ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾತ್ರೆ ಬೋರಲಾಗಿದೆ..

ಎಸ್. ಪಿ.  ವಿಜಯಲಕ್ಷ್ಮಿ  

ಶೂನ್ಯದ “ಗೋಲ”ದಲ್ಲಿ ಯಾವುದೂ(?) ಸರಿಯಿಲ್ಲ
ಸ್ಫೋಟಗೊಂಡ ಅಣುವೊಂದು ಒಳಗೊಳಗೆ
ಬೆಳೆಬೆಳೆದು ಛಿದ್ರವಾಗಿಸಿದೆ ಮನುಕುಲದ
ಸಹಜ ಬದುಕನ್ನ…

ಯಾರು ಬೋರಲಾಗಿಸಿದರು
ಈ  ತುಂಬಿ ತುಳುಕುವ ಪಾತ್ರೆಯನ್ನು…?
ಒಳಗಿತ್ತು ಕಾಂಕ್ರೀಟಿನ ವನಗಳು, ಮುಗಿಲಿಗೆ ಲಗ್ಗೆ
ಹಾಕಿದ ಒನಪಿನ ಕಟ್ಟಡಗಳು…
ಬೆರಳೊತ್ತಿದರೆ ಸೇಸಮ್ಮ ತೆರೆದೇ ಬಿಡುತಿದ್ದ
ವಿಸ್ಮಯದ ಬಾಗಿಲುಗಳು..
ಅಂಗೈಯ ಅರಗಿಳಿಯಲ್ಲಿ ವಿಶ್ವವೇ
ಕರತಲಾಮಲಕವಾಗಿದ್ದ ಅಪಾರ
ಅಂದಚಂದಗಳು…

ಸಾಕು ಸಾಕೆಂದೆಣಿಸಲೇ ಇಲ್ಲ ಸ್ವಾರ್ಥ,  ಈಗಲೂ
ಎಣಿಸುವುದು ಅನುಮಾನ
ಈ ದಾಹವೆನ್ನುವ ತಳ ಒಡೆದ ಪಾತ್ರೆಯಲಿ
ತುಂಬಿದಷ್ಟೂ ಇನ್ನೂ… ಇನ್ನೂ…
ಬಕಾಸುರನ ಬಾಯಿ…
ದಿನಕ್ಕೊಂದು ಅವತಾರ,  ಆವಿಷ್ಕಾರ
‘ಎಲ್ಲಿ ಹಾಕಿಕೊಂಡೀಯೋ
ಸಾಕೆನ್ನುವ ಲಕ್ಷ್ಮಣರೇಖೆ,’
ಮರೆತೇಹೋಗಿದೆ
ನಿಲ್ಲಿಸುವುದಾದರೂ
ಎಲ್ಲೆಂದು…?

ನೋಡೀಗ ,  ಪಾತ್ರೆ ಬೋರಲಾಗಿದೆ,
ಗೋಲದಲಿ ಎಲ್ಲಕ್ಕೂ ಬಿದ್ದಿದೆ ಲಕ್ಷ್ಮಣರೇಖೆ
ನಾವು ಹಾಕಬಾರದೆಂದಿದ್ದದ್ದು,  ಅದ್ಹೇಗೋ ಬಿದ್ದಿದೆ… ‘ಕೋಳಿ ಕೇಳಿ ಮಸಾಲೆ ಅರೆಯುವುದುಂಟೇ…? ‘
ಈಗ,  ಕೈಕಟ್ಟಿ,  ಬಾಯ್ಮುಚ್ಚಿ,  ಮನೆಯ ಬಾಗಿಲನೂ ಮುಚ್ಚಿ,

ಛೇ,  ಯಾವುದೂ (?) ಸರಿಯಿಲ್ಲ

ಬಿಡು,  ಬಿಡು,  ಬಂಧ ಸುತ್ತುವ ತನಕ
ಕುಣಿದು ಕುಪ್ಪಳಿಸಿದ್ದೆಯಲ್ಲ
ಪಾತ್ರೆಯೊಳಗೆ ಬಿಡುವಿಲ್ಲದಂತೆ
ತುಂಬಿದ್ದೆಯಲ್ಲ…

ಹಕ್ಕಿ ಹಾರಿದ್ದು,  ಕೊರಳೆತ್ತಿ ಹಾಡಿದ್ದು
ನದಿ ತೊರೆಯ ನೀರು ಸಹಜದಲಿ ಹರಿದಿದ್ದು
ಮಲಿನ ಕಳೆದಿದ್ದು,  ಕೊಳೆಯು ಕರಗಿದ್ದು
ಹಸಿರು ಹಸಿರನೆ  ಹೊದ್ದು ನಕ್ಕಿದ್ದು
ಕಂಡಿದ್ದೆ ಇರಲಿಲ್ಲ,
ಕಾಣಿಸಿದೆ,
ಬಿಡಲಿಲ್ಲ,

ಇನ್ನಾದರೂ ನಿಲಿಸು
ಹಕ್ಕಿ ಕಂಠವನಾಲಿಸು
ನಗುತಿರುವ ನದಿಗೆ ನಗು ಬೆರೆಸು
ಹಸಿರ ಉಸಿರನು  ಕಲಿಸು
ಕವುಚಿದಾ ಪಾತ್ರೆ ಗುಟ್ಟನ್ನು ಅರಸು
ಬದುಕಲೀ  ಸೃಷ್ಟಿ
ಕಲಿಯದಿರೆ
ಬದುಕೆ ಬಲು
ತುಟ್ಟಿ…

‍ಲೇಖಕರು avadhi

24 April, 2020

1 Comment

  1. Vijay SP

    ಧನ್ಯವಾದಗಳು ” ಅವಧಿ”…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading