ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಹೊಸ ಕವಿತೆ- ದಿಟ್ಟ ಉತ್ತರದ ದಿಟ್ಟೆ

ನೂತನ ದೋಶೆಟ್ಟಿ

ಶಕುಂತಲೆ ಎಂಬ ರೋಮಾಂಚನ
ಸಿಂಡ್ರೆಲ್ಲಾ ಎಂಬ ಕುತೂಹಲ
ಸೀತೆ ಎಂಬ ದಿಟ್ಟ ನಿಲುವು
ಹುಡುಕಿಕೊಟ್ಟವರಿಗೆ ಬಹುಮಾನವಂತೆ !

1

ಸೊಗಸುಗಾರ ಅರಸನೊಬ್ಬ
ಕುದುರೆಯೇರಿ ಬಂದ
ಅವಳ ಅಂದಕ್ಕೆ ಮಾರುಹೋದ
ಭಿನ್ನ ವರ್ಣಗಳ ಬೆದರಿಕೆಗೆ
ಗುಪ್ತವಾಗಿ ಮದುವೆಯಾದ.
ನೆನಪಿಗುಂಗುರವ ನೀಡಿ ಮರೆಯಾದವ
ಸವೆಸಿದ ದಾರಿ ದೂರವಾಯಿತು
ಒಂಟಿ ತಾಯಿ ಕಾದಳು.


ಥೇಟ್ ಸಿನಿಮಾದಂತೆ
ಕಳೆದ ಉಂಗುರ ಸಿಕ್ಕಿತು !
ನೆನಪ ಮಬ್ಬು ಹರಿಯಿತು.
ಅವ ಬಂದ, ತಬ್ಬಿದ, ಕರೆದೊಯ್ದ.
ಹ್ಯಾಪಿ ಎಂಡಿಂಗ್!
ಅವಳ ಕಣ್ಣೀರ ಘಳಿಗೆಗಳು
ಲೆಕ್ಕಕ್ಕಿಲ್ಲದೆ ಕಳೆದು ಹೋದವು
ಉಳಿದದ್ದು
ಅವನು, ಅವನ ಮಗ, ಪೌರುಷ.

2

ಪಾಪದ ಆ ಹುಡುಗಿ
ಕಸ-ಮುಸುರೆಯಲ್ಲೇ ಬೆಳೆದಳು
ಸ್ನೇಹ-ವಾತ್ಸಲ್ಯವಿರದ ಕತ್ತಲಲ್ಲಿ
ಬೆಳದಿಂಗಳಂಥ ಬೆಡಗಿ ಬಡವಾದಳು.
ಥೇಟ್ ಸಿನಿಮಾದಂತೆ
ಅವ ಬಂದ
ಮಿಂಚಿ ಮಾಯವಾದ ಚೆಲುವಿಯ
ಹುಡುಕಿದುವಾದರೂ ಕಾಲ ಮೆಟ್ಟುಗಳು!
ಹ್ಯಾಪಿ ಎಂಡಿಂಗ್
ಬಡವಿ ಸಿರಿವಂತೆಯಾದಳು
ಉಳಿದದ್ದು
ಅವನ ಮನ ಗೆದ್ದ ಅವಳ ಸೌಂದರ್ಯ !

3

ಅವಳದ್ದು ಭೂಮಿ ಬಗೆದ ಹುಟ್ಟು
ಭೂಮಿ ಬಾಯ್ದೆರೆದು ಅಪ್ಪಿಕೊಂಡ ಕಥೆ.
ಥೇಟ್ ಸಿನಿಮಾದಂತೆ ಅವ ಬಂದ
ಪೌರುಷ ಮೆರೆದು ಅವಳ ಗೆದ್ದು ತಂದರೂ
ರಾಜಕುವರಿ ರಾಣಿಯಾಗಲಿಲ್ಲ.
ಕಾಡಿ ಕಂಗೆಡಿಸಿದ ವಿಧಿ ವೈಚಿತ್ರ್ಯ
ಕಲಿಸಿದ ಸಹನೆ ಕಟ್ಟೆಯೊಡೆದು
ಅರ್ಥಹೀನ ಬಂಧಗಳ ಹರಿದು ಬಿಟ್ಟು
ಪ್ರಾತಃಸ್ಮರಣೀಯಳಾದಳು !
ಹೆಣ್ಣುಗಳು ಕಾಯಬೇಕು ಸಾಯುವವರೆಗೆ
ಮೊಟಕುತ್ತಿದ್ದ ಸಮಾಜಕ್ಕೆ
ದಿಟ್ಟ ಉತ್ತರ ಕೊಟ್ಟ
ಅವಳ ಪುರುಷೋತ್ತಮನ ಪಕ್ಕದಲ್ಲೀಗ
ಹೆದೆಯೇರಿದ ಬಿಲ್ಲು !
ಸೀತೆಯ ಕುರುಹೂ ಅಲ್ಲಿಲ್ಲ !!!

‍ಲೇಖಕರು Admin

13 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading