ಪಾರ್ವತಿ ಜಿ ಐತಾಳ್ ಓದಿದ – ‘ಬೆಳಕು ಮಾರುವ ಹುಡುಗ’

ಪಾರ್ವತಿ ಜಿ ಐತಾಳ್

**

ಸಾಹಿತಿ ಉದಯಕುಮಾರ್ ಹಬ್ಬು ಅವರ ಕವನ ಸಂಕಲನ ‘ಬೆಳಕು ಮಾರುವ ಹುಡುಗ’.

ದೀಪ್ತಿ ಬುಕ್ ಹೌಸ್’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬರೆದ ಬರಹ ಇಲ್ಲಿದೆ.

**

ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಅನುವಾದ, ವಿಮರ್ಶೆ – ಹೀಗೆ ಎಲ್ಲ ಪ್ರಕಾರಗಳಲ್ಲೂ ಸಾಕಷ್ಟು ಬರೆದಿರುವ ಲೇಖಕ ಉದಯಕುಮಾರ್ ಹಬ್ಬು ಅವರು ೨೦೨೨ರಲ್ಲಿ ‘ಬೆಳಕು ಮಾರುವ ಹುಡುಗ’ ಎಂಬ ೬೧ ಕವನಗಳುಳ್ಳ ಸಂಕಲನವನ್ನು ಪ್ರಕಟಿಸಿ ಕಾವ್ಯ ಕ್ಷೇತ್ರಕ್ಕೂ ತಾವು ಸಲ್ಲುವವರು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಡಿಗರದ್ದೇ ನವ್ಯ ಶೈಲಿಯಲ್ಲಿ ಅವರು ಕವಿತೆಗಳನ್ನು ರಚಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಹಲವು ಕವಿತೆಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ತಮ್ಮ ಅಂತರಂಗದ ಅಳಲನ್ನು ವ್ಯಂಗ್ಯದ ಮೂಲಕ ಇವರು ಕಟ್ಟಿಕೊಟ್ಟಿದ್ದಾರೆ. ಕೆಲವು ಕವಿತೆಗಳಲ್ಲಿ  ಮನೆಯನ್ನು ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುವ ಹೆಣ್ಣಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. 

ಮೊದಲ ಕವಿತೆಯಲ್ಲಿಯೇ ಕವಿಯ ಮನವನ್ನು ತುಂಬಿದ ನೋವು ಹಾಡಾಗಿ ಬರೆದಿದೆ.‌ ಸತ್ಯ-ನ್ಯಾಯಗಳಿಗಾಗಿ ಹೋರಾಟ ನಡೆಸುವವನು ಕವಿ. ಆದರೆ ಜನರಿಗೆ ಅದು ಬೇಡ. ಅವನಿಗೇ ಗೊತ್ತಾಗದಂತೆ ಅವನ ಶವ ನಡು ಬೀದಿಯಲ್ಲಿ ಬಿದ್ದಿರುತ್ತದೆ. ಶವ ದಹನವಾಗುತ್ತದೆ.ಶ್ರದ್ಧಾಂಜಲಿ ಸಭೆಯೂ ನಡೆಯುತ್ತದೆ ಅಂದರೆ? ಪರಿಸ್ಥಿತಿ ಎಷ್ಟು ಶೋಚನೀಯವಾಗಿರ ಬೇಡ? (ನಡುಬೀದಿಯ ಹೆಣ. ಪುಟ ೨೩-೨೪)

  ಕವಿಯ ದೃಷ್ಟಿಯಲ್ಲಿ ‘ನೋವಿನ ಜಾತ್ರೆ’ ಯಲ್ಲಿ ತರಹೇವಾರಿ ನೋವುಗಳು ಮಾರಾಟಕ್ಕಿವೆ. ದೈಹಿಕ ನೋವು, ಮಾನಸಿಕ ನೋವು, ವೈಚಾರಿಕ ಉಗ್ರಗಾಮಿತ್ವದ ನೋವು, ಅಹಂಕಾರದ ನೋವು, ಅರಿಷಡ್ವರ್ಗಗಳು ಕೊಡುವ ನೋವು- ಹೀಗೆ. ನೋವಿನ ಮೂಲಕವೇ ಹುಟ್ಟಿದ ನಾವು ಈ ಜಾತ್ರೆಯಲ್ಲಿ ಯಾವುದಾದರೂ ನೋವನ್ನು ಖರೀದಿಸದೆ ನಿರ್ವಾಹ ಇಲ್ಲ ಎನ್ನುತ್ತಾರೆ. ಮನುಷ್ಯನ ಬದುಕಿನ ಕಹಿ ವಾಸ್ತವದ ಬಗ್ಗೆ ಒಂದು ಸಶಕ್ತ ಕಲ್ಪನೆ ಇಲ್ಲಿದೆ. (ಪುಟ ೪೩-೪೪)

ಕವಿತೆ ಬಹಳ ಜಾಣೆ. ಆಕೆ ಎಲ್ಲರಿಗೂ ಒಲಿಯುವುದಿಲ್ಲ. ವಶೀಲಿಗಳಿಗೆ ಬಗ್ಗುವವಳಲ್ಲ. ಅವಳು ಕವಿಯನ್ನು ಪ್ರಶ್ನಿಸುತ್ತಾಳೆ . ನಾನೇನು ದಾಸಿಯೇ ನೀ ಕರೆದಂತೆ ಬರಲು? ಎನ್ನುತ್ತಾ. ‘ಮೈಯ ಸುತ್ತ ಮೆತ್ತಿದ ಕೊಬ್ಬನ್ನು ಕರಗಿಸಿ ಬಾ’ ಅನ್ನುತ್ತಾಳೆ. ಕವಿಗೆ ಅಹಂಕಾರ ಇರಬಾರದು ಅನ್ನುವುದು ಧ್ವನಿ. ‘ಅವಳು ನನ್ನ ಬಿಟ್ಟು ಸೇಬು ಹಣ್ಣು ತಿಂದಳು. ಆದ್ದರಿಂದ ನಾನೀಗ ಸೃಷ್ಟಿಕರ್ತ ‘ಅನ್ನುತ್ತಾನೆ ಕವಿ.  ಇಲ್ಲಿ ಕವಿತೆ ಪ್ರಕೃತಿ, ಕವಿ ಪುರುಷ.  ಜಗದ ಸೃಷ್ಟಿಕರ್ತನೂ ಕವಿತೆಯ ಸೃಷ್ಟಿಕರ್ತನೂ ಅವನೇ ಆಗಿದ್ದಾನೆ.‌( ನನ್ನ ಕವಿತಾ ೮೮-೮೯)

ಅಮ್ಮನ ಕುರಿತಾದ ಕವನ ಒಂದು ನುಡಿ ನಮನವೇ ಆಗಿದೆ. ಅಮ್ಮ ಪ್ರಶ್ನೆ ಕೇಳಲಿಲ್ಲ/ಯಾಕೆಂದರೆ ರಾಮಾಯಣ ಓದಿದ್ದಳಲ್ಲ/ ನಿಮ್ಮ ಮನೆ ಅಂಗಳವ ಗುಡಿಸಿ/ಹಿತ್ತಲ ಹುಲ್ಲುಕಡ್ಡಿಗಳ ಕಿತ್ತು/ನಾನ್ಯಾರ ಮನೆಯಲ್ಲೂ ಪುಕ್ಕಟೆ ಉಣ್ಣಲಾರೆ (ಅಮ್ಮ. ಪುಟ ೧೦೩-೧೦೫) ಎಂದ ಸ್ವಾಭಿಮಾನಿ ಅಮ್ಮ ಆಕೆ.

ಕಣ್ಣು ಮುಂದೆ ಕಾಣಿಸಿದ ಕವಿತೆಯನ್ನು ಹುಡುಕುವ ಕವಿಯೊಳಗಿನ ಅಂತರ್ವಾಣಿ ಮೊಳಗುವ ಪರಿ ಚೆನ್ನಾಗಿದೆ. ಅರಳುವ ಹೂವು ಕಳಿತ ಹಣ್ಣು ಬೀಸುವ ಗಾಳಿ ಕುಡಿವ ನೀರು/ಕುಕಿಲುವ ಹಕ್ಕಿ  ಉರಿವ ಸೂರ್ಯ/ಹರಿಯುವ ನದಿ ಸುರಿವ ಮಳೆ ಕೊಡುವ /ಪ್ರೀತಿ ನಿನಗೆ ಸಾಲದೆ ಕವಿತೆ ಬರೆಯಲು? (ಶಾರದೆ ರಾಗ ಪು. ೯೫-೯೬)

ಶೀರ್ಷಿಕೆ ಕವನ ‘ಬೆಳಕು ಮಾರುವ ಹುಡುಗ’ ಸಂಕಲನದ ಮೂರನೆಯ ಕವನ. ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ನೀಡುವ, ದಿನವೂ ಬರುವ ಸೂರ್ಯನನ್ನು ನಾವೆಲ್ಲ taken for granted ಆಗಿ ಪರಿಗಣಿಸುತ್ತೇವೆ.‌ ಅವನಿಂದ ಆಗುವ ಕೆಲಸಗಳು ಒಂದೇ ಎರಡೇ? ಯಾವುದೂ ನಮ್ಮ ಲೆಕ್ಕಕ್ಕೆ ಬರುವುದಿಲ್ಲ.‌ ಈ ಇಡೀ ಕವನ ಒಂದು ರೂಪಕ. ಜನರ ಅರಿವಿಗೆ ಬಾರದ ನೂರಾರು ವಿಚಾರಗಳನ್ನು ಬೆಳಕಿಗೆ ತಂದು ತಿಳಿಸುವ ಕವಿಯ ಬಗೆಗೂ ಜನರ ಉಡಾಫೆ ಇದೇ ರೀತಿಯದ್ದಲ್ಲವೇ? ಕವನ ತುಂಬಾ ಅರ್ಥಪೂರ್ಣವಾಗಿದೆ. (ಪುಟ ೨೯-೩೧)

ಇಂಥ ಹಲವಾರು ಮನ ಮುಟ್ಟುವ ಕವಿತೆಗಳು ಈ ಸಂಕಲನದಲ್ಲಿವೆ. ಕವಿತೆಗಳ ಛಂದೋಬದ್ಧತೆಯ ಬಗ್ಗೆ ಕವಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಗಮನ ಸೆಳೆಯುವ ಪದ ಸಂಪತ್ತು, ರೂಪಕಗಳ ಬಳಕೆ, ವ್ಯಂಗ್ಯ ಧ್ವನಿಯ ಅನುರಣನೆಗಳು ಎಲ್ಲಾ ಕವಿತೆಗಳಲ್ಲಿ ಧಾರಾಳವಾಗಿವೆ. ಸುಲಭದಲ್ಲಿ ಅರ್ಥವನ್ನು ಬಿಟ್ಟು ಕೊಡದ ಕವಿತೆಗಳ ಕಾವ್ಯ ಗುಣ ಓದುಗನನ್ನು ಮತ್ತೆ ಮತ್ತೆ ಕವಿತೆಯ ಎಡೆಗೆ ಹೋಗುವಂತೆ ಮಾಡುತ್ತದೆ. ಇತರ ಹಲವು ಪ್ರಕಾರಗಳಲ್ಲಿ ಬರೆಯುವ ಹಬ್ಬು ಅವರು ಒಳ್ಳೆಯ ಕವಿಯಾಗಿಯೂ ಮಿಂಚಬಲ್ಲರು ಅನ್ನುವುದಕ್ಕೆ ಈ ಸಂಕಲನ ಸಾಕ್ಷಿಯಾಗಿ ನಿಲ್ಲುತ್ತದೆ.

‍ಲೇಖಕರು Admin MM

March 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This