ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೋವಿಗೆ ಕಾವಿಗೆ, ಶೀಲದ ಪಾಲಿಗೆ ಎಲ್ಲಿ ಗೆರೆ?

403604_266718560068366_938883546_n

ವೆಂಕಟ್ರಮಣ ಗೌಡ

21ಹಳತು ಹೊಸತರ ನಡುವೆ
ಎಲ್ಲಿ ಗೆರೆ?

ನಾನು, ನೀನು, ಈ ಉಸಿರು, ನೆತ್ತರು
ಮಾತು, ಲಲ್ಲೆ, ಕನಸು, ಕಾಮನೆ
ಮೊದಲ ಭೇಟಿಯಿಂದ ಮೈಥುನದವರೆಗೆ
ಭಾವನೆಗಳಿಂದ ಮೊದಲಾಗಿ ವ್ಯವಹಾರದವರೆಗೆ
ಎಲ್ಲಿ ಗೆರೆ?

ಸಣ್ಣ ಖುಷಿ, ಕಣ್ಣಂಚಿನ ಹನಿ
ತೆಕ್ಕೆಯಲ್ಲಿ ಮತ್ತೇರಿಸುತ್ತಲೇ ಮಾಡುವ ಮೋಸ
ದ್ವೇಷದ ದಣಿವು, ಈರ್ಷೆಯಾಚೆಯ ಹಿತ
ಕಣ್ಣಲ್ಲಿ ಕರಗಿಸುತ್ತಲೇ ಇರಿವ ಸಂಚು
ಅಪರಿಚಿತ ನೋಟದಲ್ಲೂ ಮಿನುಗುವ ಕಾಳಜಿ
ಯಾವುದು ಹಳತು ಯಾವುದು ಹೊಸತು
ಎಲ್ಲಿ ಗೆರೆ?

ಗಡಿ ಗುರುತಿಲ್ಲದೆ ಹಾರುವ ಹಕ್ಕಿಗೆ
ಆ ಗರಿ ಮೃದುವಿಗೆ, ಈ ಮರಿ ಗುಟುಕಿಗೆ
ನೋವಿಗೆ ಕಾವಿಗೆ, ಶೀಲದ ಪಾಲಿಗೆ
ಎಲ್ಲಿ ಗೆರೆ?

ಬೆಳಗಿನ ಚಳಿ ಕಾಫಿಗೆ, ಸುಡು ಹೊತ್ತಿನ ತಣ್ಣೀರಿಗೆ
ಸ್ನಾನಕ್ಕೆ, ಅಲಂಕಾರಕ್ಕೆ, ಘಮ ಘಮ ಅತ್ತರಿಗೆ
ದೇವರ ಮುಂದೆ ಕ್ಯೂನಲ್ಲಿ ಕುದಿವ ಭಕ್ತರಿಗೆ
ಸೋತ ಹೊತ್ತಲ್ಲಿ ತಂದ ಕೈಸಾಲಕ್ಕೆ
ಮಾಟ ಮೈಮಾಟಕ್ಕೆ, ಕುಣಿಸುವ ಕುಲುಕಾಟಕ್ಕೆ
ಎಲ್ಲಿ ಗೆರೆ?

ಜೋಗದ ಧುಮುಕಿಗೆ, ನೊಗಭಾರದ ನಲುಗಿಗೆ211
ರಾಗ ಅನುರಾಗಕ್ಕೆ, ಸದ್ದು ಗದ್ದಲಕ್ಕೆ
ಮಿದು ರಹಸ್ಯಗಳಿಗೆ, ಬರೀ ಅಸಹ್ಯಗಳಿಗೆ
ಪದಕ್ಕೆ ಮದಕ್ಕೆ, ನಿಶೆಗೆ ನಶೆಗೆ
ಚಳಿ ತಡೆದು ಬೆಚ್ಚಗಿಡಬಲ್ಲ ಹೊದಿಕೆಗೆ
ಬಿಡಿಸಿದರೆ ಬೆರಗು ಹಚ್ಚಬಲ್ಲ ಮಡಿಕೆಗೆ
ಕಮ್ಮಗಿನ ಮೀನು ಸಾರಿನ ನೆನಪು ಕಾದ ಮಡಕೆಗೆ
ಎಲ್ಲಿ ಗೆರೆ?

ಅವರು ಇವರು, ಉತ್ತರ ದಕ್ಷಿಣ
ಮಳೆ ಮಾರುತ, ಮೇಘ ಸಂದೇಶ
ಖಾಲಿ ಬೆಂಕಿಪೆಟ್ಟಿಗೆಯೊಳಗಿಟ್ಟ ಬಂಗಾರ ಬಣ್ಣದ ದುಂಬಿ
ನಮ್ಮೆಲ್ಲರನ್ನೂ ಕಾಯುವ ಯಾರದೋ ನಿಟ್ಟುಸಿರು
ಎಂಥದೋ ನೇವರಿಕೆಯಲ್ಲಿ ಮೀಯಿಸುವ ಮುಗುಳ್ನಗು
ಎಲ್ಲಿ ಗೆರೆ?

ಯಾವುದು ಹಳೆ ಗೆರೆ ಯಾವುದು ಹೊಸ ಗೆರೆ?
ಪಯಣಿಗರೆ
ಎಲ್ಲಿ ಗೆರೆ?

‍ಲೇಖಕರು Admin

1 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading