ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಸಾವಿರ ಸುಳಿಗಳ ನದಿ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

24

ಅಮ್ಮ, ಅಜ್ಜಿ ಓಡಿ ಬಂದರು. ಅಜ್ಜಿ ತನ್ನ ಹಣ್ಣು ಕೈಗಳಲ್ಲಿ ನನ್ನ ಕೆನ್ನೆ ಸವರಿ ಭೋರೆಂದು ಅತ್ತರೆ, ಅಮ್ಮ ಮಾತ್ರ ನನ್ನ ಹೇಗೆ ಸಂತೈಸುವುದು ಎನ್ನುವ ಗೊಂದಲಕ್ಕೆ ಬಿದ್ದ ಹಾಗಿದ್ದಳು. ಇನ್ನೂ ನೆನಪಿದೆ ಅಪ್ಪ ಮನೆ ಬಿಟ್ಟು ಹೋದಾಗಲೂ ಅಮ್ಮ ಅಳಲಿಲ್ಲ ಅವನಿಗಾಗಿ ಕಾದು ಕಾದು ಕಡೆಗೊಂದು ದಿನ ಬರಲ್ಲ ಅಂತ ಗೊತ್ತಾದ ಮೇಲೆ ನಮಗೂ ಅದನ್ನೇ ನಂಬಿಸಲು ಯತ್ನಿಸಿದ್ದಳು. ಅಪ್ಪ ಎಲ್ಲಿದ್ದಾನೆ ಎಂದು ಹುಡುಕಲು ಹೋಗುವವರು ಯಾರಿದ್ದರು? ಹರೀಶ ಗಿರೀಶರೂ ಸಣ್ಣವರೇ. ನನಗೆ ಚಳಿಯಾಗುತ್ತದೆ ಎಂದು ತಮ್ಮ ಹೊದಿಕೆಯನ್ನು ಕೊಡುತ್ತಿದ್ದ ಅವರು ವಾತ್ಯಲ್ಯಕ್ಕೆ ಬೆಲೆಯೇ ಇಲ್ಲದಂತೆ ಎಲ್ಲಿ ಹೋದರು? ಇಬ್ಬರೂ ಚಿಕ್ಕಂದಿನಲ್ಲಿ ನನ್ನ ಜೊತೆ ಆಡುತ್ತಿದ್ದವರು ಅವರೇನಾ ಎಂದು ಪ್ರಶ್ನಿಸಿಕೊಂಡಿದ್ದೇನೆ? ಇನ್ನು ಅಕ್ಕನಂತೂ ಭಾವ ಕಳಿಸಲ್ಲ ಎಂದು ಹೇಳಿಕೊಂಡೇ ನಮ್ಮನ್ನ ದೂರವಿಟ್ಟಳು. ಇದ್ದೊಬ್ಬಳಾದರೂ ಚೆನ್ನಾಗಿರಲಿ ಎಂದು ನಾವೂ ಅವರ ಮನೆ ಬಾಗಿಲಿಗೆ ಹೋಗಲಿಲ್ಲ. ಅಜ್ಜಿ, `ಅವಳು ಚಿಕ್ಕವಳಿದ್ದಾಗ ಎಷ್ಟು ಚೆನ್ನಾಗಿದ್ದಳು ಅಂತಾ ನಾನು ಕೆಲಸ ಮಾಡಲು ಹೋದರೆ, `ಅಜ್ಜಿ ಬಿಡು ನಾನಿರುವಾಗ ನೀನ್ಯಾಕೆ?’ ಎನ್ನುತ್ತಿದ್ದಳು. ಈಗ ಯಾಕೆ ಹೀಗಾದಳು? ಬಹುಶಃ ಅವರತ್ತೆ ಹೇಳಿರಬಹುದಾ? ಅಥವಾ ಅವಳ ಗಂಡನದ್ದೇ ಕಾರುಬಾರಾ? ಗೊತ್ತಾಗುತ್ತಿಲ್ಲ. ಅವಳಾದರೂ ಸ್ವಲ್ಪ ಸಹಾಯ ಮಾಡಿದ್ದರೆ ಮನೆಯ ಕಷ್ಟ ತೀರುತ್ತಿತ್ತು’ ಎನ್ನುತ್ತಿದ್ದಳಾದರೂ, ಹಿಂದೇ `ಎಲ್ಲಿಯ ವರೆಗೆ ಈ ಥರಾ ಸಹಾಯ ಕೇಳೋದು? ನಮ್ಮ ಭಂಗ ನಾವು ಪಡಬೇಕು’ ಎನ್ನುತ್ತಿದ್ದಳು.

ಈಗಲೂ ನನಗೆ ಚೆನ್ನಾಗಿ ನೆನಪಿದೆ; ರಾತ್ರಿ ಎಲ್ಲ ಮಲಗಿದ ಮೇಲೆ ಅಮ್ಮ ತಾನೊಬ್ಬಳೆ ಎದ್ದು ಕುಳಿತು ಏನೇನೋ ಮಾತಾಡುತ್ತಿದ್ದಳು, `ನಾಕು ಮಕ್ಕಳ ತಾಯಿ ದುಡಿದು ಬದುಕುವೆ ಅಂದರೂ ಈ ಸಮಾಜ ಬಿಡಲ್ಲ ಎಲ್ಲಿ ಹಾಳಾಗಿ ಹೋದೆ? ಯಾವಳು ನಿನಗೆ ಮಂಕುಬೂದಿ ಎರಚಿದಳು, ಯಾವುದೋ ಹೆಣ್ಣು ಪಿಚಾಚಿಯೇ ನಿನ್ನ ಕದ್ದೊಯ್ದಿರಬೇಕು. ಎಲ್ಲವನ್ನೂ ಬಿಡಿಸಿಕೊಂಡು ಮೊದಲು ಮನೆಗೆ ಬಾ, ನೋಡು  ಚೆಲ್ಲಾಪಿಲ್ಲಿಯಾದ ಈ ಮನೆ ಮನೆಯ ಹಾಗಿದೆಯಾ ಎಂದು?…’ ಹೀಗೆ ಏನೇನೋ. ನಾನು ಅರೆಗಣ್ಣು ಬಿಟ್ಟುಕೊಂಡು ಅಮ್ಮನನ್ನು ನೋಡುತ್ತಿದ್ದೆ. ಅಷ್ಟು ಹೊತ್ತಿನಲ್ಲಿ ಕುಳಿತು ಹೀಗೆ ಮಾತಾಡುವವರು ದೆವ್ವಗಳು ಮಾತ್ರ ಎಂದು ನಾನು ಬಲವಾಗಿ ನಂಬಿದ್ದರೂ ಅಮ್ಮನನ್ನು ಮಾತ್ರ ಹಾಗೆ ದೆವ್ವ ಅನ್ನಲಿಕ್ಕೆ ಸಾಧ್ಯ ಆಗಲೇ ಇಲ್ಲ. ಬೆಳಗೆದ್ದು ಅಮ್ಮ ರಾತ್ರಿಯೆಲ್ಲಾ ಯಾಕೆ ಹಾಗೆ ಕೂತುಕೊಂಡಿದ್ದೆ? ಯಾಕೆ ಏನೇನೋ ಮಾತಾಡುತ್ತಿದ್ದೆ ಎಂದು ಕೇಳಲಿಕ್ಕೂ ನನಗೆ ಭಯ. ಅಜ್ಜಿ ಹತ್ತಿರ ಹೇಳಿದ್ದಕ್ಕೆ, `ಎಲ್ಲ ಹೆಣ್ಣುಮಕ್ಕಳ ಕಥೆಯೂ ಹೀಗೆ. ಯಾರು ಯಾರಿಗೆ ಹೇಳಬೇಕು ಗೋಡೆಗಳೇ ನಮ್ಮ ಕೇಳುಗರು, ರಾತ್ರಿಗಳೆ ಅದಕ್ಕೆ ತಕ್ಕುದಾದ ಸಮಯ’ ಎನ್ನುತ್ತಿದ್ದಳು. ಮೊದ ಮೊದಲು ಭಯ ಅನ್ನಿಸಿದ್ದು ನಂತರ ಕುತೂಹಲಕ್ಕೆ ತಿರುಗಿತ್ತು, ಎಷ್ಟೋ ರಾತ್ರಿಗಳು ಅಮ್ಮ ಹೀಗೆ ಮಾತಾಡುವುದನ್ನು ಕೇಳಲಿಕ್ಕೆ ಎದ್ದಿರುತ್ತಿದ್ದೆ.      

ಅಪ್ಪ ಇದ್ದಾಗ ಕೂಡ ಅಮ್ಮ ಹೀಗೆ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದುದನ್ನು ನೋಡಿದ್ದೆನಾದರೂ ಆಗ ತುಂಬಾ ಸಣ್ಣ ಹುಡುಗಿಯಾದ್ದರಿಂದ ಅರ್ಥ ಆಗುತ್ತಿರಲಿಲ್ಲ. ನನ್ನ ಕೈರೇಖೆಗಳೆಲ್ಲಾ ಕಳೆದೇ ಹೋದವು ಎಂದು ಅಳುತ್ತಾ ಕೂತಿದ್ದನ್ನು ಒಮ್ಮೆ ನೋಡಿದ್ದೆ. ಅಜ್ಜಿಗೆ ಹೇಳಿದರೆ, `ಅವನ್ಯಾವನೋ ಹೇಳಿದ, ಇವಳು ಕೇಳಿದಳು’ ಎಂದು ಬೈದಿದ್ದಳು. ಅಮ್ಮ ನನ್ನ ಕೈಲಿ ಏನೆಲ್ಲಾ ಕೆಲಸ ಮಾಡಿಸಿದರೂ ಪಾತ್ರೆ ಮಾತ್ರ ತೊಳೆಸುತ್ತಿರಲಿಲ್ಲ. ಕೈ ರೇಖೆಗಳು ಸರಿಯಿದ್ದರೆ ಜೀವನವೆಲ್ಲಾ ಸರಿಯಿದ್ದೀತು ಎನ್ನುವ ಬಲವಾದ ನಂಬಿಕೆಗೆ ಬಂದಿದ್ದಳು. ಅಷ್ಟು ಜನರಿಗೆ ಅಡುಗೆ. ತಿಂಡಿ, ಅವಳಿಗೆ ಪಾತ್ರೆ ತೊಳೆದು ತೊಳೆದು ಬಂದ ಬೇಸರವೋ ಅಥವಾ ತನ್ನ ಕೈ ರೇಖೆಗಳನ್ನೆಲ್ಲಾ ಇವು ತಿಂದು ಹಾಕಿದವು ಎನ್ನುವ ಸಿಟ್ಟೊ ಗೊತ್ತಿಲ್ಲ ಅಮ್ಮ ಪಾತ್ರೆಗಳನ್ನು ದ್ವೇಷಿಸುತ್ತಿದ್ದಳು. ಆದರೆ ದ್ವೇಷಿಸುವುದರ ಮಧ್ಯೆಯೇ ಇರಲೇಬೇಕಾದ ಅನಿವಾರ್ಯತೆ. ಮನಸ್ಸಿನ ಮೂಲೆಗಳಲ್ಲಿ ಏನು ಏನು ಅಡಗಿಕೊಂಡಿದೆಯೋ ಯಾರಿಗೆ ಗೊತ್ತು? ಅದು ಮೇಲೆ ಪ್ರಶಾಂತವಾಗಿ ಕಾಣುವ ಒಳಗೇ ಸಾವಿರಾರು ಸುಳಿಗಳನ್ನು ಅಡಗಿಸಿಕೊಂಡ ನದಿ. 

ಸತೀಶನ ಮರಣದ ಸುದ್ದಿ ತಿಳಿದ ತಕ್ಷಣ ಬಂದ ಅಮ್ಮ ನನ್ನ ಕೈಗಳನ್ನು ಹಿಡಿದು ಕುಳಿತಿದ್ದಳಲ್ಲ, ಆಗ ಅವಳು ನನ್ನ ಕೈಸವರುತ್ತಿದ್ದಳು. ಬಹುಶಃ ನನ್ನ ಕೈರೇಖೆಗಳು ಸರಿಯಿದ್ದಾವೇ ಇಲ್ಲವೆ ಎಂದು ಹುಡುಕಿರಬೇಕು ಎನ್ನುವ ಅನುಮಾನ ನನ್ನ ಈಗಲೂ ಕಾಡುತ್ತದೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ್ದರಿಂದ ನಾನೂ ಹೀಗೆ ಆಗಿಹೋದೆ ಎಂಬುದು ಅವಳ ಕೊರಗಾಗಿತ್ತು. ಜಗತ್ತಿನಲ್ಲಿ ಯಾರಿಗೂ ಕಷ್ಟವೇ ಇಲ್ಲವಾ? ನಾನು ಎಲ್ಲಿ ಹುಟ್ಟಿದ್ದರೂ ಹೀಗೇ ಆಗುತ್ತಿದ್ದೆನೋ ಏನೋ ಯಾರು ಕಂಡಿದ್ದರು? ಎಂದರೂ ಅಮ್ಮ ತನ್ನ ಎಲ್ಲಾ ನಂಬಿಕೆಗಳಿAದ ಒಮ್ಮೆಯೂ ಹೊರಬರಲೇ ಇಲ್ಲ. ಈಗ ಸತೀಶನ ಸಾವು ಅವಳಿಗೂ ಅರಗಿಸಿಕೊಳ್ಳಲಾಗದ ಆಘಾತವಾಗಿತ್ತು.                       

ಸಾವಿನ ನೆರಳಲ್ಲಿ ಬದುಕುವುದು ಎಂಥಾ ಕಷ್ಟ? ಸತೀಶನಿಗೆ ಹೀಗಾಗಿದೆ ಎಂದು ಗೊತ್ತಿದೆ, ಅವನೆಲ್ಲಿದ್ದಾನೆ ಎಂದೂ ಗೊತ್ತಿದೆ, ಆದರೆ ನೋಡಲು ಹೋಗಲು ಆಗುತ್ತಿಲ್ಲ. ನೋಡದೆ ಮನಸ್ಸು ನಂಬುವುದಿಲ್ಲ. ಒಂದು ತೀರ್ಮಾನಕ್ಕೆ ಬಾರದೆ ದಿನ ಕಳೆಯುವುದಾದರೂ ಹೇಗೆ?  ನನ್ನ ಪಾಡೇ ಇದಾದರೆ ಅತ್ತೆ, ಮಾವನದ್ದು ಏನಾಗಿದ್ದೀತು? ಆದರೂ ಮಾವ ಮಾತಾಡುವ ಶಕ್ತಿಯನ್ನು ಉಳಿಸಿಕೊಂಡಿದ್ದರು. ಉಳಿಸಿಕೊಳ್ಳಲೇಬೇಕು. ಬೇರೆ ದಾರಿಯಾದರೂ ಏನಿದೆ? ಅವರನ್ನು ಅವತ್ತು ಆ ಸ್ಥಿತಿಯಲ್ಲಿ ಕಂಡಾಗ ಗಂಡಸಾಗಿ ಹುಟ್ಟುವುದು ಶಾಪವೇ ಎಂದು ಅನ್ನಿಸಿತ್ತು. 

ಸತೀಶನ ದೇಹವನ್ನು ನಮಗೆ ಕೊಟ್ಟಿದ್ದು ಎರಡು ದಿನಗಳ ನಂತರ. ನಾನು ಅವನನ್ನು ಕಾಯುತ್ತಿದ್ದೆ. ಈ ಕಾಯುವಿಕೆ ಮಾತ್ರ ಯಾರ ಜೀವನದಲ್ಲೂ ಬಾರದಿರಲಿ. ದೇಹವನ್ನು ಚೂರು ಮಾಡಿದ್ದರು, ಅದಾಗಲೆ ಮುಖವೆಲ್ಲಾ ಕಪ್ಪಾಗಿತ್ತು. ವಾಸನೆ ತಡೆಯಲಸಾಧ್ಯವಾಗಿತ್ತು. ಒಂದು ಕ್ಷಣ ನನ್ನ ಕಣ್ಣುಗಳನ್ನು ನಾನೇ ನಂಬಲಿಲ್ಲ. ಸತೀಶ ಎನ್ನುವ ಸಣ್ಣ ಹೋಲಿಕೆಗಳು ಆ ಮುಖದಲ್ಲಿ ಕಾಣುತ್ತಿತ್ತೇ ವಿನಃ ಅವನೇ ಎಂದು ನಂಬಲು ಸಾಕಷ್ಟು ಆಧಾರಗಳು ಇರಲಿಲ್ಲ. ಅಂಥಾ ಸುರದ್ರೂಪಿ, ಸದಾ ಚಟುವಟಿಕೆಯಿಂದ ಇರುತ್ತಿದ್ದವ  ಹೀಗೆ ನಿಷ್ಕ್ರಿಯನಾಗಿ, ಕುರೂಪಿಯಾಗಿ ಮಲಗಿದ್ದನ್ನು… ಇಲ್ಲ ನಾನು ಒಪ್ಪಲಿಕ್ಕೆ ಸಿದ್ಧ ಇರಲಿಲ್ಲ. ಆಗ ತೀರ್ಮಾನಿಸಿದೆ, ಈ ಸಾವಿನ ನ್ಯಾಯಾನ್ಯಾಯತೆಯ ಕುರಿತು ಯೋಚಿಸುವುದರಲ್ಲಿ ಅರ್ಥವಿಲ್ಲ. ಹೋರಾಟಕ್ಕೆ ಮುಡಿಪಾದ ನನ್ನ ಸತೀಶನ ದೇಹವನ್ನು ಚೂರು ಚೂರು ಮಾಡಿದವರಿಗೆ ಒಂದು ಸಂದೇಶವನ್ನು ಕೊಡಲೇ ಬೇಕು, ಇಂದಲ್ಲ ನಾಳೆ ಸತೀಶ ನನ್ನ ರೂಪದಲ್ಲಿ ಮತ್ತೆ ಆವಿರ್ಭವಿಸುತ್ತಾನೆ ಎಂದು. ಅತ್ತೂ ಅತ್ತೂ ಬತ್ತಿ ಹೋದ ನನ್ನ ಕಣ್ಣುಗಳಲ್ಲಿ ಸತೀಶ ಎನ್ನುವ ಬೆಳಕು ಪ್ರವೇಶಿಸಿ ಹೃದಯದ ಜ್ವಲಿಸತೊಡಗಿತು. ಆದರೆ ನಾನು ಅಂದುಕೊಂಡಿದ್ದಕ್ಕೂ ಆಗಿದ್ದಕ್ಕೂ ನಡುವೆ ಎಂಥಾ ದೊಡ್ಡ ಕಂದಕ ಇತ್ತು ಎನ್ನುವುದು ಮಾತ್ರ ಬಹುಬೇಗ ಅರ್ಥ ಆಯಿತು. 

ಬೆಳಗ್ಗೆ ಸಹಾ ನಮ್ಮನ್ನು ಕರಕೊಂಡು ಹೋಗಲು ಬಂದಾಗ ಅತ್ತೆ ಮಾವ ಗೊಂದಲಿಸಿದರು. ಆದರೆ ಏನಾದರೂ ಹೇಳಲೇ ಬೇಕಲ್ಲ! `ನಮ್ಮ ಜೀವವನ್ನೇ ನಿಮ್ಮ ಕೈಲಿ ಇಟ್ಟಿದ್ದೀವಿ. ಕಾಪಾಡ್ತೀರ ಅನ್ನುವ ನಂಬಿಕೆ ನಮಗಿದೆ’ ಎಂದರು. ಎರಡು ದಿನಾ ಬೇರೆಯಾದೇ ಲೋಕಕ್ಕೆ ಬಂದ ಖುಷಿಯನ್ನು ಅನುಭವಿಸಿದ ಆಶಾ ಒಲ್ಲದ ಮನಸ್ಸಿನಿಂದಲೇ ಹೊರಟು, ಈ ಸಲ ರಜೆಯಲ್ಲಿ ಸ್ವಲ್ಪ ದಿನಗಳಾದರೂ ಅಜ್ಜಿ ತಾತರ ಜೊತೆ ಕಳೆವ ಇರಾದೆ ವ್ಯಕ್ತಪಡಿಸಿದಳು. `ತಾತ ಈ ಸಲ ನಾನು ಬರುವಾಗ ನಿನ್ನ ಕಾಲನ್ನು ವಾಸಿ ಮಾಡಿಕೋ, ಯಾವ ಕಾಟ್ರಿಯೂ ಬೇಡ ನಾವಿಬ್ಬರೇ ಕಾಡಿಗೆ ಹೋಗೋಣ ನಿನಗೆ ಏನು ಬೇಕೋ ಅದನ್ನು ನಾನು ತಂದುಕೊಡ್ತೀನಿ, ಇನ್ನೊಂದು ಮಾತು ಇಬ್ಬರೂ ಸೇರಿ ಈಚಲು ಮರಕ್ಕೆ ಮಡಿಕೆಯನ್ನೂ ಕಟ್ಟೋಣ’ ಎಂದಿದ್ದಳು. ಅವಳ ಮಾತನ್ನ ಕೇಳಿ ದುಃಖಿತರಾಗಿದ್ದ ಮಾವ ಜೋರಾಗಿ ನಕ್ಕರು. ಸಹಾ ಮಾತಿನ ಮಧ್ಯೆ ನಾನೂ ನಿಮ್ಮೊಂದಿಗೆ ಸೇರಿಕೊಳ್ಳುವೆ ಎಂದರು. ನಾನವರ ಕಡೆಗೆ ನೋಡಿದೆ. ತಟ್ಟೆಂದು ಹಿಂದಿನ ಘಟನೆ ನೆನಪಾಯಿತು. ಅಂದು ಸತೀಶನನ್ನು ಹುಡುಕಿ ಬಂದ ಸಹಾ ಗೋಮಾಳವನ್ನು ಜಮೀನಾಗಿಸುವ ಹೋರಾಟದಲ್ಲಿ ಎದುರಾಗಬಹುದಾದ ವಿರೋಧದ ಬಗ್ಗೆ ಎಷ್ಟೋ ಹೊತ್ತಿನ ತನಕ ಮಾತಾಡುತ್ತಲೇ ಇದ್ದರು. ಅಷ್ಟರಲ್ಲಿ ಬೆಟ್ಟಯ್ಯ ಮಾವನಿಗಾಗಿ ತಾಳೆ ಮರದಿಂದ ಇಳಿಸಿದ ಕಳ್ಳು ತಂದಿದ್ದ. ಇಳಿಸಿದಾಗಿನಿಂದ ನೀರಲ್ಲೇ ಮುಳುಗಿಸಿಟ್ಟಿದ್ದರೂ ಅದಾಗಲೇ ಸ್ವಲ್ಪ ಹುಳಿವಾಸನೆ ಬರುತ್ತಿತ್ತು. ಅದೇನೆಂದು ಸಹಾ ವಿಚಾರಿಸಿಕೊಂಡರು. ಮಾವ ಅದರ ಬಗ್ಗೆ ವಿವರವನ್ನು ಕೊಡತೊಡಗಿದರು. ಇಷ್ಟು ಹೊತ್ತಿನ ವರೆಗೂ ಗಂಭೀರವಾಗಿ ಹೋರಾಟದ ಬಗ್ಗೆ ಮಾತಾಡುತ್ತಿದ್ದ ಸಹಾ ತುಂಬು ಆಸಕ್ತಿಯಿಂದ ಹೇಗೆ ಇಳಿಸುತ್ತಾರೆ? ಮಾರಾಟವಾ ಏನು? ಎನ್ನುವುದರ ಬಗ್ಗೆ ಎಲ್ಲಾ ಕುತೂಹಲದಿಂದ ಕೇಳಿಸಿಕೊಂಡರು. `ಸಾರ್ ಅಭ್ಯಾಸ ಇದ್ದರೆ…’ ಎಂದು ಕೇಳುವುದೋ ಬೇಡವೋ ಎಂದು ಮಾವ ಕೇಳಿದ್ದಕ್ಕೆ, `ಓಹ್ ಯಾಕಾಗಬಾರದು ಸ್ವಲ್ಪ ಕೊಡಿ. ಅಂಗಡಿಯಲ್ಲಿ ಕೊಂಡು ತರುವುದಕ್ಕಿಂತ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು’ ಎಂದಿದ್ದರು. ಮಾವ ಅವರ ಎದುರೇ ಚಕ್ಕಂಬಕ್ಕಲ ಹಾಕಿಕೊಂಡು ಕೂತು ಮಾತಾಡುತ್ತಾ ಲೋಟಗಳಿಗೆ ಹಾಕಿದರು. ಸಹಾ ಲೋಟÀ ಎತ್ತಲಿಲ್ಲ ಮಾವ ಅವರೇ ಮೊದಲು ಕುಡಿಯಲಿ ಎನ್ನುವಂತೆ ಕುಳಿತಿದ್ದರು. ಸಹಾ `ಸತೀಶ ನೀನು ಕುಡಿಯಲ್ವಾ’ ಎಂದರು. ಇದರ ಸಹವಾಸವೇ ಬೇಡ ಸಾರ್ ಇಲ್ಲೇನು ಎಲ್ಲಾ ಫ್ರೀಯಾಗಿ ಸಿಗುತ್ತೆ ಒಂದು ಸಲ ಅಭ್ಯಾಸ ಮಾಡಿಕೊಂಡು ಬಿಟ್ಟರೆ ನಮ್ಮಪ್ಪ ಇದ್ದಾರಲ್ಲಾ ಹೀಗಾಗಿ ಬಿಡ್ತೀನಿ ಎಂದಿದ್ದ. ನೀವು ಮೊದಲು ಕುಡೀರಿ ಎಂದು ಮಾವನಿಗೆ ಕುಡಿಸಿದ ಸಹಾ ನಂತರವೇ ತಾವು ತೆಗೆದುಕೊಂಡÀರು. ಇದು ನನಗೆ ವಿಚಿತ್ರವಾಗಿ ಕಂಡಿತ್ತು. ವಾತಾವರಣ ಬದಲಾದ ಕಾರಣಕ್ಕೆ ನಾನು ಅಲ್ಲಿಂದ ಎದ್ದು ಒಳಗೆ ಹೋದೆ. ಆಮೇಲೆ ಎಷ್ಟೋ ದಿನಗಳ ನಂತರ ನನಗೆ ಗೊತ್ತಾಗಿದ್ದು ಸಹಾರ ವ್ಯಕ್ತಿತ್ವದಲ್ಲೇ ಇಂಥಾ ಒಂದು ದೊಡ್ಡ ಅನುಮಾನ ಹೊಂಚಿ ಕುಳಿತಿದೆ ಎಂದು. ಯಾರಾದರೂ ಹೀಗೆ ಏನನ್ನಾದರೂ ತಂದುಕೊಟ್ಟರೆ ತನ್ನನ್ನು ಸಾಯಿಸಿಬಿಡಬಹುದು ಎನ್ನುವ ಭೀತಿ ಅವರನ್ನು ಕಾಡುತ್ತಿತ್ತೋ ಗೊತ್ತಿಲ್ಲ; ತಂದುಕೊಟ್ಟಿದ್ದನ್ನು ಕೊಟ್ಟವರು ಹೊರಟ ತಕ್ಷಣ ಎಸೆದುಬಿಡುತ್ತಿದ್ದರು. ಪ್ರೀತಿಯಿಂದ ತಂದುಕೊಟ್ಟಿದ್ದಾರೆ ಯಾಕೆ ಹೀಗೆಲ್ಲಾ ಮಾಡ್ತೀರ? ಎಂದರೆ `ಕತ್ತಲಲ್ಲಿ ಹುಲಿ ಕಾಯ್ತಾ ಇರುತ್ತೆ. ಅದನ್ನು ಎದುರಿಸಲಾಗಲ್ಲ ಅಂದರೆ ತಪ್ಪಿಸಿಕೊಳ್ಳಬೇಕು’ ಎನ್ನುತ್ತಿದ್ದರು. ಯಾವ ಕತ್ತಲು? ಯಾವ ಹುಲಿ? ಇದನ್ನ ತಮ್ಮ ಜೊತೆಯಲ್ಲಿದ್ದವರಿಗೆ ಯಾಕೆ ಹೇಳಿಕೊಡಲಿಲ್ಲ. ಹೇಳಿಕೊಟ್ಟಿದ್ದಿದ್ದರೆ ಸತೀಶ ಉಳಿಯುತ್ತಿದ್ದನೋ ಏನೋ?

ಅತ್ತೆ ಸ್ವಲ್ಪ ಜೋರಾಗಿ ತುಸು ಮುನಿಸಿನಿಂದ, `ನೀವು ಕೆಡೋದಲ್ದೇ ಈ ಮಗೂನೂ ಕೆಡಿಸಬೇಡಿ’ ಎನ್ನುತ್ತಿದ್ದರೆ, `ಅಜ್ಜಿ… ತಾತ ಸರಿಯಾಗೇ ಹೇಳ್ತಾ ಇದಾರೆ, ನೀನ್ಯಾಕೆ ಅವರನ್ನ ಬೈತೀಯಾ?’ ಎನ್ನುತ್ತಿದ್ದಳು ಆಶಾ. `ಹುಂ ಅವರು ಸರಿಯಾಗೇ ಇದ್ದಿದ್ದರೆ ನಿನ್ನ ಹೆಗಲ ಮೇಲೆ ಕೂಡಿಸಿಕೊಂಡು ಕಾಡೆಲ್ಲಾ ಸುತ್ತಿಬರುತ್ತಿದ್ದರು. ಏನ್ ಮಾಡೋದು ಪಾಪ ವಯಸ್ಸಾಗಿ ಬಿಡ್ತು’ ಎಂದರು. ಆ ಮಾತನ್ನ ಕೇಳಿ ಮಾವ, `ವಯಸ್ಸಾದರೇನಂತೆ ಸಿಂಹಕ್ಕೆ ಶಕ್ತಿ ಕುಂದುತ್ತದೆಯೇ?’ ಎಂದರು. `ಹು ಹು ಈ ಸಿಂಹ ಪಾಪ ಕಾಲು ಮುರುದುಕೊಂಡಿದೆಯಲ್ಲಾ’ ಎಂದರು ಅಚ್ಚರಿ ನಟಿಸಿ. ಎಲ್ಲರೂ ಜೋರಾಗಿ ನಕ್ಕೆವು. ಆಶಾ ಮಾವನ ಮೀಸೆಯನ್ನು ತಿರುವುತ್ತಾ, `ಯಾರು ಏನೇ ಹೇಳಲಿ ನನ್ನ ತಾತನಿಗೆ ತುಂಬಾ ಶಕ್ತಿ’ ಎಂದಳು. ಮಾವ ಹೆಮ್ಮೆಯಿಂದ ಬೀಗಿದರು. ಆಶಾ ಇಲ್ಲೇ ಇದ್ದಿದ್ದರೆ ಚೆನ್ನಾಗೇ, ಸಂತೋಷವಾಗೇ ಇರುತ್ತಿದ್ದಳೋ ಏನೋ? ಮನಸ್ಸಿನ ಮಾತಿಗೆ ಅವಕಾಶ ಇರಲಿಲ್ಲ.

ಹೊರಡುವಾಗ ಅತ್ತೆ ಸಂಪ್ರದಾಯದಂತೆ ನನ್ನ ಹಣೆಗೆ ಬೊಟ್ಟನ್ನಿಟ್ಟರು. ನನ್ನ ಕಣ್ಣುಗಳು ತುಂಬಿದವು. ಅತ್ತೆ ಗಮನಿಸಿದರು ಆದರೆ ಮಾತಾಡಲಿಲ್ಲ. ಸಹಾ ನನ್ನ ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಅತ್ತೆ ಮಾವರಿಗೆ ಕೊಡುವಂತೆ ಹೇಳಿದರು. ತೆಗೆದುಕೊಳ್ಳಲು ಇಬ್ಬರೂ ಒಪ್ಪಲಿಲ್ಲ. `ಕೊಡಬೇಕು ಎನ್ನುವ ನಿಮ್ಮ ಪ್ರೀತಿ ಕಡೆಯ ತನಕ ಇರಲಿ ನಮಗಷ್ಟೇ ಸಾಕು’ ಎಂದರು. ಸ್ವಾಭಿಮಾನ ಆ ಮನೆಯ ಬಹುದೊಡ್ಡ ಆಸ್ತಿ.

ಕಾರಲ್ಲಿ ಕುಳಿತ ನನ್ನನ್ನು ಆಶಾಳನ್ನು ಅತ್ತೆ ಮತ್ತೆ ಮತ್ತೆ ಬರುವಂತೆ ಕರೆದರು. ಮಾವ ಆಗದೇ ಇದ್ದರೂ ನಡೆದು ಕಾರಿನ ತನಕ ಬಂದಿದ್ದರು. ಎಲ್ಲರ ಕಣ್ಣುಗಳು ತೇವವಾಗಿದ್ದವು, ಮನಸ್ಸು ಭಾರವಾಗಿತ್ತು. ಮೊದಲ ಸಲ ಸಹಾರ ಜೊತೆ ನಾನು ಹೊರಟು ನಿಂತಾಗ ಆಶಾ ಒಂದೂವರೆ ವರ್ಷದ ಮಗು. ಆಗಲೂ ನಮ್ಮನ್ನು ಬೀಳ್ಕೊಡಲು ಹೀಗೆ…  ಹೀಗೆ ಬಂದಿದ್ದರು. ಕಾರು ಮೂವ್ ಆಯ್ತು. ಅತ್ತೆ ಮಾವ ಚಿಕ್ಕೋಳಿ ಎಲ್ಲರೂ ಕೈ ಆಡಿಸಿ ನಮ್ಮನ್ನು ಬೀಳ್ಕೊಟ್ಟರು. ಕಣ್ಣು ಎಲ್ಲವನ್ನೂ ಮರೆಸುತ್ತದೆ. ಕಾರು ತಿರುವು ತೆಗೆದುಕೊಂಡ ತಕ್ಷಣ ಅತ್ತೆ ಮಾವ ಮನೆ ಎಲ್ಲವೂ ಮರೆಯಾಗುತ್ತಾ ಬಂತು. ಅಯಾಚಿತವಾಗಿ ದೀರ್ಘವಾದ ನಿಟ್ಟುಸಿರಿಟ್ಟು ಕಣ್ಣು ಮುಚ್ಚಿದೆ. ಇದು ಯಾವುದರಿಂದ ಬಿಡುಗಡೆ? ಅಥವಾ ಮತ್ತೆ ಯಾಂತ್ರಿಕವಾದ ಜಗತ್ತನ್ನು ಪ್ರವೇಶಿಸುತ್ತಿರುವುದರ ಖೇದವೇ? ನನ್ನ ಕಡೆ ನೋಡದೆ ಆಶಾಗೆ ಸಹಾ, `ಅಲ್ಲಿ ತೊಂದರೆ ಏನೂ ಆಗಲಿಲ್ಲವಲ್ಲಾ?’ ಎಂದರು. ಅರೆ ನಮ್ಮ ಮನೆ ನಮ್ಮ ಜಾಗ ಅಲ್ಲಿ ನಮಗ್ಯಾವ ತೊಂದರೆ ಎಂದುಕೊAಡೆನಾದರೂ ತಕ್ಷಣ, ನನಗೆ ಬರಿಯ ಅನುಮಾನವೇ. ಇದು ಕಾಳಜಿಯಿಂದ ಬಂದ ಮಾತೂ ಇರಬಹುದಲ್ಲವಾ? ಅನ್ನಿಸಿತು. ಆಶಾ, `ಇಲ್ಲ ಪಪ್ಪಾ’ ಎಂದಳು. ಮಾತು ಎರಡು ದಿನಗಳ ಮಧುರಾನುಭೂತಿಯನ್ನು ಹಾಳುಮಾಡುವ ಭಯದಲ್ಲಿ ನಾನೂ ಮಾತಾಡಲಿಲ್ಲ ಬಹುಶಃ ಆಶಾಳ ಸ್ಥಿತಿಯೂ ಅದೇ ಇದ್ದಿತು.

ಆಶಾ ನನ್ನ ಹೆಗಲನ್ನು ಹಿಡಿದು ಅಲ್ಲಾಡಿಸಿದಳು. ಕಣ್ಣು ಬಿಟ್ಟು ನೋಡಿದಾಗಲೇ ಕತ್ತಲೆ ಆಗಿದ್ದು, ಕಾರು ಹೊಟೇಲ್ ಮುಂದೆ ನಿಂತಿದ್ದು ಗೊತ್ತಾಗಿದ್ದು. `ರಾತ್ರಿ ನಿದ್ದೆ ಮಾಡಿಲ್ಲಾ ಅನ್ನಿಸುತ್ತೆ ಆಶಾ ಇಲ್ಲೇ ಊಟ ಮುಗಿಸೋಣ ಮನೆಗೆ ಹೋಗಿ ಮಲಗಿದರೆ ಆಗುತ್ತೆ’ ಎಂದರು ಸಹಾ. ನಾನು ಬೇಡ ಮನೆಗೆ ಹೋಗಿ ಬಿಡುವಾ ಎಂದು ಹಠ ಹಿಡಿದೆ. `ಹುಂ ಮಾ ಕಾರು ಹತ್ತಿ ಕೂತಾಗಿನಿಂದ ಒಂದೇ ಸಮನೆ ನಿದ್ದೆ ಮಾಡ್ತಾನೇ ಇದೀಯ. ಮತ್ತೆ ಮನೆಗೆ ಹೋಗಿ ಅಡುಗೆ ಮಾಡಲಿಕ್ಕಾಗಲ್ಲ’ ಎಂದಳು ಆಶಾ. ಇರಬಹುದು ಮನಸ್ಸು ಗತಕ್ಕೆ ಜಾರಿ ಭಾರ ಆದಂತೆಲ್ಲಾ ಆಗುವ ಆಯಾಸಕ್ಕೆ ನಿದ್ದೆಯೊಂದೇ ಮದ್ದು. ನಿದ್ದೆಗೆ ಜಾರಿದ್ದು ಯಾವಾಗ ನೆನಪಾಗಲೇ ಇಲ್ಲ. `ಏಳು ಏನಾದರೂ ತಿನ್ನುವಿಯಂತೆ’ ಎಂದು ಆಶಾ ಬಲವಂತ ಮಾಡಿದ್ದಕ್ಕೆ ನಾನು ಅವರ ಜೊತೆ ಹೊಟೇಲ್‌ಗೆ ಹೋದೆ. ಆಶಾ ಅಜ್ಜಿಯ ಮನೆಯ ಗುಂಗಿಂದ ಹೊರಬಂದಂತೆ ಇದ್ದಳು. ಮತ್ತೆ ಸಹಾರ ಜೊತೆ ಹಗುರವಾಗಿ ಮಾತಾಡುತ್ತಾ ನಗುತ್ತ ತನಗೇನು ಬೇಕೋ ಎಲ್ಲವನ್ನು ಆರ್ಡರ್ ಮಾಡಿದಳು. ಎಷ್ಟೋ ಸಲ ಈ ಹುಡುಗಿಗೆ ಇದ್ದಲ್ಲೇ ಜೀವಿಸಿ ಬಿಡುವ ಇಂಥಾ ಗುಣ ಹೇಗೆ ಬಂತು ಎಂದು. ಸಹಾ ಇದನ್ನ ಹೇಳಿದ್ದಿದೆ, `ಆಶಾ  ತುಂಬಾ ಪ್ರಾಕ್ಟಿಕಲ್ ಹುಡುಗಿ. ಎಲ್ಲಿದ್ದರೆ ಅಲ್ಲಿಗೆ ಹೊಂದಿಕೊಳ್ಳುವ ಈ ಗುಣ ನನ್ನ ಮಕ್ಕಳಲ್ಲೂ ಇಲ್ಲ’ ಎಂದು. ತಕ್ಷಣ ಕೇಳಬೇಕೆನ್ನಿಸುತ್ತಿತ್ತು ಹಾಗಾದರೆ ಆಶಾ ನಿಮ್ಮ ಮಗಳಲ್ಲವಾ? ಎಂದು.  

ಹಿಂದಿನದೆಲ್ಲಾ ನೆನಪಿಗೆ ಬಂದು ಹೊಟ್ಟೆಯಲ್ಲಿ ಸಂಕಟ ಶುರುವಾಯಿತು. ಎರಡು ತುತ್ತು ತಿನ್ನುವಷ್ಟರಲ್ಲಿ ಸಾಕಾಯಿತು. ಕೈತೊಳೆದೆ. `ಅಮ್ಮ ನನಗೆ ಸಂಕಟ ಇಲ್ವಾ? ಆದ್ರೆ ಹಿಂದಿನದ್ದನ್ನು ನೆನೆಸಿಕೊಂಡು ಈಗ ಆರೋಗ್ಯ ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ’ ಎಂದಳು ಆಶಾ. `ಇಲ್ಲ ಆಶಾ ನೀವು ಊಟ ಮಾಡಿ ಬನ್ನಿ’ ಎಂದು ಹೊರನಡೆದೆ. ಆಶಾ ಸಹಾ ಏನೋ ಮಾತಾಡಿಕೊಂಡರು ಅದನ್ನ ಕೇಳಿಸಿಕೊಳ್ಳುವ ತಾಳ್ಮೆ ನನ್ನಲ್ಲಿ ಉಳಿದಿರಲಿಲ್ಲ.

ಮನೆಗೆ ಬರುವಾಗ ಕರೆಂಟ್ ಹೋಗಿತ್ತು. ಸಹಾ ಇಲ್ಲೇ ಉಳೀತೀನಿ ಎನ್ನದೆ ಮನೆಗೆ ಹೊರಟರು. ಆಶಾ ನನಗೆ ಭರವಸೆ ಹೇಳುವವಳಂತೆ ನನ್ನ ಹೆಗಲನ್ನು ಒತ್ತಿ ತನ್ನ ರೂಂಗೆ ಹೋದಳು. ಗೊಂದಲ ಎಲ್ಲವನ್ನೂ ಕಳಕೊಂಡು ನಿಂತವಳಿಗೆ ಮತ್ತೆ ಹುಟ್ಟೊಂದು ಸಾಧ್ಯ ಎಂದು ಹೇಳಿದ ಸಂದರ್ಭದ್ದಾ, ಇದು ಧರ್ಮ, ಹೋದವರನ್ನು ನೆನೆದು ಇರುವವರು ಬದುಕಬೇಕು ಎನ್ನುವ ಕಾಲದ್ದಾ? ಕಳಕೊಳ್ಳುವ ಆಟಕ್ಕೆ ಇನ್ನೊಂದು ಮತ್ತೊಂದು ಎಂದು ಸೇರಿಸುತ್ತಲೇ ಹೋಗುವ ಸಾವು ಕಾಲಚಕ್ರದ ತಿರುಗುವಿಕೆಗೆ ಕಡಿವಾಣವೇ ಇಲ್ಲದೆ ಸಿಕ್ಕ ಸಿಕ್ಕಲ್ಲಿ ನಿರಂಕುಶಮತಿಯಾಗಿ ನುಂಗಿ ನೊಣೆದು ತೇಗಿಬಿಡುತ್ತಲ್ಲಾ! ಅಬ್ಬಾ ಅದೆಂಥಾ ನೋವು?  ಮಲಗಿದರೆ ನಿದ್ದೆ ಬಾರದು ಅದೇ ದೃಶ್ಯಗಳು ಕಣ್ಣೆದುರು ಚಾಪೆ ಸುರುಳಿ ಬಿಚ್ಚಿದ ಹಾಗೆ ಬಿಚ್ಚುತ್ತಿದೆ.            

‍ಲೇಖಕರು avadhi

July 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: