ಕುಂದಾಪ್ರಾ ಎಂಬ ಉಪಭಾಷೆಯ ರಕ್ಷಣೆಗೊಂದು ತಳಿಕಂಡಿ!

ಪಾರ್ವತಿ ಜಿ ಐತಾಳ್
ಆಧುನಿಕತೆ, ಜಾಗತೀಕರಣ ಮತ್ತು ದೇಶದಾದ್ಯಂತ ವ್ಯಾಪಿಸಿಕೊಂಡ ಆಂಗ್ಲ ಭಾಷಾ ವ್ಯಾಮೋಹಗಳು ಭಾರತೀಯ ಪ್ರಾದೇಶಿಕ ಉಪಭಾಷೆಗಳಿಗೆ ಮಾರಕಪ್ರಾಯವಾಗಿ ಪರಿಣಮಿಸಿರುವ ಈ ಸಂಧಿ ಕಾಲದಲ್ಲಿ ಕುಂದಾಪುರ ಕನ್ನಡ ಎಂಬ ಉಪಭಾಷೆಯು ಮರೆಗೆ ಸರಿಯ ಬಾರದು ಎಂಬ ಕಾಳಜಿಯ ಪ್ರತೀಕವಾಗಿ ಇತ್ತೀಚೆಗೆ ಹಿರಿಯ ಲೇಖಕಿ ರೇಖಾ ಬನ್ನಾಡಿಯವರ ಸಂಪಾದಕತ್ವದಲ್ಲಿ ಭಂಡಾರ್ ಕರ್ಸ್ ಕಾಲೇಜು ಪ್ರಕಟಿಸಿದ ಕೃತಿ ʻತಳಿ ಕಂಡಿʼ.
ನಾಲಿಗೆಯ ಮೇಲೆ ವೇಗವಾಗಿ ಥಕಥೈ ಕುಣಿದಾಡಿ ಕೇಳುಗರ ಕಿವಿಗಳಿಗೆ ಆಪ್ಯಾಯಮಾನವಾಗುವ ಸುಂದರ ಭಾಷೆ ಕುಂದಾಪುರ ಕನ್ನಡ. ಅದರಲ್ಲಿರುವ ಒಂದೊಂದು ಪದಗಳಿಗೆ ಕುಂದಾಪುರ ನೆಲದ ಸಂಸ್ಕೃತಿಯ ಗುಣವಿದೆ. ಆದರೆ ಕೆಲವು ದಶಕಗಳಿಂದ ನಗರಗಳಿಗೆ ಹೋಗಿ ನೆಲೆಸುವ ಯುವಜನಾಂಗ ಮಾತ್ರವಲ್ಲದೆ ಕುಂದಾಪುರದಲ್ಲಿಯೇ ಇರುವವರಿಗೂ ತಾಯ್ನುಡಿಯ ಮೇಲಿನ ಅಭಿಮಾನ ಕುಂದುತ್ತಾ ಬರುತ್ತಿದೆ. ಕನ್ನಡ ಪ್ರಾಧ್ಯಾಪಕರಾಗಿ ಕಾಲೇಜು ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ರೇಖಾ ಬನ್ನಾಡಿಯವರು ವಿದ್ಯಾರ್ಥಿಗಳು ಕುಂದಾಪುರ ಭಾಷೆಯ ನೂರಾರು ಶಬ್ದಗಳನ್ನು ಕಂಡು ಕೇಳಿಯೂ ಇಲ್ಲವೆಂಬ ಆಘಾತಕಾರಿ ಬೆಳವಣಿಗೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಭಾಷೆಯನ್ನು ಜೀವಂತವಾಗಿ ಉಳಿಸುವ ದೃಷ್ಟಿಯಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇವರು ಕಾಲೇಜಿನ ವಾರ್ಷಿಕ ಸಂಚಿಕೆ ʻದರ್ಶನʼದಲ್ಲಿ ಇತರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜೊತೆಗೆ ಒಂದು ಅಭಿಯಾನ ಆರಂಭಿಸಿದರು. ಶಬ್ದಗಳ ಸಂಗ್ರಹ, ಗಾದೆಮಾತು, ನುಡಿಗಟ್ಟುಗಳು, ಒಗಟುಗಳು, ಜಾನಪದ ಹಾಡುಗಳು, ಸಂಸ್ಕೃತಿಯ ಕುರಿತಾದ ಲೇಖನಗಳು, ಕಥೆಗಳು – ಹೀಗೆ ʻದರ್ಶನʼದಲ್ಲಿ ಒಂದು ಭಾಗವನ್ನು ಅದಕ್ಕೆಂದೇ ಮೀಸಲಿಡಲಾಯಿತು. ಈಗ ಎಲ್ಲವನ್ನೂ ಒಟ್ಟು ಮಾಡಿ ಅದನ್ನು ʻತಳಿಕಂಡಿʼ ಎಂಬ ಸಾಂದರ್ಭಿಕವಾಗಿ ಅರ್ಥಪೂರ್ಣವೂ ಆದ ಶೀರ್ಷಿಕೆಯನ್ನು ಕೊಟ್ಟು ಪುಸ್ತಕ ರೂಪದಲ್ಲಿ ಕಾಲೇಜು ಪ್ರಕಟಿಸಿದೆ. ಕುಂದಾಪುರ ಭಾಷೆಯಲ್ಲಿ ʻತಳಿಕಂಡಿʼ ಅಂದರೆ ಕಿಟಿಕಿ ಎಂದರ್ಥ.
ʻತಳಿಕಂಡಿʼ ಕುಂದಾಪುರ ಕನ್ನಡದ ಸಾಂಸ್ಕೃತಿಕ ಕೋಶ. ಇದರಲ್ಲಿ ಒಟ್ಟು ಐದು ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ ಸಂಪಾದಕರು ಆಕರ್ಷಕ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. ಮೊದಲ ಭಾಗ ʻಶಬ್ದಕೋಶʼ. ಇದರಲ್ಲಿ ಶಿಷ್ಟ ಕನ್ನಡದಲ್ಲಿ ಅರ್ಥಗಳ ಸಮೇತ ಸುಮಾರು ನಾಲ್ಕು ಸಾವಿರದ ಐನೂರು ಶಬ್ದಗಳಿವೆ. ಎರಡನೇ ಭಾಗ ʻಕುಂದಾಪ್ರ ಭಾಷಿ ಕಾಂಬುಕೆ ಚಂದʼ. ಇದರಲ್ಲಿ ಕುಂದಾಪ್ರ ಕನ್ನಡದ ವಿಭಿನ್ನ ಬಳಕೆ, ಮೀನುಗಳ ಹೆಸರುಗಳು, ಬೈಗುಳ ಶಬ್ದಗಳು, ವಾಗ್ರೂಢಿಗಳು, ಅನುಕರಣ ವಾಚಕಪದಗಳು, ದ್ವಿರುಕ್ತಿಗಳು, ಜೋಡು ನುಡಿಗಳು, ಬ್ಯಾಸಾಯದ ಕತಿ, ಒಕ್ಕಲ್ತನದ ಬಾಳ್ – ಮೊದಲಾದ ವಿಷಯಗಳ ಕುರಿತು ೨೧ ಲೇಖನಗಳಿವೆ.

ಮೂರನೆಯ ಭಾಗ ʻಮಾತಿಗೊಂದು ಒತ್ತುʼ. ಇದರಲ್ಲಿ ಕುಂದಾಪುರ ಭಾಷೆಯ ಚಾಟೂಕ್ತಿಗಳು, ಒಗಟುಗಳು, ಗಾದೆಗಳು, ಗಾದೆಯ ಹಿಂದಿನ ಕಥೆಗಳು ಇತ್ಯಾದಿಗಳಿವೆ.
ನಾಲ್ಕನೇ ಭಾಗ ʻಹಾಡಲ್ಲ ಇದು ಬದುಕುʼ. ಇದರಲ್ಲಿ ಭತ್ತ ಕುಟ್ಟುವ ಹಾಡುಗಳು, ತುಳಸಿ ಪೂಜೆಯ ಹಾಡು, ಮದುವೆ ಶಾಸ್ತ್ರದ ಹಾಡುಗಳು, ಧಿಂಸಾಲ್ ಪದ, ಶಿಶುಗೀತೆಗಳು, ಅಭಿನಯ ಗೀತೆಗಳು ಇತ್ಯಾದಿಯಾಗಿ ಸುಮಾರು ೨೩ ವಿಧದ ಜಾನಪದ ಹಾಡುಗಳಿವೆ. ಐದನೆಯ ಹಾಗೂ ಕೊನೆಯ ಭಾಗ ʻಅಜ್ಜಿ ಹೇಳಿದ ಕತಿʼ. ಇಲ್ಲಿ ನಮ್ಮ ಹಿರಿಯರು ಮಕ್ಕಳಿಗೆ ಹೇಳುತ್ತಿದ್ದ ಕೆಲವು ನೀತಿಕತೆಗಳಿವೆ.
ಜನಸಾಮಾನ್ಯರಿಗೆ ಮಾತ್ರವಲ್ಲದೆ ಭಾಷೆಗಳ ಅಧ್ಯಯನ ಮಾಡುವವರಿಗೂ ಬಹಳ ಉಪಯುಕ್ತವಾಗ ಬಲ್ಲ ಕೃತಿ ʻತಳಿಕಂಡಿʼ. ಇದು ಒಂದು ಪುಟ್ಟ ಭಾಷೆಯ ಮೂಲಕ ವಿಸ್ತಾರವಾದ ಜಗತ್ತನ್ನು ನೋಡುವ ಕಿಟಿಕಿಯೂ ಆಗಬಹುದು. ಅಳಿವಿನ ಅಂಚಿನಲ್ಲಿರುವ ಇತರ ಪ್ರಾದೇಶಿಕ ಉಪಭಾಷೆಗಳನ್ನು ಉಳಿಸುವ ಮತ್ತು ಜನಪ್ರಿಯವಾಗಿಸುವ ಉದ್ದೇಶದಿಂದ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಲಿಚ್ಛಿಸುವ ಇತರ ಭಾಷಿಕರಿಗೆ ಮಾದರಿಯಾಗ ಬಲ್ಲ ಕೃತಿಯೂ ಆಗಬಹುದು.
0 ಪ್ರತಿಕ್ರಿಯೆಗಳು