-ಅಭಿಷೇಕ್ ವೈ.ಎಸ್.
ಬೆಳಕು ಹರಿಯುವ ಮುನ್ನ
ನೆತ್ತರು ಮೆತ್ತಿಕೊಂಡು
ಇಬ್ಬರ ಗುಟ್ಟುಗಳನ್ನು ಬಚ್ಚಿಟ್ಟ ರಾತ್ರಿಯಲ್ಲಿ
ಯಾರೂ ಕಸಿಯಲಾರದ ಮಾತುಗಳನ್ನಾದರೂ
ಆಡಬೇಕಿತ್ತು..
ನನ್ನ ಎದೆಯ ಮಹಲಿನಲ್ಲಿ
ಮಹಾಕಾವ್ಯ ಬರೆದ ನಿನ್ನ
ಒಣಗಿದ ತುಟಿಗಳನ್ನು
ಒಮ್ಮೆಯಾದರೂ
ಚುಂಬಿಸಿ
ವಿದಾಯ ಹೇಳಬೇಕಿತ್ತು.
ನಿನ್ನ ಕಣ್ಣೊಳಗಿನ
ಒಡೆದುಹೋದ
ನನ್ನ ಬಿಂಬದ ಸಣ್ಣ ಚೂರನ್ನಾದರೂ
ಜತನಮಾಡಿಟ್ಟುಕೋ
ಎನ್ನಬೇಕಿತ್ತು..
ಯೌವನವೇ ಕುಣಿವ
ನನ್ನ ದೇಹದಲ್ಲಿ
ಅಂಟಿದ
ನಿನ್ನ ಬೆವರಿನ
ಕ್ಷಮೆಯನ್ನಾದರೂ
ಕೇಳಬೇಕಿತ್ತು.
ಹೊಳೆಯುವ ನಕ್ಷತ್ರಗಳ
ಗೊಂಚಲುಗಳನ್ನಾದರೂ
ನಿನ್ನ ಮುಡಿಯಲ್ಲಿಟ್ಟು
ಮೌನವನ್ನು ಉರಿಸುತ್ತ
ಈ ರಾತ್ರಿ ಕಳೆಯಬೇಕಿತ್ತು.
ಕತ್ತಲ ಕಫನ್ನಿನೊಳಗೆ
ಸುತ್ತಿಟ್ಟ ಚಂದಿರನಿಗೆ
ಮತ್ತೆ ಜೀವಬರಲಾಗದು;
ಕನಿಷ್ಟಪಕ್ಷ ಅವನ
ಶವಯಾತ್ರೆಯಲ್ಲಿ
ಪಾಪದ ಹೂವಾದರೂ
ಆಗಬೇಕಿತ್ತು.
0 ಪ್ರತಿಕ್ರಿಯೆಗಳು