
ಡಾ ಪಿ ಬಿ ಪ್ರಸನ್ನ
ಮೊನ್ನೆ
ಎಲ್ಲರಂತೆ ನನಗೂ
ಪಟ ಹೊಡೆಸಿಕೊಳ್ಳುವ ಉಮೇದು
ಬಂದದ್ದೇ ನಡೆದೆ
ಹುಬ್ಬನ್ನೇ ಪ್ರಶ್ನಾರ್ಥಕಗೊಳಿಸಿದಾತನ ಬಳಿ ನುಡಿದೆ
ಪಟ ತೆಗೆಯಬೇಕು ನನ್ನದು
ಹೀಗೆ ಇರುವಂತೆ ಅಲ್ಲ
ಸರ್ವಾಂಗ ಸುಂದರ
ರತಿಯರ ಕೆರಳಿಸುವಂಥ
ತಿರು ತಿರುಗಿ ನೋಡಬಯಸುವಂಥ
ಅವನೊಮ್ಮೆ ನಕ್ಕ ನೋಡಿದ
ಆಮೇಲೆ ನುಡಿದ
ಅಲ್ಲಿವೆ ಪೌಡರು ಅತ್ತರು ಬಾ
ಚಣಿಗೆ ಒಂದಿಷ್ಟು ಎಣ್ಣೆ
ಬಳಿದು ಕೊಳ್ಳಿ ಮೇಲೊಂದಿಷ್ಟು
ಎಲ್ಲ ಕೊಳೆಯೂ ಮರೆ ಮಾಚುವಂತೆ
ಅರೆ ಕೊರೆ ಕಾಣದಂತೆ

ಬಳಿದುಕೊಂಡಾದ ಬಳಕೆ
ಪೋಷಾಕು ತೊಡಿಸಿ
ನೀವೀಗ ಸೇನಾಪತಿ ಅಲ್ಲ
ಮಂತ್ರಿ ಊಹೂಂ ರಾಜಾಧಿರಾಜ
ಎಂದೆಲ್ಲ ಹೊಗಳಿ
ಸಿಂಹಾಸನವ ಏರಿಸಿದ
ಒಂದೊಂದು ಭಂಗಿಗೂ ಅವನದೇ ನಿರ್ದೇಶನ
ಅಡಿಗಡಿಗೆ ಸೂಚನೆಗಳ ಕೊಟ್ಟವ
ಕೊನೆಗೊಮ್ಮೆ ರೋಸಿ ನುಡಿದ
ನೀವೇಕೆ ಈ ವೇಷಕ್ಕೆ ತಕ್ಕಂತೆ ಇಲ್ಲ?
ಎಲ್ಲ ಬಳಿದುಕೊಂಡರೂ ಕೊಳೆಯೇ ಎದ್ದುಕಾಣುವುದಲ್ಲ?
ಕತ್ತೇಕೆ ನಿಮ್ಮ ಭುಜದ ಮೇಲಿಲ್ಲ?
ನಿಮ್ಮ ನಗುವೊಮ್ಮೆ ರಕ್ಕಸನಂತೆ
ಮಗದೊಮ್ಮೆ ಪಿಶಾಚಿಯಂತೆ
ಬಾಯಿ ತೆರೆದರೆ ಎಲ್ಲ ಹುಳುಕೂ ಕಾಣುವುದಲ್ಲ?
ಹೇಗಾದರೂ ಇರಲಯ್ಯ
ಒಮ್ಮೆ ತೆಗೆಯಯ್ಯ
ನಾನಾಗಬೇಕು ಮದನ
ಎಸೆಯಬೇಕು ಹೂ ಬಾಣ
ಎಂದಾಗ
ಕಣ್ಣು ಕೋರೈಸುವ
ದೀಪಗಳ ನಡುವೆ ಪಟಪಟನೆ ತೆಗೆದವನೇ
ಪ್ರಿಂಟುಹಾಕಿಸಿ ಕೊಟ್ಟ
ಖುಷಿಯಿಂದ ನೋಡಿದರೆ
ಒಂದರಲಿ ರುಂಡವಿಲ್ಲ
ಮತ್ತೊಂದರಲಿ ಅಷ್ಟಾವಕ್ರ ಸಂತಾನ
ದೊರೆಯ ಪೋಷಾಕಿನಲಿ ವಿದೂಷಕ!
ಕಣ್ಣು ಕೆಂಪಾಗಿಸಿ ದನಿಎತ್ತರಿಸಿ
ಇದು ಸರಿಯಲ್ಲ ಎಂದೆ
ತಣ್ಣಗಿನ ದನಿಯಲ್ಲಿ ಅವನೆಂದ
ನೀವು ಇರುವುದೇ ಹೀಗೆ
ನಾನಾದರೂ ಸರಿ ಪಟವ ಕ್ಲಿಕ್ಕಿಸಲಿ ಹೇಗೆ?
ಕೆರಳಿ ಎಲ್ಲ ಪಟಗಳ ಚೂರು
ಚೂರಾಗಿಸಿದರೆ
ಅರೆ!
ಒಂದೊಂದು ಚೂರಿಗೂ ಒಂದೊಂದು ಮುಖ!






ಅರ್ಥಗರ್ಭಿತ ಸಾಲುಗಳು