ಗೀತಾ ಹೆಗಡೆ ದೊಡ್ಮನೆ ಓದಿದ ವೈದೇಹಿಯವರ ಕವಿತೆ: ಶಿವನ ಮೀಸುವ ಹಾಡು

ಗೀತಾ ಹೆಗಡೆ, ದೊಡ್ಮನೆ

    ಅಭಿಷೇಕ ಮಾಡಿದಳು ಗೌರಿ

    ತ್ರಿಲೋಕ ಸಂಚಾರಿಗೆ

    ಕರೆದೊಯ್ದಳು ಶಿವನ

    ಶುಭ್ರಸ್ನಾನಕ್ಕೆ..

ಈ ಕವಿತೆ ತೆರೆದುಕೊಳ್ಳುವುದೇ ಇಂಥದೊಂದು ಆಪ್ತ ಸಾಲುಗಳಿಂದ! ವಿಶಿಷ್ಟ ಸಾಹಿತ್ಯ-ಕಸುವಿನ ವೈದೇಹಿ ಅವರ ಕವಿತೆ ಶಿವನ ಮೀಸುವ ಹಾಡು ಹತ್ತು-ಹಲವು ಬಗೆಯಲ್ಲಿ ಬೆರಗು ಉಕ್ಕಿಸುವ ಕವಿತೆ.

ಗೌರಿ ಮತ್ತು ಶಿವ ಇಲ್ಲಿಯ ನಾಯಕ-ನಾಯಕಿಯರು. ಶಿವ ಗೌರಿಯ ನಾಯಕ; ಗೌರಿ- ಕವಿತೆಯ ನಾಯಕಿ. ಮನೆಯಿಂದಾಚೆ ಕೆಲಸದ ನಿಮಿತ್ತ ಸುತ್ತಾಟ ಮುಗಿಸಿ ಒಳಬಂದ ಗಂಡನನ್ನು, ಹೆಂಡತಿ, “ನೀರು ಬಿಸಿ ಮಾಡಿ ಇಟ್ಟಿದ್ದೇನೆ, ಸ್ನಾನಕ್ಕೆ ಬನ್ನಿ” ಎಂಬ ಲೋಕರೂಢಿಯ, ಅಂಥದೇ ಒಂದು ಕೌಟುಂಬಿಕ ಭೂಮಿಕೆಯಲ್ಲಿ ಗೌರಿ ಶಿವನ ಮಜ್ಜನಕಾಗಿ ಕರೆದೊಯ್ಯುತ್ತಿದ್ದಾಳೆ. ಆದರಿಲ್ಲಿ, ಕರೆಯುತ್ತಿರುವವಳು ಪರಶಿವನ ಮಡದಿ ಗೌರಮ್ಮ: ಕರೆಯುತ್ತಿರುವುದು- ವಿಶ್ವನಾಟಕ ಸೂತ್ರಧಾರಿ, ಲೀಲಾವಿಹಾರಿ, ಲಯಶಕ್ತಿ ಅಧಿಕಾರಿ, ದಿವ್ಯಾಂಬರ ಸಂಚಾರಿಯನ್ನು! ಜಗದುದ್ದಗಲಕೆ.. ಅಲ್ಲಲ್ಲ; ಭೂಮ್ಯಾಕಾಶ-ಪಾತಾಳಗಳನೆಲ್ಲ ಉಸ್ತುವಾರಿ ಮಾಡಿ ಬಂದ ತ್ರಿಲೋಕಾಧೀಶನಾದ ಪತಿ-ಪರಮೇಶ್ವರನನ್ನು!

ಪ್ರಾಪಂಚಿಕತೆಯ ಹಲವು ಸೂಕ್ಷ್ಮಗಳನ್ನು ಹೊತ್ತ ಈ ಕವಿತೆಯ ಆಡುಂಬೊಲದಲ್ಲಿ, ನಾಟಕೀಯವಾಗಿ, ದೈವಿಕ-ಮಾನುಷ ದ್ವಂದ್ವ ಪ್ರತಿಮೆಗಳನ್ನಿಟ್ಟು ತೂಗುತ್ತ, ಕವಿಯ ಕುಂಚದಲ್ಲಿ ಹೊರಹೊರಳಿ ಪ್ರತ್ಯಕ್ಷರಾಗುವರು ಈಶ-ಗೌರಿಯರು.  

ಕವಿತೆ ಮುಂದುವರಿದಂತೆ, ಹೊಸತೊಂದು ಒಡಪಿನ ಕೀಲಿಕೈ ಗೊಂಚಲಿನಂತೆ ಪ್ರತಿಮೆಗಳು ಪದಪುಂಜಗಳಾಗಿ, ಅಥವಾ ಪದಪುನಂಜಗಳೇ ಪ್ರತಿಮೆಗಳಾಗಿ ಅವತರಿಸುತ್ತವೆ- ಕವಿಯ ಉದ್ಭಾಸಿತ ಹೊಳಹಿನಿಂದ! ಅಭಿಷೇಕ ಮತ್ತು ಶುಭ್ರಸ್ನಾನ ಈ ಎರಡೂ ಪದಗಳಲ್ಲಿ ಒಂದು(ಅಭಿಷೇಕ) ಅಲೌಕಿಕ, ಇನ್ನೊಂದು (ಶುಭ್ರಸ್ನಾನ) ಲೌಕಿಕ ವ್ಯವಹಾರಗಳಲ್ಲಿ ಬಳಕೆಯಲ್ಲಿ, ರೂಢಿಯಲ್ಲಿ ಇರುವಂಥವು. ಆದರಿಲ್ಲಿ, ಈ ಎರಡೂ ಪದಗಳು ಒಬ್ಬನಿಗೇ- ಅರ್ಥಾತ್‌ ಶಿವನ ಮೇಲೇ ಪ್ರಯೋಗಿಸಲ್ಪಡುತ್ತಿವೆ- ಮಡದಿ ಗೌರಿಯಿಂದ. ಗಮನಿಸಿದರೆ, ತನ್ನ ಪತಿ, ತ್ರಿಲೋಕಸಂಚಾರಿ ಶಿವನಿಗೆ ದೇವನೆಂಬ ಭಕ್ತಿಯಿಂದ ಸಲ್ಲುವ ಅಭಿಷೇಕವಂತೂ ಸಲ್ಲುತ್ತದೆ- ಗೌರಿಯಿಂದ: ಆದರೆ, ಮೂಲೋಕ ಸುತ್ತಿ ಬಳಲಿ, ಯಾರ್ಯಾರದೋ ಮನೆ-ಬೀದಿಯ ಧೂಳು ಮೆತ್ತಿಕೊಂಡವನನ್ನು ತೊಳೆಯುವದೂ ಗೌರಿಯ ಈ ಕಾಯಕದ ಉದ್ದೇಶ.(ಪತ್ತೆ ಹಚ್ಚುತ್ತ!)

ಮುಂದಿನ ವಿವರಗಳು ಬಲು ಕುತೂಹಲಕಾರಿಯಾಗಿಯೂ, ಸೂಕ್ಷವಾಗಿಯೂ ಇವೆ. ಅಲೆದಲೆದು ಪತಿಯ ಪಾದಗಳು ನೊಂದಿವೆಯೋ– ಎಂಬ ಅವಳ ಕಾಳಜಿಯ ಹಿನ್ನೆಲೆಯ ಸಂವಾದಿಯಾಗಿ  ಸಾಥ್‌ ಕೊಡುವುದು, ಯಾರ ಮನೆ ಧೂಳು ಮೆತ್ತಿರಬಹುದು- ಎಂದು “ಪತ್ತೆ ಹಚ್ಚು”ವುದು ಎನ್ನುವುದೂ ಒಂದು ಅನ್ಯಾದೃಶ ವಿಡಂಬನೆಯ ಕುಸುರಿ! ಕಾಳಜೀಪೂರ್ವಕ ಕಳವಳ ಮತ್ತು ಕಳವಳಭರಿತ ಕಾಳಜಿ ಎರೆಡೂ ಅಲ್ಲಿವೆ. ಅದಕ್ಕೆ ನಟರಾಜ ನಗುವ! ನಗುವ ನಟರಾಜನಿಗೆ ಅವಳ ಪಶ್ನೆಯ ಮೊನೆ “ಮುಗಿಯಿತೇ ಮೃಗಬೇಟೆ!” ಮನೆಯಿಂದಾಚೆಗೆ ಹೊರಟಾಗಿನ ಆತನ ಪ್ರಾಪಂಚಿಕ ಹೊಣೆಗಾರಿಕೆಯಲ್ಲಿ ಸ್ನಾನ-ಪಾನ, ಮೃಗಯಾವಿಹಾರಗಳ ಹೊತ್ತು-ಗೊತ್ತುಗಳಿಗೆ ಒದಗುವ ಮಂದಾಕಿನೀ, ನರ್ಮದೆ, ಕಾವೇರಿ, ಕಪಿಲೆ, ಗಂಗೆ, ಯಮುನೆ, ಮಣಿಕರ್ಣಿಕೆಯರ ಸನ್ನಿಧಾನ ಎಂಬುದು ಮಡದಿ ಗೌರಿಗೆ. ತಿಳಿಯದ್ದೇನಲ್ಲ. ಅದಕ್ಕೇ, ತಾನು ಸುರಿಯುವ ಒಂದೊಂದು ಬಿಂದಿಗೆಗೂ ಅವರ ಹೆಸರನ್ನು ಪ್ರತ್ಯೇಕವಾಗಿ ನೆನಪಿಸುತ್ತ,

“ಕಡೆಯದಿಗೋ ನನ್ನ ಅನುದಿನದ

ಬಡ ಕನಲು

ಎಂದಾಗ ನೀರೊಳಗೆ ಗೌರಿ

ಕಂಬನಿ ಬಿಂದು

ಮಿಸಕ್ಕನೆ ಬೆರೆತು ಬಿಸಿಯಾಗಲು

“ಅಯ್‌” ಎಂದು ಶಿವ ಬೆದರಿ

“ನನ್ನನೇನೆಂದುಕೊಂಡೆ? ನಿನ್ನ

ಬಿಟ್ಟರೆ ಶುದ್ಧ ಬೈರಾಗಿ”

ಈ ಮಾತಿಗೆ ಶಿವನೇ

ನಾನೆಷ್ಟನೆಯ ನಾರಿ?”

ಎನ್ನುತ್ತ ಮೃದು ಚಿವುಟಿ

ಮೀಸುವಳು ನಮ್ಮ ಗೌರಿ.

ಸಾವಿರ ಸಾಲುಗಳು ಹೇಳಲು ಸಾಧ್ಯವಿರದಂಥ ಮಾರ್ಮಿಕ ಸಂಕೇತಗಳು ಕವಿತೆಯುದ್ದಕ್ಕೂ ಅತಿ ವಿಶಿಷ್ಟ ಬಂಧದಲ್ಲಿ ಹೆಣೆದುಕೊಂಡಿವೆ; (ಅದೇ ತಾನೇ- ನಿಜಾರ್ಥದಲ್ಲಿ ಕವಿತೆ ಎಂದರೆ!) ಅದೂ- ಕವಿತೆಯ ಅತ್ಯಂತ ದಿವಿನಾದ ದಿವ್ಯ ನಿರಾಡಂಬರದಲ್ಲಿ, ಮತ್ತು ಅಲ್ಲಿ ಸಂವೇದನಾತ್ಮಕವಾಗಿ ಪ್ರತಿನಿಧಿಲ್ಪಡುವ, ಪ್ರತಿಫಲಿಸಲ್ಪಡುವ-“ನಗುವ ನಟರಾಜ” ಸದಾ-ಶಿವರ ಮಡದಿಯರಾದ ಸದಾ-ಗೌರಿಯರ ಹೃದಯಭೇದಕ ಸ್ವಾಭಾವಿಕ ಅನಿವಾರ್ಯತೆಯ ವಿಧಿಯಲ್ಲಿ!

ಪತಿ-ಪರಮೇಶ್ವರನ ಸೇವೆಗೆ ಸಮರ್ಪಿತಳಾಗಿಯೇ ಇರುವ “ಮೌನಗೌರಿ”ಗೂ, ಒಮ್ಮೆಯಾದರೂ ಎದೆಯಾಳದ ಅಳಲು ಹೊರಹೊಮ್ಮದಿರುತ್ತದೆಯೆ?

“ಬೈರಾಗಿ ಬೂದಿ ತೊಳೆಯುತ್ತ.. ಶಿವ ಶಿವಾ!

ಎಲ್ಲ ನದಿಗಳ ನೆನೆದು ಮಲಗು ದೇವ!

ಈ ತುದಿಯ ಸಾಲಿನ ಅನಾವರಣಕ್ಕೆ ಎಳೆ-ಎಳೆಯಾಗಿ ಒದಗಿಬಂದು ಆಚ್ಛಾದಿಸುವವು- ಕವಿತೆಯದೇ ಕೈ-ಕಸೂತಿಯಲ್ಲಿ ನೇಯಲ್ಪಟ್ಟ- “ನುಡಿರೇಶಿಮೆ”ಯ ಹೊದಿಕೆ.

“ನುಡಿರೇಶಿಮೆಯಡಿ ನಂಜು ನುಂಗಿದ ಕಿರಾತ”! ನಂಜುಂಡ, ನಂಜುಡೇಶ್ವರ, ಕಿರಾತ(ಶಬರ ಶಂಕರ)ನ ಸಂಕಥನದಲ್ಲಿ ಇವೆಲ್ಲವೂ ಗುಣವಿಶೇಷಣಗಳೇ! ಇಲ್ಲಿ ಗೌರೀಕ(ವಿ)ತೆಯಲ್ಲಿ ಅವು ಪ್ರತಿಮಿಸುವ ಆಯಾಮಗಳು ಅದೆಷ್ಟು ಮೊನಚಾಗಿ, ಕರಾರುವಾಕ್ ವಿಡಂಬನೆ/ಅನ್ವರ್ಥ/ಶ್ಲೇಷೆಯಾಗಿ ಹೊರಳುವ ಅದ್ಭುತ ಘಟಿಸಿದೆ- ಕವಿತೆಯ ಕಾಸಾರದಲ್ಲಿ. ಮತ್ತೆ ಈ ಬಿಸುಸುಯ್ಲಿಗೆ ʼಪರಶಿವ”ನ ಪ್ರತಿಕ್ರಿಯೆ/ಪರಿಣಾಮ/ಪ್ರತಿಸ್ಪಂದ-

“ಕಚಗುಳಿಯ ಹೂವು ಹರಿಗೋಲು ಹರನ/ ಹತ್ತಿಸಿಕೊಂಡು/ ಮತ್ತೆ ಸಾಗಿತು ಗೌರಿಯಿಂದ ದೂರ”

ಅವಳು ಶಿವಕಾಮಿ; ಎದೆಯೊಳಗಿನ ಸಂಕಟಗಳ ಜಗದೆದುರು ತೋರದ ಸ್ವಾಭಿಮಾನಿ; ಅದಕ್ಕೆ ಕವಿ-ಪ್ರಾಗಲ್ಭ್ಯತೆ ಒರೆದ ಪದ- “ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ”. ಅದು ಹುಸಿಗರ್ವವೂ ಅಲ್ಲ; ಶುಷ್ಕಗರ್ವವೂ ಅಲ್ಲ; ಅದು ರಸಾವಿಷ್ಟವಾಗಿದೆ- ಸ್ತ್ರೀತ್ವ ಎಂಬ ಧಾತ್ರಿ ಉಣಬಡಿಸುವ ಕಾರುಣ್ಯದಲ್ಲಿ!; ಮಮತೆಯೇ ಮೈವೆತ್ತ ಮಾರ್ದವತೆಯಲ್ಲಿ!

“ಸಂಚಾರ ಮುಗಿಸಿ ಬರುವ

ಈಶ್ವರ ಜೋಗಿ

ಗೌರಿ ಕರೆವಳು ಅವನ ಸ್ನಾನಕಾಗಿ

ಮದ್ದಿನೆಣ್ಣೆಯ ಪೂಸಿ, ಬಿದ್ದ

ಕಂಗಳ ಒರೆಸಿ

ಜ್ವರ ಹಿಡಿಸಿಕೊಂಡಿರುವ ಲೋಕ

ಸಂಚಾರಿಗೆ

ಕಿರಾತ ಕಡ್ಡಿಯ ಕಷಾಯ ಕುಡಿಸಿ”

ಕಾವ್ಯದಲ್ಲಿ ಆದಿ, ಮಧ್ಯ, ಕೊನೆ ಭಾಗಗಳೆಂದಿಲ್ಲ: ಅಲ್ಲಿ ಎಲ್ಲ ಪದಗಳೂ ಸಬಂಧ-ಸಬಂಧ! ಕವಿತೆಯನ್ನು ನಾವು ಸಮೀಪಿಸುತ್ತಿದ್ದಂತೆ ಕಾಣುವ ಚಿತ್ರಣ- ಗೌರಿ ಶಿವನ ಸ್ನಾನಕ್ಕೆ ಕರೆವ ದೃಶ್ಯ. ಅಭಿಷೇಕವೇನಿದ್ದರೂ ಸ್ನಾನಾನಂತರ!. ಕವಿತೆಯ ಬಂಧದಂಚಲ್ಲಿ ಗೋಚರಿಸುವುದೂ- ಗೌರಿ ಶಿವನ ಕರೆವ ದೃಶ್ಯ- ಸ್ನಾನಕಾಗಿ. ಈ ಕವಿತೆಯಲ್ಲಿ ಅಚ್ಚೊತ್ತುವ ಪ್ರತಿಯೊಂದು ಪದವೂ ಅನ್ಯಾದೃಶ. ಶಿವ, ಶಿವಕಾಮಿ, (ತ್ರಿ)ಲೋಕಸಂಚಾರಿ, ಜೋಗಿ, ಬೈರಾಗಿ, ನುಡಿರೇಶಿಮೆ/ಯ ನಂಜು ನುಂಗಿದ ಕಿರಾತ. ಕಿರಾತಕಡ್ಡಿಯ ಕಷಾಯ, ಮೃಗಬೇಟೆ, ಮತ್ತು..ಇಡೀ ಕವಿತೆ! ಬಿಡಿಬಿಡಿಯಾಗಿಯೂ ಮತ್ತು ಇಡಿಯಾಗಿಯೂ- ಕವಿತೆ ತಾನು ಏನು ಹೇಳಬೇಕೆಂದಿಯೋ ಅದನ್ನು ಸಮರ್ಥವಾಗಿ ಹೇಳುತ್ತದೆ.

ಒಂದು ಕವಿತೆ ಅವಗುಂಠನ ಧರಿಸಿದ ಮುಗುದೆಯ ಮುಗುಳ್ನಗುವಿನ ಹಾಗೆ! ಅದು ಕವಿಯೊಳಗೆ ಭಾಸವಾಗುವ ಸತ್ಯ-ಸೌಂದರ್ಯ ಮತ್ತು ಓದುಗನೊಳಗೆ ಪ್ರತಿಭಾಸಿತವಾಗುವ ಸತ್ಯ-ಸೌಂದರ್ಯ.  

ಕವಿತೆ ಒಂದು ಅಂಚು, ಅಂತ್ಯ ಎಂಬ ಇತಿ-ಮಿತಿಗೆ ನಿಲುಕದ, ಸಿಲುಕದ ಅನುಭವ, ಅನುಭಾವ! ವೈದೇಹಿ ಅವರ “ಶಿವನ ಮೀಸುವ ಹಾಡು” ಬಳಸಿಕೊಂಡ ಪ್ರತಿಮೆಗಳು, ರೂಪಕ, ರಸ-ಧ್ವನಿ, ಸಂವೇದನೆ, ಸೂಚ್ಯತೆಗಳ ಶಕ್ತಿ ಅನುಪಮ. ಇಲ್ಲಿ ವಿಡಂಬನೆಯ ಹರಿತತೆಯೊಂದಿಗೇ, ಒಂದು ಸ್ಥಿತಪ್ರಜ್ಞ ಔದಾರ್ಯದ ಎತ್ತರವೂ ಮನದುಂಬುತ್ತದೆ- ಪ್ರಪಂಚಾರ್ಥ-ಪಾರಮಾರ್ಥಗಳ ಸಮಿಧಾ-ಮಥನದಲ್ಲಿ ಕಿರಣವೊಗೆವ ಕಾವ್ಯಪ್ರಜ್ಞೆಯೊಂದು ಸಾಂಸಾರಿಕ ನೆಲೆಗಟ್ಟಿನಲ್ಲಿ ಸಂಕೇತವೂ ಆಗಬಲ್ಲ “ಶಿವನ ಮೀಸುವ ಹಾಡು” ಆಗಿ ಮಾರ್ಪಡುವ ಬಗೆಯೊಂದಿಗೆ!.

                     

.

‍ಲೇಖಕರು avadhi

July 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: