
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
23
ಸತೀಶನ ಸಾವಿನ ಹಿಂದೆ ಪಿತೂರಿ ನಡೆದಿದೆ. ಹೌದು ಖಚಿತವಾಗಿ ಗೊತ್ತು. ಇದನ್ನೇ ಅಲ್ಲವೇ ಅವತ್ತು ಪೊಲೀಸರಿಗೆ ನಾನು ವಿವರಿಸಲು ಯತ್ನಿಸಿದ್ದು. ಕಂಕಳಲ್ಲಿದ್ದ ಮಗುವಿನ ಕಾರಣಕ್ಕಾದರೂ ಅವರಿಗೆ ನನ್ನ ಮೇಲೆ ಕರುಣೆ ಹುಟ್ಟಬಹುದು ಎಂದುಕೊಂಡಿದ್ದೆ. ಇಲ್ಲ, ಬಹುಪಾಲು ಜನರಿಗೆ ಅದು ಆಗಲಿಲ್ಲ. ಸಾಹೇಬರು ಬರ್ತಾರೆ ಎಂದು ನನ್ನ ಕೂಡಿಸುತ್ತಿದ್ದರು. ಅಲ್ಲಿ ಏನೇನಾಗುತ್ತಿತ್ತು ಎಂದು ಅರಿಯದವಳಾಗಿರಲಿಲ್ಲ ನಾನು. ಕುಳಿತಿದ್ದ ನನ್ನ ದೇಹದ ಮೇಲೆ ಕೆಲವರಿಗೆ ಕಣ್ಣಾದರೆ, ನನ್ನಿಂದ ಸತ್ಯ ಹೇಳಿಸಿ ಲಾಭ ಮಾಡಿಕೊಳ್ಳುವ ಹುನ್ನಾರ ಕೆಲವರದ್ದು. ನಾನೊಬ್ಬ ತೀವ್ರವಾದಿಯ ಹೆಂಡತಿ ಎಂದಾಗಿಬಿಟ್ಟರೆ ನನಗಿರುವ ನಂಟಿನ ಮೂಲಕ ಆ ಬೇರುಗಳನ್ನೇ ಕಿತ್ತು ಹಾಕಿ ಸಮಾಜವನ್ನು ಸ್ವಾಸ್ಥವಾಗಿರಿಸುವ ಯತ್ನ ಕೆಲವರದ್ದು. ಅನ್ಯಾಯವನ್ನು ಹೇಗೆ ನೋಡುತ್ತಾರೆ! ಹೆಸರು ಹೇಳಿಕೊಳ್ಳದೆ ಯಾವ ಅನ್ಯಾಯವನ್ನು ಬೇಕಾದರೂ ಮಾಡಬಹುದು. ಹೆಸರು ಹೇಳಿಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ತಪ್ಪಾ?
ಅವತ್ತು ನನ್ನನ್ನು ಪೊಲೀಸ್ ಸ್ಟೇಷನ್ನಲ್ಲಿ ಕೂರಿಸಿದ್ದರಲ್ಲಾ, ಅಲ್ಲಿಗೆ ಬಂದ ಪೇದೆಯೊಬ್ಬ, ʻನಾಳೆಯಿಂದ ಈ ಮಗುವನ್ನು ಕರಕೊಂಡು ಬರಬೇಡʼ ಅಂದ. ನನಗೆ ಅಚ್ಚರಿಯಾಯಿತು. ʻಯಾಕೆ?ʼ ಎಂದೆ. ʻನಿನ್ನ ಬಿಡಿಸುವ ಪ್ರಯತ್ನ ಮಾಡುವೆ. ಅದಕ್ಕಾಗಿ ನೀನು ನನಗೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕುʼ ಎಂದ. ನನಗೆ ಕೋಪ ಬಂತು. ʻಅಸಹಾಯಕಳಾದ ನನ್ನ ಹೀಗೆಲ್ಲಾ ಕೇಳುವುದು ಅನ್ಯಾಯವಲ್ಲವಾ?ʼ ಎಂದೆ. ʻನೀನೇನು ಮಹಾ ಸಭ್ಯಸ್ಥಳಾ? ಮಾಡಿರೋ ಅನಾಚಾರಕ್ಕೆ ಹೆಣ್ಣುಮಗಳು, ಪಾಪ ಬಿಡಿಸೋಣ ಅಂದುಕೊಂಡ್ರೆ ನೀನು ನನ್ನೇ ಪ್ರಶ್ನೆ ಮಾಡ್ತೀಯಾʼ ಎಂದು ರೇಗಿದ. ಮಾತಿಗೆ ಮಾತು ಬೆಳೆಯಿತು. ನಾನು ಅದುವರೆಗಿನ ಫ್ರಸ್ಟ್ರೇಷನ್ ಅನ್ನು ತಡಕೊಂಡು ಸಾಕಾಗಿ ಕೂಗಾಡಿದ್ದೆ. ಎಲ್ಲಾ ನೋಡುತ್ತಿದ್ದವರು ಗುಂಪು ಸೇರಿದರು.

ನಾನೇ ಆತನನ್ನು ಬೈದೆ ಎಂದು ಅವನು ಬೊಬ್ಬೆ ಹೊಡೆಯಲಿಕ್ಕೆ ಶುರು ಮಾಡಿದ. ವ್ಯವಸ್ಥೆಯಾಲ್ಲವಾ? ಅಷ್ಟರಲ್ಲಿ ಒಬ್ಬಳು ಕೂದಲು ಹಿಡಿದು ನನ್ನನ್ನು ದರ ದರ ಎಳೆದುಕೊಂಡು ಒಳಗೆ ಹೋದಳು. ಹೊಟ್ಟೆಯ ಮೇಲು ಭಾಗ ಎದೆಯ ಕೆಳಭಾಗಕ್ಕೆ ಕೈ ಹಾಕಿ ಹಿಂಡಿಬಿಟ್ಟಳು. ನನಗೆ ಅಲ್ಲಿ ಅಷ್ಟು ನೋವಾಗಬಹುದು ಎನ್ನುವ ಅಂದಾಜು ಕೂಡಾ ಇರಲಿಲ್ಲ. ಜೋರಾಗಿ ಕೂಗತೊಡಗಿದೆ. ಗಾಯವೇ ಇಲ್ಲದೆ ನೋವನ್ನು ಮಾಡುವುದು ಸಾಧ್ಯ ಎಂದು ಗೊತ್ತಾಗಿದ್ದೆ ಅವತ್ತು. ತುಂಬಾ ಅತ್ತೆ. ಅವರು ನನಗೆ ದೈಹಿಕವಾಗಿ ನೋವು ಕೊಟ್ಟಿದ್ದಕ್ಕಲ್ಲ, ನನ್ನ ಬಗ್ಗೆ ಅವರು ಮಾತಾಡಿದರಲ್ಲಾ ಆ ಮಾತುಗಳಿಗೆ. ಆದರೆ ಮೇಲಿನ ಅಧಿಕಾರಿ ಮಾತ್ರ ಯಾವತ್ತೂ ಘನತೆ ಮೀರಿ ನಡೆದುಕೊಳ್ಳಲಿಲ್ಲ. ಬೆಳಗಿನಿಂದ ಸಂಜೆಯವರೆಗೆ ಸುಮ್ಮನೆ ನನ್ನ ಕೂರಿಸುತ್ತಿದ್ದರಲ್ಲ, ಆಗ ನನಗೆ ಇವರು ನನ್ನ ಏನು ಮಾಡುತ್ತಾರೋ ಎನ್ನುವ ಭಯ ಕಾಡುತ್ತಿತ್ತು. ಅದು ಒಮ್ಮೊಮ್ಮೆ ಈಗಲೂ ಪೊಲೀಸರನ್ನು ನೋಡಿದರೆ ಕಾಡುತ್ತದೆ.
ನನಗೆ ಚೆನ್ನಾಗಿ ನೆನಪಿದೆ. ಆಶಾ ಐದು ತಿಂಗಳ ಮಗು. ಅಂಗಳದಲ್ಲಿ ಅವಳನ್ನು ಆಡಿಸುತ್ತಾ ಕೂತಿದ್ದೆ. ಒಂದಿಬ್ಬರು ನೀಟಾಗಿ ಡ್ರೆಸ್ ಮಾಡಿಕೊಂಡವರು ಸತೀಶನನ್ನು ಹುಡುಕಿ ಬಂದಿದ್ದರು. ಅವರು ನಮ್ಮೂರವರಲ್ಲ ಅಂತ ಮಾತ್ರ ನನಗೆ ಗೊತ್ತಿತ್ತು. ಬಂದವರೇ, ʻಸತೀಶ ಇಲ್ಲವಾ?ʼ ಎಂದರು. ʻಕುಳಿತುಕೊಳ್ಳಿ ಬರ್ತಾರೆ…ʼ ಎಂದು ಎದ್ದು ಒಳಗೆ ಹೋದೆ. ಮನೆಯ ಒಳಗೆ ಸತೀಶ ಇರಲಿಲ್ಲ. ಅತ್ತೆ ಒಲೆಯ ಮುಂದೆ ಉರಿಯನ್ನು ಜಾಸ್ತಿ ಮಾಡುತ್ತಾ ಸಾರನ್ನು ಕಾಯಿಸುತ್ತಿದ್ದರು. ನಾನು ಬಂದಿದ್ದು ನೋಡಿ, ʻಏನೆ…ʼ ಅಂದ್ರು. ʻಯಾರೋ ನಿಮ್ಮ ಮಗನನ್ನು ಹುಡುಕಿ ಬಂದಿದ್ದಾರೆʼ ಎಂದೆ. ʻಇಲ್ಲೇ ಮನೆಯ ಹಿಂದೆ ಕಾಟ್ರಿ ಜೊತೆ ಬಾತುಕೋಳಿಯ ಮೊಟ್ಟೆ ಹುಡುಕುತ್ತಿದ್ದʼ ಎಂದರು. ʻಸರಿ ನಾನು ಹಿತ್ತಲಲ್ಲೇ ಹೋಗಿ ನೋಡುತ್ತೇನೆʼ ಎಂದು ಹೊರಟೆ. ಅತ್ತೆ ಬಂದವರಿಗೆ ಕಾಫಿ ಮಾಡಲೇ ಎಂದರು. ʻಬೇಡ ಬಿಡಿ ಅತ್ತೆ. ಅವರು ನಮ್ಮ ಮನೆಯಲ್ಲಿ ಕುಡಿಯುವವರ ಹಾಗೆ ಕಾಣ್ತಾ ಇಲ್ಲ.
ಸತೀಶ ಬಂದು ಮಾಡು ಎಂದರೆ ಮಾಡಿದರಾಯಿತುʼ ಎಂದು ನಡುಮನೆಗೆ ಬಂದೆ. ನಡುಮನೆಯಿಂದ ಹಾದು ಹಿತ್ತಲಿಗೆ ಹೋಗಬೇಕು, ಅಷ್ಟರಲ್ಲಿ ಸತೀಶ ಏರುಧ್ವನಿಯಲ್ಲಿ ಮಾತಾಡ್ತಾ ಇರೋದು ಕೇಳಿತು. ಹಾಗೆ ಏರುಧ್ವನಿಯಲ್ಲಿ ಯಾರನ್ನೂ ಮಾತಾಡಿಸೊಲ್ಲವಲ್ಲ ಎಂದು ಗಾಬರಿಯಿಂದ ಮನೆಯ ಮುಂಭಾಗಕ್ಕೆ ಹೋದೆ. ಕಾಟ್ರಿ ಗೋಡೆಗೆ ಅಂಟಿಕೊಂಡ ಹಲ್ಲಿಯ ಹಾಗೆ ನಿಂತಿದ್ದರೆ, ಸತೀಶ ಮಾತ್ರ, ʻನಾನು ಆ ಜನರಿಗೆ ಸರಕಾರದಿಂದ ಹಕ್ಕುಪತ್ರ ಕೊಡಿಸಿಯೇ ತೀರುತ್ತೇನೆ, ನಿನ್ನ ಧಣಿಗೆ ಇದನ್ನ ಹೇಳು. ಯಾರನ್ನೂ ಕೇರ್ ಮಾಡಲ್ಲ…ʼ ಎಂದೆಲ್ಲಾ ಕೂಗಾಡುತ್ತಿದ್ದ. ಬಂದವರೂ ಕೋಪದಿಂದ, ʻಸುಮ್ಮನೆ ನಮ್ಮ ಹತ್ತಿರ ಇಟ್ಟುಕೊಳ್ಳಬೇಡಿʼ ಎಂದು ಗದರಿ ಬುದ್ಧಿ ಹೇಳುತ್ತಿದ್ದರು. ಸತೀಶ, ʻಆ ಜಾಗ ನಿಮ್ಮ ಮನೆಯದ್ದಲ್ಲ, ಸರ್ಕಾರದ ಪರ್ಮೀಷನ್ ತಗೊಂಡಿದೀವಿ. ಡಿನೋಟಿಫೈ ಮಾಡುವುದಾಗಿ ಹೇಳಿದೆ.
ಇನ್ನೇನು ನಿಮ್ಮ ಗೋಳು? ಎಲ್ಲಾ ನಿರ್ಧಾರ ಮಾಡಿದ ಮೇಲೆ ಬಡವರಿಗೆ ಕೊಟ್ಟ ಜಾಗವನ್ನೂ ಬಿಟ್ಟು ಬೇರೆ ಕಡೆ ನೋಡಿ ಎಂದರೆ ಯಾಕೆ ನೋಡಬೇಕು?ʼ ಎಂದೆಲ್ಲಾ ಕೂಗಾಡುತ್ತಿದ್ದ. ಬಂದವರು ಹಣದ ಆಮಿಷ ತೋರಿಸಿದರು, ಹೆದರಿಸಿದರು, ಬೆದರಿಸಿದರು, ಸತೀಶ ಮಾತ್ರ ಜಪ್ಪಯ್ಯ ಅನ್ನಲಿಲ್ಲ. ʻಜೈಲಿಗೆ ಹೋಗಿ ಬಂದರೂ ಸ್ವಲ್ಪವೂ ಬುದ್ಧಿ ಬರಲಿಲ್ಲ ಅಲ್ಲಾವಾ ನಿನಗೆ? ಒಂದು ಗತಿ ಕಾಣಿಸ್ತೀವಿ ನೋಡ್ತಾ ಇರು. ನಮ್ಮ ಹತ್ತಿರ ಇಟ್ಟುಕೊಂಡರೆ ಸರಿಯಿರಲ್ಲʼ ಎಂದೆಲ್ಲಾ ಬೈದಾಡಿಕೊಳ್ಳುತ್ತಲೇ ಹೊರಟರು. ಅತ್ತೆ ಮಾವ ನಾನು ಈ ಜಗಳ ಕೇಳಿ ಹೊರಗೆ ಬಂದೆವು. ಯಾರಿಗೂ ಏನಾಗ್ತಾ ಇದೆ ಎನ್ನುವ ಸ್ಪಷ್ಟ ಚಿತ್ರಣ ಸಿಗದೇ ಇದ್ದರೂ ಯಡವಟ್ಟಾಗಿದೆ ಎನ್ನುವುದು ಮಾತ್ರ ಅರ್ಥವಾಗಿತ್ತು.
ನನಗೆ ಮಾತ್ರವಲ್ಲ ಅತ್ತೆ ಮಾವರಿಗೂ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. ಮಾವ, ʻಇದೆಲ್ಲಾ ಏನು ಸತೀಶೂ?ʼ ಎಂದಿದ್ದರು. ಇಷ್ಟು ದೂರ ಕ್ರಮಿಸಿದ ಮೇಲೆ ಮಗನನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುವ ಭ್ರಮೆ ಅವರಿಗೂ ಇರಲಿಲ್ಲ. ಸತೀಶನೂ ಏನೂ ಆಗಲ್ಲ ಎಂದು ಅತ್ತೆಗೆ ಸಮಾಧಾನ ಹೇಳಿದ, ಅಪ್ಪನಿಗೆ ಭರವಸೆ ಕೊಟ್ಟ, ಕಾನೂನು ನ್ಯಾಯ ಎಲ್ಲದರ ಬಗ್ಗೆ ಮಾತಾಡಿದ. ಅವನಿಗೆ ಅದರ ಬಗ್ಗೆ ಯಾರೂ ಚರ್ಚಿಸುವುದು ಬೇಕಿರಲಿಲ್ಲ. ಅವನ ನಿರ್ಧಾರಗಳಿಂದ ಅವನನ್ನು ದೂರ ಮಾಡುವುದು ಯಾರಿಗೂ ಸಾಧ್ಯವಿಲ್ಲ ಎಂದು. ಆವೊತ್ತು ಅವನು ನನಗೆ ಮಾತ್ರ ಏನನ್ನೂ ಹೇಳಲಿಲ್ಲ.
ನಾನು ಅದನ್ನು ಬಯಸಿಯೂ ಇರಲಿಲ್ಲ. ಆದರೆ ನಾನು ಭಯಗೊಂಡಿದ್ದೆ, ಅವನ ಜೀವಕ್ಕೆ ಏನಾದರೂ ಆದರೆ ನನ್ನ ಗತಿ ಏನು? ಎಂದು. ಆದರೆ ಒಬ್ಬ ಮನುಷ್ಯ ಮಾಡುವುದು ಸರಿ. ಅದನ್ನ ಬೆಂಬಲಿಸಲೆಂದೇ ಮದುವೆ ಮಾಡಿಕೊಂಡು ಬಂದವಳಿಗೆ ಹೋರಾಟವನ್ನೇ ಮಾಡಬೇಡ ಎಂದು ಹೇಳುವುದು ಹೇಗೆ ಸಾಧ್ಯ? ಒಳಗೊಳಗೇ ಧೈರ್ಯ ತಗೊಂಡೆ ನಾನು ಹೋರಾಟಗಾರನ ಹೆಂಡತಿ, ನನಗೇ ಧೈರ್ಯವಿಲ್ಲ ಅಂದ್ಮೇಲೆ ಇನ್ಯಾರಿಗೆ ಧೈರ್ಯ ಬರುತ್ತೆ? ಆದರೆ ಆ ಜನ ಆಡಿದ ಮಾತು, ನಡಕೊಂಡ ರೀತಿ ಮಾತ್ರ ಏನೋ ಆಗುವುದರ ಸೂಚನೆಯನ್ನು ನೀಡಿತ್ತಾ?
ಜೋರು ಗಾಳಿಗೆ ಕರೆಂಟು ಪಟ್ಟೆಂದು ಆರಿತು. ಗತದಿಂದ ಇವತ್ತಿಗೆ ಬಂದಾಗ ಅತ್ತೆ ಎದ್ದು ದೀಪ ಹಚ್ಚಿಡುತ್ತಿದ್ದರು. ನಾನು, ʻಈಗ್ಯಾಕೆ ಅತ್ತೆ ಎಲ್ಲ ಮಲಗಿದ್ದಾರೆʼ ಎಂದೆ. ʻನಿಮ್ಮ ಮಾವ ರಾತ್ರಿ ಎದ್ದು ಹೊರಗೆ ಹೋಗಬೇಕೆಂದರೆ ಕಷ್ಟ ಆಗುತ್ತೆ. ಮೊದಲೇ ಕಾಲು ಹಾಗಾಗಿದೆ. ಇನ್ನು ಏನಾದರೂ ಮಾಡಿಕೊಂಡರೆ ಕಷ್ಟʼ ಎಂದರು. ರಾತ್ರಿ ಕತ್ತಲು ಅವರಿಗೆ ಹಿಂದಿನ ಯಾವುದೂ ನೆನಪಿಲ್ಲವೇ ಅಥವಾ ಅದನ್ನೆಲ್ಲಾ ಮರೆತಿದ್ದಾರಾ? ಕತ್ತಲಲ್ಲಿ ಅತ್ತೆಯ ಮುಖಭಾವವನ್ನು ಗ್ರಹಿಸದೆ ಹೋದೆ.
ಅವತ್ತು ಹೀಗೆ, ಆ ವೇಳಗೆ ಹೀಗೆ ಕರೆಂಟು ಹೋಗಿತ್ತು. ಅತ್ತೆಗೆ ಆಗೀಗ ಹೋಗುವುದು ಸಂತೋಷವೇ. ಮಗ ಇಂಥಾ ಹೊತ್ತಲ್ಲಿ ಕೈಲಿ ಪುಸ್ತಕ ಹಿಡಿಯದೆ ತನ್ನೊಂದಿಗೆ ಹರಟುತ್ತಾ ಊಟ ಮಾಡುತ್ತಾನೆ ಎಂದು. ಇದನ್ನು ಅವರು ಮಗನ ಹತ್ತಿರ ಎಷ್ಟೋ ವೇಳೆ ಹೇಳಿದ್ದನ್ನು ನಾನೂ ಕೇಳಿದ್ದೆ. ʻನಿಮಗೇನು ಅತ್ತೆ ನನಗೂ ನೀವಿಬ್ಬರೂ ಹೀಗೆ ಮಾತಾಡುತ್ತಾ ಕುಳಿತುಕೊಳ್ಳುವುದು ಇಷ್ಟವಾಗುತ್ತೆʼ ಎಂದಿದ್ದೆ. ನನ್ನ ಮಾತಿಗೆ ನಕ್ಕು ಸತೀಶ, ʻನಿಮ್ಮಿಬ್ಬರದ್ದು ಎಂಥಾ ಸಣ್ಣ ಆಸೆಯಪ್ಪಾ? ನೀವು ಖುಷಿಯಾಗಿರಲು ಜಗತ್ತೆಲ್ಲಾ ಕತ್ತಲೆಯಲ್ಲಿರಬೇಕಾ?ʼ ಎಂದು ಗೇಲಿ ಮಾಡಿದ್ದ. ಅತ್ತೆಗೆ ಮಗ ಯಾವತ್ತೂ ಬೆರಗೇ. ಕಡ್ಡಿ ಬೆರಳನ್ನು ಬಾಯೊಳಗೆ ಹಾಕಿಕೊಂಡು ತನ್ನ ಸೆರಗನ್ನು ಹಿಡಿದು ಓಡಾಡುತ್ತಿದ್ದವ ಇವನೇನೇ? ಎಂದು ಅಚ್ಚರಿಯಿಂದ ಹೇಳಿದ್ದಿದೆ. ಅತ್ತೆ ನಮ್ಮಿಬ್ಬರ ತಟ್ಟೆಗೆ ಅನ್ನ ಹಾಕಿದರು. ʻನೀನೂ ಊಟ ಮಾಡಮ್ಮಾʼ ಎಂದ ಸತೀಶನಿಗೆ, ʻನಿಮ್ಮಪ್ಪ ಬರ್ಲಿʼ ಎಂದಿದ್ದರು. ಮಾವ ಬೆಳೆದ ಬೆಳೆಯನ್ನು ಮಾರಿ ಬರಲು ಪೇಟೆಗೆ ಹೋಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತಾಡುತ್ತಾ ಇನ್ನೇನು ತುತ್ತು ಎತ್ತಿ ಬಾಯಿಗಿಡಬೇಕು.
ಅಷ್ಟರಲ್ಲಿ ಬಾಗಿಲ ಬಳಿ ಯಾರೋ ಸುಳಿದಾಡಿದ ಹಾಗೆ ಅನ್ನಿಸಿ ಕಣ್ಣು ಹೊಂದಿಸಿಕೊಳ್ಳುವಾಗ ಚಿಕ್ಕೋಳಮ್ಮ! ಆ ಕತ್ತಲಿನಲ್ಲಿ ಸತೀಶನ ಕಡೆಗೆ ಕೈ ತೋರುತ್ತಾ ಬಾ ಎಂದು ಸನ್ನೆ ಮಾಡಿದಳು. ನನಗೆ ಯಾಕೆ ಹೀಗಾಡುತ್ತಿದ್ದಾಳೆ ಎನ್ನುವ ಗಾಬರಿಯಾಯಿತು. ನೀರು ತರಲು ಒಳಗೆ ಹೋಗಿದ್ದ ಅತ್ತೆಯ ಕಣ್ಣಿಗೆ ಚಿಕ್ಕೋಳಮ್ಮ ಬಂದದ್ದಾಗಲಿ, ಕರೆದದ್ದಾಗಲೀ ಕಾಣಲಿಲ್ಲ. ಮಗ ಯಾಕೆ ತುತ್ತನ್ನು ಕೆಳಗಿಳಿಸುತ್ತಿದ್ದಾನೆ ಎಂದು ಅಚ್ಚರಿಯಿಂದ ನೋಡುತ್ತಾ ನಿಂತುಬಿಟ್ಟರು. ಬುಡ್ಡಿ ದೀಪದ ಮಸಕು ಬೆಳಕಲ್ಲಿ ಸರಿಯಾಗಿ ಕಾಣದ ತನ್ನ ಕಣ್ಣುಗಳನ್ನು ಹೊಂದಿಸಿಕೊಳ್ಳುತ್ತಾ ಮಗ ನೋಡುತ್ತಿದ್ದ ಕಡೆಗೆ ನೋಡಿದಾಗ ಏದುಸಿರು ಬಿಡುತ್ತಾ ನಿಂತಿದ್ದ ಚಿಕ್ಕೋಳಮ್ಮ ಕಂಡದ್ದು. ʻಮತ್ತೇನಾಯ್ತೆ ಚಿಕ್ಕೋಳೆ?ʼ ಎಂದು ಕೇಳಿದ್ದೇ ತಡ, ಎಲ್ಲಿಲ್ಲದ ದುಃಖವನ್ನು ತಂದುಕೊಂಡು ಭೋರೆಂದು ಅಳಲು ಶುರು ಮಾಡಿದ ಅವಳು ಹಾಗೆ ಅಳುತ್ತಾ ಕೆಳಗೆ ಕೂತಳು. ಗಾಬರಿಯಿಂದ ಅವಳ ಹತ್ತಿರಕ್ಕೆ ಬಂದ ಅತ್ತೆಗೆ ಏನೋ ಆಗಿರುವ ಸೂಚನೆ ಅವಳ ಮೈಮೇಲೆ ಕಂಡ ರಕ್ತದಿಂದ ಗೊತ್ತಾಯಿತು.

ಸತೀಶ ಚಿಕ್ಕೋಳಿಯನ್ನು ಕಟ್ಟೆಗೆ ಕೂಡಿಸುತ್ತಾ ಏನಾಯ್ತು ಚಿಕ್ಕಿ? ಎಂದು ಕೇಳಿದ. ಮೊದಲ ಬಾರಿಗೆ ಶುರುವಾದ ಅಳು ಎರಡನೇ ಬಾರಿ ಕೇಳಿದ ಪ್ರಶ್ನೆಗೆ ಎದೆ ಹೊಡೆದುಕೊಳ್ಳುವ ಮಟ್ಟಕ್ಕೆ ಹೋದಾಗ ಅತ್ತೆಗೆ ಕೋಪ ನೆತ್ತಿಗೆ ಹತ್ತಿತ್ತು. ʻಅದೇನಾಯ್ತು ಅಂತ ಹೀಗ್ ಮನೆ ಬಾಗ್ಲಲ್ಲಿ ಕೂತು ಅಳ್ತಾ ಇದೀಯ?ʼ ಎಂದಾಗ ಸತೀಶ, ʻಅಮ್ಮಾ…ʼ ಎನ್ನುತ್ತ ಅವಳ ಮಾತನ್ನು ತಡೆದ. ಚಿಕ್ಕೋಳಮ್ಮನ ತೋಳಿಗೆ ಕೈಹಾಕಿ ಮೇಲೆತ್ತುತ್ತಾ ಏನಾಯ್ತು ಚಿಕ್ಕಿ ಎಂದ. ಅವನ ಆಪ್ಯಾಯಮಾನವಾದ ಧ್ವನಿಗೆ ಆ ತಾಕತ್ತಿತ್ತೋ ನಿಜಕ್ಕೂ ಅವಳಿಗೆ ಅಳುವುದೇ ಬೇಕಿತ್ತೋ ಗೊತ್ತಿಲ್ಲ. ಕಟ್ಟೆ ಒಡೆದ ಅವಳ ಸಂಕಟಕ್ಕೆ ಮಾತು ಹೊರದಾರಿಯಾಗಿತ್ತು. ʻಕಾಟ್ರಿ ಅವ್ರ ಅಯ್ಯನ್ನ ಹೊಡೀತಾ ಬಿದ್ದಿದ್ದಾನೆ. ಎಷ್ಟ್ ಹೇಳಿದ್ರೂ ಕೇಳ್ತಾ ಇಲ್ಲ. ನಿನ್ನ ಪುಣ್ಯಾ ಬಿಡ್ಸು ಬಾಪ್ಪಾʼ ಎಂದು ಅಳತೊಡಗಿದಳು. ಲಾಟೀನಿನ ಬೆಳಕಲ್ಲಿ ಅವಳ ತುಟಿ ಒಡೆದು ರಕ್ತ ಸೋರುತ್ತಿದ್ದುದು ಕಾಣುತ್ತಿತ್ತು. ಕೆನ್ನೆಯ ಒಂದು ಭಾಗ ಊದಿಕೊಂಡಿತ್ತು. ಅದನ್ನೆಲ್ಲಾ ನೋಡೆ ಮನೆಯಲ್ಲಿ ಎಷ್ಟರಮಟ್ಟಿಗೆ ಗಲಾಟೆ ನಡೆದಿರಬಹುದು ಎಂದು ಊಹೆ ಮಾಡಿಕೊಂಡ ಸತೀಶ ಕತ್ತಲಲ್ಲೂ ಆಕಾಶವನ್ನು ಇಣುಕಿ ನೋಡಿದ. ನಕ್ಷತ್ರಗಳು ಮಿಣುಕಾಡುತ್ತಿದ್ದವು.
ಅತ್ತೆ ಹೊಟ್ಟೆಯಲ್ಲಿ ಬಿದ್ದ ಸಂಕಟ, ʻಒಂದ್ ಗಳಿಗೆ ತಡ ಮಾಡಿ ಬಂದಿದ್ದಿದ್ರೆ ಇವ್ನುದು ಊಟಾನಾದ್ರೂ ಮುಗೀತಿತ್ತುʼ ಎಂದು ಮಾತಾಡಿಸಿಯೇ ಬಿಟ್ಟಿತು. ʻಅಮ್ಮಾ ಸುಮ್ನಿರುʼ ಎಂದು ಸಣ್ಣದಾಗಿ ಗದರಿದ ಸತೀಶನಿಗೆ, ʻಜಗಳ ಆಡಿದವರು ನಾಳೆ ಬೆಳಗ್ಗೆಗೆ ಸರಿಹೋಗ್ತಾರೆ, ಮತ್ತೆಲ್ಲಾ ಕಿಸಿಕಿಸಿ ನಗ್ತಾ ಮಾತಾಡ್ತಾರೆ. ನಿಷ್ಟೂರ ಆಗೋರು ನಾವು ಮಾತ್ರ. ಮನೆ ಮಂದಿಯೆಲ್ಲಾ ಕುಡುಕರೆ. ಕುಡಿದಾಗ ಮೈಮೇಲೆ ಜ್ಞಾನ ಕೂಡಾ ಇರಲ್ಲ. ನಿಂಗೇನಾದ್ರೂ ಆದ್ರೆ ಏನ್ ಮಾಡ್ಬೇಕು?ʼ ಎಂದು ಆಕ್ಷೇಪದ ಧ್ವನಿಯಲ್ಲಿ ವಿರೋಧಿಸಿದರು. ʻನಿನ್ನ ಗಂಡ ಕೂಡಾ ಕುಡೀತಾನೇ. ಅಷ್ಟೇ ಅಲ್ಲ, ಈ ಊರಲ್ಲಿ ಎಲ್ಲರೂ ಕುಡೀತಾರೆ. ನಾನು ಬರ್ತೀನಿ ಬಾಗಿಲು ಹಾಕ್ಕೋʼ ಎಂದು ಹೇಳಿ ಸತೀಶ ಹೊರ ಹೊರಟಾಗ ಅತ್ತೆ ಮನಸ್ಸಿನಲ್ಲಿ ಮುಳ್ಳಾಡಿ, ʻನೋಡಿದ್ಯಾ ಹೆಂಗ್ ಮಾತಾಡ್ತಾನೆ ಅಂತ. ನನ್ನ ಗಂಡ ಇವನಿಗೆ ಏನು ಆಗಬೇಕೋ?ʼ ಎಂದು ನನಗೆ ಒಪ್ಪಿಸಿದರು.
ಈ ಗಲಾಟೆಗೆ ಜೋಲಿಯಲ್ಲಿ ಮಲಗಿದ್ದ ಮಗು ಅಳತೊಡಗಿತು. ಚಿಕ್ಕೋಳಮ್ಮ ತನ್ನ ಮಡಿಲಲ್ಲಿದ್ದ ಟಾರ್ಚನ್ನು ತೆಗೆದು ಬೆಳಕು ಬಿಟ್ಟಳು. ಸತೀಶ ಆ ಬೆಳಕಲ್ಲಿ ಚಪ್ಪಲಿ ಮೆಟ್ಟಿ ಹೊರಟೇ ಬಿಟ್ಟ. ಇವನು ಏನು ಹೇಳಿದರೂ ನಿಲ್ಲುವವನಲ್ಲ ಎಂದು, ʻಒಂದು ನಿಮ್ಷ…ʼ ಎಂದು ಅವನನ್ನು ತಡೆದು ಅತ್ತೆಯೇ ಅವನ ಕೈಗೆ ಟಾರ್ಚ್ ಕೊಡ್ತಾ ಹುಷಾರು ಎಂದರು. ಅವ್ವನ ಕಕ್ಕುಲಾತಿಗೆ ತುಟಿ ತುದಿಯಲ್ಲಿ ನಗು ತುಳುಕಿಸಿ, ʻಬೇಗ ಬರ್ತೀನಿʼ ಎಂದು ಹೊರಟ. ೬೦ರ ಇಳಿವಯಸ್ಸಿನ ಸಣ್ಣಗೆ ಒಣಗಿದ್ದ, ಕುಣಿಯುವ ಹಾಗೇ ನಡೆಯುತ್ತಿದ್ದ ಚಿಕ್ಕೋಳಮ್ಮನ ಪಕ್ಕದಲ್ಲಿ ಸತೀಶನ ಧೀರ ನಡುಗೆ ಅಸ್ಪಷ್ಟವಾಗಿ ಕೊನೆಗೆ ಕಾಣದ ಹಾಗಾಯಿತು.
ಚಿಕ್ಕೋಳಿಯ ಮನೆಯಲ್ಲಿ ಇದು ಸರ್ವೇ ಸಾಧಾರಣ. ತಲೆ ಒಡೆದುಕೊಂಡೋ, ಕೈಕಾಲುಗಳನ್ನು ಮುರಿದುಕೊಂಡೋ ಗೋಡೆಗೆ ಚಂಡಿನ ಹಾಗೆ ಪುಟಿದು ಮೈಮೂಳೆ ಮುರಿದುಕೊಂಡೋ ಏನೋ ಒಂದು ಆಗಿಯೇ ರಾತ್ರಿಗಳು ಕಳೆಯುವುದು. ಕೆಲದಿನಗಳಲ್ಲಿ ಸ್ವಲ್ಪ ಸೌಮ್ಯವಾಗಿ, ಇನ್ನು ಕೆಲ ದಿನಗಳಲ್ಲಿ ಉಗ್ರವಾಗಿ ನಡೆಯುತ್ತಿದ್ದವು. ಅಕ್ಕಪಕ್ಕದವರು, ಊರುಗಳಿಂದ ಬಂದರೆಂದರೆ ಊರ ಭಜನಾ ಮನೆಯ ಪಕ್ಕದ ಬಯಲಲ್ಲಿ ಎಲ್ಲೋ ಬಚ್ಚಿಟ್ಟಿದ್ದ ಸೇಂದಿಯ ಶೀಶೆಗಳು ರಾತ್ರಿಯಾದರೆ ಬಿಕರಿಗೆ ಬಂದು ನಿಲ್ಲುತ್ತಿದ್ದವು. ಕಾಟ್ರಿಯನ್ನು ಅವರೇ ಕರೆಸಿಕೊಂಡು ಹೋಗಿ ಕೊಡಿಸುತ್ತಿದ್ದುದೂ ಉಂಟು.
ಕುಡಿವಾಗ ಅಪ್ಪಮಗ ಚೆನ್ನಾಗೇ ಇರುತ್ತಾರೆ. ಕುಡಿದಾದ ಮೇಲೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಅನುಮಾನ. ಅವ್ವ ನನಗೆ ಕಡಿಮೆ ಪೀಸು ಹಾಕಿದ್ಲು ಎಂದು ಕಾಟ್ರಿ ಜಗಳ ತೆಗುದ್ರೆ, ಬೆಟ್ಟಯ್ಯ ಕುಡಿದ ಮತ್ತಲ್ಲಿ ಈ ಅವ್ವ ಮಗನ ನಾಟಕ ನಾನು ನೋಡಿಲ್ವಾ ಎಂದು ಕೂಗಲು ಶುರು ಮಾಡುತ್ತಿದ್ದ. ಕಾಟ್ರಿ ಈಚೆಗೆ ತೀರಾ ಇಳಿದಿದ್ದಾನೆ ಎಂದು ಅತ್ತೆಗೆ ಅನ್ನಿಸಿದ್ದು, ʻನಿನ್ನ ಮಗನಿಗೆ ಕುಡೀದೇ ಇರಲು ಹೇಳುʼ ಎಂದು ಎಷ್ಟೋ ಸಲ ಚಿಕ್ಕೋಳಿಗೆ ಹೇಳಿದ್ದಳು. ಕುಡಿಯದೇ ಇದ್ದಾಗ ನನ್ನ ಮಗ ಬಂಗಾರ ಎಂದೆಲ್ಲಾ ಗುಣಗಾನ ಮಾಡುವ ಅವಳು ರಾತ್ರಿಗಳಲ್ಲಿ ಸತೀಶನನ್ನು ಹುಡುಕಿ ಬರುತ್ತಿದ್ದಳು. ಅವನು ಊರಲ್ಲಿ ಇಲ್ಲದಿದ್ದಾಗಲೂ ಆ ಕತ್ತಲಲ್ಲಿ ಮನೆಗೆ ಭೇಟಿ ಕೊಡುವುದು ಮಾಮೂಲಿಯಾಗಿತ್ತು. ಇಂಥಾ ಅಪ್ಪ ಮಗ ಇವತ್ತು ಒಟ್ಟಾಗಿ ಮುಗಿಬಿದ್ದದ್ದಾದರೂ ಯಾಕೆ? ಎಂದು ಅತ್ತೆ ಪ್ರಶ್ನಿಸಿಕೊಳ್ಳುವಂತೆ ಗೊಣಗುತ್ತಾ ಸತೀಶ ಎತ್ತಿದ್ದ ತುತ್ತನ್ನು ಇಳಿಸಿ ಹೋಗಿದ್ದ ತಟ್ಟೆಯಲ್ಲಿನ ಅನ್ನ ಸಾರು ಒಣಗದಿರುವಂತೆ ಅದರ ಮೇಲೆ ಇನ್ನೊಂದು ತಟ್ಟೆಯೊಂದನ್ನು ಬೋರಲು ಹಾಕಿದರು.
0 ಪ್ರತಿಕ್ರಿಯೆಗಳು