಳಿಯದೆ ಕಕ್ಕಾಬಿಕ್ಕಿಯಾದೆ. ‘ನಿಮಗೆ ಟೀಯಾ? ಕಾಫಿಯಾ? ಎಂದು ಹೆಗಲ ಮೇಲಿನ ಸಣ್ಣ ಟವಲ್ ಅನ್ನು ಸರಿ ಮಾಡಿಕೊಳ್ಳುತ್ತಾ ಸಹಾ ಕೇಳಿದಾಗ, ಯಾವುದೂ ಆಗಬಹುದು ಎಂದೆ. ಹತ್ತಿರ ಬಗ್ಗಿ ನನ್ನ ಕೆನ್ನೆಯನ್ನು ತಟ್ಟಿದರು. ಆಪ್ತ ಅನ್ನಿಸಿದಾಗ ಹೀಗೆ ಮಾಡುವುದು ಅವರ ಅಭ್ಯಾಸ. ಒಂದೊ೦ದು ಸಲ ಅಪ್ಪಿ ಹಣೆಗೋ ತಲೆಗೋ ಮುತ್ತಿಡುತ್ತಿದ್ದರು, ಯಾರಿದ್ದಾರೆ ಎಂದೂ ಕೂಡಾ ನೋಡುತ್ತಿರಲಿಲ್ಲ. ತಲೆಗೆ ಹಚ್ಚಿದ ಯಾವುದೋ ನಾರು ಬೇರು ಹಾಕಿದ ಎಣ್ಣೆಯ ಘಮಲು, ಸಿಗರೇಟು, ಢಾಳಾದ ಬೆವರು ಎಲ್ಲ ಸೇರಿ ವಿಚಿತ್ರವಾದ ವಾಸನೆಯನ್ನು ಹೊಮ್ಮಿಸುತ್ತಿತ್ತು. ಈ ಮನುಷ್ಯ ನನಗೆ ಆಪ್ತನಾ? ಅಪರಿಚಿತನಾ? ಅನುಮಾನ ಭೂತಾಕಾರವಾಗಿ ಬೆಳೆಯುತ್ತಿದ್ದಂತೆ, ಸಹಾ. ಕುಡಿಯುವವರು ನೀವು ನಿಮ್ಮದೇ ಛಾಯ್ಸ್’ ಎಂದು ನನ್ನ ಉತ್ತರಕ್ಕೂ ಕಾಯದೆ ಅಷ್ಟು ದೂರದ ಪೊದೆಯ ಕಡೆಗೆ ನಡೆದರು.

ಕಾಡಿನ ಮಧ್ಯೆ ಈ ಅಂಗಡಿ ಎಲ್ಲಿ ಬಂತು? ಎನ್ನುತ್ತಾ ಕಾರಿನ ಬಾಗಿಲನ್ನು ತೆರೆದು ಹೊರಗೆ ಬಂದೆ. ಹುಡುಗ ಕಾಫಿ ತಂದು ಕೊಟ್ಟ, ಬಿಸಿ ಕೈ ಸುಡುವಷ್ಟಿತ್ತು ಸೆರಗಿನ ತುದಿಯನ್ನು ಲೋಟಕ್ಕೆ ಸುತ್ತಿ ಕುಡಿಯ ತೊಡಗಿದೆ. ಶುಗರಲ್ವಾ ತಡೀಲಿಕ್ಕಾಗಲ್ಲ’ ಎಂದು ಪಕ್ಕಕ್ಕೆ ಬಂದು ನಿಂತರು, ನನಗೆ ಗೊತ್ತಿಲ್ಲದ್ದೇನನ್ನೋ ಹೇಳುವಂತೆ. ಕಾಫಿ ಕುಡಿಯುತ್ತಾ ಅವರನ್ನೇ ಗಮನಿಸಿದೆ, ಸಪೂರ ದೇಹ ಈಚೆಗೆ ಸ್ವಲ್ಪ ಸೊರಗಿದೆ ಎನ್ನಿಸಿದರೂ ಮನಸ್ಸಿನ ಉತ್ಸಾಹ ಕುಗ್ಗಿದ ಹಾಗಿಲ್ಲ. ಈ ವಯಸ್ಸಿನಲ್ಲಿ ಒಂದು ಪೊಲಿಟಿಕಲ್ ಪಾರ್ಟಿ ಕಟ್ಟಬೇಕು ಎನ್ನುವ ಹಂಬಲಕ್ಕೆ ಬಿದ್ದದ್ದಾದರೂ ಯಾಕೆ? ಎಲ್ಲೋ ಭಾಷಣ ಮಾತಾಡಲಿಕ್ಕೆ ತಯಾರಿ, ಮಾತಾಡುವ ಹಿಂಸೆಯ ಮಧ್ಯೆಯೂ ತಯಾರಿ, ನಾಲ್ಕು ಜನಕ್ಕೆ ಮೀರಿದರೆ ಮಾತನಾಡುವುದೇ ಕಷ್ಟ ಎನ್ನುವುದರ ನಡುವೆ ಸಾವಿರಾರು ಜನರನ್ನು ಕುರಿತು ಹೇಗೆ ಮಾತಾಡುತ್ತಾರೆ? ಎಲ್ಲವೂ ಅಚ್ಚರಿಗೀಡು ಮಾಡುತ್ತಿತ್ತು.

ಹುಡುಗ ತಂದುಕೊಟ್ಟ ಕಾಫಿಯನ್ನು ಕೈಗೆತ್ತಿಕೊಳ್ಳುತ್ತಾ,‘ನನ್ನ ಯಾವತ್ತೂ ನೋಡೇ ಇಲ್ಲ ಎನ್ನುವ ಹಾಗೆ ನೋಡ್ತಾ ಇದೀರಲ್ಲಾ?’ ಕೀಟಲೆ ಮಾಡುವವರ ಎನ್ನುತ್ತಾ ಹುಡುಗನಿಗೆ ಬಿಸ್ಕೇಟ್ ತಂದುಕೊಡಲು ಹೇಳಿದರು. ಹೌದು ಈ ಅವತಾರಗಳನ್ನು ನಾನು ಯಾವತ್ತೂ ನೋಡಿಲ್ಲ ಎನ್ನಬೇಕು ಅನ್ನಿಸಿತು, ಆದ್ರೆ ಹೇಳಲಿಲ್ಲ ನನ್ನ ಪ್ರತಿಕ್ರಿಯೆಯನ್ನು ಗಮನಿಸಿಯೂ ಅರ್ಥವಾಗಿಲ್ಲ ಎನ್ನುವಂತೆ, ‘ನಾಳಿದ್ದು ನಿಮ್ಮೂರಿಗೆ ಹೋಗ್ತಾ ಇದೀನಿ, ನೀವೂ ಬರ್ತೀರಲ್ಲಾ?’ ಎಂದರು ಸಹ ಅಚ್ಚರಿಯಿಂದ ನೋಡಿದೆ, ‘ರೈತ ಸಮಾವೇಶ ಇದ್ಯಲ್ಲಾ? ಅವರ ಜೊತೆ ಸೇರೆ ಪೊಲಿಟಿಕಲ್ ಪಾರ್ಟಿಯನ್ನು ಕಟ್ಟಬೇಕು, ಆಗ ರೈತರ ಬೆಂಬಲ ನಮಗೇ. ಕೆಲವು ಸೀಟ್ಗಳಾದ್ರೂ ಗೆದ್ರೆ ಒಂದಿಷ್ಟು ಬಲ, ನಮ್ಮ ಮಾತು ನಡೀಬೇಕು ಅಂದ್ರೆ ಅಧಿಕಾರ ತುಂಬಾ ಮುಖ್ಯ’ ಎಂದರು. ರೈತ ಸಂಘ ಸಾಮಾಜಿಕ ಹೋರಾಟ ಅಂತ ಬಂದಾಗ ಎಲೆಕ್ಷನ್‌ಗೆ ನಿಲ್ಲಬೇಕು ಎಂದಿದ್ದ ಕಿಶನ್‌ರನ್ನು ಅವಮಾನ ಮಾಡಿದ್ದು ಇವರೇನಾ? ಹೋಟೇಲ್‌ನಲ್ಲಿ ಕಾಯುತ್ತಾ ಕುಳಿತಿದ್ದ ಅವರನ್ನು ಭೇಟಿ ಮಾಡದೆ, ಹತ್ತಿರದ ಸ್ನೇಹಿತರ ಮನೆಗೆ ಹೋಗಿ ಅದೂ, ಇದೂ ಮಾತಾಡಿಕೊಂಡು ಬಂದಿದ್ದರು. ಕೇಳಿದ್ದಕ್ಕೆ ನಮಗೂ ರಾಜಕೀಯ ಪಾರ್ಟಿಗೂ ಯಾವ ಸಂಬ೦ಧ? ಎಣ್ಣೆ ಸೀಗೇಕಾಯಿ ಇದ್ದ ಹಾಗೆ. ಯಾರ ಮಾತನ್ನೋ ಕೇಳಿ ಹೋರಾಟದ ಪಾವಿತ್ರ್ಯತೆ ಹಾಳು ಮಾಡಲಾ? ಎಂದಿದ್ದು ಇನ್ನೂ ಕಿವಿಯಲ್ಲಿ ಗುಂಯ್‌ಗುಟ್ಟಿದ೦ತಿದೆ.

ನನ್ನ ಮನಸ್ಸಿನಲ್ಲಿ ನಡೆಯುತ್ತಿರುವ ತುಮಲವನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಸಹಾ ಅನ್ನುವುದು ನನಗೂ ಗೊತ್ತು. ಮಾತನಾಡದ ನನ್ನ ಕಡೆಗೆ ನೋಡುತ್ತಾ ಮತ್ತೆ ಕೇಳಿದರು, ‘ಯಾಕೆ ನನ್ನ ಮಾತು ಕೇಳಿಸ್ತಿಲ್ವಾ?’. ನಾನು ಭಾರವಾದ ಧ್ವನಿಯಲ್ಲಿ ‘ಪಾರ್ಟಿಯ ಲೆಕ್ಕ ಬಂದಾಗ ಅದು ಬೇರೆಯದ್ದೇ ನಿಲುವಿತ್ತಲ್ಲ ನಿಮ್ಮದು? ಆದರೂ ಈ ಭ್ರಮೆ ಯಾಕೆ ನಿಮಗೆ?’ ಎಂದೆ. `ಇಲ್ಲ ನಿಮಗೆ ಯಾಕೆ ಇದೆಲ್ಲಾ ಗೊತ್ತಾಗ್ತಾ ಇಲ್ಲ? ಜನ ಬದಲಾವಣೆ ಕೇಳುತ್ತಿದ್ದಾರೆ, ರಾಜಕೀಯವಾಗಿ ಬಲವಾದರೆ ನಮ್ಮ ಮಾತಿಗೂ ಒಂದು ಶಕ್ತಿ ಬರುತ್ತೆ ಅದಕ್ಕೆ ಈ ಪ್ರಯತ್ನ ಒಂದೊಮ್ಮೆ ನಾನು ಇದರಲ್ಲಿ ಯಶಸ್ವಿ ಆದ್ರೆ ವ್ಯವಸ್ಥೆಯನ್ನೇ ಬದಲಿಸಬಹುದು’ ಎಂದರು. ನನಗೆ ಕೋಪ ಉಕ್ಕಿ ಬಂತು ದೇಶ ಚೆನ್ನಾಗಾಗಬೇಕು ಎಂದು ಬಯಸುವವರು ವೈಯಕ್ತಿಕವಾಗಿ ಶುದ್ಧವಾಗಿರಬೇಕು ಎನ್ನುವುದನ್ನು ಯಾಕೆ ಮರೆಯುತ್ತಾರೋ. ಈಗಲಾದರೂ ನಾನು ಕೇಳಿದ ಪ್ರಶ್ನೆಗೆ ಉತ್ತರಸಿಗಬಹುದಾ? ಎಂದು ಹುಡುಕಾಡಿದೆ ಸಹಾ ಮಾತಾಡಲಿಲ್ಲ, ಕಾಫಿಯಲ್ಲಿ ಬಿಸ್ಕೇಟ್ ಅದ್ದುತ್ತಿದ್ದರು ನನ್ನ ಕಣ್ಣ ಹನಿ ಎಲ್ಲವನ್ನು ಮಸುಕಾಗಿಸಿತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: