ಸದಾಶಿವ್ ಸೊರಟೂರು – ಕವಿತೆ ಮತ್ತು ಕವಿಯ ಕೋಟು..

ಸದಾಶಿವ್ ಸೊರಟೂರು

ನಾಳೆ ಅವನಿಗೊಂದು ಕವಿತೆ ಓದಲಿಕ್ಕಿದೆ
ಎಂತದ್ದೊ ಗಡಿಬಿಡಿ
ಇಳಿದಿದ್ದಾನೆ ರಸ್ತೆಗೆ
ಹೊಕ್ಕುತ್ತಾನೆ ಸಿಕ್ಕ ಸಿಕ್ಕ ಅಂಗಡಿಗಳಲಿ
ಅವನೊಂದು ತುರ್ತಾಗಿ
ಕೋಟು ಕೊಳ್ಳಬೇಕು..
ಕವಿ ಅಂದ ಮೇಲೆ ಇರಬಾರದೇ ಒಂದಾದರೂ?
ಎರಡೂ ಜೇಬಿರುವ
ಎದೆ ಮೇಲೆ ಗುಲಾಬಿ ಇಟ್ಟುಕೊಳ್ಳಲು ಜಾಗವಿರುವ
ಹೆಗಲ ಮೇಲೆ ಹಾಕಿಕೊಳ್ಳುವ
ಬ್ಯಾಗಿನ ಭಾರ ಸಹಿಸುವ
ತುಸು ಬಾಳಿಕೆಯ ಕೋಟುವಿಗಾಗಿ
ಅಲೆಯುತ್ತಾನೆ..

ಬಣ್ಣ ಇಷ್ಟವಾಗುತ್ತದೆ ಸೈಜು ಹೊಂದುವುದಿಲ್ಲ
ಸೈಜು ಸರಿ ಇದೆ ಬಣ್ಣ ಸೇರುತ್ತಿಲ್ಲ
ಎರಡೂ ಸರಿ ಇದೆ
ಬೆಲೆಯೇನು ಕಡಿಮೆಯಲ್ಲ

ಕೊನೆಗೆ ಮೂಲೆಯ ಅಂಗಡಿಯೊಂದರಲ್ಲಿ
ಸಿಕ್ಕಿ ಬೀಳುತ್ತದೆ ಇವನಿಗೊಂದು
ಕೋಟು
ಮೂರಾಲ್ಕು ಬಾರಿ ಹಾಕಿ ಹಾಕಿ
ಕನ್ನಡಿಯ ಮುಂದೆ ಹಲ್ಲುಗಿರಿಯುತ್ತಾನೆ
ಕವಿತೆ ಓದುವ ಶೈಲಿಯಲ್ಲಿಯೇ ನಿಲ್ಲುತ್ತಾನೆ
ವಾಲುತ್ತಾನೆ ಬಾಗುತ್ತಾನೆ
ತಾಲೀಮು ಮುಗಿಸುತ್ತಾನೆ..

ಮನೆಗೆ ಬಂದು ಕೋಟಿಗೆ ಒಪ್ಪುವ
ಅಂಗಿ ಹುಡುಕಿ ಇಸ್ತ್ರಿ
ತೀಡುತ್ತಾನೆ
ಟೈ ಕಟ್ಟಬಹುದೆ?
ಅರೆ ಯಾರಾದರೂ ಟೈ ಕಟ್ಟುತ್ತಾರೆಯೆ
ಕವಿತೆ ಓದುವಾಗ?
ಕಟ್ಟಬಾರದೇಕೆ? ಪದಗಳನ್ನು ಕಟ್ಟುವವನಿಗೆ
ಟೈ ಒಂದು ಬಾರವೇ?

ಉಫ್.. ಎಲ್ಲಾ ಸಿದ್ದ
ನಿದ್ದೆ ಎಳೆಯುತಿದೆ, ಪಾಪ ಎಷ್ಟೊಂದು
ಅಲೆದಿದ್ದಾನೆ, ಇಸ್ತ್ರಿ ತೀಡಿದ್ದಾನೆ
ಥಟ್ಟನೆ ನೆನಪಾಗುತ್ತದೆ
ಯಾವ ಕವಿತೆ ಓದುವುದು?

ಕವಿತೆ ಖಜಾನೆ ತೆರೆಯುತ್ತಾನೆ
ಒಂದೊಂದು ಕವಿತೆಯನ್ನು ಕೋಟಿನ
ಪಕ್ಕ ಇಟ್ಟು-ಇಟ್ಟು ನೋಡುತ್ತಾನೆ
ಕೋಟು ಹೊಳೆಯುತ್ತದೆ, ಕವಿತೆ ನಗುತ್ತದೆ..

ಕವಿತೆಯೇನು ಕೋಟೆ? ಬೀದಿ ತುಂಬಾ ಸತಾಯಿಸಲು
ಬರೆದರಾಯಿತು
ದಿನಸಿ ಚೀಟಿಯ ಹಿಂದೆ ಕೂತಲ್ಲೇ‌ ಬರೆದ
ಹತ್ತೆಂಟು ಸಾಲುಗಳ..
ಕವಿತೆ ಸುಲಭ; ಕೋಟು ಕಷ್ಟ..

ಮರುದಿನ ಗೋಷ್ಠಿಯಲ್ಲಿ ಅಧ್ಯಕ್ಷರು
ಅವನ ಕೋಟು ಮೆಚ್ಚಿದರು
ಮನೆಗೆ ಬಂದು ಕೋಟು ಎತ್ತಿಟ್ಟ
ಕವಿತೆಯನು ದಾರಿಯಲಿ ಮರೆತುಬಿಟ್ಟ..

ಈಗ ಅವನಿಗೊಂದು ಹೆಸರಿದೆ
ಬಿರುದು ಬಾವಲಿಗಳಿವೆ
ಆ ಕೋಟು ಇದೆ ಮತ್ತೆರಡು ಕೋಟುಗಳೂ
ಬಂದಿವೆ;
ದಾರಿಯಲ್ಲಿ ಬಿದ್ದು ಹೋದ ಅರ್ಧಜೀವದ
ಕವಿತೆ
ಯಾರದೊ ಬೆರಳು ಹಿಡಿದು
ಹೊರಟು ಹೋಗಿದೆ..

‍ಲೇಖಕರು avadhi

February 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: